ಪುಷ್ಪಗಿರಿ ಟ್ರೆಕ್ಕಿಂಗ್: ಮರೆಯಲಾಗದ ಮೂರು ದಿನಗಳು

ಪುಷ್ಪಗಿರಿ ಟ್ರೆಕ್ಕಿಂಗ್: ಮರೆಯಲಾಗದ ಮೂರು ದಿನಗಳು

ಮೊದಲನೆಯ ಮಹಡಿಯಲ್ಲಿ ಒಂದೇ ರೀತಿಯ ಎರಡು ರೂಮುಗಳನ್ನ ನಾಲ್ಕು ಜನ ಸ್ನೇಹಿತರು ಸೇರಿ ಬಾಡಿಗೆಗೆ ತೆಗೆದುಕೊಂಡಿದ್ವಿ. ಯಾಕೋ ಓನರ್ ಕಿರಿಕಿರಿ ಸಹಿಸಲಾಗದೆ ಪದವಿಯ ಎರಡನೆಯ ವರ್ಷ ಅಲ್ಲೇ ಎದುರಿಗಿದ್ದ ಹೆಂಚಿನ ಮನೆಗೆ ಶಿಫ್ಟ್ ಆದೆವು. ಮನೆ ದೊಡ್ಡದಾಗಿದ್ದರಿಂದ ಬಾಡಿಗೆಯ ತಲೆಹೊರೆ ಇಳಿಸಿಕೊಳ್ಳಲು ಜೊತೆಗೆ ಇನ್ನೂ ಎರಡು ಜನ ಸೇರಿಸಿಕೊಳ್ಳುವ ಐಡಿಯಾ ಇದ್ದದ್ದು ನಿಜ. ಆದರೆ, ಮೇಗ್ರಾಜ ಮತ್ತು ಅಕ್ಮಲ್ ಅಲ್ಲೇ ಉಳಿದರು, ಒಂದು ರೂಮು. ಯೋಜನೆ ತಲೆಕೆಳಗಾಗಿತ್ತು.

ಮೊದಲು ನಮ್ಮ ರೂಮಿನ ಎದುರಿನ ಪುಟ್ಟ ರೂಮಿನಲ್ಲಿದ್ದ ತಮ್ಮಣ್ಣ ಮತ್ತು ಹೊನ್ನೇಗೌಡ್ರು ಹೇಗೋ ನನ್ನ ಜೊತೆಗಾದ್ರು. ಮೇಗ್ರಾಜನ ಊರಿನವನೇ ಆದ ಯಶ್ವಂತ್ ಆಗಷ್ಟೆ ಪದವಿಗೆ ಸೇರಿದ್ದರಿಂದ ಅವನೂ ನಮ್ಮ ಪಾರ್ಟಿಗೆ ಸೇರಿದ. ಒಂದೆರಡು ತಿಂಗಳು ಸರಿದಂತೆ ರಘು ಅಂಕಲ್(ನಮ್ಮೆಲ್ಲರಿಗಂತ ಹತ್ತು ವರ್ಷ ದೊಡ್ಡವರು) ಜೊತೆಯಾದ್ರು. ಒಟ್ಟಾರೆ ಐದು ಜನ ಒಂದೇ ಸೂರಿನಡಿ, ಬಾಡಿಗೆ= ಡಿವೈಡೆಡ್ ಬೈ ಫೈವ್ ಆಗಿತ್ತು.

ಇದ್ದಕ್ಕಿದ್ದಂತೆ ಆದರ್ಶ ಎಂಬ ಹುಡುಗನೊಬ್ಬ ‘ನಾನು ಐ.ಟಿ.ಐ ಮಾಡ್ತಿದೀನಿ, ಅಕ್ಮಲ್ ಫ್ರೆಂಡು’ ಎಂಡು ಪರಿಚಯಿಸಿಕೊಂಡ. ಅವನ ವಿಸಿಟ್ ಆಗಾಗ ಆಗ್ತಿತ್ತು. ಹೀಗೆ ಒಮ್ಮೆ ಹಿಂದಿನ ವರ್ಷ ಕುದುರೆಮುಖ ಟ್ರೆಕ್ಕಿಂಗ್ ಹೋಗಿದ್ದ ಫೋಟೋಗಳನ್ನ ನೋಡಿದ ಆದರ್ಶ “ನಮ್ ಸೋಮ್ವಾರಪೇಟೆ ಹತ್ರ ‘ಪುಷ್ಪಗಿರಿ’ ಅಂತ ಒಂದು ಬೆಟ್ಟ ಈತೆ ಅಲ್ಲಿಗೂ ಟ್ರೆಕ್ಕಿಂಗ್ ಹೋಗ್ಬೌದು, ಹೋಗ್ತಾ ದಾರೀಲಿ ಮೊದ್ಲು ‘ಮಲ್ಲಳ್ಳಿ ಫಾಲ್ಸ’ ಸಿಗುತ್ತೆ, ಸಕ್ಕಾತ್ತಾಗಿತೆ, ನಾನೊಂದ್ಸಲ ಹೋಗಿದ್ದೆ” ಎಂದ. ನಾನು ಒಡನೆಯೆ ಹೋಗ್ಲೇಬೇಕೆಂಬ ಆಸೆಯಿಂದ ಅವನೊಂದಗೆ ಕುಳಿತು, ಎಷ್ಟು ದಿನ? ಎಷ್ಟು ಹಣ? ಉಳಿಯುವುದೆಲ್ಲಿ? ಹೊಟ್ಟೆಗೆ? ಇತ್ಯಾದಿ ಲೆಕ್ಕಾಚಾರ ಶುರುಮಾಡಿದೆ. ಕೊನೆಯದಾಗಿ ಬರುವವರ್ಯಾರ್ಯಾರೆಂದು.   

ಹೊರಟವರ ಲಿಸ್ಟ್: ನಾನು, ತಮ್ಮಣ್ಣ, ಮೇಗ್ರಾಜ, ರಘು, ಯಶ್ವಂತ ಮತ್ತು ನಮ್ಮ ಗೈಡಾಗಿ ಆದರ್ಶ. ನಮ್ಮ ಜೊತೆ ದೊಡ್ಡ ಎರಡು ಪಾತ್ರೆಗಳು, ಸೌಟು, ಚಾಕು, ಉಪ್ಪು, ಕಾರಪುಡಿ, ಈರಳ್ಳಿ, ಟೊಮೇಟೊ, ಚಳಿಯನ್ನು ಬೆಚ್ಚಗಿಡಲು ಒಂದೆರಡು ಹೊದಿಕೆಗಳು, ಸ್ವೆಟರ್ಸ ಇತ್ಯಾದಿ ಕೂಡ ಹೊರಟು ಬೆನ್ನೇರಿದವು... ಮಂಗಳವಾರ(19-12-2000) ಮದ್ಯಾಹ್ನ ಹಾಸನ ಬಸ್ ನಿಲ್ದಾಣ ಬಿಟ್ಟೆವು.

ಮಲ್ಲಳ್ಳಿ ಜಲಪಾತ ತಲುಪಲು ಸೋಮವಾರಪೇಟೆಯಿಂದ ಬೆಳಗಿನ ಸಮಯದಲ್ಲಿ ಮಾತ್ರ ಬಸ್ಸು. ಆದುದರಿಂದ ಕೊಡ್ಲಿಪೇಟೆ ತಲುಪಿ ಅಕ್ಮಲ್ ಮನೆಯಲ್ಲಿ ಉಳಿದುಕೊಂಡೆವು. ಬುಧವಾರ ಬೆಳಗ್ಗೆ ಬೇಗ ಎದ್ದು 8 ಗಂಟೆಯಸ್ಟರಲ್ಲಿ ಶನಿವಾರಸಂತೆ ಮಾರ್ಗವಾಗಿ ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣಕ್ಕೆ ಬಂದಿಳಿದೆವು. ಉಪಹಾರ ಮುಗ್ಸಿ, ಒಂದಿಷ್ಟು ಕುರುಕ್ಲು ತಿಂಡಿ, ಬ್ರೆಡ್ಡು-ಜಾಮ್ ಇತ್ಯಾದಿ ಕೊಂಡ್ಕಂಡು 9 ಕ್ಕೆ ಬಸ್ಸೇರಿದೆವು.

ರಸ್ತೆ ಕಿರಿದಾಗಿದ್ರೂ ಬಸ್ಸು ಅತಿ ವೇಗದಲ್ಲಿ ನುಗ್ತಿತ್ತು. ಹಿಮ್ಮುರಿ ತಿರವುಗಳಲ್ಲಿ ಬಸ್ಸು ಬಳುಕಾಡ್ತಿತ್ತು, ಒಳಗಿದ್ದ ನಾವೂ ಕೂಡ.    ರಸ್ತೆಯ ಬದಿಗೆ ಕಣ್ಣಾಯಿಸಿದರೆ ಪ್ರಕೃತಿ ಮನಸಿಗೆ ಮುದ ನೀಡ್ತಿತ್ತು. ಸುಮಾರು ಹದಿನೆಂಟು ಕಿಲೋಮೀಟರ್, ಬೀಡಳ್ಳಿ ತಲುಪಿ ಇಳಿದುಕೊಂಡೆವು. ‘ಇಲ್ಲಿಂದ 2 ಕಿ.ಮೀ ನೆಡದ್ರೆ ಮಲ್ಲಳ್ಳಿ ಫಾಲ್ಸ್ ಸಿಗುತ್ತೆ’ ಎಂದಂದ ಆದರ್ಶ. ಮೆಲ್ಲನೆ ಒಂದೆರಡು ಫರ್ಲಾಂಗು ಮುಂದೆ ಹೋಗುತ್ತಿದ್ದಂತೆ ಒಂದು ಚಿಕ್ಕ ಹೊಳೆ. ಮುಂದಿನ ಒಂದು ಕಿ.ಮೀ ನಷ್ಟು ದಾರಿ ಸಮತಟ್ಟಾಗಿದ್ದು ಒಂದು ಬದಿಯಲ್ಲಿ ಕಾಫೀ ತೋಟ, ತೋಟದಲ್ಲಿ ಮರಗಳಿಗೆ ಹೆಣೆದುಕೊಂಡಿದ್ದ ಕಾಳು ಮೆಣಸಿನ ಬಳ್ಳಿಗಳು, ನಿಂಬೆ-ಕಿತ್ತಲೆ, ಗಿಡದಡಿಯಲ್ಲಿ ಏಲಕ್ಕಿ ಗಿಡಗಳು ಮತ್ತೊಂದು ಬದಿಯಲ್ಲಿ ಕಾನನ ಹೀಗೆ... ಇನ್ನುಳಿದೊಂದು ಕಿ.ಮೀ ಇಳಿದುಕೊಂಡೇ ಹೋಗಬೇಕಾಗಿತ್ತು... ಪುಟ್ಟದೊಂದೂರು ಸಿಕ್ಕಿತು.

ನಮ್ಮ ಗೈಡ್ ಮುಂದಿನ ದಾರಿ ಮರೆತ್ತಿದ್ದರಿಂದ ಸ್ಥಳೀಯ ವಯಸ್ಕರೊಬ್ಬರು ‘ನಾನೇ ಕರ್ಕಂಡ್ ಹೋಗ್ತೀನಿ ಬನ್ನಿ’ ಎಂದು ನಮ್ಮೊಟ್ಟಿಗೆ ಬಂದ್ರು. ಒಂದೈದು ನಿಮಿಷ ನಡೆದಿರಬಹುದಷ್ಟೆ ಜೊರ್ರ...ರ್ರ...ರ್ರ... ಶಬ್ಧ ಕಿವಿಗೆ ಬಿತ್ತು. ಹಾಗೆಯೇ ಸ್ವಲ್ಪ ಮುಂದೆ ನಡೆದಂತೆ ನದಿ ಸಿಕ್ಕಿತು, ದಡದಲ್ಲೇ ಹೆಜ್ಜೆಯಿಡುತ್ತಾ ಸಾಗಿದಾಗ ಸುಮಾರು ಇನ್ನೂರು ಅಡಿ ಎತ್ತರದಿಂದ ಧುಮುಕುತ್ತಿದ್ದ ಮಲ್ಲಳ್ಳಿ ಜಲಪಾತ ನಮ್ಮೆಲ್ಲರನ್ನೂ ಸ್ವಾಗತಿಸಿತು.

 

....ಮಲ್ಲಳ್ಳಿ ಜಲಪಾತ

 

ಪಶ್ಚಿಮ ಘಟ್ಟದ ಕುಮಾರಪರ್ವತಗಳ ಸೆರಗಲ್ಲೆಲ್ಲೋ ಹುಟ್ಟಿ ಹರಿಯುವ ಕುಮಾರಧಾರ ನದಿ ಸೃಷ್ಟಿಸುವ ಪ್ರಕೃತಿ ಸೊಬಗಿನ ತಾಣವಿದು. ಮುಂದೆ ಸುಬ್ರಮಣ್ಯ ಮೂಲಕ ಹಾದು ಉಪ್ಪಿನಂಗಡಿಯಲ್ಲಿ ನೇತ್ರಾವತಿಯೊಂದಿಗೆ ಸಂಗಮ. ನೇತ್ರಾವತಿಯ ಉಗಮ ಮೂಡಿಗೆರೆ ತಾಲ್ಲೂಕಿನ ಸಂಸೆಯ ಗಂಗಾಮೂಲದಲ್ಲಿ. ಈರ್ವರೂ ಉಪ್ಪಿನಂಗಡಿಯಲ್ಲಿ ಒಟ್ಟಾಗಿ ಬಂಟ್ವಾಳ ಪಟ್ಟಣವನ್ನು ಸವರಿಕೊಂಡು ಅರಬ್ಬೀ ಸಮುದ್ರವನ್ನು ಸೇರಿಕೊಳ್ಳುತ್ತಾರೆ.

Mallalli2  ಬನ್ನಿ ಬ್ರೆಡ್ ತಿನ್ನುವ...

 

ಜಲಪಾತ ತಲುಪಿದಾಗ ಗಂಟೆ ಮದ್ಯಾಹ್ನ ಒಂದೂವರೆಯಾಗಿತ್ತು. ಊಟವಿಲ್ಲ, ಬ್ರೆಡ್-ಜಾಮ್ ತಿಂದುಕೊಂಡೆವು. ಡಿಸೆಂಬರ್ ಆಗಿದ್ರಿಂದ ನೀರೇನು ಹೆಚ್ಚಿಗೆಯಿರಲಿಲ್ಲ. ಆದರೆ, ಅಲ್ಲಲ್ಲೇ ಬುಡಸಮೇತ ಕಿತ್ತುಕೊಂಡು ಬಂದು ಬಿದ್ದಿದ್ದ ಮರಗಳನ್ನು ಕಂಡಾಗ  ಮಳೆಗಾಲದಲ್ಲಿ, ಅದರಲ್ಲೂ ಮುಂಗಾರು ಮಳೆಯ ನಂತರ ನೀರು ಹೇಗೆ ಧರೆಗುರುಳಬಹುದೆಂದು ಊಹಿಸಬಹುದಿತ್ತು. ನೀರು ಸುರಿಯುತ್ತಿದ್ದ ಜಾಗಕ್ಕೆ ಹೋಗಿ ಫೋಟೋಗಳಿಗೆ ಪೋಸ್ ಕೊಟ್ಟೆವು, ದಾರಿ ತೋರಿದ್ದ ಅಜ್ಜನನ್ನೂ ಜೊತೆ ನಿಲ್ಲಿಸಿಕೊಂಡು.

Mallalli3  ನಮ್ಮ ಲೋಕಲ್ ಗೈಡ್

Mallalli4  ನಾನಿದು... ಜಾಸ್ತಿಯಾಯ್ತಾ ಪೋಸ್ ಕೊಟ್ಟಿದ್ದು?

 

ಇಲ್ಲಿಂದ ಹೊರಟು ಪುಷ್ಪಗಿರಿಗೆ ಟ್ರೆಕ್ಕಿಂಗ್ ಪ್ರಾರಂಭಿಸಬೇಕಿದ್ದ ಬೇಸ್ ಕುಮಾರಳ್ಳಿ ತಲುಪಬೇಕಿತ್ತು. ಮೂರು ಕಿಲೋಮೀಟರ್ ದಾರಿ, ಸೂರ್ಯ ಮರೆಯಾಗಿದ್ದ. ಜಲಪಾತದ ಎಡಗಡೆಯಿದ್ದ ದಿಬ್ಬವನ್ನು ತೋರಿಸುತ್ತಾ ‘ಹಿಂಗೆ ಹತ್ಕಂಡ್ ಹೋಗಿ, ಬೇಗ ಹೋಬೌದು’ ಎಂದಿತು ಅಜ್ಜ. ಮಲೆನಾಡಿಗರಿಗೆ ಬೆಟ್ಟ-ಗುಡ್ಡಗಳನ್ನೆಲ್ಲ ಹತ್ತಿಳಿಯುವುದು ತುಂಬಾ ಸುಲಭದ ಕೆಲಸ, ಅದೇ ಕಾರಣದಿಂದ ಅಜ್ಜ, ‘ಆರಾಮಗತ್ಬೌದು’ ಎಂದಿದ್ರು.

 

Mallalli5  ನಾ ಮುಂದೆ...ತಾ ಮುಂದೆ...

 

ಆ ಗುಡ್ಡವನ್ನೇರಿ ನಿಂತಾಗ ಎಲ್ರಿಗೂ ಸಾಕಪ್ಪ ಈ ಟ್ರೆಕ್ಕಿಂಗ್ ಸಹವಾಸ ಎನ್ಸಿತ್ತು. ಆದ್ರೂ ಹತ್ತಿದ ಖುಷಿಗೆ ಎಲ್ರೂ ಅಲ್ಲೇ ಕುಣಿದು ಕುಪ್ಪಳಿಸಿದೆವು.

 

Mallalli6 ಬರ್ರಲಾ ಕುಣ್ಯೋಣ..

 

                                                                                                                     ....ಮುಗಿದಿಲ್ಲ ...ಮುಂದುವರಿಯುತ್ತೆ

Rating
No votes yet

Comments