ಏನಿದೆ ಕೃಷ್ಣನ ಲವ್ ಸ್ಟೋರಿಲಿ ?
ಕೃಷ್ಣನ ಲವ್ ಸ್ಟೋರಿ ಮೊನ್ನೆ ನೋಡಿದೆ. ಚಿತ್ರದಲ್ಲಿ ಯಾವುದೇ ಸೂಪರ್ ಸ್ಟಾರ್ ಗಳು ಇಲ್ಲದಿದ್ದರೂ ಮಲ್ಟಿಪ್ಲೆಕ್ಸ್ ಪೂರ್ತಿ ತುಂಬಿತ್ತು ಅನ್ನೋದನ್ನ ನೋಡಿದಾಗ ಕನ್ನಡ ಚಿತ್ರ ರಸಿಕರು ಒಳ್ಳೆ ಗುಣಮಟ್ಟದ ಚಿತ್ರ ಮಾಡಿ, ಅದಕ್ಕೆ ತಕ್ಕ ಪ್ರಚಾರ ಕೊಟ್ಟರೆ ಖಂಡಿತ ಕೈ ಹಿಡಿಯುತ್ತಾರೆ ಅನ್ನುವ ನನ್ನ ನಂಬಿಕೆ ಇನ್ನೂ ಗಟ್ಟಿಯಾಯ್ತು. 75% ನೈಜ ಕತೆ 25% ಸಿನೆಮಾ ಅನ್ನುವ ಕ್ಯಾಪ್ಶನ್ ಸಾಕಷ್ಟು ಜನರನ್ನು ಸೆಳೆದಿದ್ದು ಸುಳ್ಳಲ್ಲ. ಇರಲಿ ಕೃಷ್ಣನ ಲವ್ ಸ್ಟೋರಿಲಿ ಏನಿದೆ? ಸಿಕ್ಸರ್, ಮೊಗ್ಗಿನ ಮನಸ್ಸುನಂತಹ ಕ್ಲೀನ್, ಸಂಸಾರ ಸಮೇತರಾಗಿ ಕೂತು ನೋಡುವಂತಹ ಚಿತ್ರ ಮಾಡಿದ್ದ ಶಶಾಂಕ್ ಅವರ ಈ ಚಿತ್ರದ ಮೇಲೆ ಕನ್ನಡ ಚಿತ್ರೋದ್ಯಮಕ್ಕೆ ಅಪಾರ ನಿರೀಕ್ಷೆ ಇತ್ತು ಮತ್ತು ಆ ನಿರೀಕ್ಷೆ ಸುಳ್ಳಾಗಿಲ್ಲ ಅನ್ನಬಹುದು.
ಏನಿದೆ ಲವ್ ಸ್ಟೋರಿಲಿ?
ಇಲ್ಲೊಬ್ಬಳು ಗೀತಾ ಅನ್ನುವ ಕೆಳ ಮಧ್ಯಮ ವರ್ಗದ ಹುಡುಗಿ. ಅಲ್ಲೇ ಹತ್ತಿರದಲ್ಲೇ ಕೃಷ್ಣ ಅನ್ನುವ ಟಿಪಿಕಲ್ ವಿಜಯನಗರ, ರಾಜಾಜಿನಗರದಲ್ಲಿ ಕಂಡು ಬರುವಂತಹ ಮಧ್ಯಮ ವರ್ಗದ ಹುಡುಗ. ಗೀತಾಳನ್ನು ಇಷ್ಟ ಪಡುವ ಶ್ರೀಮಂತರ ಮನೆ ಹುಡುಗ ನರೇಂದ್ರನೂ ಅಲ್ಲೇ ಇದ್ದಾನೆ. ಇಬ್ರೂ ಹುಡುಗರು ಹುಡುಗಿ ಮನಸ್ಸು ಗೆಲ್ಲಲು ಇನ್ನಿಲದ ಕಸರತ್ತು ಮಾಡುತ್ತಿರುತ್ತಾರೆ. ಇವರಿಬ್ಬರಲ್ಲಿ ಯಾರನ್ನೂ ಆಯ್ಕೆ ಮಾಡಿಕೊಳ್ಳಬೇಕು ಅನ್ನುವ ಗೊಂದಲವಂತೂ ನಾಯಕಿ ಗೀತಾಳಿಗೆ ಇರುತ್ತೆ. ಒಂದೆಡೆ ಇನ್ನಿಲ್ಲದ ಪ್ರೀತಿ ತೋರಿಸುವ, ನಾಯಕಿಯ ಕಷ್ಟಕ್ಕೆ ಆಗುವ ಕೃಷ್ಣ, ಇನ್ನೊಂದೆಡೆ ಜೀವನ ಪೂರ್ತಿ ಬಡತನದಲ್ಲಿ ಆಸೆಗಳನ್ನು ಕೊಂದುಕೊಳ್ಳುತ್ತಾ ಬದುಕಿದ ಗೀತಾಳ ಎಲ್ಲ ಆಸೆಗಳನ್ನು ಒಂದೇ ಏಟಿಗೆ ಈಡೇರಿಸಬಲ್ಲ, ನಡತೆಯಲ್ಲಿ ಒಳ್ಳೆಯವನು ಆಗಿರುವ ನರೇಂದ್ರ. ಇವರಿಬ್ಬರಲ್ಲಿ ಕೃಷ್ಣನ ಪ್ರೀತಿಯೇ ಗೆಲ್ಲುತ್ತೆ. ಪ್ರೀತಿ ಗೆದ್ದ ಹುಮ್ಮಸ್ಸಲ್ಲಿರುವಾಗಲೇ ಕೃಷ್ಣನಿಗೆ ಬರಸಿಡಿಲಿನಂತೇ ಸುದ್ದಿಯೊಂದು ಬಂದು ಎರಗುತ್ತೆ, ಅದೇನಂದರೆ ನಿನ್ನೆಯಷ್ಟೇ "ಐ ಲವ್ ಯೂ" ಅಂದ ಗೀತಾ ಇವತ್ತು ನರೇಂದ್ರನ ಜೊತೆ ಊರು ಬಿಟ್ಟು ಓಡಿ ಹೋಗಿದ್ದಾಳೆ ಅನ್ನುವುದು. ಹಾಗಿದ್ರೆ ಗೀತಾ ಯಾಕೆ ಹಾಗೆ ಮಾಡಿದ್ಲು ? ಯಾವ ಸ್ಥಿತಿಯಲ್ಲಿ ಅವಳು ಮತ್ತೆ ಬೆಂಗಳೂರಿಗೆ ಬರುತ್ತಾಳೆ ? ನರೇಂದ್ರ ಏನಾಗುತ್ತಾನೆ ? ಕೃಷ್ಣ ಅವಳತ್ತ ಮತ್ತೇ ಹೋಗುತ್ತಾನಾ? ಅವಳು ಕೃಷ್ಣ ನತ್ತ ವಾಪಸ್ ಹೋಗುತ್ತಾಳಾ? ಇದನ್ನೆಲ್ಲ ನಾನು ಇಲ್ಲೇ ಹೇಳಿದ್ರೆ ಚಿತ್ರ ನೋಡುವ ಆಸಕ್ತಿ ಉಳಿಯದೇ ಹೋಗಬಹುದು. ಇದನ್ನೆಲ್ಲ ಚಿತ್ರಮಂದಿರದಲ್ಲೇ ನೋಡಿ ಆನಂದಿಸಿ.
ತೆರೆ ಮೇಲೆ, ತೆರೆ ಮರೆಯಲ್ಲಿದ್ದವರಾರು ?
ಮಂದುವರೆಯುತ್ತಾ, ಚಿತ್ರದ ನಟನೆ ಮತ್ತು ತಾಂತ್ರಿಕ ವಿಭಾಗದತ್ತ ಕಣ್ಣು ಹಾಯಿಸಿದ್ರೆ ನಿಜಕ್ಕೂ ಸಂತಸವಾಗುತ್ತೆ. ಒಬ್ಬರಿಗಿಂತ ಒಬ್ಬರು ಪ್ರತಿಭಾವಂತರು ಈ ಚಿತ್ರಕ್ಕೆ ತಮ್ಮ ಪ್ರತಿಭೆ ಧಾರೆ ಎರೆದಿದ್ದಾರೆ. ತಾಂತ್ರಿಕ ವಿಭಾಗವನ್ನೇ ಮೊದಲು ತೆಗೆದುಕೊಂಡರೆ, ವಿ.ಚಂದ್ರು ಅವರ ಕ್ಯಾಮೆರಾ ಕೆಲಸ ಚಿತ್ರದ ಹೈಲೈಟ್ ಅನ್ನಬಹುದು. ಪ್ರೇಮಿಗಳಿಬ್ಬರ ಮನಸ್ಸಿನ ತುಮುಲಗಳನ್ನು ತೆರೆ ಮೇಲೆ ತೋರಿಸುವಾಗ ಪ್ರತಿ ಫ್ರೇಮ್ ಅನ್ನೂ ಚೆಂದಗಾಣಿಸುವಲ್ಲಿ ಅವರ ಶ್ರಮ ಎದ್ದು ಕಾಣುತ್ತೆ. ಚಿತ್ರದ ಸಂಗೀತ ನಿರ್ದೇಶಕ ವಿ.ಶ್ರೀಧರ್ ಅವರ ಹಾಡುಗಳಲ್ಲಿ 3 ಹಾಡುಗಳು ಮನ ಸೆಳೆಯುತ್ತವೆ. "ತುಂಬಾ ಆರಾಮಾಗಿ ಇದ್ದ ಸ್ನೇಹಿತ" ಹಾಡು ಹುಡುಗ್ರು, ಮಕ್ಕಳಿಗೆ ಇಷ್ಟ ಆಗುತ್ತೆ. ಇನ್ನೂ ನಟನೆ ವಿಷಯಕ್ಕೆ ಬಂದರೆ, ಇಡೀ ಚಿತ್ರವನ್ನು ಆವರಿಸಿಕೊಂಡಿರುವುದೇ ರಾಧಿಕಾ ಮತ್ತು ಅಜಯ್ ಪಾತ್ರ. ಅದರಲ್ಲೂ ರಾಧಿಕಾ, ಪಾತ್ರವೇ ತಾವಾದಂತೆ ನಟಿಸಿದ್ದಾರೆ. ಶಶಾಂಕ್ ಅವರ ಮೊಗ್ಗಿನ ಮನಸ್ಸು ನೋಡಿ, ಈ ಚಿತ್ರ ನೋಡಿದಾಗ ಅನ್ನಿಸುವುದು ಏನೆಂದರೆ ಪುಟ್ಟಣ್ಣ ಕಣಗಾಲ್ ತರಹ ಶಶಾಂಕ್ ಕೂಡಾ ಒಂದು ಕತೆಯನ್ನು ಹೆಣ್ಣಿನ ಕಣ್ಣಿನಿಂದ ನೋಡುವ, ಹೆಣ್ಣಿನ ಪಾತ್ರಕ್ಕೆ ಕೊಡಬೇಕಾದ ಮಹತ್ವ ಕೊಡುವಂತವರು ಎಂಬುದು. ಹೆಚ್ಚಿನ ಚಿತ್ರಗಳಲ್ಲಿ ನಾಯಕಿ ಪಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಹಾಗಿರುವಾಗ, ಇದು ಒಳ್ಳೆಯ ಬದಲಾವಣೆ. ವಿರಾಮದ ನಂತರ ಚಿತ್ರದ ಓಟ ಅಲ್ಲಲ್ಲಿ ನಿಧಾನವಾಗಿದ್ದರೂ, ಪ್ರೇಕ್ಷಕರನ್ನು ತಮ್ಮ ಸೀಟಿಗಂಟುವಂತೆ ಮಾಡಿದ್ದು ರಾಧಿಕಾಳ ಅಭಿನಯ. ನಾಯಕ ಅಜಯ್ ನಟನೆಯಲ್ಲಿ ಸಕತ್ ಇಂಪ್ರೂವ್ ಆಗಿದ್ದಾರೆ. ನಾಯಕನ ಪಾತ್ರಕ್ಕೆ ಕೊಡಬೇಕಾದ ಲವಲವಿಕೆ ಕೊಡುವುದು ಅವರಿಂದಾಗಿದೆ ಎನ್ನಬಹುದು.ಚಿತ್ರದ ಕೊನೆಯಲ್ಲಿ ನಾಯಕನ ದುಃಖ ಪ್ರೇಕ್ಷಕರ ದುಃಖವಾಗುತ್ತದೆ. ಚಿತ್ರವನ್ನು ಒಂದು ಹತ್ತು ನಿಮಿಷ ಕಡಿಮೆ ಮಾಡಬಹುದಿತ್ತು. ಜೊತೆಗೆ, ಚಿತ್ರದ ಕೊನೆ ಕೆಲವರಿಗೆ ಇಷ್ಟ ಆಗಬಹುದು, ಕೆಲವರಿಗೆ ಆಗದಿರಬಹುದು. ಏನೇ ಆದರೂ ಸ್ವಂತ ಕತೆಯೊಂದಿಗೆ ಒಂದೊಳ್ಳೆ ಸಿನೆಮಾ ಮಾಡಿರುವ ಈ ಯುವ ತಂಡದ ಬೆನ್ನು ತಟ್ಟೋ ಕೆಲಸ ಕನ್ನಡ ಚಿತ್ರ ಪ್ರೇಮಿಗಳು ಮಾಡಲಿ.
ಕೊನೆ ಹನಿ:
ಚಿತ್ರದ ಕತೆ, ಕಲಾವಿದರು, ತಂತ್ರಜ್ಞರು, ಸಂಗೀತ, ನಿರ್ದೇಶನ ಎಲ್ಲದರಲ್ಲೂ the best ಅನ್ನುವಂತಹ ಚಿತ್ರ ಮಾಡಬೇಕು ಅನ್ನುವ ಶ್ರಮ ಎದ್ದು ಕಾಣುತ್ತೆ. ಚಿತ್ರ ಮುಗಿದ ಮೇಲೆ ತಮ್ಮ ಪಾಡಿಗೆ ತಾವಿರದೇ ಚಿತ್ರದ ಪ್ರಚಾರಕ್ಕೆ ಚಿತ್ರ ತಂಡದ ಎಲ್ಲರೂ ಒಂದಾಗಿ ಸುತ್ತುತ್ತಿರುವುದು ( ನಾನು ನೋಡಿದ ಚಿತ್ರಮಂದಿರಕ್ಕೂ ಎಲ್ಲರೂ ಬಂದಿದ್ದರು) ಒಂದು ಒಳ್ಳೆಯ ಬೆಳವಣಿಗೆ. ಒಂದು ಚಿತ್ರಕ್ಕೆ ಚಿತ್ರದ ಗುಣಮಟ್ಟ ಎಷ್ಟು ಮುಖ್ಯವೋ, ಸರಿಯಾಗಿ ಪ್ರಚಾರ ಕೊಡುವುದು ಅಷ್ಟೇ ಮುಖ್ಯ. ಪ್ರಚಾರಕ್ಕೆ ಮೊದಲ ವಾರ ಪ್ರೇಕ್ಷಕರು ಬಂದರೆ, ಚಿತ್ರದ ಗುಣಮಟ್ಟ ಎರಡನೇ ವಾರದಿಂದ ಅದನ್ನು ಎತ್ತಿ ಹಿಡಿಯೋದು. ಎರಡೂ ವಿಷಯಕ್ಕೆ ಕನ್ನಡ ಚಿತ್ರೋದ್ಯಮ ಆದ್ಯ ಗಮನ ಕೊಡಲಿ. ಜಾಗತೀಕರಣದ ಈ ದಿನಗಳಲ್ಲಿ ಯುವಕರನ್ನು ಕನ್ನಡ ಭಾಷೆಗೆ ಗಾಢವಾಗಿ ಹಿಡಿದಿಡುವ ಶಕ್ತಿ ಯಾವುದಕ್ಕಾದರೂ ಇದೆ ಅಂದರೆ ಅದು ಕನ್ನಡ ಚಿತ್ರಗಳಿಗೆ. ಹಾಗಾಗಿ ಒಳ್ಳೊಳ್ಳೆಯ ಚಿತ್ರಗಳು ಬರುವುದು, ಅವುಗಳ ಪ್ರದರ್ಶನಕ್ಕೆ ಬೇಕಾದಂತಹ ವ್ಯವಸ್ಥೆ ಕಟ್ಟಿಕೊಳ್ಳುವುದು ಭಾಷೆಯ ಉಳಿವಿನ ಹಾದಿಯಲ್ಲಿ ಒಂದು ಮುಖ್ಯವಾದ ಹೆಜ್ಜೆಯೇ. ಇಂತಹುದೇ ಗುಣಮಟ್ಟದ ಚಿತ್ರಗಳು ಹೆಚ್ಚು ಹೆಚ್ಚು ಬಂದು ಕನ್ನಡ ಚಿತ್ರೋದ್ಯಮ ಇನ್ನಷ್ಟು ದೊಡ್ಡ ಉದ್ಯಮವಾಗಿ ಬೆಳೆಯಲಿ ಎಂದು ಹಾರೈಸುವೆ.
Comments
ಉ: ಏನಿದೆ ಕೃಷ್ಣನ ಲವ್ ಸ್ಟೋರಿಲಿ ?
ಉ: ಏನಿದೆ ಕೃಷ್ಣನ ಲವ್ ಸ್ಟೋರಿಲಿ ?
ಉ: ಏನಿದೆ ಕೃಷ್ಣನ ಲವ್ ಸ್ಟೋರಿಲಿ ?