ಜಗಳ
ಜಗಳ
ಸಮಯವಿದ್ದುದರಿಂದ ಮೂಢ ಅವನ ಗೆಳೆಯ ಮಂಕನನ್ನು ಮಾತನಾಡಿಸಿಕೊಂಡು ಬರಲು ಅವನ ಮನೆಗೆ ಹೋದ. ಆ ಸಮಯದಲ್ಲಿ ಮಂಕ ಮತ್ತು ಅವನ ಪತ್ನಿಯ ನಡುವೆ ಯಾವುದೊ ವಿಷಯಕ್ಕೆ ಬಿರುಸಿನ ವಾಗ್ವಾದ ನಡೆಯುತ್ತಿತ್ತು. ಸಂದರ್ಭ ಸರಿಯಿಲ್ಲವೆಂದು ಮೂಢ ಹಿಂತಿರುಗಿ ಹೋಗಬೇಕೆನ್ನುವಷ್ಟರಲ್ಲಿ ಮೂಢನನ್ನು ನೋಡಿದ ಮಂಕ 'ಏಯ್, ಬಾರೋ' ಎಂದು ನಗುತ್ತಾ ಆಹ್ವಾನಿಸಿದ.'ಊರಗಲ ಬಾಯಿ ಮಾಡಿಕೊಂಡು ಮಾತನಾಡಿಸೋದು ನೋಡು' ಎಂದು ಮಂಕನನ್ನು ಮೂದಲಿಸಿದ ಅವನ ಪತ್ನಿ ಮೂಢನಿಗೆ, "ನೋಡಣ್ಣಾ, ಇವರು ಊರಿನವರೊಂದಿಗೆಲ್ಲಾ ನಗುನಗುತ್ತಾ ಮಾತನಾಡಿಸುತ್ತಾರೆ, ನನ್ನ ಹತ್ತಿರ ಮಾತ್ರ ಮುಖ ಗಂಟಿಕ್ಕಿಕೊಂಡು ಮಾತಾಡ್ತಾರೆ" ಎಂದು ದೂರಿದಳು. ಮೂಢ ಸುಮ್ಮನಿರಲಾರದೆ "ಊರಿನವರು ನಗುತ್ತಾ ಮಾತನಾಡಿಸಿದಾಗ ಇವನು ಮುಖ ಗಂಟಿಕ್ಕಿ ಮಾತನಾಡಲು ಆಗುತ್ತೇನಮ್ಮಾ? ನೀನೂ ನಗುತ್ತಾ ಮಾತನಾಡಿಸು. ಆಗ ನೋಡು. ಮುಖ ಗಂಟಿಕ್ಕುವುದಿರಲಿ, ಮುಡಿಯಲು ಮಾರುದ್ದಾ ಮಲ್ಲಿಗೆ ಹೂವು ತರುತ್ತಾನೆ" ಎಂದುಬಿಟ್ಟ. ಗೆಳೆಯನ ಪತ್ನಿ ಮೂಢನಿಗೆ "ಅದಕ್ಕೇ ಎಲ್ಲರೂ ನಿಮ್ಮನ್ನು ಮೂಢ ಅನ್ನುವುದು" ಎಂದು ಹೇಳಿ ಅಡುಗೆ ಮನೆಗೆ ಹೋದರೂ ಅವಳ ಒಳಮನಸ್ಸು "ಅವರು ಹೇಳಿದ್ದೂ ನಿಜ" ಎಂದು ಅನ್ನುತ್ತಿತ್ತು. ಗೆಳೆಯರು ಮಾತನಾಡುತ್ತಿದ್ದಾಗ ಮಂಕನಿಗೆ ಇಷ್ಟವಾದ ತಿಂಡಿಯ ಜೊತೆಗೆ ಕಾಫಿ ಇಬ್ಬರಿಗೂ ಬಂದಿತು. ಪತಿ ಪತ್ನಿಯರ ನಡುವೆ ಕಣ್ಣುಗಳು ಮಾತನಾಡಿಕೊಂಡವು. ತಿಂಡಿಯ ರುಚಿ ಹೆಚ್ಚಾಯಿತು.
Comments
ಉ: ಜಗಳ
ಉ: ಜಗಳ