ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ...

ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ...

ಬರಹ


ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ ರಾಜ ನೀರೋ ಪಿಟೀಲು ಬಾರಿಸುತ್ತಿದ್ದನಂತೆ. ಆ ಕತೆ ಓಬೀರಾಯನ ಕಾಲದ್ದು. ಬನ್ನಿ ಇಲ್ಲೊಬ್ಬ ನೀರೋ ನ ಪರಿಚಯ ಮಾಡಿಕೊಳ್ಳಿ. ಇಡೀ ಸಮುದ್ರವನ್ನೇ ತನ್ನ ತೈಲದಿಂದ ಕಲುಷಿತಗೊಳಿಸಿ ಸಮುದ್ರ ಜೀವಿಗಳಿಗೆ ನೆಲೆಯಿಲ್ಲದಂತೆ ಮಾಡಿದ, ಸುಂದರ ಅಗಾಧ ನೀರನ್ನು ಭೀಭತ್ಸವಾಗಿಸಿ ತದನಂತರ ಏನೂ ಅರಿಯದವನಂತೆ ದೋಣಿ ವಿಹಾರಕ್ಕೆ ಹೊರಟ ತೈಲ ಸೋರಿಕೆಗೆ ಕಾರಣವಾದ ಕಂಪೆನಿಯ CEO Tony Hayward.  ಸ್ವಲ್ಪ ಯೋಚಿಸಿ ನೋಡಿ, ಈ ತೆರನಾದ ತೈಲ ಸೋರಿಕೆ ನಮ್ಮ ರಿಲಯನ್ಸ್ ನವರೋ ಅಥವಾ ಬೇರಾವುದಾದರೂ ಬಡ ರಾಷ್ಟದ ಕಂಪೆನಿಗಳು ಮಾಡಿದ್ದರೆ ಬಾಲಕ್ಕೆ ಕಿಚ್ಚು ಬಿದ್ದ ಹಾಗೆ ಆಡುತ್ತಿದ್ದರು ಸೂಟು ಬೂಟು ತೊಟ್ಟ ಬಿಳಿಯರು. ಇಷ್ಟೆಲ್ಲಾ ಅವಾಂತರ ಮಾಡಿದ ಹೇವರ್ಡ್ isle of Wight ಪ್ರವಾಸಿ ತಾಣಕ್ಕೆ ಹೋಗಿ ಅಲ್ಲೂ ಏನಾದರೂ ಕಪಿ ಚೇಷ್ಟೆ ಮಾಡಲು ಸಾಧ್ಯವೇ ಎಂದು ಲೆಕ್ಕ ಹಾಕುತ್ತಿರಬಹುದು ಎಂದು ನಿಮಗೆ ತೋಚಿದರೆ ಅಚ್ಚರಿಯಿಲ್ಲ. ದೂರದ ಮೆಕ್ಸಿಕೋ ಕೊಲ್ಲಿಯಲ್ಲಿ ರಾದ್ಧಾಂತ ಮಾಡಿ, ತಮ್ಮ ಸಂಗಡಿಗರ ಬದುಕನ್ನು ನರಕರೋದನವಾಗಿಸಿದ ಈ ಮಹಾತ್ಮನನ್ನು ದ್ವೀಪದ ಪ್ರಾಣಿ ಪಕ್ಷಿಗಳು ನೋಡಿ ಬದುಕಿದೆಯಾ ಬಡಜೀವವೇ ಎಂದು ಬೇರೆಲ್ಲಾದರೂ ತೊಲಗಿದರೆ ಅಚ್ಚರಿಯಿಲ್ಲ ಅನ್ನಿ. 


ಭೂಪಾಲ್ ನಲ್ಲಿ ಸಂಭವಿಸಿದ್ದೂ ಇದೇ ರೀತಿಯ ಒಂದು ಸೋರಿಕೆ ತಾನೇ? ಕೊಲ್ಲಿಯಲ್ಲಿ ತೈಲ ಸೋರಿಕೆ, ಭಾರತದಲ್ಲಿ ಅನಿಲ ಸೋರಿಕೆ. ವಿಷಾನಿಲವನ್ನು ಆಗಸಕ್ಕೆ ಬಿಟ್ಟು ಸಾವಿರಾರು ಜನ ರನ್ನು ಕೊಂದು, ಹುಟ್ಟಿದ, ಹುಟ್ಟುತ್ತಲೂ ಇರುವ ಮಕ್ಕಳು ಅಂಗ ವೈಕಲ್ಯದಿಂದ ನರಳುವಂತೆ ಮಾಡಿದ ವಿದೇಶೀ ಕಂಪೆನಿಯ ಅಧಿಕಾರಿಗಳನ್ನು ಪಂಚತಾರ ಒಟೇಲುಗಳಲ್ಲಿ ಕುಡಿಸಿ, ಕುಣಿಸಿ ಉಪಚರಿಸಿ ಅವರ ತಾಯ್ನಾಡಿಗೆ ಅತ್ಯಂತ ಸುರಕ್ಷ್ಟಿವಾಗಿ ತಲುಪಿಸಲಿಲ್ಲವೇ ನಾವು? ರೊಚ್ಚಿಗೆದ್ದ ಜನ ಎಲ್ಲಿ ಅವರ ಮೇಲೆ ಹರಿಹಾಯ್ದಾರೋ ಎಂದು ಶ್ವೇತಭವನದ ಆಣತಿಗೆ ವಿಧೇಯರಾಗಿ ನಮ್ಮ ಜನರ ಹಿತಾಸಕ್ತಿಗಳನ್ನು ಕಡೆಗಣಿಸಲಿಲ್ಲವೇ ನಾವು? ಇದೇ ಬಿಳಿ ಚರ್ಮದ ಸೊಗಸು, ಎಂಥವರೂ ಮರುಳಾಗುವರು ಇವರ ಮಾತಿನ ಮೋಡಿಗೆ. ಮರುಳಾಗದಿದ್ದರೆ ಗತಿ ನೆಟ್ಟಗಿರೋಲ್ಲ ಎಂದು ಸೌಮ್ಯವಾದ ಆದರೆ ಗಡುಸಾದ ಎಚ್ಚರಿಕೆ ಕೂಡಾ ಕೊಡಲು ಮರೆಯೋಲ್ಲ ಬಿಳಿ ಮೆದುಳು. environmanetal awareness, greenhouse effect, global warming, ಇವೆಲ್ಲಾ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಸೀಮಿತ. ಮೆಕ್ಸಿಕೋ ಕೊಲ್ಲಿಯಲ್ಲಿ ನೀರಿನಡಿಯ ತೈಲ ಬಾವಿಯ ಸೋರಿಕೆಯಿಂದ ಉಂಟಾದ ಅನಾಹುತದಲ್ಲಿ ಪ್ರಕೃತಿಗೆ ಆದ ನಷ್ಟ ಇನ್ನೂ ತಿಳಿದು ಬಂದಿಲ್ಲ. ಕಳಪೆ ದರ್ಜೆಯ ಉಪಕರಣ ಗಳನ್ನು ಉಪಯೋಗಿಸಿದ್ದರಿಂದ ಈ ಅನಾಹುತ ಸಂಭವಿಸಿತು. ಪ್ರತೀ ದಿನ ೫೦೦೦ ಬ್ಯಾರಲ್ ಗಳಷ್ಟು ತೈಲ ಸೋರುತ್ತಿದೆಯಂತೆ. ಆದರೆ ಮತ್ತೊಂದು ವರದಿಯ ಪ್ರಕಾರ ಸೋರುತ್ತಿರುವುದು ೫೦೦೦ ಬ್ಯಾರಲ ಅಲ್ಲ, ಅದಕ್ಕಿಂತ ಹತ್ತು ಪಟ್ಟು.ಹಾಗೂ ಈ ಸೋರಿಕೆ ಮಾಡುತ್ತಿರುವ ಅನಾಹುತವೋ? ಅಂದಾಜಿಗೆ ಸಿಕ್ಕಿಲ್ಲ.  


ತೈಲ ಸೋರಿಕೆಗೆ ಕಾರಣವಾದ BP ಕಂಪೆನಿಯ ಮುಖ್ಯಸ್ಥ ಟೋನಿ ಹೇವರ್ಡ್ ಸಾರ್ವಜನಿಕವಾಗಿ ಅಮೆರಿಕೆಯ ಕಾಂಗ್ರೆಸ್ಸ್ ಎದುರು ಮುಖಭಂಗಿತನಾಗಬೇಕಾಯಿತು. ಕ್ರುದ್ಧರಾದ ಅಮೆರಿಕೆಯ ಸಂಸತ್ ಸದಸ್ಯರ ಎದುರು ಕಡಿಮೆಯೆಂದರೂ ಕೇಳಿದ ಪ್ರಶ್ನೆಗಳಿಗೆ ೬೦ ಸಲ  ನನಗೆ ಗೊತ್ತಿಲ್ಲ ಎಂದು ಉತ್ತರ ನೀಡಿ ಅವರನ್ನು ಮತ್ತಷ್ಟು ಉದ್ರೆಕಿಸಿದ. ಇವನ ನನಗೆ ಗೊತ್ತಿಲ್ಲ ಎಂದು ಹೇಳುವ ಚಾಳಿ ಕೇಳಿದ ಸದಸ್ಯನೋರ್ವ ಕಡೆ ಪಕ್ಷ ಇವತ್ತಿನ ದಿನ ಯಾವುದೆಂದು ತಿಳಿದಿದೆಯಾ ಎಂದು ಮೂದಲಿಸಿದ. ಇದೇ ರೀತಿಯ ಉಪಚಾರವನ್ನು ಭೂಪಾಲ್ ದುರಂತಕ್ಕೆ ಕಾರಣರಾದ ಅಧಿಕಾರಿಗಳಿಗೆ ಅಮೇರಿಕ ನೀಡಿತೇ ಎಂದು ಮಾತ್ರ ದಯಮಾಡಿ ಕೇಳಬೇಡಿ. ವಿಯೆಟ್ನಾಂ ಕದನದ ವೇಳೆ ಅಮಾಯಕರ ಮೇಲೆ agent orange ಎಂಬ ರಸಾಯನಿಕವನ್ನು ಉಪಯೋಗಿಸಿ ಸಾವಿರಾರು ಜನರನ್ನು  ಕೊಂದದ್ದು ಮಾತ್ರವಲ್ಲ ಇಂದಿಗೂ ಅಲ್ಲಿನ ವಾತಾವರಣದ ಮೇಲೆ ಈ ವಿಷಾನಿಲದ ಪ್ರಭಾವ ಕಾಣುತ್ತಿದೆ. ಆದರೆ ತನಗೆ ಬೇಕಾದ ಕಡೆ ಜಾಣ ಕಿವುಡನ್ನು ಪ್ರದರ್ಶಿಸುವ ಅಮೆರಿಕೆಗೆ ದೂರದ ತೋರಾ ಬೊರಾ ಗವಿಯಲ್ಲಿ ಬಿನ್ ಲಾಡೆನ್ ಒಂದಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋದರೆ ಅವನಿಗೆ ಮೂತ್ರಕೋಶದ ಖಾಯಿಲೆ ಇದೆ ಎಂದು ವಿಶ್ವಕ್ಕೆ ಡಂಗುರ ಸಾರಿಸಿ ಹೇಳುತ್ತದೆ. ಅಮೆರಿಕೆಯ ಈ ದ್ವಂದ್ವ ನೀತಿಯ ಬಗ್ಗೆ ಒಬ್ಬ ಓದುಗ ಹೇಳಿದ್ದು americans are sanctimonious hypocrites ಎಂದು. ಎಷ್ಟು ಸತ್ಯ ನೋಡಿ ಈ ಮಾತು.   


ಬಿಳಿಯ ಏನು ಮಾಡಿದರೂ ಅದು ಸಲೀಸಾಗಿ ಒಂದೆರಡು, ಛೆ, ಛೆ, ಹಾಗಾಗಬಾರದಿತ್ತು, ಹೀಗಾಗ ಬಾರದಿತ್ತು ಎಂದು ಮರುಕ ಪಟ್ಟು ಯಥಾ ಸ್ಥಿತಿ ತಮ್ಮ ಕಾರುಬಾರನ್ನು ನಡೆಸುವ ಚಾಳಿಗೆ ನಮ್ಮಲ್ಲಿ ಉತ್ತರವಿದೆಯೇ? 


ಚೀನಾದಲ್ಲಿ ಮಕ್ಕಳ ಕುಡಿಯುವ ಹಾಲಿನಲ್ಲಿ ಕಲಬೆರಕೆ ಮಾಡಿದವರಿಗೆ ಮರಣ ದಂಡನೆ, ಇಲ್ಲಿ ಕಡಲನ್ನೇ ಕಲುಷಿತ ಗೊಳಿಸಿದ CEO ಪ್ರವಾಸದಲ್ಲಿ, ಭೋಪಾಲದಲ್ಲಿ ಸಾವಿರಾರು ಜನರ ಸಾವಿಗೆ ಕಾರಣರಾದವರು ನಿಶ್ಚಿಂತರಾಗಿ ತಮ್ಮ ದೇಶದಲ್ಲಿ. ನ್ಯಾಯಕ್ಕೆ ರಾವಣನ ಥರಾ ಹತ್ತು ಅಥವಾ ಹೆಚ್ಚು ತಲೆಗಳು. Receiving end ನಲ್ಲಿರುವವನು ಬಡವನಾದರಂತೂ ತೀರಿತು, ತಲೆಗಳ ಮೇಲೆ ತಲೆಗಳು ನ್ಯಾಯದೇವಿಗೆ.  


ಕೆಳಗಿನ ಚಿತ್ರ ನೋಡಿ.  ಶುಭ್ರ ಬಿಳಿ ಬಣ್ಣದ ಈ ಪಕ್ಷಿ.. ತಿಳಿ ನೀಲಿ ಬಣ್ಣದ ಅಟ್ಲಾಂಟಿಕ್ ಕಡಲಿನ ಹಿನ್ನೀರಿನಲ್ಲಿ ಮುಳುಗೆದ್ದು ಸನತಸ ಪಡುತ್ತಿದ್ದ ಈ ಪಕ್ಷಿ ತನ್ನ ಮೈಯ್ಯನ್ನೆಲ್ಲಾ ಜಿಡ್ಡುಗಟ್ಟಿದ ತೈಲದಿಂದ ಕಡುಗಪ್ಪಾಗಿಸಿಕೊಂಡು, ನಮ್ಮನ್ನು ದೈನ್ಯತೆಯಿಂದ ಕೇಳುತ್ತಿದೆ ಯಾವ ಪಾಪಕ್ಕಾಗಿ ನನಗೀ ಶಿಕ್ಷೆ ಎಂದು?


ಅದಕ್ಕೆ ಉತ್ತರ bank of england ಮತ್ತು ಅಮೆರಿಕೆಯ treasury department ಗಳ ತಿಜೋರಿಗಳಲ್ಲಿ ಕಾಣಲು ಸಿಗಬಹುದು. 




 


ಚಿತ್ರಗಳು: independent ಪತ್ರಿಕೆ ಮತ್ತು ವಿಪಿ ಪೀಡಿಯ ಕೃಪೆಯಿಂದ