ವಿರೋಧ ಪಕ್ಷಗಳು ಏನು ಮಾಡುತ್ತಿದೆ

ವಿರೋಧ ಪಕ್ಷಗಳು ಏನು ಮಾಡುತ್ತಿದೆ

ಬರಹ

ರಾಜ್ಯ ಸರ್ಕಾರ ತೆಗದುಕೊಂಡಂತಹ ಅನೇಕ ವಿಷಯಗಳು ಚರ್ಚೆಯೇ ಆಗುತ್ತಿಲ್ಲ. ಇವುಗಳು ಜನಪರ ಇದೆಯೋ ಇಲ್ಲವೋ ಎನ್ನುವುದು ಆ ನಂತರದ ವಿಷಯ. ಆದರೆ ಇದೀಗ ನಡೆಯುತ್ತಿರುವ ಅನೇಕ ವಿದ್ಯಮಾನಗಳಿಗೆ ವಿರೋಧ ಪಕ್ಷಗಳು ಸರಿಯಾಗಿ ದನಿಯೆತ್ತದ ಕಾರಣ ಅದು ಅಲ್ಲಿಗೆ ಅಂತ್ಯವಾಗುತ್ತಿದೆ. ಇದರ ಪ್ರತಿಕೂಲ ಪರಿಣಾಮ ನಾಗರಿಕರ ಮೇಲೆ ಆಗುತ್ತಿದೆ. ಎಸ್.ಇ.ಜೆಡ್ ಯೋಜನೆಯಡಿಯಲ್ಲಿ , ಗೃಹ ನಿರ್ಮಾಣದ ಅಡಿಯಲ್ಲಿ ಕೂಷಿ ಭೂಮಿ  ಕಬಳಿಕೆಯಾಗುತ್ತಲೇ ಇದೆ. ಅಲ್ಪ ಮೊತ್ತದ ಹಣ ನೀಡುವ ಮೂಲಕ ರೈತರ ಬಾಯಿ ಮಚ್ಚಿಸಲಾಗುತ್ತಿದೆ. ಇದಕ್ಕೆ ರೈತ ವಿರೋಧ ವ್ಯಕ್ತಪಡಿಸಿದರೆ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸುವಂತಹ ಕಾರ್ಯ, ಇಲ್ಲಾ ಸ್ಥಳೀಯ ಮುಖಂಡರಿಂದ ಹಿಂಸೆ ನೀಡುವಂತಹ ಕಾರ್ಯ ನಡೆಯುತ್ತಲೇ ಇದೆ.

ನಡೆಯುತ್ತಿರುವ ಹಲವಾರು ಕಾಮಗಾರಿಗಳು ಬಿಜೆಪಿ ಪಕ್ಷದ ಮುಖಂಡರ, ಕಾರ್ಯಕರ್ತರ ಅಧೀನದಲ್ಲಿದೆ. ಸ್ಥಳೀಯ ಚಿಕ್ಕ ಪುಟ್ಟ ಯೋಜನೆಗಳಾದ ಗಂಗಾ ಕಲ್ಯಾಣ, ಸಬ್ಸಿಡಿ ದರದಲ್ಲಿ ವಿತರಿಸುವ ಟಿಲ್ಲರ್,ಟ್ರಾಕ್ಟರ್ ಕೂಡ ಪಕ್ಷದ ಕಾರ್ಯಕರ್ತರುಗಳಿಗೆ ಹೆಚ್ಚಿನ ಮಟ್ಟದಲ್ಲಿ ಸಿಗುತ್ತಿದೆ. ಇದರಲ್ಲಿ ಅಧಿಕಾರಿಗಳು ತಮ್ಮ ಕಾರ್ಯ ವೈಖರಿಯನ್ನು ಮರೆತಿದ್ದಾರೆ. ನಿಜವಾದ ಫಲಾನುಭವಿಗೆ ಯೋಜನೆಗಳು ತಲುಪುತ್ತಲೇ ಇಲ್ಲ. ಪಕ್ಷವೇ ಮುಖ್ಯವಾಗಿದೆ. ಬಗರ್ ಹುಕಂ ವಿಚಾರದಲ್ಲೂ ಇದೇ ತಾರತಮ್ಯ ನಡೆಯುತ್ತಿದೆ. ಇತರೆ ಪಕ್ಷದವರಾದರೆ ಅವರನ್ನು ದಬ್ಬಾಳಿಕೆಯಿಂದ ಬಿಡಿಸುವಂತಹ ಕಾರ್ಯ ನಡೆಯುತ್ತಿದೆ. ಇದು ರಾಜ್ಯದೆಲ್ಲೆಡೆ ನಡೆಯುತ್ತಿರುವ ಸಂಗತಿಗಳು. ಇನ್ನು ನೆರೆ ಸಂತ್ರಸ್ತ ಪರಿಸ್ಥಿತಿಯನ್ನು ಹೇಳುವಂತೆಯೇ ಇಲ್ಲ. ಮನೆಗಳು ಇನ್ನೂ ಅವರಿಗೆ ಕನಸಾಗಿಯೇ ಇದೆ.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹೆಚ್ಚಿನ ಪ್ರಭಾವ ಇರುವಂತಹ ಮುಖಂಡರನ್ನು ವಿವಿಧ ಆಮಿಷ ಒಡ್ಡಿ ಖರೀದಿಸುವಂತಹ ಪ್ರಯತ್ನ ನಡೆಯುತ್ತಲೇ ಇದೆ. ಅಕಸ್ಮಾತ್ ಮುಖಂಡ ಒಪ್ಪದೇ ಹೋದರೆ ಆತನನ್ನು ವಿವಿಧ ರೀತಿಯಲ್ಲಿ ಹಿಂಸಿಸುವಂತಹ ಕಾರ್ಯವಾಗುತ್ತಿದೆ. ಇವೆಲ್ಲವೂ ವಿರೋಧ ಪಕ್ಷದವರಿಗೆ ಗೊತ್ತಿಲ್ಲವಾ ಅಥವಾ ಆಡಳಿತ ಪಕ್ಷದೊಂದಿಗೆ ಶಾಮೀಲಾಗಿದ್ದಾರಾ. ಇದು ವಿರೋಧ ಪಕ್ಷದ ಕಾರ್ಯಕರ್ತರಲ್ಲಿ ಎದ್ದಿರುವ ಪ್ರಶ್ನೆ. ದೇಶಪಾಂಡೆ, ಸಿದ್ದರಾಮಯ್ಯ,ಡಿಕೇಶಿ ಇವರೆಲ್ಲರೂ ಪತ್ರಿಕಾ ಹೇಳಿಕೆಗಳನ್ನು ಕೊಡುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಇವರಲ್ಲೆ ಆಂತರಿಕ ಭಿನ್ನಾಭಿಪ್ರಾಯಗಳು ಮುಗಿಲು ಮುಟ್ಟಿದೆ. ಇನ್ನು ಇತರರ ದನಿ ಇವರಿಗೆಲ್ಲಿ ಕೇಳಬೇಕು. ಕಾರ್ಯಕರ್ತ ಕಷ್ಟದಲ್ಲಿದ್ದರೆ ಪ್ರೋತ್ಸಾಹಕ್ಕೆಂದು ಬರುವಂತವನು ಒಬ್ಬನೂ ಇಲ್ಲ. ಹಾಗಿದ್ದರೆ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಬಲವರ್ಧನೆಯಾಗಬೇಕು ಎಂದರೆ ಹೇಗೆ ಎನ್ನುವುದು.

ಹಾಲಪ್ಪನ ಪ್ರಕರಣದಲ್ಲಿ ಆರಂಭದಲ್ಲಿ ತೋರಿದ ಉತ್ಸಾಹ  ಇದೀಗ ಇಲ್ಲ. ಸಂತೋಷ್ ಹೆಗ್ಡೆ ಪ್ರಕರಣ ಆಗಲೇ ಮುಗಿದ ಅಧ್ಯಾಯ. ರೈತರ ಮೇಲಿನ ದಬ್ಬಾಳಿಕೆಗಳಿಗೆ ಕೇವಲ ಹೇಳಿಕೆ ಮತ್ತೆ ಕೆಸರರೆಚಾಟ.ಕೆಲವೆಡೆ ಪ್ರತಿಭಟನೆ ಬಿಟ್ಟರೆ ಇಲ್ಲವೇ ಇಲ್ಲ ಎನ್ನಬಹುದು. ಗಣಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಭಾಗಿಯಾಗಿರುವುದರಿಂದ ಅದರ ಬಗ್ಗೆ ಸೊಲ್ಲೆತ್ತಲು ಯಾರೂ ತಾಯಾರಿಲ್ಲ. ಸೋನಿಯಾ ಗಾಂಧಿ ಇಲ್ಲಿನ ವಿಷಯ ಗೊತ್ತಿದ್ದರೂ ಸುಮ್ಮನಿದ್ದಾರಾ ಅಥವಾ ಕರ್ನಾಟಕದಲ್ಲಿ ಕಾಂಗ್ರೆಸ್ ಬೇಡವೇ ಬೇಡ ಎನ್ನುವ ತೀರ್ಮಾನವಾ ಎನ್ನುವುದು ಪ್ರಶ್ನೆಯಾಗಿದೆ. ಇವರಿಗೆ ಹೋಲಿಸಿದರೆ ಕನ್ನಡ ಸಂಘಟನೆಗಳೇ ವಾಸಿ. ಸ್ವಲ್ಪ ಮಟ್ಟಿಗಾದರೂ ದೊಡ್ಡ ದನಿಯಲ್ಲಿ ಹೋರಾಡುತ್ತಿವೆ. ಇಂತಹ ವಿರೋಧ ಪಕ್ಷ ಅವಶ್ಯಕತೆಯಿದೆಯಾ. ಇದೇ ಯಡಿಯೂರಪ್ಪ ವಿ.ಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಸಣ್ಣ ವಿಷಯಕ್ಕೂ ಹೋರಾಟಗಳು ನಡೆಯುತ್ತಿತ್ತು. ಇವೆಲ್ಲವನ್ನೂ ಕಾಂಗ್ರೆಸ್ ಏಕೆ ಮಾಡುತ್ತಿಲ್ಲ. ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದ್ದರೂ ಅಪ್ಪ ಮಕ್ಕಳು ರಾಜ್ಯ ಸರ್ಕಾರದ ಅನ್ಯಾಯಗಳಿಗೆ ಹೋರಾಡುತ್ತಲೇ ಇದ್ದಾರೆ. ಕೇವಲ ನೈಸ್ ಗೆ ಮಾತ್ರ ಅಲ್ಲ. ಮೊನ್ನೆ ನಡೆದ ಘಟನೆಗೆ ಹಿರಿಯ ದೇವೆಗೌಡ ಉತ್ತಮ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಇದು ರೈತನಿಗೆ ದೊರೆತ ನೈತಿಕ ಬೆಂಬಲವಾಗಿದೆ. ಆದರೆ ಕಾಂಗ್ರೆಸ್ ಮಾತ್ರ ಎಂದಿನಂತೆ ಹೇಳಿಕೆ ನಿಡಿ ತನ್ನ ಪಾಡಿಗೆ ತಾನಿದೆ. ಅಲ್ಲೀಗ ಅಧ್ಯಕ್ಷರ  ಪೈಪೋಟಿ. ಅಂತೂ ಇವರಿಂದಾಗಿ ಸರ್ಕಾರಕ್ಕೆ ತಾನು ಆಡಿದ ಆಟವೇ ಆಟ ಎನ್ನುವಂತಾಗಿದೆ. ಇದರಿಂದಾಗಿ ಆಡಳಿತದಲ್ಲಿರುವವರು ಎಲ್ಲರೂ ಖುಷ್ ಆಗಿರುವುದಂತೂ ಸತ್ಯ.