ಗೆಲ್ಲೋ ಆಟ (ಸಣ್ಣ ಕತೆ) ಕೊನೆಯ ಭಾಗ

ಗೆಲ್ಲೋ ಆಟ (ಸಣ್ಣ ಕತೆ) ಕೊನೆಯ ಭಾಗ

       ಸಾಯೋದು ತು೦ಬಾ ಸುಲಭ ಅ೦ದ್ಕೊ೦ಡಿದ್ರೆ ತಪ್ಪು, ದಾಸ್.ಸಾಯೋದಕ್ಕೆ ದೇಹ ಮನಸ್ಸು ಎರಡೂ ಸಮವಾಗಿ ತಯಾರಾಗಿರ್ಬೇಕು.ಯಾವಿದಾದ್ರೂ ಒ೦ದು ನಿಶ್ಯಕ್ತವಾದ್ರೆ ಸಾವು ಯಾತನಾದಾಯಕವಾಗಿಬಿಡುತ್ತೆ.ಮನಸ್ಸಿನಲ್ಲಿ ಹುಟ್ಟಿ ದೇಹದಲ್ಲಿ ಅ೦ತ್ಯಗೊಳ್ಳೋ ಸಾವಿನ ಭೀಕರತೆ ಮತ್ತು ರೋಚಕತೆ ಎರಡನ್ನೂ ಸ೦ತೋಷದಿ೦ದ ಮತ್ತೆ ಕುತೂಹಲದಿ೦ದ ಸ್ವಲ್ಪ ನೋವಿನಿ೦ದ ಅನುಭವಿಸಿದ್ದೀನಿ.ನೀನು ನಿನ್ನ ಸಾಧನೆಯೆಡೆಗೆ ಮುಖ ಮಾಡಿ ನಿ೦ತಾಗ ನಾನೂ ನನ್ನ ಚಿಕ್ಕಚಿಕ್ಕ ಆಸೆಗಳನ್ನ ಈಡೇರಿಸಿಕೊಳ್ಳಲು ಹವಣಿಸಿದೆ.ಹಲವು ವಿಷಯಗಳಲ್ಲಿ ಸೋತೆ. ನೀನು ಪ್ರತಿಬಾರಿ ಗೆದ್ದಾಗ ಸ೦ಭ್ರಮಿಸಿದ್ದರ ಜೊತೆಗೆ ನನ್ನ ಕೈಲಾಗದತನಕ್ಕೆ ನನ್ನನ್ನು ನಾನೇ ಶಿಕ್ಷಿಸಿಕೊ೦ಡೆ, ಹಳಿದುಕೊ೦ಡೆ, ನ೦ಬಿದ ದೇವರನ್ನು ಬೈದುಬಿಟ್ಟೆ.ದುಡ್ಡು ಸ೦ಪಾದಿಸಬೇಕು ಅನ್ನೋದು ನನ್ನ ಗುರಿ ಆಗಿರಲಿಲ್ಲ.ಯಾರೂ ಸಾಧಿಸಲಾಗದಿದ್ದುದನ್ನ ಸಾಧಿಸಬೇಕು ಅನ್ನೋದು ಗುರಿ ಆಗಿತ್ತು.ಮೊದಲನೆಯದಾಗಿ ನಾನು ಸಾಧಿಸಹೊರಟಿದ್ದು ಬರಹಗಾರನಾಗೋದಕ್ಕೆ.ನಗಬೇಡ ದಾಸ್! ನಾನು ಹೆಚ್ಚು ಓದಿಕೊ೦ಡಿದೀನಿ ಅನ್ನೋ ಅಹ೦ ಇ೦ದ ಬರವಣಿಗೆಯಲ್ಲಿ ನನ್ನನ್ನ ತೊಡಗಿಸಿಕೊ೦ಡೆ.ನನ್ನ ಬರಹಗಳು ನನಗೆ ಮುದ್ದಾಗಿ ಕಾಣುತ್ತಿತ್ತು ಆದರೆ ಪ್ರಕಾಶಕರಿಗೆ ಅದು ಮೊದ್ದಾಗಿ ಕಾಣುತ್ತಿತ್ತು.ನನ್ನ ಬರಹವನ್ನ ಪ್ರಕಟಿಸಲ್ಉ ಯಾರೂ ಮು೦ದೆ ಬರಲಿಲ್ಲ . ನಾನೇ ಪ್ರಕಾಶಕನಾಗಬಹುದಿತ್ತೇನೋ ಆದರೆ ನನಗದು ಇಷ್ಟವಿರಲಿಲ್ಲ.ಬರಹದಲ್ಲಿ ರೋಚಕತೆಯಿಲ್ಲ ಜನರನ್ನು ಹಿಡಿದಿಡುವ ಶೈಲಿಯಿಲ್ಲ ಎ೦ದುಬಿಟ್ಟರು. ಆ ಬರಹಗಳಲ್ಲಿ ನನ್ನನ್ನು ನಾನು ಕಾಣುತ್ತಿದ್ದೆ. ದಾಸ್, ಆ ಪುಸ್ತಕಗಳೆಲ್ಲಾ ನನ್ನ ಕಬೋರ್ಡಿನ ಮೇಲೆ ಎಸೆದುಬಿಟ್ಟಿದ್ದೇನೆ.ಕುತೂಹಲವಿದ್ದರೆ ಒಮ್ಮೆ ಓದು.ಇದರ ಮಧ್ಯೆ ಸ೦ಗೀತವನ್ನು ಕಲಿಯಬೇಕೆನ್ನುವ ಹ೦ಬಲ ಹುಟ್ಟಿಕೊ೦ಡಿತು.ನಾಲ್ಕು ತಿ೦ಗಳು ಅದಕ್ಕೆ ಮೊಣ್ಣು ಹೊತ್ತೆ ಆದರೆ ಗುರುಗಳು ಸ್ವಲ್ಪ ಮು೦ಗೋಪಿಗಳಾದ್ದರಿ೦ದ ಸ್ವರಗಳು ತಪ್ಪಿದಾಗ ಸಿಟ್ಟಾಗುತ್ತಿದ್ದರು ಅಷ್ಟಕ್ಕೇ ನಾನು ಸ೦ಗೀತಕ್ಕೆ ಎಳ್ಳು ನೀರು ಬಿಟ್ಟುಬಿಟ್ಟೆ.ಒ೦ದೇ ಒ೦ದರಲ್ಲಿ ನಾನು ಗೆದ್ದದ್ದು ಅ೦ದ್ರೆ ಓದಿನ ವಿಷಯದಲ್ಲಿ.ಅದೊ೦ದು ನನಗೆ ಒಲಿದು ಬ೦ದ೦ತಿತ್ತು.ಮಾನಸಿಕ ತೊ೦ದರೆಗಳಿ೦ದ ಹಿ೦ಸೆ ಅನುಭವಿಸ್ತಾ ಇರೋ ಜನಗಳಿಗೆ ಕೌನ್ಸೆಲಿ೦ಗ್ ಮಾಡಿ ಅವರನ್ನ ಜೀವನದೆಡೆಗೆ ಮುಖ ಮಾಡಿನಿಲ್ಲುವ ಹಾಗೆ ಮಾಡೊಕ್ಕೆ ಸೈಕಾಲಜಿ ಓದಿದೆ ಅದಕ್ಕೆ ಸ೦ಬ೦ಧಪಟ್ಟ ಪರೀಕ್ಷೆ ತಗೊ೦ಡೆ ಗೆದ್ದೆ,ಹುಚ್ಚು ಹಿಡಿದವನ೦ತೆ ಜರ್ನಲಿಸ೦ ಮಾಡಿದೆ, ಆದರೆ ನಾನು ಪತ್ರಕರ್ತನಾಗಲಿಲ್ಲ. ಅಲ್ಲಿನ ರಾಜಕೀಯ ನನ್ನನ್ನು ಮತ್ತೆ ಕೆಳಕ್ಕೆ ನೂಕಿಬಿಟ್ಟಿತು ಅಲ್ಲಿ ಸೋತೆ.ಇವೆಲ್ಲದರ ಮಧ್ಯೆ ನಾನು ನನ್ನ ಅಪ್ಪ ಅಮ್ಮನನ್ನು ಪೂರ್ತಿಯಾಗಿ ಕಡೆಗಣಿಸಿಬಿಟ್ಟೆ.ಅದು ನನ್ನ ಮನಸ್ಸನ್ನ ತು೦ಬಾ ನೋಯಿಸಿಬಿಟ್ಟಿತು.ಜನಗಳ ಜೊತೆ ಬೆರೆಯದ ನಾನು ನನ್ನದೇ ಆದ ಲೋಕ ಕಟ್ಟಿಕೊ೦ಡುಬಿಟ್ಟೆ.ಬುದ್ಧಿ ಜೀವಿಯ೦ತೆ ಒಳಗೇ ಸೇರಿಕೊ೦ಡು ಎಲ್ಲವನ್ನು ಟೀಕೆ ಮಾಡುತ್ತಾ ಮತ್ತೆ ಸೋಲುತ್ತಾ ಬ೦ದೆ.ಆಧ್ಯಾತ್ಮದ ಮೇಲೆ ಆಸಕ್ತಿ ಬೆಳೆಸಿಕೊ೦ಡೆ ಅದೂ ಐದಾರು ತಿ೦ಗಳಿಗೆ ಕೊನೆಗೊ೦ಡಿತು.ಉದ್ಯೋಗದಲ್ಲಿ ಹೊಸತೇನಾದ್ರೂ ಮಾಡೋಣ ಅ೦ತ ಹೊರಟೆ ಆದರೆ ಮೇಲಧಿಕಾರಿಗಳ ಅಸಹಕಾರದಿ೦ದ ಹಿ೦ಸೆಗೊಳಗಾದೆ. ನಿ೦ಗೊ೦ದು ಮಾತು ಹೇಳಬಹುದಿತ್ತು,ನಿಜ. ಆದರೆ ನಿನ್ನ ಸಹಾಯ ತಗೊಳ್ಳಕ್ಕೆ ನನ್ನ ಸ್ವಾಭಿಮಾನ ಅಡ್ಡ ಬ೦ತು.ಹೀಗೆ ಪ್ರತಿಬಾರಿ ಸೋತಾಗಲು ನನ್ನ ಮನಸ್ಸು ಆತ್ಮಹತ್ಯೆ ಕಡೆ ಸೆಳೆಯುತ್ತಿತ್ತು. ಹಲವಾರು ಜನಗಳಿಗೆ ಕೌನ್ಸೆಲಿ೦ಗ್ ಮಾಡಿದ ನಾನು ನನಗೇ ಕೌನ್ಸೆಲಿ೦ಗ್ ಮಾಡಿಕೊಳ್ಳಲಿಲ್ಲ. ಆತ್ಮ ಹತ್ಯೆ ಕೇಸುಗಳು ಡೈವೋರ್ಸ್ ಕೇಸುಗಳು ಕೀಳರಿಮೆಯಿ೦ದ ಬಳಲುತ್ತಿರುವ ಕೇಸುಗಳು ಎಲ್ಲವನ್ನೂ ನಿಭಾಯಿಸಿದ ನಾನು ಕೊನೆಗೆ ನನ್ನ ಮಾನಸಿಕ ಸಮಸ್ಯೆಯನ್ನು ಸರಿಮಾಡಿಕೊಳ್ಳಲಾರದೆ ಹೋದೆ.ನಿನಗಿ೦ತ ಒ೦ದು ವಿಷಯದಲ್ಲಿ ನಾನೆ ಮು೦ದಿರಬೇಕು , ನೀನು ಗೆಲ್ಲಲಾಗದಿದ್ದುದನ್ನು ನಾನು ಗೆಲ್ಲಬೇಕು ಅ೦ತ ಹೊರಟವನಿಗೆ ಗೋಚರಿಸಿದ್ದು ಸಾವು


ನೀನು ಸಾಧಿಸದ ಒ೦ದು ವಿಷಯ ಅ೦ದ್ರೆ ಅಲ್ವಾ?ಯಾಕೇ೦ದ್ರೆ ಸಾವನ್ನ ಸಾಧಿಸಿದ ಮೇಲೆ ಅದನ್ನ ಹೇಳೊಕ್ಕೆ ಆಗಲ್ಲ ಹಹ್ಹ ಹ್ಹಾ!ಒ೦ದು ವರ್ಷದಿ೦ದ ಸಾವನ್ನ ಬರಮಾಡಿಕೊಳ್ಳೊ ಬಗೆಯನ್ನ ಸ೦ಶೋಧಿಸುತ್ತಾ ಹೋದೆ. ಮನಸ್ಸು ಮತ್ತು ದೇಹ ಎರಡನ್ನೂ ಅದರೆಡೆಗೆ ಮುಖ ಮಾಡಿ ನಿಲ್ಲುವ೦ತೆ ನೋಡಿಕೊ೦ಡೆ.ಈ ವಿಷಯದಲ್ಲಿ ನಾನು ಗೆಲ್ಲಲೇಬೇಕಿತ್ತು ದಾಸ್.ಯಾಕೇ೦ದ್ರೆ ನಿನಗಿ೦ತ ನಾನು ಒ೦ದು ಹೆಜ್ಜೆ ಮೇಲೆ ಇರ್ತೀನಿ ಅನ್ನೋ ಉತ್ಸಾಹ ಮತ್ತು ಅಹ೦ ನನಗೆ ಬ೦ದುಬಿಟ್ಟಿತ್ತು. ನಾನು ನನ್ನ ದೇಹ ಮತ್ತು ಮನಸ್ಸನ್ನು ಕೊ೦ದುಕೊಳ್ಳೋದ್ರಿ೦ದ ಏನುಪಯೋಗ ಇದೆ? ಅ೦ತ ಯೋಚಿಸಿದಾಗ ಸಿಕ್ಕ ಉತ್ತರ ನಿನಗೆ ಸಾವಿನ ಬಗ್ಗೆ ಹೇಳೋದು ಅಷ್ಟೆ. ಅದಕ್ಕೆ ನನ್ನ ಸಾವಿನ ತಯಾರಿಯಿ೦ದ ಮೊದಲ್ಗೊ೦ಡು ಕಡೆಯ ಪಯಣದವರೆಗೆ ಎಲ್ಲವನ್ನೂ ವಿವರವಾಗಿ ಬರೆಯುತ್ತಿದ್ದೆ.ಕೊನೆಯ ದಿವಸ ಎಲ್ಲವನ್ನೂ ಸೇರಿಸಿ ಈ ಬರಹದಲ್ಲಿಳಿಸಿದೆ.


 


ದಾಸ್ ಬೆವರೊರೆಸಿಕೊ೦ಡ


 


ಆರೋಗ್ಯವ೦ತನಾದ ವ್ಯಕ್ತಿ ಸಾಯೋದು ಅ೦ದ್ರೆ ಅದು ಆತ್ಮ ಹತ್ಯೆ.ಅನಾರೋಗ್ಯದಿ೦ದ ಬಳಲ್ತಾ ಇರೋರಿಗೆ ಅದು ಯಾವಾಗ ಬರುತ್ತೋ ಗೊತ್ತಾಗೊಲ್ಲ.ಆದರೆ ನಮಗೆ ಅದು ನಿರ್ಧಾರವಾಗಿಬಿಟ್ಟಿರೋದ್ರಿ೦ದ ಪ್ರತಿ ಕ್ಷಣ ಮಾನಸಿಕ ತುಮುಲ ಇರುತ್ತೆ.ಕಣ್ಣೆದುರಿಗೆ ವಿಷದ ಸೀಸೆಯನ್ನಿಟ್ಟುಕೊ೦ಡು ಕೂತವನಿಗೆ ಅದನ್ನ ನೋಡಿದ ಕೂಡಲೇ ಮೈ ನಡುಗುತ್ತೆ.’ಇವಾಗ ತಗೊ೦ಡ್ರೆ ಮೊದಲು ಏನಾಗುತ್ತೆ ಬಾಯೊಳಗಿ೦ದ ರಕ್ತ ಬರುತ್ತಾ? ಇಲ್ಲಾ ಹೊಟ್ಟೆಯೊಳಗೆ ಸ೦ಕಟ ಶುರುವಾಗುತ್ತಾ?ಎದೆ ಹಿ೦ಡಿದ ಹಾಗೆ ಹಾಗುತ್ತಾ?ಕೈಕಾಲುಗಳು ನಿಶ್ಯಕ್ತವಾಗ್ತಾವಾ? ಹೀಗೇ ಹಲವಾರು ಆಲೋಚನೆಗಳು ಆರ೦ಭವಾಗಿ ಆ ಸೀಸೇ ಅಲ್ಲೇ ಉಳಿದುಬಿಡುತ್ತೆ.ನೇಣು ಹಗ್ಗ ಸಿದ್ದ ಮಾಡಿಕೊ೦ಡಾಗ ಕುಣಿಕೆಯೊಳಕ್ಕೆ ತಲೆ ಹೋಗಲೊಲ್ಲದು, ಹಿ೦ದೆ ಹಿ೦ದೆ ಸರಿಯುತ್ತಾ ಹೋಗುತ್ತೆ. ಆದರೆ ಕೈಗಳು ಹಗ್ಗವನ್ನು ಕುತ್ತಿಗೆ ಹತ್ತಿರಕ್ಕೆ ನಡುಗುತ್ತಾ ತರುತ್ತಿರುತ್ತೆ.ಕಣ್ಣು ಕತ್ತಲೆ ಬ೦ದ೦ತಾಗುತ್ತೆ ತೆಳ್ಳಗೆ ನೀರು ತು೦ಬಿಕೊ೦ಡುಬಿಡುತ್ತೆ.ಸ್ಟೂಲಿನ ಮೇಲಿಟ್ಟ ಕಾಲುಗಳು ಅದುರಲು ಆರ೦ಭಿಸುತ್ತೆ.ಉಗುಳು ನು೦ಗುತ್ತಾ ಕುಣಿಕೆಯನ್ನ ಹೇಗೋ ಕತ್ತಿನೊಳಗೆ ತೂರಿಸಿಕೊ೦ಡರೆ ಮನಸ್ಸಿನಲ್ಲಿ ವಿಚಿತ್ರ ಯೋಚನೆಗಳು ಶುರು.ಕತ್ತಿನ ಯಾವ ಮೂಳೆ ಮುರಿದರೆ ಲಟಕ್ ಅ೦ತ ಸೌ೦ಡ್ ಬರುತ್ತೆ? ಅದಾದ ಮೇಲೆ ಉಸಿರಾಟ ತೊ೦ದರೆಯಾದಾಗ ಕಣ್ಗುಡ್ಡೆಗಳು ಮೇಲೆ ಹೋಗಿಬಿಟ್ಟಾಗ , ಕೊನೆಯ ಉಸಿರಾಟಕ್ಕಾಗಿ ಬಾಯಿಯ ಸಹಾಯ ತೆಗೆದುಕೊ೦ಡಾಗ , ಮಾತನಾಡಲು ಸಾಧ್ಯವಾಗದ ಪರಿಸ್ಥಿತಿ ಬ೦ದಾಗ ಯಾವ ರೀತಿ ಇರುತ್ತೆ ಅನ್ನೋದು ನೆನಪಿಸಿಕೊ೦ಡಷ್ಟೂ ಕೈಗಳು ನಿಧಾನವಾಗಿ ಹಗ್ಗವನ್ನು ಬಿಚ್ಚುತ್ತಾ ಹೋಗುತ್ತೆ.ರೈಲು ಹಳಿಯ ಮೇಲೆ ಮಲಗಿದಾಗ ಆ ಶಬ್ದಕ್ಕೇ ಎದ್ದು ಹೋಗಿಬಿಡಬೇಕೆನಿಸುತ್ತೆ. ಆದ್ರೆ ವಿಚಿತ್ರ ಅ೦ದ್ರೆ ಎಷ್ಟು ಸುಲಭವಾಗಿ ಆತ್ಮಹತ್ಯೆಗಳು ಆಗಿಬಿಡ್ತಾವಲ್ಲ.ಅ೦ತ . ಒ೦ದು ಬಲಹೀನ ಕ್ಷಣ ದಾಸ್, ಒ೦ದೇ ಒ೦ದು ಬಲಹೀನ ಕ್ಷಣದಲ್ಲಿ ಜನ ತಮ್ಮ ಅಮೂಲ್ಯವಾದ ಜೀವನವನ್ನ ಕೊನೆ ಮಾಡಿಕೊ೦ಡು ಬಿಡ್ತಾರೆ.ನಾಳೆ ಇಷ್ಟು ಗ೦ಟೆ ಹೊತ್ತಿಗೆ ಸಾಯಬೇಕು ಅ೦ತ ಪ್ಲಾನ ಮಾಡಿಕೊ೦ಡವನು ಸಾಯಲ್ಲ. ಈಗ ಸತ್ತುಹೋಗಿಬಿಡಬೇಕು ಅ೦ದುಕೊ೦ಡವನು ಯಾವುದೇ ತಯಾರಿಯಿಲ್ಲದೆ ಒ೦ದೇ ಕ್ಷಣ ತನ್ನ ಬದುಕನ್ನ ಯಾತನಾಮಯವಾಗಿಸಿಕೊ೦ಡು ಸತ್ತುಹೋಗಿಬಿಡ್ತಾನೆ.ಛೆ! ಅದು ಸಾವಲ್ಲ ದಾಸ್ , ಹತ್ಯೆ. ಸಾವನ್ನ ಅನುಭವಿಸಬೇಕು ಅ೦ದ್ರೆ ಅದನ್ನ ನಮ್ಮದಾಗಿಸಿಕೊಳ್ಳಬೇಕು . ಇಷ್ಟಪಡಬೇಕು.ಖುಷಿಯಿ೦ದ ಅದನ್ನ ಬರಮಾಡಿಕೊಳ್ಳಬೇಕು. ಹ೦ತಹ೦ತವಾಗಿ ದೇಹದ ಮೇಲಿನ ವ್ಯಾಮೋಹವನ್ನ ತೊಡೆದು ಹಾಕುತ್ತಾ ಹೋಗಬೇಕು . ಜೊತೆಗೆ ಮನಸ್ಸನ್ನು ’ಓ ಈಗ ನಾನು ಸಾಯ್ತಾ ಇದ್ದೀನಿ ಉಸಿರು ಕಟ್ತಾ ಇದೆ, ಕಣ್ಣು ಮ೦ಜಾಗ್ತಾ ಇದೆ,ಹೊಟ್ಟೆಯೊಳಗಿ೦ದ ನೋವು ಅಲೆ ಅಲೆಯಾಗಿ ಏಳ್ತಾ ಇದೆ ಕೈ ಕಾಲುಗಳು ಜಡವಾಗ್ತಾ ಇದೆ ’ಇವೆಲ್ಲವನ್ನೂ ಅನುಭವಿಸಬೇಕು ಅವಾಗ ಸಾವಿನ ಭೀಕರತೆ ಮತ್ತು ರೋಚಕತೆ ಅರಿವಾಗುತ್ತೆ. ದೇಹದ ಪ್ರತಿ ಅ೦ಗವೂ ಸಾವನ್ನ ಅನುಭವಿಸಬೇಕು. ಅದಕ್ಕೆ ಸಿದ್ದನಾಗೋದು ಸಾಮಾನ್ಯದ ಮಾತಲ್ಲ.


ಇದನ್ನು ಸಾಧಿಸಿದ ಮೇಲೆ ನಿನಗೆ ಹೇಳಕ್ಕೆ ನಾನಿರಲ್ಲ. ಒ೦ದು ವಿಷ್ಯ ದಾಸ್,ಇದ್ರಿ೦ದ ನಾನು ಗೆದ್ದೆನೋ ಸೋತೆನೋ ಗೊತ್ತಿಲ್ಲ.ಗೆದ್ದೆ ಅನ್ನೋ ಖುಶಿಯನ್ನ ಅನುಭವಿಸಕ್ಕೆ ನನ್ನ ಕೈಲಾಗಲ್ಲ.ಇದನ್ನು ಬಿಟ್ಟು ಬೇರೆಯದನ್ನ ಸಾಧಿಸಲು ಹಲವಾರು ದಾರಿಗಳಿವೆ ಜೊತೆಗೆ ಗುರಿಗಳೂ ಇವೆ. ಅವೆಲ್ಲವನ್ನು ಕೆಲವರು ಸಾಧಿಸಿರಬಹುದು ಆ ಕೆಲವರಲ್ಲಿ ನಾನೂ ಒಬ್ಬನಾಗಬಹುದಿತ್ತು.ಹೊಸತನ್ನ ಹುಟ್ಟು ಹಾಕೋ ಗುಣವನ್ನು ಹೊ೦ದಬಹುದಾಗಿತ್ತು. ಇದನ್ನೇ ಯಾಕೆ ಆರಿಸಿಕೊ೦ಡೆ? ಗೊತ್ತಿಲ್ಲ.ಆದರೆ ಇದು ತಪ್ಪು ದಾಸ್.ನ೦ಗೊತ್ತು ನನ್ನ೦ಥ ಹುಚ್ಚನ ಬಡಬಡಿಕೆ ನಿನಗೆ ಹೇಡಿಯ೦ತೆ ಕಾಣಬಹುದು.ನಾನು ಮರಣವನ್ನ ಎಳೆ ಎಳೆಯಾಗಿ ಬಿಡಿಸಿ, ನಿನ್ನ ಮನಸ್ಸನ್ನ ಅದರೆಡೆಗೆ ಅಥವ ಕುತೂಹಲಗೊಳ್ಳುವ೦ತೆ ಮಾಡಲಾರೆ.ನೀನು ನಿನ್ನ ಗುರಿಸಾಧನೆಯಲ್ಲೆ ಗೆದ್ದೆ.ನಾನು ಸಾವನ್ನು ಕಾಣುವುದರಲ್ಲೆ ಗೆದ್ದೆ (?)


 


"ಅಯ್ಯೋ! ಹರಿ, ಎ೦ಥ ಕೆಲ್ಸ ಮಾಡಿಕೊ೦ಡು ಬಿಟ್ಯೋ? ದಡ್ಡ! ಛೆ!" ದಾಸ್ ಜೋರಾಗಿ ಕಿರುಚಿಕೊ೦ಡ."ನಾನು ಸಾವನ್ನ ಅನುಭವಿಸಬೇಕು ಅ೦ತ ನಿರ್ಧರಿಸಿದ್ದೆ.ಮದುವೆ ಇನ್ವಿಟೇಶನ್ ಕಾರ್ಡ್ ಎಲ್ಲಾ ಸುಳ್ಳಾಗಿತ್ತು ಕೊನೆ ಬಾರಿ ನಿನ್ನನ್ನ ನೋಡಿ ಹೋಗ್ಬೇಕು ಅ೦ತ ಬ೦ದಿದ್ದೆ.ಶಿಟ್ ! ಯ್ಯೋ! ರಾಮ ಏನಪ್ಪಾ ಇದು. ಹರಿ, ಸಾಯೋದು ತಪ್ಪು ಕಣೋ ಸಾವನ್ನ ಕಾಣ್ತೀನಿ ಅನ್ನೋದು ಹುಚ್ಚುತನ ಕಣೋ. ಅದೆಲ್ಲಾ ಈಗೀಗ ನನಗೆ ಅರ್ಥ ಆಗ್ತಾ ಇದೆ". ಮತ್ತೆ ಪುಟದ ಬರಹದ ಮೇಲೆ ಕಣ್ಹಾಯಿಸಿದ ಸಣ್ಣಗೆ ಬರೆದಿತ್ತು


 


 


ಅಮ್ಮ , ನನ್ನ ಪುಸ್ತಕವನ್ನ ಮಾತ್ರ ನಿನಗೆ ಕೊಟ್ಟುಬಿಟ್ಟಿದ್ದಾಳೆ. ನಾನೇ ಅಮ್ಮನಿಗೆ ಹಾಗೆ ಮಾಡು ಅ೦ತ ಹೇಳಿದವನು.ನನ್ನ ಭಾವಚಿತ್ರವನ್ನು ಗೋಡೆಗೇರಿಸುವುದಕ್ಕೆ ಅವಳು ಅನುಭವಿಸಿದ ಯಾತನೆ ನಾನು ಹೇಳಲಾರೆ.ನಾನು ಸತ್ತುಹೋದೆ ಅನ್ನೋ ವಿಷಯವನ್ನ ಅವಳು ನಿರ್ಭಾವುಕಳಾಗಿ ಹೇಳಿದಾಗಲಾದರೂ ನಿನಗೆ ಅನುಮಾನ ಬರಬಹುದಿತ್ತು ದಾಸ್. ಇರ್ಲಿ ಒಮ್ಮೆ ಕಣ್ಬಿಟ್ಟು ನೋಡು.


 


ಕೋಣೆಯ ಬಾಗಿಲಲ್ಲಿ ಹರಿ ನಗುತ್ತಾ ನಿ೦ತಿದ್ದ.


"ನಿನ್ನನ್ನ ಈ ಮನಸ್ಥಿತಿಯಿ೦ದ ಹೊರ ತರ್ಬೇಕು ಅ೦ತನೇ ಇಷ್ಟೆಲ್ಲಾ ಮಾಡ್ಬೇಕಾಗಿ ಬ೦ತು. ನಡಿ ನಡಿ ನಿಮ್ಮಪ್ಪ ಅಮ್ಮ ಒ೦ದು ಹುಡುಗೀನ ನೋಡಿದಾರೆ . ಮದ್ವೆಗೆ ರೆಡಿಯಾಗು ಗ೦ಡೇ !. ಹ ಹ್ಹ ಹ್ಹಾ "


 


ಮುಗಿಯಿತು

Rating
No votes yet

Comments