ತಾರೆಯರ ಒಲವೇ ಸಾಕ್ಷಾತ್ಕಾರ....

ತಾರೆಯರ ಒಲವೇ ಸಾಕ್ಷಾತ್ಕಾರ....

 


ನಮ್ಮ ಹಳೆ ನಟಿಯರು ಅದೆಷ್ಟು ಚೆಂದ ಅಂತೀರಾ. ಈಗಿನ ನಾಯಕಿಯರನ್ನ   ಅವರಿಗೆ ಹೋಲಿಸಲೂ ಸಾಧ್ಯವೇಯಿಲ್ಲ. ಅಷ್ಟು ಚೆಂದ  ಅವರ ಸೌಂದರ್ಯ. ಅವರ ನಡೆ.ನುಡಿ..ಹಾವ-ಭಾವ. ಕಣ್ಣರಳಿಸುವ ಚೆಲುವು. ಈಗಲೂ ಒಂದು ಅದ್ಭತು ಕಲ್ಪನೆನೇ ಬಿಡಿ. ಇಂತಹ ಕಲಾವಿದರಲ್ಲಿ ನಮ್ಮ ಕನ್ನಡತಿಯರು ಅನೇಕರು. ಬಿ.ಸರೋಜಾ ದೇವಿಯಂತಹ ಚೆಲುವಾಂತ ಚೆಲುವೆಯನ್ನ ಅನೇಕರು ಮೆಚ್ಚಿದ್ದಾರೆ. ಕನ್ನಡದ ನೆಲದಲ್ಲಿ ಹುಟ್ಟಿದ ಜಮುನಾ ಕೂಡ ಅಂದ-ಚೆಂದಕ್ಕೆ ಒಂದು ಸಾಕ್ಷಾತ್ಕಾರ. ಹರಿಣಿಯಂತ ನಟಿಯೂ ಸಹ ಇದೇ ಸಾಲಿಗೆ ಸೇರುವ ಮತ್ತೊಂದು ಸುಂದರ ಶಿಲ್ಪ. ಕನ್ನಡತಿಯಲ್ಲದ ಅಗಿನ  ಡಾ.ಅಂಜಿಲೀದೇವಿ ಸಹ ಈ ಸಾಲಿನ ಮತ್ತೊಂದು ಸುಂದರ ಸ್ಪರ್ಶ..


ಈ ಅಂದದ ಗೊಂಬೆಗಳಿಗೆ ಈಗ ವಯಸ್ಸಾಗಿದೆ. ಆ ಕಾಲದ ಚಿತ್ರ ರಸಿಕರ ಮನದಲ್ಲಿ ಹಾಗೇ ಉಳಿದಿರುವ ಈ ಕಲಾಮಣಿಗಳ ಮೊಮ್ಮಕ್ಕಳು ಬೆಳದು ನಿಂತಿದ್ದಾರೆ.ಇಷ್ಟಂದ್ಮೇಲೆ ಅದೆಷ್ಟು ವಸಂತಗಳು ಕಳೆದು ಹೋಗಿವೆ ಅಂತಹ ಊಹಿಸಿಕೊಳ್ಳಿ. ಆದ್ರೂ, ಒಂದು ಸತ್ಯ ರೀ..ಕಲಾವಿದರಿಗೆ ವಯಸ್ಸೇ ಆಗೋದಿಲ್ಲ. ಪದ್ಮಭೂಷಣ ಡಾ.ಬಿ.ಸರೋಜಾ ದೇವಿಯವರನ್ನ ನೋಡಿ ಅದೇ ಚೆಲುವು ಕಂಗೊಳಿಸುತ್ತದೆ.ಅದೇ ಕಲಾಸಕ್ತಿ   ಉಕ್ಕುತ್ತದೆ...
ಹರಿಣಿಯವರನ್ನ ನೋಡಿದಾಗಲೂ ಇದೇ ಭಾವ ಮೂಡುತ್ತದೆ. ಅದೇ ಪುರಾಣ ಚೆಲುವು..ಅದೇ ಪುರಾತನ ಸಭ್ಯತೆ ಎದ್ದು ಕಾಣುತ್ತದೆ. ಜಮುನಾ ಅವರು ಸ್ವಲ್ಪ ಬದಲಾಗಿದ್ದಾರೆ. ಸಾಕ್ಷಾತ್ಕಾರದ ಜಮುನಾ ಇವರೇ ನಾ ಅಂತಾ ಒಂಚೂರು ಅನುಮಾನ ಬರುತ್ತದೆ. ಆದ್ರೆ, ಅದೇ ಜಮುನಾ ಮಾತಿಗಳಿದರೆ ಮುಗಿಯಿತು...


ಹಳೆ ದಿನಗಳು ಹಚ್ಚ ಹಸಿರಾಗುತ್ತವೆ. ಅಷ್ಟೊಂದು ಸುಂದರವಾಗಿಯೇ ವಾಕ್ಯಗಳ ಜೋಡಣೆ ಅವರ ಮಾತಲ್ಲಿ ಇರುತ್ತದೆ. ಇದೇನೋ ಸರಿ, ಇವರೆಲ್ಲ ನಿಮಗೆಲ್ಲಿ ಸಿಕ್ಕಿದರು ಅನ್ನೋ ಪ್ರಶ್ನೆ ನಿಮಗೆ ಈಗಾಗಲೇ ಮೂಡಿರಬಹುದು. ಹೌದು....! ಬಿ.ಸರೋಜಾ ದೇವಿ ಯವರು ಈ ಮೂವರು ತಾರೆಯರನ್ನ  ಒಟ್ಟಿಗೆ ಸೇರಿಸುವ ಕೆಲಸ ಮಾಡಿದ್ದರು.ತಮ್ಮದೇ ಹೆಸರಲ್ಲಿ ನೀಡುವ ಪದ್ಮಭೂಷಣ ಡಾ.ಬಿ.ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಮಭದಲ್ಲಿ ಇವರೆಲ್ಲ ಒಂದೇ ವೇದಿಕೆಯಲ್ಲಿ ಮಿನುಗುತ್ತಿದ್ದರು...


ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಈ ಹಳೆ ತಾರೆಯರ ಧನ್ಯ ಸಂಗಮ ಕಪ್ಪು-ಬಿಳುಪು ಚಿತ್ರದಷ್ಟೇ ಸುಂದರವಾಗಿತ್ತು.ಇಂತಹ ಒಂದು ವೇದಿಕೆಯನ್ನ ಈ ನಟಿಯರು ಚೆನ್ನಾಗಿಯೇ ಬಳಸಿಕೊಂಡರು. ತಮ್ಮ  ಆ ದಿನಗಳ ಮಧುರ...ಮಧುರ  ಆ ಮಂಜುಳಗಾನ ದಂತಹ ಸವಿ ಸವಿ ನೆನಪಿನ ಬುತ್ತಿಯನ್ನ ಇಲ್ಲಿ ಬಿಚ್ಚಿಟ್ಟರು.ಬಿ.ಸರೋಜಾ ದೇವಿಯಂತು ತಮ್ಮ ಈ ನೆಚ್ಚಿನ ನಟಿಯರಿಂದ  ಏನೆಲ್ಲ ಕಲೆಯನ್ನ ಕಲಿತೆಯಂತ ಹೇಳಿಕೊಂಡ್ರು. ಮದ್ರಾಸ್ ನ ಆ ದಿನಗಳಲ್ಲಿ ಒಂದೇ ಕಡೇ ಹಲವು ಚಿತ್ರಗಳು ಶೂಟಿಂಗ್ ಆಗ್ತಿದ್ದವು.ಇಂತಹ ದಿನಗಳಲ್ಲಿ ಸರೋಜಾ ದೇವಿಯವರು ಡಾ.ಅಂಜಿಲಿದೇವಿಯರರಿಂದ ಸಾಕಷ್ಟು ಅಭಿನಯವನ್ನ ಕಲಿತಿದ್ದಾರೆ. ಹಾಗಂತ  ಅಂಜಿಲಿದೇವಿ ಸರೋಜಾ ಅವರ ಗುರುಗಳಲ್ಲ. ಸ್ಟುಡಿಯೋದಲ್ಲಿ ಚಿತ್ರೀರಕಣದ ವೇಳೆ ಅಲ್ಲಿಗೆ ಹೋಗಿ ನಟನೆಯ ತಿಳಿದುಕೊಂಡಿದ್ದಾರೆ.


ಅಂಜಿಲಿಯಮ್ಮನ ಥರವೇ ಹರಿಣಿ..ಜಮುನಾ ಅವರ ಕಲಾರಾಧನೆ ಮನೋಜ್ಞ ಅಭಿನಯ ಸರೋಜಾದೇವಿಯರಿಗೆ ಸ್ಪೂರ್ತಿಯಾಗಿದೆ. ಇದೇ ಒಂದು ಒಲವಿನಿಂದಲೋ ಏನೋ. ಸರೋಜಾ ದೇವಿಯವರು ತಾವು ದುಡಿದ ದುಡ್ಡಿನಲ್ಲಿಯೇ ತಮ್ಮ ಹೆಸರಿನ ರಾಷ್ಟ್ರ ಪ್ರಶಸ್ತಿಯನ್ನ ನೀಡಿದ್ದಾರೆ.ತಲಾ ಒಂದೊಂದು ಲಕ್ಷ ನಗದು ಹಣವನ್ನೂ ನೀಡಿ ಈ ಮೂವರು ತಾರೆಯರನ್ನ ಗೌರವಿಸಿದ್ದಾರೆ..


ಇವರ ಕಾರ್ಯ ಇದೇ ರೀತಿನೇ ಮುಂದುವರೆಯಲಿದೆ. ಭಾರತೀಯ ವಿದ್ಯಾಭವನ ಸರೋಜಾ ದೇವಿ ಇಲ್ಲದೇ ಇದ್ದರೂ ಸಹ ಮಹಿಳಾ ಕಲಾವಿದೆಯರನ್ನ ಹುಡುಕಿಕೊಂಡು ಸೂಕ್ತ ವ್ಯಕ್ತಿಗಳಿಗೆ ಪದ್ಮಭೂಷಣ ಸರೋಜಾ ದೇವಿ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಲಿದೆ. ಈ ಒಂದು ಹೊಸ ಹೆಜ್ಜೆ ಸರೋಜಾ ದೇವಿಯವರ ಚಿತ್ರಪಯಣದಲ್ಲಿಯ ಕಲಾರಾಧನೆಯ ಹೊಸ ಸಾಕ್ಷಾತ್ಕಾರದ ಪ್ರತೀಕದಂತಿದೆ....


-ರೇವನ್ ಪಿ.ಜೇವೂರ್

Rating
No votes yet

Comments