’ಐ ಆರ್ ಎಜ್ಯುಕೇಷನ್’ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೧
(೬೩)
"ಎಂಥಾ ಹೀನಾಯಮಾನವಾದ ಜಾಗವಿದು. ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ಆಸ್ಪತ್ರೆ. ಒಂದು ಸಣ್ಣ ಅಪಘಾತಕ್ಕೆ ಇಲಾಜು ಇಲ್ಲವಲ್ಲ. ಟಾಗೂರ್ ಸ್ವರ್ಗದಲ್ಲಿದ್ದರೂ ನರಕದ ಕೋಣೆಯೊಂದನ್ನು ಕೂಡಲೆ ಹೊಕ್ಕುವಂತಾಗಲಿ".
"ಶಾಂತಿನಿಕೇತನದಿಂದ ಬೆಂಗಳೂರಿಗೆ ಬರುವ ರೈಲು ಕಾಯುತ್ತ, ನಿತ್ಯದ ಐದುಗಂಟೆ ಕಾಲ ಲೇಟ್ ಆಗುವುದನ್ನೂ ದಾಟಿದ್ದೆವು. ಮಧ್ಯರಾತ್ರಿ ಹನ್ನೆರಡೂವರೆ. ಭೋಲ್‍ಪುರ ರೈಲುನಿಲ್ದಾಣದಲ್ಲಿ ಇದ್ದವರು ಒಂದತ್ತು ಮಂದಿ. ಅದರಲ್ಲಿ ಏಳು ಜನ ಮಲಗಿದ್ದರು. ಅವರೆಲ್ಲ ಭಿಕ್ಷುಕರು, ಕೂಲಿಗಳು ಮತ್ತು ಅಂಗಡಿಯವರು. ನಾನು ಮತ್ತು ಸುರೇಶ ಮಾತ್ರ ಕಾಯುತ್ತಲೇ ಕುಳಿತೆವು. ಹಿಂದಿರುಗಿ ಕಲಾಭವನಕ್ಕೆ ಹೋಗುವ ಮಾತೇ ಇರಲಿಲ್ಲ. ಹಾಗೇ ಪ್ಲಾಟ್‍ಫಾರ್ಮಿನಲ್ಲಿ ಅತ್ಯಂತ ಶುದ್ಧವಾಗಿದ್ದ ಜಾಗದಲ್ಲಿ, ಹೆಚ್ಚು ಬಿಳಕಿದ್ದ ಹಾಗದಲ್ಲಿ ನಾವಿಬ್ಬರೂ ಹಾಗೇ ತೂಕಡಿಸಿ, ಉರುಳಿಕೊಂಡೆವು. ರೈಲು ಬರಲು ಇನ್ನೂ ಎರಡು ಗಂಟೆಕಾಲವಿತ್ತು. ನಾವಿಬ್ಬರೂ ಪರಸ್ಪರ ರೈಲು ಬಿಟ್ಟು ಬಿಟ್ಟು ಸಾಕಾಗಿತ್ತು."
"ಏನಾಯ್ತು ಅಂತ ಕೇಳ್ತೀರ! ಗೆಳೆಯ ಚಂದ್ರಹಾಸ ಗ್ರಾಫಿಕ್ ವಿಭಾಗದಲ್ಲಿ ಲಿಥೊ-ಕಲ್ಲಿನ ಮೇಲೆ ಚಿತ್ರಬರೆದು, ಪ್ರಿಂಟ್ ತೆಗೆವ ಸಲುವಾಗಿ ಕಲ್ಲನ್ನು ಎತ್ತಿ, ಜಾರಿಸಿಕೊಂಡ. ಆತನ ಎರಡು ಅಂಗೈಗಳ ಮೇಲೆ ಐವತ್ತು ಕೇಜಿ ತೂಕದ ಕಲ್ಲು ಬಿತ್ತು. ಅಲ್ಲಿಗೆ, ತಲಾ ಒಂದೊಂದು ಬೆರೆಳಿಗೆ ಎಷ್ಟಾಯಿತು, ತೂಕ? ಐದು ಕೇಜಿಯಾಯಿತು. ಪ್ರತಿ ಕೈಬೆರಳಿನ ಮೂಳೆಯು ತುದಿಯಲ್ಲಿ ಚಿಪ್ಪೊಡೆದಿದೆ. ಆತ ಉತ್ತರ ಧೃವದಲ್ಲಿರುವಂತೆ ನಡುಗುತ್ತಿದ್ದಾನೆ. ಏನಾದರೂ ಕೂಡಲೇ ಮಾಡಿ ಎಂದು ಹೇಳಿದೆವು. ಅಲ್ಲಿ ನೈಟ್ ಡ್ಯೂಟಿಯಲ್ಲಿದ್ದ ಡಾಕ್ಟರಿಣಿ ಸ್ವತಃ ನಡುಗತೊಡಗಿದಳು. ಆಕೆಯ ಕೈಬೆರಳ ಸ್ಥಿತಿಗೂ ಚಂದ್ರನ ಕೈಬೆರಳ ಸ್ಥಿತಿಗೂ ಯಾವುದೇ ವ್ಯತ್ಯಾಸವಿಲ್ಲದಂತಾಗಿತ್ತು"
"ಕರಕ್ಟ್. ಐದು ಗಂಟೆಗೆ ಎಚ್ಚರವಾಯಿತು. ಎದ್ದು ನೋಡುತ್ತೇನೆ. ನನ್ನ ಪಕ್ಕ ಅನಿಲ್ ಮಲಗಿದ್ದಾನೆ. ಸುತ್ತಲೂ, ಬೃಹತ್ತಾದೊಂದು ಆಯಸ್ಕಾಂತಕ್ಕೆ ಆಕರ್ಷಿತವಾಗುವ ಕಬ್ಬಿಣದ ಕಂಬಗಳಂತೆ ಕಳ್ಳಕಾಕರು, ಪಿಕ್‍ಪಾಕೆಟಿಗರು, ಭಿಕ್ಷುಕರು, ತೊನ್ನು ಬಂದವರು -- ಎಲ್ಲರೂ ದಿನಪತ್ರಿಕೆಗಳನ್ನು ಹಾಸಿಕೊಂಡು ನಮ್ಮಿಬ್ಬರ ಸುತ್ತಲೂ ಮಲಗಿಬಿಟ್ಟಿದ್ದಾರೆ, ಯಾವುದೋ ಜನ್ಮದ ನಮ್ಮ ನೆಂಟರೋ ಎಂಬಂತೆ".
"ಕೊನೆಗೆ ಆಕೆಯಿಂದಲೇ ಮುಖ್ಯ ವೈದ್ಯನ ಅಡ್ರೆಸ್ ಬರೆಸಿಕೊಂಡು, ಸರಿರಾತ್ರಿಯಲ್ಲಿ ಸೈಕಲ್ ರಿಕ್ಷಾದಲ್ಲಿ ಹುಡುಕಿ ಹೊರಟೆವು. ಮುಖ್ಯ ವಿಳಾಸದ ಬಳಿ ಬಂದು ಮೈನಸ್ ಝೀರೋ ಕ್ಯಾಂಡಲ್ ಬೆಳಕಿನ ಬೀದಿದೀಪದಲ್ಲಿ ಮನೆ ನಂಬರನ್ನು ನೋಡುತ್ತೇವೆ. ಅದು ಡಾಕ್ಟರಳ ಹಸ್ತಾಕ್ಷರದಲ್ಲಿದ್ದುದ್ದರಿಂದ ೦೯ಕ್ಕೂ ೬೯ಕ್ಕೂ ವ್ಯತ್ಯಾಸವೇ ತಿಳಿಯದಂತಾಗಿತ್ತು. ಆ ಎರಡು ವಿಳಾಸಗಾಳ ನಡುವಣ ವ್ಯತ್ಯಾಸ ಹತ್ತು ಕಿಲೋಮೀಟರ್, ಮೈಲಿಗೆ ನಾಲ್ಕು ಮನೆಯಂತಿದ್ದ ಶಾಂತಿನಿಕೇತನದಲ್ಲಿ. ಆದ್ದರಿಂದಲೇ ಜನಜಂಗುಳಿಯ ಮೈಲಿಗೆಯೂ ಅದಕ್ಕಿಲ್ಲ!’
"ಆಮೇಲೆ ಗೆಳೆಯ ಡೋರ‍್ಮನ್ ಬಂದು ಸೇರಿಕೊಂಡ. ಡೋರ‍್ಮನ್‍ಗೆ ಕನ್ನಡದಲ್ಲಿ ಸೂಕ್ತ ಪದವನ್ನು ಹುಡುಕಿದಲ್ಲಿ ಆತ ಯಾರೆಂದು ನಿಮಗೆ ಗೊತ್ತಾಗಿಬಿಡುತ್ತದೆ. ಅಷ್ಟರಲ್ಲಿ ಎರಡು ಲೀಟರ್ ನೀರಿನ ಬಾಟಲಿಯ ತುಂಬ ನೀರು ತುಂಬಿತ್ತು. ಹೆಚ್ಚೂ ಕಡಿಮೆ ನಲವತ್ತು ಗಂಟೆ ಕಾಲದ ಪ್ರಯಾಣದಲ್ಲಿ ಈ ನೀರಿನ ಬಾಟಲಿಯೇ ನಮಗೆ ಮುಖ್ಯ ಆಧಾರ, ಬೇಸರ ಕಳೆಯಲು. ಜಿನ್ ಅಥವ ವೋಡ್ಕ ಅದರಲ್ಲಿ ಸೂಕ್ತ ಅಳತೆಯಂತೆ ಬೆರೆಸಲ್ಪಡುತ್ತಿತ್ತು. ವಾಸನೆ ಬರದ, ಅನುಮಾನ ತರದ ಕುಡಿತ ರೈಲುಬಂಡಿಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಅನುಸರಿಸುವ, ಅನುಸರಿಸಲು ಮುಗ್ಧರಾಗಿದ್ದರೆ ಅನುಗಾಲಕ್ಕೂ ಅನುಸರಿಸಬಹುದಾದ ಕ್ರಮವಿದು"
"ನಾವು ಬೆಳಿಗ್ಗೆ ರೈಲಿನಲ್ಲಿ ಕುಳಿತು ದಿನವಿಡೀ ಕುಡಿದು ಚಿತ್ತಾದೆವು. ರಾತ್ರಿ ಟಿ.ಟಿ ಬರುವಾಗ ನೆನಪಾಯಿತು ನನ್ನದು ರಿಸರ್ವ್ಡ್ ಟಿಕೆಟ್ ಅಲ್ಲವೆಂದು. ನನಗೆ ಮೊದಲೇ ಪೂರ್ವಾಗ್ರಹದ ನಡುಕ. ಟಿಟಿಯನ್ನು ನೋಡುತ್ತಲೇ ಯಾವುದೋ ಸ್ಟೇಷನ್ ಬರುತ್ತಲೇ ಹೊರಗೆ ಓಡಿಬಿಟ್ಟೆ."
"ಕೊನೆಗೂ ಡಾಕ್ಟರ್ ಬಂದರು. ನಾವು ಏನೂ ಮಾಡುವಂತಿಲ್ಲ. ಬರ್ದ್ವಾನಕ್ಕೆ ಹೋಗಲು ಆಂಬುಲೆನ್ಸ್ ರೆಡಿಯಿತ್ತು. ಕ್ಲೀಷೆಯೊಂದನ್ನು ಬಳಸಿ ಹೇಳುವುದಾದರೆ ಅದು ಪಂಕ್ಚರ್ ಆಗಿತ್ತು. ಕ್ಲೀಷೆ ನಿಜವಾಗುವ ಸಮಯವದು--ಕಲ್ಲು ಕರಗುವ ಸಮಯದಂತೆ, ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ, ಆಂಬುಲೆನ್ಸ್ ಪಂಕ್ಚರ್ ಆದ ಸಮಯವದು"
"ಆಮೇಲೆ?"
"ನಾನು ಮುಂದುವರೆಸುವ ಡೋರ‍್ಮನ್‍ನ ಸಾಹಸ. ಮಧ್ಯಾಹ್ನ ಸ್ಟೇಷನ್ ಒಂದರ ಬಳಿ ಹಿಜಡಾಗಳು ಒಳಬಂದರು. ಡೋರ್ ಮಲಗಿದ್ದ. ಇವನೇ ನಮ್ಮ ಬಾಸ್ ಇವನನ್ನು ಕೇಳಿ ಸಾಕಷ್ಟು ರೊಕ್ಕ ಕೊಡ್ತಾನೆ ಅಂತ ನಾನೂ ಸುರೇಶ ಅವರುಗಳಿಗೆ ಹೇಳಿ, ಹೊರಕ್ಕೆ ಓಡಿ, ಕಿಟಕಿಯ ಮೂಲಕ ಡೋರ್ ಮೇಲೆ ಹಿಜಡಾಗಳ ದಾಳಿ ನೋಡುತ್ತ ಭಲೇ ಮಜಾ ತೆಗೆದುಕೊಂಡೆವು"
"ಮುಂದಿಂದು ನಾನು ಹೇಳ್ತೇನೆ. ಸಂಜೆ ಟಿಟಿಯನ್ನು ನೋಡುತ್ತಲೇ ಡೋರು ಯಾವುದೋ ಸ್ಟೇಷನ್ನಿನ ಬಳಿ ಓಡಿಬಿಟ್ಟ, ಹೊರಕ್ಕೆ. ಯಾವುದೋ ಬೋಗಿಯಲ್ಲೋ ಬಾಥ್‍ರೂಮಿನಲ್ಲೋ ಇರಬಹುದು ಎಂದು ರಾತ್ರಿ ಹನ್ನೊಂದರವರೆಗೂ ಕಾದೆವು. ಆಮೇಲೆ ಚಿಂತೆ ಹತ್ತಿತು. ರಾತ್ರಿಯೆಲ್ಲ ಆತ ಬರಲಿಲ್ಲ."
"ನೋಡಿ. ನಮ್ಮ ಚಂದ್ರಹಾಸ ಗಟ್ಟಿಗ. ಈಗಲೂ ಗುಲಬರ್ಗದ ಅಂದಾನಿಯವರ ಕಲಾಶಾಲೆಯಲ್ಲಿ ಗ್ರಾಫಿಕ್ ಉಪನ್ಯಾಸಕನಾಗಿದ್ದಾನೆ. ಪ್ರಿಂಟ್‍ಗಳನ್ನು ಈಗಲೂ ತೆಗೆಯುತ್ತಾನೆ. ಶಾಂತಿನಿಕೇತನದಲ್ಲಿ ಭೂತವಾಗಿ ಕಂಡದ್ದು, ಬರ್ಡ್ವಾನದಲ್ಲಿ ಕೋತಿಯಾಗಿ ಕಂಡಿತು, ಆತನ ಸಮಸ್ಯೆ. ನಾಳೆ ರಾತ್ರಿಯ ಹೊತ್ತಿಗೆ ಕಲಾಭವನಕ್ಕೆ ವಾಪಸ್ಸಾಗಿದ್ದ."
"ಬೆಳಿಗ್ಗೆ ಯಾವುದೋ ದೊಡ್ಡ ಸ್ಟೇಷನ್ನಿನಲ್ಲಿ ಪ್ರತಿಯೊಂದು ಭೋಗಿಯನ್ನೂ ಹುಡುಕಿದೆವು, ಡೋರನಿಗೆ. ಆತನ ಬಳಿ ನಯಾ ಪೈಸೆ ಇರಲಿಲ್ಲ. ನಾವೆಲ್ಲ ಕಾಸಿಲ್ಲದವರಾಗಿದ್ದರೂ ಆತ ಮಾತ್ರ ದಟ್ಟದರಿದ್ರ, ಯಾವಾಗಲೂ. ಪಾಪ ಅಂತ ಸುರೇಶ್ ಮುನ್ನೆಚ್ಚರಿಕೆಯಾಗಿ ಇಡ್ಲಿ ವಡೆ ಕಟ್ಟಿಸಿಕೊಂಡಿದ್ದ ಆತನಿಗಾಗಿ. ಯಾವ ಬೋಗಿಯಲ್ಲಿ ಇರಲಿಲ್ಲ ಆತ. ಏನೋ ಅನುಮಾನವಾಗಿ ಲಗ್ಗೇಜು ಬೋಗಿಯಲ್ಲಿ ಬಾಗಿ ನೊಡಿದೆವು."
"ಆಗಿನಿಂದ, ಕೈಬೆರೆಳುಗಳ ಗಾಯಗಳು ವಾಸಿಯಾಗುವವರೆಗೂ ಬೆಂಗಾಲಿ ಗೆಳೆತಿಯರಾದ ನ್ಯಾಕಾಗಳ ಉಪಾಚಾರವೇನು ಚಂದ್ರನಿಗೆ. ನ್ಯಾಕ ಎಂದರೆ ಬಿತ್ತರಿ ಎಂದರ್ಥ. ಊಟ ಮಾಡಿಸುವವರೂ ಅವರೇ, ಕೈಬಾಯಿ ತೊಳೆಯಿಸುವವರೂ ಅವರೇ, ಪ್ಲೇಟು ಲೋಟ ತೊಳೆವವರೂ ಅವರೆ, ಗೊತ್ತ. ಚಂದ್ರ ಬೆರೆಳಿಗೊಂದರಂತೆ ಹತ್ತು ಗೆಳತಿಯರ ಸೇವೆ ಪಡೆದ ಹತ್ತು ವಾರ ಕಾಲ."
"ಪುಣ್ಯಕ್ಕೆ, ಅವರುಗಳ ಸೇವೆ ಪ್ಲೇಟು-ಲೋಟ-ಕೈ-ಬಾಯಿ ತೊಳೆಯುವಲ್ಲಿಗೇ ನಿಂತಿತಷ್ಟೇ?"
"ಅಲ್ಲಿ ಕಂಡಿತು ಆ ಅದ್ಭುತ ದೃಶ್ಯಃ ಒಂದು ಬಂಡಿಗಟ್ಟಲೆ ಇದ್ದಿಲ ರಾಶಿ ಇದೆ ಎಡಕ್ಕೆ. ಅದರ ಬಲ ಪಕ್ಕದಲ್ಲಿ ಯಾರೋ ಬಂಜಾರ ಅಲೆಮಾರಿಗಳು ಯದ್ವಾತದ್ವಾ ಮಲಗಿದ್ದಾರೆ. ಅಲ್ಲಿ, ಆ ಇದ್ದಿಲ ರಾಶಿಯ ಮೇಲೆ ಡೋರನನ್ನು ಹೋಲುವ ಆದರೆ ಚಿಕ್ಕವಯಸ್ಸಿನಲ್ಲೇ ಆತನಿಂದ ಭಿನ್ನಗೊಂಡು ಆಫ್ರಿಕದಲ್ಲಿ ಬೆಳೆದಂತ ವರ್ಣದ ಆತನ ಅವಳಿ ಸೋದರನಂತಹವನೊಬ್ಬ ಕುಳಿತಿದ್ದಾನೆ."
"ಚಿಂತೆ ಬೇಡ ಗೆಳೆಯ. ಆ ಸೇವೆ ಸಲ್ಲಿಸಿದ ನ್ಯಾಕಾಗಳಲ್ಲಿ ನಿನ್ನ ತಂಗಿಯರಲ್ಯಾರೂ ಖಂಡಿತ ಇರಲಿಲ್ಲ ಬಿಡು!"
"ನಾನೂ ಸುರೇಶ್ ಮತ್ತೆ ಮುಂದಿನ ಬೋಗಿಯತ್ತ ಹೊರಟೆವು. ಯಾರೋ ಕೂಗಿದಂತಾಯ್ತು. ಅದೇ ಆಫ್ರಿಕನ್ ಡೋರ‍್ಮನ್. ಅರ್ಧ ಭಾಳೆ ಹಣ್ಣು ತಿನ್ನುತ್ತಿದ್ದಾನೆ ಇದ್ದಿಲ ರಾಶಿಯ ಮೇಲೆ. ಅದರ ಇನ್ನರ್ಧ ಬಲಕ್ಕಿದ್ದ ಬಂಜಾರಿಯೊಬ್ಬಳ ಮಗುವಿನ ಕೈಲಿ ಸಿಪ್ಪೆ ಸಮೇತ ಇದೆ. ಮಗುವಿನಿಂದ ಕದ್ದ ಬಾಳೆಹಣ್ಣು ತಿನ್ನುತ್ತ ಕುಳಿತಿದ್ದ ಈ ನಮ್ಮ ಕಲಾವಿದ ಡೋರ‍್ಮನ್. ಸಿಟ್ಟಾದ ಸುರೇಶ ಅವನಿಗಾಗಿ ತಂದಿದ್ದ ಇಡ್ಲಿವಡೆಯಲ್ಲಿ ಸಿಂಹಪಾಲನ್ನು ಆ ಮುಗುವಿಗಿತ್ತು, ಡೋರ‍್ಮನ್ನನನ್ನು ಎಳೆದುಕೊಂಡೆ ಭೋಗಿಯತ್ತ ನಡೆದ..."
(೬೪)
ಮೇಲಿನ (೬೩) ಬರವಣಿಗೆಯಲ್ಲಿ ಇಟಾಲಿಕ್ಸ್ ಆಗಿರುವ ಪ್ಯಾರಾಗಳನ್ನು ಒಟ್ಟಿಗೆ ಮತ್ತು ಅಂಡರ‍್ಲೈನ್ ಮಾಡಿರುವ ವಾಕ್ಯಗಳನ್ನು ಒಟ್ಟಿಗೆ ಓದಿ. ಎರಡು ವಿಭಿನ್ನ ಘಟನೆಗಳು ನಿಮಗೆ ದೊರಕುತ್ತವೆ. ಆದರೆ ವಾಚಾಳಿತನವನ್ನು ಬಂಡವಾಳ ಮಾಡಿಕೊಳ್ಳಲು ಅವಕಾಶವಿರುವ ಕಲಾಭವನದಲ್ಲಿ, ತರಗತಿಗಳು ಮತ್ತು ಗೆಳತಿಯರಿಲ್ಲದ ಹೊತ್ತಾದ ರಾತ್ರಿಯ ಹೊತ್ತುಗಳ ಬೆಳದಿಂಗಳಲ್ಲಿ ಕಿಟ್ಟಿಪಾರ್ಟಿಗಳಲ್ಲಿ ಮಾತು ಕತೆ ನಡೆಯುತ್ತಿದ್ದುದೇ ಹೀಗೆ! ಒಂದು ಮೂರ್ನಾಲ್ಕು ಜನ ಅಂಡರ‍್ಲೈನ್ ಮಾಡಿದ್ದನ್ನು ಮಾತನಾಡುತ್ತಿದ್ದರೆ, ಒಂದೈದಾರು ಮಂದಿ ಚಂದ್ರಹಾಸನ ಆಸ್ಪತ್ರೆಯ ಸಾಹಸಗಳನ್ನು ವರ್ಣಿಸುತ್ತಿದ್ದರು. ಒಟ್ಟಿಗೆ ಆ ಕಿಟ್ಟಿಪಾರ್ಟಿಗಳು ಮಲ್ಲೇಶ್ವರದ ಸರ್ಕಾರಿ ಕಾಲೇಜಿನ ಮೈದಾನದಲ್ಲಿ ಹತ್ತಾರು ಟೀಮುಗಳು ಕ್ರಿಕೆಟ್ ಆಡುವ ಅದ್ಭುತದಂತೆ, ಗಣೇಶ ಹಬ್ಬದಂದು ಶ್ರೀರಾಮಪುರದ ರಸ್ತೆಯೊಂದರಲ್ಲಿ ನಿಂತಲ್ಲಿ ನಾಲ್ಕಾರು ರಸ್ತೆಗಳಲ್ಲಿ ನಾಲ್ಕಾರು ಹಾಡುಗಳು ಒಟ್ಟಿಗೆ ಸಿಂಕ್ರೊನೈಸ್ ಆಗುವಂತೆ --ಅವರವರಿಗೆ ಅವರವರ ಮಾತುಗಳು ಅರ್ಥವಾಗಿಬಿಡುತ್ತಿತ್ತು. ಯಾರೂ ಸಹ ಡೋರ‍್ಮನ್ನನ ಕೈಬೆರೆಳುಗಳು ಗಾಯವಾದುವೆಂದಾಗಲಿ ಅಥವ ಚಂದ್ರಹಾಸ ರೈಲುಬೋಗಿಯಲ್ಲಿ ಬಂಜಾರ ಮಗುವಿನ ಬಾಳೆಹಣ್ಣು ಕದ್ದನೆಂದಾಗಲೀ ತಪ್ಪರ್ಥ ಮಾಡಿಕೊಳ್ಳುತ್ತಿರಲಿಲ್ಲ.
ಇಂದಿಗೂ ಕಲಾಭವನದ ಕಲಾವಿದರು ಒಟ್ಟಿಗೆ ಸೇರಿದಾಗ, ಇಂತಹ ಮಾತಿನ ಟ್ರಾಫಿಕ್ ಜಾಮ್ ಸಹಜ--ನೋಡುವವರಿಗೆ. ಮಾತನಾಡುವವರಿಗೆ ಮಾತ್ರ. ಅಲ್ಲಿ ಭಾಗವಹಿಸುವವರು ಒಟ್ಟಿಗೆ ಹಿಂದಿ, ಮುರುಕಲು ಇಂಗ್ಲಿಷ್, ಕನ್ನಡ, ಬೆಂಗಾಲಿ ಭಾಷೆಗಳನ್ನೂ ಪ್ರಯೋಗಿಸುತ್ತಿರುತ್ತಾರೆ. ಇದನ್ನೇ ಹೈಯರ್ ಎಜ್ಯುಕೇಷನ್ ಎನ್ನುವುದು. ಸ್ವಲ್ಪ ಬದಲಾವಣೆ ಮಾಡಿಕೊಂಡು "ಐ ಆರ್ ಎಜ್ಯುಕೇಷನ್" ಎನ್ನುತ್ತಿದ್ದೆವು ಕಲಾಭವನದಲ್ಲಿ. ’ನಾನು ಅಥವ ಶಿಕ್ಷಣ’, ಅಥವ ’ನಾನೆಂಬ ಅಹಮ್ಮಿಕೆ ಹೋದಲ್ಲಿ ಮಾತ್ರ ಜ್ಞಾನಾರ್ಜನೆ’ ಕಲಾಭವನದಲ್ಲಿ ಪಡೆದುಕೊಂಡ ಶಾಬ್ದಿಕ ಟ್ರಾಫಿಕ್ ಜಾಮ್‍ನ ಒಂದು ಸ್ಯಾಂಪಲ್ ಈ ಅಧ್ಯಾಯ!!//
(ಚಿತ್ರಗಳುಃ ಲೇಖಕ)