ಸೂತಕ

ಸೂತಕ

ನನ್ನ ಅಮೆರಿಕದ ಯಾತ್ರೆಯನ್ನು ಮುಗಿಸಿಕೊಂಡು ಇಂದು ಬೆಳಿಗ್ಗೆ ಬೆಂಗಳೂರಿಗೆ ಬಂದೆ. ಬಂದಕೂಡಲೆ ನನ್ನ ಮನ ಕಲಕಿದ ಒಂದು ವಿಷಯವನ್ನು ನಿಮ್ಮ ಜೊತೆಯಲ್ಲಿ ಹಂಚಿಕೊಳ್ಳಬೇಕೆನಿಸುತಿದೆ.

ನನ್ನ ಗೆಳೆಯ ಅಮೆರಿಕದ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪೀಡಿತನಾಗಿದ್ದ. ಗುಣವಾಗುವ ಹಂತವನ್ನು ಮೀರಿದ್ದ ಕಾರಣ, ಅಮೆರಿಕವನ್ನು ಬಿಟ್ಟು ಸದಾ ಕಾಲಕ್ಕೆ ಭಾರತಕ್ಕೆ ಹೋಗುವ ತೀರ್ಮಾನವನ್ನು ತೆಗೆದುಕೊಂಡ. ಜೂನ್ ೨೦ಕ್ಕೆ ಭಾರತಕ್ಕೆ ಹೊರಡಲು ಟಿಕೆಟ್ ಮಾಡಿಸಿದ. ತಾನಿದ್ದ ಮನೆಯ ಲೀಸನ್ನು ಜೂನ್ ೧೫ಕ್ಕೆ ಮುಕ್ತಾಯಗೊಳಿಸಿ, ಉಳಿದ ೫ ದಿನಗಳನ್ನು ಗೆಳೆಯನ ಮನೆಯಲ್ಲಿ ಕಳೆಯಲು ನಿರ್ಧರಿಸಿದ.

ಮನುಷ್ಯ ತಾನೊಂದು ಬಗೆದರೆ ವಿಧಿಯು ಮತ್ತೊಂದನ್ನು ಬಗೆಯುತ್ತದೆ. ನನ್ನ ಗೆಳೆಯನಿಗೆ ತೀವ್ರ ಸ್ವರೂಪದ ಹೃದಯಾಘಾತವಾಯಿತು. ತುರ್ತು ನಿಗಾ ಘಟಕಕ್ಕೆ ಸೇರಿಸಿದರು. ಅವನನ್ನು ವೆಂಟಿಲೇಟರಿನ ಮೇಲಿಟ್ಟರು. ನಾಲ್ಕು ವಾರವಾಯಿತು. ಯಾವುದೇ ಉಪಯೋಗವಾಗಲಿಲ್ಲ. ಸುಮಾರು ೧ ಮಿಲಿಯನ್ ಡಾಲರುಗಳ ಹಣ ಖರ್ಚಾಯಿತು (ಆರೋಗ್ಯ ವಿಮೆಯಿದ್ದದರಿಂದ ಬಚಾವು). ವೈದ್ಯರು ’ಇನ್ನು ಬದುಕುವುದಿಲ್ಲ. ವೆಂಟಿಲೇಟರ್ ತೆಗೆಯಲು ಅನುಮತಿ ಕೊಡಿ‘ ಎಂದರು. ಮಡದಿ ಮಕ್ಕಳಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಹಾಗಾಗಿ ನಾನು ಅಲ್ಲಿಗೆ ಹೋಗಿ, ಪರಿಸ್ಥಿತಿಯನ್ನು ವಿಶ್ಲೇಷಿಸಿ, ವೆಂಟಿಲೇಟರಿನಿಂದ ಮುಕ್ತಗೊಳಿಸಲು ಅವರನ್ನು ಒಪ್ಪಿಸಿದೆ. ೧೮ ಗಂಟೆಗಳ ಒಳಗೆ ಗೆಳೆಯ ಮರಣಿಸಿದ.

ಗೆಳೆಯನ ಮರಣದ ಸುದ್ಧಿಯನ್ನು ಹೇಳಿ ನಿಮ್ಮ ಮನಸ್ಸನ್ನು ಕಲಕುವ ಉದ್ದೇಶ ನನಗಿಲ್ಲ. ಆದರೆ ಮುಂದೆ ನಾನು ಹೇಳಬೇಕಾದ ವಿಷಯಕ್ಕೆ ಈ ಹಿನ್ನೆಲೆ ಅಗತ್ಯವಾಗಿತ್ತು.

ನನ್ನ ಗೆಳೆಯನ ಮಡದಿ-ಮಗಳು ಅವರ ಗೆಳೆಯನ ಮನೆಯಲ್ಲಿ ಇದ್ದರಲ್ಲ! ನನ್ನ ಗೆಳೆಯ ಸತ್ತಕೂಡಲೇ ಆತನ ಮಡದಿ-ಮಕ್ಕಳಿರುವ ಮನೆಯು ಸೂತಕದ ಮನೆಯಾಗುತ್ತದೆ. ಸೂತಕ ಕಳೆಯುವವರಿಗೂ ಮನೆಯಲ್ಲಿ ದೇವರ ದೀಪ ಹಚ್ಚುವ ಹಾಗಿಲ್ಲ. ಪೂಜೆ ಪುನಸ್ಕಾರ ಮಾಡುವಂತಿಲ್ಲ. ಹಬ್ಬ ವ್ರತಗಳನ್ನು ಮಾಡುವಂತಿಲ್ಲ. ಹೀಗೆ ಮಾಡಬಾರದು ಎಂಬ ನಂಬಿಕೆ ನಮ್ಮಲ್ಲಿದೆ.

ನನ್ನ ಗೆಳೆಯ ಬದುಕಿದ್ದ ಕ್ಷಣದವರೆಗೆ ಎಲ್ಲವೂ ಸುಗಮವಾಗಿ ಸಾಗಿತ್ತು. ಯಾವಾಗ ಸೂತಕದ ಪ್ರಶ್ನೆ ಎದ್ದಿತೋ, ಆಗ ಆಶ್ರಯ ನೀಡಿದವರ ಮನೆಯಲ್ಲಿದ್ದವರನ್ನು ಸೂತಕದ ಭೀತಿ ತೀವ್ರವಾಗಿ ಕಾಡಿತು. ಅವರೆಲ್ಲ ಓದಿದವರೆ! ವಿದ್ಯಾವಂತರೆ! ಬುದ್ಧಿವಂತರೆ! ಸಿಲಿಕಾನ್ ಕಣಿವೆಯಲ್ಲಿ ಉದ್ಯೋಗದಲ್ಲಿ ಇರುವವರೆ! ಈಗ ನನ್ನ ಗೆಳೆಯನ ಮಡದಿ-ಮಗಳನ್ನು ಹೇಗಾದರೂ ಮನೆಯಿಂದ ಹೊರಗೆ ಕಳುಹಿಸಬೇಕು ಎಂಬುದು ಅವರ ಒಳಮನದ ಇಚ್ಛೆ. ಇದು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರಕಟವಾಯಿತೂ ಕೂಡ!(ಇವರ ಬಗ್ಗೆ ನಾನು ಯಾವುದೇ ರೀತಿಯಲ್ಲಿ ದೂರುತ್ತಿಲ್ಲ. ಇವರು ನನ್ನ ಗೆಳೆಯ ಮಡದಿ ಹಾಗೂ ಮಗಳಿಗೆ ಆಶ್ರಯಧಾತರು. ಮೂರು ಹೊತ್ತು ಊಟೋಪಚಾರವನ್ನು ಮಾಡಿದಂತಹವರು. ಮಾನಸಿಕವಾಗಿ ಆಸರೆಯನ್ನು ನೀಡಿದವರು. ನನಗೂ ಸಹಾ ಅನ್ನಾಶ್ರಯಗಳನ್ನು ನೀಡಿದವರು. ಕಾಣದ ಊರಲ್ಲಿ ವಾರಗಟ್ಟಲೇ ಇಟ್ಟುಕೊಳ್ಳುವುದು, ಇರುವ ಸಮಯದಲ್ಲಿ ಆಸ್ಪತ್ರೆ/ಕಚೇರಿಗಳಿಗೆ ತಮ್ಮ ಕಾರಿನಲ್ಲಿ ಕರೆದೊಯ್ಯುವುದು-ಏಕೆಂದರೆ ಅಮೆರಿಕದಲ್ಲಿ ಕಾರೇ ತಾಯಿ, ಕಾರೇ ತಂದೆ-ಎಲ್ಲವನ್ನೂ ಮಾಡಿದ್ದಾರೆ. ಅವರಿಗೆ ಅನಂತಾನಂತ ಕೃತಜ್ಞತೆಗಳು.)ಅಲ್ಲಿದ್ದ ಇತರ ಅನೇಕ ಜನ ಸೂತಕದ ಭೀತಿಗೆ ಬಲಿಯಾಗಿ, ತಮ್ಮ ವಿವಿಧ ಮುಖಗಳನ್ನು ಪ್ರದರ್ಶಿಸಿದರು. (ಇವರೆಲ್ಲರೂ ಸಹಾ ಅಮೆರಿಕದಂತಹ ಊರಿನಲ್ಲಿ ಅಪಾರ ಸಹಕಾರ-ಧೈರ್ಯವನ್ನು ತುಂಬಿದವರು. ಎಲ್ಲರಿಗೂ ನನ್ನ ಕೃತಜ್ಞತೆಗಳು) ನನ್ನ ಗೆಳೆಯನ ಮಡದಿ-ಮಗಳು ಅಮೆರಿಕದಲ್ಲಿ ಇರುವ ಎಲ್ಲ ಕಾನೂನು ಸಂಬಂಧಿತ ವ್ಯವಹಾರಗಳನ್ನು ಮುಗಿಸಿಕೊಂಡು ಬರಬೇಕೆಂದರೆ ಕನಿಷ್ಠ ಒಂದು ತಿಂಗಳ ಅವಧಿ ಬೇಕು. ಅಲ್ಲಿಯವರೆಗೆ ಅವರು ಎಲ್ಲಿಗೆ ಹೋಗಬೇಕು? ಎಲ್ಲ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕು?

  • ನಾನು ಇಲ್ಲಿ ಯಾರನ್ನೂ ದೂರುತ್ತಿಲ್ಲ.
  • ನಾನು ಅಲ್ಲಿನ ಗೆಳೆಯರ ನಂಬಿಕೆಗಳನ್ನು ಪ್ರಶ್ನಿಸುತ್ತಿಲ್ಲ.
  • ವಿದ್ಯಾವಂತರೆನಿಸಿಕೊಂಡವರು ಸೂತಕದ ಹಿನ್ನೆಲೆಯಲ್ಲಿ, ಆಗಷ್ಟೆ ಗಂಡನನ್ನು ಕಳೆದುಕೊಂಡ ಹೆಣ್ಣುಮಗಳನ್ನು, ತಂದೆಯನ್ನು ಕಳೆದುಕೊಂಡ ಹುಡುಗಿಯನ್ನು ಮನೆಯಿಂದ ಹೊರಗೆಹೋಗು ಎನ್ನುವಂತೆ ಒತ್ತಡ ತಂದರಲ್ಲ, ಅದು ಅಮಾನವೀಯತೆ ಎನಿಸಿತು. (ಈ ಆವಧಿಯಲ್ಲಿ ಸೂತಕದ ಬಗ್ಗೆ ಅಮೆರಿಕವಾಸಿ ಭಾರತೀಯರ ನಂಬಿಕೆ ನನ್ನಲ್ಲಿ ದಿಗ್ಬ್ರಮೆಯನ್ನು ಮೂಡಿಸಿದೆ. ನನ್ನ ಅನುಭವಗಳನ್ನು-ನೋವನ್ನು ಎಲ್ಲಿಯೂ ಹಂಚಿಕೊಳ್ಳುವ ಇಷ್ಟವಿಲ್ಲ.)
  • ಮಾನವೀಯತೆಗಿಂತ ದೊಡ್ಡದೆ ಸೂತಕ?

ಸೂತಕ:

ವೈದ್ಯನಾಗಿ ಸೂತಕದ ಬಗ್ಗೆ ನನ್ನ ತಿಳಿವಳಿಕೆಯನ್ನು ಈ ಕೆಳಕಂಡಂತೆ ಸಂಗ್ರಹಿಸುವೆ.

  • ಮನೆಯಲ್ಲಿ ಜನನ-ಮರಣಗಳಾದಾಗ ಆ ಮನೆ ಸೂತಕದ ಮನೆಯಾಗುತ್ತದೆ. ಮನೆಮಂದಿ ಸೂತಕದ ವ್ಯಾಪ್ತಿಯಲ್ಲಿ ಬರುತ್ತಾರೆ.
  • ಸಧ್ಯಕ್ಕೆ ಮರಣಸಂಬಂಧಿತ ಸೂತಕದ ಬಗ್ಗೆ ಮಾತ್ರ ವಿಚಾರ ಮಾಡೋಣ. ನನಗೆ ತಿಳಿದ ಹಾಗೆ ಸೂತಕದ ಬಗ್ಗೆ ಮಾಹಿತಿಯನ್ನು ನೀಡುವ ಅಧಿಕೃತ ಮೂಲ – ಗರುಡಪುರಾಣ. ಇದು ವಿಷ್ಣು ಹಾಗೂ ಗರುಡರ ನಡುವೆ ನಡೆಯುವ ಸಂವಾದ ರೂಪದ ಪುರಾಣ.
  • ಒಬ್ಬ ವ್ಯಕ್ತಿ ಮರಣಿಸಿದ ಮೇಲೆ ಅವನಲ್ಲಿದ್ದ ಆತ್ಮ ೧೦ ದಿನಗಳ ಕಾಲ ಈ ಭೂಮಿಯ ಮೇಲೆಯೇ ಇರುತ್ತದೆ, ಆ ವ್ಯಕ್ತಿಯಿದ್ದ ಮನೆ ಹಾಗೂ ಮನೆ ಮಂದಿಯ ಸುತ್ತಲೂ ಇರುತ್ತದೆ. ವಾಸ್ತವದಲ್ಲಿ ಇದನ್ನು ಆತ್ಮ ಎನ್ನುವುದಿಲ್ಲ. ಇದನ್ನು “ಪ್ರೇತ” ಎಂಬ ಶಬ್ಧದಿಂದ ಗುರುತಿಸುತ್ತಾರೆ.
  • ಪ್ರೇತವು ಭೂಮಿಯ ಮೇಲೆ ಇದ್ದಷ್ಟು ಕಾಲ ಅವನ ಮನೆ ಮಂದಿಗೆ ಸೂತಕವಿರುತ್ತದೆ. ಸೂತಕದ ಅವಧಿಯು ವರ್ಣವನ್ನು ಆಧರಿಸಿರುತ್ತದೆ.
  • ಬ್ರಾಹ್ಮಣ ಮರಣಿಸಿದಾಗ ೧೦ ದಿನಗಳ ಅವಧಿಯ ಸೂತಕ; ಕ್ಷತ್ರಿಯನಿಗೆ ೧೨ ದಿನಗಳ ಸೂತಕ; ವೈಶ್ಯನಿಗೆ ೧೫ ದಿನಗಳ ಸೂತಕ ಹಾಗೂ ಶೂದ್ರನಿಗೆ ಒಂದು ತಿಂಗಳ ಸೂತಕ.
  • ಸೂತಕವು ೧೦ ತಲೆಮಾರುಗಳಿಗೆ ಅನ್ವಯವಾಗುತ್ತದೆಯಂತೆ. ಬಂಧುತ್ವವನ್ನು ಆಧರಿಸಿ, ಸೂತಕದ ಅವಧಿ ಕಡಿಮೆಯಾಗಬಹುದು.
  • ೧೧ ನೆಯ ದಿನ ಬ್ರಹ್ಮ, ವಿಷ್ಣು, ರುದ್ರ ಹಾಗೂ ಯಮರನ್ನು ಆಹ್ವಾನಿಸಿ, ಅವರ ಸಮ್ಮುಖದಲ್ಲಿ ಪಿಂಡಪ್ರದಾನ ಮಾಡಿ ಸತ್ತವನಿಗೆ ಸ್ವರ್ಗ/ನರಕ ಪ್ರಾಪ್ತಿಯಾಗಿಸುತ್ತಾರೆ. ೧೦, ೧೧, ೧೨, ೧೩ ದಿನಗಳಂದು ನಡೆಯುವ ವಿವಿಧ ರೀತಿಯ ಕ್ರಿಯಾಕರ್ಮಗಳ ವಿವರ ಇಲ್ಲಿ ಅನಗತ್ಯ. ಶ್ರಾದ್ಧ ಹಾಗೂ ಅದರ ವಿವರಗಳನ್ನು ನಾನು ಇಲ್ಲಿ ಪ್ರಸ್ತಾಪಿಸುತ್ತಿಲ್ಲ. ಚರ್ಚಿಸುತ್ತಿಲ್ಲ. ವಿಷಯಾಂತರವಾಗಬಾರದು ಎಂಬುದಷ್ಟೇ ನನ್ನ ಉದ್ದೇಶ.
  • ಸೂತಕದ ಮನೆಯಲ್ಲಿ ದೇವತಾಕಾರ್ಯಗಳನ್ನು, ಹಬ್ಬ ಹರಿದಿನಗಳನ್ನು ಹಾಗೂ ಯಾವುದೇ ಮಂಗಳ ಕಾರ್ಯಗಳನ್ನು ಮಾಡುವುದಿಲ್ಲ. ಅವರು ಬೇರೆಯವರ ಮನೆಯ ಒಳಗೆ ಹೋಗುವಂತಿಲ್ಲ. ಬೇರೆಯವರು ಅವರ ಮನೆಗೆ ಬರುವಂತಿಲ್ಲ. ಒಂದು ವೇಳೆ ಬರಲೇಬೇಕಾದರೆ, ಮನೆಗೆ ಹೋಗಿ ಸ್ನಾನ ಮಾಡಬೇಕಾಗುತ್ತದೆ, ಒಂದು ರೀತಿಯಲ್ಲಿ “ಸಾಮಾಜಿಕ ಬಹಿಷ್ಕಾರ” - ಕಂಡುಬರುತ್ತದೆ.
  • ಈ ಅವಧಿಯಲ್ಲಿ ಮೃತನ ಮನೆಯ ಒಳಗೆ ಗರುಡಪುರಾಣ ವಾಚನ-ವ್ಯಾಖ್ಯಾನಗಳು ನಡೆಯಬಹುದು.
  • ಸೂತಕ ಹಾಗೂ ಅದರ ವಿಧಿಗಳು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಅದನ್ನು ಹಾಗೆಯೇ ಪಾಲಿಸಿಕೊಂಡು ಬಂದಿದ್ದೇವೆ. ಇದನ್ನು ವೈಜ್ಞಾನಿಕವಾಗಿ ವಿವರಿಸಲು ಸಾಧ್ಯವೆ? ಇಂದಿನ ದಿನಗಳಲ್ಲಿ ಈ ಆಚರಣೆ ಅಗತ್ಯವೆ ಎಂದು ಹೆಚ್ಚಿನ ಜನರು ವಿಚಾರ ಮಾಡಿದಂತಿಲ್ಲ.
  • ನನ್ನ ದೃಷ್ಟಿಯಲ್ಲಿ ಸೂತಕ ಎನ್ನುವುದು ಶೋಕಾಚರಣೆಯ ಅವಧಿ. ಅಷ್ಟೆ. ಅದಕ್ಕಿಂತ ಹೆಚ್ಚಿನ ಅರ್ಥ ಅನಗತ್ಯ.
  • ಸೂತಕ ಎನ್ನುವುದು ಹೇಗೆ ಆರಂಭವಾಗಿದ್ದಿರಬಹುದು?
  • ನಮಗೆ ಸ್ವಾತಂತ್ರ್ಯ ಬಂದಾಗ ನಮ್ಮ ಜೀವಿತಾವಧಿ ೩೭ ವರ್ಷಗಳಾಗಿತ್ತು. ಈಗ ನಮ್ಮ ಜೀವಿತಾವಧಿ ೬೯.೮೯ (೨೦೦೯) ವರ್ಷಗಳಾಗಿವೆ.
  • ಜೀವಿತಾವಧಿ ಅಷ್ಟು ಕಡಿಮೆಯಾಗಿರಲು ಮುಖ್ಯ ಕಾರಣ ಸೋಂಕು ರೋಗಗಳು. ಪ್ಲೇಗ್, ಫ್ಲೂ, ಕಾಲರಗಳು ಬಂದರೆ ಇಡೀ ಹಳ್ಳಿಗೆ ಹಳ್ಳಿ ನಾಶವಾಗುತ್ತಿತ್ತು. ಮಕ್ಕಳು (ವಯಸ್ಕರರೂ ಸಹಾ) ವಾಂತಿ ಭೇದಿಯಿಂದ ಸಾಯುವುದು ಸಾಮಾನ್ಯವಾಗಿತ್ತು.
  • ಸೋಂಕು ರೋಗ ಪೀಡಿತರ ಮನೆಗೆ ಯಾರೇ ಹೋದರೂ ಅವರಿಗೆ ಸೋಂಕು ಅಂಟಿಕೊಳ್ಳುವ ಸಾಧ್ಯತೆಯಿರುತ್ತಿತ್ತು. ಹಾಗಾಗಿ ಯಾರೂ ಸಾವಿನ ಮನೆಗೆ ಹೋಗಲು ಇಷ್ಟಪಡುತ್ತಿರಲಿಲ್ಲ. ಅನಾದಿ ಕಾಲದಲ್ಲಿ (ಅಂದರೆ ಸೂತಕದ ಪ್ರಕಲ್ಪನೆ ಜಾರಿಗೆ ಬಂದ ಕಾಲದಲ್ಲಿ/ಗರುಡಪುರಾಣ ರಚನೆಯಾದ ಕಾಲದಲ್ಲಿ) ಜೀವಿತಾವಧಿ ಇನ್ನೂ ಕಡಿಮೆಯಿದ್ದಿರಬಹುದು.
  • ಹಾಗಾಗಿ ಜನರನ್ನು ಸೋಂಕುರೋಗಗಳಿಂದ ತಪ್ಪಿಸಲು ಪುರಾಣಕಾರ ಸೂತಕದ ಪ್ರಕಲ್ಪನೆಯನ್ನು ಧಾರ್ಮಿಕ ಚೌಕಟ್ಟಿನಲ್ಲಿ ತಂದು ಅವರಿಗೆ “ಸಾಮಾಜಿಕ ಬಹಿಷ್ಕಾರ”ವನ್ನು ತಂದಿರಬಹುದು. ಸಾವಿನ ಮನೆಗೆ ಅನಿವಾರ್ಯವಾಗಿ ಹೋಗಬೇಕಾದವರು, ಮನೆಯಿಂದ ಹೊರಬಂದಕೂಡಲೇ, ನೇರವಾಗಿ ನದಿಗೋ/ಕೆರೆಗೋ/ಬಾವಿಯಲ್ಲಿ ಸ್ನಾನ ಮಾಡಿ ಮನೆಗೆ ಬರಬೇಕಿತ್ತು. ಹಾಗಾಗಿ ಸೂತಕದ ಪ್ರಕಲ್ಪನೆ ಅಂದಿನ ದಿನಗಳಲ್ಲಿ ನಿಜಕ್ಕೂ ಅರ್ಥವತ್ತದ್ದಾಗಿತ್ತು ಎನ್ನಬಹುದು.
  • ಸೂತಕದ ಅವಧಿಯು ೧೦-೧೪ ದಿನಗಳ ವ್ಯಾಪ್ತಿಯದ್ದಾಗಿರುತ್ತದೆ. ಇದು ಬಹುಶಃ ವೈರಸ್ಸುಗಳ ಸೋಂಕಿನವಧಿಯನ್ನು ಸೂಚಿಸುತ್ತಿದ್ದಿರಬಹುದು.
  • ಸೂತಕ – ಒಂದು ಕಾಲಕ್ಕೆ ಅರ್ಥವತ್ತಾಗಿದ್ದಿರಬಹುದು. ಆದರೆ ಅದು ಇಂದಿಗೂ ಅನ್ವಯವಾಗಬೇಕೆ? ಇಂದಿನ ಪ್ರತಿಜೈವಿಕ-ಲಸಿಕೆ-ಸ್ವಚ್ಛತೆಯ ಯುಗದಲ್ಲಿ ಸೂತಕವನ್ನು ಆಚರಣೆಯಲ್ಲಿಡಬೇಕೆ?
  • ಸೂತಕ ಎನ್ನುವುದು ಶ್ರಾದ್ಧದ ಹಾಗೆ ನಂಬಿಕೆಯನ್ನು ಆಧರಿಸಿರುವಂತಹದ್ದು ಎಂದರೆ ಅದಕ್ಕೆ ಯಾವುದೇ ಪ್ರತಿವಾದವಿಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಆದ ನಂಬಿಕೆಗಳನ್ನು ಹೊಂದಿರಲು ಹಾಗೂ ಆಚರಿಸಲು ಹಕ್ಕಿದೆ.
  • ನನ್ನ ಪ್ರಶ್ನೆ – ಕೇವಲ ಮಾನವೀಯತೆಯ ಹಿನ್ನೆಲೆಯದ್ದು. ಅಷ್ಟೆ.

 

-ಡಾ.ನಾ.ಸೋಮೇಶ್ವರ

Rating
Average: 3.5 (2 votes)

Comments