೨೦೦೬ ಕ್ಕೆ ವಿದಾಯ, ೨೦೦೭ ಕ್ಕೆ ಸ್ವಾಗತ ! ! ಮತ್ತೊಂದು ನವ ವರ್ಷ ಬರ್ತಿದೆ , ಶುಭ ತರ್ತಿದೆ !
ಈ ದಿನ ಉರುಳಿತು ಕತ್ತಲಾಯಿತು. ನವೋದಯ ಆಯಿತು. ಹೊಸ ಗಾಳಿ, ಹೊಸ ನೋಟ, ಹೊಸ ಭಾವನೆ, ಎಲ್ಲಾ ಹೊಸದೆಂದು ಹೇಳುವ ಮಾತಿನಲ್ಲಿ ಏನೋ ಸಂಭ್ರಮ !
ಪ್ರತಿದಿನವೂ ಪ್ರಕೃತಿದೇವಿ 'ನಿತ್ಯೋತ್ಸವ'ವನ್ನು ನಮಗೆ ಬೇಕೋ ಬೇಡವೋ ಮಾಡಿಯೇತೀರುತ್ತಾಳೆ ! ಇದು ಕಾಲ ಚಕ್ರದ ನಿಯಮ !
ಹೊಸ ತರಂಗ,ಸುಧಾ ,ತುಶಾರ, ಮಯೂರ, ಪತ್ರಿಕೆಗಳು ಬಂತೆ ? ಕಣ್ಣಿನಲ್ಲಿ 'ಮಿಂಚು 'ತೋರಿಸುತ್ತಾ 'ಎಳೆ ಮಗು'ವಿನ ಹಾಗೆ ಕೇಳುವ "ನನ್ನಾಕೆ" ಗೆ ಏನು ಹೇಳಬೇಕೋ ನನಗೆ ತಿಳಿಯಲ್ಲ. ಕೇವಲ ತಿಂಗಳು, ವರ್ಷ ಬದಲಾಯಿಸಿದ ಮಾತ್ರಕ್ಕೆ, ನೆನ್ನೆ -ಇಂದಿನ ೨೪ ತಾಸಿನ ಮಧ್ಯೆ ದಿಡೀರನೆ ಏನು ಹೊಸದನ್ನು ಕಾಣಲು ಸಾಧ್ಯ ?
ಆದರೂ ೨೦೦೬ ಎಷ್ಟೊ ಕಹಿ-ಸಿಹಿ ನೆನಪುಗಳನ್ನು ಬಿಟ್ಟು ಹೋಗಲಿದೆ. ನಾಳೇನೆ ಕೊನೆದಿನ ತಾನೆ ! ಅತ್ಯಂತ ಸಂತೋಷದ ಸಂಗತಿ ಎಂದರೆ ದಂತ ಚೋರ, ಕಾಡುಗಳ್ಳ, ವೀರಪ್ಪನ ಅಂತ್ಯ- ಹಾಗೂ ಇನ್ನೂ ಕೆಲವು ದುಷ್ಟ ಶಕ್ತಿಗಳ ಅಂತ್ಯ. ಇದು ಬಹು ಮುಖ್ಯ.
ದುಖಃದ ವಿಚಾರ ರಾಜ್ಕುಮಾರ್,ಮತ್ತು ಇನ್ನು ಕೆಲವು ಪ್ರಮುಖರು ನಮ್ಮನ್ನಗಲಿ ಹೋಗಿದ್ದು.ಮಠಾದಿಪತಿಗಳು ಎಲ್ಲರಿಗೂ ಮಾರ್ಗದರ್ಶನ ಮಾಡಬೇಕಾದವರು 'ಕ್ಷುಲ್ಲಕ' ಕೆಲಸಗಳನ್ನು ಮಾಡಿ, ಮತ್ತೆ ತಮ್ಮ ಪೀಠಕ್ಕೆ ಅಂಟಿಕೊಳ್ಳಲು ಪ್ರಯತ್ನಿಸುವುದು ! ಇದು ತೀರ ಕೇಳಲು, ಓದಲು, ನೋಡಲು ಅಸಹ್ಯತರುವ ಸಂಗತಿ ! ಆ ಹುದ್ದೆಯನ್ನು ಕಿತ್ತೊಗೆದು ಮಾಡಿದ ಪಾಪವನ್ನು ಒಪ್ಪಿಕೊಂಡರೆ ಅವರ ಬಗ್ಗೆ ಇನ್ನೂ ಗೌರವ ಬಂದೀತು. ಆದರೆ ಆ ಮಟ್ಟಕ್ಕೆ ಬರಬೇಕಲ್ಲ !
ಮತ್ತೊಂದು ಹೊಸ ವರ್ಷ- 'ಯುಗಾದಿ' ಮುಂದೆ ಬರಲಿದೆ ! ಕಾಲಮಾನದ ಅಳತೆ ಮತ್ತು ಅದನ್ನು ಆಚರಿಸುವ ಸಂಭ್ರಮ, ಪ್ರತಿ ಸಮುದಾಯವೂ ನಿರ್ದಿಷ್ಟವಾದ ಸಮಯದಲ್ಲಿ ಮಾಡಿಕೊಂಡು ಬಂದಿದೆ. ವೈವಿಧ್ಯತೆಯಲ್ಲಿ ಐಕ್ಯತೆಯನ್ನು ಸಾರುವ ನಮ್ಮ ಪರಂಪರೆಗೆ ಮತ್ತೊಮ್ಮೆ ಮಗದೊಮ್ಮೆ, ನಮನಗಳು. ೨೦೦೭ ನಮ್ಮೆಲ್ಲರಿಗೂ ಶುಭ ತರಲಿ !
ಪ್ರಪಂಚದಲ್ಲಿ ಶಾಂತಿ ನೆಲಸಲಿ. ಎಲ್ಲ ಸಮುದಾಯಗಳೂ ಸೌಹಾರ್ಧತೆಯಿಂದ ಬಾಳಲಿ !