ಬೊಕ್ಕ ತಲೆಯೆಂದರೆ......

ಬೊಕ್ಕ ತಲೆಯೆಂದರೆ......

ಸಂಪದದಲ್ಲಿರುವ ಮೀಸೆ ಆಂದೋಲನ ನೋಡಿದ ಮೇಲೆ, ನನ್ನ ಒಂದು ಘಟನೆ ನೆನಪಾಯಿತು. ಇತ್ತೀಚೆಗೆ ಸ್ನೇಹಿತರೆಲ್ಲಾ ವಿಷಯವೊಂದರ ಬಗ್ಗೆ ಮೀಟಿಂಗ್ ಸೇರಿದ್ವಿ.ಊಟಕ್ಕೆ ಅಂತಾ ಕುಳಿತ ಸಂದರ್ಭದಲ್ಲಿ. ಸಣ್ಣವರೆಲ್ಲಾ ಒಂದು ಕಡೆ ಕುಳಿತುಕೊಳ್ಳಿ, ಬಾಂಡ್ಲಿ ತಲೆ ಇರೋರು ಒಂದು ಕಡೆ ಕೂತ್ ಕೊಳ್ಳಿ. ಅಂತಾ ಸ್ನೇಹಿತನೊಬ್ಬ ನುಡಿಯುತ್ತಿದ್ದಂತೆ, ಶುರುವಾಯಿತು. ಮಾತಿಗೆ ಮಾತು. ಆದರೆ ಸ್ನೇಹಿತ ನರೇಂದ್ರ ವಯಸ್ಸಿನಲ್ಲಿ ಚಿಕ್ಕವನು. ಮದುವೆಯೂ ಆಗಿಲ್ಲ. ಆದರೆ ಬೊಕ್ಕ ತಲೆಯಿಂದಾಗಿ ಅವನು ಹಿರಿಯರ ಜೊತೆ ಸೇರಬೇಕೆಂದು ಎಲ್ಲರೂ ಚೇಡಿಸಿದರು.ಇದರ ಬಗ್ಗೆ ದೊಡ್ಡ ಚರ್ಚೆಯೇ ನಡೆದು ಹೋಯಿತು.

ಕೂದಲು ತಲೆ ತುಂಬಾ ಇದ್ದರೆ ನೋಡೋಕ್ಕೆ ಲಕ್ಷಣ, ಹಾಗೇ ವಯಸ್ಸು ಗೊತ್ತಾಗುವುದಿಲ್ಲ. ಬಿಳಿ ಕೂದಲು ಆದರೂ ಅದಕ್ಕೆ ಬಣ್ಣ ಬಳಿದು ಕಪ್ಪು ಮಾಡಿಕೊಳ್ಳಬಹುದು. ಕೂದಲೇ ತಲೆಗೆ ಭೂಷಣ. ಬಾಂಡ್ಲಿ ತಲೆಯವರಿಗೆ ಮುಖ ತಲೆಗೆ ವ್ಯತ್ಯಾಸವೇ ಇಲ್ಲ. ಮುಖ ತೊಳಿಬೇಕು ಎಂದರೆ ಸೋಪನ್ನು ಎಲ್ಲಿಯವರೆಗೆ ಹಚ್ಚಬೇಕು ಎನ್ನುವ ಸಮಸ್ಯೆ, ಏನಾದರೂ ಬಡಿದರೆ ಬೇಗ ಗಾಯವಾಗುತ್ತೆ ಎಂಬಲ್ಲಿ ತನಕ ಚರ್ಚೆ ನಡೆದು ಹೋಯಿತು.

ಇದಕ್ಕೆ ದನಿಗೂಡಿಸಿದ ಹಿರಿಯರು ಬಾಂಡ್ಲಿ ತಲೆ ಇದ್ದರೆ ಒಂದು ಕೊಬ್ಬರಿ ಎಣ್ಣೆ ಬೇಡ. ಹಿರಿಯರು ಅಂತಾ ಸಮಾಜದಲ್ಲಿ ಗೌರವ ಸಿಗುತ್ತದೆ. ಅಪರಿಚಿತರು ಬಹುವಚನದಿಂದ ಸಂಭೋದಿಸುತ್ತಾರೆ. ಹಾಗೇ ಹೆಚ್ಚಿನ ಜವಾಬ್ದಾರಿಯ ಕೆಲಸಗಳನ್ನು ನೀಡುತ್ತಾರೆ.ಹೇನಾಗಲ್ಲ. ಷಾಂಪು ಕಡಿಮೆ ಬಳಕೆ. ಇದೀಗಿನ ತಂತ್ರಜ್ಞಾನದಿಂದ ನಾವು ಕೂಡ ಕೂದಲು ನೆಟಿ ಮಾಡಿಸಬಹುದು ಹಾಗೇ ವಿಗ್ ಬೇಕಾದರೂ ಹಾಕಬಹುದು. ಆದರೆ ನಾವು ಹೀಗೆಯೇ ಇರುತ್ತೇವೆ.  ಹೀಗಿದ್ದರೆ ಚೆನ್ನ ಎಂದರು. ಆದರೆ ಕಟಿಂಗ್ ಮಾಡ್ಸಿಕೊಳ್ಳೋಕೆ ಎಲ್ಲರಿಗೂ ಒಂದೇ ಚಾರ್ಜ್.

ನರೇಂದ್ರ ಪೆಚ್ಚಾಗಿಯೇ ಕುಳಿತಿದ್ದ. ನೀನು ಏನಾದರೂ ಮಾತನಾಡು ಎಂದಾಗ ಈ ತಲೆ ನೋಡಿ ಸಾಕಷ್ಟು ಹೆಣ್ಣುಗಳು ಬೇಡ ಅಂದಿದ್ದಾರಲೇ. ಎಲ್ಲಾ ನಮ್ಮಪ್ಪನ ಹೆರಿಡಿಟಿ ಅಂತಾ ಬೇಜಾರ್ ಮಾಡ್ಕಂಡ. ಈ ಚರ್ಚೆ ಎಲ್ಲಿಯ ತನಕ ನಡೀತೆಂದರೆ ನಿಜವಾದ ವಿಷಯವನ್ನೇ ಮರೆಯುವವರೆಗೆ ಹೋಗಿತ್ತು. ಅದಕ್ಕೆ ಸ್ನೇಹಿತ ಗಿಡ್ಡಪ್ಪ, ತಲೆಯಲ್ಲಿ ಕೂದಲು ಇದೆಯೋ ಇಲ್ವೋ ಒಳಗೆ ಬುದ್ದಿ ಇದ್ದರೆ ಸಾಕು ಅಂತಿದ್ದಾಗೆನೇ ಎಲ್ಲರೂ ನಕ್ಕು ಚರ್ಚೆಗೊಂದು ಪೂರ್ಣ ವಿರಾಮ ಹಾಕಿದ್ದರು.

Rating
No votes yet

Comments