ಮರದ ಸ್ಥಾನ ಪಲ್ಲಟ
ನಾನು ನಿರ್ಧರಿಸಿಬಿಟ್ಟಿದ್ದೆ. ರಾತ್ರಿ ಇವರ ಗೊಣಗು ಕೇಳುತ್ತಿದ್ದಂತೆ ಅಂದುಕೊಂಡಿದ್ದೆ
"ಕತ್ತೆಗೇನು ಗೊತ್ತು ಕಸ್ತೂರಿ ಸುವಾಸನೆ"
ಅಷ್ಟಕ್ಕೂ ರಾತ್ರಿ ಅವರಾಡಿದ ರಂಪಕ್ಕೆ ನಾ ಮಾಡಿದ ತಪ್ಪಾದರೂ ಏನಾಗಿತ್ತು
ನಾನು ಚೆನ್ನಾಗಿ ಹಾಡುವುದೆ ತಪ್ಪೇ? ಇವರೇನು ಸಂಗೀತ ವಿರೋಧಿಗಳೇ?
ಮದುವೆಯಾದ ಎರೆಡೇ ವಾರದಲ್ಲಿ ನಿನ್ನ ಕಂಠ ಸೊಗಸಾಗಿದೆ ಎಂದು ಸಂಗೀತ ಶಾಲೆಗೆ ಸೇರಿಸಿದಾಗ ಅಂದುಕೊಂಡಿದ್ದೆ ಯಾವ ಜನ್ಮದ ಪುಣ್ಯ್ದ ಫಲಾನೋ ಇಂತಹವರು ನನ್ನ ಗಂಡನಾಗಿ ಬಂದಿದ್ದಾರೆ . ಇನ್ನು ಏಳು ಏಳು ಜನ್ಮಕ್ಕೂ ನವೀನೇ ನನ್ನ ಗಂಡನಾಗಿರಲಿ " ಹುಟ್ಟಿದ ಮನೆಯಲ್ಲಿ ಹಾಡು ಹೇಳಿದರೆ ತಪ್ಪು ಎಂಬಂಥ ವಾತಾವರಣ ಇನ್ನು ಸಂಗೀತ ಶಾಲೆ ಕನಸಿನ ಮಾತೇ . ಅಂತಹ ಸಮಯದಲ್ಲಿ ಮದುವೆಯಾದ ಮೇಲೆ ಅದೂ ಮನೆಗೆ ಹಿರಿಸೊಸೆಯಾದ ಮೇಲೂ ತನ್ನನ್ನು ಸಂಗೀತ ಕಲಿಯಲು ಕಳಿಸುವ ಅತ್ತೆಯ ಉದಾತ್ತ ಗುಣ ಮನಸೂರೆಗೊಂಡಿತ್ತು
ಅಂತಹ ಅತ್ತೆ "ಸುನಂದ ಸಂಗೀತ ಅದೂ ಇದೂ ಅಂತ ಕುಣಿದದ್ದು ಸಾಕು ಇನ್ನು ಮೇಲೆ ಮನೆ ಕಡೆ ಗಮನ ಕೊಡು" ಎಂದು ಒರಟಾಗಿ ನುಡಿದದ್ದು ನಿಜಕ್ಕೂ ಬೇಸರ ತಂದಿತ್ತು.
ನವೀನನೂಇತ್ತೀಚಿಗೆ ಕೋಪಿಸಿಕೊಳ್ಳುತ್ತಿದ್ದಾರೆ. "ಯಾವಾಗ ನೋಡಿದರೂ ಹಾಡು ಗಾಯನ ಅಂತ ಓಡಾಡ್ತಾ ಇದ್ದೀಯ ಮದುವೆಯಾಗಿ ಮೂರು ವರ್ಷವಾಯ್ತು ಮನೆಗೊಂದು ಮಗು ಬೇಡವೇ ಅಂತ ಅಮ್ಮ ಕೇಳುತ್ತಿದ್ದಾರೆ" ಸಂಗೀತದಲ್ಲೇ ಮುಳುಗಿ ದ್ದ ನನಗೆ ನಿಜಕ್ಕೂ ಸಂಸಾರ, ಮಕ್ಕಳು ಈ ಬಂಧನ ಯಾವುದೂ ಬೇಡ . ಹಾಗಂತ ಹೇಳಲಾದೀತಾ? ಅಥವ ನಿಜಕ್ಕ್ಕೂ ಅವನ್ನೆಲ್ಲಾ ಬಿಟ್ಟು ಇರಲಾದೀತಾ?
ಸಂಗೀತ ದೈವದತ್ತ ಕಲೆ ಅಂತಹ ಕಲೆ ನನಗೆ ಒಲಿದದ್ದು ನನ್ನ ಅದೃಷ್ಟವೇ . ಆದರೆ ಆ ಸಂಗೀತ ಒಲಿಯಲು ಕಾರಣ ಗುರು ಸಂತೋಷ ಕಾಮತ್ ಅವರಿಂದಲೇ ಸಂಗೀತದ ಒಳ ಹೊರಗು ತಿಳಿದದ್ದು. ನನ್ನನ್ನ ತಿದ್ದಿ ತೀಡಿ ಪೂಜಿಸುವ ಶಿಲ್ಪವನ್ನಾಗಿ ಮಾಡಿದವರು ಕಾಮತ್ ಸಾರ್. ನನ್ನ ಬಾಳಿಗೊಂದು ಸಾರ್ಥಕತೆಯನ್ನ ತುಂಬಿದವರು ಅವರೇ.
ಇತ್ತೀಚಿಗೇಕೋ ಅವರ ಮೇಲಿನ ಭಕ್ತಿ ಜಾಸ್ತಿಯಾಗಿ ಇನ್ನೇನೋ ಆಗುತ್ತಿದ್ದೆ. ಹೌದು ಭಕ್ತಿಯ ಎಲ್ಲೆ ಮೀರಿದರೆ ಅದು ಪ್ರೀತಿಯಾಗುವುದಲ್ಲವೇ. ಮೀರಾ ಆಗಲಿ ಅಕ್ಕಮಹಾದೇವಿ ಆಗಲಿ ತಮ್ಮ ತಮ್ಮ ದೈವಗಳ ಮೇಲಿನ ಭಕ್ತಿಯನ್ನ ಪ್ರೀತಿಯನ್ನಾಗಿ ಮಾರ್ಪಾಡಿಸಿದವರಲ್ಲವೇ?
ಆದರೆ
ಚೆನ್ನ ಮಲ್ಲಿಕಾರ್ಜುನನ್ನು ಧ್ಯಾನ ಮಾಡುತ್ತಲೇ ಇರುವಂತಹ ತದಾತ್ಮತೆ ತನಗಿದೆಯೇ?.
ಕೇಶವನನ್ನೇ ಧ್ಯಾನಿಸುತ್ತಿದ್ದ ಮೀರಾಳ ನಿಸ್ವಾರ್ಥ ಪ್ರೀತಿ ನನ್ನದೇ?
ಹಾಗಿದ್ದಲ್ಲಿ ತಾನು ಮನಸಲ್ಲಿ ಕಾಮತರನ್ನು ಪ್ರೀತಿಸುತ್ತಿದ್ದೇನಾ? ಅದು ಅವರಿಗೂ ಗೊತ್ತಾಗಿರಬೇಕು .
ನೆನ್ನೆ ಅಗಿದ್ದು ಅದೇ ಅವರನ್ನೇ ತದೇಕ ದೃಷ್ಟಿಯಿಂದ ನೋಡುತ್ತಿದ್ದೆ ಪ್ರೀತಿಯ ಉತ್ಕಟೆಯಲ್ಲಿ ಕಂಠ ಬಿಗಿದು ಹೋದಂತೆ ಸ್ವರವೇ ಹೊರಬರುತ್ತಿರಲಿಲ್ಲ. ಕೇವಲ ವೀಣೆಯ ನಾದ ಮಾತ್ರ ಕೇಳುತ್ತಿತ್ತು. ಕಾಮತರು ಒಂದರೆ ಗಳಿಗೆ ನನ್ನನ್ನೆ ನೋಡುತ್ತಿದ್ದು ತಲೆಯನ್ನು ಸವರಿ ಹೊರಟು ಹೋದರು.
ಅದು ನನ್ನನ್ನು ಒಪ್ಪಿಕೊಂಡಂತೆ ಅಲ್ಲವಾ?
ಹಾಗೇನಾದರೂ ಆದಲ್ಲಿ ಕಾಮತರ ಹೆಂಡತಿ ಸರಸ್ವತಿಗೆ ಹೇಗೆ ಮೊಗ ತೋರಿಸಲಿ?
ಇರಲಿ ಅವರು ರುಕ್ಮಿಣಿಯಂತೆ ನಾನು ರಾಧೆಯಂತೆ. ನಾನೇನೋ ದೈಹಿಕ ಬಯಕೆಗಾಗಿ ಅವರ ನೆರಳ ಬಯಸಿ ಹೋಗುತ್ತಿಲ್ಲ . ನನ್ನಲ್ಲಿನ ಸಂಗೀತಾಭಿಲಾಷೆಯಿಂದಾಗಿ . ಅವರ ನೆರಳಲ್ಲಿ ಸಂಗೀತ ಹುಲುಸಾಗಿ ಬೆಳೆಯುತ್ತದೆ ಇಲ್ಲಿ ಸಂಗೀತದ ಗಂಧವೇ ಇಲ್ಲದ ನವೀನ ಅವರ ತಾಯಿ ಇವರೆಲ್ಲರಿಂದ ದೂರಾಗಿ ಹೋಗಲೇ ಬೇಕು.
ಹೀಗೆ ರಾತ್ರಿ ಪೂರ ಯೋಚಿಸಿ ಯೋಚಿಸಿ ನಾನು ನಿರ್ಧರಿಸಿದ್ದೆ . ಕಾಮತರಿಗೆ ಫೋನ್ ಮಾಡಿದೆ
"ಸಾರ್ ನಾನು ನಿಮ್ಮ ಹತ್ತಿರ ಮಾತಾಡಬೇಕು"
"ಯಾವ ವಿಷಯ?"
"ಅಲ್ಲೇ ಬಂದ ನಂತರ ಹೇಳ್ತೀನಿ"
"ಯಾವಾಗ "
"ಈಗಲೇ ಬರ್ತಾ ಇದ್ದೀನಿ"
"ಸರಿ"
ವ್ಯಾನಿಟಿ ಬ್ಯಾಗ್ ಹಿಡಿದು ಕಣ್ಣಿಗೆ ಕಂಡ ಆಟೋ ಹಿಡಿದು ಹೊರಟಿದ್ದೆ ಕಾಮತರ ನೀನಾದ ನಿಲಯಕ್ಕೆ.
ಎದುರಿಗೆ ಬಂದ ನವೀನ ಆಗಲಿ ಅತ್ತೆಗಾಗಲಿ ಉತ್ತರಿಸಬೇಕೆನ್ನುವ ಮನಸೂ ಬರಲಿಲ್ಲ
ಕಾಮತರ ಮನೆಯ ಮುಂದೆಯೇ ನಿಂತಿತು ಆಟೋ
ಕಾಮತರು ಮನೆಯ ಹೊರಗಡೆಯೇ ನಿಂತಿದ್ದರು ಅವರ ಮನೆಯ ಮುಂದೆಲ್ಲಾ ಮರಗಳು ,ಗಿಡಗಳು.
ಕಾಮತರು ಕೈ ಮಣ್ಣು ಮಾಡಿಕೊಂಡಿದ್ದರು
"ಸಾರ್ ಇದೇನು ತೋಟದ ಕೆಲಸಮಾಡ್ತಾ ಇದ್ದೀರಾ ಬೆಳಗ್ಗೆ ಬೆಳಗ್ಗೆ" ಪ್ರಶ್ನಿಸಿದೆ
"ಇಲ್ಲಾ ಸುನಂದ ಅದೇ ಈ ತೆಂಗಿನ ಮರಾನ ಆ ಕೊನೆಯಿಂದ ಕಿತ್ತು ಈ ಕೊನೆಯಲ್ಲಿ ನೆಡೋಣ ಅಂತ"
ನನಗೆ ನಗು ಬಂತು
"ಸಾರ್ ಮರಾನಾ ಯಾರಾದರೂ ಕೀಳ್ತಾರಾ . ಅದೂ ಅಷ್ಟು ಸೊಗಸಾಗಿ ಬೆಳೆದು ಈಗಾಗಲೇ ಕಾಯಿ ಕೊಡ್ತಿರೋ ಮರಾನಾ?" ನಗುತ್ತಲೇ ಪ್ರಶ್ನಿಸಿದೆ
"ಹೌದು ಸುನಂದ . ಅಲ್ಲಿ ಚೆನ್ನಾಗೇ ಬೆಳೀತಾ ಇದೆ. ಆದರೆ ಅದೇನೋ ಈ ಕಡೆ ಹಾಕಿದ್ರೆ ಮತ್ತಷ್ಟು ಚೆನ್ನಾಗಿ ಬೆಳೀಬಹುದೇನೋ ಎಂಬ ನಂಬಿಕೆ ಅದಕ್ಕೆ"
"ಸಾರ್ ಅದು ಹೇಗೆ ಸಾಧ್ಯ . ಈಗ ಆ ಮಣ್ಣಿಗೆ ಹೊಂದಿಕೊಂಡಿರೋ ಮರ ಇಲ್ಲಿ ಹೊಂದಿಕೊಳ್ಳೋಕಾಗಲ್ಲ. ಅದೂ ಅಲ್ಲದೇ ಈಗಾಗಲೆ ಇಷ್ಟೊಂದು ಬೆಳೆದಿರೋ ಮರ ಇಲ್ಲಿ ಇನ್ನೂ ಚೆನ್ನಾಗಿ ಬೆಳೆಯುತ್ತೆ ಅಂತ ಏನು ನಂಬಿಕೆ ಅದು ಬಾಡಿಯೂ ಹೋಗಬಹುದಲ್ಲಾವಾ?
ಪ್ರಶ್ನಿಸುತ್ತಿದ್ದಂತೆ ನನ್ನ ಮನಸಿನಲ್ಲಿನ ಚಂಚಲತೆ ಉತ್ತರ ಸಿಕ್ಕಂತಾಯ್ತು.ಕಾಮತರು ಜಾಣ್ಮೆಯಿಂದ ನನಗೆ ಪಾಠ ಕಲಿಸಿದ್ದರು
"ಸಾರ್ ಆ ತೆಂಗಿನ ಮರ ಅಲ್ಲೇ ಇರಲಿ . ಅದನ್ನು ಕಿತ್ತು ಬೇರೆ ಕಡೆ ಹಾಕಬೇಡಿ " ಎಂದು ಹೇಳಿ ಮತ್ತೆ ಆಟೊ ಹತ್ತಿದೆ.ಆಟೊ ಮನೆ ಕಡೆ ನಡೆಯಿತು.
ಹೋಗುತ್ತಿದ್ದಂತೆ ಕಾಮತರ ತುಟಿಯಂಚಿನ ನಗೆ ಆಟೋವಿನ ಕನ್ನಡಿಯಲ್ಲಿ ಕಂಡಿತು.