ಕೆ.ಎಸ್‌. ನಿಸಾರ್‌ ಅಹಮದ್‌ ಸಂದರ್ಶನ

ಕೆ.ಎಸ್‌. ನಿಸಾರ್‌ ಅಹಮದ್‌ ಸಂದರ್ಶನ

ಬರಹ

ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ನಿಮಗೆ ದೊರಕಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

-ನನ್ನ ಬದುಕಿನ ಅತ್ಯಂತ ಸಾರ್ಥಕ ಕ್ಷಣಗಳಲ್ಲಿ ಇದೂ ಒಂದು. ಇದಕ್ಕೆ ಮೂರ್ನಾಲ್ಕು ಕಾರಣಗಳಿವೆ. ನಾಲ್ಕು ವರ್ಷಗಳ ಹಿಂದೆಯೇ ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಅಂತ ವದಂತಿಯಾಗಿತ್ತು. ತುಂಬಾ ಜನ ದೂರವಾಣಿ ಮೂಲಕ ಶುಭ ಕೋರಿದ್ದರು ಕೂಡ. ಸಹಜವಾಗಿ ತುಂಬಾ ಖುಷಿಯಾಗಿತ್ತು. ಆದರೆ, ಅದಾದ ಕೆಲವೇ ಗಂಟೆಗಳಲ್ಲಿ ನಾನು ಆಯ್ಕೆಯಾಗಿಲ್ಲ ಅಂತ ಗೊತ್ತಾಗಿ ನಿರಾಸೆ ಆಯ್ತು. ಆಸೆ ಹುಟ್ಟಿಸಿ ಆಮೇಲೆ ಹೀಗಾದರೆ ಎಲ್ಲೋ ಎಂಥಾ ಮನುಷ್ಯನಿಗಾದ್ರೂ, ಎಂಥಾ ಸ್ಥಿತಪ್ರಜ್ಞನಿಗಾದ್ರೂ ಸ್ವಲ್ಪ ಬೇಸರ ಆಗುತ್ತೆ. ಆದ್ರೂ ಸಾವರಿಸಿಕೊಂಡೆ. ಹಾಗೆ ನೋಡಿದ್ರೆ ಇಷ್ಟರವರೆಗೆ ನನಗೆ ಬಂದಿರುವಂಥ ಪ್ರಶಸ್ತಿಗಳೆಲ್ಲ ಆಯಾಚಿತವಾಗಿ ಬಂದಂಥವು. ಯಾರ ಕೈಕಾಲು ಹಿಡಿದು ಪಡೆದುಕೊಂಡದ್ದೇನಲ್ಲ. ಹಾಗಾಗಿ ಬರಬೇಕಾಗಿದ್ದು ಬಂದೇ ಬರುತ್ತೆ ಅನ್ನೋ ನಂಬಿಕೆ ಇತ್ತು. ದೈವ ಕೃಪೆಯಿಂದ ಎಂಥಾ ಹೊತ್ತಲ್ಲಿ ಬಂದಿದೆ ಅಂದರೆ, ಕರ್ನಾಟಕ ಸುವರ್ಣ ರಾಜ್ಯೋತ್ಸವದ ಹೊನ್ನಸಗೆ ಆಚರಿಸುತ್ತಿದೆ. ಶಿವಮೊಗ್ಗದಲ್ಲಿ- ನಾನು ಎಲ್ಲಿ ಅತ್ಯಂತ ಮಹತ್ವದ, ಪುಷ್ಕಳವಾದ, ಧಾರಾಳವಾದ ಕವಿತೆಗಳನ್ನು ಬರೆದನೋ ಅಲ್ಲಿ ಸಮ್ಮೇಳನ ನಡೆಯುತ್ತಿದೆ. ಶಿವಮೊಗ್ಗ ನನ್ನ ಎರಡನೇ ಸೃಜನಶೀಲತೆಯ ತವರು ಅಂತ ಹೇಳಿಕೊಂಡಿದ್ದೇನೆ. ಬೆಂಗಳೂರು ಬಿಟ್ಟರೆ ಶಿವಮೊಗ್ಗ ನನಗೆ ಅತ್ಯಂತ ಪ್ರಿಯವಾದ ಊರು. ಏಕೆಂದರೆ ನನಗೆ ಅಲ್ಲಿ ಏಕಾಂತ ಸಿಕ್ತು. 1967ರ ಹೊತ್ತಲ್ಲಿ ಆಟೋಗಳು ಇರ್ಲಿಲ್ಲ, ಬರೀ ಜಟಕಾ ಗಾಡಿಗಳಿದ್ವು. ಶಿವಮೊಗ್ಗ ತನ್ನ ಹಳ್ಳಿ ಸೊಗಡಿನ ಮುಗ್ಧತೆ ಕಾಪಾಡಿಕೊಂಡು ಬಂದಿತ್ತು. ಇವತ್ತು ಹಿರಿಯಕ್ಕನ ಚಾಳಿ ಅಂತ ಬೆಂಗಳೂರಿನ ಚಾಳಿ ಬಡಿದಿದೆ ಅದಕ್ಕೆ. ಆ ಕಾಲದಲ್ಲಿ ತುಂಬಾ ನಿರಾಳವಾಗಿತ್ತು. ಕೈಚಾಚಿದಲ್ಲಿ ಗದ್ದೆ, ತೋಟ, ಹೊಳೆ, ಕಾಲುವೆ, ಪಕ್ಷಿಗಳು.... ಅತ್ಯಂತ ಆನಂದ ನೀಡುವ, ಪ್ರಶಾಂತ ವಾತಾವರಣ. ಹಾಗಾಗಿ ಶಿವಮೊಗ್ಗದಲ್ಲಿ ಈ ಸ್ಥಾನ ಸಿಕ್ಕಿದ್ದಂತೂ ನನಗೆ ಉಡುಗೊರೆ ಕೊಟ್ಟ ಹಾಗಿದೆ. ಇನ್ನೊಂದು ವಿಚಾರವೆಂದರೆ, ಶಿವಮೊಗ್ಗದಲ್ಲಿ ನಾನು ಯಾವ ಕೋಣೆಯಲ್ಲಿ ಕುಳಿತು ಸಾಮಾನ್ಯ ಶಿಷ್ಟ ಜನ, ವಿಮರ್ಶಕರು ಇವತ್ತಿಗೂ ಒಳ್ಳೆಯ ಪದ್ಯಗಳು ಅಂತ ಮೆಚ್ಚಿಕೊಂಡಿರುವ ಕವಿತೆಗಳನ್ನು ಬರೆದೆನೋ ಆ ಕೋಣೆಗೂ ಈಗ ಸಮ್ಮೇಳನ ನಡೆಯುತ್ತಿರುವ ವೇದಿಕೆಗೂ ಒಂದೇ ರಸ್ತೆ ಅಡ್ಡ. ಇದು ಕಾಕತಾಳೀಯವೋ, ಯೋಗಾಯೋಗವೋ ಗೊತ್ತಿಲ್ಲ. ಯಾವುದೋ ಅಲೌಕಿಕ ಶಕ್ತಿಯ ಕೃಪೆ ಇರುವುದಂತೂ ನಿಜ. ಆ ಶಕ್ತಿಗೆ ನನ್ನ ನಮಸ್ಕಾರ.

ಶಿವಮೊಗ್ಗದ ಜಯನಗರದಲ್ಲಿ ವಾಸವಾಗಿದ್ದಾಗ ನೀವು ಪ್ರತೀದಿನ ವಾಕಿಂಗ್‌ಗೆ ಅಂತ ನವುಲೆ ದಾರಿಯಲ್ಲಿ ಹೋಗ್ತಿದ್ರಿ. ಹನುಮ ಸಿಕ್ಕ ದಾರಿ ಬಗ್ಗೆ ಸ್ವಲ್ಪ ಹೇಳಿ. ನಿಜವಾಗಿಯೂ ಹನುಮ ಸಿಕ್ಕಿದ್ನಾ ಅಥವಾ ಅದು ನಿಮ್ಮ ಕಲ್ಪನೆಯಾ ಹೇಳಿ.

-ಕಲ್ಪನೆಯಲ್ಲ. ಹಾಗೊಬ್ಬ ವ್ಯಕ್ತಿ ಇದ್ದ. ಅವನ ಹೆಸರು ನೆನಪಿಲ್ಲ. ಒಂದೂವರೆ-ಎರಡು ವರ್ಷ ಪ್ರತೀದಿನ ಆ ದಾರಿಯಲ್ಲಿ ಅವನು ಸಿಗ್ತಿದ್ದ. ಗದ್ದೆಯಲ್ಲಿ ಕೆಲಸ ಮಾಡ್ತಿದ್ದ. ತುಂಬಾ ಕೊಳಕ. ಮಾತಲ್ಲಿ ಮಾತ್ರ ಮಹಾ ಚಾಲಾಕಿ. ಆವತ್ತು ಸಿ.ವಿ. ರಾಮನ್‌ ತೀರಿಕೊಂಡ್ರು ಅಂತ ಪೇಪರಲ್ಲಿ ಓದಿ ಮನೆಯಿಂದ ಆಚೆ ಬಂದು ನೋಡಿದ್ರೆ ಯಾರಿಗೂ ಆ ಬಗ್ಗೆ ದುಃಖ ಇದ್ದಂತಿರಲಿಲ್ಲ. ಇಷ್ಟಕ್ಕೂ ಯಾವ ವ್ಯಕ್ತಿ ತೀರಿಕೊಂಡ್ರೇನು, ಜನರಿಗೆ ಅವರದೇ ಆದ ಚಿಂತೆಗಳಿರುತ್ತವೆ. ಸಾವು ಮತ್ತು ಬದುಕಿನ ನಡುವಿನ ಅಸಾಂಗತ್ಯದ ತಾತ್ವಿಕ ವಿಚಾರ ಇಲ್ಲಿ ಗೋಚರವಾಗುತ್ತೆ. ನಾನು ಸಾವು ಮತ್ತು ಬದುಕಿನ ನಡುವೆ ನಡೆಸಿದ ಜಿಜ್ಞಾಸೆಗಳಿವೆಯಲ್ಲ, ಅವೆಲ್ಲ ಸಾಂಕೇತಿಕವಾಗಿ ಆ ಪದ್ಯದಲ್ಲಿ ಮೂಡಿವೆ. ಹಾಗಾಗಿ ಈಗ ಆ ಪದ್ಯವನ್ನು ಎಲ್ಲೇ ಓದಲಿ ಬಹಳ ಮೌನವಾಗಿ ಜನ ಕೇಳ್ತಾರೆ. ಆ ಪದ್ಯಕ್ಕೆ ನಾಟಕೀಯತೆಯೂ ಇದೆ, ಅತ್ಯಂತ ಸರಳವೂ ಆಗಿದೆ. ಆದರೆ ತತ್ವ ಉದಾತ್ತವಾಗಿದೆ. ಜಿಜ್ಞಾಸೆ, ಮನನ, ಶಾಂತ ಚಿತ್ತದಲ್ಲಿ ಆಲೋಚನೆ ಮಾಡುವಂಥ ಭಾವನೆಗಳು, ತಾತ್ವಿಕ ಸತ್ವ ಇವೆಲ್ಲ ಅದರಲ್ಲಿ ಅಡಗಿದೆ. ಹಾಗೆ ಹನುಮ ಎಂದು ಕರೆಯುವ ಆ ವ್ಯಕ್ತಿ ಬರೀ ಲೌಕಿಕ. ತನ್ನ ಸೀಮಿತ ಜಗತ್ತು ಬಿಟ್ರೆ, ತನ್ನ ಗದ್ದೆ, ಧಣಿ, ಪುಢಾರಿ, ಹೆಂಡ್ತಿ, ಮಕ್ಕಳು ಬಿಟ್ರೆ ಬೇರೆ ಜಗತ್ತಿನ ಬಗ್ಗೆ ಯಾವುದೇ ಆಸೆ ಅವನಿಗೆ ಇದ್ದಂತಿಲ್ಲ. ಹೀಗಿದ್ರೂ ಕೂಡ ಬದುಕಿಗೆ ಇಂಥವರೂ ಬೇಕಾಗ್ತಾರೆ. ಬದುಕಿಗೆ ಮೂಲವಾಗಿ ವಿದ್ಯೆ ಮತ್ತು ಅವಿದ್ಯೆ ಎರಡೂ ಬೇಕಾಗುತ್ತೆ. ಬರೀ ವಿದ್ಯಾವಂತರೇ ಸೇರಿಬಿಟ್ರೆ ಜಗತ್ತು ನಡೆಯೊಲ್ಲ. ಶ್ರಮಜೀವಿಗಳೂ ಬೇಕು. ಇವರಿಂದಲೂ ಜಗತ್ತು ನಡೆಯುತ್ತೆ. ಹೀಗಾಗಿ ಬದುಕಿನ ಎರಡು ಸತ್ವಗಳ ಬಗ್ಗೆ ಸಾತ್ವಿಕ ಆಲೋಚನೆ ಮಾಡಿದೆ. ಭವ್ಯವಾದ ಸಾವಾದ್ರೂ ಅವರ ಬಗ್ಗೆ ಯಾವುದೇ ಪ್ರತಿಕ್ರಿಯೆ ತೋರದೇ ಇರುವುದೆಲ್ಲ ಬಹಳ ವಿಚಿತ್ರವಾಗಿ ಕಾಣುತ್ತೆ. ನನ್ನ ಇನ್ನೊಂದು ಕವಿತೆ `ಮೃಗಾಯಣ'ದಲ್ಲಿ ಇದನ್ನು ಬೇರೆ ರೀತಿಯಲ್ಲಿ ಹೇಳಿದ್ದೇನೆ. ಒಬ್ಬ ದೊಡ್ಡ ಶಿಕಾರಿ ಹುಲಿಯನ್ನು ಪಾಯಿಂಟ್‌ ಬ್ಲಾಂಕ್‌ ರೇಂಜ್‌ನಲ್ಲಿ ಹೊಡೆದಿರುತ್ತಾನೆ. ಅಂಥ ಅಸೀಮ ಸಾಹಸಿ ಅವನು. ಆದರೆ ಅವನ ಸಾವು ಅತ್ಯಂತ ಹೀನಾಯ ಸ್ಥಿತಿಯಲ್ಲಾಗುತ್ತೆ. ಆ ಸಾಹಸಮಯ ಬದುಕಿಗೂ ನಗೆಪಾಟಲಿನ ಸಾವಿಗೂ ಯಾವುದೇ ಸಂಬಂಧವಿಲ್ಲ. ಹೀಗೆ ಅದರ ಒಂದು ಎಳೆ ಇಲ್ಲಿದೆ. ಹನುಮನಂಥವನು ಮತ್ತು ರಾಮನ್‌ರಂಥವರನ್ನು ಹೋಲಿಕೆ ಮಾಡಿ ನೋಡಿದ್ದೇನೆ. ರಾಮನ್‌ ಬಗ್ಗೆ ಇವನಿಗೆ ಗೊತ್ತಿಲ್ಲ, ಈ ಅಜ್ಞಾನಿ ಬಗ್ಗೆ ರಾಮನ್‌ಗೆ ಗೊತ್ತಿಲ್ಲ. ಇದೇ ನಮ್ಮ ಬದುಕಿನ ದುರಂತ ಅಂತ ಹೇಳಿದ್ದೇನೆ.

ರಾಮನ್‌ರನ್ನು ಅವಜ್ಞೆ ಮಾಡಿದ್ದನ್ನು ಕಂಡು ಆ ಸಂದರ್ಭದಲ್ಲಿ ನನಗೆ ತುಂಬಾ ದುಃಖವಾಗಿತ್ತು. ಬದುಕು ಅಂದ್ರೆ ಇಷ್ಟೆನಾ? ನಾನೂ ನಾಳೆ ಹೋಗ್ತೀನಿ, ನಾನೂ ಹೀಗೇನಾ? ನನ್ನ ಪದ್ಯಗಳೆಲ್ಲಾ ಅನಾಥವಾಗುತ್ತವೆಯಾ ಎಂಬಿತ್ಯಾದಿ ಯೋಚನೆ ಬಂದು ಇಷ್ಟೇ ಜಗತ್ತು ಅನ್ನೋ ನಿರಾಶಾ ಭಾವನೆಯೂ ಮೂಡಿತು. ಆ ಸ್ಥಿತಿಯಲ್ಲಿ ಕೂತು ಮುಕ್ಕಾಲು ಗಂಟೆಯಲ್ಲಿ ಬರೆದ ಪದ್ಯ ಅದು. ಅದೇನೋ ಏನೋ, ಈ ಪದ್ಯ, ನಿತ್ಯೋತ್ಸವ, ಕುರಿಗಳು- ಇಂಥ ಪದ್ಯಗಳೆಲ್ಲ ಹುಟ್ಟುವಾಗಲೇ ತಮ್ಮ ಜಾತಕ ಮುಗಿಸಿಕೊಂಡು ಬಂದಂತೆ ಪ್ರಖ್ಯಾತಿ ಪಡೆದುಬಿಟ್ಟವು.

ಕನ್ನಡ ಕಾವ್ಯ ಜಗತ್ತಿನಲಿ ನಿಮ್ಮ ಸಮಕಾಲೀನರಿಗಿಂತ ನೀವು ಭಿನ್ನ ಹಾದಿ ತುಳಿದವರು. ರಾಜಕೀಯ, ತಾತ್ವಿಕ ಪದ್ಯಗಳ ಜೊತೆಗೇ ಹಾಡೋ ಪದ್ಯಗಳನ್ನೂ ಬರೆದಿರಿ. ಹಾಡೋ ಪದ್ಯ ಬರೆಯುವುದು ಅವಮಾನಕಾರಿ ಅಂತ ನಿಮ್ಮ ಸಮಕಾಲೀನರು ತಿಳಿದಕೊಂಡಿದ್ದಾಗ್ಲೂ ಧೈರ್ಯವಾಗಿ ತಾತ್ವಿಕವಾಗಿದ್ದನ್ನು, ಗಟ್ಟಿಯಾಗಿದ್ದನ್ನು ಹೇಳಲು ಸಾಧ್ಯ ಅಂತ ತೋರಿಸಿದ್ರಿ. ಆ ಒತ್ತಡಗಳ ಮಧ್ಯೆ ಇದು ಹೇಗೆ ಸಾಧ್ಯವಾಯಿತು?

-ಬಹಳ ಒಳ್ಳೇ ಪ್ರಶ್ನೆ. ಇದು ನನ್ನ ಸೃಜನಶೀಲತೆಯ ಆರಂಭದ ದಿನಗಳತ್ತ ಕರೆದುಕೊಂಡು ಹೋಗುತ್ತೆ. ಹಾಗೆ ನೋಡಿದ್ರೆ ನಾನು ಗಂಭೀರ ಪದ್ಯ ಬರೆಯೋಕೆ ಶುರುಮಾಡಿದ್ದು 1954ರಿಂದ. ಗಂಭೀರ ಅಂದ್ರೆ ಪ್ರಕಟಿಸಲು ಅರ್ಹ ಪದ್ಯಗಳು. ಆ ಹೊತ್ತಿಗೆ ನವ್ಯ ಕಾವ್ಯ ಬಂದಿತ್ತು. ಆದ್ರೂ ನವೋದಯದ ಜಾಡು ಬಿಟ್ಟಿರ್ಲಿಲ್ಲ. ನವ್ಯದ ಗಾಳಿ ಬೀಸುತ್ತಿದ್ದರಿಂದ ನಾನೂ ಅದರ ಒಂದು ಭಾಗವಾಗಿ ಹೋದೆ. ಹಾಗೆ ಬರೆದಾಗ ಅನಿಸ್ತು- ನನ್ನ ಮನಸ್ಸಿನ ವಿಚಾರಗಳಿಗೆ ನವ್ಯ ಕಾವ್ಯ ಪ್ರಮುಖ ಮಾಧ್ಯಮವಾದ ಹಾಗೆ, ನನ್ನ ಭಾವನೆಗಳಿಗೆ ನವೋದಯ ಕಾವ್ಯದ ಗುಣವೇ ಇರಬೇಕು. ಒಂದು ರೀತಿಯ ಸಂಗೀತತೆ, ಗೇಯತೆ, ಶಬ್ದಗಳ ಕುರಿತ ಛಂದೋಬದ್ಧ ಲಯ ಇರಬೇಕು ಅನಿಸ್ತು. ಆದ್ರೆ ಬರೀತಾ ಬರೀತಾ 50-60ನೇ ಇಸ್ವಿಗಳಲ್ಲಿ ಒಂದು ಬಗೆಯ ಯಾಂತ್ರಿಕ ಪುನರಾವರ್ತನೆ ಶುರುವಾಯ್ತು- ನವ್ಯ ಕಾವ್ಯದಲ್ಲಿ. ನವೋದಯ ಕಾವ್ಯಕ್ಕೆ ಚುಚ್ಚುಮದ್ದು ಕೊಟ್ಟು ವಾಸ್ತವದ ನೆಲೆಗಿಳಿಸಬೇಕು, ಅದು ಆಕಾಶ ಹಕ್ಕಿ ಆಗ್ಬಿಟ್ಟಿದೆ. ಅದು ಆಕಾಶದಲ್ಲಿ ಹಾರಾಡ್ತಿದೆ, ಸತ್ಯ ಶಿವಂ ಸುಂದರಂ ಅನ್ನೋದು ಬಿಟ್ಟು ಎಲ್ಲ ಅಮೂರ್ತ ತತ್ವ ಹೇಳ್ತಿದೆ. ಹಾಗಾಗಿ ಇದು ನಮ್ಮ ಬದುಕಿಗೆ ಸಂಗತವಾಗಿಲ್ಲ, ಹತ್ತಿರವಾಗಿಲ್ಲ, ಬದುಕಿಗೆ ಹತ್ತಿರ ತರ್ಬೇಕು. ನಮ್ಮ ಕಷ್ಟ-ನಷ್ಟ, ಹತಾಶೆ, ನಿರಾಸೆಗಳನ್ನು, ಸ್ವಾತಂತ್ರ್ಯ ನಂತರದ ಭಗ್ನ ಮನೋರಥಗಳನ್ನು ತೋಡಿಕೊಳ್ಳಸಬೇಕು ಎಂಬ ಆಶಯಗಳೊಂದಿಗೆ ನವ್ಯ ಕಾವ್ಯದ ಉದಯವಾಯಿತು. ಇದು ಒಳ್ಳೇ ಆಶಯವೇ. ಆದರೆ ಎಲ್ಲರೂ ಒಂದೇ ಅಚ್ಚಿನಲ್ಲಿ ಬರೆಯತೊಡಗಿದ್ರು. ಇವತ್ತು ಹೇಗೆ ಶೋಷಣೆ, ಪ್ರಸ್ತುತತೆ ಇತ್ಯಾದಿಗಳೇ ಮುಖ್ಯವಾಗಿ ಎಲ್ಲರೂ ಅದೇ ಬರೀತಿದ್ದಾರೋ ಹಾಗೆ. ಯಾವತ್ತೂ ಒಂದು ಆಶಯ ಇಟ್ಟುಕೊಂಡು ಬರೆದರೆ ಕವಿ ಸಂಕುಚಿತನಾಗುತ್ತಾನೆ. ಜಗತ್ತಿನ ಅನುಭವಗಳನ್ನು ಅವನು ಗ್ರಹಿಸಬೇಕು. ವಿವಿಧ ಮೂಲಗಳಿಂದ ಅನುಭವ ಆಪೋಶಿಸಿಕೊಂಡು ಸಮೃದ್ಧನಾಗಬೇಕು, ಸಂಪನ್ನನಾಗಬೇಕು. ತನ್ನ ಮೇಲೆ ಯಾವುದು ಪ್ರಭಾವ ಬೀರಿರುತ್ತೆ, ಕಾಡಿರುತ್ತೆ, ಒತ್ತಾಯಿಸುತ್ತೆ ಅವುಗಳ ಮೇಲೆಲ್ಲಾ ಬರೀಬೇಕು. ಅವುಗಳಲ್ಲಿ ಇಂಥ ಸಂವೇದನೆಗಳೂ ಒಂದು. ನವ್ಯ ಅನ್ನೋದಾಗಲೀ, ನವೋದಯ ಮಾರ್ಗದ ರೀತಿಯಾಗಲೀ ಅಥವಾ ಮುಸ್ಲಿಂ, ದಲಿತ ಸಂವೇದನೆಗಳೇ ಆಗಲಿ, ಇವೆಲ್ಲ ಭಾಗವಾಗಿ ಹೋಗಬೇಕು ವಿನಃ ಅದೇ ಪ್ರಮುಖವಾಗಬಾರದು. ಹಾಗಾದ್ರೆ ಸಾಹಿತ್ಯ ಬೆಳೆಯೊಲ್ಲ. ಉದ್ದ, ಅಗಲ ಆಗುತ್ತೇ ಹೊರತು ಆಳ ಸಿಗೊಲ್ಲ. ಹಾಗಾಗಿ ಎಲ್ಲ ಜನರಿಗೂ ಸಾಮಾನ್ಯವಾದ, ಸಾಧಾರಣೀಕರಣವಾದ, ಸಾರ್ವತ್ರಿಕ ಅನುಭವಗಳನ್ನು ಕೂಡ ಕವಿ ಬರೆಯಬೇಕಾಗುತ್ತೆ. ಆಗಲೇ ಸಂಪೂರ್ಣ, ಸಮಗ್ರ ವ್ಯಕ್ತಿತ್ವ ಹೊರತರಲಾಗುವುದು.

ನಾನು ಯೋಚನೆ ಮಾಡಿದೆ. ಎಲ್ಲರೂ ಒಂದೇ ಥರ ಬರೀತಾರೆ. ಅವು ಚಹರೆ ಇಲ್ಲದ ಕವಾಯತ್ತು. ಮುಖಹೀನ ಕವಾಯತ್ತು. ಅಡಿಗರಂಥ ಕವಿಗಳನ್ನು ಬಿಟ್ಟರೆ ನಮ್ಮ ಸಮಕಾಲೀನರಲ್ಲಿ ಎಲ್ಲರೂ ಹಾಗೇ ಬರೀತಿದ್ರು. ಹಾಗಾಗಿ ಈ ವೈಚಾರಿಕತೆಯ ಬೊಜ್ಜನ್ನು ಇಳಿಸಲಿಕ್ಕೆ ಭಾವಾತ್ಮಕತೆಯ ಸಂಪರ್ಕ ಸಿಗಬೇಕಾಗಿದೆ ಅಂತ ಯೋಚಿಸಿದ ನಾನು ಭಾವಗೀತೆಗಳನ್ನು ಬರೆದೆ. ಆ ಹೊತ್ತಿಗೆ ಈ ಮಾರ್ಗದ ಬಗ್ಗೆ ಯಾರೂ ಧೈರ್ಯ ಮಾಡಿರಲಿಲ್ಲ. ನಾನು ಬರೆದಾಗ ತಮಾಷೆ ಮಾಡಿದ್ರು. ಜನಪ್ರಿಯತೆಗೆ ಹಾತೊರೆದು ಬರೀತಾನೆ ಅಂದ್ರು. ಯಾವುದಕ್ಕೂ ಕೇರ್‌ ಮಾಡಿಲ್ಲ. ಅದಕ್ಕೆ ತಕ್ಕಂತೆ ಮೈಸೂರು ಅನಂತಸ್ವಾಮಿ ಎಂಬ ಹಾಡುಗಾರ ನನಗೆ ಸಿಕ್ಕಿದ. ನನ್ನ ಹಾಡುಗಳನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ರೇಡಿಯೋದಲ್ಲಿ ಹಾಡಿ ಪ್ರಚಾರ ಮಾಡಿದ. ಇವತ್ತು ಅದರ ಫಲ ಕೊಡ್ತಿದೆ. ಆ ಟ್ರೆಂಡ್‌ ಬೆಳೀತಿದೆ. ತಮಾಷೆ ಅಂದ್ರೆ, ಯಾರ್ಯಾರು ಆಗ ಆಡಿಕೊಳ್ತಿದ್ರೋ ಅವರೂ ಇದರಲ್ಲಿ ಗಲಾಟೆ, ಗದ್ದಲ ಇಲ್ದೆ ಸೇರಿಕೊಂಡ್ರು. ಆದರೆ ನಾನು ಮಾತ್ರ ಅವರನ್ನು ಆಡಿಕೊಂಡಿಲ್ಲ!

ಒಟ್ಟಾರೆ ನಾವು ಸಾಹಿತಿಗಳು ಯಾರೋ ದೊಡ್ಡ ಶಿಲ್ಪಿ ಕೈಯಲ್ಲಿ ಕೆಲಸ ಮಾಡ್ತಿರೋ ರೂವಾರಿಗಳು ಅಂದುಕೊಳ್ಳಬೇಕು. ನಾವೇ ದೊಡ್ಡವರು ಅಂದುಕೊಳ್ಳಬಾರದು. ಅದು ನಾವು ಬರೀತಿರೋದಲ್ಲ, ಕಾವ್ಯದ ಆಂತರಿಕ ಅವಶ್ಯಕತೆ ನಮ್ಮಿಂದ ಬರೆಸುತ್ತಿದೆ. ಕನ್ನಡ ಸಾಹಿತ್ಯವೇ ಇಂಥ ಆಂತರಿಕ ಅವಶ್ಯಕತೆ ಸೃಷ್ಟಿಸಿಕೊಂಡಿರುತ್ತೆ- ಇದರ ಕಾಲ ಮುಗೀತು, ಹೊಸದನ್ನು ಆಯ್ಕೆ ಮಾಡಿಕೊಳ್ಳಬೇಕು ಅಂತ. ಆ ಅಲೌಕಿಕ ಶಕ್ತಿಯ ನೇತೃತ್ವದಲ್ಲಿ ನಾವು ಬರೀತೀವಿ. ಇದು ಟೀಂ ವರ್ಕ್‌. ಒಬ್ನೇ ಆಡುವ ಇಸ್ಟೀಟ್‌ ಆಟವಲ್ಲ, ಕಾಲ್ಚೆಂಡಿನ ಆಟ. ಇಲ್ಲಿ ಎಲ್ಲರೂ ಮುಖ್ಯ. ಫುಲ್‌ಬ್ಯಾಕ್‌, ಸೆಂಟರ್‌ ಫಾರ್ವರ್ಡ್‌, ಗೋಲ್‌ಕೀಪರ್‌- ಎಲ್ಲರೂ ಸಮಾನರು ಅಂತ ಭಾವಿಸಬೇಕು. ಇವತ್ತು ನಾವು ಗುಂಪಲ್ಲಿ ಬರೀತಿದೀವಿ. ಈ ಗುಂಪಿನ ಚಹರೆ ಹೋದ್ರೆ ಮಾತ್ರ ಕಾವ್ಯಕ್ಕೆ ಗಾಂಭೀರ್ಯ, ಆಳ ಬರುತ್ತೆ. ಈಗ ಉದ್ದ-ಅಗಲ ಆಗ್ತಿದೆ. ಬಹಳ ಸಂಭ್ರಮಯುತ ದೃಶ್ಯ ಇದು. ಬೇರೆ ಬೇರೆ ವರ್ಗಗಳವರು ತಮ್ಮ ಆಶೋತ್ತರ,ಆಶಯ, ಸಂಕಟಗಳನ್ನು ತೋಡಿಕೊಳ್ಳುತ್ತಿದ್ದಾರೆ. ಶತ ಶತಮಾನಗಳಿಂದ ಆಗಿರಬಹುದಾದ ನೋವುಗಳನ್ನು ಬಿಚ್ಚಿಡುತ್ತಿದ್ದಾರೆ. ಸಂತೋಷ. ಅವರು ಪಟ್ಟಿರೋ ಪಾಡಿಗೆ ಅಭಿವ್ಯಕ್ತಿ ಸಿಕ್ಕಿದೆ. ಆದರೆ ಎಲ್ಲರೂ ಒಂದೇ ಆಶಯ ಇಟ್ಟುಕೊಂಡು ಬರೀಬಾರ್ದು. ನೋವಿನ ಜೊತೆ ಸಂತೋಷನೂ ಇರುವ ಹಾಗೆ ಬೇರೆ ಅನುಭವಗಳ ಜೊತೆ ಇದೂ ಬರಬೇಕು ಅನ್ನೋದು ನನ್ನ ಆಶಯ.

ಹೀಗಾಗಿ ಕನ್ನಡ ಕಾವ್ಯ ಬಹಳ ಮುಂದುವರಿದಿದೆ. ಭಾರತೀಯ ಕಾವ್ಯಗಳಲ್ಲೇ ವಿಶಿಷ್ಟ ಸ್ಥಾನ ಕನ್ನಡ ಕಾವ್ಯಕ್ಕಿದೆ. ಏಳು ಜ್ಞಾನಪೀಠ ಸಿಕ್ಕಿದೆ. ನಮಗಿಂತ ಹೆಚ್ಚು ಭಾಷೆ ಮಾತಾಡುವವರಿಗೆ, ಇಂಗ್ಲಿಷಿನ ಪತ್ರಿಕೆ ಮೂಲಕ ಆ ಭಾಷೆಯನ್ನು ಹೊಗಳುತ್ತಿದ್ದವರಿಗೆ ಇದು ಒಂದು ರೀತಿಯ ಸೂಚನೆ. ಅಂಥ ಉತ್ಕೃಷ್ಟ ಸಾಹಿತ್ಯ ನಮ್ಮದು. ಆದರೆ ಈಚಿನ ಕೆಲವು ವೈವಿಧ್ಯದಲ್ಲಿ ಕಾವ್ಯತ್ವ ಸ್ವಲ್ಪ ಕಡಿಮೆಯಾಗುತ್ತಿದೆ. ಸರ್ವಾಂಗೀಣ ಸಾಹಿತ್ಯದಲ್ಲಿ ಅಭ್ಯುದಯ ಸಾಸಿದ್ದೀವಿ.

ಮುಸ್ಲಿಂ ಸಂವೇದನೆಗಳು ಅನ್ನೋ ಪರಿಕಲ್ಪನೆಯನ್ನು ನೀವು ತಾತ್ವಿಕವಾಗಿ ವಿರೋಸ್ತೀರಿ ಅಂತಲ್ಲ . ಅದಕ್ಕೊಂದು ಪ್ರತಿ ಸವಾಲು ನಿಮ್ಮ ಬಳಿ ಇದ್ದೇ ಇರುತ್ತೆ. ಆದರೂ ನಿಮ್ಮ `ರಂಗೋಲಿ ಮತ್ತು ಮಗ' ಕವಿತೆ ಮುಸ್ಲಿಂ ಸಂವೇದನೆಯಲ್ಲಿ ಹೊಸ ಸಾಧ್ಯತೆಯೊಂದನ್ನು ತೆರೆದಿಟ್ಟಿತು. ಈ ಪದ್ಯದ ಹಿನ್ನೆಲೆ ಬಗ್ಗೆ ಸ್ವಲ್ಪ ಹೇಳಿ.

-ಇದನ್ನು ಆತ್ಮಪ್ರಶಂಸೆ ಅಂತ ಭಾವಿಸ್ಬೇಡಿ. ವಿನಮ್ರವಾಗಿ ಹೇಳ್ತೀನಿ. ಪದ್ಯಗಳನ್ನು ಬರೆಯಲು ಶುರು ಮಾಡಿದ ಮೇಲೆ ಸಾಹಿತ್ಯ ಜಗತ್ತು ಮತ್ತು ಸಾಮಾಜಿಕ ಜಗತ್ತಿನಿಂದ ನನಗಾದ ವೈಯಕ್ತಿಕ ನೋವನ್ನು ನಾನು ಆ ಕಾಲದಲ್ಲೇ ತೋಡಿಕೊಂಡೆ. ಆಗ ಇದು ಮುಸ್ಲಿಂ ಸಂವೇದನೆ ಆಗಿರಲಿಲ್ಲ. ಈಗೇನು ಮುಸ್ಲಿಂ ಸಂವೇದನೆ ಅಂತಿದೆಯೋ ಆ ಕಾಲದಲ್ಲಿ ಅದರ ಹೆಸರೇ ಇರ್ಲಿಲ್ಲ. ಮುಸ್ಲಿಂ ಸಂವೇದನೆ ಅಂತ ಹೇಳಿಕೊಳ್ಳದೇ ಪಟ್ಟ ನೋವು, ಪಾಡುಗಳನ್ನು ಹೇಳಿಕೊಂಡೆ. ಅದಕ್ಕೂ ಮೊದಲು `ಉಭಯ ಕಷ್ಟ' ಅನ್ನೋ ಪದ್ಯವನ್ನೂ ಬರೆದೆ. 1975-80ರ ನಂತರ `ಸಂವೇದನೆ' ಅಂತ ಬಂತು. ಇದೆಲ್ಲ ವಿಮರ್ಶಕರ ಜಾಣ್ಮೆ. ಮೊದಲೇ ಒಡೆದು ಹೋಗಿರುವ ಸಮಾಜವನ್ನು ಇನ್ನಷ್ಟು ಸ್ತರೀಕರಿಸಿ ಇಡಬೇಕು ಅನ್ನೋದೇ ಅವರ ಜಾಯಮಾನ, ಬುದ್ಧಿವಂತರ ಲಕ್ಷಣ ಇವೆಲ್ಲ. ಯಾರೇ ಆದ್ರೂ ತುಂಬಾ ಸೀಮಿತವಾದ ಅನುಭವಗಳನ್ನೇ ಹೇಳಿ ಅಂತ ಬೋಸೊಲ್ಲ. ಬದುಕಲ್ಲಿ ಅಸಮಾನತೆ ಬೇಡ ಅನ್ನೋರು, ಭಾವನೆಗಳಲ್ಲಿ ಅಸಮಾನತೆ ತರೋದು ಹೇಗೆ? ರಂಗೋಲಿ ಕವನದ ಮುಂಚೆಯೇ ವಿವರಣೆ, ಇಬ್ಬಂದಿ, ಬ್ರಾಹ್ಮೀ ಮುಹೂರ್ತ, ಸ್ಥಿತ್ಯಂತರ, ನಿಮ್ಮೊಡನಿದ್ದೂ ನಿಮ್ಮಂತಾಗದೆ ಹೀಗೆ 10-12 ಪದ್ಯ ಬರೆದಿದ್ದೀನಿ. ಆದ್ರೆ ಆಗ ಯಾರೂ ಗುರುತಿಸಲಿಲ್ಲ.
ಬಹುಶಃ ಆ ಕಾಲದಲ್ಲಿ ಪ್ರಪ್ರಥಮವಾಗಿ, ಸಂವೇದನೆ ಅಂತ ಅದನ್ನು ಗುರುತಿಸಿ ಈಗ ಯಾವುದನ್ನು ಹೇಳ್ತಾರೋ ಅದನ್ನು ಪ್ರಾರಂಭಿಸಿದವನು ನಾನೇ ಅನ್ಬೇಕು. ನಿಮ್ಮೊಡನಿದ್ದೂ ನಿಮ್ಮಂತಾಗದೆ ಪದ್ಯದ ವಿಷಯದಲ್ಲಿ ಆಗ ದೊಡ್ಡ ಗಲಾಟೆಯೇ ಆಗಿತ್ತು. ಯಾರೋ ಒಬ್ಬರು ನಿಸಾರ್‌ ಮುಸ್ಲಿಮರಾಗಿ ಭಾರತೀಯತೆ ಬಗ್ಗೆಯೇ ಪ್ರಶ್ನೆ ಎತ್ತಿದ್ದಾರೆ, ಮುಸ್ಲಿಂರ ಪ್ರತಿನಿತ್ವ ಇದು, ಹೀಗೆ-ಹಾಗೆ ಅಂತ ಹೇಳಿದ್ರು. ಅದಕ್ಕೆ ನನ್ನ ಗೆಳೆಯರು ಕೆಲವರು ಸಮಜಾಯಿಷಿ ಕೊಟ್ಟರು. ಹೀಗೆ ಅದು ವಿವಾದಕ್ಕೀಡಾಯಿತು. ಇವತ್ತು ಇಂಥದ್ದೆಲ್ಲ ವಿವಾದ ಆಗೊಲ್ಲ. ಯಾಕೆಂದ್ರೆ ಇವತ್ತು ಇದು ಟ್ರೆಂಡ್‌ ಆಗಿಬಿಟ್ಟಿದೆ. ಎಲ್ಲರೂ ಬರೀತಾರೆ. ಆದರೆ ಈ ವಿಷಯವನ್ನು ನಾನು ಯಾವತ್ತೂ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಪತ್ರಿಕೆಗಳಲ್ಲಿ ಇದನ್ನು ಎಲ್ಲಿಯೂ ಹೇಳಿಲ್ಲ. ಹೀಗೆ ಹೇಳುತ್ತಿರುವುದು ಇದೇ ಮೊದಲು.

ಹಾಗಾಗಿ ನಮ್ಮ ಯುವ ಪೀಳಿಗೆಗೆ ನನ್ನ ಕಿವಿಮಾತೆಂದರೆ, ನಮ್ಮ ಸಂವೇದನೆಗಳೆಲ್ಲ ನಮ್ಮ ಒಟ್ಟಾರೆ ಸಾರ್ವತ್ರಿಕ ಸಂವೇದನೆಗಳು, ಮಾನವೀಯ ಸಂವೇದನೆಗಳ ಒಂದು ಅಂಗವಾಗಿ ಬರಬೇಕು ವಿನಃ ಸ್ವತಂತ್ರವಾಗಬಾರದು. ಹಾಗೆ ಅಂಗವಾಗಿ ಬಂದಾಗಲೂ ತಮ್ಮ ವೈಶಿಷ್ಟ್ಯ, ಖಾರ, ರೋಷ, ಆಕ್ರೋಶಗಳನ್ನು ಉಳಿಸಿಕೊಂಡು ಬಂದೇ ಬರುತ್ತೆ. ಆ ಥರ ಬರೆಯೋದು ವಾಸಿ. ಮೊದಲು ನಾವು ಬೆಳೆಯಬೇಕು. ನಾನು ಬೆಳೆಯದೇ ಕಾವ್ಯವನ್ನು ಬೆಳೆಸುತ್ತೇನೆ ಅನ್ನೋದು ಮೂರ್ಖತನ.

ನೀವು ಭೂವಿಜ್ಞಾನದ ಅಧ್ಯಾಪಕರಾಗಿದ್ದವರು. ವಿಜ್ಞಾನ ನಿಮ್ಮ ಕಲಿಕೆಯ ಮತ್ತು ಕಲಿಸುವ ಕ್ಷೇತ್ರವಾಗಿತ್ತು. ಹಾಗಿದ್ದರೂ ಕಾವ್ಯವನ್ನು ಅಷ್ಟೇ ಗಂಭೀರವಾಗಿ ತಗೊಂಡ್ರಿ. ವಿಜ್ಞಾನ ಮತ್ತು ಕಾವ್ಯ ಅಷ್ಟೇನೂ ಹತ್ತಿರವಲ್ಲ. ನಿಮ್ಮ ಕಾಲದಲ್ಲಿ ಲಿಟರೇಚರ್‌ ಅಧ್ಯಾಪಕರೇ ಪದ್ಯ, ಸಾಹಿತ್ಯ, ಕತೆ ಬರೆಯುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ನೀವು ಭೂವಿಜ್ಞಾನದ ಅಧ್ಯಾಪಕರಾಗಿದ್ದೂ ಕನ್ನಡ ಕಾವ್ಯದೆಡೆ ಹೊರಳಿದ್ರಿ. ಅದರಲ್ಲೂ ಸೈನ್ಸ್‌ ಎನ್ನುವುದು ಸಂಪೂರ್ಣ ಇಂಗ್ಲಿಷ್‌ನಲ್ಲೇ ಇದ್ದ ಆ ಕಾಲದಲ್ಲಿ. ಈ ಹಿಂದಿನ ಪ್ರೇರಣೆ ಏನು?

-ಬಹುಶಃ ನನಗೆ ಪ್ರಾಕೃತಿಕವಾಗಿ ಏನೋ ಕಿಡಿ ಇದ್ದಿರಬೇಕು. ಆಗೆಲ್ಲ ಗೋವಿನ ಹಾಡು, ಕಿಂದರಿ ಜೋಗಿ, ಅರೇಬಿಯನ್‌ ನೈಟ್ಸ್‌ ಕತೆ ಕೇಳ್ದಾಗಲೆಲ್ಲ ಮುಗ್ಧನಾಗಿ ಭಾವನಾ ಲೋಕಕ್ಕೆ ಹೋಗ್ತಿದ್ದೆ. ನಾನು ಸ್ವಭಾವತಃ ಭಾವಜೀವಿ. ಮೂಡಿತನ, ಅಂತರ್ಮುಖತೆ ನನ್ನಲ್ಲಿ ಇದ್ದಿದ್ರಿಂದ ನನಗೆ ದೊಡ್ಡ ದೊಡ್ಡ ಕಾದಂಬರಿಗಳನ್ನು ಬರೆಯಲಿಕ್ಕಾಗಲಿಲ್ಲ. ಏಕೆಂದರೆ ನನಗೆ ವಿಶ್ಲೇಷಣೆ, ವಿವರಣೆ ಮಾಡಲಿಕ್ಕಾಗೊಲ್ಲ. ಏನಿದ್ದರೂ, ತಕ್ಷಣಕ್ಕೆ ಏನು ಹೇಳಬಹುದೋ ಅದನ್ನು ಉದ್ಗರಿಸುವುದಷ್ಟೇ. ಅದನ್ನು ತಿಂಗಾನುಗಟ್ಟಲೆ ಕೂತು ಬರೆಯುವ ಶಕ್ತಿ ನನಗಿಲ್ಲ. ಹಾಗೆ ವಿಶ್ಲೇಷಣಾತ್ಮಕವಾಗಿ ಬರೆಯುವುದು ಅಂಥವರು ಪಡೆದಿರೋ ವರ. ಆದ್ರೆ ಅವರಿಗೆ ನನ್ನ ಹಾಗೆ ಚಿಕ್ಕದಾಗಿ ಪದ್ಯದಲ್ಲಿ ಹೇಳುವುದು ಸಿದ್ಧಿಸಿರೊಲ್ಲ. ಮೇಲೆ ಹೇಳಿದ ಹಾಡುಗಳು, ಕತೆಗಳ ಜೊತೆಗೆ ಮೊದಲಿಂದಲೂ ಪಂಜೆ ಮಂಗೇಶರಾಯರ ತೆಂಕಣಗಾಳಿಯಾಟ, ಹುತ್ತರಿಹಾಡು, ಗೋವಿಂದ ಪೈ ಅವರ ತಾಯೆ ಬಾರೆ ಮೊಗವ ತೋರೆ- ಎಲ್ಲ ಪದ್ಯಗಳು ನನ್ನ ಮೇಲೆ ಪರಿಣಾಮ ಬೀರಿದ್ವು. ಹಾಗಾಗಿ ಮೊದಲಿಂದಲೂ ಪದ್ಯ ಬರೀತಿದ್ದೆ. ಇಂಟರ್‌ಮೀಡಿಯೆಟ್‌ಗೆ ಬಂದಾಗ ವಿ ಇಲ್ಲದೆ ಸೈನ್ಸ್‌ ತಗೊಂಡೆ. ಏಕೆಂದರೆ, ಕನ್ನಡ ಓದೋ ಹಾಗಿರಲಿಲ್ಲ. ಬೆಂಗಳೂರಿನಲ್ಲಿ ಕನ್ನಡ ಇರ್ಲಿಲ್ಲ. ಮೈಸೂರಲ್ಲಿ ಇದ್ದರೂ ಹಾಸ್ಟೆಲ್‌ನಲ್ಲಿ ಓದೋ ಚೈತನ್ಯ ಇರ್ಲಿಲ್ಲ. ಹಾಗಾಗಿ ಬೆಂಗಳೂರೇ ಗತಿಯಾಯ್ತು. ನನಗೆ ಜಿಯಾಲಜಿ, ಬಾಟ್ನಿಯಲ್ಲಿ ಒಳ್ಳೇ ಮಾರ್ಕ್ಸ್‌ ಬಂದಿತ್ತು. ಚಿಕ್ಕಪ್ಪ ಇದು ಹೊಸ ಸಬ್ಜೆಕ್ಟ್‌, ಗಣಿ-ಗಿಣಿಯಲ್ಲಿ ಕೆಲಸ ಸಿಗುತ್ತೆ ಅಂದ್ರು. ಹಾಗಾಗಿ ಸೇರಿಕೊಂಡೆ. ಹಾಗೆ ಸೇರಿಕೊಂಡದ್ದು ಬಹಳ ಒಳ್ಳೆಯದೇ ಆಯ್ತು. ಅದು ಪ್ರಕೃತಿ ವಿಜ್ಞಾನ. ಬರೀ ಕಲ್ಲು, ಖನಿಜ, ಮಣ್ಣು ಇಷ್ಟೇ ಅಲ್ಲ. ಅವುಗಳ ಹಿಂದಿನ ವೈಭವಗಳಿವೆ; ರತ್ನಗಳು, ಜ್ವಾಲಾಮುಖಿ, ಭೂಕಂಪ, ಪ್ರಾಕೃತಿಕ ವೈಲಕ್ಷಣಗಳು- ಹೀಗೆ ಅದ್ಭುತಗಳ ಲೋಕವೊಂದು ನನ್ನ ಮುಂದೆ ತೆರೆದುಕೊಂಡಿತು. ಇದು ನನ್ನ ಕಾವ್ಯಕ್ಕೆ ತುಂಬಾ ಒತ್ತಾಸೆಯಾಗಿ ನಿಂತಿತು. ಎಷ್ಟೋ ವೈಜ್ಞಾನಿಕ ಹೋಲಿಕೆಗಳನ್ನು, ರೂಪಕಗಳನ್ನು ಕಾವ್ಯದಲ್ಲಿ ಬಳಸಿಕೊಂಡಿದ್ದೇನಿ. `ನಿತ್ಯೋತ್ಸವ'ದ ಕವಿತೆಯಲ್ಲಿ `ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ....' ಎಂಬ ಕಲ್ಪನೆ ಬಹುಶಃ ಜಿಯಾಲಜಿ ಓದದೇ ಇರುತ್ತಿದ್ದಿದ್ದರೆ ನನಗೆ ಹೊಳೆಯುತ್ತಿರಲಿಲ್ಲವೇನೋ. ಕಣ್ಣಾರೆ ಕಂಡ, ಅನುಭವಿಸಿದ ವಿಷಯಗಳು ಅವು.

ಇಂಗ್ಲಿಷ್‌ ಪ್ರಾಬಲ್ಯ ಹೆಚ್ಚಿದ್ದರಿಂದ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ನುಡಿಗಟ್ಟು ರೂಪಿಸುವ ಕೆಲಸ ಈಗ ನಿಂತುಹೋಗಿದೆ. ಜನಪ್ರಿಯ ಬರೆಹಗಳು ಬಿಟ್ಟರೆ ಗಂಭೀರ ಬರೆಹಗಳು ಕೆಲವರಿಗಷ್ಟೇ ಸೀಮಿತವಾಗಿವೆ. ಈ ಬಗ್ಗೆ ನೀವೇನು ಹೇಳ್ತೀರಿ?

-ವಿಜ್ಞಾನದ ಜೊತೆ ಹೆಜ್ಜೆ ಹಾಕದಿದ್ರೆ ನಾವು ಮುಂದುವರೆಯೊಲ್ಲ. ಅದು ಅಕ್ಷರಶಃ ಸತ್ಯ. ಜೀವನದ ಪ್ರತಿಯೊಂದರಲ್ಲೂ ವಿಜ್ಞಾನವಿದೆ. ಮೈಕ್‌ಗೆ ಧ್ವನಿವರ್ಧಕ ಅನ್ನೊಲ್ಲ. ಕಾರಿಗೆ ಚತುಷ್‌ಚಕ್ರ ವಾಹನ, ದ್ವಿಚಕ್ರವಾಹನ- ಇಂಥ ದೊಡ್ಡ ದೊಡ್ಡ ೇಂಡಾ ಮೃಗದಂಥ ಸಂಸ್ಕೃತ ಪದಗಳನ್ನು ತಂದು ಇಲ್ಲಿ ಹೇರಬಾರದು. ಇಂಗ್ಲಿಷ್‌ನಲ್ಲಿ ಅತ್ಯಂತ ಕ್ಲಿಷ್ಟ ವಿಚಾರಗಳನ್ನೂ ತಿಳಿಯಾದ ಭಾಷೆಯಲ್ಲಿ ಹೇಳಬಹುದು. ಕನ್ನಡದಲ್ಲೂ ಈ ಪ್ರಯೋಗವನ್ನು ಆ ಕಾಲದಲ್ಲಿ ಮೊಟ್ಟಮೊದಲು ತಂದವರು ಕುವೆಂಪು. ನಂತರ ದೇಜಗೌ, ಡಾ. ಹಾಮಾನಾ ಕೂಡಾ ಬರ್ತಾರೆ. ಹಾಮಾನಾ ವಿಜ್ಞಾನದ ಕಮ್ಮಟಗಳನ್ನ ಕನ್ನಡದಲ್ಲಿ ನಡೆಸೋರು- ಪಠ್ಯಪುಸ್ತಕಗಳನ್ನು ಬರೆಯೋದು ಹೇಗೆ ಅಂತ. ಎರಡು ಕಮ್ಮಟಗಳಿಗೆ ನಾನು ಹೋಗಿದ್ದೆ. 10-10 ದಿವಸಗಳ ಕಮ್ಮಟ. ಕಾರಂತರು, ಎಎನ್‌ ಮೂರ್ತಿರಾಯರು, ಕುವೆಂಪು ಎಲ್ಲರೂ ಭಾಷಣ ಮಾಡ್ತಿದ್ರು. ಆ 10 ದಿವಸಗಳಲ್ಲಿ ನಾವು ವಿಜ್ಞಾನದಲ್ಲಿ ಸಾಸೋದು ಎಷ್ಟೆಲ್ಲಾ ಇದೆ ಅನಿಸಿತು.
ಕನ್ನಡದ ಪ್ರಾಚೀನ ಕಾವ್ಯಗಳಲ್ಲಿ ವಿಜ್ಞಾನಕ್ಕೆ ಬಳಸುವ ಪದಗಳಿವೆ. ಅವುಗಳನ್ನು ಆರಿಸಿಕೊಂಡು ನಾವು ಬಳಸಬೇಕು. `ಕಿಣ್ವನ' ಅಂತ ಒಂದು ವೈದ್ಯಕೀಯ ಪದವಿದೆ. ಕಿಣ್ವ ಅಂದರೆ ಎನ್‌ಜೈಮ್‌. ಅದಕ್ಕೆ `ನ' ಸೇರಿಸಿದರೆ ಒಂದು ಪ್ರಕ್ರಿಯೆ ಆಯ್ತು. ಹಾಗೇ ಬ್ಲೀಚಿಂಗ್‌ ಪೌಡರ್‌- ಬಿಳುಚುಪುಡಿ ಎರಡೂ ಹತ್ತಿರವಿದೆ. ಹಾಗೆಯೇ ಸಾರಿಗೆ ಪದ. ಕೆಲವನ್ನು ಹಾಗಾಗೇ ಬಳಸೋದು ಸೂಕ್ತ. ಕೃತಕ ಅನುವಾದ ಬೇಕಿಲ್ಲ.

ಆ ಕಾಲದಲ್ಲಿ ಉತ್ಸಾಹದಲ್ಲಿ ಕುವೆಂಪು, ಜವರೇಗೌಡ, ಹಾಮಾನಾ ಪಠ್ಯಪುಸ್ತಕಗಳನ್ನು ಕನ್ನಡದಲ್ಲಿ ಬರೀಬೇಕು ಅಂತ ಕೆಲವು ಬೋಧಕರಿಗೆ, ತಜ್ಞರಿಗೆ ಕೊಟ್ರು. ಅವರೆಲ್ಲ ಆತುರಾತುರವಾಗಿ ಬರೆದದ್ದು ಇವತ್ತೂ ಇವೆ. ಅವು ಬರೀ ಕೃತಕ. ಇಂಗ್ಲಿಷ್‌ನಲ್ಲಿ ಅರ್ಥವಾಗಿದ್ದು ಕನ್ನಡದಲ್ಲಿ ಅರ್ಥವಾಗೊಲ್ಲ. ತುಂಬಾ ಗೊಂದಲ. ಇದು ಯಾಕೆ ಆಯ್ತೆಂದರೆ ಅವರೆಲ್ಲ ಇಂಗ್ಲಿಷ್‌ನಲ್ಲಿ ಆಲೋಚನೆ ಮಾಡಿ ಕನ್ನಡದಲ್ಲಿ ಬರೆದರು. ಕನ್ನಡದಲ್ಲೇ ಗ್ರಹಿಸಿ-ಕಾರಂತರ ಥರ- ಬರೆದರೆ ಆತ್ಮೀಯವಾಗಿರುತ್ತೆ. ಇಂಗ್ಲಿಷ್‌ನಲ್ಲಿ ಆಲೋಚನೆ ಮಾಡಿ ಬರೆದ್ರೆ ಕೃತಕವಾಗುತ್ತೆ. ಏನೋ ಸದುದ್ದೇಶದಿಂದ ಅವರು ಶುರು ಮಾಡಿದ್ದು ಬರ್ತಾ ಬರ್ತಾ ಕೀರ್ತಿ, ಹಣ ಸಂಪಾದನೆಯತ್ತ ಹೊರಳಿತು. ಇವತ್ತು ಹಾಗಿಲ್ಲ. ಕೆಲವರು ಒಳ್ಳೆಯವರು ಬರೀತಿದ್ದಾರೆ; ಜಿ.ಟಿ.ನಾರಾಯಣರಾವ್‌, ಜಿ.ಆರ್‌.ಲಕ್ಷ್ಮಣರಾವ್‌, ನಾಗೇಶ ಹೆಗಡೆ, ಎಚ್‌.ಆರ್‌. ಕೃಷ್ಣಮೂರ್ತಿ, ಟಿ.ಆರ್‌. ಅನಂತರಾಮು, ತೇಜಸ್ವಿ, ಸಿ.ಆರ್‌. ಜಂದ್ರಶೇಖರ್‌, ಸ.ಜ.ನಾ., ಬಿಜಿಎಲ್‌ ಸ್ವಾಮಿ.... (ಯಾರಾದ್ದಾದರೂ ಹೆಸರು ಬಿಟ್ಟು ಹೋಗಿದ್ದರೆ ಕ್ಷಮಿಸಬೇಕು) ಇವೆಲ್ಲ ಪಾಪ್ಯುಲರ್‌ ಸೈನ್ಸ್‌ ಥರ ಬರ್ತಿವೆ. ಅಂದರೆ ಸಾಮಾನ್ಯರಿಗೆ ಅರ್ಥವಾಗುವಂಥ ಪುಸ್ತಕಗಳಾಗಿ. ಆದ್ರೆ ಪಠ್ಯಪುಸ್ತಕ್ಕಾಗುವ ಶಾಸ್ತ್ರೀಯತೆ ಅವುಗಳಿಗೆ ಕಡಿಮೆ. ಆದರೂ ಎಲ್ಲೋ ಈ ಕೆಲಸ ಆಗ್ತಿದೆ.

ಸುಮಾರು 20 ವರ್ಷಗಳವರೆಗಿನ ಪಾರಿಭಾಷಿಕ ಪದಗಳ ಕೊರತೆ ಈಗ ನೀಗಿದೆ-ಡಿಗ್ರಿವರೆಗೆ ಸರಾಗವಾಗಿ ಪಾಠ ಮಾಡಬಹುದು. ಆನಂತರ ಸ್ವಲ್ಪ ಕಷ್ಟ. ವೈದ್ಯಕೀಯ, ತಂತ್ರಜ್ಞಾನ, ಹೊಸದಾಗಿ ಸೇರಿಕೊಂಡ ಐಟಿಬಿಟಿ ಇವಕ್ಕೆಲ್ಲ ಕಷ್ಟವಾಗುತ್ತಿದೆ. ಅವಕ್ಕೆಲ್ಲ ಪಾರಿಭಾಷಿಕ ಪದಗಳು ಸಿದ್ಧವಾಗಲು ಇನ್ನೂ ಕಾಲ ಹಿಡಿಯುತ್ತೆ.

ಇಂಗ್ಲಿಷ್‌ ಪದಗಳು ಅಲ್ಲಿ ಇಲ್ಲಿ ಬಂದರೆ ತಪ್ಪಿಲ್ಲ. ಆದರೆ ಅಗತ್ಯ ಇದ್ದಲ್ಲಿ ಮಾತ್ರ ಬಳಸಬೇಕು. ಪ್ರತಿಷ್ಠೆ ತೋರಿಸಲು ಬಳಸಬಾರದು. ಪಾರಿಭಾಷಿಕ ಪದಗಳ ಸಮೃದ್ಧಿ ಕನ್ನಡದಲ್ಲಿ ಸಾಕಷ್ಟಿದೆ. ಅಭಾವದ ಅರಿವು ತಪ್ಪು. ಒಳ್ಳೆಯದನ್ನು ಇರೋದನ್ನು ಹೊರತೆಗೆಯಬೇಕು. ಶಾಸ್ತ್ರೀಯವಾಗಿ ಪಠ್ಯಪುಸ್ತಕದಲ್ಲಿ ಸೇರಿಸಿ ಸುಲಭ ಭಾಷೆಯಲ್ಲಿ ಜನರಿಗೆ ಅರ್ಥವಾಗುವ ಹಾಗೆ ಹೇಳಬೇಕು. ಸೈನ್ಸ್‌ನಲ್ಲಿ ಬಣ್ಣನೆ ಬೇಕಾಗಿಲ್ಲ. ವಾಸ್ತವ ಎಷ್ಟೋ ಅಷ್ಟು ಮಾತ್ರ ಹೇಳಬೇಕು. ಪಾರಿಭಾಷಿಕ ಪದಗಳಲ್ಲೂ ಸಮಾನತೆ ಇರಬೇಕು. ಇಲ್ಲೂ ಧಾರವಾಡದಲ್ಲೂ ಅಮೆರಿಕದಲ್ಲೂ ಒಂದೇ ಪದ ಬಳಸುವಂತಾಗಬೇಕು. ಕೃತಕ ಅನುವಾದ ಹೇಗಿರುತ್ತೆ ಅಂದರೆ, ಉದಾಹರಣೆಗೆ `ಆಂಟ್‌ ಈಟರ್‌' ಎಂಬ ಶಬ್ದ. ಇದಕ್ಕೆ ಕನ್ನಡದಲ್ಲಿ `ಇರುತಿನಿ' ಅನ್ನಬಹುದು. ಆದರೆ ಅನುವಾದಕ ಅದನ್ನು `ಪಿಪೀಲಿಕಾ ಭಕ್ಷಕ' ಅನ್ನುತ್ತಾನೆ. `ಆರಕ್ಷಕ ಮಹಾ ನಿರೀಕ್ಷಕ ಅಥವಾ ಮಹಾ ಪ್ರಬಂಧಕ' ಯಾಕೆ ಬೇಕು? ಐಜಿ ಅಂದ್ರೆ ಸಾಕು. ಹೈಹೀಲ್ಡ್‌ ಚಪ್ಪಲಿಗೆ `ಎತ್ತು ಹಿಮ್ಮಡಿ ಎಕ್ಕಡ' ಅಂದ್ರೆ? ಬ್ಯಾಟ್‌ಗೆ ದಾಂಡು ಸರಿ. ಆದರೆ ಬ್ಯಾಟ್ಸ್‌ಮನ್‌ಗೆ ದಾಂಡಿಗ ಸರಿಯಲ್ಲ. ದಾಂಡಿಗ ಅಂದರೆ ಕೊಬ್ಬಿದವನು ಅಂತರ್ಥ. ಹಾಗೇ ವಿಕೆಟ್‌ಗೆ ಗೂಟ, ವಿಕೆಟ್‌ ಕೀಪರ್‌ಗೆ ಗೂಟರಕ್ಷಕ... ಥೂ! ಕೆಟ್ಟ ಅನುವಾದಗಳಿವು. ಇಂಗ್ಲಿಷ್‌ನಲ್ಲಿ ಶೇ. 75ರಷ್ಟು ಅನ್ಯ ಭಾಷಾ ಪದಗಳಿವೆ. ಮೂಲ ಇಂಗ್ಲಿಷ್‌ ಪದಗಳಿರುವುದು ಶೇ. 20-25ರಷ್ಟು ಮಾತ್ರ. ಉಳಿದೆಲ್ಲವೂ ಇಂಡಿಯಾ, ಮಲೆಯಾ ಮುಂತಾದವುಗಳಿಂದ ಸ್ವೀಕರಿಸಿದಂಥವು. ಪಾರ್ಸಿ , ಉರ್ದು, ಅರೆಬಿಕ್‌ನ ಎಷ್ಟೋ ಪದಗಳು ನಮ್ಮ ಪದಗಳ ಹಾಗೆ ಇಲ್ಲಿ ಸೇರಿಕೊಂಡಿವೆ. ಹೀಗೆ ಬೇರೆ ಭಾಷೆಯ ಪದಗಳು ಸರಳ, ಉಚ್ಚಾರಣೆಗೆ ಸುಲಲಿತವಾಗಿದ್ದರೆ, ಕಲ್ಪನೆಯನ್ನು ಸರಿಯಾಗಿ ಪ್ರತಿಬಿಂಬಿಸುವಂತಿದ್ದರೆ, ಸತ್ಯಕ್ಕೆ ಹತ್ತಿರವಾಗಿದ್ದರೆ ಖಂಡಿತ ಸ್ವೀಕರಿಸಬಹುದು.

ವಿಜ್ಞಾನದಲ್ಲಿ ಬೇಸಿಕ್ಸ್‌ ಸರಳವಾಗಿ ಹೇಳಬಹುದು. ಜಿಯಾಲಜಿ ಅಧ್ಯಾಪಕನಾಗಿ 35 ವರ್ಷ ಪಾಠ ಮಾಡಿದ್ದೀನಿ. ಡಿಗ್ರಿ ಕ್ಲಾಸ್‌ನಲ್ಲಿ ಬರೀ ಇಂಗ್ಲಿಷ್‌ನಲ್ಲೇ ಪಾಠ ಮಾಡ್ತಿದ್ದೆ. ಒಮ್ಮೆ ಪಾಠ ಮಾಡಿದ ನಂತರ 10 ನಿಮಿಷ ಕನ್ನಡದಲ್ಲಿ ನನ್ನದೇ ಆದ ರೀತಿಯಲ್ಲಿ ಉಪಮೆ, ರೂಪಕಗಳ ಜೊತೆ ಹೇಳಿದರೆ ಹೇಗೆ ಎಂಬ ಯೋಚನೆ ಬಂತು. ಹಾಗೆ ಮಾಡಿದಾಗ ಮಕ್ಕಳು ಏನು ಆನಂದ ಪಟ್ಟವು, ಏನ್‌ ಕಳೆ ಅವರ ಮುಖದಲ್ಲಿ! ಇಂಗ್ಲಿಷ್‌ನಲ್ಲಿ ಹೇಳಿದ್ರೆ ಹರಳೆಣ್ಣೆ ತಿಂದವರ ಥರ ಕೂತಿರ್ತಾರೆ. ಏಕೆಂದರೆ ಇಂಗ್ಲಿಷ್‌ನಲ್ಲಿ ಹೇಳುವಾಗ ನಾನು ನನ್ನ ಪದ ಸಂಪತ್ತನ್ನು ಪ್ರದರ್ಶಿಸಲು ಶುರು ಮಾಡ್ತೀನಿ. ದೊಡ್ಡ ದೊಡ್ಡ ೇಂಡಾ ಮೃಗ, ಆನೆಯಂಥ ಪದಗಳನ್ನು ಬಳಸ್ತೀನಿ. ನನಗೆ ಬರುತ್ತೆ, ನಾನು ಕಲಿತಿದ್ದೇನೆ ಅಂತ ತೋರಿಸ್ಕೋಬೇಕಲ್ಲ! ಇದಕ್ಕೆ ಪೂರಕವಾಗಿ ನಮ್ಮ ಪ್ರೊಫೆಸರ್‌ಗಳು ತಯಾರಿಸಿದ ನೋಟ್ಸ್‌ ಕೂಡ ಓಬೀರಾಯನ ಕಾಲದವು. ನಮ್ಮ ಪಠ್ಯಪುಸ್ತಕಗಳ ರೀತಿ ಬದಲಾಗಬೇಕು. ಇಂದು ಶುದ್ಧ ವಿಜ್ಞಾನಕ್ಕೆ ಪ್ರಾಶಸ್ತ್ಯವಿಲ್ಲ. ಆನ್ವಯಿಕ ವಿಜ್ಞಾನದ್ದೇ ಮೇಲುಗೈ. ಇದರ ಬೋಧನೆಗೆ ಬಹಳ ದೊಡ್ಡ ಪದ ಶಕ್ತಿ, ಭಾಷೆ ಬೇಕಾಗುತ್ತೆ. ನಮ್ಮ ಯುವ ಪೀಳಿಗೆ ಬುದ್ಧಿವಂತ ಪೀಳಿಗೆ. ಅವರು ಇದನ್ನು ಖಂಡಿತ ಮಾಡುತ್ತಾರೆ. ಯಾವುದೇ ಭಾಷೆ ಸತ್ವ ಕಳೆದುಕೊಂಡು ಸಾಯೊಲ್ಲ. ಜನಸಾಮಾನ್ಯರು ಬಳಸುವುದನ್ನು ನಿಲ್ಲಿಸಿದಾಗಲಷ್ಟೇ ನಿರ್ನಾಮ. ಬಾಹ್ಯ ಒತ್ತಡದಿಂದ ಅದೆಲ್ಲ ಸಾಧ್ಯವಿಲ್ಲ. ವಿಜ್ಞಾನಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಕಲೆಗಳು ಇತ್ಯಾದಿಗಳಿಗೆ ಒತ್ತು ಕಡಿಮೆ ಮಾಡಿದ್ರೂ ಬೇಕಾದ್ದು ವಿಜ್ಞಾನದ ಮುನ್ನಡೆ.

ಕನ್ನಡ ಕಲಿಯುವುದು ಮತ್ತು ಕಲಿಸುವುದು ಈಗ ರಾಜಕೀಯ ವಿಷಯವೇ ಆಗಿಬಿಟ್ಟಿದೆ. ಭಾಷೆಯನ್ನು ಮಕ್ಕಳು ಯಾವ ಹಂತದಿಂದ ಮಕ್ಕಳು ಕಲಿಯಬಹುದು? ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ಕಲಿಯುವುದು ತಪ್ಪೇ?

-ನಾನು ಗೋಕಾಕ್‌ ಚಳವಳಿಗೂ ಮುಂಚಿನಿಂದಲೂ ಹೇಳಿಕೊಂಡು ಬಂದಿದ್ದೇನೆ- ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕರ್ನಾಟಕದಲ್ಲಿ ಕಲಿಕೆಯ ಮಾಧ್ಯಮ ಕನ್ನಡವೇ ಆಗಬೇಕು. ಭಾಷೆಯಾಗಿ ಇಂಗ್ಲಿಷ್‌ ಕಲಿಯುವುದು ಈಗ ಅನಿವಾರ್ಯ. ಇಂಗ್ಲಿಷ್‌ ಕಲಿಯದವನು ಕತ್ತಲೆಯಲ್ಲಿ ಕೊಳೀತಾ ಸಾಯುತ್ತಾನೆ. ಹಾಗಾಗಿ ಒಳ್ಳೆಯ ಇಂಗ್ಲಿಷ್‌ ಕಲಿಯಬೇಕು. `ಗೋ ಯಾರ್‌, ಕಮ್‌ ಯಾರ್‌'ನಂಥ ಕಾನ್ವೆಂಟ್‌ ಇಂಗ್ಲಿಷ್‌ ಅಲ್ಲ. ಶುದ್ಧವಾದ, ನಿಮ್ಮ ಭಾವನೆಗಳನ್ನು ಸಮರ್ಪಕವಾಗಿ ಅಭಿವ್ಯಕ್ತಿಗೊಳಿಸುವ ಇಂಗ್ಲಿಷ್‌ ಕಲಿಯಿರಿ. ನನಗನ್ನಿಸುವುದು- ಕನ್ನಡ ಎಲ್ಲ ಹಂತಗಳಲ್ಲಿ ಮಾಧ್ಯಮವಾಗಿ ಇರಬೇಕು. ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ಕಲಿಯಲೇಬೇಕು. ಯಾವ ತರಗತಿಯಿಂದ ಎಂಬುದು ಮುಖ್ಯವಲ್ಲ.

ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು. ಆದರೆ ನಮ್ಮ ಹಳ್ಳಿಗಳಲ್ಲಿ ಬಡವರ ಮಕ್ಕಳು ಬರೀ ಕನ್ನಡ ಕಲಿತು ಕೀಳರಿಮೆಯಿಂದ ಸತ್ತರೆ, ಬೆಂಗಳೂರಲ್ಲಿ ಪ್ರತಿಷ್ಠಿತರ ಮಕ್ಕಳೆಲ್ಲ ಇಂಗ್ಲಿಷ್‌ ಕಲಿತು ಬೆಳೀತಾ ಹೋಗ್ತಾರೆ. ಇದೆಂಥಾ ಪ್ರಜಾಪ್ರಭುತ್ವ? ಇದನ್ನು ಹೇಳಿದ್ರೆ ಕನ್ನಡಾಭಿಮಾನವಿಲ್ಲ ಅಂತ ಬೊಬ್ಬೆ ಹೊಡೆಯುತ್ತಾರೆ. ಹಾಗಾದ್ರೆ ದಲಿತರು, ರೈತಾಪಿ, ಬಡಬಗ್ಗರ ಮಕ್ಕಳೆಲ್ಲ ನಮ್ಮವರಲ್ವ? ಅವರಿಗೆಲ್ಲ ಒಳ್ಳೆ ಶಾಲೆ, ಮೇಷ್ಟ್ರು ಇಲ್ಲ. ಜಗತ್ತಿನಲ್ಲೇ ದೊಡ್ಡ ಪ್ರಜಾತಂತ್ರ ನಮ್ಮದು. ಎಲ್ಲಿದೆ ಸಮಾನತೆ? ಬರೀ ಅಸಮಾನತೆ. ಹಾಗಾದ್ರೆ ಒಂದೇ ರೀತಿಯ ಶಿಕ್ಷಣ ಬೇಡ್ವ? ಇಲ್ಲಿ ಕಾನ್ವೆಂಟ್‌ನಲ್ಲಿ ಇಂಗ್ಲಿಷ್‌, ಅಲ್ಲಿ ಬಡ ಮಕ್ಕಳು ಕನ್ನಡ ಕಲಿಯೋದು. ಅಲ್ಲೂ ಎರಡು ಸ್ತರೀಕರಣ. ಉಳ್ಳವರು ತಮ್ಮ ಮಕ್ಕಳನ್ನು ಕಾನ್ವೆಂಟ್‌ಗೆ ಕಳಿಸ್ತಾರೆ, ಬಡವರ ಮಕ್ಕಳು ಕನ್ನಡದಲ್ಲೇ ಕಲಿತು ಸಾಯಬೇಕು. ಹಾಗೊಂದು ವೇಳೆ ಅವರು ಇಂಗ್ಲಿಷ್‌ ಕಲಿತರೂ ಹರಕು ಮುರುಕು. ಯಾಕೆಂದ್ರೆ ಒಳ್ಳೆಯ ಇಂಗ್ಲಿಷ್‌ ಬರೋ ಮೇಷ್ಟ್ರುಗಳು ಅವರಿಗಿರೊಲ್ಲ, ಇಲ್ಲಿ ಥರ ಸೌಲಭ್ಯಗಳಿರೊಲ್ಲ.

ನಾವೆಲ್ಲ ಹೈಸ್ಕೂಲ್‌ವರೆಗೂ ಮಣೆಗಳ ಮೇಲೆ ಕೂತುಕೊಂಡು ಕನ್ನಡ ಮಾಧ್ಯಮದಲ್ಲೇ ಕಲಿತಿದ್ವಿ. ಅದೂ ಇಂಗ್ಲಿಷರು ರಾಜ್ಯಭಾರ ಮಾಡ್ತಿರುವಾಗ! ಈಗ ನಮ್ಮವರು ರಾಜ್ಯಭಾರ ಮಾಡುವಾಗ ಬರೀ ಇಂಗ್ಲಿಷ್‌ ಶಾಲೆಗಳು! ಅಷ್ಟೇ ಅಲ್ಲ, ನಾಚಿಕೆಗೇಡಿನ ವಿಷಯವೆಂದರೆ, ಇಂಗ್ಲಿಷ್‌ ಆಡಳಿತವಿರುವಾಗ 3-4 ಕನ್ನಡ ದಿನಪತ್ರಿಕೆಗಳಿದ್ದವು, ಒಂದೇ ಒಂದು ಇಂಗ್ಲಿಷ್‌ ಪತ್ರಿಕೆ ಇತ್ತು. ಇವತ್ತು ಇಂಗ್ಲಿಷ್‌ನಲ್ಲಿ 6-7 ಪತ್ರಿಕೆಗಳು ರಾಜಧಾನಿಯಿಂದ ಹೊರಡುತ್ತಿವೆ. ಬೀದಿಯ 25 ಮನೆಗಳಲ್ಲಿ 10 ಇಂಗ್ಲಿಷ್‌ ಪತ್ರಿಕೆ, ಒಂದು ಕನ್ನಡ ಪತ್ರಿಕೆ ತರಿಸ್ತಾರೆ. ಇದು ನಮ್ಮ ಕನ್ನಡಾಭಿಮಾನ! ಹಾಗಾಗಿ ಕರ್ನಾಟಕದಲ್ಲಿ ಕಲಿಕೆಯ ಮಾಧ್ಯಮವೊಂದೇ ಅಲ್ಲ, ಆಡಳಿತ, ನ್ಯಾಯಾಂಗ, ಶಿಕ್ಷಣ- ಈ ಮೂರರಲ್ಲೂ ಕನ್ನಡ ಪ್ರಾಶಸ್ತ್ಯ ಪಡೆಯಬೇಕು ಅಂತ ನಾನು ಹೇಳುತ್ತೇನೆ. ಇಂಗ್ಲಿಷನ್ನೂ ಕೂಡ ಜೊತೆ ಜೊತೆಯಾಗಿಯೇ ಕಲಿಯಬೇಕು. ಇಲ್ಲವಾದ್ರೆ ಅಂತಾರಾಷ್ಟ್ರೀಯವಾಗಿ ನಾವು ಹಿಂದುಳಿಯುತ್ತೇವೆ. ಇವತ್ತು ಜ್ಞಾನ ಅಡಕವಾಗ್ತಿರೋದು ಇಂಗ್ಲಿಷ್‌ನಲ್ಲಿ. ಪ್ರತಿಯೊಂದಕ್ಕೂ ಕನ್ನಡದಲ್ಲಿ ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯ ಬರುವವರೆಗೂ ಇಂಗ್ಲಿಷ್‌ನಲ್ಲಿ ಅದನ್ನು ಪಡೆಯಬೇಕು. ಅದು ಬಿಟ್ಟು ಭಾಷೆ ಬೇಡ, ಕನ್ನಡದಲ್ಲಿ ಕಲಿಸಿ ಅನ್ನೋದು ದೊಡ್ಡ ಅಪರಾಧ, ಅನ್ಯಾಯ. ಭಾಷೆಯಾಗಿ ಯಾವುದನ್ನಾದರೂ ಕಲಿಯಬಹುದು. ಆದರೆ ಅದಕ್ಕೂ ಮೊದಲು ಸಮಾಜದ ಸ್ತರೀಕರಣ ಹೋಗಬೇಕು, ಅಷ್ಟೆ.

ಅಂದ್ರೆ ಕಾಮನ್‌ ಸ್ಕೂಲ್‌ ಪ್ರಸ್ತಾಪವನ್ನು ನೀವು ಒಪ್ತೀರಿ?

-ಹೌದು. ಕಡ್ಡಾಯವಾಗಿ ಇಂಗ್ಲಿಷ್‌ ಕಾನ್ವೆಂಟ್‌ ನಡೆಸುವವರು ಕಡ್ಡಾಯವಾಗಿ ಕನ್ನಡವನ್ನು ಪ್ರಾಥಮಿಕ ಶಾಲೆಯಿಂದಲೇ ಕಲಿಸಬೇಕು. ಇಂಗ್ಲಿಷ್‌ ಶಾಲೆ ಎಂದು ಯಾರು ಅನುಮತಿ ಪಡೆದಿರ್ತಾರೋ ಅವರೂ ಕನ್ನಡ ಕಲಿಸಬೇಕು. ಇಲ್ಲಿರೋವರೆಗೂ ಕನ್ನಡ ಕಲಿಸಬೇಕು. ಬರೀ ಕನ್ನಡ ಶಾಲೆಗಳಲ್ಲಿ ಕಡ್ಡಾಯ ಮಾಡೋದಲ್ಲ. ಇಂಗ್ಲಿಷ್‌ ಸ್ಕೂಲ್‌ನಲ್ಲಿ ಕಡ್ಡಾಯ ತರಬೇಕು. ಆಗ ಈ ಅಸಮತೋಲನ ಸರಿಯಾಗುತ್ತೆ. ಅಮೆರಿಕದಲ್ಲಿ ಒಂದು ಅನುಕೂಲ ಇದೆ. ಅಲ್ಲಿ ಆರ್ಥಿಕ ಸ್ತರೀಕರಣ ಹೆಚ್ಚಿಲ್ಲ. ಜೊತೆಗೆ ಸಮೃದ್ಧಿ ಇದೆ. ನಮ್ಮದು ಬಡ ದೇಶ, ಜೊತೆಗೆ ಸಿಕ್ಕಾಪಟ್ಟೆ ಜನಸಂಖ್ಯೆ.

ಕನ್ನಡ ಜನತೆಗೆ ನಿಮ್ಮ ಸಂದೇಶ?

-ಕನ್ನಡದ ಜನ ಎಲ್ಲಿದ್ರೂ ಸಂಪನ್ನರಾಗಿ ಬದುಕಬೇಕು, ನೆಮ್ಮದಿ ಸಿಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸ್ವಾಭಿಮಾನಿಗಳಾಗಿ ಎಲ್ಲರಿಗಿಂತ ಮೇಲು ಎನಿಸಿಕೊಳ್ಳಬೇಕು. ಕನ್ನಡಿಗರು ಸೋಮಾರಿಗಳು ಅನ್ನೋ ಪದ ತೆಗೆದುಹಾಕಬೇಕು. ಇಲ್ಲಿರೋದೆಲ್ಲ ಕೀಳು, ಬೇರೆ ರಾಜ್ಯಗಳಲ್ಲಿರೋದೆಲ್ಲ ಮೇಲು ಅನ್ನೋ ದರಿದ್ರ ಗುಣವನ್ನು ಬಿಡಬೇಕು. ಇಲ್ಲಿರೋ ಕೆಟ್ಟದ್ದನ್ನಷ್ಟೇ ಹೇಳಬಾರದು, ಒಳ್ಳೆಯದರ ಬಗ್ಗೆಯೂ ಹೇಳಬೇಕು. ಜನಸಾಮಾನ್ಯರು ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಂಡು ನಮ್ಮ ಹಿರಿಮೆ, ಪರಂಪರೆಯನ್ನು ಬೆಳೆಸಬೇಕು. ಬೇರೆಯವರ ಜೊತೆ ಬೀಗಿ ಬಿಗುಮಾನದಿಂದ ನಡೆಯಬೇಕು.

ಕೆ.ಎಸ್. ನಿಸಾರ್ ಅಹಮದ್ ಅವರ ಸಂದರ್ಶನದ ಪಾಡ್ ಕ್ಯಾಸ್ಟ್ ನ ಬರೆಹ ರೂಪ. ಬರೆಹ ರೂಪದ ಸಂದರ್ಶನದ ಜಾಯಮಾನಕ್ಕೆ ತಕ್ಕಂತೆ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ.