ಕನ್ನಡಮ್ಮನ ಭೂಲೋಕ ಭೇಟಿ - ಭಾಗ ಎರಡು (೨) ಮತ್ತು ಮೂರು (೩)
(....ಭಾಗ ೧ ರಿಂದ ಮುಂದುವರೆದಿದೆ...)
ಸ್ಥಳ 2: ಕನ್ನಡ ವಿಶ್ವವಿದ್ಯಾಲಯದ ಆವರಣ:
-------------------------------------------------------------------------------------------------------
(ಒಬ್ಬ ವ್ಯಕ್ತಿ ಕೈಯಲ್ಲೇನೋ ಹಿಡಿದು ನಡೆದು ಬರುತ್ತಿದ್ದಾನೆ. ಇನ್ನೊಬ್ಬ ಅವನನ್ನು ಕಂಡು ಮಾತನಾಡಿಸಲು ಕೂಗುತ್ತಾನೆ)
ಎರಡನೇ ವ್ಯಕ್ತಿ (ಎ.ವ್ಯ): ಏನ್ ಮಗಾ, ಯಾವ್ ಕಡೆ ಬೀಟ್ಸು? ಅದೇನದು ಕೈಲಿ?
ಮೊದಲ ವ್ಯಕ್ತಿ (ಮೊ.ವ್ಯ): ಕನ್ನಡ ರಾಜ್ಯೋತ್ಸವ ಬಂತಲ್ಲ, ಅದರ ಆಹ್ವಾನ ಪತ್ರಿಕೆ. ಹಂಚೋಕೆ ಅಂತ ಹೊರಟೆ. ನೀನೂ ಬಾರೋ ಜೊತೆಗೆ.
ಎ.ವ್ಯ: ಏನು? ಹಾಹ್ವಾನ ಪತ್ರಿಕೇನಾ? ಅದೇನಮ್ಮಾ ಅದೂ ಹೊಸಾ ಟರ್ಮು?
ಮೊ.ವ್ಯ: ಲೇ, "ಹಾಹ್ವಾನ" ಅಲ್ಲ ಕಣೋ. ಆಹ್ವಾನ ಪತ್ರಿಕೆ. ಅಂದರೆ "ಇನ್ವಿಟೇಶನ್" ಅಂತ.
ಎ.ವ್ಯ: ಹಯ್ಯೋ ರಾಮ! ಇನ್ವಿಟೇಶನ್ನು ಅಂತ ಮೊದಲೇ ಸಿಂಪಲ್ಲಾಗಿ ಕನ್ನಡದಲ್ಲಿ ಹೇಳಬಾರದಾಗಿತ್ತಾ!!
ಮೊ.ವ್ಯ: ಏನಂದೆ? ಇನ್ವಿಟೇಶನ್ನು ಕನ್ನಡ ಪದಾನ? ಏನೋ ಇದು?...
ಎ.ವ್ಯ: (ಅರ್ಧಕ್ಕೇ ತಡೆದು) ಬಿಡು ಗುರೂ, ನನ್ನ ಪಾಲಿಗೆ ಇನ್ವಿಟೇಶನ್ನು ಕನ್ನಡ ಪದಾನೇ. ಅದೇನೋ ಹೇಳಿದ್ಯಲ್ಲ ಹಾಹ್ವಾನ ಪತ್ರಿಕೆ ಅಂತ, ಹದಕ್ಕಿಂತ ಇದು ವಾಸಿ ಅಲ್ವಾ? ಹೋಗ್ಲಿ ಬಾ, ಅದೇನೋ ರಾಜ್ಯೋಸ್ತವ ಅಂದ್ಯಲ್ಲ, ನಂದೂ ಸ್ವಲ್ಪ ಸೇವೆ ಆಗೇ ಬಿಡ್ಲಿ.
ಮೊ.ವ್ಯ: ಸ್ವಲ್ಪ ಸರಿಯಾಗಿ ಹೇಳೋ. "ರಾಜ್ಯೋತ್ಸವ" ಅಂತ, ಕೆಡಿಸಬೇಡ.
ಎ.ವ್ಯ: ಶುರು ಆಯ್ತು ನಿನ್ನ ಕ್ಲಾಸು. ಅದೇನೋ ಒಂದು ಉಸ್ತವ. ಹಾಳಾಗಿ ಹೋಗ್ಲಿ ಬಿಡು. ನಂಗೂ ನಿಂಗೂ ಮಧ್ಯ ಫಿಟ್ಟಿಂಗ್ ಯಾಕೆ?
(ತಬ್ಬಿಬ್ಬಾದ ಕನ್ನಡಮ್ಮ ಅಲ್ಲಿಂದ ಮಾಯ! ಹಾಗೇ ನಡೆಯುತ್ತಾ ನಡೆಯುತ್ತಾ ಯಾವುದೋ ಒಂದು ಶಾಲೆಯ ಫಲಕವನ್ನು ರಸ್ತೆಯಲ್ಲಿ ಕನ್ನಡಮ್ಮ ನೋಡುತ್ತಾಳೆ. ಆಕೆಯ ಮನದಲ್ಲಿ ಪುನಃ ಆಶೆ ಚಿಗುರುತ್ತದೆ. ಭಾವೀ ಕನ್ನಡ ಪ್ರಜೆಗಳನ್ನು ಕಾಣುವ ಹಂಬಲದಿಂದ ಆ ಶಾಲೆಯತ್ತ ದಾಪುಗಾಲಿಕ್ಕುತ್ತಾಳೆ..)
ಸ್ಥಳ 3: ವಿದ್ಯಾಸಂಸ್ಥೆಯೊಂದರ ಆವರಣ:
---------------------------------------------------------------------------------------------------------
(ಸುಮಾರು ಹದಿನೇಳು ವರ್ಷ ವಯಸ್ಸಿನ ಹುಡುಗರಿಬ್ಬರು ಪರಸ್ಪರ ಮಾತಾಡಿಕೊಳ್ಳುತ್ತಿದ್ದಾರೆ)
ಮೊದಲ ಹುಡುಗ (ಮೊ.ಹು): ವಾಟ್ ಯಾರ್, ಯಾಕೆ ಈ ನವೆಂಬರ್ ಬರುತ್ತೋ. ಬಿಗ್ ಹೆಡ್ಡೇಕ್ ಮಚ್ಚಾ..ದೀಸ್ ಪೀಪಲ್ ಸ್ಟಾರ್ಟ್ ಬಿಹೇವಿಂಗ್ ರಿಡಿಕ್ಯುಲಸ್‌ಲಿ...
ಎರಡನೇ ಹುಡುಗ (ಎ.ಹು): ಯಾ ಯಾ, ಐ ಫುಲ್ಲಿ ಅಗ್ರೀ ವಿತ್ ಯು ಡಾ. ಅದ್ಯಾರೋ ಕುವೆಂಪು, ಕಾರಂತ್ ಅಂತೆ, ಅವರೇನೋ ಅವಾರ್ಡ್ ತಗೊಂಡಿದಾರಂತೆ, ಅದರ ಬಗ್ಗೆ ವಿ ಶುಡ್ ಪ್ರಿಪೇರ್ ಎ ರೈಟಪ್ ಅಂತೆ.....ನೋ ಫ್ರೀಡಂ ಅಟ್ ಆಲ್ ಡಾ..
ಮೊ.ಹು: ರಿಯಲಿ ಮಚ್ಚಾ. ನಾವು ಯಾಕೆ ಇವರ ಬಗ್ಗೆ, ಈ ಕನ್ನಡ ಹೆರಿಟೇಜ್ ಬಗ್ಗೆ ಓದಬೇಕೋ, ಐ ಡೋಂಟ್ ನೋ. ಟೋಟಲಿ ರಬ್ಬಿಶ್! ಏನು ಇವರ ಪೊಯೆಟ್ರಿ, ಈ ಲಿಟರೇಚರ್ ಎಲ್ಲ ನಮ್ಮ ಎಕ್ಸಾಮಲ್ಲಿ ಬರುತ್ತಾ? ಆರ್ ಮುಂದೆ ಲೈಫಲ್ಲಿ ಯೂಸ್ ಆಗುತ್ತ? ಐ ಹ್ಯಾವ್ ಲಾಟ್ ಟು ಸ್ಟಡಿ ಫಾರ್ ಸಿ.ಇ.ಟಿ. ಆಲ್ಸೋ... (ಸ್ವಲ್ಪ ಯೋಚಿಸಿ) ಹೇ, ಒಂದು ಐಡಿಯ, ಎಲ್ಲಾ ಸೇರಿ ಪ್ರೊಟೆಸ್ಟ್ ಮಾಡೋಣ್ವಾ? ವಿ ಡೋಂಟ್ ವಾಂಟ್ ಆಲ್ ದೀಸ್ "ಕನ್ನಡ ಲಿಟರೇಚರ್" ರೆಲೇಟೆಡ್ ಆಕ್ಟಿವಿಟೀಸ್ ಇನ್ ಅವರ್ ಕಾಲೇಜ್ ಅಂತ...
ಎ.ಹು: ಕೂಲ್ ಮ್ಯಾನ್! ಐ ಕಾಂಟ್ ಫೈಂಡ್ ಟೈಮ್ ಟು ರೀಡ್ ಸಿಡ್ನಿ ಶೆಲ್ಡನ್, ರಾಬಿನ್ ಕುಕ್, ಡಾನ್ ಬ್ರೌನ್.....ಕನ್ನಡ ಹೆರಿಟೇಜ್ ಬಗ್ಗೆ ನಾಲೆಡ್ಜ್ ಇರಬೇಕಂತೆ. ನಮ್ಮ "ಓಲ್ಡೀ" ಲೆಕ್ಚರರ್ಸ್ ಇದಾರಲ್ಲ ಅವರೇ ಬೇಕಾದ್ರೆ ಓದ್ಲಿ..
ಸಂಪೂರ್ಣವಾಗಿ ಸುಸ್ತಾದ ಕನ್ನಡಮ್ಮ ಮುಂದೇನು ಗತಿ ಎಂದು ಚಿಂತಿಸುತ್ತಾ ಭೂಲೋಕದಿಂದಲೇ ಮಾಯವಾಗುತ್ತಾಳೆ!