ಮುತ್ತಿನ ತೆನೆ : ಜಾನಪದ ಹಾಡುಗಳ ಸಂಗ್ರಹ
ಗೆಳೆಯ ಬಂಡ್ಲಹಳ್ಳಿ ವಿಜಯಕುಮಾರ್ ‘ಮುತ್ತಿನ ತೆನೆ’ ಎಂಬ ಹೆಸರಿನಲ್ಲಿ ಒಂದುನೂರ ಮೂವತ್ತಮೂರು ಜಾನಪದ ಹಾಡುಗಳನ್ನು ಒಂದೆಡೆ ಸಂಪಾದಿಸಿದ್ದಾರೆ. ಜಾಗೃತಿ ಪ್ರಿಂಟರ‍್ಸ್ ಪ್ರಕಟಣೆ ಮಾಡಿದೆ. ಸ್ವತಃ ಜಾನಪದ ಕಲಾವಿದರೂ ತಜ್ಞರೂ ಆದ ವಿಜಯಕುಮಾರ್ ಅತ್ಯಂತ ಪರಿಶ್ರಮದಿಂದ ಸಾಧ್ಯವಾದಷ್ಟೂ ಪಾಠದ ಗೊಂದಲಗಳನ್ನು ನಿವಾರಿಸಿ, ಕಾಗುಣಿತದ ತಪ್ಪುಗಳನ್ನು ಇಲ್ಲವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಂತ ಜನಪ್ರಿಯ ಗೀತೆಗಳಿಂದ ಹಿಡಿದು, ಜನಪ್ರಿಯವಲ್ಲದಿದ್ದರೂ ಅತ್ಯಂತ ಮೌಲಿಕವಾದ ಗೀತೆಗಳನ್ನು ಒಟ್ಟಿಗೆ ಸೇರಿಸಿದ್ದಾರೆ. ಈ ನಿಟ್ಟಿನಲ್ಲಿ ವಿಜಯಕುಮಾರ್ ಅಭಿನಂದನಾರ್ಹರು.
ಆಯ್ದ ಒಂದೆರಡು ಗೀತೆಗಳನ್ನು ಇಲ್ಲಿ ನೀಡುತ್ತಿದ್ದೇನೆ.
೧. ಸರಸ್ವತಿ
ಸರಸೋತಿ ಎಂಬೋಳು ಸರುವಕ್ಕೆ ದೊಡ್ಡೋಳು
ಸ್ವರವ ಹಾಕ್ಯವ್ಳೆ ಐನೂರು - ವಜ್ರಾವ
ತಿರುವೌಳೆ ಕುಣಿಕೆ ಕೊರಳಲ್ಲಿ
ನಗ್ಗಾಲ ಮರದಡಿ ನಿದ್ರೆ ಮಾಡೋದ ಬಿಟ್ಟು
ಎಗ್ಗಿಲ್ದೆ ಬಂದೆ ನಿನ ಬಳಿಗೆ - ಸರಸೋತಿ
ಚೆಂದುಳ್ಳ ಹಾಡ ಕಲಿಸಮ್ಮ
ಏಳೆಲೇ ಮಾವೀನ ತಾಳಿನಲ್ಲಿರುವೋಳೆ
ತಾಳಾದ ಗತಿಗೆ ನಲಿಯೋಳೆ - ಸರಸೋತಿ
ನಾಲಿಗ್ಯಕ್ಷರವ ನಿಲಿಸವ್ವ
ಹಟ್ಟೀಯ ಮನೆಯೋಳೆ ಪಟ್ಟೆದುಂಗರದೋಳೆ
ಪಟ್ಟೆಯ ಸೀರೆ ನೆರಿಯೋಳೆ - ಸರಸೋತಿ
ಗುಟ್ಟಿನಲಿ ಮತಿಯ ಕಲಿಸವ್ವ
೨. ಯಾತಕೆ ಮಳೆ ಹೋದವೋ
ಯಾತಕೆ ಮಳೆ ಹೋದವೋ
ಶಿವಶಿವ ಲೋಕ ತಲ್ಲಣಿಸುತಾವೋ
ಬೇಕಿಲ್ಲದಿದ್ದರೆ ಬೆಂಕಿಯ ಮಳೆಸುರಿದು
ಉರಿಸಿ ಕೊಲ್ಲು ಬಾರದೆ
ಹೊಟ್ಟೆಗ ಅನ್ನ ಇಲ್ಲಾದೆಲೆ
ನಡೆದರೆ ಜೋಲಿ ಹೊಡೆಯುತಲೆ
ಪಟ್ಟದಾನೆಯಂಥ ಸ್ತ್ರೀಯಾರು ಸೊರಗಿ
ಸೀರೆ ನಿಲ್ಲೋದಿಲ್ಲ ಸೊಂಟಾದಲಿ
ಹಸಗೂಸು ಹಸಿವಿಗೆ ತಾಲಾದೆಲೆ
ಅಳುತಾವೆ ರೊಟ್ಟಿ ಕೇಳುತಲೆ
ಹಡೆದ ಬಾಣಂತಿಗೆ ಅನ್ನವು ಇಲ್ಲದೆಲೆ
ಏರುತಾವೆ ಮೊಣಕೈಗೆ ಬಳೆ
ಒಕ್ಕಾಲು ಮಕ್ಕಳಂತೆ
ಅವರಿನ್ನು ಮಕ್ಕಳನ್ನು ಮಾರುಂಡರು
ಮುಕ್ಕಣ್ಣ ಮಳೆ ಕರುಣಿಸೋ
ಮಕ್ಕಳನ್ನು ಮಾರುಂಡು ದುಃಖವನು ಮಾಡುತಾರೆ
೩. ಸಾಲಕ್ಕೆ ಹೋಗವ್ನೆ ಮಳೆರಾಯ
ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.
ಮಳೆಹೋಯ್ತು ಅಂತ ಮಳೆರಾಯ್ನ ಬೈಬೇಡ
ಒಕ್ಕಳ ಹೊನ್ನ ಸೆರಗೇಲಿ - ಕಟ್ಟಿಕೊಂಡು
ಸಾಲಕ್ಕೆ ಹೋಗವ್ನೆ ಮಳೆರಾಯ
ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.
ಅಂಬು ಕೊಡುವವನೆ ಗೊಂಬೆ ಹಚ್ಚಡದವನೆ
ರಂಬೆ ತೊಡೆಮ್ಯಾಲೆ ಮಲಗಿರುವ - ಮಳೆದೇವ
ಅಂಬಾರದಿಂದ ಕರುಣಿಸೋ
ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.
ಊರಿಗೆ ಮಳೆಊದೋ ಏರ್‌ಕಟ್ಟು ತಮ್ಮಯ್ಯ
ಊರು ಮುಂದಿರುವ ಬಸವಣ್ಣಗೆ - ಕೈಮುಗಿದು
ಏರ್‌ಕಟ್ಟೊ ಮುದ್ದುಮುಖದವನೆ
ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.
Comments
ಉ: ಮುತ್ತಿನ ತೆನೆ : ಜಾನಪದ ಹಾಡುಗಳ ಸಂಗ್ರಹ
ಉ: ಮುತ್ತಿನ ತೆನೆ : ಜಾನಪದ ಹಾಡುಗಳ ಸಂಗ್ರಹ
ಉ: ಮುತ್ತಿನ ತೆನೆ : ಜಾನಪದ ಹಾಡುಗಳ ಸಂಗ್ರಹ