ಗಣೇಶ ಪಂಚರತ್ನ

ಗಣೇಶ ಪಂಚರತ್ನ

ಸಂಸ್ಕೃತ-ಕನ್ನಡ ಉಭಯಭಾಷಾ ಕೋವಿದರಾದ ನನ್ನ ಅಜ್ಜ ಬೀರೂರು ಚಿದಂಬರ ಜೋಯಿಸರು ವನಸುಮದಂತೆ ಬಾಳಿ-ಬದುಕಿದವರು. ಕಾಶೀಪಂಡಿತಸಭಾದಿಂದ "ಸಂಸ್ಕೃತಕವಿಕಂಠೀರವ" ಎಂಬ ಬಿರುದನ್ನೂ, ಕರ್ನಾಟಕ ಸರ್ಕಾರ-ಗಾಂಧೀ ಸ್ಮಾರಕ ನಿಧಿಯ ವತಿಯಿಂದ ಸುವರ್ಣ ಪದಕವನ್ನೂ ಗಳಿಸಿದ್ದ ಅಜ್ಜನ ಲೇಖನಿಯಿಂದ ಹಲವಾರು ಅತ್ಯುತ್ತಮ ಕೀರ್ತನೆ,ಭಜನೆ,ಕಾವ್ಯಗಳು ಹೊರಹೊಮ್ಮಿವೆ. ಇವರ ಆಯ್ದ ಭಜನೆ-ಕೀರ್ತನೆಗಳ ಸಂಕಲನವಾದ "ಭಜನಮಣಿಮಾಲಾ" ಈಗಾಗಲೇ ನಾಲ್ಕು ಮುದ್ರಣಗಳನ್ನು ಕಂಡಿದೆ. ಇದರಿಂದ ಆಯ್ದ ಗಣಪತಿಯನ್ನು ಸ್ತುತಿಸುವ ಕೀರ್ತನೆ "ಗಣೇಶ ಪಂಚರತ್ನ"ವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಸಂಪೂರ್ಣ "ಗಣೇಶ ಅಥರ್ವಶೀರ್ಷ"ದ ಸಾರವನ್ನು ಈ ಭಜನೆಯ ಐದು ಚರಣಗಳಲ್ಲಿ ಕಾಣಬಹುದಾಗಿದೆ.

ಗಣೇಶ ಪಂಚರತ್ನ
ರಾಗ - ಸಿಂಧು ಭೈರವಿ

ಏಕದಂತ ವಕ್ರತುಂಡ ವಿಘ್ನರಾಜನೇ|
ಮೊದಲು ನಿನ್ನ ಭಜಿಸಿದವಗೆ ಕಾರ್ಯಸಾಧನೆ||   ||ಪ||

ಶ್ರುತಿಯು 'ತತ್ವಮಸಿ'ಯು ನೀನೆ ನೀನೆ ಕರ್ತೃವೂ|
ನೀನೆ ಲೋಕಸಂರಕ್ಷಕ ನೀನೆ ಸಂಹಾರಕ||
ನೀನು ನಿತ್ಯನಾತ್ಮ ನೀನು ನೀನೆ ಬ್ರಹ್ಮವೂ|
ಜ್ಞಾನಮಯನು ನೀನೆ ದೇವ ನೀನೆ ಚಿನ್ಮಯ       ||೧||

ಭೂಮಿ ನೀನು ಜಲವು ನೀನು ನೀನೆ ಅಗ್ನಿ ವಾಯುವೂ|
ಅಂತರಿಕ್ಷವೆಲ್ಲ ನೀನೆ ವೇದರೂಪನೂ||
ಮೂರುಗುಣವ ಮೀರಿದವನು ಮೂರುದೇಹವಿಲ್ಲದವನು|
ಕಾಲಮೂರ ದಾಟಿದವನು ಶಕ್ತಿರೂಪನೂ          ||೨||

ಬ್ರಹ್ಮ ನೀನು ವಿಷ್ಣು ನೀನು ನೀನೆ ರುದ್ರನೂ|
ಇಂದ್ರನಗ್ನಿವಾಯು ನೀನೆ ಚಂದ್ರ ಸೂರ್ಯರೂ||
ಪಾಶಾಂಕುಶಧಾರಿದೇವ ವರದಾಭಯ ಹಸ್ತನೇ|
ಇಲಿಯನೇರಿ ಮೆರೆವ ದೊರೆಯೆ ಮೂಷಕಧ್ವಜ     ||೩||

ಲಂಬೋದರ ರಕ್ತವಸನ ಶೂರ್ಪಕರ್ಣನೇ|
ರಕ್ತಗಂಧಲಿಪ್ತದೇಹ ರಕ್ತಕುಸುಮ ಪೂಜಿತ||
ವ್ರಾತಪತಿಯೆ ಪ್ರಮಥಪತಿಯೆ ನಮಿಪೆ ಗಣಪತಿ|
ನುತಿಪೆ ಶಿವನ ಸುತನೆ ನಿನ್ನ ವರದಮೂರ್ತಿಯೇ   ||೪||

ನಿನ್ನ ನಾಮ ಪಠಿಸಲವಗೆ ವಿಘ್ನವಿಲ್ಲವೋ|
ನಿನ್ನ ಹಾಸ್ಯಗೈದ ಶಶಿಗೆ ಕ್ಷಯವು ಬಂದುದೂ||
ನಮಿಸೆ ನಿನ್ನ ಸಿದ್ಧಿ ಬುದ್ಧಿ ತಾನೆ ದೊರೆವುದೂ|
ಅದುವೆ ನೀ ಚಿದಂಬರೇಶ ಮನದೊಳಿರುವುದೂ   ||೫||

                                        - ಬೀರೂರು ಚಿದಂಬರ ಜೋಯಿಸ್

Rating
No votes yet