ಬಾ... ಕವಿತೆ

ಬಾ... ಕವಿತೆ

 ಸಂಮಿಲನಕ್ಕೆಂದು ತುದಿಗಾಲಲ್ಲಿ ತಿಂಗಳಿಂದ ಕಾದಿದ್ದೆ.  ಒಂದು ವಾರ ಮೊದಲೇ ಕರೆಮಾಡಿ "ನಾನು ಸಾಮೆಕಾಳು ಹಾಗು ಪ್ರೀತಿಹಕ್ಕಿಗಳ ಬಗ್ಗೆ ಲೇಖನ ಬರೆದಿದ್ದೇನೆ. ಅಲ್ಲಿ ಓದಲಾ" ಎಂದು ಕೇಳಿದೆ.


"ಬೇಡ ಬೇಡ..ಅರ್ಥವಾಗುವಂತಹದ್ದೇನಾದರೂ ಬರಕೊಂಡು ಬನ್ನಿ.  ಅಂದ್ರೆ.., ನಾಲ್ಕು ಸಾಲು ಕವಿತೆ ಬರ್ಕೊಂಡು ಬನ್ನಿ ಸಾಕು. ಕವನ ವಾಚನದಲ್ಲಿ ತಮ್ಮ ಹೆಸರು ಸೇರಿಸ್ಕೋತೀನಿ" ಅಂದು ಫೋನು ಇಟ್ಟೇ ಬಿಟ್ಟರು.


ಮರ,ಗಿಡ,ಹೂ,ಹಣ್ಣುಗಳ ಬಗ್ಗೆ ಗೂಗ್‌ಲ್‌ನಿಂದ ಹುಡುಕಿ ಕದ್ದು ಬರೆಯಬಹುದು.ಆದರೆ ಕವಿತೆ??


ಸಯಿಂದ ಸಾನಿಯಾವರೆಗೆ,ಕ್ರಿಯೆ,ಪ್ರತಿಕ್ರಿಯೆ,ಮಾತುಮಾತಿಗೆ ಕವಿತೆ ಬರೆಯುವವರ ಕವನ ಕದ್ದರೆ ಹೇಗೆ!!!? "ಪಾಪ, ಗಣೇಶರಲ್ವಾ" ಎಂದು ಅವರು ಸುಮ್ಮನಿದ್ದಾರು. ಉಳಿದ ಅವರ ಅಭಿಮಾನಿಗಳು ಬಿಟ್ಟಾರಾ?


ಬೇಡ, ಕದಿಯುವ ಸಂಗತಿ...


ಸಂಪದ ತೆರೆದು,  ಕವಿತೆ ಹುಟ್ಟುವ ಸ್ಥಳಗಳ ಬಗ್ಗೆ ಗುರುತಿಸಿಕೊಂಡು ಹೊರಟೆ-ಪಾರ್ಕ್ ಸುತ್ತಿದೆ... ಬಸ್ ಹತ್ತಿದೆ...ವಾಹನ ಓಡಿಸುವಾಗಲೂ ಕವನದ ಬಗ್ಗೆ ಯೋಚಿಸಿದೆ..


ಬೈಗುಳ ಸಿಕ್ಕಿತೆ ಹೊರತು ಕವನ ಹುಟ್ಟಲಿಲ್ಲ. :( ಇನ್ನೂ ಮುಂದುವರಿದರೆ ಪೆಟ್ಟೇ ಸಿಗಬಹುದು ಎಂದು ಮನೆಗೆ ಹಿಂದಿರುಗಿದೆ.


ಕಾಫಿ ಜತೆಗೆ ಉಪ್ಪಿಟ್ಟು ತಂದಿಟ್ಟಳು ನನ್ನಾಕೆ.


ಸ್ಟ್ರಾಂಗ್ ಕಾಫಿ ಕುಡಿಯುತ್ತಿದ್ದಂತೆ ಪುನಃ ಕವಿತೆ ಬರೆಯುವ mood ಬಂತು. ಅಂದ ಹಾಗೆ ಯಾವ ವಿಷಯದ ಬಗ್ಗೆ ಕವಿತೆ ಬರೆಯಲಿ ಎಂದು ಇದುವರೆಗೆ ಯೋಚಿಸಿಯೇ ಇರಲಿಲ್ಲ! ಪ್ರೀತಿ-ಪ್ರೇಮಕ್ಕೆ ಡಿಮಾಂಡ್ ಜಾಸ್ತಿ. ಆದರೆ ಈ ಪ್ರೀತಿ ಪ್ರೇಮನ ಮದುವೆ ಮಾರನೇ ದಿನಾನೆ ಉಡುಗೊರೆ ಜತೆ ಗಂಟುಕಟ್ಟಿ ಅಟ್ಟಕ್ಕೆ ಎಸೆದಿದ್ದೇನಲ್ಲಾ..(ನಮ್ಮ ಕಾಲದಲ್ಲಿ ಮದುವೆ ಉಡುಗೊರೆಯಾಗಿ ಸ್ಟೀಲ್ ತಟ್ಟೆಗಳನ್ನೇ ಹೆಚ್ಚಾಗಿ ಕೊಡುತ್ತಿದ್ದರು.ಮುಂದೆ ಅಗತ್ಯಬಿದ್ದಾಗ ತೆಗೆದರಾಯಿತು ಎಂದು ಎತ್ತಿಟ್ಟದ್ದು ಮತ್ತೆ ತೆಗೆಯುವ ಪ್ರಸಂಗವೇ ಬರಲಿಲ್ಲ)


ಪ್ರೀತಿ ಪ್ರೇಮವಿಲ್ಲದಿದ್ದರೇನಾಯಿತು?


ನನ್ನಾಕೆ ಮಾಡಿದ ಉಪ್ಪಿಟ್ಟು,ಕಾಫಿಯನ್ನೇ ಹೊಗಳಿ ಬರೆದು, "ನೀ ಮಾಡಿದ ಕಾಫಿ" ಎಂಬಲ್ಲಿ "ನಿನ್ನ" ಎಂದೂ,


"ಉಪ್ಪಿಟ್ಟು ಚೆನ್ನಾಗಿದೆ" ಎಂಬಲ್ಲಿ "ಚಿನ್ನಾ" ಎಂದೂ... ಬರೆದರಾಯಿತು ಎಂದಾಲೋಚಿಸಿ ಒಂದು ಕವಿತೆ ರಚನೆ ಮಾಡಿದೆ.


ಅದನ್ನೇ ತಿದ್ದಿ, ತೀಡಿ ಒಂದು ಫೈನಲ್ ಟಚ್ ಕೊಟ್ಟು, ಬರೆದೇ ಬಿಟ್ಟೆ!


ವಾವ್...ಸೂಪರ್ ಕವಿತೆ!!! .


ಮೊದಲ ಆಡಿಯೆನ್ಸ್ ಆಗಿ ನನ್ನಾಕೆಯನ್ನೇ ಆಯ್ಕೆ ಮಾಡಿ, ಅಭಿನಯ ಸಹಿತ ಈ ಕವಿತೆ ಓದಿಯೇ ಬಿಟ್ಟೆ...


ಆಕೆ ಪ್ರತಿಕ್ರಿಯೆ ವಿಷಯ ಬಿಡಿ.. ಕಾಲ ಎಲ್ಲಿಗೆ ಬಂತು ನೋಡಿ... ನಾನು ಫ್ರೆಶ್ ಫ್ರೆಶ್ ಆಗಿ ಬರೆದ ( ನಾ ನಿನ್ನ ಮರೆಯಲಾರೆ...


ಎಂದೆಂದು ನಿನ್ನ ಬಿಡಲಾರೆ ಚಿನ್ನ...) ಕವಿತೆಯನ್ನು ೨೦ ವರ್ಷ ಮೊದಲೇ ಯಾರೋ ಕದ್ದಿದ್ದಾರಂತೆ. ಹೀಗೂ ಉಂಟೆ.


ಕೊನೆಯ ಪ್ರಯತ್ನ ಎಂದು  ಫೋಟೋದೆದುರು ದಿನಾ ನಾಲಗೆ ಚಾಚಿ ನಿಲ್ಲುತ್ತಿದ್ದೇನೆ..


ಒಮ್ಮೆ ದೇವರು ನನ್ನ ನಾಲಗೆ ಮೇಲೆ ಸೈನ್ ಹಾಕಲಿ..


-ಗಣೇಶ.


 


 


 


 

Rating
No votes yet

Comments