ಬೆಳಕಿನ ಜಾಡು ಮತ್ತು ದುಗ್ಗಪ್ಪನ ಕಟ್ಟೆ

ಬೆಳಕಿನ ಜಾಡು ಮತ್ತು ದುಗ್ಗಪ್ಪನ ಕಟ್ಟೆ

ಕಳಸದ ದೇವಸ್ಥಾನದ ಹಿಂದೆ ಇದ್ದ ಗುಡ್ಡದ ಮೇಲೆ ಮಂಟಪದಂತಿದ್ದ ರಚನೆಯ ಕಡೆ ಬೊಟ್ಟು ಮಾಡಿ ’ಅದೇನು’ ಎಂದು ನನ್ನ ಅಣ್ಣನ ಹತ್ತಿರ ಕೇಳಿದೆ. ’ಓ ಅದಾ, ಫಾರೆಸ್ಟಿನವರು ಕಟ್ಟಿಸಿದ ವೀಕ್ಷಣಾ ಗೋಪುರ, ಅಲ್ಲಿ ನಿಂತರೆ ಕಳಸ ಪೇಟೆ ಚೆಂದ ಕಾಣ್ಸುತ್ತೆ. ಫೋಟೋ ತೆಗೀಬೇಕು ಅಂತಿದ್ರೆ ಹೋಗೋಣ’ ಅಂತಂದ. ’ಈಗ ಬೇಡ ಸಂಜೆ ಕತ್ತಲಾದ ಮೇಲೆ ಹೋಗೋಣ’ ಎಂದೆ.

ರಾತ್ರಿಯ ವೇಳೆಯಲ್ಲಿ ವಾಹನದ ಹೆಡ್-ಲೈಟ್ ಮೂಡಿಸುವ ಬೆಳಕಿನ ಜಾಡನ್ನು ಸೆರೆಹಿಡಿದಂತಹ ಚಿತ್ರವನ್ನು ಈ ಹಿಂದೆ ಅನೇಕ ಬಾರಿ ಅಂತರ್ಜಾಲದಲ್ಲಿ ನೋಡಿದಾಗಲೆಲ್ಲವೂ ಇಂತದ್ದೊಂದು ಚಿತ್ರ ತೆಗೀಬೇಕು ಅಂತ ಅಂದುಕೊಳ್ತಾ ಇದ್ದೆ. ಅಂದುಕೊಂಡಿದ್ದೇನೋ ನಿಜವಾದರೂ ಅದಕ್ಕಾಗಿ ಒಮ್ಮೆಯೂ ಪ್ರಯತ್ನಿಸಿದ್ದಿಲ್ಲ. ಈಗ ಹೇಗೂ ನೋಟಕ್ಕೆ ಒಳ್ಳೆಯ ಕೋನ ದೊರೆತಿದೆ. ರಾತ್ರಿ ಪೇಟೆಯ ಬೆಳಕಿನ ಜೊತೆ ದೇವಸ್ಥಾನದ ರಥಬೀದಿಯಲ್ಲಿ ಓಡಾಡುವ ವಾಹನದ ಬೆಳಕೂ ಸೇರಿದರೆ ಚಂದ ಕಾಣಬಹುದಲ್ಲವೇ ಎಂದು ನನ್ನ ಊಹೆ.

ಸಂಜೆಯ ನಂತರ ಸುಮಾರು ಎಂಟು ಗಂಟೆಯ ಸಮಯದಲ್ಲಿ ಕಾಲ್ನೆಡಿಗೆಯಲ್ಲಿ ಗುಡ್ಡ ಹತ್ತಲಾರಂಭಿಸಿದೆವು. ಮಣ್ಣಿನ ಹಾದಿ ಇದ್ದುದರಿಂದಲೂ ಮತ್ತು ಗುಡ್ಡ ಅಷ್ಟೇನೂ ಕಡಿದಾಗಿರದೆ, ಚಿಕ್ಕದಾಗಿದ್ದರಿಂದ ನಿರಾಯಾಸವಾಗಿ ಗುಡ್ಡದ ನೆತ್ತಿ ತಲುಪಿದೆವು. ದಾರಿಯಲ್ಲಿ ಬರುತ್ತಾ ಒಂದು ಕುತೂಹಲಕಾರಿಯಾದ ಘಟನೆ ನಡೆಯಿತು. ಮೇಲೆ ಮೇಲಕ್ಕೆ ಬರುತ್ತಿದ್ದಂತೆ, ನಮ್ಮ ಪಿಸುಗುಡುವ ದನಿಗೋ ಅಥವಾ ಟಾರ್ಚಿನ ಬೆಳಕಿಗೋ, ಅಲ್ಲಲ್ಲಿ ಮರದ ಮೇಲೆ ಮಲಗಿದ್ದ ಹಕ್ಕಿಗಳು ಅಸಮಾಧಾನ ಮಾಡಿಕೊಂಡು ಗಲಾಟೆ ಮಾಡಲಾರಂಭಿಸಿದೆವು. ನಮ್ಮ ತಪ್ಪಿನ ಅರಿವಾಗಿ ಟಾರ್ಚಿನ ಬೆಳಕಿನ್ನು ಆರಿಸಿ, ಮೌನದಿಂದ ಮುಂದುವರಿದ ಮೇಲೆ ಅವು ಸುಮ್ಮನಾದವು.

ನೆತ್ತಿಯ ಮೇಲೆ ಸಿಮೆಂಟ್ ನೆಲವಿದ್ದುದರಿಂದ ಟ್ರೈಪಾಡ್ ನಿಲ್ಲಿಸುವಲ್ಲಿ ಹೆಚ್ಚಿನ ಶ್ರಮ ಪಡಬೇಕಾಗಿರಲಿಲ್ಲ. ಈ ಟ್ರೈಪಾಡ್ ನಿಲ್ಲಿಸಬೇಕಾದರೆ ಅದರ ಒಂದು ಕಾಲು ನಾವು ತೆಗಯಹೊರಟ ಚಿತ್ರದ ವಿಷಯದ ಕಡೆ ಇದ್ದರೆ, ಅದರ ಇನ್ನೆರಡು ಕಾಲಿನ ನಡುವೆ ಸಾಕಷ್ಟು ಸ್ಥಳಾವಕಾಶ ಒದಗಿ ಚಿತ್ರ ತೆಗೆಯಲು ಅನುಕೂಲ. ಟ್ರೈಪಾಡಿಗೆ ಕ್ಯಾಮೆರಾ ಸಿಕ್ಕಿಸಿ, ವಿವ್ ಫೈಂಡರಿನಲ್ಲಿ ಯಾವ ಫ್ರೇಮ್ ತೆಗೆಯಬಹುದು ಎಂದು ಲೆಕ್ಕಾಚಾರ ಹಾಕಿದೆ. ಅಪಾರ್ಚರ್ ಪ್ರಿಯಾರಿಟಿ ಮೋಡಿನಲ್ಲಿ ಕ್ಯಾಮರಾದ ISO ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡಿ ಕೊಂಡು, ಅಪಾರ್ಚರ್ ಚಿಕ್ಕದು ಮಾಡುತ್ತಾ ಬಂದೆ. ISO 250, Aperture f20, 30 ಸೆಕೆಂಡ್ shutter speedನಲ್ಲಿ ನನ್ನ ಕ್ಯಾಮರಾ ಸಹಜವಾದ exposure ತೋರಿಸಿತು. ಇನ್ನು ಫೋಕಸಿಂಗ್, ಕತ್ತಲೆಯಲ್ಲಿ ಫೋಕಸ್ ಮಾಡುವುದು ನಿಜಕ್ಕೂ ಕಷ್ಟದ ಕೆಲಸ. ಆಟೋ ಪೋಕಸ್ ಆದರೆ ಚೆನ್ನಾಗಿ ಬೆಳಗಿದ ಯಾವುದಾದರೂ ವಸ್ತುವಿಗೆ ಫೋಕಸ್ ಮಾಡಬೇಕಾಗುತ್ತದೆ. ಇದರಿಂದ ಕ್ಯಾಮರಾದ ಫೋಕಸ್ infiniteಗೆ ಹೊಂದಿಕೊಳ್ಳುವುದು ಮತ್ತು ಅಪಾರ್ಚರ್ ತೆರವು ಚಿಕ್ಕದಿರುವುದರಿಂದ ಫ್ರೇಮಿನ ಮೊದಲಿಂದ ಕೊನೆಯವರೆಗೂ ಸ್ಪುಟವಾದ ಚಿತ್ರ ಮೂಡುತ್ತದೆ. ಇದು ಸಾಧ್ಯವಾಗದೇ ಹೊದರೆ ಕ್ಯಾಮರಾದ focusing modeನ್ನು manualಗೆ ಬದಲಿಸಿ, infiniteಗೆ ಹೊಂದಿಸಬಹುದು.

ಇನ್ನು ಕ್ಯಾಮರಾದ ಬಟನ್ ಅಮುಕಲು ಕಾಯಬೇಕಿದ್ದುದು ವಾಹನ ರಸ್ತೆಯನ್ನು ಪ್ರವೇಶಿಸುವುದಕ್ಕಾಗಿ ಮಾತ್ರ. ಹಾಗೇ ಪ್ರವೇಶಿಸಿದ ಮೇಲೆ ತೆಗೆದ ಚಿತ್ರ ಈ ಕೆಳಗಿನದು. ರಸ್ತೆಯಲ್ಲಿ ಕಾಣುವ ಕೆಂಪಗಿನ ಬೆಳಕಿನ ಜಾಡು ನನ್ನ ದಿಕ್ಕಿನಿಂದ ದೂರ ಸರಿಯುತ್ತಿರುವ ವಾಹನದ್ದು, ಇನ್ನೊಂದು ಬಣ್ಣದ್ದು ನಾನಿದ್ದ ಕಡೆಗೆ ಬರುತ್ತಿರುವ ವಾಹನದ್ದು. ಈ ಚಿತ್ರ ೩೦ ಸೆಕೆಂಡು ಇಲ್ಲಿ ಏನೇನಾಯಿತು ಎಂದು ಸೆರೆಹಿಡಿದಿಟ್ಟಿದೆ. ಚಳಿ, ಗಾಬರಿಯಿಂದ ಕೆಲವೊಮ್ಮೆ ಬಟನ್ ಅಮುಕುವ ವೇಳೆಯಲ್ಲಾಗುವ ಕ್ಯಾಮರಾದ ಕುಲುಕಾಟವನ್ನು ತಡೆಗಟ್ಟಲು self timer ಅಥವಾ remote ಬಳಸಬಹುದು. ಚಿತ್ರ ತೆಗೆದ ಸ್ವಲ್ಪ ಹೊತ್ತಿನ ನಂತರ ವಾತಾವರಣದಲ್ಲಿ ಮೋಡ ಕವಿಯಲಾರಂಭಿಸಿ, ಪೇಟೆಯಲ್ಲಿ ವಿದ್ಯುತ್ ನಿಲುಗಡೆ ಕೂಡ ಆಯಿತು. ಮಂಜಿನಲ್ಲಿ ಮಸುಕಾದ ಹಿನ್ನೆಲೆಯಿಂದಿಣುಕುವ ಮರಗಳನ್ನು ನೋಡುತ್ತಾ ಅಲ್ಲೇ ಸ್ವಲ್ಪ ಹೊತ್ತು ಕುಳಿತು, ಮನೆಗೆ ಮರಳಿದೆವು.

A NIGHT VIEW OF KALASA

ಚಿತ್ರ ತೆಗೆದ ಮೇಲೆ ನನ್ನ ಬಳಿ ಇದ್ದ ಜೂಮ್ ಲೆನ್ಸ್ ಮನೆಯಲ್ಲೇ ಬಿಟ್ಟು ಬಂದುದಕ್ಕಾಗಿ ಹಲುಬಿದೆ. ಲ್ಯಾಂಡ್-ಸ್ಕೇಪ್ ತೆಗೆಯಲು ಜೂಮ್ ಲೆನ್ಸ್ ಅಗತ್ಯವಿರುವುದಿಲ್ಲವೆಂಬ ನನ್ನ ಅನಿಸಿಕೆಯನ್ನು ಮರುವಿಮರ್ಷೆ ಮಾಡಿಕೊಳ್ಳಬೇಕು. ಅದು ಇದ್ದಿದ್ದರೆ ಬರೀ ರಸ್ತೆಯನ್ನು ಮಾತ್ರ ವಿಷಯವಾಗಿರಿಸಿಕೊಂಡು ಬೆಳಕಿನ ಜಾಡಿನಿಂದ ಫ್ರೇಮನ್ನು ಪರಿಣಾಮಕಾರಿಯಾಗಿ ತುಂಬಿಸಬಹುದಿತ್ತು. ಒಂದರ್ಥದಲ್ಲಿ ಇದು ನಿಜವಾಗಿಯೂ ಬೆಳಕಿನ ಜಾಡೇ ಮುಖ್ಯವಾಗಿರುವ ಚಿತ್ರ ಅಲ್ಲ, ರಾತ್ರಿಯ ನೋಟ ಅನ್ನಬಹುದು.

Rating
No votes yet

Comments