ಕಾಲ್ಚೆಂಡು ಮತ್ತು ಪಾಕ್

ಕಾಲ್ಚೆಂಡು ಮತ್ತು ಪಾಕ್

ನಮ್ಮನ್ನು ಕಾಲ್ಚೆಂಡಿನಂತೆ ನಡೆಸಿಕೊಳ್ಳುವ ಪಕ್ಕದ ದೇಶ ಪಾಕಿಗೆ ಕಾಲ್ಚೆಂಡಿನ ಮೇಲೆ ಅದ್ಯಾವ ಮೋಹವೋ ಏನೋ? ಕಾಲ್ಚೆಂಡಿನಾಟ ಪಾಕ್ ನೆಲದಲ್ಲಿ ಅಷ್ಟೇನೂ ಆಳವಾಗಿ ಬೇರೂರದೆ ಇದ್ದರೂ ವಿಶ್ವದ ಕ್ರೀಡಾ ಪಟುಗಳ ಕಾಲುಗಳಿಗೆ ಸುಂದರ, ಉತ್ಕೃಷ್ಟ ಚೆಂಡುಗಳನ್ನಂತೂ ಹೊಲಿದು ಕೊಡುತ್ತಾರೆ. ಇಂಥ ಒಳ್ಳೆಯ ಚಟುವಟಿಕೆಗಳಲ್ಲಿ ಪಾಕಿಗಳು ತಮ್ಮನ್ನು ತಾವು ತೊಡಗಿಸಿಕೊಂಡರೆ ಅವರ ಆರ್ಥಿಕ ಸ್ಥಿತಿಗೆ ಒಳ್ಳೆಯದು ಮಾತ್ರವಲ್ಲ ನಮ್ಮ ಚಿತ್ತ ಸ್ವಾಸ್ಥ್ಯಕ್ಕೂ ಒಳ್ಳೆಯದೇ. ಅದ್ಹೇಗೆ ಅಂತೀರಾ? ಬಿಡುವಿನ ಸಮಯ ಅಥವಾ ಮಾಡಲು ಯಾವುದೇ ಕಸುಬಿಲ್ಲದಾದಾಗ ನಮ್ಮ ಗಡಿಯೊಳಕ್ಕೆ, ನಗರದೊಳಕ್ಕೆ ಭಯೋತ್ಪಾದಕರನ್ನು ನುಗ್ಗಿಸಿ ರಕ್ತ ಹರಿಸೋದಕ್ಕಿಂತ ಕಾಲ್ಚೆಂಡು ಹೊಲೆದು ಕ್ರೀಡಾಪಟುಗಳ ಬೆವರು ಹರಿಸಿದರೆ ನಮಗೆ ನೆಮ್ಮದಿ ತಾನೇ? ಇವರಿಗೆ ನಿರಂತರವಾಗಿ ಕಾಲ್ಚೆಂಡ ನ್ನು ಹೊಲೆಯುವ ಕೆಲಸ ಕೊಡಲು ಬೇಕಾದರೆ ಕ್ರಿಕೆಟ್ ಜೊತೆಗೇ ನಾವು ಫುಟ್ ಬಾಲ್ ಸಹ ಆಡೋಣ, ಒಂದಿಷ್ಟು ಕಾಲ್ಚೆಂಡುಗಳ ಆರ್ಡರ್ ಅವರಿಗೆ ರವಾನಿಸಿ ತುಪಾಕಿಗಳ ಸಹವಾಸದಿಂದ ಅವರನ್ನು ಮುಕ್ತಗೊಳಿ ಸೋಣ. ಸರಾಸರಿ ವರ್ಷಕ್ಕೆ ನಾಲ್ಕು ಕೋಟಿ ಚಂಡುಗಳನ್ನು ಉತ್ಪಾದಿಸುವ ಪಾಕಿ ನಗರ ಸಿಯಾಲ್ಕೋಟ್ ವಿಶ್ವ ಪ್ರಸಿದ್ಧಿ ಪಡೆದ ಕ್ರೀಡಾ ಸಂಸ್ಥೆಗಳಾದ ಅಡಿಡಾಸ್, ನೈಕಿ, ರೀಬಾಕ್, ಲೋಟೋ, ಗಳಿಗೆ ಹಗಲು ರಾತ್ರಿ ಚೆಂಡು ಗಳನ್ನು ಸರಬರಾಜು ಮಾಡಿ ವಿದೇಶಿ ವಿನಿಮಯ ಗಳಿಸುತ್ತಿದೆ. ಒಳ್ಳೆಯ ಸಂಪಾದನೆ ನೋಡಿ. ಅಮಾಯಕರ ರಕ್ತ ಹರಿಸಿ ಅವರ ಶಾಪ ಸಂಪಾದಿಸುವುದಕ್ಕಿಂತ ಈ ಕಸುಬು ಲೇಸು ಅಲ್ಲವೇ?


ಇಷ್ಟು ದೊಡ್ಡ ಮೊತ್ತವನ್ನು ವಿದೇಶೀ ವಿನಿಮಯದ ಮೂಲಕ ಗಳಿಸುತ್ತಿರುವ ಪಾಕ್ ಮೇಲೆ ಈಗ ಚೀನಾ ಕಣ್ಣು ಹಾಕಿದೆಯಂತೆ. ಕೇವಲ ಆರು ಡಾಲರಿಗೆ ಚೆಂಡನ್ನು ಮಾರುತ್ತಿದ್ದ ಪಾಕಿಗಳಿಗೆ ಚೀನಾ ಸೆಡ್ಡು ಹೊಡೆದು ಮೂರು ದಾಲರಿಗೂ ಮಾರಲು ತಯಾರು ಎಂದು ಸಿಯಾಲ್ಕೋಟ್ ನ ಉದ್ಯಮಿಗಳಿಗೆ ನಡುಕ.


ಕಳೆದ ವರ್ಷ ೩೦೦ ಜನ ಸೇರಿ ೫,೪೧,೧೭೬ ಮಾವಿನ ಸಸಿ ನೆಟ್ಟು ಗಿನ್ನೆಸ್ ದಾಖಲೆ ಸಹ ಮಾಡಿದರು. ಇದೊಂದು ರೀತಿಯ ವಿಸ್ಮಯಕಾರೀ ವಿಷಯ ಅಲ್ಲವೇ? ಕೋವಿ, ಬಾಂಬು, ಅಂತ ಸಾವನು ನೆಡುತ್ತಾ ಸಾಗುವ ಮಂದಿಗೆ ಮಾವಿನ ಸಸಿ ನೆಡುವ ಚಾಳಿ. ಏರುವ ಸಮುದ್ರ ಮಟ್ಟ ವನ್ನು ತಡೆಯಲು ಈ ರೀತಿ ಕರಾವಳಿ ಪ್ರದೇಶದಲ್ಲಿ ಮಾವಿನ ಸಸಿ ನೆಡುತ್ತಾರಂತೆ ಪಾಕಿಗಳು. ಅವರು ಕರಾವಳಿಯಲ್ಲಿ ಮಾವನ್ನೋ, ಆಟದ ಮೈದಾನದಲ್ಲಿ ಚೆಂಡನ್ನೋ ನೆಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟರೆ ಸಾಕು ಎಂದಿರಾ?


ಈ ಮೇಲಿನ ಎರಡು ವಿದ್ಯಮಾನಗಳು ನಾಗರೀಕ ಸಮಾಜ ಮೆಚ್ಚುವಂಥದ್ದು. ಇಂಥ ಇನ್ನಷ್ಟು ಚಟುವಟಿಕೆಗಳು ಅವರ ದೇಶದೆಲ್ಲೆಡೆ ಹರಡಿ ಅವರಿಗೆ ಸುಭಿಕ್ಷೆಯನ್ನೂ ನಮಗೆ ನೆಮ್ಮದಿಯನ್ನೂ ತರಲಿ.

Rating
No votes yet

Comments