ನಮ್ಮ ಮನೆ

ನಮ್ಮ ಮನೆ


                   ನಮ್ಮ ಮನೆ ಅಂತ ಎಲ್ಲರಿಗೂ ಹೆಮ್ಮೆ ಇರುತ್ತದೆ. ಹಾಗೆಯೇ ನನಗೂ ಇದೆ . ಹಾಗಾಗಿ ಆವಾಗಾವಾಗ ಗೂಗಲ್ ಅರ್ಥ್ ಸಹಾಯದಿಂದ ಹೀಗೆ ಮನೆ ಮೇಲೆ ಹಾರಾಟ ನಡೆಸುತ್ತಾ ಇರುತ್ತೇನೆ. ಹೀಗೆ ಮನೆಯಲ್ಲಿಯೇ ಕುಳಿತು ಪ್ರಪಂಚ ಸುತ್ತುವಾಗ ಅದರ ಮಜ ಬಲ್ಲವನೇ ಬಲ್ಲ. ಮನಸ್ಸು ವಿಶಾಲವಾಗಬೇಕಾದರೆ, ಜ್ಞಾನ ಹೆಚ್ಚಬೇಕಾದರೆ ಪ್ರಪಂಚ ಸುತ್ತಬೇಕಂತೆ. ಹೀಗೆ ಮನೆಯಲ್ಲಿಯೇ ಕುಳಿತು ಪ್ರಪಂಚ ಸುತ್ತುವ ಅವಕಾಶ ಸಿಕ್ಕಾಗ ಕಳೆದುಕೊಳ್ಳುವುದೆಂತು ಎಂದು ಈ ಕೆಲಸ. ಬಜ್ಪೆಯಲ್ಲಿ ವಿಮಾನ ನಿಲ್ದಾಣದ ಗೂಗಲ್ ಅರ್ಥ ನೋಟ  ಹೀಗೆ ಏನೆಲ್ಲಾ ಇರುತ್ತದೆ ಅಲ್ಲಿ, ಅದಿರಲಿ ವಿಷಯಕ್ಕೆ ಬರೋಣ.

                   ಮನುಷ್ಯನ ಮನಸ್ಸು ಒಂದು ಕುಬ್ಜ ಮತ್ತೊಂದು ಎತ್ತರದ್ದು. ಕುಬ್ಜವಾಗಿದ್ದಾಗ ಮನೆಯ ಗಲಾಟೆ, ಪಕ್ಕದ ಮನೆಯ ಜಗಳ, ಊರಿನ ಸಮಸ್ಯೆ, ವ್ಯಕ್ತಿಯ ದೋಷ,ರಾಜ್ಯದ ರಾಜಕೀಯ ದೇಶದ ಪರಿಸ್ಥಿತಿ ಹೀಗೆಲ್ಲಾ ಯೋಚಿಸುತ್ತಾ ಹೋಗುವ ಸಮಯವೇ ಹೆಚ್ಚು. ಅದರಿಂದ ಗೊಜಲು ಗೊಜಲೇ ಹೊರತು ಮಜ ಇಲ್ಲ. ಎತ್ತರದ ಮನಸ್ಥಿತಿಗೆ ಇವೆಲ್ಲಾ ರಗಳೆ ಅನಿಸುತ್ತದೆ. ಆ ಮನಸ್ಥಿತಿಯ ಜನರು ಯೋಚಿಸುವ ಮಜವೇ ಬೇರೆ. ತಲುಪುವ ಮಟ್ಟವೇ ಬೇರೆ . ಅದರಿಂದ ಅವರ ಸ್ವಂತಕ್ಕೆ ಪ್ರಯೋಜನ ಬಹಳ, ಸಮಾಜಕ್ಕೆ ತೊಂದರೆಇಲ್ಲ.

                   ಸುಧಾದಲ್ಲಿ ಒಂದು ಲೇಖನ ಬಂದಿತ್ತು. ಮಿದುಳಿನ ಜೀವ ಕೋಶಗಳ ಸಂಖ್ಯೆ ಹೆಚ್ಚಿಸಲು ಸುಲಭಕರವಾದ ವ್ಯಾಯಾಮವೆಂದರೆ, ಕಣ್ಮುಚ್ಚಿ ಕುಳಿತು ನಮ್ಮನ್ನು ನಾವು ಮೇಲಿಂದ ಕಲ್ಪನೆಮಾಡಿಕೊಳ್ಳುವುದು. ನಂತರ ನಮ್ಮ ಮನೆಯನ್ನು ಹಾಗೆ ಕಲ್ಪಿಸಿಕೊಳ್ಳುವುದು, ನಂತರ ಊರು ಆನಂತರ ದೇಶ ಹಾಗೆ ಪ್ರಪಂಚ. ಹೀಗೆ ಕಲ್ಪಿಸಿಕೊಳ್ಳುವುದರಿಂದ ಮಿದುಳಿನ ಜೀವ ಕೋಶಗಳ ಹೆಚ್ಚು  ವಿಕಸನ ಗೊಂಡು ವಿಷಯ ವಿಚಾರಗಳಿಗೆ ಸಹಾಯ ವಾಗುತ್ತದೆ ಎಂದು.ಆದರೆ ಇಲ್ಲಿ ಸಮಸ್ಯೆ ಇದೆ. ನಾವು ನಮ್ಮ ಮನೆಯನ್ನು ಮೇಲಿನಿಂದ ನೋಡಿರುವುದಿಲ್ಲ. ಹಾಗಾಗಿ ಕಲ್ಪನೆ ಅಸ್ಪಷ್ಟ. ನಾವು ಓಡಾಡಿದ ಭೂ ಮಾರ್ಗಗಳ ಆಧಾರದ ಮೇಲೆ ಕಲ್ಪಿಸಿಕೊಳ್ಳಬೇಕು. ಆಗ ಫಲಿತಾಂಶ ಅಸ್ಪಷ್ಟ. ಅದಕ್ಕೆ ಪರಿಹಾರ ಈ ಗೂಗಲ್ ಅರ್ಥ್ ನ ಪಕ್ಷಿನೋಟ.

                    ಹೀಗೆಲ್ಲಾ ಇದೆ, ಸಿಕ್ಕಷ್ಟು ಅವರವರ ಪುಣ್ಯ ನಮ್ಮ ಮನೆ ಅದರ ಪಕ್ಷಿನೋಟದ ಮಜ ನನಗಂತೂ ಸಿಕ್ಕಿದೆ. ಕಣ್ಬಿಟ್ಟಾಗಲೂ ಮತ್ತು ಕಣ್ಮುಚ್ಚಿದಾಗಲೂ. ಇನ್ನು ಸಿಕ್ಕಾಪಟ್ಟೆ ಜೀವ ಕೋಶ ಬೆಳೆದು ಮಂಡೆ ಒಡೆದು ಹೋಗುತ್ತದೆಯೋ ಕಾದುನೋಡಬೇಕು
Rating
No votes yet

Comments