ನಿಮಗೆ ಸದಾ ನನ್ನ ನೆನಪನ್ನು ಮಾಡಿಸುತ್ತಿರಲಿ!

ನಿಮಗೆ ಸದಾ ನನ್ನ ನೆನಪನ್ನು ಮಾಡಿಸುತ್ತಿರಲಿ!

 


ಇಂದಿಗೆ ವರುಷಗಳು ಮುಗಿದುಹೋದರೂ ನಲವತ್ತ ಎಂಟು
ನಾ ಸಂಪಾದಿಸಿಲ್ಲ ಭೌತಿಕ ಆಸ್ತಿ, ನನ್ನಲ್ಲಿಲ್ಲ ದೊಡ್ಡ ಗಂಟು


ನನ್ನ ಜೊತೆಗಿದೆ ಆತ್ಮೀಯ ಸ್ನೇಹಿತರೊಂದಿಗಿನ ನಂಟು
ಇದುವೇ ನನ್ನಾಸ್ತಿ, ಹೇಳಿ ಇನ್ನೇಕೆ ಬೇಕು ಅನ್ಯ ಗಂಟು


ವರುಷ ಕಳೆದು ವರುಷಗಳು ಹೀಗೇ ಸಾಗುತ್ತಲೇ ಇವೆ
ತಲೆಯ ಮೇಲಿನ ಕೂದಲುಗಳೂ ಉದುರುತ್ತಲೇ ಇವೆ


ಹೊರಗೆ ಖಾಲಿಯಾದರೂ ತಲೆಯ ಒಳಗಿನದು ಇರಲಿ
ನನ್ನನ್ನು ಹುರಿದುಂಬಿಸುವ ನನ್ನವರ ಹಾರೈಕೆಗಳಿರಲಿ


ಸಂಬಂಧಿಗಳ ನಡುವಣ ಬಾಂಧವ್ಯ ಅದ್ಯಾಕೋ ಕುಂದಿ
ನೋವನ್ನೀಡಿದರೂ ಹೆಚ್ಚುತ್ತಿದ್ದಾರೆ ನನ್ನ ಸ್ನೇಹಿತ ಮಂದಿ


ಇಳೆಯೊಳಗೆ ಯಾವುದೂ ಶಾಶ್ವತ ಅಲ್ಲ ನನ್ನನ್ನೂ ಸೇರಿ
ತಲೆಕೆಡಿಸಿಕೊಳ್ಳಲಾರೆ ಹೋದರೂ ಸಂಬಂಧಗಳು ಜಾರಿ


ನನ್ನ ಪರಿಚಯ ಜಗಕೆ ಬರೀ ಇಲ್ಲಿರುವ ನನ್ನ ಮಾತುಗಳಿಂದ
ಪಡೆದೆ ನಾನೀ ಭಾಗ್ಯ ನನ್ನ ಹಿರಿಯರ ಆಶೀರ್ವಾದಗಳಿಂದ


ಆ ಅಜ್ಜಯ್ಯ, ಅಪ್ಪಯ್ಯ ಮತ್ತು ನಮ್ಮಮ್ಮ ಬಾಳಿ ನಡೆದ ಹಾದಿ
ತೋರಿದಾ ಬೆಳಕಿಂದ ಬೆಳಗಿಸುತಿಹೆ ನಾನಿಲ್ಲಿ ಬರೆದು ದ್ವಿಪದಿ


ಸದಾ ನಿಮ್ಮ ಶುಭ ಹರಕೆಗಳಿರಲಿಲ್ಲಿ ನನ್ನ ಬೆನ್ನು ತಟ್ಟುವುದಕೆ
ಅದುವೇ ಶಕ್ತಿ ನನ್ನ ಭಾವಗಳಿಗೆ ಇಲ್ಲಿ ಅಕ್ಷರರೂಪ ಕೊಡುವುದಕೆ


ಕಾಲಕಾಲಕ್ಕೂ ಆಸುಮನದ ಮಾತುಗಳು ಶಾಶ್ವತವಾಗಿರಲಿ
ಈ ಮಾತುಗಳು ನಿಮಗೆ ಸದಾ ನನ್ನ ನೆನಪನ್ನು ಮಾಡಿಸುತ್ತಿರಲಿ!
************************************

Rating
No votes yet

Comments