ಕೇಳವ್ವ ನಾನೊಂದು ಕನಸು ಕಂಡೆ...
ಕೇಳವ್ವ ನಾನೊಂದು ಕನಸು ಕಂಡೆ...
ಒಂದಿರುಳಾ ಕನಸಿನಲಿ, ಆ ದೈವವೇ ಬಂದಿರಲು....
ನಡೆಸಿದೆ ಮುದದಲಿ ಅವನ ಸಂದರ್ಶನವಾ....
”ಜಗವ ಪೊರೆವ ಭಗವಂತ!
ಇರುವುದೇ ತುಸು ಸಮಯ ನಿನ್ನ ಬಳಿ
ನನಗೆಂದು..ನನ್ನಂತಹವರಿಗೆಂದು?
ನಕ್ಕನಾ ಭಗವಂತ!
”ದಿಕ್ಕುಕಾಲದ ಮಿತಿಯಿಲ್ಲದವ ನಾನು.
ಕೇಳು..ಉತ್ತರಿಸುವೆ” ಎಂದ
”ಭುವಿಯ ಎಂಬತ್ತಾರುಕೋಟಿ ಜೀವರಾಶಿಯಲ್ಲಿ
ಮಾನವನು ನಿನ್ನ ಪರಮಸೃಷ್ಟಿ ಎಂಬುವರು!
ನಿನ್ನ ಪ್ರಾಮಾಣಿಕ ಅನಿಸಿಕೆಯ ತಿಳಿಸುವೆಯಾ?
ಮುಗುಳ್ನಗೆ ಹರಿಸಿದ ಭಗವಂತ,
ಮೃದು ಮಾತುಗಳಲ್ಲಿ ನುಡಿದ
"ಬಾಲ್ಯದಿ ಯೌವನಕ್ಕಾಗಿ ಕೊರಗುವನು
ಯೌವನದಿ ಬಾಲ್ಯವ ನೆನೆಸುವ
ಮತ್ತೆ ಹುಡುಗನಾಗಲು ಹಂಬಲಿಸುವನು
ಚಿತ್ರ ವಿಚಿತ್ರವಲ್ಲವೇ ಇದು?"
"ಹಗಲಿರುಳು ಬೆವರ ಸುರಿಸಿ ಮನವ ಉರಿಸಿ
ದುಡಿದುಡಿದು ಹಣವ ಗಳಿಸುವನು
ಸುಟ್ಟುಬೂದಿಯಾದ ಆರೋಗ್ಯವ ಗಳಿಸಲು
ಹಣದ ಹೊಳೆಯನ್ನೇ ಹರಿಸುವನು!
ಸೋಜಿಗವಲ್ಲವೇ ಇದು?"
"ಕರಾಳ ದಿನಗಳ ಬಗ್ಗೆ ಕಳವಳ ಪಟ್ಟು
ವರ್ತಮಾನವ ಕಳೆದುಕೊಳ್ಳುವನು
ಅಲ್ಲಿಯೂ ಸಲ್ಲದೇ ಇಲ್ಲಿಯೂ ಸಲ್ಲದೆ
ತ್ರಿಶಂಕುವಿನಲ್ಲಿ ನರಳುವನು...
ತಿಳುವಳಿಕೆಯಿಲ್ಲವೇ ಇವನಿಗೆ?"
" ತನಗೆ ಸಾವೇ ಬರಲಾರದೇನೋ ಎಂಬಂತೆ!
ಸೊಕ್ಕಿ ಉಕ್ಕಿ ಉರಿಯುವನು
ಮೆರೆದವರು ಮಣ್ಣು ಮುಕ್ಕಿ ಕಾಲದಿ ಕರಗುವರು
ಹುಟ್ಟಿಯೇ ಇರಲಿಲ್ಲವೇನೋ ಎಂಬಂತೆ!
ಪಾಠವ ಕಲಿಯರೇಕಿವರು?"
ಭಗವಂತನ ನಾಲ್ಕು ಪ್ರಶ್ನೆಗಳಿಗೆ
ಬಸವಳಿದೆ, ಮೌನವಾದೆ
ವರ್ಷಗಳಂತೆ ಕಳೆದವು ಕ್ಷಣಗಳು!
"ಭಗವಂತ! ನಿನ್ನನಿಸಿಕೆ ನಿಜ
ನೆಮ್ಮದಿಯ ಬದುಕ ನಡೆಸುವ
ದಾರಿಯ ತೋರುವೆಯಾ?"
ನಸುನಕ್ಕು, ತಲೆ ನೇವರಿಸಿದ...
"ಪ್ರೀತಿಸು..ಪ್ರೀತಿಸುವುದ ಕಲಿಸು
ಪ್ರೀತಿಯ ಸ್ವೀಕರಿಸು
"ಪ್ರೀತಿ..ಜಗತ್ತನ್ನು ನಡೆಸುವ ಶಕ್ತಿ!"
"ದ್ವೇಷದ ಕಿಚ್ಚು ಮೊದಲು ದಹಿಸುವುದು ನಿನ್ನನ್ನೇ!
ಕ್ಷಮಿಸುವುದ ಕಲಿ. ಕ್ಷಮೆಯು ನಿನ್ನ ಉಸಿರಾಗಿರಲಿ"
"ನೋಯಿಸಬೇಡ! ಗಾಯವಾಗಲು ಕ್ಷಣ ಸಾಕು
ಗಾಯ ಮಾಗಲು ವರ್ಷ ಬೇಕು. ತಾಳ್ಮೆಇರಲಿ"
"ತಾರದು ನೆಮ್ಮದಿಯ ಅಷ್ಟೈಶ್ವರ್ಯ!
ಕನಿಷ್ಟ ಅಗತ್ಯವಿದ್ದವ ಸುಖಪುರುಷನಯ್ಯ!"
ನನ್ನ ಕಂಗಳು ತುಂಬಿ ಬಂದಿತು.
ಇನ್ನೆನಾದರೂ ಹೇಳುವುದಿದೆಯಾ ಪ್ರಭುವೆ?
ಇದೇ!
ನಾನಿರುವೆ.. ನಿನ್ನ ಬೆನ್ನ ಹಿಂದಿರುವೆ...
ಸದಾಕಾಲಕ್ಕೂ ನಾನಿರುವೆ!
ಕನಸು ಮುಗಿಯಿತು.
-ನಾಸೋ
Comments
ಉ: ಕೇಳವ್ವ ನಾನೊಂದು ಕನಸು ಕಂಡೆ...
ಉ: ಕೇಳವ್ವ ನಾನೊಂದು ಕನಸು ಕಂಡೆ...
ಉ: ಕೇಳವ್ವ ನಾನೊಂದು ಕನಸು ಕಂಡೆ...
ಉ: ಕೇಳವ್ವ ನಾನೊಂದು ಕನಸು ಕಂಡೆ...
In reply to ಉ: ಕೇಳವ್ವ ನಾನೊಂದು ಕನಸು ಕಂಡೆ... by manju787
ಉ: ಕೇಳವ್ವ ನಾನೊಂದು ಕನಸು ಕಂಡೆ...