ಸೈಕಲ್ ಸವಾರಿ ಮತ್ತು ಅಡ್ವೆಂಚರ್ [ನನ್ನೂರು ಮತ್ತು ನಾಸ್ಟಾಲ್ಜಿಯಾ ಭಾಗ ೨]

ಸೈಕಲ್ ಸವಾರಿ ಮತ್ತು ಅಡ್ವೆಂಚರ್ [ನನ್ನೂರು ಮತ್ತು ನಾಸ್ಟಾಲ್ಜಿಯಾ ಭಾಗ ೨]

ಆರನೇ ಕ್ಲಾಸಿನಲ್ಲಿರುವಾಗ ಅಲ್ಲಿಯವರೆಗಿನ ಅತಿ ದೊಡ್ಡ ಬಹುಮಾನ ಬಂದಿತ್ತು, ಸೈಕಲ್! ಅಲ್ಲಿಂದ ಹಿಡಿದಿತ್ತು ಸೈಕಲ್ ಸವಾರಿಯ ಹುಚ್ಚು. ಅಕ್ಕನವರೊಂದಿಗೆ ಅವರಿಗಿಂತ ಮೊದಲು ಕಲಿಯುತ್ತೇನೆ ಎಂದು  ಚಾಲೆಂಜ್ ಹಾಕಿ ಇಬ್ಬರಿಂದಲೂ ವೈಟ್ ವಾಶ್ ಸೋಲು ಅನುಭವಿಸಿದರೂ, ಕಲಿತ ನಂತರವಂತೂ ಬೆಳ್ಮಣ್ಣು ಮತ್ತು ಪುನಾರು ಎಂಬ ನಾನಿದ್ದ ಪ್ರದೇಶದಲ್ಲಿ ಹಾರಾಡಿದ್ದೆ ಹಾರಾಡಿದ್ದು. ಮನೆಯ ಮುದ್ದಿನ ಒಬ್ಬನೇ ಮಗನಾದ ನನಗೆ ಅಮ್ಮನಿಂದ ಸೈಕಲಿನಲ್ಲಿ ದೂರ ಪ್ರಯಾಣ ನಿಷೇಧಿಸಲಾಗುತ್ತಿತ್ತು. ಅಮ್ಮ ಹೇಳುತ್ತಿದ್ದ ಮತ್ತು ನನಗೆ ಗೊತ್ತಿರದಿದ್ದ ನನ್ನ ದೇಹದ ಸಮಸ್ಯೆಗಳಿಂದ ಅಮ್ಮನಿಗೆ ನನ್ನ ಅಡ್ವೆಂಚರ್ ಬುದ್ಧಿ ಇಷ್ಟವಾಗುತ್ತಿರಲಿಲ್ಲ. ಆದರೆ ಚಿಕ್ಕಂದಿನಿಂದಲೂ ಅಮ್ಮನ ಮಾತುಗಳಿಗೆ ‘ಆಯಿತು’ ಹೇಳಿ ನನಗೆ ಇಷ್ಟವಾದ ಕೆಲಸ ಮಾಡದೆ ಇರುತ್ತಿರಲಿಲ್ಲ, ಈಗಲೂ ಅಷ್ಟೇ.   

ನನ್ನ ಸೈಕಲ್ ನನಗೆ ‘ರೋಡಿಗಿಳಿದ ರಾಧಿಕಾ’ ಆಗಿದ್ದಳು. ಅದರೊಂದಿಗೆ ಕೆಲವು ಸ್ಟಂಟುಗಳನ್ನೂ ಕಲಿತಿದ್ದೆ. ಕೈಬಿಟ್ಟು ಓಡಿಸುವುದು, ಕಾಲನ್ನು ಪೆಡಲ್ ಮೇಲೆ ಇರಿಸದೆ ಹ್ಯಾಂಡಲ್ ಮೇಲಿಟ್ಟುಕೊಂಡು ಸೈಕಲ್ ಬಿಡುವುದು, ವೇಗದಿಂದ ಬಂದು ಬ್ರೇಕ್ ಹೊಡೆದು ಸ್ಕಿಡ್ ಮಾಡಿಸೋದು... ಹೀಗೆ ಕೆಲವು ನನ್ನದೇ ರೇಂಜಿನಲ್ಲಿ! ಕ್ರಮೇಣ ಬೆಳೆಯುತ್ತಿದ್ದ ಅಡ್ವೆಂಚರ್ ಹುಚ್ಚಿನಲ್ಲಿ ಮಾಡಿದ ಮಿನಿ-ಅಡ್ವೆಂಚರ್ಸ್ ಗಳೆಂದರೆ –ಮಧ್ಯಮ ಗಾತ್ರದ ಕೆಂಪು ಕಲ್ಲಿಗಳಿಂದ ಕೂಡಿದ ಜಂತ್ರ ಗುಡ್ಡೆಯ ಮೇಲೆ ಸೈಕಲಿನಲ್ಲಿ ಪ್ರಯಾಣ – ಅಲ್ಲಿಂದ ಕಾಣುವ ಅರಬ್ಬೀ ಸಮುದ್ರ ಮತ್ತು ಬೀಸುವ ತಂಗಾಳಿ ಈಗಲೂ ಚೇತೋಹಾರಿ. ನಂತರ ಪಳ್ಳಿಯಲ್ಲಿ ರಾತ್ರಿ ಕಳೆದದ್ದು, ಬೋಳದವರೆಗೆ ಅಕ್ಕನ ಮದುವೆಯ ಆಮಂತ್ರಣ ಕೊಡಲು ಹೋಗಿದ್ದು ಇತ್ಯಾದಿ ಇತ್ಯಾದಿ. ಆದರೆ ಅಡ್ವೆಂಚರ್ ಎನ್ನುವುದು ನಿಜಕ್ಕೂ ಡೇಂಜರ್ ಮುಖಕ್ಕೆ ತಿರುಗಿದ್ದು ನನ್ನ ಮರೆಯಲಾಗದ ನೆನಪು. ಈಗ ಆ ನೆನಪುಗಳು ಇಷ್ಟವಾದರೂ ಆ ದಿನಗಳಲ್ಲಿ ಕೈ ಕಾಲು ಮುರಿಯದೆ ಇದ್ದದ್ದು ಪುಣ್ಯ ಎಂದು ಆಗ ನಂಬುತ್ತಿದ್ದ ದೇವರಿಗೆ ದಿನವೂ ಅಡ್ಡ ಬೀಳುತ್ತಿದ್ದೆ.           

ಸೈಕಲ್ ಇರಲಿ ಇಲ್ಲದೆ ಇರಲಿ ಯಾವುದೇ ರೀತಿಯ ತಿರುಗುವ ಕಾರ್ಯಕ್ರಮಗಳಿಗೆ ‘ಇಲ್ಲ’ ಎಂದು ಹೇಳದಿರುವ ಅಭ್ಯಾಸ ಏಳನೆಯ ತರಗತಿಯಿಂದ. ಮೊದಲು ತಿರುಗುತ್ತಿದ್ದರೂ ಯೋಚನೆ ಮಾಡಿ ಹೋಗುತ್ತಿದ್ದವ ನಂತರ ಎಲ್ಲದಕ್ಕೂ ಓಕೆ ಎನ್ನುತ್ತಿದ್ದೆ. ಕ್ಲಾಸ್ ಬಂಕ್ ಹೊಡೆದು ಶಿರ್ವ ಜಾರಂದಾಯ ಉತ್ಸವಕ್ಕೆ ಹೋಗಿದ್ದು ಬಹುಶಃ ನನ್ನ ಬದುಕಿನ ಮೊದಲ ಬಂಕ್ ಇರಬೇಕು, ಅದು ಏಳನೆಯ ಕ್ಲಾಸಿನಲ್ಲಿ. ಮತ್ತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗಿದ್ದು ಒಂದು ಸುಂದರ ಬಂಕ್ ಕಾದಂಬರಿ. ಅದನ್ನು ಬರೆದು ಸುಮ್ಮನೆ ನನ್ನ ಇಮೇಜನ್ನು ಕೆದಕಲು ಇಷ್ಟವಿಲ್ಲ. ಆದರೆ ಒಂಭತ್ತನೆ ಕ್ಲಾಸಿನಲ್ಲಿ ವಿಘ್ನೇಶ್, ಹರಿ, ರೋಶನ್, ರಿತೇಶ್, ಪ್ರದೀಪ್ ಹೀಗೆ ಬೆಳೆದಿದ್ದ ನಮ್ಮ ಗುಂಪಿನಲ್ಲಿ ಸೇರಿದ ವ್ಯಕ್ತಿ ಕಾರ್ತಿಕ್. ನಮಗಿಂತ ಒಂದು ವರ್ಷ ಚಿಕ್ಕವನಾದ ಅವನು ನಮ್ಮ ಹಾಳಾಗಿದ್ದ ಗುಂಪಿಗೆ ಮೆರುಗು ಕೊಡಲು ಹೇಗೋ ನಮ್ಮೊಂದಿಗೆ ಹೊಂದಿಕೊಂಡಿದ್ದ. ಉತ್ತಮ ಗೆಳೆಯನಾಗಿದ್ದು ನಂತರ ಪರಮಾಪ್ತ ಗೆಳೆಯನಾಗಿದ್ದೂ ನನ್ನ ಬದುಕಿನ ಸುಂದರ ಕ್ಷಣಗಳಲ್ಲಿ ಒಂದು. ಹತ್ತನೇ ತರಗತಿಯಲ್ಲಿ ಕ್ಲಾಸಿನಲ್ಲಿ ಪಟಾಕಿ ಹೊಡೆಯುವಷ್ಟರ ಮಟ್ಟಿಗೆ ನಮ್ಮ ಪಾರಮ್ಯ ಬೆಳೆದಿತ್ತು. ಇದಕ್ಕೆಲ್ಲಾ ನಾವು ಕರೆಯುತ್ತಿದ್ದುದು ಅಡ್ವೆಂಚರ್ ಎಂದೇ.

ಒಮ್ಮೆ ರೋಶನ್ ಮನೆಗೆ ಹೋಗುವ ಪ್ಲಾನ್ ನಡೆದಿತ್ತು. ಸರಿಯಾಗಿ ನೆನಪಿಲ್ಲ ಆವತ್ತು ಏನಿತ್ತು ಅಂತ ಬಹುಶಃ ಸ್ಪೋರ್ಟ್ಸ್ ಡೆ ಇದ್ದಿರಬೇಕು. ಎಷ್ಟು ದೂರವಿತ್ತು ಎನ್ನುವುದು ಕೂಡ ಸರಿಯಾಗಿ ನೆನಪಿಲ್ಲ ಮುಕ್ಕಾಲು ಗಂಟೆಗಿಂತ ಹೆಚ್ಚು ನಡೆದಿದ್ದ ನೆನಪು. ನಡೆಯುತ್ತಾ ಎದುರಾದ ಪಾಪನಾಶಿನಿ ನದಿ ದಾಟಬೇಕಾದ ಕ್ಷಣ ಅದು. ಮಳೆಗಾಲವಾದರೆ ದೋಣಿಯ ಅಗತ್ಯ ಬೀಳುತ್ತದೆ, ಇದೇ ಕಾರಣದಿಂದ ರೋಶನ್ ಎಷ್ಟೋ ಸಲ ಬರದೆ ಇದ್ದುದುಂಟು, ಬರುವ ಮನಸ್ಸಿದ್ದರೆ ಬರಬಹುದಿತ್ತು ಎನ್ನುವುದು ನಮಗೆ ಗೊತ್ತಿದ್ದ ಸತ್ಯ. ನಮಗೆ ಏನೂ ಹಾಜರಿಗೆ ಪರ್ಸೆಂಟ್ ಇರದಿದ್ದುದು ಮತ್ತು ಕಲಿಯುವುದರಲ್ಲಿ ನಾವು ಒಬ್ಬರಿಗೊಬ್ಬರು ಪೈಪೋಟಿ ಕೊಡುವಂತೆ ಮಾರ್ಕ್ಸು ಬರುತ್ತಿದ್ದುದರಿಂದ ಅಧ್ಯಾಪಕ ವರ್ಗಕ್ಕೆ ಹೆಚ್ಚು ಅಧಿಕಾರಶಾಹಿತನ ತೋರಿಸಲು ಆಗುತ್ತಿರಲಿಲ್ಲ.

 

ಪಾಪನಾಶಿನಿ ಅಷ್ಟೇನೂ ತುಂಬಿ ಹರಿಯುತ್ತಿರಲಿಲ್ಲ. ಮೇಲಾಗಿ ಕಾರ್ತಿಕನೊಬ್ಬನನ್ನು ಬಿಟ್ಟು ಮತ್ತೆ ನಾವೆಲ್ಲರೂ ಆರಾಮದಲ್ಲಿ ಇನ್ನೊಂದು ದಡ ಸೇರಬಹುದಾಗಿತ್ತು. ಏನಾದರೂ ಅನಾಹುತವಾದರೆ ಒಬ್ಬರಿಗೂ ಈಜಲು ಬರುತ್ತಿರಲಿಲ್ಲ ಮತ್ತೆ ಅಲ್ಲಿ ಯಾರೂ ಸುತ್ತ ಮುತ್ತ ಕಾಣುತ್ತಿರಲಿಲ್ಲ ಎಂಬ ಅಂಶಗಳು ಸ್ವಲ್ಪ ಹೆದರಿಕೆ ಮೂಡಿಸಿತ್ತು. ಆದರೂ ಒಬ್ಬೊಬ್ಬರಾಗಿ ದಾಟತೊಡಗಿದೆವು. ಲಂಬೋದರ ಎಂದು ನಾವು ಕರೆಯುತ್ತಿದ್ದ ಪ್ರದೀಪ್ ನಮಗೆ ಮಾರ್ಗದರ್ಶಕನಾದ, ಆಳ ಹೆಚ್ಚಾದಂತೆ ಮಾತ್ರ ಕಾರ್ತಿಕ್ ನ ಎದೆಯ ತನಕ ನೀರು ಬರಲೂ ಪ್ರಾರಂಭವಾಯಿತು. ರಿಸ್ಕ್ ಬೇಡವೆಂದು ಅವನನ್ನು ಹೊತ್ತುಕೊಂಡು ದಾಟಿ ಆಯಿತು. ರೋಶನ್ ಮನೆಯಲ್ಲಿ ತಿಂಡಿ ತಿಂದು ಬರುವಾಗ ಅವನಿಗೆ ಗೆಳೆಯರಿಗೆ ಮನೆಯಲ್ಲಿ ಆತಿಥ್ಯ ಮಾಡಿಸಿದ ಖುಷಿ ಹೇಳ ತೀರದು. ಆ ಖುಷಿಯನ್ನು ನೋಡಲು ನಮಗೆ ಆಗದೆ ಅವನಪ್ಪನ ಗದ್ದೆಯಿಂದ ಕಬ್ಬಿನ ಕೋಲುಗಳನ್ನು ಕಿತ್ತೆವು, ನಮಗೆ ಬೈಯುತ್ತಾ ಅಪ್ಪ ನೋಡುವ ಮೊದಲು ಓಡುವ ಎಂದು ಅವನ ಭಯ ತುಂಬಿದ ಸಲಹೆಗೆ ಗೌರವ ಕೊಡುತ್ತಾ ಓಡಿದೆವು. ಮುಂದೆ ದೊಡ್ಡ ಗ್ಯಾಂಗ್ ಆಗಿ ಹೋದದ್ದು(ಕಾಲೇಜ್ ಟ್ರೆಕ್ಕಿಂಗ್ ಕ್ಯಾಂಪ್ ಗಳನ್ನು  ಬಿಟ್ಟು)ಕಡಿಮೆಯೇ ಅಂತ ಹೇಳಬಹುದು. ಅದಕ್ಕಾಗಿ ಈಗಲೂ ಆ ನೆನಪು ಕಾಡುತ್ತದೆ. ಒಬ್ಬನ ಜೊತೆಯೂ ಸಂಪರ್ಕ ಇಲ್ಲದಿರುವುದು ಖೇದವೆನಿಸುತ್ತದೆ.  

ಅದರ ನಂತರ ಹೆಚ್ಚಾಗಿಯೇ ಬೆಳೆದಿದ್ದ ಕಾರ್ತಿಕ್ ನೊಂದಿನ ಗೆಳೆತನ ಮನೆಯ ಹತ್ತಿರದ ಸ್ಥಳಗಳಲ್ಲಿ ಎಡವಟ್ಟು ಮಾಡಿಸಲು ಕಾರಣವಾಯಿತು. ನನ್ನ ಸೈಕಲಿನಲ್ಲಿ ಬರಲೂ ಆರಂಭವಾದ ಟ್ಯೂಬ್ ತೊಂದರೆಯಿಂದ ಬಸ್ಸಿನಲ್ಲಿ ಕಾರ್ತಿಕ್ ಮನೆಗೆ ಹೋಗುತ್ತಿದ್ದೆ. ಅಲ್ಲಿಂದ ಅವನ ತಮ್ಮನ ಸೈಕಲ್ ಹಿಡಿದು ಸೂಡಕ್ಕೋ ಅಥವಾ ಪಿಲಾರುಖಾನ ದೇವಸ್ತಾನಕ್ಕೋ ಹೋಗುತ್ತಿದ್ದೆವು. ದೇವಸ್ಥಾನಕ್ಕೆ ಮೊದಲಿನಿಂದಲೂ ಹೋಗುವುದರಲ್ಲಿ ನಾನು ಅಷ್ಟಕಷ್ಟೇ, ಆದರೆ ಪಿಲಾರುಖಾನ ದೇವಸ್ಥಾನ ನನ್ನ ಅಚ್ಚುಮೆಚ್ಚಿನ ದೇವಳ. ಇದರ ಬಗ್ಗೆ ಮುಂದಿನ ಭಾಗದಲ್ಲಿ ಬರೆಯುತ್ತೇನೆ. ಅವತ್ತು ಅಲ್ಲಿಗೆ ಹೋಗಿ ಮರಳಿ ಬರುವಾಗ ಒಂದು ವಿಷಯ ಅರ್ಥವಾಯಿತು, ಅದೂ ತುಂಬಾ ತಡವಾಗಿ! ಸೈಕಲಿನ ಬ್ರೇಕ್ ಕೆಲಸ ಮಾಡುತ್ತಿಲ್ಲ. ಮುರಕಲ್ಲಿನ ಎದ್ದಾದಿಡ್ಡಿ ಆ ರಸ್ತೆಯಲ್ಲಿ ಹೆಚ್ಚುತ್ತಿರುವ ವೇಗದೊಂದಿಗೆ ಬ್ಯಾಲನ್ಸ್ ಮಾಡುತ್ತಲೇ ಹೋದರೂ ಸಿಕ್ಕ ದೊಡ್ಡ ತಿರುವಿನಲ್ಲಿ ಬಂದ ವೇಗದಿಂದ ತಿರುಗಿಸಲು ಆಗಲಿಲ್ಲ. ಸೀದಾ ಹೋಗಿ ಗುದ್ದಿದ್ದು ಮರಕ್ಕೆ ಕಾರ್ತಿಕ್ ಒಂದು ಕಡೆ, ನಾನು ಒಂದು ಕಡೆ! ನೋವಿದ್ದರೂ ಎದ್ದು ಬಂದು ಸೈಕಲಿಗೆ ಏನಾಗಿದೆ ಎಂದು ನೋಡಿದೆವು, ಏನೂ ಆಗಿರಲಿಲ್ಲ. ಸರಿ, ಮೊದಲು ಇಲ್ಲಿಂದ ಹೋಗೋಣ ಏನು ಹೊರಟಾಗ ಅರಿವಾಗಿದ್ದು, ಮುಂದಿನ ಚಕ್ರದ ಮೇಲಿನ ಭಾಗ ಬೆಂಡಾಗಿದೆ ಎಂದು. ಹೊರಗಿನಿಂದ ಏನೂ ಕಾಣದಿದ್ದರೂ ಬಿಡುವಾಗ ಆಗುತ್ತಿದ್ದ ಸಮಸ್ಯೆಯಿಂದ ಕಾರ್ತಿಕ್ 'ಇವತ್ತು ತಮ್ಮನಿಂದ ಉಂಟು ನನಗೆ!' ಎಂದು ಹೇಳಿ, ನೀನು ಹೋಗು ಮನೆಗೆ ನಾನು ನೋಡಿಕೊಳ್ಳುತ್ತೇನೆ ಎಂದು ನನ್ನನ್ನು ಅಲ್ಲಿಂದ ಓಡಿಸಿದ.

ಮುಂದಿನ ನಾಲ್ಕು ದಿನ ಹಾಸಿಗೆಯಿಂದ ಏಳದಿದ್ದರೂ ನನಗೆ ನನಗೋಸ್ಕರ ಬೈಗುಳ ತಿಂದ ಕಾರ್ತಿಕನ ಮೇಲೆ ಬೇಜಾರು ಆಗುತ್ತಿತ್ತು. ಅತ್ಯಂತ ಅಪಾಯಕಾರಿಯಾಗಿ ನಡೆದ ಆ ಆಕ್ಸಿಡೆಂಟ್ ನಂತರ ಆ ರೀತಿ ಆಗಿದ್ದು ಕಡಿಮೆ. ಕಳೆದ ವರ್ಷ ತಮ್ಹಿನಿ ಘಾಟಿಯಲ್ಲಿ ಸಹೋದ್ಯೋಗಿ  ಪರಾಗ್ ನ ಫಿಯೆರೋವನ್ನು ಕೂಡ ಗುದ್ದಿ ಬದುಕಿ ಬಂದದ್ದು, ಅದರ ಮೇಲೆ ಒಂದೂ ಫ್ರಾಕ್ಚರ್ ಆಗದಿದ್ದದ್ದು ಅದರ ನಂತರ ಆದ ಆಶ್ಚರ್ಯಗಳಲ್ಲಿ ಒಂದು. ಯಾವುದೇ ಕಾರಣವಿಲ್ಲದೆ ಬದುಕುತ್ತಿದ್ದ ಆ ಸಮಯದಲ್ಲಿ ನನ್ನೊಂದಿಗೆ ಇದ್ದ ಗೆಳೆಯರ ಬಳಗ ಇಂದಿಗೂ ನೆನೆಪಾಗುತ್ತಾರೆ. ಈಗ ಹೋಗಿ ಪುನಃ ಅದೇ ರೀತಿ ಹುಚ್ಚುಗಟ್ಟಲು ಆಗುವುದಿಲ್ಲ ನಿಜ. ಆದರೆ ಮನಸ್ಸಿನ ಒಳಗೆ ಹೊಡೆದಿರುವ ಶಾಶ್ವತ ಪ್ರಿಂಟ್ ಬಾಲ್ಯದ ಗೆಳೆಯರದು, ಮನೆಯಲ್ಲಿ ಸ್ಟೋರ್ ರೂಮಿನಲ್ಲಿ ಬಿದ್ದಿರುವ ಸೈಕಲಿನದು ಕೂಡ!  

Rating
No votes yet

Comments