ಬೆಂಗಳೂರು ಬೆಂದಕಾಳೂರಲ್ಲ!

ಬೆಂಗಳೂರು ಬೆಂದಕಾಳೂರಲ್ಲ!

ಬರಹ

 

  ವೀರಬಲ್ಲಾಳನೆಂಬ ಹೊಯ್ಸಳ ರಾಜನು ಅಜ್ಜಿಯೊಬ್ಬಳು ಕೊಟ್ಟ ಬೆಂದಕಾಳುಗಳನ್ನು ತಿಂದು ಆ ಊರನ್ನು ಬೆಂದಕಾಳೂರು ಎಂದು ಕರೆದ. ಅದೇ ನಂತರ ಬೆಂಗಳೂರು ಎಂದು ಹೆಸರಾಯಿತು ಎಂಬ ಜನಪದ ಕಥೆಯಿದೆ.

  ಇದನ್ನೆ ದಿಟವೆಂದು ಎಲ್ಲೆಡೆಯಲ್ಲಿಯೂ ಸಾರಲಾಗುತ್ತಿದೆ.ಇದೊಂದು ಯಾವುದೇ ಆಧಾರವಿಲ್ಲದ ಕಟ್ಟುಕಥೆ! ಹಿಂದೊಮ್ಮೆ ಒಬ್ಬರಿಗೆ ಬೆಂಗಳೂರು ಎಂಬುದು ಬೆಂದಕಾಳೂರು ಎಂಬುದರ ಅಪಭ್ರಂಶವಲ್ಲ ಎಂದು ಹೇಳಿದ್ದಕ್ಕೆ ಅವರು "ನನಗೆ ಸತ್ಯಕ್ಕಿಂತ ಅಜ್ಜಿ ಹೇಳಿದ ಕಥೆಯೇ ಅಪ್ಯಾಯಮಾನ" ಎಂದು ಉತ್ತರಿಸಿದ್ದರು.

 ಅಜ್ಜಿ ಕಥೆಯ ಬಗ್ಗೆ ಜನಪದದ ಬಗ್ಗೆ ಗೌರವವಿದ್ದರೆ ಅದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ ಅದೇ ಕಥೆಯನ್ನು ಅವರು ಮಕ್ಕಳಿಗೆ ಹೇಳುತ್ತಾರೆ. ಮತ್ತೆ ಮಕ್ಕಳು ಕಥೆಯನ್ನೇ ದಿಟವೆಂದು ಬಗೆಯುತ್ತವೆ. ಇತಿಹಾಸ ಮಣ್ಣಲ್ಲಿ ಮುಚ್ಚಿಹೋಗುತ್ತದೆ!

 

  ಹೊಯ್ಸಳ ರಾಜ ವೀರಬಲ್ಲಾಳನ ಕಾಲ ಹನ್ನೆರಡು ಮತ್ತು ಹದಿಮೂರನೆಯ ಶತಮಾನ.  "ಬೆಂಗಳೂರು" ಎಂಬ ಹೆಸರಿನ ಉಲ್ಲೇಖ ಬೇಗೂರಿನ ಬಳಿ ದೊರೆತ ಒಂಭತ್ತನೆಯ ಶತಮಾನದ ಶಾಸನದಲ್ಲಿ ದೊರಕುತ್ತದೆ.ವಿವರಗಳಿಗಾಗಿ ಕೆಳಗಿನ ಸುದ್ದಿಗಳನ್ನು ನೋಡಬಹುದು.

 

http://www.deccanherald.com/content/39953/here-lies-bengaluru-inscription.html

http://www.hindu.com/2004/08/20/stories/2004082016400300.htm

 

ಹಾಗಾಗಿ ವೀರಬಲ್ಲಾಳನು ಹುಟ್ಟುವ ಮೊದಲೇ ಬೆಂಗಳೂರು ಎಂಬ ಹೆಸರು ಬಳಕೆಯಲ್ಲಿತ್ತು.

 

ಹಾಗಿದ್ದರೆ ಬೆಂಗಳೂರು ಎಂಬ ಪದದ ನಿಷ್ಪತ್ತಿ ಏನಿರಬಹುದು?

 

  ನನ್ನ ಊಹೆ ಹೀಗಿದೆ:

 

 ಅಚ್ಚ ಕನ್ನಡದಲ್ಲಿ "ಬೇಂಗ" ಎಂದರೆ ಶ್ರೀಗಂಧ. ಬೆಂಗಳೂರು ಎಂದರೆ ಶ್ರೀಗಂಧವಿರುವ ಊರು ಎಂಬ ಹೆಸರು ಬಂದಿರಬಹುದು. ಶಾಸನ ದೊರೆತಿರುವ ಬೇಗೂರು ಹೊಸೂರು ರಸ್ತೆ ಮತ್ತು ಬನ್ನೇರುಘಟ್ಟ ರಸ್ತೆಯ ನಡುವೆ ಇದೆ. ಬನ್ನೇರುಘಟ್ಟ ಆಗೆಲ್ಲ ದಟ್ಟ ಕಾಡು (ಈಗಲೂ ಸಹ. ಆದರೆ "ದಟ್ಟ" ಅಲ್ಲ!) ಈ ಜಾಗೆಯಲ್ಲಿ ಶ್ರೀಗಂಧದ ಮರಗಳ ಬೆಳವಣಿಗೆಯ ಸಾಧ್ಯತೆ ಇದೆ.

 

 ಅಲ್ಲದೇ ಬೇಗೂರು ತಾಣವು ತಮಿಳುನಾಡು, ಆಂಧ್ರ, ಕರುನಾಡು ಕೂಡುವ ಬಿಂದು. (junction point). ಈ ಕೂಡುತಾಣದಿಂದಲೇ ಇತರೆಡೆಗೆ ಶ್ರೀಗಂಧದ ಸಾಗಣೆ ಆಗುತ್ತಿರಬಹುದು. ಕರುನಾಡು ಶ್ರೀಗಂಧದ ರಫ್ತಿನಲ್ಲಿ ಮೊದಲಿನಿಂದಲೂ ಪ್ರಸಿದ್ಧಿ. ಹಾಗಾಗಿ ಈ ಜಾಗಕ್ಕೆ ಬೇಂಗಳೂರು ಎಂಬ ಹೆಸರಿದ್ದು ಆಡುಮಾತಲ್ಲಿ ಬೆಂಗಳೂರು ಆಗಿರಬಹುದು.

 

 "ಸಂಡು" ಎಂದರೂ ಸಹ ಶ್ರೀಗಂಧ. ಸಂಡು>ಚಂಡು>ಚಂದು>ಚಂದನ ಆಗಿರಬಹುದು ಎಂದು ಕೆಲ ಊಹೆಗಳಿವೆ. "ಸಂಡೂರು" ಎಂಬ ಊರು ಬಳ್ಳಾರಿ ಜಿಲ್ಲೆಯಲ್ಲಿದೆ. ಇಲ್ಲಿ ಶ್ರೀಗಂಧದ ಬೆಳವಣಿಗೆ ಇತ್ತೇ ಎಂಬುದರ ಬಗ್ಗೆ ನನಗೆ ಹೆಚ್ಚಿನ ತಿಳಿಮೆಯಿಲ್ಲ. ಬಲ್ಲವರು ತಿಳಿಸಬೇಕಾಗಿ ಕೊರಿಕೆ.

 

 ಎರಡೂ ಊರಿನ ಪದನಿಷ್ಪತ್ತಿಯು ನನ್ನ ಊಹೆ. ಇದರ ಬಗ್ಗೆ ಆಕ್ಷೇಪ ಅಥವಾ ಪ್ರಶ್ನೆಗಳಿದ್ದರೆ ಸ್ವಾಗತ. ಬೇರೆ ನಿಷ್ಪತ್ತಿಯ ಸಾಧ್ಯತೆಗಳಿದ್ದರೆ ಬಲ್ಲವರು ದಯವಿಟ್ಟು ತಿಳಿಸಬೇಕು.

 

 credits: ಬರಹಕ್ಕೆ ಬರತ್ (ವೈಭವ) ಅವರ ಬೆಂಬಲ ಪಡೆದಿರುತ್ತೇನೆ.