ಮಕ್ಕಳಿಗೆ ಸೆಲ್‌ಪೋನ್ ಕೊಡಿಸಬೇಕೇ?

ಮಕ್ಕಳಿಗೆ ಸೆಲ್‌ಪೋನ್ ಕೊಡಿಸಬೇಕೇ?

ಬರಹ

ಮಕ್ಕಳಿಗೆ ಸೆಲ್‌ಪೋನ್ ಕೊಡಿಸಬೇಕೇ?

 
ಈಗೀಗ ಮಕ್ಕಳು ದೂರದ ಶಾಲೆಗಳಿಗೆ ಹೋಗುವುದು,ಹಾಗಾಗಿ ಶಾಲಾ ವಾಹನದ ಉಪಯೋಗ ಮಾಡುವುದು ಹೆಚ್ಚುತ್ತಿದೆ.ಇದರಿಂದ ಹೆತ್ತವರು,ಮಕ್ಕಳ ಜತೆ ಸಂಪರ್ಕದಲ್ಲಿರಲು ಬಯಸಿ,ಅದನ್ನು ಸಾಧ್ಯವಾಗಿಸುವ ಮೊಬೈಲನ್ನು ಮಕ್ಕಳಿಗೆ ಕೊಡಿಸಲು ಬಯಸುತ್ತಾರೆ.ತಜ್ಞರ ಪ್ರಕಾರ ಹನ್ನೆರಡು ಮೀರಿದವರಿಗಷ್ಟೇ ಮೊಬೈಲ್ ಬಳಕೆಗೆ ಕೊಡುವುದು ಉತ್ತಮ.ಹಾಗೆಂದು ಅದನ್ನು ಹದವರಿತು ಬಳಸುವ ಪ್ರಬುದ್ಧತೆಯಿಲ್ಲದವರಿಗೆ ಸೆಲ್‌ಫೋನ್ ಕೊಡಿಸುವುದು ಒಳಿತಲ್ಲ.ತರಗತಿ ನಡೆಯುವಾಗ ಮೊಬೈಲ್ ಬಳಸುವುದು,ಅದನ್ನು ದುರುಪಯೋಗ ಮಾಡಿ ಪರೀಕ್ಷಾ ಅಕ್ರಮಗೈಯಲು ಬಳಸುವುದು,ಹಾಡು ಕೇಳುತ್ತಾ ಅಥವ ಸಂದೇಶಗಳನ್ನು ಕಳುಹಿಸುತ್ತಾ ಕೂರುವುದು ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಕಂಡು ಬರುವ ದುರ್ಬಳಕೆಯ ವಿಧಾನಗಳು.ಇನ್ನು ಕ್ಯಾಮರಾ,ವಿಡಿಯೋ ಅಥವ ಅಂತರ್ಜಾಲ ಸಂಪರ್ಕದ ಅವಕಾಶ ಇರುವ ಇರುವ ಸೆಟ್‌ಗಳನ್ನು ಮಕ್ಕಳಿಗೆ ಕೊಡಿಸುವುದು ತರವಲ್ಲ.ಅಂತರ್ಜಾಲ ಇದ್ದರೆ,ಅದು ಅನಿರ್ಬಂಧಿತ ಅಂತರ್ಜಾಲ ಜಾಲಾಟಕ್ಕೆ ಮುಕ್ತ ರಹದಾರಿಯಾಗಿಬಿಡುತ್ತದೆ.ಸಿಕ್ಕಸಿಕ್ಕವರ ಚಿತ್ರ-ವಿಡಿಯೋ ತೆಗೆದು ಅದನ್ನು ಎಂಎಂಎಸ್ ಮಾಡಿ,ಇತರರನ್ನು ಕಾಡುವ ಮಕ್ಕಳೂ ಇದ್ದಾರೆ.ಸೆಲ್‌ಫೋನ್ ಕೊಡಿಸುವುದಕ್ಕೆ ಮಕ್ಕಳ ಜತೆ ಸಂಪರ್ಕಕ್ಕೆ ಅವಕಾಶ ಕೊಡುತ್ತದೆ ಎಂಬ ಕಾರಣ ಕೊಡುವ ಹೆತ್ತವರು,ಮಕ್ಕಳಿಗೆ ಅತ್ಯಂತ ಸಾಮಾನ್ಯ ಸಾಧನ ಕೊಡಿಸುವುದೇ ಶ್ರೇಯಸ್ಕರ.ಮಕ್ಕಳಿಗೆ ಎಲ್ಲಾ ಸೌಲಭ್ಯವಿರುವ,ಸ್ಮಾರ್ಟ್‌ಫೋನ್ ಕೊಡಿಸುವುದು ಸ್ಮಾರ್ಟ್ ತೀರ್ಮಾನವಂತೂ ಅಲ್ಲ!
-----------------------------
ಸೌರ ಹಾಯಿಪಟ ಅರಳಿಸಿದ ಜಪಾನಿಯರು
ಬಾಹ್ಯಾಕಾಶದಲ್ಲಿ ರಾಸಾಯಿನಿಕ ಪ್ರಕ್ರಿಯೆಗಳಿಲ್ಲದೆ,ಶಕ್ತಿಯ ಉತ್ಪಾದನೆಗೆ ಅವಕಾಶ ನೀಡುವ ಸೌರ ಹಾಯಿಪಟವನ್ನು ಅರಳಿಸಲು ಜಪಾನೀ ಬಾಹ್ಯಾಕಾಶ ವಿಜ್ಞಾನಿಗಳು ಶಕ್ತರಾಗಿದ್ದಾರೆ.ಅತ್ಯಂತ ಸೂಕ್ಷ್ಮ ಹಾಳೆಯಿಂದ ಮಾಡಿದ ಹಾಯಿಪಟವನ್ನು ಅರಳಿಸಿದಾಗ,ಅವುಗಳ ಮೇಲೆ ಬೀಳುವ ಫೋಟಾನ್‌ಗಳು ಹಾಯಿಪಟದ ಮೇಲೆ ಒತ್ತಡವನ್ನುಂಟು ಮಾಡುತ್ತವೆ.ಇದರಿಂದ ಹಾಯಿಪಟ ಚಲಿಸಲಾರಂಭಿಸುತ್ತದೆ.ಹಾಯಿಪಟದ ವಿಸ್ತಾರ ಹೆಚ್ಚಿಸಿ,ಚಲನೆಯ ಗತಿಯನ್ನು ಹೆಚ್ಚಿಸಲು ಸಾಧ್ಯ.ಬಾಹ್ಯಾಕಾಶ ವಾಹನಗಳು ಚಲಿಸುವಂತೆ ಮಾಡಲು ಸೌರಶಕ್ತಿಯನ್ನು ದುಡಿಸಿಕೊಳ್ಳುವ ಹೊಸ ಮಾರ್ಗವನ್ನಿದು ತೆರೆದಿದೆ.ಮುಂದಿನ ಗ್ರಹ ಅಥವಾ ನಕ್ಷತ್ರಗಳ ಅಧ್ಯಯನಕ್ಕೆ ರವಾನಿಸಲಾಗುವ ವಾಹನಗಳಲ್ಲಿ ಇಂತಹ ತಂತ್ರಜ್ಞಾನ ಬಳಸಿ,ಗ್ರಹಗಳ ನಡುವೆ ಅಥವ ನಕ್ಷತ್ರಗಳ ನಡುವೆ ಚಲಿಸುವಂತೆ ಮಾಡುವ ಯೋಜನೆ ವಿಜ್ಞಾನಿಗಳ ಮುಂದಿದೆ.
--------------------------------------------------------
ಯಾವ ಆಸ್ಪತ್ರೆ ಅಗ್ಗ?


ಆರೋಗ್ಯ ವಿಮೆ ಹೊಂದಿರುವ ಅಮೆರಿಕನ್ನರು ಆಸ್ಪತ್ರೆ ಶುಲ್ಕದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಕಡಿಮೆ.ಆದರೀಗ ನಿಧಾನವಾಗಿ ಆ ಪರಿಪಾಠ ಬದಲಾಗುತ್ತಿದೆ.ಉದ್ಯೋಗದಾತರು ತಮ್ಮ ನೌಕರರ ಆರೋಗ್ಯ ವಿಮಾ ಸೌಲಭ್ಯವನ್ನು ಹಿಂದೆಗೆದು ಕೊಳ್ಳುತ್ತಿರುವುದರೊಂದಿಗೆ,ನೌಕರರು ಸ್ವತ: ವಿಮೆ ಮಾಡಿಸ ಬೇಕಿದೆ.ಆದುದರಿಂದ ಹಣ ನೀಡದೇ,ಆಸ್ಪತ್ರೆವಾಸ ಅನುಭವಿಸುವ ದಿನಗಳು ಇನ್ನು ಮುಂದೆಯೂ ಸಿಗದಿರಬಹುದು.ಕಿಸೆಯಿಂದ ತೆತ್ತು ಚಿಕಿತ್ಸೆ ಪಡೆಯುವಾಗ,ಕಡಿಮೆ ದರದಲ್ಲಿ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆ ಅಥವಾ ವೈದ್ಯರ ಹುಡುಕಾಟ ಅಗತ್ಯವಿದೆ.http://www.castlighthealth.com/ ಅಂತಹ ಅಂತರ್ಜಾಲ ತಾಣಗಳು ಆರೋಗ್ಯ ಸೇವೆಯಲ್ಲಿ ಪಾರದರ್ಶಕತೆಯನ್ನು ತರಲು ಶ್ರಮಿಸುತ್ತಿವೆ. ಶಸ್ತ್ರಕ್ರಿಯೆಗೆ ವಿವಿಧ ಆಸ್ಪತ್ರೆಗಳಲ್ಲಿ ವಿಧಿಸಲಾಗುವ ದರವನ್ನು ಹೋಲಿಸಿ,ರೋಗಿಗೆ ಅನುಕೂಲ ಕಲ್ಪಿಸುವುದು ಇವರ ಕಾರ್ಯತಂತ್ರ.ವಿಮಾ ಕಂಪೆನಿಗಳು ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿವಿಧ ಚಿಕಿತ್ಸೆಗಳಿಗೆ ತಮ್ಮದೇ ದರ ನಿಗದಿ ಪಡಿಸುವ ಪದ್ಧತಿ ಸದ್ಯ ಚಾಲ್ತಿಯಲ್ಲಿದೆ.ಹಾಗಾಗಿ ಚಿಕಿತ್ಸೆಯ ನಿಜವಾದ ದರ ಎಷ್ಟು ಎನ್ನುವುದು ಗುಪ್ತವಾಗಿರುವುದು ಸದ್ಯದ ರೂಢಿ.ನೌಕರರಿಗೆ ಚಿಕಿತ್ಸೆ ಬೇಕಾದಾಗ, ದರ ಪಟ್ಟಿ ಆಧರಿಸಿದ ಪರಿಹಾರವನ್ನು ಉದ್ಯೋಗದಾತರು ನೀಡುತ್ತಾರೆ.ದುಬಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಯಸುವವರು ಹೆಚ್ಚಿನ ಹಣವನ್ನು ಸ್ವಂತವಾಗಿ ಭರಿಸುವುದು ಅನಿವಾರ್ಯ.
--------------------------------------------
ಖರ್ಚು ಕಡಿಮೆ ಮಾಡಲು ಪುಕ್ಕಟೆ ಸಲಹೆ
BillShrink.com, BankRate.com, GasBuddy.com ತಾಣಗಳು ಖರ್ಚುಳಿಸುವ ಹಾದಿಯನ್ನು ಗ್ರಾಹಕನಿಗೆ ತಿಳಿಸಲು ಪಣತೊಟ್ಟ ಅಂತರ್ಜಾಲ ತಾಣಗಳಾಗಿವೆ.ಮನರಂಜನೆ,ಸೆಲ್‌ಪೋನ್,ಅಗತ್ಯಸೇವೆಗಳಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ವ್ಯವಸ್ಥೆ ಮಾಡಲು ಯಾವ ಸೇವಾದಾತೃವಿನ ಸೇವೆಯನ್ನು ಅವಲಂಬಿಸುವುದು ಒಳ್ಳೆಯದು ಎಂದು ತಿಳಿಸುವುದೇ ಇವರ ಸೇವಾವೈಖರಿ.ವಿವಿಧ ಸೇವೆಗಳನ್ನು ಒದಗಿಸುವವರನ್ನು ನೋಂದಾಯಿಸಿ,ಅವರ ಸೇವಾದರಗಳನ್ನು ಪಟ್ಟಿ ಮಾಡಿಕೊಂಡು,ಸೇವೆಗಳನ್ನು ಬಯಸುವವರಿಗೆ ಯಾರ ಸೇವೆ ಅವಲಂಬಿಸಿದರೆ ಎಷ್ಟು ಖರ್ಚು ಬರುತ್ತದೆ ಎನ್ನುವುದನ್ನು ಹೋಲಿಸಿ ನೋಡಲು ಇಲ್ಲಿ ಅವಕಾಶವಿದೆ.ಬ್ಯಾಂಕ್ ದರಗಳು ಯಾವ ಬ್ಯಾಂಕಿನಲ್ಲಿ ಎಷ್ಟೆಷ್ಟು,ಸಾಲ ಪಡೆಯುವುದಾದರೆ ಯಾವ ಬ್ಯಾಂಕು ಉಚಿತ,ಠೇವಣಿ ಎಲ್ಲಿಟ್ಟರೆ ಹೆಚ್ಚು ಆದಾಯ ಬರುತ್ತದೆ,ಚಿನ್ನವನ್ನೋ ಅಥವಾ ಮನೆಯನ್ನೋ ಅಡವಿಡುವುದಾದರೆ ಯಾವ ಬ್ಯಾಂಕು ಉತ್ತಮ ಎನ್ನುವುದು ಬ್ಯಾಂಕ್‌ರೇಟ್.ಕಾಂ ತಾಣ ತಿಳಿಸುತ್ತದೆ.ಇನ್ನು GasBuddy.com ಅನಿಲದರಗಳ ತುಲನೆ ಮಾಡಿ,ಯಾರ ಅನಿಲ ಸಂಪರ್ಕ ಪಡೆದರೆ ಕಡಿಮೆ ಖರ್ಚಿನಲ್ಲಿ ಉತ್ತಮ ಸೇವೆ ಸಿಗುತ್ತದೆ ಎಂದ್ ಮಾಹಿತಿ ನೀಡಲು ಸಮರ್ಥವಾಗಿದೆ.
------------------------------------
ಫುಟ್‌ಬಾಲ್ ಜ್ವರ ಪೀಡಿತ ಭಾರತೀಯರು!
ಗೂಗಲ್ ಶೋಧ ಸೇವೆಯ ಮಾಹಿತಿಯ ಪ್ರಕಾರ ಅಂತರ್ಜಾಲದಲ್ಲಿ ಫುಟ್‌ಬಾಲ್ ವಿಶ್ವಕಪ್ ಬಗ್ಗೆ ಶೋಧಿಸಿದವರ ಪೈಕಿ ಭಾರತದವರೇ ಮೊದಲಿನ ಸ್ಥಾನ ಪಡೆದಿದ್ದಾರೆ.ಎಪ್ರಿಲ್ ತಿಂಗಳಲ್ಲಿ ವಿಶ್ವಕಪ್ ಟಿಕೆಟ್ ಸಂಬಂಧಿ ಮಾಹಿತಿಗೆ ಶೋಧಿಸುತ್ತಿದ್ದ ಜನರೀಗ,ವಿಶ್ವಕಪ್‌ನಲ್ಲಿ ಭಾಗವಹಿಸಲಾಗದ ಹೀರೋಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ತಮ್ಮ ತಮ್ಮ ಮೆಚ್ಚಿನ ತಂಡಗಳ ಬಗೆಗಿನ ಮಾಹಿತಿಯ ಬಗ್ಗೆಯೂ ಜನ ಹೆಚ್ಚು ತಿಳಿದುಕೊಳ್ಳಲು ಬಯಸುತ್ತಿರುವುದು ವ್ಯಕ್ತವಾಗಿದೆ.
--------------------------------------------------------------------
ಓದುಗರ ಆಯ್ಕೆ: ಮೋಬ್‌ಸ್ಪೋಟ್.ಇನ್

ಸ್ಥಾನದ ಅರಿವಿರುವ ಸಾಮಾಜಿಕ ಜಾಲತಾಣಗಳು ಜನಪ್ರಿಯವಾಗುವ ಸೂಚನೆಗಳಿವೆ.ಈಗಿನ ಮೊಬೈಲ್ ಸಾಧನದಲ್ಲಿ ಜಿಪಿಎಸ್ ವ್ಯವಸ್ಥೆ ಲಭ್ಯವಿರುವುದು ಇದಕ್ಕೆ ಹೇಳಿ ಮಾಡಿಸಿದಂತಿದೆ.ಬಳಕೆದಾರ ನೋಂದಾಯಿಸಿದಾಗ,ತನ್ನ ಮೊಬೈಲ್ ಸಂಖ್ಯೆಯನ್ನು ನೀಡುವ ಕಾರಣ,ಅಂತರ್ಜಾಲ ತಾಣವು ನೋಂದಾಯಿತ ಬಳಕೆದಾರನ ಸ್ಥಾನದ ಮಾಹಿತಿಯನ್ನು,ಪಡೆಯುತ್ತಿರುತ್ತದೆ.ಬಳಕೆದಾರನ ಸ್ನೇಹಿತರೂ,ತಮ್ಮ ಸ್ಥಾನದ ಮಾಹಿತಿಯನ್ನು ತಾಣಕ್ಕೆ ನೀಡುವ ಕಾರಣ,ವ್ಯಕ್ತಿಯಿರುವ ಸ್ಥಳದ ಸಮೀಪವಿರುವ ಆತನ ಸ್ನೇಹಿತರ ವಿವರಗಳನ್ನೂ ತಾಣವು ತೋರಿಸಲು ಸಾಧ್ಯವಾಗುತ್ತದೆ.ಅವರ ಬಳಿ ಹೋಗಲು ಬಯಸಿದಲ್ಲಿ,ಆತನು ಹಿಡಿಯಬೇಕಾದ ದಾರಿಯನ್ನೂ,ಗೂಗಲ್ ನಕ್ಷೆಯ ಮೂಲಕ ತೋರಿಸುವುದು ಈ ಅಂತರ್ಜಾಲ ತಾಣದ ಸೇವೆಗಳಲ್ಲಿ ಒಂದು ವಿಧ.ಮಕ್ಕಳು ಶಾಲೆಯ ಆವರಣ ಬಿಟ್ಟೊಡನೆ,ಅವರ ಹೆತ್ತವರನ್ನು ಎಚ್ಚರಿಸುವಂತಹ ಸೇವೆಯೂ ಇಲ್ಲಿ ಲಭ್ಯ.ಇನ್ನು ಜಾಹೀರಾತುದಾರರು,ವ್ಯಕ್ತಿಯ ಸ್ಥಳದಲ್ಲಿ ಲಭ್ಯವಿರುವ ಉಪಾಹಾರ ಮಂದಿರ,ಕಡಿತದ ಮಾರಾಟ ಮುಂತಾದ ವಿವರಗಳನ್ನೂ ಆತನಿಗೆ ರವಾನಿಸಲು ಸಾಧ್ಯ.ಈ ಅಂತರ್ಜಾಲ ತಾಣವನ್ನು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಕಾರ್ತಿಕ್ ಕಸ್ತೂರಿ,ಪ್ರಭವ್,ಕೃತಿಕಾ ಮತ್ತು ನವೀದ್ ಹಸನ್ ರೂಪಿಸಿದ್ದಾರೆ.
-------------------------------------------------------------------
ಗೂಗಲ್ ಶೋಧವೀಗ ಮತ್ತಷ್ಟು ಚುರುಕು
ಪ್ರತಿ ಕ್ಷಣದಲ್ಲೂ ಅಂತರ್ಜಾಲಕ್ಕೆ ಹೊಸ ಪುಟಗಳು ಸೇರ್ಪಡೆಯಾಗುತ್ತಿರುತ್ತವೆ.ಗೂಗಲ್ ಶೋಧವು ತಾನು ಕಂಡುಕೊಂಡ ಹೊಸ ತಾಣದ ವಿವರವನ್ನು ಎರಡುವಾರಕ್ಕೊಮ್ಮೆ ಪರಿಷ್ಕರಿಸುತ್ತಿತ್ತು.ಹೀಗೆ ಮಾಡಿದರೆ,ಶೋಧದ ಫಲಿತಾಂಶವು ಹೊಸ ಬದಲಾವಣೆಗಳ ಬಗ್ಗೆ ಮಾಹಿತಿ ನೀಡದೆ,ಬಳಕೆದಾರನ ಅಸಮಾಧಾನಕ್ಕೆ ಕಾರಣವಾಗುವುದು ಸಹಜ ತಾನೇ? ಅದಕ್ಕೀಗ ಗೂಗಲ್,ತನ್ನ ಶೋಧದ ಇಂಜಿನ್ ಅನ್ನು ಬದಲಾಯಿಸಿ, ಕೆಫೀನ್ ಎಂಬ ಹೊಸ ಹೆಸರಿನಿಂದ ಕರೆಯಲಾಗುತ್ತಿದೆ.ಕೆಫೀನ್ ಕ್ಷಣ-ಕ್ಷಣ ಸೇರ್ಪಡೆಯಾದ ಮಾಹಿತಿಗಳನ್ನೂ ಒಳಗೊಳ್ಳುವಂತೆ ಮಾರ್ಪಾಡಾದ ಗೂಗಲ್ ಸರ್ಚ್ ಇಂಜಿನ್.ಆಡಿಯೋ,ವೀಡಿಯೋ,ಚಿತ್ರ,ಲಿಪಿ ಹೀಗೆ ವಿವಿಧ ತೆರನ ಮಾಹಿತಿಗಳನ್ನೂ ಇದು ಒಳಗೊಂಡು ವೈವಿಧ್ಯಮಯ ಫಲಿತಾಂಶವನ್ನೂ ಬಳಕೆದಾರನಿಗೆ ನೀಡಲು ಸಮರ್ಥವಾಗಿದೆ.
----------------------------------------------------------
ಬೊಕ್ಕಸ ತುಂಬಿದ ಬ್ರಾಡ್‌ಬ್ಯಾಂಡ್ ತರಂಗಾಂತರ ಗುಚ್ಛ
ಸರಕಾರವು ತ್ರೀಜಿ ತರಂಗಾಂತರ ಗುಚ್ಛವನ್ನು ಎಪ್ಪತ್ತು ಸಾವಿರ ಕೋಟಿ ರೂಪಾಯಿಗೆ ಹರಾಜು ಹಾಕಿದ ಬೆನ್ನಲ್ಲೇ,ಬ್ರಾಡ್‌ಬ್ಯಾಂಡ್ ಗುಚ್ಛವನ್ನು ಹರಾಜು ಹಾಕುವ ಪ್ರಕ್ರಿಯೆಗೆ ಮುಂದಾಯಿತು.ಅದೀಗ ಮೂವತ್ತೆಂಟು ಸಾವಿರ ಕೋಟಿ ರೂಪಾಯಿಗೆ ಹರಾಜಾಗಿ ಸರಕಾರದ ಬೊಕ್ಕಸವನ್ನು ತುಂಬಿದೆ.ದೇಶದ ಇಪ್ಪತ್ತೆರಡು ವೃತ್ತಗಳಲ್ಲೂ ಸೇವೆ ನೀಡಲು ತರಂಗಾಂತರ ಗೆದ್ದಿರುವ ಇನ್ಫೋಟೆಲ್ ಕಂಪೆನಿಯನ್ನು ಮುಕೇಶ್ ಅಂಬಾನಿಯವರು ಖರೀದಿಸಿದ್ದಾರೆ.ಇನ್ಫೋಟೆಲ್ ಸುಮಾರು ಹದಿಮೂರು ಸಾವಿರ ಕೋಟಿ ನೀಡಿ,ಪರವಾನಗಿಯನ್ನು ಬಗಲಿಗೇರಿಸಿದೆ.ಕರ್ನಾಟಕದಲ್ಲಿ ಸೇವೆ ನೀಡುವ ಅವಕಾಶವನ್ನು ಭಾರ್ತಿ ಏರ್‌ಟೆಲ್ ಕೂಡಾ ಪಡೆದಿದೆ.ರಿಲಾಯನ್ಸ್ ಕಮ್ಯುನಿಕೇಶನ್ ಮತ್ತು ವೊಡಾಫೋನ್ ಕಂಪೆನಿಗಳು ಹರಾಜಿನಿಂದ ಹಿಂದೆ ಸರಿದುವು.
Udayavani
-----------------------------------------------------------
*ಅಶೋಕ್‌ಕುಮಾರ್ ಎ