ನೀಲ್ ಕಮಲ್ ಚೇರು
ಖಾಲಿ ಮನಸ್ಸಿನಿಂದ ಕಳೆದುಹೋಗಿ ಇಹ ಜಗತ್ತಿಗೆ ಮರಳಿದಾಗ ನನ್ನ ಗೆಳತಿಗೆ ಎದುರಿಗೆ ಕಂಡದ್ದು ನೀಲ್ ಕಮಲ್ ಪ್ಲಾಸ್ಟಿಕ್ ಚೇರು. ಒಂದೇ ಸಮನೆ ನಗಾಡಲಾರಂಭಿಸಿದಾಗ ದಂಗುಬಡಿಯುವ ಸರದಿ ನನ್ನದು. ವಿವರಿಸಲಾರಂಭಿಸಿದಳು.
ಅವಳ ಗೆಳತಿಗೆ ಅಂದರೆ ನನ್ನ ಗೆಳತಿಯ ಗೆಳತಿಗೆ ವರಾನ್ವೇಷಣೆಯ ಸಮಯ. ಫೋಟೋ ನೋಡಿ ತನಗೆ ಬೇಡವೆಂದರೂ, ಫೋಟೋದಲ್ಲಿ ಕೆಲವರು ದಪ್ಪಗಾಗಿ ಕಾಣುವವರುಂಟು. ಆದರೆ ಭೇಟಿಮಾಡಿ ನೋಡಿದರೆ ಒಮ್ಮೊಮ್ಮೆ ಸರಿಯಾಗಿದ್ದಾರೆ ಎನ್ನಿಸುವುದುಂಟು. ಹಾಗಾಗಿ ಮನೆಗೆ ಬರಲಿ ಬಿಡು, ಆಮೇಲೆ ನೋಡೋಣ ಎಂಬ ತಂದೆ-ತಾಯಿಯರ ಮಾತಿಗೆ ಇಲ್ಲವೆನ್ನಲಾಗಲಿಲ್ಲ ಅವಳಿಗೆ. ಸರಿ. ಒಂದು ಮೌಲ್ಯಯುತವಾದ ಭಾನುವಾರದಂದು ಭೇಟಿಗೆ ಸಜ್ಜಾದರು. ವರನನ್ನು ನೋಡಿದವಳಿಗೆ ತೆರೆದ ಬಾಯನ್ನು ಮುಚ್ಚಲು ’ಬಾಯಿ ತೆರೆದಿದೆ’ ಎಂದು ಮನಸ್ಸಿಗೆ ಅನ್ನಿಸುವಷ್ಟು ಸಮಯ ಹಿಡಿಯಿತು. ಕಮ್ಮಿ ಎಂದರೂ ೧೦೦ ಕೆ.ಜಿ. ಯಷ್ಟು ತೂಗಬಹುದವನು. ಕುಶಲೋಪಚಾರದ ನಂತರ ಅವರೀರ್ವರಿಗೇ ಏಕಾಂತದಲ್ಲಿ ಮಾತನಾಡುವ ಅವಕಾಶ. ’ಮಹಡಿಯ ಮೇಲೆ ಹೋಗಲಿ ಬಿಡಿ’ ಇವರ ಮಾತಿಗೆ ಅವರ ಒಪ್ಪಿಗೆ.ಮೇಲೆ ಒಂದು ಮಂಚ ಮತ್ತೊಂದು ನೀಲ್ ಕಮಲ್ ಚೇರು. ಇವಳು ಮಂಚದ ಮೇಲೆ. ಅವನು ಚೇರಿನ ಮೇಲೆ. ವರನೇ ಮಾತಿಗೆ ತೊಡಗಿದ.
'ನೀವು ಸಾಫ್ಟ್ ವೇರಂತೆ'.
'ಇಲ್ಲ, ನಾನು ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿ'.
'ಹಾಂ. ಅದೇ ನಾ ಹೇಳಿದ್ದು'.
ನೀಲ್ ಕಮಲ್ ಚೇರು ಯಾಕೋ ತೂಗುವಂತೆ ಕಾಣುತ್ತಿದೆ ಇವಳಿಗೆ. ಅವನಿಗೆ ಅದರ ಪರಿವೆ ಇದ್ದಂತೆ ಕಾಣಲಿಲ್ಲ. ಮತ್ತೆ ಮಾತಿಗೆಳೆದ.
'ನಾನೂ ಸಾಫ್ಟ್ ವೇರ್ ಉದ್ಯೋಗಿ. ನಂಗೆ ಒಬ್ಬಳು ಅಕ್ಕ. ಅವಳೂ ಸಹಾ. ನಾನು ಜಾವಾ ಮೇಲೆ ಕೆಲಸ ಮಾಡೋದು. ನಮ್ಮಕ್ಕ ಸಿ. ಪ್ಲಸ್. ಪ್ಲಸ್. ನೀವೂ ಕೂಡಾ ಸಿ. ಪ್ಲಸ್. ಪ್ಲಸ್. ಅಂತೆ. ಗುಡ್ ಗುಡ್.' ಇಷ್ಟು ಹೇಳಿದ್ದ. ನಾನು ಹಾಂ... ಎನ್ನುತ್ತಿದ್ದೆ ಅಷ್ಟೆ. ಫಟಾರ್... ತೂಗುತ್ತಿದ್ದ ನೀಲ್ ಕಮಲ್ ಚೇರು ನೆಲಕ್ಕುರುಳಿತ್ತು. ಹಿಂದಿನ ಎರೆಡು ಕಾಲುಗಳು ಎರೆಡು ದಿಕ್ಕುಗಳಿಗೆ. ’ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ’ ಎಂದು ಕೈ ಹಿಡಿದು ಏಳಲು ಸಹಾಯ ಮಾಡಬಹುದಿತ್ತು. ಮಾಡಬೇಕು ಅನ್ನಿಸಲಿಲ್ಲ ಇವಳಿಗೆ. ಆಘಾತದಲ್ಲೇ ಕುಳಿತಿದ್ದಳು. ಅವನೇ ಸಾವರಿಸಿಕೊಂಡು ಮೇಲೆದ್ದ. ಬಂದು ಮಂಚದ ಮೇಲೆ ಆಸೀನನಾದ.
’ಓಲ್ಡ್ ಚೇರಿರಬೇಕು’, ಕಷ್ಟದ ನಗೆ ತೋರಿಸಿ ಅಂದ.ಇವಳಿಗೆ ಮಂಚದ ಮೇಲೇ ಕಣ್ಣು.
ಎರಡು ದಿನದ ನಂತರ ಅವನ ತಂದೆ ಅವಳ ತಂದೆಗೆ ಫೋನಾಯಿಸಿದರು.
’ನಿಮ್ಮ ಮಗಳಿಗೆ ಏನನ್ನಿಸಿತಂತೆ ನಮ್ಮ ಮಗನ ಬಗ್ಗೆ’ - ಆ ಕಡೆಯಿಂದ.
’ನಮ್ಮ ಮಗಳಿಗೆ ಅಷ್ಟೊಂದು ಇಷ್ಟ ಆಗಲಿಲ್ಲ ನಿಮ್ಮ ಮಗ’ - ಇವಳ ತಂದೆ.
’ನಮ್ಮ ಮಗನದ್ದೂ ಅದೇ ಅಭಿಪ್ರಾಯ. ಆ ಚೇರೂ ಮುರ್ದೊಯ್ತಲ್ಲ...’ - ಆ ಕಡೆಯಿಂದ.
- ಮಾಧವ
Comments
ಉ: ನೀಲ್ ಕಮಲ್ ಚೇರು
ಉ: ನೀಲ್ ಕಮಲ್ ಚೇರು
ಉ: ನೀಲ್ ಕಮಲ್ ಚೇರು