ಫುಟ್ ಬಾಲ್ ಕ್ರೀಡೆಯಲ್ಲೂ ಮೋಸ, ಛೇ........

ಫುಟ್ ಬಾಲ್ ಕ್ರೀಡೆಯಲ್ಲೂ ಮೋಸ, ಛೇ........

ಬರಹ

ನೋಡ್ರಲ್ಲಾ ಕಬಡ್ಡಿ, ಕುಸ್ತಿ ಸಾಕು ಕನ್ರಲಾ. ಇನ್ನು ಮುಂದೆ  ಪುಟ್ ಬಾಲ್ ಆಡುವಾ, ನಾವು ಪ್ರಪಂಚದಾಗೆ ವಲ್ಡ್ ಪೇಮಸ್ ಆಗ್ ಬೇಕು ಏನ್ರಲಾ ಅಂದಾ ಗೌಡಪ್ಪ. ಆಯ್ತು ಗೌಡ್ರೆ. ಸರಿ ನಾಳೆಯಿಂದನೇ ಸುರು ಕನ್ರಲಾ. ಅಟ್ಟೊತ್ತಿಗೆ ಗೌಡಪ್ಪನ ಹೆಂಡ್ತಿ ಚಾ ಕುಡಿದು ತೊಲಗ್ರೀ ಅಂದ್ಲು. ಕೊಟ್ಟಿಗ್ಯಾಗೆ ಸಾನೆ ಸಗಣಿ ಬಿದ್ದೈತೆ ಬಾಚಿ ಎಲ್ಲಾ ಆದ್ರೂ ಹೋಗಿ ಸಾಯಿ ಅಂದ್ಲು ಗೌಡಪ್ಪಂಗೆ. ಪುಟ್ ಬಾಲ್ ಟೀಂನಾಗೆ  ಸುಬ್ಬ, ಸೀನ, ನಿಂಗ ಎಲ್ಲಾ ಸೇರಕ್ಕಂಡ್ರು. ಹನ್ನೊಂದು ಜನಕ್ಕೆ ಕಮ್ಮಿ ಆಗಿದ್ದಕ್ಕೆ ಎಣ್ಣು ಐಕ್ಳುಗಳನ್ನ ಹಾಕ್ಕಂಡಿದ್ವಿ. ದೊಡ್ಡ ಜಾಗ ಎಲ್ಲೂ ಇಲ್ಲಾ ಅಂತಾ ಗೌಡಪ್ಪನ ಎರಡು ಎಕರೆ ಅಡಿಕೆ ತೋಟ ನೆಲಸಮ ಮಾಡಿ ಮೈದಾನ ಮಾಡಿದ್ವಿ.  ಅಲ್ಲಿಗೆ ಗೌಡಪ್ಪಂದು ಸುಮಾರು 50ಲಕ್ಸ ಢಮಾರ್.

  ಸರಿ ಗೌಡಪ್ಪ ಕ್ಯಾಪ್ಟನ್ ಆದ. ಮೊದಲನೆ ದಿನ ಎಲ್ರನ್ನೂ ಮೈದಾನದಾಗೆ ಓಡಿಸ್ದ. ಕೆಲವು ಐಕ್ಳು ಅಂಗೆ ದಪಾ ದಪಾ ಅಂತಾ ಬೀಳವೆ. ಯಾಕ್ರಲಾ, ಲೇ ಅಡಿಕೆ ಗಿಡನಾ ಬುಡ ಸಮೇತ ತಗೆಯೋದು ಅಲ್ವೇನ್ಲಾ. ಎಣ್ಣು ಐಕ್ಳು ಬಿದ್ವು. ಯಾಕ್ರವ್ವಾ. ಮುಳ್ಳೆಲ್ಲಾ ಐತೆ ಲಂಗಕ್ಕೆ ಸಿಕ್ಕಾಕನ್ತತೆ ಅಂದ್ವು. ಸರಿ ಮಾರನೆ ದಿನಾ ಪುಲ್ ಕಿಲೀನ್ ಮಾಡಿದ್ವಿ. ನಿಂಗ ನಾನು ಗೋಲ್ ಕೀಪರ್ ಆಯ್ತೀನಿ ಅಂದಾ. ಆಗು ಮಗನೇ ನಿನಗೆ ಐತೆ ಅಂದ ಸುಬ್ಬ.  ಬಲೆ ಇಲ್ಲಾ ಅಂತ ಗೌಡಪ್ಪನ ಮನೇದು ಡಬ್ಬಲ್ ಕಾಟಿಂದು ಸೊಳ್ಳೆ ಪರದೆ ಕಟ್ಟಿದ್ವಿ. ಗೌಡಪ್ಪನ ಹೆಂಡರು ರಾತ್ರಿ ಸೊಳ್ಳೆ ಅಂತ ಬಡ್ಕಳೋಳು.

ಬಾಲಿಗೆ ಬ್ಲೋ ಕಮ್ಮಿಯಾದರೆ ಯಾರು ಹೊಡಸ್ಕಂಡು ಬರೋದು ಅಂತಾ ಗೌಡಪ್ಪ ಫುಲ್ ಬ್ಲೋ ಮಡಗಿದ್ದ. ಚೂರು ಒದ್ರೆ ಏಟೊಂದು ದೂರ ಹೋಗೋದು. ಗೌಡಪ್ಪ ಒಂದು ಸಾರಿ ಒದ್ದ ಅಂದ್ರೆ. ಹತ್ತು ನಿಮಿಷ ಆಟಕ್ಕೆ ವಿರಾಮ. ಬಾಲು ಹುಡಕೋದು ಆಟೋತ್ತು ಆಗದು. ಎಲ್ಲಾ ಈ ಟೇಮ್ನಾಗೆ ಬೀಡಿ ಸೇದವು.  ಅಂತೂ ಬಾಲ್ ಬಂತು. ನೋಡ್ರಲಾ ಬಾಲ್ ತೆಗೊಂಡು ಹೋಗಿ ನಿಂಗನ ತಾವ ಒದಿಬೇಕು. ಅಂತಿದ್ದಾಗೆನೇ ಸುಬ್ಬ ಒದ್ದೇ ಬಿಟ್ಟ. ಬಾಲ್ ಬಿದ್ದ ಹೊಡೆತಕ್ಕೆ ನಿಂಗ ಸ್ಪೈಡರ್ ಮ್ಯಾನ್ ತರಾ ಸೊಳ್ಳೆ ಪರದಾಗೆ ಅಂಟ್ಕಂಡಿದ್ದ . ಲೇ ಒಗಿದೇ 5ವರ್ಷ ಆಗೈತೆ ಅಂದ ಗೌಡಪ್ಪ.

 ಸರಿ ಆಟ ಸುರುವಾಯ್ತು. ಗೌಡಪ್ಪ ಎಲ್ಲಿ ಹೋಯ್ತಾನೋ ಮಗ ಸುಬ್ಬ ಅಡ್ಡಡ್ಡ ಹೋಗೋನು, ಕಾಲು ತುಳಿಯೋನು ಗೌಡಪ್ಪ ಬಿದ್ದು ಬಿದ್ದು ಸಾಕಾಗಿ, ನಿನ್ನ ಮನೆ ಕಾಯೋಗ ನನ್ನ ಹತ್ರ ಯಾಕಲಾ ಬಂದ್ ಸಾಯ್ತಾ ಅಂದಿದ್ದೇ ತಡ. ಸುಬ್ಬ ಎಣ್ಣು ಐಕ್ಳು ಹಿಂದೆ ಓಡೋಕ್ಕೆ ಸುರು ಮಾಡ್ದ.  ನಮ್ಮ ಐಕ್ಲೂ ಒದೆಯೋ ಹೊಡೆತಕ್ಕೆ ಹಿಡಿದು ಹಿಡಿದು ನಿಂಗ ಸಾಕಾಗಿ ಹೋಗಿದ್ದ. ಲೇ ಈಗ ರೆಸ್ಟು ಎಲ್ಲಾರೂ ಎಳ್ಳೀರು ಕುಡೀರಿ ಅಂದಾ ಗೌಡಪ್ಪ. ಒಬ್ರೊಬ್ಬರು ಬರಗೆಟ್ಟೋರು ತರಾ ಐದೈದು ಎಳ್ಳೀರು ಕುಡಿದ್ವು. ಪ್ರತೀ ವಾರ ಸಂತೆಗೆ ಗೌಡಪ್ಪ 300ಕಾಯಿ ಕಳಿಸ್ತಿದ್ನಂತೆ. ಈ ವಾರ ಏನೂ ಇಲ್ಲಾ ಅಂತಾ ಸುಬ್ಬ ನಗೋನು.

ಮತ್ತೆ ಆಟ ಸುರುವಾಯ್ತು.  ಆಟ ನಡೀತಿದ್ದಾಗೆನೇ ಜನ ಕಮ್ಮಿಯಾಗೋರು ಮತ್ತೆ ಸರಿಯಾಗೋದು. ಯಾಕ್ರಲಾ, ಅಣ್ಣಾ ಎಳ್ಳೀರು ಮಹಾತ್ಮೆ. ಕಡೇ ಷಾಟ್ ನಿಂಗ ಒದಿತಿದ್ದಾಗೆನೇ ಬಾಲ್ ಕಾಣ್ಲೇ ಇಲ್ಲ. ಎಲ್ಲಿ ಅಂತಾ ನೋಡಿದ್ರೆ, ನಿಂಗನ ಕಾಲ್ನಾಗೆ ಐತೆ. ಮಗಂದು ಕಾಲಿಂದು ಉಗುರು ಅಂಗೇ ಬಾಲಿಗೆ ನೆಟ್ಕಂಡು ರವಂಡ್ ಇದ್ದ ಬಾಲ್ ಚಪಾತಿ ತರಾ ಆಗೋಗಿತ್ತು. ಏ ಥೂ ಉಗರು ತೆಗೀಬಾರ್ದಾ ಅಂದ ಗೌಡಪ್ಪ.

ಸರಿ ಸಂಜೆ ಅಟ್ಟೊತ್ತಿಗೆ ಪ್ರಾಕ್ಟೀಸ್ ಮುಗೀತು. ಗೌಡಪ್ಪನ ಸೇರಿ ಎಲ್ರೂ ಭಿಕ್ಸುಕರು ತರಾ ಆಗಿದ್ರು. ಬಾಲ್ ಹೊಡೆಯೋಬೇಕಾದ್ರೆ ಸಲ್ಟು ಎಳೆದು ಎಳೆದು ಎಲ್ರದ್ದೂ ಹರಿದಿತ್ತು. ಗೌಡಪ್ಪ ಏ ಥೂ ಅಂತಾ ಬರೀ ಚಡ್ಯಾಗೆ ಮನೆಗೆ ಬಂದ. ಸರಿ ಪಕ್ಕದ ಹಳ್ಳಿ ಪಟೇಲನ ಜೊತೆ ಮೊದಲನೆ ಮ್ಯಾಚ್ ಮಡಗವಾ ಅಂದ ಗೌಡಪ್ಪ. ಅವನ ಎರಡನೇ ಹೆಂಡರನ್ನ ಹೊಡಕ್ಕೊಂಡು ಓಗಿದ್ದು ಸಿಟ್ಟಿತ್ತು. ಒಂದು ಭಾನುವಾರ ಸುರುವಾಗೇ ಹೋಯ್ತು. ತಾಕತ್ತಿಗೆ ನಮಗೆಲ್ಲಾ ಬೈಟು ಚಾ.ನಿಂಗನೇ ಮಾಡ್ಕೊಂಡು ಬಂದಿದ್ದ. ಅಂಗೇ ಒಂದು ಗಲ್ಕೋಸ್ ಬಿಸ್ಕತ್ತು.  ಅವ್ರೆಲ್ಲಾ ಮಾರಿ ಜಾತ್ರಾಗೆ ಎಮ್ಮೆ ಕಡಿಯೋರು ಇದ್ಗಂಗೆ ಇದ್ವು.

ಸುಬ್ಬ ಅವರ ಜೊತೆ ಜೊತೆಗೆ ಓಡೋನು. ಹಿಂದಿಂದ ಇಬ್ಬರು ಬಂದು ಸುಬ್ಬನ್ನ ಕಂಕಳಲ್ಲಿ ಎತ್ಕಂಡ್ ಬಿಡೋರು. ಬಿಡ್ರಲಾ ಅನ್ನೋನು ಸುಬ್ಬ. ಒಂದ್ಸಾರಿ ಅವರು ಒದ್ದಿದ್ದ ಬಾಲು ಮೈದಾನದಾಗೆ ಮೂರು ರವಂಡ್ ಹಾಕಿತ್ತು. ನಿಂಗ ಸುಸ್ತಾಗಿದ್ದ. ಎಲ್ಲಾದ್ರೂ ಬೇರೆ ಕಡೆಗೆ ಬಿದ್ದಿದ್ರೆ ಅಂತಾ. ಗೌಡಪ್ಪ ಮುಂದೆ ಹೋಗ್ತಿದ್ದಂಗೆನೇ ಪಕ್ಕದೂರ ಪಟೇಲ ಬಂದು ಕಾಲು ಕೊಡೋನು. ಗೌಡಪ್ಪನ ಮೂಗು ಬಾಯ್ನಾಗೆ ರಕ್ತ. ಅರಿಸಿನ ಒಂದು ಕೆಜಿ ತರಿಸಿದ್ವಿ. ರಕ್ತ ಕಾಣ್ತಿದ್ದಾಗೆನೇ ಅರಿಸಿನ ಅಂಗೇ ಮೆತ್ತದೆಯಾ. ಕಡೆಗೆ ಗೌಡಪ್ಪ ಮೈಲಾರ ದೇವರು ಭಕ್ತ ಆಗೋಗಿದ್ದ. ಅಟ್ಟೊಂದು ಅರಿಸಿನ ಬಳಿದಿದ್ವಿ.

ಗೋಲ್ ಕೀಪರ್ ನಿಂಗ ಎಲ್ರಲಾ ಅಂದ್ರೆ. ಸೊಳ್ಳೆ ಪರದೆ ಮ್ಯಾಕೆ ಮಕ್ಕಂಡಿದ್ದ. ಬಿದ್ದು ಬಿದ್ದು ಸಾಕಾಗಿ. ಗಾರ್ಡ್ ಇಲ್ಲಾ ಅಂತಾ ನಿಂಗಂಗೆ  ಕರಟ ಕೊಟ್ಟಿದ್ವಿ. ಇದು ಮೊದಲನೆ ಭಾಗ. ನಾವು ಮೀಟಿಂಗ್ ಮಾಡಿ ಗೌಡ್ರೆ ಮೋಸ ಮಾಡಬೇಕು ಅಂದೆ. ಹೂ ಕನ್ಲಾ. ಸರಿ ಮತ್ತೆ ಸುರುವಾಯ್ತು. ಗೌಡಪ್ಪ ಯಾರೇ ಓಡಿದ್ರು ಅವರಿಗೆ ಕಾಲು ಕೊಡೋದೆಯಾ. ಮರೆತು ಒಂದು ಸಾರಿ ಸುಬ್ಬಂಗೂ ಕಾಲು ಕೊಟ್ಟ. ಮಗಾ ಮೂರು ಪಲ್ಟಿ ಹೊಡೆದು ಬಿದ್ದಿದ್ದ. ತರ್ರಲಾ ಅರಿಸಿನ ಅಂದೆ. ಮಗನೆ ಎಂಗೈತೆ ಮೈಗೆ.  ಪಟೇಲಂಗೆ ಗೌಡಪ್ಪ ಹೆಂಗೆ ಬೆನ್ನತ್ತಿದ್ದ ಅಂದರೆ ಮುಂಡೇವು ಬಾಲ್ ತೊಗೊಂಡು ತೆಂಗಿನ ಮರದ ತೋಟದಾಗೆ ಎಲ್ಲಾ ರವಂಡ್ ಹಾಕಿದ್ವು. ನಾವೆಲ್ಲಾ ರೆಸ್ಟ್ ಮಾಡಿದ್ವಿ. ಹತ್ತು ನಿಮಿಷ ಆದ್ ಮ್ಯಾಕೆ ಮೈದಾನಕ್ಕೆ ಬಂದ್ರು.

ಗೌಡಪ್ಪ ಉಲ್ಟಾ ಬಾಲ್ ಹೊಡಿತೀನಿ ಅಂತಾ ಅಂಗೇ ಎಲ್ಡು ಕಾಲನ್ನೂ ಮೇಲೆತ್ತಿ ಕಿಸ್ಕಂಡಿದ್ದ. ಗೌಡ್ರೆ ಅರಿಸಿನ. ಲೇ ಮುಖದಾಗೆ ಇರೋದನ್ನೇ ತೆಗೆದು ಹಚ್ಚಕಂತೀನಿ ಬಿಡ್ರಲಾ ಅಂದಾ. ಎಣ್ಣು ಐಕ್ಳು ಸ್ವಲ್ಪ ದೂರು ಓಡವು ಅಂಗೇ ಮಕ್ಕಳೋವು. ಜಂಪ್ ಮಾಡ್ಕಂಡ್ ಓಯ್ತಿದ್ವಿ. ಎಚ್ಚರ ಆದ್ ಮ್ಯಾಕೆ ಮತ್ತೆ ಆಟಕ್ಕೆ ಸೇರೋವು. ನಮಗೆ ಮಾತ್ರ ಗುಲ್ಕೋಸ್, ಅವ್ರಿಗೆ ಬರೀ ಬೆಲ್ಲ. ಎಂಗೆ. ಅವರು ತಿಪ್ಪರಲಾಗ ಹೊಡಿದ್ರೂ ಗೋಲ್ ಹೊಡಿಬಾರದು ಅಂಗ್ ಮಾಡಿದ್ವಿ. ಕಾರ್ಯಕ್ರಮಕ್ಕೆ ಅಂತಾ ಬೆಸೀಟ್ ತಂದಿದ್ವಿ. ಅದನ್ನೇ ನಿಂಗನ ಕೈನಾಗೆ ಕೊಟ್ವಿ. ನಿಂಗ ಬಾಲ್ ಎಂಗೇ ಬಂದ್ರೂ ಅಂಗೇ ಬೀಳೋನು. ಅವನಿಗೂ ಅರಿಸಿನ ಬಳೆದಿದ್ದೇಯಾ, ಅಂತೂ ನಾವೇ ಗೆದ್ವಿ. ಆಟ ಮುಗಿದ ಮ್ಯಾಕೆ ನಿಂಗ ಕೆರ್ಕಳೋನು, ಯಾಕಲಾ. ಲೇ ಬೆಸೀಟ್ ಒಗಿದೇ ಏಟು ದಿನಾ ಆಗಿತ್ತೋ ಏನೋ. ಉಳಿದಿದ್ದ ಅರಿಸಿನಾನ ಸಿದ್ದೇಸನ ಗುಡಿಗೆ ಪೂಜೆ ಮಾಡಕ್ಕೆ ಕೊಟ್ವಿ. ಲೇ ಪೂಜಾರಪ್ಪ ಅರಿಸಿನ ಕೊಟ್ಟೀವಿ ಅಂತಾ ಬೋಲ್ಡ್ ಹಾಕ್ಸಲಾ ಅಂದಾ ಗೌಡಪ್ಪ. ಕೊಟ್ಟಿದ್ದು ಕಾಲ್ ಕೆ.ಜಿ.  ಗೌಡಪ್ಪ ಫುಲ್ ಖುಷ್ ಆಗಿದ್ದ. ಕುಸ್ತಿ ಪಂದ್ಯದಾಗೆ ಓಡೋದ ಹೆಂಡ್ತಿ ಇವನ ಆಟ ನೋಡಿ ಮತ್ತೆ ಗೌಡಪ್ಪನ ತಾವಾನೇ ಬಂದ್ಲು. ಎರಡು ಎಕರೆ ತೋಟ ಹೋಗಿದ್ದಕ್ಕೆ ಗೌಡಪ್ಪನ ಎಲ್ಡನೇ  ಹೆಂಡ್ತಿ ಬಂದ್ಲು ಕನ್ಲಾ, ಅನ್ನೋವು ನಮ್ಮ ಐಕ್ಳು.