ನಾ ಕವಿಯಾದೆ - ಭಾಗ 2

ನಾ ಕವಿಯಾದೆ - ಭಾಗ 2

ಈಗಾಗಲೆ ಒಂದು ಬಾರಿ ನನ್ನ ಕವನಗಳನ್ನು ವಾಂಚಿಸಿ ಹಳ್ಳೀಗ್ ಬಂದ ಮ್ಯಾಕೆ, ನನ್ನ ಬಗ್ಗೆ ಹಳ್ಳೀಲಿ ಸ್ಯಾನೆ ಮಾತುಕತೆ ನಡೀತಿತ್ತು. ವಾಪಸ್ಸು ಬಂದ್ ದಿನ ಅವ್ವಾ, ಆರತಿ ಮಾಡಿ ದೃಷ್ಠಿ ತೆಗೆದಿದ್ಲು. ನೀನು ದಿನಾ ಬೆಳಗ್ಗೆ ಓಗ್ತೀದ್ದೀಯಲ್ಲಾ ಇದಕ್ಕೇನ್ಲಾ ಅಂದ್ಲು. ಕವನ ಬರಿಯಕ್ಕೆ ಸಣ್ಣಗೆ ಆಗಬೇಕಾ ಮಗ. ಹೂಂ ಕಣವ್ವೋ. ಅಲ್ಲಿ ನನಗೆ ಸ್ಯಾನೆ ಮರ್ವಾದೆ ಮಾಡಿದ್ರು. ಅದೆಲ್ಲಾ ಈಗ ಏಳಕ್ಕೆ ಟೇಂ ಇಲ್ಲಾ ಬುಡು. ನೋಡ್ಲಾ ಇವನು ಕವನ ಎಲ್ಲಾ ಬರೀತಾನಂತೆ. ಅದೂ ಅಲ್ಲದೆ ಚಂಪಾನ ಹತ್ತಿರ ಹೋಗಿದ್ನಂತೆ ಕನ್ಲಾ. ಹಳ್ಳಿ ಕಟ್ಟೇಗೆಲ್ಲಾ ನಂದೇ ಮಾತು. ಯಾರು ಮಾತಾಡಿಸ್ತಿರಲಿಲ್ವೋ ಅವರೆಲ್ಲಾ ಮಾತಾಡ್ಸೋದೆಯಾ. ನಾನು ಒಳಗೊಳಗೆ ಸಂತೋಸ ಪಡ್ತಾ ಓಯ್ತಾ ಇದ್ದೆ.

ಒಂದಿನ ಹಳ್ಳಿನಾಗೆ ಹೈಕ್ಲೆಲ್ಲಾ ಸೇರಿ ಕಾರ್ಯಕ್ರಮ ಮಡಗಿದ್ರು. ನಾನೇ ಚೀಫ್ ಗೆಸ್ಟ್. ಅಣ್ಣಾ ನಿನ್ನಂತೋರು ನಮ್ಮ ಕಾರ್ಯಕ್ರಮಕ್ಕೆ ಬಂದರೆ ನಮಗೆಲ್ಲಾ ಎಮ್ಮೆ. ನೀನು ಬಂದು ಒಂದಿಸ್ಟು ಕವನ ಏಳಣ್ಣಾ ಅಂದ್ರ. ಬಿಡ್ರಲ್ಲಾ, ಒಂದು ಯಾಕ್ಲಾ ನೂರಾರು ಏಳ್ತೀನಿ ಅಂದೆ. ನೀನೇನೋ ನೂರಾರ್ ಹೇಳ್ತೀಯಾ, ಆದ್ರೆ ಕೇಳಕ್ಕೆ ಜನ ಇರಕ್ಕಿಲ್ಲ. ಆಹ್. ಕೆಲವೊಂದು ಉತ್ತಮ ಕವನ ವಾಂಚ್ಸಣಾ ಅಂದ್ರು. ಕಾರ್ಯಕ್ರಮ ಸುರುವಾಯ್ತು. ಪಕ್ಕದಾಗೆ ಗ್ರಾಮ ಪಂಚಾಯ್ತಿ ಅಧ್ಯಕ್ಸ ಗೌಡಪ್ಪ, ಸ್ನಾನ ಮಾಡಿ ಎಟ್ಟು ದಿನ ಆಗಿತ್ತೋ, ಪಕ್ಕದಾಗೆ ಬಂದ್ ಕೂರ್ತಿದಾಗೆನೇ ಹಳಸೋದ ಫಲಾವು ವಾಸನೆ ಬತ್ತಾ ಇತ್ತು. ಚೆಡ್ಡಿ ಅಂಗಿ ಮಾತ್ರ ಹೊಸಾದು ಆಕ್ಕೊಂಡಿದ್ದ.

ನನ್ನನ್ನ ಮಧ್ಯದಾಗೆ ಕೂರ್ಸಿದ್ರು. ಆ ಕಡೆ ಆ ಗೌಡ ಅಂತೆ, ಈ ಗೌಡ ಅಂತೆ ಎಲ್ಲರೂ ಕುಂತಿದ್ರು. ಒಂದು ಪಾಕೆಟ್ ಊದಬತ್ತಿ ಹಚ್ಚಿದ್ರೂ ಬಡ್ಡೀ ಮಗಂದು ಅಧ್ಯಕ್ಸನ ಮೈ ವಾಸನೇ ಮಾತ್ರ ಹೋಗ್ಲೇ ಇಲ್ಲ. ಇರಲಿ ಬುಡು, ನಮ್ಮ ಹಳ್ಳಿಯವರಿಗೂ ನಾನು ಏನೂ ಅಂತಾ ಗೊತ್ತಾಗಬೇಕು ಎಂದು ಆ ಕೆಟ್ಟ ವಾಸನೆಯನ್ನು ಸಹಿಸಿಕೊಂಡು ಕುಂತಿದ್ದೆ. ಮುಂದೆ ಅವ್ವ ಮತ್ತು ಅವ್ವನ ಫ್ರೆಂಡ್ಸ್, ನನ್ನ ಬಾಲ್ಯದ ಸ್ನೇಹಿತರು ಎಲ್ಲಾ ಇದ್ರು.

ಸ್ವಾಗತ ಆಯ್ತು, ಪ್ರಾರ್ಥನೆನೂ ಆಯ್ತು. ಬಾಮ್ಮಾ ಪುಟ್ಟಿ ಇಂತಹ ಪ್ರಾರ್ಥನೆ ಎಲ್ಲಾ ಹಾಡಬಾರದು. ನೀನು ಮುಂದಿನ ಸಲ ಹಾಡುವ ಮುಂಚೆ ನನ್ನನ್ನ ಕೇಳು ನಾನೇ ಸ್ವಂತ ಸ್ವರಚಿತ ಕವಿತೆ ಬರೆದುಕೊಡ್ತೀನಿ ಅಂದೆ. ಪಕ್ಕದಾಗೆ ಇದ್ದೊರೆಲ್ಲಾ ಏನ್ಲಾ ನೀನು ಎಂಗಿದ್ದೋನು ಎಂಗಾಬಿಟ್ಟೆಯಲ್ಲಾ ಅಂದ್ರು. ಅಧ್ಯಕ್ಸ ಸುರುಹಚ್ಕೊಂಡ ಭಾಸಣ, ನೋಡ್ರಲ್ಲಾ ನಮ್ಮ ಹೈದ ಪ್ಯಾಟೇಗೆ ಹೋಗಿ ಸಾನೆ ಬುದ್ದಿವಂತ ಆಗವ್ನೆ. ನೀವು ಇವನಂಗೆ ಆಗ್ಬೇಕ್ರಲ್ಲಾ. ಅಂತಿದ್ದ. ಯೋ ಮೊದಲು ನೀನು ಸ್ನಾನ ಮಾಡ್ಲಾ ಆಮ್ಯಾಕೆ ಇವರಿಗೆಲ್ಲಾ ಏಳುವಂತಿ ಅಂತಿದ್ದಾಗೆನೇ ಏನಾರ್ ಅಂದ್ಯಾ ಮಗ. ಏನಿಲ್ಲಾ ಗೌಡ್ರೆ ಮುಂದ್ ವರೆಸಿ. ನೋಡ್ರಲ್ಲಾ ಬರೇ ಎಮ್ಮೆ ಮೇಯಿಸಿದರೆ ಸಾಲದು ಕನ್ರಲ್ಲಾ. ಕೆಲ್ಸದ ಜೊತೆಗೆ ಕವನನೂ ಬರೆದು ನಮ್ಮ ಹಳ್ಳೀಗಿ ಹೆಸರು ತರಬೇಕು ಅಂದು ಕೂತ್ಕೊಂಡ. ಈಗ ನಮ್ಮೂರಿನ ಪ್ರಸಿದ್ದ ಕವಿಗಳಾದ ಶ್ರೀ ಶ್ರೀ ಶ್ರೀ ಕೋಮಲ್ ಇವರು ಒಂದಿಷ್ಟು ಕವನ ವಾಂಚಿಸ್ತಾರೆ ಕೇಳಿ, ಜನ್ಮವನ್ನು ಸಾರ್ಥಕ ಮಾಡಿಕೊಳ್ಳಿ ಅಂತಿದ್ದಾಗೆನೇ ಚಪ್ಪಾಳೆ ಮೇಲೆ ಚಪ್ಪಾಳೆ. ನಮ್ಮವ್ವ ಕೂತಲ್ಲಿಂದಲೇ ದೃಷ್ಟಿ ತೆಗೆಯೋಳು. ಪಕ್ಕದ್ಮನೆ ನಿಂಗಿ ಅಂಗೇ ಸ್ಮೈಲ್. ಫ್ರೆಂಡ್ಸ್ ಎಲ್ಲಾ ಕೋಮಲ್ ಸಂದಾಗಿರೋ ಕವನ ಹೇಳಲ್ಲಾ ಅಂತಿದ್ದಾಗೆನೇ, ಬಂತು ನೋಡಿ ಉತ್ಸಾಹ.

ಕುಲ ದೇವ ಸಿದ್ದೇಸನನ್ನು ನೆನೆಯುತ್ತಾ,

ಮೈಕ್ ಇಲ್ದೇನೇ ಸುರುಹಚ್ಕೊಂಡೆ.

ಕವನ ಎಮ್ಮೆ

ಎಮ್ಮೆ ಎನ್ನುವುದು ನಾಲ್ಕು ಕಾಲಿನ ಪ್ರಾಣಿ

ಎರಡು ಕೊಂಬು, ಒಂದು ಬಾಲವಿದೆ.

ಅದಕ್ಕೆ ಹುಲ್ಲಾಕಿದರೆ ಹಾಲನ್ನು ನೀಡುತ್ತದೆ

ಪುಟ್ಟಿಗಟ್ಟಲೆ ಸಗಣಿ ನೀಡುತ್ತದೆ

ಎಮ್ಮೆ ಎನ್ನುವುದು..... ಹಿಂಗೆ ಏಳ್ತಿದ್ದಂಗೆನೇ ನಮ್ಮೂರು ಐಕ್ಲುಗಳೆಲ್ಲಾ ನೋಡ್ಲಾ ದಿನಾ ನಾವು ಎಮ್ಮೆ ಮೇಯಿಸಕ್ಕೋದ್ರು ನಮಗೆ ಈ ವಿಸ್ಯಾ ಗೊತ್ತಿರಲಿಲ್ವಲ್ಲಾ ಅಂದ್ರು. ಚರ್ಚೆ ಸಾಕು ಮುಂದಿನ ಕವನ ಕೇಳ್ರಲ್ಲಾ. ಗೌಡಪ್ಪ, ಲೇ ಕೋಮಲ್, ನನ್ನ ಮೇಲ್ ಒಂದು ಕವನ ಹೇಳಲೇ.

 

ಕವನ ಗೌಡ

ನಮ್ಮೂರ ಗೌಡ

ದಿನಾ ತಿಂತಾನೆ ಬಕ್ಕಿಟ್ಟು ಲಾಡ

ಸ್ನಾನ ಮಾಡ್ದೆ ಸ್ನಾನೆ ದಿನಾ ಆಗಯ್ತೆ

ಪಕ್ಕದಾಗೆ ಇದ್ರೆ ಸತ್ತ ನಾಯಿಯ ವಾಸನೆ ಬತ್ತೈತೆ

ಅದಕ್ಕೆ ಇವನ ಹೆಂಡ್ತಿ ಪಕ್ಕದ ಗೌಡನ ಜೊತೆ ಓಡಿ ಹೋಗೈತೆ

....... ಲೇ ಗೌಡ ನಿನ್ನ ಹೆಂಡ್ತಿ ಯಾವಗಲಾ ಓಡು ಹೋದ್ಲು. ಲೇ ಕೋಮಲ್, ಏನ್ಲಾ ಇದು. ಗೌಡರೆ ಸುಮ್ನೆ ಕವನ ಅಟೆಯಾ. ಗೌಡ ನನ್ನನ್ನ ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ, ಚೆಡ್ಡಿ ಮೇಲೆ ಕೆರ್ಕತ್ತಾ, ಮಗನೇ ಕೆಳಗೆ ಬಾ ಐತೆ ಅಂದ. ಇದು ಒಳ್ಳೇ ಕತೆ ಆಯ್ತಲ್ಲಪ್ಪಾ ಅಂತಿದ್ದಾಗೆನೇ. ನಮ್ಮ ಪಕ್ಕದ ಮನೆ ರಂಗವ್ವ ನನ್ ಮ್ಯಾಕೆ ಒಂದು ಹೇಳಲಾ.

 

ಕವನ ಅವ್ವ ರಂಗವ್ವ

ರಂಗವ್ವ ನೀನು ಘಾಟಿ ಇದ್ಯವ್ವ

ನೀ ಸ್ಯಾನೆ ಕೆಲ್ಸ ಮಾಡಿದ್ದು ಸಾಕವ್ವ

ರಂಗವ್ವ ನಿನಗೆ ಎಷ್ಟು ಮಕ್ಕಳವ್ವ

ಅದರಾಗೆ ನಿಂದು ...... ಅಂತಿದ್ದಾಗೆನೇ ಸ್ಟೇಜಿಗೆ ಬಂತು ನೋಡ್ರೀ ಕಲ್ಲು. ರಂಗವ್ವ ಇದು ಕವನ. ನಿಂದು ಅಂದರೆ ಗಂಡು ಐಕ್ಳು, ಬೇರೆಯವರದು ಅಂದರೆ ಎಣ್ಣು ಐಕ್ಳು. ಬೇರೆ ಮನೆಗೆ ಹೋಗಿ ಸಂಸಾರ ಮಾಡಕ್ಕಿಲ್ವಾ ಅಂದೆ. ಅಂಗಾ ನಾ ಏನೋ ಅದ್ಕೊಂಡಿದ್ದೆ ಮಗ. ಅದಕ್ಕೆ ನಿಮಗೆಲ್ಲಾ ಹಳ್ಳಿಯೋವು ಅನ್ನೋದು. ಏಏಏಏ, ನನ್ನ ಮ್ಯಾಕೆ ಒಂದು ಕವನ ಹೇಳ್ಳಾ. ಅಂದ್ಲು ನಿಂಗಿ. ಪಿರುತಿಯಿಂದ. ಆಗಕ್ಕಿಲ್ಲಾ, ಟೇಂ ಆಗಿದೆ ಕಡೆಯದಾಗಿ ಸಿದ್ದೇಸನ ಹಾಡು ಅಂದೆ.

 

ಕವನ ಗುರುವೇ ಸಿದ್ದೇಸ

ಸಿದ್ದೇಸ ಸಿದ್ದೇಸ

ಡೋಂಟ್ ವರಿ ಸಿದ್ದೇಸ

ನಾವೆಲ್ಲಾ ನಿನ್ ಭಕ್ತರು ಸಿದ್ದೇಸ.... ಈ ಹಾಡು ಈಗ ಹಳ್ಳಿನಾಗೆ ರವಷ್ಟು ಪೇಮಸ್ ಆಗೈತೆ. ದೇವಸ್ಥಾನದಾಗೆ, ಮನ್ಯಾಗೆ, ಸಿದ್ದೇಸಂಗೆ ಆರತಿ ಮಾಡ್ದಾಗೆಲ್ಲಾ ಇದೇ ಹಾಡೆಯಾ. ಇನ್ನೂ ಭಾರೀ ಕವನ ಹೇಳೋದು ಇತ್ತು ಟೇಂ ಇಲ್ಲ ಕ್ಷಮಿಸಿ ಅಂದು, ಆ ಗಬ್ಬುನಾಥ ಗೌಡನ ಪಕ್ಕ ಕೂತೆ. ನನ್ನನ್ನ ನೋಡಿ ಬಾ ಬಾ ನಿನಗೆ ಐತೆ ಅಂತಾ ಅವ್ರ ಹುಡ್ಗುರಿಗೆಲ್ಲಾ ಕಣ್ಸನ್ನೆ ಮಾಡ್ತಿದ್ದಾಗೇನೇ. ಸಿದ್ದೇಸ ಕಾಪಾಡು, ಅಂತ ಓಡಿದ್ದೇ.

Rating
No votes yet

Comments