ಅಣ್ಣಾವ್ರಿಗೊಂದು ನುಡಿನಮನ
ಅಣ್ಣಾವ್ರೇ, ಇಂದು ನಮ್ಮೊಂದಿಗಿಲ್ಲ ನೀವು ಎಂದರೆ ನಂಬಲಾಗುತ್ತಿಲ್ಲ
ನಿಮ್ಮ ಪಾತ್ರಗಳ ಗುಂಗಿನಿಂದ ಹೊರಬರಲು ಏಕೋ ಸಾಧ್ಯವಾಗುತ್ತಿಲ್ಲ.
ಬೆಳ್ಳಿತೆರೆಯ "ಬಂಗಾರದ ಮನುಷ್ಯ" ನಿಮಗೆ ಅರ್ಪಣೆ ನನ್ನೀ ಕವನ;
ನೀವು ಕಟ್ಟಿಕೊಟ್ಟ ಬಣ್ಣ-ಬಣ್ಣದ ಕನಸುಗಳಿಗಿದು ನನ್ನ ನುಡಿ ನಮನ.
ಸಾಧು-ಸಂತರಿಗೆ, ಇತಿಹಾಸದ ರಾಜರಿಗೆ ಜೀವ ತುಂಬಿದಿರಿ ನೀವು;
ಕನಕನಾಗಿ ಬಾಗಿಲನು ತೆರೆಯೆಂದು ಬೇಡಿದಾಗ ತಳಮಳಿಸಿದ್ದು ನಾವು.
ಕಾಳಿದಾಸನ "ಮಾಣಿಕ್ಯ ವೀಣೆ"ಯನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ;
ರಣಧೀರ, ಕೃಷ್ಣದೇವರಾಯರಂತೂ ಸದಾ ಮನದಲ್ಲೇ ನೆಲಸಿರುವರಲ್ಲ!
ಮರೆಯಲಾದೀತೇ ಮಣ್ಣಿನ ಜೊತೆ ಮಗುವನ್ನೂ ತುಳಿದ ಕುಂಬಾರನನ್ನು?
ಮಯೂರನ ಕತ್ತಿವರಸೆಯನ್ನು, ಅರ್ಜುನ-ಬಭ್ರುವಾಹನರ ಕಾಳಗವನ್ನು?
ಪಾತ್ರದೊಳಗೊಂದಾಗುತ್ತಿದ್ದ ನಿಮ್ಮಭಿನಯದ ಉತ್ತುಂಗ ಆ "ಹರಿಶ್ಚಂದ್ರ",
ಕಿರೀಟವನ್ನಿಟ್ಟು ಅರಸನುಡುಗೆ ತೊಟ್ಟರಂತೂ ಸಾಕ್ಷಾತ್ ಧರೆಗಿಳಿದ ಇಂದ್ರ!
ಕನ್ನಡವೇ ನನ್ನ ಪ್ರಾಣವೆನ್ನುತ್ತಾ ನಾಡು-ನುಡಿಗಳಿಗಾಗಿ ಹೋರಾಡಿದಿರಿ,
ರಾಜಕೀಯಕ್ಕಿಳಿಯದೆಯೆ ಅಭಿಮಾನಿಗಳೆದೆಯೆಂಬ ರಾಜ್ಯವನು ಆಳಿದಿರಿ.
ಶಾಲೆ-ಆಸ್ಪತ್ರೆಗಳನ್ನೇಕೆ ಕಟ್ಟಿಸಲಿಲ್ಲ? ಎಂದು ಕೇಳಲು ಮನಸ್ಸೊಪ್ಪುತ್ತಿಲ್ಲ;
ಸಾಕು ಬಿಡಿ, ತಲೆಮಾರುಗಳೆರಡರಲ್ಲಿ ಕನ್ನಡದ ಕಿಚ್ಚು ಹೊತ್ತಿಸಿದಿರಲ್ಲ.
ಅಣ್ಣಾವ್ರೇ, ಸಾಕೆನ್ನಿಸಿತೇಕೆ "ರಾಜಕುಮಾರ"ನೆಂಬೀ ಅಮೋಘ ಪಾತ್ರ?
ಮರೆಯಾದರೇನು ನೀವು, ಮನದಲ್ಲಿ ನಿಮ್ಮ ಪಾತ್ರಗಳದ್ದೇ ನಿತ್ಯಚೈತ್ರ.
ಆ ದೇವರಿಗೂ ನೋಡಬೇಕೆನ್ನಿಸಿತೇನೋ ನಿಮ್ಮನ್ನು ಅವನ ಪಾತ್ರದಲ್ಲಿ!
ಪುನಃ ಬಂದುಬಿಡಿ ಬೇಗ, ತೆರವಾಗಿಹುದು ಸ್ಥಾನ ನಮ್ಮ ಹೃದಯಗಳಲ್ಲಿ.