ಸರ್ಕಾರದ ಎರಡು ವರ್ಸದ ಸಾಧನೆ - ಗೌಡರು ತೋಟ ಮಾರಿದ್ದಾರೆ

ಸರ್ಕಾರದ ಎರಡು ವರ್ಸದ ಸಾಧನೆ - ಗೌಡರು ತೋಟ ಮಾರಿದ್ದಾರೆ

ಗಬ್ಬುನಾಥ ಗೌಡಪ್ಪ ಬೆಳಗ್ಗೆನೇ ನಮ್ಮನೆಗೆ ಬಂದು ನೋಡ್ಲಾ ಕೋಮಲ್, ಸರ್ಕಾರದೋರು ಎರಡು ವರ್ಸದ ಸಾಧನೆ ಸಮಾವೇಸ ಮಾಡ್ತಾರಂತೆ. ನಮ್ಮ ಚಿಕ್ಕೇಗೌಡ್ರು ಕಾರ್ಯಕ್ರಮಕ್ಕೆ ಒಂದು 20ಬಸ್ ಜನನ್ನಾ ಕರ್ಕೊಂಡು ಬೆಂಗ್ಳೂರಿಗೆ ಬರಬೇಕು ಅಂತಾ ಏಳವ್ರೆ. ಬಿರ್ರನೆ ರೆಡಿಯಾಗು. ಹಳ್ಳಿ ಜನಕ್ಕೆ ಹೊಂಡ್ಸವಾ ಅಂದ. ಸರಿ ಅಂತಾ ಗೌಡಪ್ಪನ ಬೈಕ್ನಾಗೆ ಮುಖಕ್ಕೆ ಕರ್ಚೀಫ್ ಕಟ್ಕೊಂಡು ಕುಂತೆ.ಅಷ್ಟೊತ್ತಿಗೆ ಸುಬ್ಬನೂ ಬಂದ. ನೀನು ನಮ್ಮ ಕೂಡ್ ಬಾರಲಾ ಅಂದೆ. ಮಗಾ ಓಡು ಬಂದು ಹಾರ್ ಕುಂತ. ಕುಂತ ರಭಸಕ್ಕೆ ಗೌಡಪ್ಪ ಬೈಕ್ ಹ್ಯಾಂಡಲ್ಗೆ ಮುಖನ್ನ ಗುದ್ದಿದ್ದ. ಲೇ ದರ್ಬೇಸಿ ಸುಬ್ಬ, ನಿನಗೆ ಐತಲಾ ಅಂದ ಗೌಡಪ್ಪ. ಇರ್ಲಿ ನಡೀರಿ ಗೌಡ್ರೆ.

ಹಳ್ಯಾಗೆ ಹೊಂಟ್ವಿ. ಅರ್ಧ ತಂಕ ಬೈಕ್ನಾಗೆ ಹೋಗಿ ಸಣ್ಣ ರಸ್ತೆ ಬಂದ್ ಮ್ಯಾಕೆ ನಡ್ಕೊಂಡು ಹೋದ್ವಿ. ಗೌಡಂಗೆ ತ್ರಿಬ್ಸ್ ಹೊಡೆಯಕ್ಕೆ ಬರಕ್ಕಿಲ್ಲಂತೆ. ಎಲ್ರನ್ನೂ ಸಿದ್ದೇಸನ ಗುಡಿ ತಾವ ಸೇರಿಸಿ. ನೋಡ್ರಲಾ ಬೆಳಗ್ಗೆನೇ ಬಸ್ಸುಗಳು ಬತ್ತವೆ. ಎಲ್ಲಾ ರೆಡಿಯಾಗಿರಿ. ಬೆಂಗ್ಳೂರಿಗೆ ಹೋಗವಾ. ಅಂಗೇ ನಿಮಗೆ ಕಬ್ಬನ್ ಪಾರ್ಕ್, ಲಾಲ್ ಬಾಗ್ ತೋರಿಸ್ತೀವಿ ಅಂದ ಗೌಡಪ್ಪ. ಹಿಂದಿಂದ ಯಾವನೋ ಗೌಡ್ರೆ ಅಂಗೇ ಕುಡಿಯೋಕ್ಕೆ ಕಾಸು ಕೊಡಬೇಕು ಅಂದಾ. ಬಾ ಅಂಗೇ ಮದುವೆನೂ ಮಾಡಿಸ್ತೀನಿ. ಬಡ್ಡೆ ಐದ್ನೆ. ನೋಡಲಾ ಕೋಮಲ್, ಉದಯರಂಗ ಬಸ್ಗೆ ಹೇಳೀವ್ನಿ. ಬೆಳಗ್ಗೆ 6ಕ್ಕೆ ಬಂದ್ ಬಿಡ್ತದೆ. ಆಮ್ಯಾಕೆ ವಯಸ್ಸಾದಾರೋನ್ನೆಲ್ಲಾ ಇಸ್ಮಾಯಿಲ್ ಬಸ್ಗೆ ಹತ್ತಿಸ್ ಬಿಡ್ಲಾ. ಸತ್ತರೆ ಸಾಯ್ಲಿ ಮುಂಡೇವು. ಬೆಳಗ್ಗೆನೇ ಹಳ್ಳಿನಾವು ಚೆಡ್ಡಿ ಬನೀನಾಗೆ ಎಲ್ಲಾ ಬಂದ್ವು.

ಕಿಟಕಿ ಸೀಟ್ಗೆ ಹೊಡೆದಾಡೋವು. ಏ ಥೂ ಇದೇನ್ರಲಾ. ಸಣ್ಣ ಐಕ್ಳು ಆಡ್ದಂಗೆ ಆಡ್ತೀರಲ್ಲಾ. ಅಣ್ಣಾ ಈ ಬಡ್ಡೆ ಐದ ಬೆಳಗ್ಗೆ ಹಲ್ಲು ಉಜ್ಜಿಲ್ಲ. ಅಂಗೇ ಬೀಡಿ ವಾಸ್ನೆಗೆ ವಾಂತಿ ಬತ್ತದೆ ಅಂತಾ ಕಿಟಿಕಿ ಕಡೆ ಕುಂತೀವ್ನಿ. ಕುಂತ್ಕಾ. ಎಲ್ಲಾ ಬಸ್ ಹೊಂಟ್ವು. ಇಸ್ಮಾಯಿಲ್ ಬಸ್ ಮಾತ್ರ ಹೊಂಟೇ ಇರಲಿಲ್ಲ. ಭಯ್ಯಾ ನಮ್ದೂಕೆ ಬಸ್ನಾಗೆ ಎಲ್ಲಾ ವಯಸ್ಸಾದೋರು. ಏ ಕ್ಯಾ ಭಯ್ಯಾ. ಲೇ ಇವು ಸತ್ತರೆ ಹಳ್ಯಾಗೆ ಒಂದಿಷ್ಟು ಓಟು ಕಮ್ಮಿ ಆಯ್ತದೆ ಅಷ್ಟೆ. ಬಿರ್ರನೆ ನಡೆಯಲಾ. ಎಲ್ಲಾ ಬಸ್ ಹೋಗಿ ಅರ್ಧಾಗಂಟೆ ಆದ್ಮೇಲೆ ಇಸ್ಮಾಯಿಲ್ ಬಸ್ಸು ಒಂಟಿದ್ದು. ಆದರೆ ಬೆಂಗ್ಳೂರು ತಲುಪಿದ್ದು ಇವನೇ ಮೊದಲೆಯಾ. ಬಡ್ಡೆ ಐದ ಇನ್ನೆಂಗೆ ಹೊಡಿದಿರಬೇಕು. ಕಿಟಕಿ ಕಡೆ ಕುಂತೋರು ಎಲ್ಲಾ ಆಫ್ರಿಕಾದರೋ ತರಾ ಆಗಿ ಹೋಗಿದ್ರು. ಗಾಳಿಗೆ ಕೂದಲೆಲ್ಲಾ ನೆಟ್ಟಗೆ ನಿಂತಿತ್ತು. ಫಾರಿನ್ನೋರು. ತಂಡಿಗೆ ಅಜ್ಜಿಯರೆಲ್ಲಾ ಅಂಗೇ ಫ್ರೀಜ್ ಆಗ್ಬಿಟ್ಟಿದ್ರು.

ಮಧ್ಯ ಅದು ಏನೇನ್ ತಿಂದ್ವೊ ಬೇಂಗ್ಳೂರು ಬರ್ತಿದ್ದಾಗೆನೇ ಆಮ್ಲೆಟ್. ಅಂತೂ ಕಾರ್ಯಕ್ರಮ ತಾವ ಬರ್ತಿದ್ದಾಗನೇ ಗೌಡಪ್ಪ ಎಲ್ಲಾ ಮುಂದು ಹೋಗ್ರಲಾ ಅಂದಾ. ಬೆಳಗ್ಗೆ ಗಡದ್ದಾಗೆ ತಿಂದು ಬಂದಿದ್ವು. ಕುರ್ಚಿಯಾಗೆ ಕೂರ್ತಿದ್ದಾಗೆನೇ ತಲೆ ಮ್ಯಾಕೆ ಟವಲ್ ಹಾಕ್ಕೊಂಡು ಎಲ್ಲಾ ಹೆಣ ಬಿದ್ದಂಗೆ ಬಿದ್ದಿದ್ವು. ಗೊರ್,ಗೊರ್ ಅಂತಾ ಗೊರಕೆ ಬೇರೆಯಾ. ಲೇ ಊಟಕ್ಕೆ ಹೋಗ್ರಲಾ. ಅಂಗೆ ಅಂದಿದ್ದೇ ತಡ. ಚೇರ್ನೆಲ್ಲಾ ಹಾರ್ಕೊಂಡು ಹೋಗಿ ಕ್ಯೂನಾಗೆ ನಿಂತ್ರು. ಪೊಲೀಸ್ನೋರು ಏನೋ ಗಲಾಟೆ ಅಂತಾ ಬಂದ್ರೆ, ಉಣ್ಣಕ್ಕೆ ಓಯ್ತಾದೀವಿ. ಏ ಥೂ, ಚೆಡ್ಡಿ ಬನೀನ್ ಆಕಿದ್ದು ನೋಡಿ ಎಲೆ ತೆಗೆಯೋರು ಅಂದ್ಕೊಂಡಿದ್ರು. ಗೌಡಪ್ಪ ಬಂದು ನಮ್ಮ ಕಾರ್ಯಕರ್ತರು ಅಂದ್ ಮ್ಯಾಕೆ ಕ್ಯೂನಾಗೆ ಬಿಟ್ಟಿದ್ದು. ಚಿತ್ರಾನ್ನ,ಮೊಸರನ್ನ ಹೊಡೆದಿದ್ದೇ ಹೊಡೆದಿದ್ದು. ಡೈರಿ ಮೊಸರು ಕನ್ರಲಾ, ಎರಡು ವಡೆ ಇದ್ದಿದ್ರೆ ಪಸಂದಾಗಿರುತ್ತಿತ್ತು ಅಂತಾ, ಯಾಕ್ರಲಾ ಅಂಗೇ ಚಿಕನ್ ಪೀಸ್ ಇದ್ದಿದ್ರೆ ಇನ್ನೂ ಪಸಂದಾಗಿರೋದು ಅಂದಾ ಗೌಡಪ್ಪ. ಹೂಂ. ಸುಮ್ನೆ ತಿನ್ರಲಾ.ಯಡ್ಯೂರಪ್ಪ ಏನ್ ಕೋಳಿ ಫಾರಂ ಮಡಗಿದಾನೆ.

ಸರಿ ಎಲ್ಲಾ ಕಾರ್ಯಕ್ರಮ ಮುಗೀತು. ಎಲ್ಲಾ ಹೊರಡರಲಾ. ಹೋಗ್ತಾ ಬಸ್ ತುಂಬಿತ್ತು. ಬರೋ ಬೇಕಾದ್ರೆ ಖಾಲಿ. ಯಾಕಲಾ ಕೋಮಲ್. ಗೌಡ್ರೆ ಬಡ್ಡೇ ಹತ್ತೇವು ಬಸ್ ಕನ್ಫ್ಯೂಸ್ ಆಗಿ ಬೇರೆ ಬಸ್ ಹತ್ತಾವೆ. ಅಂಗೇ ಕೆಲವು ಹೊಸಾ ಪಿಚ್ಚರ್ ನೋಡಕ್ಕೆ ಹೋಗಾವೆ ಅಂದೆ. ಮತ್ತೊಂದಿಷ್ಟು ಹೊಟ್ಟೆಗೆ ಬಿಟ್ಕಳಾಕೆ ಹೋಗ್ಯಾವೆ. ಇಸ್ಮಾಯಿಲ್ ಬಸ್ಸನಲ್ಲಿ ಇರೋರನ್ನು ಇಳಿಸಕ್ಕಾ ಬಿಟ್ಟಿರಲಿಲ್ಲ. ಯಾಕೇಂದ್ರೆ ದೇಸದ ಹಿರಿಯ ಪ್ರಜೆಗಳು ಕಳೆದು ಹೋಗ್ಬಿಟ್ರೆ ಅಂತಾ. ಸುಬ್ಬಾ ಎಲ್ಲಲಾ. ಬಡ್ಡೇ ಹೈದ ಪೈಜಾಮ, ಜುಬ್ಬಾ ಆಕ್ಕೊಂಡು ಮಿನಿಸ್ಟರ್ಗಳ ಜೊತೆ ಪೋಟೋ ಹೊಡಸ್ಕಂತಾ ಇದ್ದ. ಯಾಕಲಾ ಸುಬ್ಬ. ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಗೆ ಬೇಕಾಗುತ್ತೆ ಕನ್ಲಾ. ಏ ಥೂ ನಡಿಯಲಾ.

ಎಲ್ಲಾ ಊರಿಗೆ ಬಂದ್ವಿ. ಎಲ್ಲಾವು ಬರದೇ ಇರೋರ ಹತ್ರಾ ಭಾಸಣದ ಬಗ್ಗೆ ಏಳಿದ್ದೇ ಏಳಿದ್ದು. ಏನು ಸಾಧನೆಯಲ್ಲಾ ಸರ್ಕಾರದ್ದು, ಚಿತ್ರಾನ್ನ,ಮೊಸರನ್ನ ಪಸಂದಾಗಿತ್ತು ಕನ್ರಲಾ. ಅಣ್ಣಾ ಉಪ್ಪಿನಕಾಯಿ ಅದೂ ಆಟೆಯಾ. ಏನ್ ಪೆಂಡಾಲ್, ನಮ್ಮೂರನ್ನಾಗೆ ಇರೋರೆಲ್ಲಾ ಅಲ್ಲೇ ಹೋಗಿ ಮದುವೆ ಆಗ್ ಬಹುದಿತ್ತಲಾ. ಸ್ಟೇಜ್ನಾಗೆ ಎಲ್ಲಾ ವೈನಾಗೆ ಕಾಣ್ತಿದ್ರಲಾ. ಅದ್ರಾಗೂ ನಮ್ಮ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೊಸಾ ಟೋಪಿ ಹಾಕ್ಕಂಡ್ ಬಂದಿದ್ದ. ಯಡ್ಯುರಪ್ಪ ಅಂತೂ ಸಮಾಜ ಪಾಠ ಮಾಡ್ದಂಗೆ ಹೇಳಿದ್ದೇ ಹೇಳಿದ್ದು. ಪಾಠ ಎಂಗಿತ್ತು ಅಂದ್ರೆ ನಮ್ಗೆ ನಿದ್ದೆ ಬಂದಿದ್ದೇ ಗೊತ್ತಾಗ್ಲಿಲ್ಲ. ಹಿಂದಗಡೆ ಇದ್ದವೆಲ್ಲಾ ತಲೆಗೆ ತಲೆ ಕೊಟ್ಕೊಂಡು ನಿದ್ದೆ ಹೋಗಿದ್ವಲಾ. ಶೋಭಕ್ಕ ಮಾತ್ರ ಮಾನಸ ಸರೋವರಕ್ಕೆ ಹೋಗಿ ಬಂದಾಗಿನಿಂದ ಬಲೇ ಚುರುಕು ಆಗಿಬಿಟ್ಟೈತೆ.  ಲೇ ಇದು ಸಾಧನೆ ಏನ್ರಲಾ. ಮತ್ತೆ ಇನ್ನೇನ್ ಇಷ್ಟೆ ಕನ್ಲಾ ಇದ್ದದ್ದು.

ರಾತ್ರಿ ಊರಿಗೆ ಗಬ್ಬುನಾಥ ಗೌಡಪ್ಪ ಬಂದ. ಎಲ್ಲಾ ಊರಿಗೆ ಬಂದ್ರೇ ಏನ್ಲಾ. ಹೂಂ. ಬಸ್ ಮಾಡ್ಕಂಡ್ ಬಾ ಅಂದೋನು ಪತ್ತೇನೇ ಇಲ್ಲಾ ಕನ್ಲಾ. ಮತ್ತೆ ಈಗ ಏನ್ ಮಾಡ್ತೀರಿ. ಒಂದು ಎಕರೆ ತೋಟ ಮಾರಿ ದುಡ್ಡು ಸೆಟ್ಲ್ ಮಾಡವಾ ಅಂತಾ. ಅಂಗಾರೆ ಸರ್ಕಾರದ ಎರಡು ವರ್ಸದ ಸಾಧನೆ ಏನಪ್ಪಾ ಅಂದ್ರೆ ನಮ್ಮ ಊರಿನ ಶ್ರೀ ಶ್ರೀ ಶ್ರೀ ಗಬ್ಬನಾಥ ಅಲ್ಲಾ ಹಳಸೋದು ಫಲಾವು ವಾಸ್ನೆಯ ಗೌಡಪ್ಪಂದು ಒಂದು ಎಕರೆ ತೋಟ ಮಾರಿದ್ದು ಅಂತಾ. ಇದೀಗ ಹಳ್ಯಾಗೆ ಇದು ಒಸಾ ಸುದ್ದಿ. ಗುರುವೇ ಸಿದ್ದೇಸ ಗೌಡಪ್ಪನ ನೀನೆ ಕಾಪಾಡಪ್ಪ. 

Rating
No votes yet

Comments