ಕಣ್ಸೆಳೆಯುತಿದೆ ಕಣಜದ ಕೋಣೆ
ಮಲೆನಾಡಿನ ಮುಂಗಾರಿನ ಶುರುವಿನಲ್ಲಿ, ಕಾಡಿನ ದಾರಿಯಲ್ಲಿ, ತೋಟದ ಬದುವಿನಲ್ಲಿ ಹೋಗುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಮೈಯೆಲ್ಲ ಉರಿಯಲು ಶುರುವಾಯಿತೆಂದರೆ ಅದು ಕಣಜದ ದಾಳಿ ಎಂದರ್ಥ. ಏನಾಗುತ್ತಿದೆ, ಹೇಗಾಗುತ್ತಿದೆ, ಎಂಬ ಆಲೋಚನೆಗೂ ಅರಿವು ನೀಡದೆ "ಉರಿ ಉರಿ ಉರಿ" ಎಂಬ ಮಂತ್ರವನ್ನು ಜಪಿಸುವಂತೆ ಮಾಡುವ ಹೆಬ್ಬೆರಳಿನ ಗಾತ್ರದ ಈ ಕೀಟ ನೂರಾರು ಒಮ್ಮೆಲೆ ಧಾಳಿ ಮಾಡಿದರೆ ಮನುಷ್ಯನ ಪ್ರಾಣಕ್ಕೇ ಕುತ್ತು ತರಬಲ್ಲ ತಾಕತ್ತು ಹೊಂದಿದೆ. ಆದರೆ ಇವು ವೃಥಾ ಧಾಳಿ ಮಾಡುವುದಿಲ್ಲ. ಅಕಸ್ಮಾತ್ ಅದರ ಗೂಡಿಗೆ ಧಕ್ಕೆಯುಂಟಾದಾಗ ಮಾತ್ರ ಕ್ಷಮಿಸಲಾರವು. ಮನುಷ್ಯನನ್ನು ಹೊರತುಪಡಿಸಿ ಮತ್ಯಾವುದೂ ವೃಥಾ ಧಾಳಿ ಮಾಡುವುದಿಲ್ಲ ಎಂಬುದು ಬೇರೆ ಮಾತು.
ಆಂಗ್ಲ ಭಾಷೆಯಲ್ಲಿ ವ್ಯಾಸ್ಪ್ ಎಂದು ಕರೆಯಿಸಿಕೊಳ್ಳುವ ಈ ಕೀಟದ ವಂಶ ವಾಸ್ಪಡೈ.ಇದು ಮಿಶ್ರ ಆಹಾರಿ. ಹೂವಿನ ಮಕರಂದ ದ ಜತೆಗೆ ತನಗಿಂತ ಚಿಕ್ಕದಾದ ಕೀಟಗಳನ್ನು ಭಕ್ಷಿಸುತ್ತದೆ. ಜೇನಿನಂತೆಯೇ ಜೀವನ ಕ್ರಮವಿರುವುದಾದರೂ ಕಣಜ ರಾಣಿಯನ್ನು ಅವಲಂಬಿಸದೇ ಬದುಕುತ್ತವೆ. ಜೇನು ಹುಳುಗಳ ಪರಮಶತ್ರುವಾದ ಕಣಜ ದಿನವೊಂದಕ್ಕೆ ಕನಿಷ್ಠ ಮೂವತ್ತು ನಲವತ್ತು ಜೇನುಹುಳುಗಳ ಸಾವಿಗೆ ಕಾರಣವಾಗುತ್ತದೆ. ಹಿಡಿದ ಜೇನುನೊಣವನ್ನು ತನ್ನ ಮರಿಗಳಿಗೆ ಆಹಾರವಾಗಿ ನೀಡುತ್ತವೆ. ಕಣಜದ ಜೇನು ಬೇಟೆ ವಿಶಿಷ್ಠವಾದ ಕ್ರಿಯೆ. ಕಣಜ ಜೇನುಗೂಡಿನ ಹೊರಗೆ ಭರ್ರ್ ಎಂದು ಸದ್ದು ಮಾಡುತ್ತಾ ಹಾರಡತೊಡಗುತ್ತದೆ. ಈ ಸದ್ದಿಗೆ ಜೇನು ಹುಳುಗಳು ವ್ಯಗ್ರವಾಗಿ ಆಚೆ ಬರತೊಡಗುತ್ತವೆ. ಹೀಗೆ ಆಚೆಬಂದ ಜೇನ್ನೊಣವನ್ನು ಕ್ಷಣಮಾತ್ರದಲ್ಲಿ ಕಾಲಿನಲ್ಲಿ ಹಿಡಿದುಕೊಂಡು ಕಣಜ ಪರಾರಿಯಾಗಿಬಿಡುತ್ತದೆ. ಅಪರೂಪಕ್ಕೊಮ್ಮೆ ಜೇನುಗಳೇ ಗುಂಪು ಗುಂಪಾಗಿ ಧಾಳಿ ಮಾಡಿ ಕಣಜವನ್ನು ಬಲಿ ತೆಗೆದುಕೊಳ್ಳುವುದೂ ಉಂಟು. ಜೇನುಗೂಡಿನ ದ್ವಾರದಲ್ಲಿ ಬಂದ ಕಣಜದ ಮೇಲೆ ಹಠಾತ್ತನೆ ನೂರಾರು ಜೇನುನೊಣಗಳು ಉಂಡೆಯಾಕಾರದಲ್ಲಿ ಮುತ್ತಿಬಿಡುತ್ತವೆ. ಹಾಗಾದಾಗ ಕಣಜ ಉಸಿರುಗಟ್ಟಿ, ಒಳಗಿನ ತಾಪಮಾನ ಹೆಚ್ಚಿ ಸಾವನ್ನಪ್ಪುತ್ತದ. ಇದು ಬಹು ಅಪರೂಪಕ್ಕೆ ನಡೆಯುವ ಕ್ರಿಯೆ. ಮಿಕ್ಕಂತೆ ಜೇನುನೊಣಗಳ ಸಾವಿನ ಪ್ರಮಾಣವೇ ಹೆಚ್ಚಿನದು. ಹಾಗಾಗಿ ಜೇನು ಸಾಕಾಣಿಕಾದಾರರು ಗೂಡನ್ನು ಕಣಜದಿಂದ ರಕ್ಷಿಸಲು ಹರಸಾಹಸ ಪಡುತ್ತಾರೆ. ಹತ್ತಿರದಲ್ಲಿರುವ ಕಣಜದ ಗೂಡನ್ನು ಪತ್ತೆ ಮಾಡಿ ಸುಡದಿದ್ದರೆ ಜೇನುಗೂಡನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ. ಹಾಗಾಗಿ ಕಣಜ ಜೇನುಪೆಟ್ಟಿಗೆಯ ಬಳಿ ಹಾರಾಡತೊಡಗಿತೆಂದರೆ ತಕ್ಷಣ ಜೇನು ಕೃಷಿಕರು ಸುತ್ತಮುತ್ತ ಕಣಜದ ಗೂಡು ಹುಡುಕಲಾರಂಬಿಸುತ್ತಾರೆ.
ಇಷ್ಟಿದ್ದರೂ ಕಣಜದ ಗೂಡು ನೋಡಲು ಬಲು ಚಂದ. ಅರ್ದ ಅಡಿ ಗಾತ್ರದಿಂದ ಎರಡು ಅಡಿ ಎತ್ತರದ ಗೂಡು ನಿರ್ಮಿಸುವ ಕಣಜ ತನ್ನ ಸಂಸಾರದ ಸಂಖ್ಯೆಗನುಗುಣವಾಗಿ ಗೂಡನ್ನು ನಿರ್ಮಿಸಿಕೊಳ್ಳುತ್ತದೆ. ಸಗಣಿ, ಮಣ್ಣನ್ನು ಸೇರಿಸಿ ಬಾಯಿಮೂಲಕ ಹೊರಡುವ ಜೊಲ್ಲನ್ನು ಬಳಸಿ ಕಟ್ಟಿಕೊಳ್ಳುವ ಗೂಡು ನೋಡಲು ಸುಂದರ, ಆದರೆ ಒಮ್ಮೆ ಧಾಳಿಗೀಡಾದ ಅನುಭವ ನಿಮ್ಮದಾಗಿದ್ದರೆ ಗೂಡು ನೋಡಿದಾಕ್ಷಣ ಮೈಮೇಲೆ ಮುಳ್ಳುಗಳೇಳುತ್ತವೆ. ಇಂತಹ ಕಣಜದ ಗೂಡನ್ನು ಪತ್ತೆ ಮಾಡಿ ಧ್ವಂಸ ಮಾಡುವಾಗ ಬೇಸರವಾಗುತ್ತದೆ. ಆದರೆ ಜೇನನ್ನು ಉಳಿಸಿಬೇಕೆಂದರೆ ಹೀಗೆಲ್ಲಾ ಮಾಡುವುದು ಅನಿವಾರ್ಯ. ಗೂಡು ಪತ್ತೆಯಾಗಿ ಧ್ವಂಸಮಾಡಲಾಗದಿದಲ್ಲಿ ಡಿಸೆಂಬರ್ ತಿಂಗಳವರೆಗೂ ಇವುಗಳ ಕಾಟ ಮುಂದುವರೆಯುತ್ತದೆ. ಪ್ರಕೃತಿ ಯ ಹುಟ್ಟು ಸಾವಿನ ಚಕ್ರದಲ್ಲಿ ೬ ರಿಂದ ೮ ತಿಂಗಳು ಆಯುಷ್ಯ ಹೊಂದಿರುವ ಕಣಜ ಡಿಸೆಂಬರ್ ತಿಂಗಳಿನಲ್ಲಿ ಕೆಂದಿಗೆ ಎಂಬ ಸ್ಥಳೀಯ ಭಾಷೆಯಲ್ಲಿ ಕರೆಯುವ ಜಾತಿಯ ಗಿಡವೊಂದರ ಹೂವು ಅರಳಿದಾಗ ಅದರ ಮಕರಂದ ಹೀರಲು ಹೋಗಿ ಸಾವನ್ನಪ್ಪುತ್ತದೆ ಎಂಬ ನಂಬಿಕೆ ಇದೆ ಹಾಗೆಯೇ ಅಡಿಕೆಯ ಕೊಳೆ ರೋಗದ ಹೆಚ್ಚಳಕ್ಕೂ ಇವು ಕಾರ್ಣ ಎಂಬ ಪ್ರತೀತಿಯೂ ಇದೆ . ಆದರೆ ವಾಸ್ತವ ತೀರಾ ಹಾಗೇನಲ್ಲ ಆಯುಷ್ಯ ಮುಗಿದ ಕಾರಣ ಅವು ಅವಸಾನವಾಗುತ್ತವೆ ಮತ್ತುಅವುಗಳ ಮಕರಂದಕ್ಕಾಗಿ ಅಡಿಕೆ ಸಿಂಗಾರದ ಸುತ್ತ ಯರ್ರಾಬಿರ್ರೀ ಹಾರಾಟ ಹಾಗೆಲ್ಲ ನಂಬಿಕೆ ಹುಟ್ಟಲೂ ಕಾರಣವಾಗಿರಬಹುದು. ಡಿಸೆಂಬರ್ ತಿಂಗಳ ನಂತರ ಆಯುಷ್ಯ ಮುಗಿದು ಅಳಿದುಳಿದ ಶೇಕಡಾ ೫ ರಷ್ಟು ಹುಳುಗಳು ಮತ್ತೆ ತಮ್ಮ ಸಂತಾನ ವೃದ್ಧಿಸಿಕೊಳ್ಳಲು ಆರಂಭಿಸುತ್ತವೆ.
ಜೇನು ಗೂಡನ್ನು ಮನೆಯಲ್ಲಿಟ್ಟಿರುವ ಕೃಷಿಕರು ಏನಕೇನಪ್ರಕಾರೇಣ ಕಣಜದ ಗೂಡನ್ನು ಜೂನ್ ತಿಂಗಳಿನಲ್ಲಿ ಪತ್ತೆ ಮಾಡಿ ಬೆಂಕಿ ಇಟ್ಟುಬಿಡುತ್ತಾರೆ. ಡಿಸೆಂಬರ್ ತನಕ ಕಾಯುತ್ತಾ ಕುಳಿತರೆ ಜೇನು ಉಳಿಯದು ಎಂಬುದು ಅವರ ವಾದ. ಅದೇನೆ ಇರಲಿ ನನ್ನ ಕ್ಯಾಮೆರಾ ಕಣ್ಣಿಗೆ ಅಪರೂಪದ ಕಣಜದ ಜೀವನ ಕ್ರಮ ಸಿಕ್ಕದ್ದಂತೂ ರೋಚಕ ಅನುಭವ.
Comments
ಉ: ಕಣ್ಸೆಳೆಯುತಿದೆ ಕಣಜ ಕೋಣೆ
ಉ: ಕಣ್ಸೆಳೆಯುತಿದೆ ಕಣಜದ ಕೋಣೆ
In reply to ಉ: ಕಣ್ಸೆಳೆಯುತಿದೆ ಕಣಜದ ಕೋಣೆ by ksraghavendranavada
ಉ: ಕಣ್ಸೆಳೆಯುತಿದೆ ಕಣಜದ ಕೋಣೆ
In reply to ಉ: ಕಣ್ಸೆಳೆಯುತಿದೆ ಕಣಜದ ಕೋಣೆ by ksraghavendranavada
ಉ: ಕಣ್ಸೆಳೆಯುತಿದೆ ಕಣಜದ ಕೋಣೆ
In reply to ಉ: ಕಣ್ಸೆಳೆಯುತಿದೆ ಕಣಜದ ಕೋಣೆ by shreeshum
ಉ: ಕಣ್ಸೆಳೆಯುತಿದೆ ಕಣಜದ ಕೋಣೆ
In reply to ಉ: ಕಣ್ಸೆಳೆಯುತಿದೆ ಕಣಜದ ಕೋಣೆ by vasanth
ಉ: ಕಣ್ಸೆಳೆಯುತಿದೆ ಕಣಜದ ಕೋಣೆ
ಉ: ಕಣ್ಸೆಳೆಯುತಿದೆ ಕಣಜದ ಕೋಣೆ