ಅಂಚೆ ಪುರಾಣ
ಅಂಚೆ ಪುರಾಣ - 1
ಮೊದಲಿಗೆ.. . .
ನಾನು ಅಂಚೆ ಕಛೇರಿಯಲ್ಲಿ ಒಂದು ವರ್ಷ ಮತ್ತು ಕಂದಾಯ ಇಲಾಖೆಯಲ್ಲಿ 36 ವರ್ಷಗಳು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು ಇನ್ನೂ ಎರಡು ವರ್ಷಗಳ ಸೇವಾವದಿ ಇರುವಂತೆಯೇ ಸ್ವ ಇಚ್ಛಾ ನಿವೃತ್ತಿ ಪಡೆದುಕೊಂಡೆ. ಜೈಲಿನಲ್ಲಿ ಖೈದಿಯಾಗಿಯೂ ಇದ್ದ ನಾನು (ಯಾವುದೇ ಭ್ರಷ್ಟಾಚಾರ ಅಥವಾ ಸಮಾಜ ದ್ರೋಹಿ ಕೆಲಸ ಮಾಡಿ ಅಲ್ಲ, ಕಾಲಕ್ರಮದಲ್ಲಿ ವಿವರಿಸುವೆ) ಜೈಲಿನ ಸೂಪರಿಂಟೆಂಡೆಂಟ್ ಆಗಿಯೂ, ತಾಲ್ಲೂಕಿನ ಮ್ಯಾಜಿಸ್ತ್ರೇಟ್ ಆಗಿಯೂ ಕೆಲಸ ಮಾಡುವ ಅವಕಾಶ ದೇವರು ಕರುಣಿಸಿದ್ದು ನನ್ನ ಸೌಭಾಗ್ಯ ಮತ್ತು ವಿಶೇಷವೇ ಸರಿ. ಸೇವಾಕಾಲದಲ್ಲಿ ನನ್ನ ಮನಸ್ಸಿನ ಭಿತ್ತಿಯಲ್ಲಿ ಉಳಿದುಕೊಂಡಿರುವ ಕೆಲವು ನೆನಪುಗಳು ಮತ್ತು ಘಟನೆಗಳನ್ನು ಸಂಪದ ಮಿತ್ರರೊಂದಿಗೆ ಹಂಚಿಕೊಳ್ಳುವ ಇಚ್ಛೆಯಿಂದ ಈ ಬರಹ ಪ್ರಾರಂಭಿಸಿರುವೆ. ಸ್ವಾಗತಿಸಲು ನಮ್ರ ವಿನಂತಿ. ಅಂಚೆ ಪುರಾಣದೊಂದಿಗೆ ಅನುಭವ ಕಥನ ಪ್ರಾರಂಭಿಸುವೆ.
'ನಾನು ದೊಡ್ಡವನಾದ ಮೇಲೆ ಪೋಸ್ಟ್ ಕಾರ್ಡು ಮಾರುತ್ತೇನೆ'
ಇದು ನಾನು ಸಣ್ಣವನಿದ್ದಾಗ ಯಾರಾದರೂ 'ದೊಡ್ಡವನಾದ ಮೇಲೆ ಏನು ಮಾಡುತ್ತೀಯಾ?' ಎಂದು ಕೇಳಿದರೆ ನಾನು ಕೊಡುತ್ತಿದ್ದ ಉತ್ತರ. ಆಗೆಲ್ಲಾ ಪೋಸ್ಟ್ ಕಾರ್ಡುಗಳು ಬಹಳವಾಗಿ ಬಳಕೆಯಾಗುತ್ತಿದ್ದ ಕಾಲ. ಈಗಿನಂತೆ ಫೋನು ಸಾಮಾನ್ಯ ಬಳಕೆಯಲ್ಲಿರಲಿಲ್ಲ. ಅಂಚೆ ಕಛೇರಿಗಳಲ್ಲಿ ಫೋನು ಇದ್ದರೂ ದೂರದೂರಿಗೆ ಫೋನು ಮಾಡಿ ಮಾತನಾಡಲು ಬುಕ್ ಮಾಡಿ ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ ಕಾಯಬೇಕಿತ್ತು. ಯಾರಿಗೆ ಫೋನು ಮಾಡಲಾಗುತ್ತಿತ್ತೋ ಅವರನ್ನು ಆ ಊರಿನ ಅಂಚೆ ನೌಕರ ಹೋಗಿ ಕರೆದುಕೊಂಡು ಬಂದ ನಂತರವಷ್ಟೇ ಅಲ್ಲಿಂದ ಬರುವ ಕರೆಗಾಗಿ ಕಾಯುತ್ತಾ ಕುಳಿತುಕೊಳ್ಳಬೇಕಿತ್ತು. ಆಗೆಲ್ಲಾ ಎರಡು ಪೈಸೆಗೆ ಒಂದು ಕಾರ್ಡು ಸಿಗುತ್ತಿತ್ತು. ಪ್ರತಿ ಮನೆಯಲ್ಲಿ ಕಾರ್ಡುಗಳ ಕಟ್ಟೇ ಇರುತ್ತಿತ್ತು. ಮುಗಿದಂತೆಲ್ಲಾ 20-30 ಕಾರ್ಡುಗಳನ್ನು ಒಟ್ಟಿಗೇ ತರಿಸಿಡುತ್ತಿದ್ದರು. ಕಾರ್ಡುಗಳನ್ನು ತರಲು ನಾನು ಅಂಚೆ ಕಛೇರಿಗೆ ಹೋದಾಗಲೆಲ್ಲಾ 'ಕಾರ್ಡು ಮಾರಿದರೆ ತುಂಬಾ ಹಣ ಬರುತ್ತೆ. ಅದರಿಂದ ಒಂದು ಚೀಲದ ತುಂಬಾ ಪೆಪ್ಪರಮೆಂಟು, ಕಂಬರಕಟ್ಟು (ಕೊಬ್ಬರಿ, ಬೆಲ್ಲ ಉಪಯೋಗಿಸಿ ಮಾಡಲಾಗುತ್ತಿದ್ದ ಅಂಟಿನ ಉಂಡೆಗಳು) ಚಾಕೊಲೇಟುಗಳನ್ನು ತಂದಿಟ್ಟುಕೊಳ್ಳಬಹುದು' ಎಂದೆಲ್ಲಾ ಅಂದುಕೊಳ್ಳುತ್ತಿದ್ದೆ. ಮನೆಗೆ ಬಂದ ಕಾರ್ಡುಗಳನ್ನು ಪೋಣಿಸಿ ಒಂದು ತೊಲೆಗೆ ನೇತು ಹಾಕಿ ಇಡುತ್ತಿದ್ದರು. ಎಷ್ಟೋ ವರ್ಷಗಳ ವರೆಗೆ ಕಾರ್ಡುಗಳನ್ನು ಇಟ್ಟಿರುತ್ತಿದ್ದರು. ನಾನು ಹುಟ್ಟಿದ್ದ ಸಂದರ್ಭದಲ್ಲಿ ಮಗುವಿಗೆ 'ನಾಗರಾಜ ಎಂದು ಹೆಸರಿಡಿ' ಎಂದು ನನ್ನ ತಂದೆಗೆ ನನ್ನ ತಾಯಿಯ ಅಣ್ಣ ದಿ. ಶ್ರೀನಿವಾಸಮೂರ್ತಿಯವರು ಬರೆದಿದ್ದ ಕಾಗದವನ್ನು ನನಗೆ ಓದಲು, ಬರೆಯಲು ಬಂದ ನಂತರ ನಾನೇ ಓದಿದ್ದ ನೆನಪು ನನಗೆ ಈಗಲೂ ಇದೆ. ದೊಡ್ಡವನಾದ ಮೇಲೆ ನಾನು ಪೋಸ್ಟ್ ಕಾರ್ಡು ಮಾರದಿದ್ದರೂ ಹಾಸನದ ಅಂಚೆ ಕಛೇರಿಯಲ್ಲಿ ಒಂದು ವರ್ಷ ಗುಮಾಸ್ತನಾಗಿ ಕೆಲಸ ಮಾಡುವುದರೊಂದಿಗೆ ನನ್ನ ವೃತ್ತಿಜೀವನ ಪ್ರಾರಂಭವಾಯಿತು!
ನಾನು ಹಾಸನದ ಕಾಲೇಜಿನಲ್ಲಿ 1971ರಲ್ಲಿ ಅಂತಿಮ ಬಿ.ಎಸ್.ಸಿ.ಯಲ್ಲಿ ಓದುತ್ತಿದ್ದಾಗ ಪತ್ರಿಕೆಯಲ್ಲಿ ಬಂದ ಪ್ರಕಟಣೆ ನೋಡಿ ಅಂಚೆ ಗುಮಾಸ್ತರ ಹುದ್ದೆಗೆ ಅರ್ಜಿ ಹಾಕಿದ್ದೆ. ಎಸ್.ಎಸ್.ಎಲ್.ಸಿ.ಯಲ್ಲಿ ತೆಗೆದ ಅಂಕಗಳನ್ನು ಆಧರಿಸಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು.ಪಿ.ಯು.ಸಿ. ಓದಿದ್ದರೆ ಶೇ. 5 ಅಂಕ ಹೆಚ್ಚಿಗೆ ಕೊಡುತ್ತಿದ್ದರು. ನನಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 73.4 ಅಂಕ ಬಂದಿದ್ದು ಪಿ.ಯು.ಸಿ.ಯದು ಸೇರಿ ಶೇ. 78.4 ಆಗಿತ್ತು. ಆ ಕಾಲದಲ್ಲಿ ರಾಂಕು ವಿದ್ಯಾರ್ಥಿಗಳಿಗೂ ಶೇ. 80-85 ಕ್ಕಿಂತ ಹೆಚ್ಚಿಗೆ ಅಂಕಗಳನ್ನು ಕೊಡುತ್ತಿರಲಿಲ್ಲ. ನಾನು ಚಿತ್ರದುರ್ಗದ ಮುನಿಸಿಪಲ್ ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ಪಾಸು ಮಾಡಿದ್ದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರಿಂದ ಪುರಸಭೆಯಲ್ಲಿ ನನಗೆ ಹಾರ ಹಾಕಿ ಸನ್ಮಾನಿಸಿ 50 ರೂ. ಬಹುಮಾನ ಕೊಟ್ಟಿದ್ದರು. ಡಿಗ್ರಿ ಓದಿದ ನಂತರ ಕೆಲಸ ಹುಡುಕಲು ಪ್ರಾರಂಭಿಸಿ ಚಿಕ್ಕಮಗಳೂರಿನ ಒಂದು ಖಾಸಗಿ ಟ್ಯುಟೋರಿಯಲ್ ನಲ್ಲಿ ಟ್ಯೂಟರ್ ಆಗಿ ಸೇರಲು ಮಾತನಾಡಿಕೊಂಡು ಬಂದಿದ್ದೆ. ಸಂಬಳ ಎಷ್ಟು ಅವರೂ ಹೇಳಲಿಲ್ಲ, ನಾನೂ ಕೇಳಿರಲಿಲ್ಲ. ಆಗ ನರಸಿಂಹರಾಜಪುರದಲ್ಲಿ ಕೋರ್ಟಿನಲ್ಲಿ ಕೆಲಸ ಮಾಡುತ್ತಿದ್ದ ತಂದೆಯವರಿಗೆ ವಿಷಯ ತಿಳಿಸುವ ಸಲುವಾಗಿ ಪತ್ರ ಬರೆಯಲು ಕಾರ್ಡು ಕೊಳ್ಳಲು ಚಿಕ್ಕಮಗಳೂರಿನ ಅಂಚೆ ಕಛೇರಿಗೆ ಹೋದಾಗ ಅಲ್ಲಿನ ಸೂಚನಾ ಫಲಕದಲ್ಲಿ ಅಂಚೆ ಗುಮಾಸ್ತರಾಗಿ ನೇಮಕವಾದವರ ಪಟ್ಟಿ ಇತ್ತು. ನೋಡಿದರೆ ನನ್ನ ಹೆಸರೂ ಅದರಲ್ಲಿತ್ತು. ಖುಷಿಯಿಂದ ಪೋಸ್ಟ್ ಮಾಸ್ಟರರನ್ನು ಕೇಳಿದರೆ,'ಆಗತಾನೇ ಪಟ್ಟಿ ಬಂದಿತ್ತೆಂದೂ, ವಾರದ ಒಳಗೆ ನೇಮಕಾತಿ ಆದೇಶ ಬರುತ್ತದೆಂದೂ' ತಿಳಿಸಿದರು. ಟ್ಯೂಟರ್ ಕೆಲಸಕ್ಕೆ ಹೋಗದೆ ನರಸಿಂಹರಾಜಪುರಕ್ಕೇ ಹೋದೆ. ನಿರೀಕ್ಷಿಸಿದಂತೆ ಒಂದು ವಾರದ ಒಳಗೇ ನೇಮಕಾತಿ ಆದೇಶವೂ ಬಂತು. ಮೂರು ತಿಂಗಳು ಮೈಸೂರಿನ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಹಾಸನದ ಪ್ರಧಾನ ಅಂಚೆ ಕಛೇರಿಗೆ ಗುಮಾಸ್ತನಾಗಿ ಬಂದೆ.
ಮುಂದುವರೆಯಲಿದೆ. . . . .