ಲೋಕಾಯುಕ್ತರ ರಾಜಿನಾಮೆ ಕುರಿತು ಆರ್.ಎಸ್.ಎಸ್ ಜವಾಬ್ದಾರಿ ಏನು?

ಲೋಕಾಯುಕ್ತರ ರಾಜಿನಾಮೆ ಕುರಿತು ಆರ್.ಎಸ್.ಎಸ್ ಜವಾಬ್ದಾರಿ ಏನು?

ಒಬ್ಬ ಸಜ್ಜನಿಕೆಯ, ಪ್ರಬುದ್ದ ಹಿರಿಯ ನ್ಯಾಯವಾದಿ ಶ್ರೀ. ಸಂತೋಶ್ ಹೆಗ್ದೆ ತಮ್ಮ ಲೋಕಾಯುಕ್ತ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಯಾಕೆಂದು ನಾವೆಲ್ಲರೂ ತಿಳಿದಿದ್ದೇವೆ. ಇದಕ್ಕೆ ಸರ್ಕಾರ ಪ್ರತಿಕ್ರಿಸುವುದು ಸುಲಭದ ಮಾತಲ್ಲ. ಆದರೆ ಅವರು ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ಕೆಲದಿನಗಳಲ್ಲಿ ಈ ಸುದ್ದಿಯ ಬಿಸಿ ಅಡಗಲಿದೆ ಎಂಬ ಮನೋಭಾವದಲ್ಲಿ ಜಾರಿಕೊಳ್ಳುವ ತಂತ್ರ ಹೂಡುತ್ತಿದ್ದಾರೆ. ಎಲ್ಲರಿಗೆ ಗೊತ್ತಿರುವಂತೆ ಈ ಸರ್ಕಾರ ಯಾವತ್ತೋ ತನ್ನ ನೈತಿಕತೆಯನ್ನು ಕಳೆದುಕೊಂಡಿದೆ. ಆ ನಂತರವೂ ಚುನಾವಣೆಗಳಲ್ಲಿ ಜಯಗಳಿಸಿದೆ. ನಮ್ಮ ಜನರಿಗೆ ಬೇಗ ಮರೆವು ಬರುವುದು ಮತ್ತು ಪರ್ಯಾಯ ರಾಜಕೀಯ ಪಕ್ಷಗಳನ್ನು ಕಂಡುಕೊಳ್ಳಲು ಸಿಗದಿರುವುದು ಈ ಸ್ಥಿತಿಗೆ ಕಾರಣ. ಆದರೆ ನಮ್ಮ ಕಾನೂನುವ್ಯವಸ್ಥೆಯೂ ಬಹಳ ಲೋಪಗಳಿಂದ ಕೂಡಿರುವುದರಿಂದ ತಪ್ಪಿನಿಂದ ತಪ್ಪಿಸಿಕೊಳ್ಳುವುದೂ ಸುಲಭವಿದ್ದು ಮತ್ತೆ ಹಲ್ಲುಕಿರಿದುಕೊಂಡು ಜನರೆದುರು ತಲೆಬಾಗಿ ಬಂದೊಡನೆ ನಾವು ಕರಗಿ ಅವರಿಗೆ ಹಾರೈಸುವುದೂ ಮತ್ತು ಅವರ ಎಲ್ಲ ನೀಚತನಗಳನ್ನೂ ಕ್ಷಮಿಸಿಬಿಡುವುದೂ ರೂಡಿಯಾಗಿಬಿಟ್ಟಿದೆ.

 

ಈಗ ಈ ನೀಚ ಸಂತತಿ ಎಷ್ಟು ವ್ಯಾಪಕವಾಗಿಬಿಟ್ಟಿದೆ ಎಂದರೆ ಸಣ್ನ ಸಣ್ಣ ಊರುಗಳಲ್ಲೂ ಪ್ರಾಕೃತಿಕ ಸಂಪತ್ತನ್ನು ಲೂಟಿಮಾಡುವ ರಾಜಕೀಯ ಶಕ್ತಿಯನ್ನು ಪಡೆದ ಪಡೆಗಳು ತಲೆಯೆತ್ತಿವೆ. ನಮ್ಮ ಭೂಮಿ ಇನ್ನು ತಮ್ಮ ತಲೆಮಾರಿಗೆ ಮಾತ್ರ ಇದ್ದರೆ ಸಾಕು ಎಂಬ ಧ್ಯೇಯವನ್ನೂ ಹೊಂದಿವೆ.

 

ಯಡಿಯೂರಪ್ಪ ಸರ್ಕಾರವನ್ನು ಹಗಲಿರಳೂ ಶ್ರಮಿಸಿ ಕಟ್ಟಿದವರು ಆರ್.ಎಸ್.ಎಸ್. ನ ಕಾರ್ಯಕರ್ತರು. ಒಂದು ಜೋಳಿಗೆಯನ್ನು ನೇತುಹಾಕಿಕೊಂಡು ಸರಳವಾಗಿ ಬದುಕುತ್ತಾ ಭಾರತದ ಪರಂಪರೆಯನ್ನು ಉಳಿಸಬೇಕೆಂದು ಕನಸುಕಂಡು ಜನರಿಗೆ ಹತ್ತಿರವಾದವರು. ನಾನೂ ಚಿಕ್ಕವನಿದಾಗ ಅವರ ಶಾಖೆಗಳಿಗೆ ಹೋಗಿ "ಸಂಘ್ಹ್-ಧಕ್ಷ" ಎಂದು ಎದೆಯಮೇಲೆ ಅಡ್ಡಲಾಗಿ ಅಂಗೈಯನ್ನು ಇಟ್ಟುಕೊಂಡು ಭಗವದ್ವಜಕ್ಕೆ ವಂದಿಸಿದವನು. ಈ ಸಂಘಟನೆಯಲ್ಲಿರುವ ಮುಸ್ಲಿಂಮರ ಬಗೆಗಿನ ಅನುಮಾನ- ಸಿಟ್ಟನ್ನು ಕಥೆಗಳಮೂಲಕವೂ ಕೇಳಿದವನು. ದೊಗಲೆ ಚಟ್ಟಿಯನ್ನು ಧರಿಸಲು ಇಷ್ಟಪಡದೇ ಅಲ್ಲಿಗೆ ಹೋಗಲು ಇಚ್ಚಿಸದವನು.ನನ್ನಂಥವರು ಬಿಟ್ಟರೂ ಅದು ನಿರಂತರವಾಗಿ ಉಳಿದುಕೊಂಡು ಜನರ ವಿಶ್ವಾಸವನ್ನು ಗಳಿಸಿಕೊಂಡಿದೆ.

 

ಇವರುಗಳ ಹಿಂದುತ್ವದ ಬಗೆಗಿನ ಮಹದಾಸೆ ನನಗೆ ಅರ್ಥವಾಗುತ್ತದೆ. ನಾನೂ ಅವರಂತೆ ನಮ್ಮ ಹಿಂದಿನದ್ದನ್ನು ಇಷ್ಟಪಡುವವನಾದರೂ ಮುಂದಿನದೂ ಬೆಳೆಯುತ್ತದೆ ಎಂದು ಅರಿಯುವವನು. ಅಂದರೆ ಮನುಕುಲ ನಿರಂತರವಾಗಿ ಅರಿಯುತ್ತಾ, ಹುಡುಕುತ್ತಾ ಈ ವಿಸ್ಮಯ ಜಗತ್ತಿನಲ್ಲಿ ಕಲಿಯುತ್ತಿರುತ್ತದೆ ಎಂದು ನಂಬಿರುವ ನಾನು ಅವರು ಹೇಳುವಂತೆ ಎಲ್ಲವೂ ವೇದಕಾಲದಲ್ಲಿತ್ತು ಎಂದು ಒಣ ತರ್ಕ ಮಾಡುವುದಿಲ್ಲ. ಈ ತರ್ಕದ ಹಿಂದೆ ಒಂದು ಮುಗ್ಧತೆ ಇರುವುದರಿಂದ ಮತ್ತು ಎಲ್ಲ ಧರ್ಮಗಳ ಅನುಯಾಯಿಗಳಿಗೂ ಇಂಥದೊಂದು ಮನಸ್ಸು ಇದ್ದೇಇರುವುದರಿಂದ ಇದನ್ನು ಸಿಟ್ಟಿನಿಂದ ನೋಡಬಾರದು.

 

ಈಗ ಆರ್.ಎಸ್ .ಎಸ್. ಬೆವರಿಳಿಸಿ ಒಂದು ಸರ್ಕಾರವನ್ನು ತಂದಿದೆ.  ಆ ಸರ್ಕಾರ ಹೇಗೆ ಕೆಲಸಮಾಡಬೇಕೆಂದು ಹೇಳಲಾಗದಂತೆ ನಿರ್ಭಲವಾಗಿ ಕುಳಿತಿದೆ. ಸಣ್ಣ ತೊರೆಯನ್ನು ಸೃಸ್ಟಿಸಿದ ಈ ಸಂಘಟನೆ ಆ ತೊರೆ ಮಹಾ ನದಿಯಾದಾಗ ಏನೂ ಮಾಡಲಾಗದೆ ಬೆಚ್ಚಿ ಬಿದ್ದಿದೆ. ಈಗ ಜನಾದರಣೆ ಪಡೆದ ಲೋಕಾಯುಕ್ತರ ನಿರ್ಗಮನದ ಕುರಿತು ಅದು ಬಿ.ಜೆ.ಪಿ ಪಕ್ಷವನ್ನು ನಿಭಾಯಿಸಲೇಬೇಕಾಗಿದೆ. ಹಾಗೆ ಮಾಡದೇಹೋದರೆ ಮಧ್ಯಮ ವರ್ಗದ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ದೇಶದ ಮಧ್ಯಮ ವರ್ಗ ಈಗಾಗಲೇ ಒಂದುಕಾಲನ್ನು ಪಾಶ್ಚಾತ್ಯಿಕರಣಕ್ಕೆ ಇಟ್ಟಾಗಿದೆ.

 

ಗಾಂಧೀಜಿಯನ್ನು ಒಪ್ಪದ ಆರ್.ಎಸ್.ಎಸ್ ಈಗೀಗ ಅವರ ಫೋಟೋಗಳನ್ನೂ ತಮ್ಮ ಶಾಖೆಯಲ್ಲಿ ಪ್ರದರ್ಶಿಸುತ್ತಿರುವುದಕ್ಕೆ ಕಾರಣ ಗಾಂಧಿಯ ನಿಜವಾದ ಶಕ್ತಿಯ ಅರಿವಾಗಿರುವುದು ಮತ್ತು ಅನಿವಾರ್ಯವಾಗಿರುವುದು. ಸರ್ಕಾರ ಎಂದು ಕಟ್ಟಿದಮೇಲೆ ಎಲ್ಲ ಜನರನ್ನೂ ಒಟ್ಟಿಗೆ ಕರೆದೊಯ್ಯಲೇ ಬೇಕಾದ ಅನಿವಾರ್ಯತೆ ಮೂಡುವುದರಿಂದ ಈಗ ಗಾಂಧಿ, ಅಂಬೇಡ್ಕರ್ ಅವರಿಗೆ ಬೇಕೇ ಬೇಕಾಗುತ್ತದೆ. ಈ ಗಾಂಧಿಫೋಟೊ ಅವರ ಸಂಘದ ಶಾಖೆಯಲ್ಲಿ ಬರುವ ಹೊತ್ತಿಗೆ ಅಲ್ಲಿ ರಾಜಧಾನಿಯಲ್ಲಿ ಇವರ ಪಕ್ಷದ ಜನ ಮೋಜಿನಲ್ಲಿ, ಲೂಟಿಯಲ್ಲಿ, ಅನೈತಿಕತೆಯಲ್ಲಿ, ಅಧಿಕಾರದಲ್ಲಿ ಉಳಿಯುವ ಕುಟಿಲೋಪಾಯದಲ್ಲಿ ತೊಡಗಿಬಿಟ್ಟಿದ್ದಾರೆ. ಎಂಥ ವ್ಯಂಗ್ಯವಲ್ಲವೇ ಇದು?

 

 ನಿಜವಾದ ಸಂಘದ ಕಾರ್ಯಕರ್ತರು ಸರ್ಕಾರದ ಅನೈತಿಕತೆಯನ್ನು ಒಪ್ಪುತ್ತಾರೆಂದು ನಾನು ನಂಬುವುದಿಲ್ಲ. ಆದರೆ ಅದನ್ನು ವಿರೋಧಿಸುವ ಜವಾಬ್ದಾರಿಯಿಂದ ನುಣಿಚಿಕೊಳ್ಳುವುದು ಅಪರಾಧ ಎಂದು ನಂಬುತ್ತೇನೆ. ನಿಜವಾದ ದೇಶಪ್ರೇಮಿ ಈ ಸರ್ಕಾರದ ಅನಾಚಾರಗಳನ್ನು, ಅದು ಸಮಾಜದ ಮೇಲೆ, ಪ್ರಜಾತಂತ್ರದಮೇಲೆ, ಪ್ರಾಕೃತಿಕ ಸಂಪತ್ತಿನಮೇಲೆ  ಉಂಟುಮಾಡುವ ಆಘಾತಗಳನ್ನು ಹೇಗೆ ಮತ್ತು ಯಾತಕ್ಕಾಗಿ ಸಹಿಸಬಲ್ಲ?

 

ಈ ತರಹದ ಅಧಿಕಾರವನ್ನು ಹೊಂದುವುದರಲ್ಲಿ ಯಾವ ಅರ್ಥವಿದೆ? ಯಾತಕ್ಕಾಗಿ ಅವರಿಗೆ ಈ ಸರ್ಕಾರ ಬೇಕು? ವಿಶ್ವ ಬಂಡವಾಳಹೂಡಿಕೆಯೆಂದು ಇಲ್ಲಿನ ಸಾವಿರಾರು ರೈತರ ಭೂಮಿಯನ್ನು ಕಸಿದುಕೊಳ್ಳುವ ನೀತಿ ಯಾವ ಸುಖಕ್ಕಾಗಿ? ಇವತ್ತಿನ ಪರಿಸರ ಸಮಸ್ಯೆಗಳಿಗೆ , ಪ್ರಾಕೃತಿಕ ಸಂಪತ್ತಿನ ನಿರ್ವಹಣೆಯ ಕುರಿತು ಇವರ ಅಭಿವೃದ್ದಿ ಕಲ್ಪನೆಯಲ್ಲಿ ಯಾವ ಉತ್ತರವಿದೆ?ನಿರಂತರವಾಗಿ ನಡೆಯುತ್ತಿರುವ ಗಣಿಲೂಟಿ ಕುರಿತು ಇವರ ಘರ್ಜನೆ ಎಲ್ಲಿದೆ? ಈಗ ಇವರೆಲ್ಲ ಆ ಗಣಿದೊರೆಗಳ ಸೇವಕರಾಗಬೇಕಾದ ಅನಿವಾರ್ಯತೆಯನ್ನು ಯಾಕೆ ಹೊಂದಿದ್ದಾರೆ?

 

ಉತ್ತರ ಕಾಣದಿದ್ದರೆ ಇದನ್ನು ಬೇಡ ಅನ್ನಲೇಬೇಕಲ್ಲ? ಹಾಗೆ ಹೇಳದಿದ್ದರೆ ದೇಶಪ್ರೇಮಿ ಎಂದು ಕರೆದುಕೊಳ್ಳುತ್ತಾ ಜನರಿಗೆ ವಂಚಿಸುವುದನ್ನಾದರೂ ಬಿಡಬೇಕಲ್ಲ?

 

ನಮ್ಮ ದೇಶದ ಜನ " ನಂಬಿ ಕೆಟ್ಟವು" ಎಂದು ಪರಿತಪಿಸುವುದನ್ನು ಯಾವಾಗ ಬಿಡುತ್ತಾರೊ?

Rating
No votes yet

Comments