ಅಂದು ಶುಕ್ರವಾರವೇ ಆಗಿರಬೇಕಲ್ಲ...!.
ಘಂ ಅಂತ ಪರಿಮಳ ಮೂಗಿಗೆ ಅಡರುತ್ತಿದ್ದಂತೆ ಒಮ್ಮೆಲೆ ಆಹ್ ಎಂಬ ಉದ್ಘಾರ ತನ್ನಷ್ಟಕ್ಕೆ ಹೊರಡುತ್ತಿತ್ತು. ತೆಗೆದುಕೊಂಡ ಪರಿಮಳ ಸಮೇತ ಹಿಂದೆ ಸರಿಯುತ್ತಿದ್ದಂತೆ ಅಕ್ಕ ಅಥವಾ ಅಣ್ಣ ಪರಿಮಳ ಸ್ವಾದಕ್ಕೆ ಮುನ್ನುಗ್ಗುತಿದ್ದರು. ಆಗ ಅಮ್ಮ " ಥೋ ಸಾಕು ಸರ್ಕಳ್ರಾ... ಯಂಗೆ ಬೆಳಗ್ಗಿನ ಕೆಲ್ಸ ಆಗಲ್ಲೆ ಅಂತ ಬಡ್ಕತ್ತಾ ಇದ್ರೆ ಇವ್ರಿದ್ದೊಂದು ರಗಳೆ" ಎಂದಾಗ ಅಲ್ಲಿಂದ ದೌಡು. ಇದು ಪಕ್ಕಾ ಪಕ್ಕಾ ಮೂವತ್ತು ವರ್ಷಗಳ ಹಿಂದೆ ಪ್ರತೀ ಶುಕ್ರವಾರ ನಡೆಯುತಿದ್ದ ಘಟನೆ. ಇವತ್ತು ಶುಕ್ರವಾರ ಬೆಳಿಗ್ಗೆ ಚಪಾತಿ ಹಣ್ ಮೆಣ್ಸಿನಕಾಯಿ ಚಟ್ನೆ ಜೊತೆಗೆ ಘಂ ಎಂಬ ತುಪ್ಪ ಸಕ್ರೆ ನಂಜಿಕೊಂಡು ಮುಕ್ಕುವಾಗ ಹಳೇ ಕತೆ ನೆನಪಾಯಿತು.
ಪ್ರತೀ ಶುಕ್ರವಾರ ಮುದ್ದೆ ಬೆಣ್ಣೆಕಾಯಿಸಿ ತುಪ್ಪ ಮಾಡುವ ದಿವಸ. ನಮ್ಮ ಹಳ್ಳಿ ಮನೆಗಳಲ್ಲಿ ಹಾಲು ಮಜ್ಜಿಗೆ ತುಪ್ಪದ ಕುರಿತಾದ ಹಾಗೂ ವಾರಗಳಿಗೆ ತಳಕು ಹಾಕಿಕೊಂಡ ಒಂದಿಷ್ಟು ಶಾಸ್ತ್ರಗಳು ಇತ್ತು, ಇತ್ತು ಏನು ಇನ್ನೂ ಜೀವಂತವಾಗಿವೆ. ಸೋಮವಾರ ಹಾಗೂ ಶನಿವಾರ ಜನ್ನೆ ಬಿಡುವುದು. ಜನ್ನೆ ಎಂದರೆ ಆವತ್ತು ಮೊಸರು ಕಡೆಯದ ದಿವಸ ಅಂದರ್ಥ. ಅಮವಾಸೆಯಂದೂ ಹಾಗೆಯೇ. ಆ ದಿನಗಳು ಮೊಸರಿನ ಸುಗ್ರಾಸ ಭೋಜನ ಮನೆಮಂದಿಗೆಲ್ಲ. ಹಾಗೆಯೇ ಶುಕ್ರವಾರ ಬೆಣ್ಣೆ ಕಾಯಿಸಿ ತುಪ್ಪ ಮಾಡುವ ದಿವಸ. ವಾರಪೂರ್ತಿ ತಿಳಿನೀರಿನಲ್ಲಿ ತೇಲಿಸಿಟ್ಟ ಬೆಣ್ಣೆ ಶುಕ್ರವಾರ ಪಾತ್ರೆ ಸೇರಿ ಕೊತ ಕೊತ ಕುದಿಯಲಾರಂಬಿಸುತ್ತದೆ. ಅದರ ಸದ್ದೇ ಕೇಳಲು ಮಜ. ಪ್ರಾರಂಬಿಕ ಹಂತದಲ್ಲಿ ಅದು ಕೆಟ್ಟ ವಾಸನೆ, ನಂತರ ಬೆಣ್ಣೆ ಕಾದು ತುಪ್ಪವಾದಗ ಪರಿಮಳ ಇದೆಯಲ್ಲ ಅದರ ಸ್ವಾರಸ್ಯ ವರ್ಣಿಸಲಸದಳ. ನಾನು ಆರಂಭದಲ್ಲಿ ಹೇಳಿದ್ದ ವಾಕ್ಯಗಳು ಈ ಕ್ಷಣದ್ದು. ಹಾರಿ ಹೋಗುವ ವಾಸನೆಯನ್ನು ಮೂಗಿಗೆ ಸುರಿವಿಕೊಳ್ಳುವುದರಿಂದ ಅಮ್ಮನಿಗೂ ನಷ್ಟದ ಬಾಬತ್ತಿಲ್ಲ ಆದರೆ ಅಡಿಗೆ ಮನೆಯಲ್ಲಿ ಇದಕ್ಕಾಗಿ ಪೈಪೋಟಿಯ ಜಗಳದ ಕಾರಣ ಕೊಂಚ ಹುಸಿಮುನಿಸಷ್ಟೆ. ಈಗ ಅಮ್ಮನ ಕೆಲಸ ನನ್ನಾಕೆ ಮಾಡುತ್ತಿದ್ದಾಳೆ, ಆದರೆ ನನ್ನ ಕೆಲಸ ನನ್ನ ಮಗ ಮಾಡುತ್ತಿಲ್ಲ. ನನಗೆ ಇಂದೂ ಹಾಗೆ ತುಪ್ಪದ ಪಾತ್ರೆಗೆ ಬಗ್ಗಿ ವಾಸನೆ ತೆಗೆದುಕೊಳ್ಳುವ ಇರಾದೆ ಇದೆ, ಆದರೆ " ರೀ ನೀವು ಈಗ ಸಣ್ಣ ಹುಡುಗ್ರಲ್ಲ" ಅಂತ ಹೆಂಡತಿ ಅಂದುಬಿಟ್ಟರೆ...? ಒಂಥರಾ ಮರ್ಯಾದೆಗೆ ಕುತ್ತು ಬರುವ ಕೆಲಸವಲ್ಲವೇ..? ಹಾಗಾಗಿ ಘನಗಂಭೀರನಾಗಿರಲು ಯತ್ನಿಸಿ ಸುಮ್ಮನುಳಿಯುತ್ತೇನೆ. ಆದರೂ ಅಲ್ಲೇ ಆಚೀಚೆ ಅಡ್ಡಾಡಿ ತೀರಾ ಬಗ್ಗಿ ಅಲ್ಲದಿದ್ದರೂ ಹಾಗೆ ಗಾಳಿಯಲ್ಲಿ ಹಾರಾಡುವ ಪರಿಮಳ ಆಸ್ವಾದಿಸುತ್ತೇನೆ. ಇರಲಿ ನಂತರದ ಕತೆ ನೋಡೋಣ.
ತುಪ್ಪ ಕಾದು ಇಳಿಸಿದ ನಂತರ ಬಿಳಿಯದಾದ ಬಟ್ಟೆಯಲ್ಲಿ ಸೋಸಿ ನಂತರ ಉಳಿದ ಜಂಡಿನ ಪಾತ್ರೆ ಸಮೇತ ಗೋಡೆಗೆ ಒರಗಿಸಿ ಖಾಲಿಪಾತ್ರೆಯನ್ನು ಇಡುತ್ತಾರೆ. ಈಗಿನ ಕೆಲಸ ದೇವರಿಗೆ. ಮೊದಲೇ ಮಾಡಿಟ್ಟುಕೊಂಡಿದ್ದ ಹತ್ತಿಯ ಹೂಬತ್ತಿಯ ಕರಡಿಗೆಯನ್ನು ತಂದು ಉಳಿದ ತುಪ್ಪದ ಜೊಂಡಿನಲ್ಲಿ ಹೂಬತ್ತಿಯನ್ನು ಅದ್ದಿ ಡಬ್ಬಿಯೊಳಗೆ ಒಂದರ ಪಕ್ಕದಲ್ಲಿ ಒಂದು ಇಡುತ್ತಾರೆ. ಅದು ನಿತ್ಯ ವಾಸ್ತುಬಾಗಿಲಿನ ಮುಂದೆ ಹಚ್ಚಲು ತುಪ್ಪದ ಬತ್ತಿ. ಇದರ ಸಂಖ್ಯೆ ಮುಂದಿನ ಶುಕ್ರವಾರದ ವರೆಗೆ ಎಷ್ಟು ಬೇಕೋ ಅಷ್ಟೆ.
ಅಷ್ಟರಲ್ಲಿ ತುಪ್ಪ ತಣಿದು ಹೆರೆಗಟ್ಟುವತ್ತ ಸಾಗುತ್ತಿರುತ್ತದೆ. ಆಗ ಅವತ್ತಿನ ತಿಂಡಿಗೆ ಎಲ್ಲರಿಗೂ ಒಂದೊಂದು ಚಮಚ ಹಸಿ ಹಸಿ ಬಿಸಿ ಬಿಸಿ ಸುವಾಸನೆಯುಕ್ತ ತುಪ್ಪ... ವಾವ್ ಘಂ ಘಂ ಘಂ ಅಂತ ಪರಿಮಳ ಸೇವಿಸಲು ಒಮ್ಮೆ ಬನ್ನಿಯಲ್ಲ ಆದರೆ ಅಂದು ಶುಕ್ರವಾರವೇ ಆಗಿರಬೇಕಲ್ಲ.
(ಹರೀಶ್ ಹೇಳಿದ ನಂತರ ಸೇರಿಸಿದ್ದು: ನಮ್ಮಮ್ಮ ವಿಳ್ಯದೆಲೆಯನ್ನು ಹಾಕುತ್ತಿದ್ದರು ಬೆಣ್ಣೆಯ ಜತೆ. ನನ್ನಾಕೆ ಈಗ ತುಳಸಿ ಹಾಗೂ ಎರಡು ಹರಳು ಉಪು ಅಥವಾ ಮೆಣಸಿನ ಎಲೆ ಹಾಕುತ್ತಿದ್ದಾಳೆ ಘಂ ಎನ್ನಲು )
Rating
Comments
ಉ: ಅಂದು ಶುಕ್ರವಾರವೇ ಆಗಿರಬೇಕಲ್ಲ...!.
ಉ: ಅಂದು ಶುಕ್ರವಾರವೇ ಆಗಿರಬೇಕಲ್ಲ...!.
ಉ: ಅಂದು ಶುಕ್ರವಾರವೇ ಆಗಿರಬೇಕಲ್ಲ...!.