ಅಪ್ಪನ ದಿನ - ನನ್ನದೇ ವಿವರಣೆ
ಈ ಬಾರಿ ಅಪ್ಪನ ದಿನ ಆದಿತ್ಯವಾರ ಬಂದದ್ದು ನಿಜಕ್ಕೂ ಒಳ್ಳೆಯದಾಯಿತು. ಹೇಗಿದ್ದರೂ ನಾನು ಅಪ್ಪನಿಗೆ ವಾರಕ್ಕೊಮ್ಮೆ ಕರೆ ಮಾಡುವುದು, ಅದರಿಂದ ಅಪ್ಪನ ದಿನಕ್ಕೆ ಅಪ್ಪನಿಗೆ ಕರೆ ಮಾಡಿದಂತೆ ಆಯಿತು. ಇಲ್ಲಿಂದ ಮುಂಬೈ ಸಮೀಪವಾದರೂ ೩ ತಿಂಗಳಿನ ಒಳಗೆ ಮುಂಬೈಗೆ ಇನ್ನೊಮ್ಮೆ ಹೋಗುವುದಿಲ್ಲ. ಇದರಿಂದ ಎಲ್ಲಾ ಸಾಧಿಸುವುದು ಏನೆಂದರೆ ಮೊದಲಿನಿಂದಲೂ ಅಪ್ಪ ಮತ್ತು ನನ್ನಲ್ಲಿ ಇರುವ ಅಂತರವನ್ನು ಕಡಿಮೆ ಮಾಡದಿರುವುದು. ಅಂತರವನ್ನು ಹೆಚ್ಚು ಮಾಡದಿರಲು ಕೂಡ ಮೇಲಿನ ಪಾಲಿಸಿಗಳು ಸಹಾಯವಾಗುತ್ತವೆ. ದ್ವೇಷ, ಸಿಟ್ಟು ಏನೂ ಇಲ್ಲ ಅಮ್ಮನ ಮಡಿಲಲ್ಲೇ ಬೆಳೆದ ನನಗೆ ಅಪ್ಪನ ಒಡನಾಟ ಕಡಿಮೆ, ಹುಟ್ಟಾ ಸ್ವಾಭಿಮಾನಿಯಾದ ನಾನು ಇಲ್ಲಿಯವರೆಗೆ ಅಪ್ಪನಲ್ಲಿ ಏನೂ ಕೇಳಿದ್ದಿಲ್ಲ. ಅಮ್ಮನ ಮುಖಾಂತರ ಅದನ್ನು ಅಪ್ಪನ ಕಿವಿಗೆ ಬೀಳಿಸುತ್ತಿದ್ದೆ ಎನ್ನುವುದು ಬೇರೆ ವಿಷಯ. ಅಪ್ಪ ಬಂದರೆ 'ಅವರು ಯಾವಾಗ ಹೋಗ್ತಾರಮ್ಮ' ಎಂದು ಅಮ್ಮನ ಬಳಿ ಹೇಳುತ್ತಿದ್ದುದು ಒಂದಾನೊಂದು ಕಾಲದಲ್ಲಿ ಇದ್ದ ಅಪ್ಪನ ಮೇಲಿನ ದ್ವೇಷದಿಂದ. ಈಗ ನಾನು ಅತಿಯಾಗಿ ಗೌರವಿಸುವ ಕೆಲವೇ ವ್ಯಕ್ತಿಗಳಲ್ಲಿ ಅಪ್ಪ ಕೂಡ ಒಬ್ಬರು, 'ಆದರ್ಶಪ್ರಾಯ ವ್ಯಕ್ತಿ' ಎಂಬ ಶಬ್ದದಲ್ಲಿ ವಿಶ್ವಾಸವಿದ್ದ ಕಾಲದಲ್ಲಿ ಅಪ್ಪ ಆ ಶಬ್ದಕ್ಕೆ ಉತ್ತಮ ಹೋಲಿಕೆ. ನಂತರ ಒಬ್ಬ ವ್ಯಕ್ತಿಯನ್ನು ಆದರ್ಶವಾಗಿ ಇಟ್ಟರೆ ನಮ್ಮ ಬೆಳವಣಿಗೆಗೆ ಮಾರಕ ಎಂಬ ತತ್ವವನ್ನು ಈಗ ಪಾಲಿಸುವುದರಿಂದ ಈಗ ಅತೀವ ಗೌರವ ಮಾತ್ರ ಇದೆ.
ನನ್ನ ಅಪ್ಪನ ಬಗ್ಗೆ ಬರೆದಿದ್ದು 'ಅಪ್ಪನ ದಿನ' ಎಂಬ ವಿಚಿತ್ರ ಆಚರಣೆಯ ಮುನ್ನುಡಿಗಾಗಿ ಮಾತ್ರ. ಕರೆ ಮಾಡಿಯೂ 'ಅಪ್ಪನ ದಿನಕ್ಕೆ' ಹಾರೈಸಲಿಲ್ಲ ಎಂದು ಓದುಗ ಬಂಧುಗಳಿಗೆ ಹೇಳಬೇಕಾಗಿಲ್ಲ. ಪರರಾಷ್ಟ್ರಗಳಿಂದ ಹುಟ್ಟಿ ಬಂದಂಥಹ ಇಂಥ ಆಚರಣೆಗಳಲ್ಲಿ ನನಗೆ ಅಷ್ಟೇನೂ ಆಸಕ್ತಿ ಮೊದಲಿನಿಂದಲೂ ಇಲ್ಲ. ಮೊದಲು ಬಂದಂಥಹ 'ರೋಸ್ ಡೆ', 'ವ್ಯಾಲೆಂಟೈನ್ ಡೆ' ಗಳು ಮುಂದುವರಿದದ್ದು 'ಅಮ್ಮನ/ಅಮ್ಮಂದಿರ ದಿನ', ಅಪ್ಪ/ಅಪ್ಪಂದಿರ ದಿನ ಗಳ ಮೂಲಕ. ಪ್ರೀತಿ ಎನ್ನುವುದು ಒಂದು ಪ್ರತಿದಿನದ ಅನುಭೂತಿ ಎಂದು ಈಗಲೂ ನಂಬಿರುವ ನನಗೆ ಫೆಬ್ರವರಿ ೧೪ರಂದು ಪ್ರೀತಿ ಹುಚ್ಚೆಳುವುದಿಲ್ಲ. ಪದವಿಯಲ್ಲಿ ಕೈಯಲ್ಲಿ ಹಣ ಇರದ ಕಾರಣ ಗುಲಾಬಿ ಹೂವುಗಳನ್ನು ಹುಡುಗಿಯರಿಗೆ ಕೊಡುತ್ತಿರಲಿಲ್ಲ. ಪ್ರಧಾನ ಕಾರಣ ಒಬ್ಬಳಿಗೆ ಕೊಟ್ಟರೆ ಇನ್ನೊಬ್ಬಳಿಗೆ ಸಿಟ್ಟು ಬರುವ ಹುಡುಗಿ ಎಂಬ ಸೃಷ್ಟಿಯ ವಿಚಿತ್ರ ನಡವಳಿಕೆಯಿಂದ. ಎಲ್ಲರಿಗೂ ಕೊಟ್ಟರೆ ಒಂದು ತಿಂಗಳು ಉಪವಾಸ ಇರಬೇಕಾಗಿತ್ತು ಎಂಬ ಭಯದಿಂದ 'ರೋಸ್ ಡೆ' ಕೂಡ ನನ್ನ ಆಚರಣೆಗೆ ಒಳಪಡುತ್ತಿರಲಿಲ್ಲ.
ಪ್ರತಿ ಕಾರಣದ ಹಿಂದೆ ಹೆಣ್ಣಿನ ಕೈವಾಡ ಇರುತ್ತದೆ. ಅಪ್ಪನ ದಿನ ಆಚರಣೆಗೆ ಬರಲೂ ಅಮ್ಮನವರೇ ಕಾರಣ. ಸ್ತ್ರೀ ವರ್ಗಕ್ಕೆ ಸಿಕ್ಕ 'ಅಮ್ಮಂದಿರ ದಿನ' ಎಂಬುದು ಅಪ್ಪನವರಲ್ಲಿ ಕೋಪ ತರಿಸಿ ನಮಗೂ ಒಂದು ದಿನ ಬೇಕು ಎಂದು ಹೊಡೆದಾಡಿದಾಗ ಆಚರಣೆಗೆ ಬಂದದ್ದು ಅಪ್ಪಂದಿರ ದಿನ. ಏನಪ್ಪಾ ಹೀಗೆ ಕತೆ ಕಟ್ಟುತ್ತಾ ಇದ್ದಾನೆ ಎಂದು ಕೊಳ್ಳಬೇಡಿ ಇದು ಅಪ್ಪನ ಆಣೆಗೂ ಸತ್ಯ. ಗೂಗಲಿಸಿ ನೋಡಿ! ಹೀಗೆ ದಿನಗಳ ಆಚರಣೆಗಳು ಮುಂದುವರಿದರೆ ಮುಂದೊಂದು ದಿನ 'ಅಜ್ಜನ ದಿನ' 'ಅಜ್ಜಿಯ ದಿನ' 'ಎರಡನೇ ಹೆಂಡತಿಯ ದಿನ' 'ಈಗಿನ ಅಪ್ಪನ ದಿನ' ಮುಂತಾದುವು ಬಂದರೂ ಅಚ್ಚರಿಯಿಲ್ಲ
ಅಪ್ಪಂದಿರ ದಿನದಲ್ಲಿ ಅತಿ ದೊಡ್ಡ ಸಮಸ್ಯೆ ಕಾಡುವುದು ಅಮೇರಿಕನ್ನರಿಗೆ, ಏಕೆಂದರೆ ಹುಟ್ಟಿಸಿದಾತ ಹೆಚ್ಚಾಗಿ ಯಾರು ಅಂತ ಅವರಿಗೇ ಗೊತ್ತಿರಲ್ಲ. ಅದರ ಮೇಲೆ 'ಅಪ್ಪನ ದಿನ' ಅಥವಾ ಅಪ್ಪಂದಿರ ದಿನ ಎಂಬುದರ ಬಗ್ಗೆ ನನಗೆ ಅನುಮಾನ ಇದೆ. ಅಪ್ಪನ ದಿನವಾದರೆ ಓಕೆ, ಅಪ್ಪಂದಿರ ದಿನ ಎನ್ನುವುದು ಭಾರತದಂತಹ ದೇಶದಲ್ಲಿ ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತದೆ. ಹೊರ ದೇಶಗಳಲ್ಲಿ ಚಿಂತೆಯಿಲ್ಲ ಬಿಡಿ. 'ಏನಪ್ಪಾ ಇಷ್ಟು ಲೇಟ್ ವಿಶ್ ಮಾಡ್ತಾ ಇದ್ದಿ' ಎಂದು ಅಪ್ಪನಾದವ ಕೇಳಿದರೆ 'ಮೊದಲಿನ ಅಪ್ಪನಿಗೆ ಕರೆ ಮಾಡಿದ್ದೆ, ಈಗ ನಿಮಗೆ' ಎಂಬ ಉತ್ತರ ಬಂದೀತು.
ಹೊರಗಿನಿಂದ ಬಂದದ್ದರಲ್ಲಿ ಪ್ರತಿಯೊಂದರಲ್ಲಿ ವಿಶೇಷ ಅರ್ಥ ಹುಡುಕುವ ಮತ್ತು ಅದನ್ನು ಬದುಕಿಗೆ ಒಗ್ಗಿಸಲು ತೊಡಗುವ ನಮ್ಮ ಸಹಜ ಗುಣಗಳು ಎಂದು ಕೊನೆಯಾಗುತ್ತವೂ ಗೊತ್ತಿಲ್ಲ. ಆದರೆ ಮನೆಯಿಂದ ಹೊರಗೆ ದಬ್ಬದೆ, ವೃದ್ಧಾಶ್ರಮಕ್ಕೆ ಹಾಕದೆ ಬದುಕಿರುವಷ್ಟು ಸಮಯ ಅವರಿಗೆ ಬದುಕಲು ಬಿಟ್ಟರೆ ಅದು ಅತಿ ದೊಡ್ಡ ಕೊಡುಗೆ. ಏನಂತೀರಿ?
Comments
ಉ: ಅಪ್ಪನ ದಿನ - ನನ್ನದೇ ವಿವರಣೆ
In reply to ಉ: ಅಪ್ಪನ ದಿನ - ನನ್ನದೇ ವಿವರಣೆ by asuhegde
ಉ: ಅಪ್ಪನ ದಿನ - ನನ್ನದೇ ವಿವರಣೆ
ಉ: ಅಪ್ಪನ ದಿನ - ನನ್ನದೇ ವಿವರಣೆ
ಉ: ಅಪ್ಪನ ದಿನ - ನನ್ನದೇ ವಿವರಣೆ
ಉ: ಅಪ್ಪನ ದಿನ - ನನ್ನದೇ ವಿವರಣೆ
ಉ: ಅಪ್ಪನ ದಿನ - ನನ್ನದೇ ವಿವರಣೆ
In reply to ಉ: ಅಪ್ಪನ ದಿನ - ನನ್ನದೇ ವಿವರಣೆ by ಭಾಗ್ವತ
ಉ: ಅಪ್ಪನ ದಿನ - ನನ್ನದೇ ವಿವರಣೆ