ಜೇನುನೊಣಗಳ ವೈಚಿತ್ರ್ಯಗಳು - ೧ - ರಾಣಿ ಜೇನು
ನನ್ನ ಜೀವನದಲ್ಲಿ ಈವರೆಗೆ ನಾನು ಕಂಡ, ಅನುಭವಿಸಿದ, ಯೋಚಿಸಿದ, ವಿಚಾರಿಸಿದ, ಕಲಿತ ವಿಷಯಗಳಲ್ಲಿ ಅಥವಾ ಸಂಗತಿಗಳಲ್ಲಿ ಅತ್ಯಂತ ವಿಶೇಷವಾದದ್ದೆಂದರೆ ಜೇನುನೊಣಗಳ ಜೊತೆ ಒಡನಾಟ. ಬಾಲ್ಯದಲ್ಲಿ ಅಪ್ಪನ ಜೊತೆ ಓಡಾಡಿಕೊಂಡು ಜೇನಿನ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದೆ. ಹಾಗೆಯೇ ದೊಡ್ಡವನಾಗಿ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ನಾನಾಗಿಯೇ ಅವುಗಳ ಜೊತೆ ವ್ಯವಹರಿಸಬಲ್ಲಷ್ಟು ತಿಳುವಳಿಕೆ ಬೆಳೆಸಿಕೊಂಡಿದ್ದೆ! ಒಂದು ಕಾಲದಲ್ಲಿ ನನ್ನ ಸ್ವಂತ ಪರಿಶ್ರಮದಿಂದ ವರ್ಷವೊಂದರಲ್ಲಿ ಹೆಚ್ಚೂ ಕಮ್ಮಿ ೨೦ ಕೆಜಿ ಯಷ್ಟು ಜೇನನ್ನು ಬೆಳೆಸಿದ್ದೆ. ಈಗಿನ ಸಂದರ್ಭದಲ್ಲಿ ದೊಡ್ಡ ವಿಷಯವೇನಲ್ಲ ಬಿಡಿ, ಆದರೆ ಆ ಸಮಯಕ್ಕೆ ನನ್ನ ಮಟ್ಟಿಗೆ ಅದು ದೊಡ್ಡ ಸಾಧನೆ. ಅಷ್ಟೊಂದು ಜೇನು ಸಿಕ್ಕಿತು ಹೇಳುವ ಖುಷಿಗಿಂತಲೂ ಅವುಗಳ ಬಗ್ಗೆ ಅಷ್ಟೊಂದು ತಿಳಿದುಕೊಂಡಿದ್ದೇನಲ್ಲಾ ಎನ್ನುವ ಖುಷಿಯೇ ದೊಡ್ಡದು. ಇದರಲ್ಲಿ ಅಪ್ಪನ ಕೊಡುಗೆಯೇ ದೊಡ್ಡದು. ಅದರ ಜೊತೆ ನನ್ನ ಬಾಲ್ಯದ ಕುತೂಹಲ. ಹಾಗೂ ಆ ಕಾಲದಲ್ಲಿ ನನ್ನಂಥ ಶಾಲೆಗೆ ಹೋಗುವ ಮಕ್ಕಳಿಗೆ ಲಭ್ಯವಿದ್ದ ಬಿಡುವಿನ ವೇಳೆ (ಈಗಿನಂತೆ ಟ್ಯೂಶನ್ನಿಗೆ ಹೋಗಿ 'ಉತ್ತಮ' ಅಂಕ ಪಡೆಯುವ ದರ್ದು ಆಗ ನನಗೆ ಇರಲಿಲ್ಲ).
ಸಂಪದದಲ್ಲಿ ಇಷ್ಟೊಂದು ಜನ ಸಹೃದಯರು, ಸಮಾನಮನಸ್ಕರಿರುವಾಗ ಅವರ ಜೊತೆ ನನ್ನ ಹಾಗೂ ಜೇನಿನ ಕಥೆಗಳನ್ನು ಹಂಚಿಕೊಳ್ಳುವ ಮನಸಾಯಿತು. ಅದಕ್ಕೇ ಈ ಲೇಖನ ಸರಣಿ. ಈ ಲೇಖನಗಳಲ್ಲಿ ಜೇನಿನ ಬಗ್ಗೆ ಕೃಷಿ ತಜ್ಞರಂತೆ ಅಂಕಿ ಅಂಶಗಳನ್ನು ಕೊಡುವುದೂ, ಬೇಸಾಯ ಕ್ರಮಗಳನ್ನು ತಿಳಿಸುವುದೂ ನನ್ನ ಉದ್ದೇಶವಲ್ಲ. ಅದು ನನಗೆ ತಿಳಿಯದು ಕೂಡ. ಜೇನಿನಲ್ಲಿ ನಾನು ಕಂಡ ಅದ್ಭುತಗಳನ್ನು, ಅನುಭವಗಳನ್ನು ಹಾಗೂ ಅವುಗಳ ಬಗ್ಗೆ ಓದಿ ತಿಳಿದುಕೊಂಡ ಸಂಗತಿಗಳನ್ನು ಸಂಪದಿಗರ ಜೊತೆ ಹಂಚಿಕೊಳ್ಳುವುದಷ್ಟೇ ನನ್ನ ಉದ್ದೇಶ.
ಇನ್ನು ಮೊದಲ ಕಂತಿನ ಭಾಗವಾಗಿ ರಾಣಿ ಜೇನಿನ ಬಗ್ಗೆ ತಿಳಿಯೋಣ. ರಾಣಿ ಜೇನು ಹೆಸರೇ ಹೇಳುವಂತೆ ಜೇನು ಕುಟುಂಬದ ರಾಣಿ. ಇದು ಕೇವಲ ಶಬ್ದಾರ್ಥದಲ್ಲಿ ಮಾತ್ರ ರಾಣಿ ಅಲ್ಲ, ರಾಣಿಯೊಂದು ಜೇನುಕುಟುಂಬಕ್ಕೆ ಪರ್ಯಾಯ ಪದವೂ ಹೌದು. ಯಾಕೆ ಅಂತೀರಾ, ರಾಣಿಯಿಲ್ಲದೆ ಜೇನು ಕುಟುಂಬವೊಂದು ಅಸ್ಥಿತ್ವದಲ್ಲೇ ಇರಲಾರದು. ರಾಜ ರಾಣಿಯರಿಲ್ಲದೆ ಮಾನವರು ಇರಬಹುದು. ಕಾಡು ಪ್ರಾಣಿಗಳು ರಾಜ ರಾಣಿಯರಿಲ್ಲದಯೇ ಬದುಕಬಹುದು. ಆದರೆ ಜೇನಿಗೆ ರಾಣಿಯಿಲ್ಲದೆ ಬದುಕೇ ಇಲ್ಲ! ಇದೇಕೆ ಹೀಗೆ ಎಂದು ನೀವು ಕೇಳಬಹುದು. ಇದಕ್ಕೂ ಒಂದು ಕಾರಣವಿದೆ. ರಾಣಿ ಜೇನು ಎಂದರೆ ಇಡೀ ಜೇನುಕುಟುಂಬದಲ್ಲಿರುವ ಏಕೈಕ ಹೆಣ್ಣು ಜೀವ! ಹೆಣ್ಣಿಲ್ಲದೇ ಬಾಳೆಲ್ಲಿ? ಅದಕ್ಕೇ ರಾಣಿಜೇನಿಗೆ ಈ ಪರಿ ಮಹತ್ವ.
ಜೇನು ಕುಟುಂಬವೊಂದರಲ್ಲಿ ಮೂರು ರೀತಿಯ ನೊಣಗಳಿವೆ. ಹೆಣ್ಣು (ರಾಣಿಜೇನು), ಗಂಡು ಹಾಗೂ ಕೆಲಸಗಾರ (ನಪುಂಸಕ) ನೊಣಗಳು. ನಾವು ನೀವು ಜೇನ್ನೊಣಗಳು ಎಂದು ಕರೆಯುವ ನೊಣಗಳು ನಿಜವಾಗಿಯೂ ನಪುಂಸಕರು. ಇವುಗಳ ಬಗ್ಗೆ ಹಾಗೂ ಗಂಡು ನೊಣಗಳೆಂಬ ನತದೃಷ್ಟ ನೊಣಗಳ ಬಗ್ಗೆ ಪ್ರತ್ಯೇಕವಾಗಿ ಬರೆಯುತ್ತೇನೆ.
ಈ ರಾಣಿಜೇನು ಅನ್ನುವ ವಿಚಿತ್ರ ಜೀವಿಯ ಮೂಲವೂ ಉಳಿದ ಕೆಲಸಗಾರ ನೊಣಗಳ ಮೂಲವೂ ಒಂದೇ. ಅಂದರೆ ಅವೆರಡೂ ಒಂದೇ ರೀತಿಯ ಮೊಟ್ಟೆಗಳಿಂದ ಉತ್ಪತ್ತಿಯಾದವು. ಆದರೆ ಮೊಟ್ಟೆ ಒಡೆದು ಹೊರಬರುವ ಲಾರ್ವಗಳಿಗೆ ನೀಡುವ ಆಹಾರದ ಮೇಲೆ ಅದು ರಾಣಿನೊಣವಾಗುವುದೋ ನಪುಂಸಕನಾಗುವುದೋ ಎಂಬುದು ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ ಎಳೇ ನಪುಂಸಕರ ಗ್ರಂಥಿಗಳಲ್ಲಿ ಸ್ರವಿಸುವ 'ರಾಯಲ್ ಜೆಲ್ಲಿ' (ಪ್ರೋಟೀನ್ ಯುಕ್ತ ಆಹಾರ) ಎಂದು ಕರೆಯಲ್ಪಡುವ ಒಂದು ವಿಶೇಷ ಆಹಾರ ವಸ್ತು ಇರುತ್ತದೆ. ಇದನ್ನು ಈ ಕೆಲಸಗಾರ ನೊಣಗಳು ಎಲ್ಲಾ ಲಾರ್ವೆಗಳಿಗೂ ತಿನ್ನಿಸುತ್ತವೆ. ಆದರೆ ರಾಣಿ ಲಾರ್ವೆಗೆ ಹೆಚ್ಚು ಕಾಲ ಹಾಗು ಹೆಚ್ಚು ಪ್ರಮಾಣದಲ್ಲಿ ತಿನ್ನಿಸುತ್ತವೆ. ಹಾಗಾಗಿ ಮೊಟ್ಟೆಯೊಂದು ರಾಣಿಜೇನು ಆಗುವುದೂ ನಪುಂಸಕನಾಗುವುದೂ ನಪುಂಸಕರ ಕೈಯಲ್ಲೇ ಇದೆ! ಅಂದರೆ ಒಂದರ್ಥದಲ್ಲಿ ಉಳಿದ ಕೆಲಸಗಾರ ನೊಣಗಳು ನಪುಂಸಕ ರಾಜನಿದ್ದಂತೆ. ಅವುಗಳ ಒಮ್ಮತದ ನಿರ್ಧಾರವೇ ಕುಟುಂಬದಲ್ಲಿ ಅಂತಿಮ.
ಇನ್ನು ಲಾರ್ವೆ ಹಂತದಿಂದ ಪ್ರೌಢಾವಸ್ಥೆಗೆ ಬಂದ ರಾಣಿಜೇನು ಕೆಲವೇ ದಿನಗಳಲ್ಲಿ ಹಲವಾರು ಗಂಡುಗಳೊಡನೆ ಕೂಡುತ್ತದೆ. ಅದೂ ಗೂಡಿನೊಳಗಲ್ಲ, ಆಕಾಶದಲ್ಲಿ! ರಾಣಿ ಜೇನು ಗಂಡನ್ನು ಕೂಡಲು ಆಕಾಶಕ್ಕೆ ಹಾರಿದ ಕೂಡಲೇ ನೂರಾರು ಕೆಲವೊಮ್ಮೆ ಸಾವಿರಾರು ಗಂಡುಗಳು ಅವಳನ್ನು ಹಿಂಬಾಲಿಸುತ್ತವೆ. ಅವುಗಳಲ್ಲಿ ಹಲವಾರು ಗಂಡುಗಳ ಜೊತೆ ಕೂಡಿದ ರಾಣಿಜೇನು ಅವುಗಳ ವೀರ್ಯವನ್ನು ತನ್ನ ವೀರ್ಯಚೀಲದಲ್ಲಿ ಸಂಗ್ರಹಿಸಿಡುತ್ತದೆ! ಇದೇ ವೀರ್ಯವನ್ನು ಮೂಂದೆ ಅದು ಜೀವಮಾನವಿಡೀ ಕಾಪಾಡಿಕೊಳುತ್ತದೆ (ರಾಣಿ ಜೇನಿನ ಆಯುಸ್ಸು ಸಾಮಾನ್ಯವಾಗಿ ೨-೩ ವರ್ಷ). ಹಾಗೂ ಈ ರೀತಿ ಒಂದು ಬಾರಿ ಕೂಡಿದ ರಾಣಿಜೇನು (ಕೆಲವೊಂದು ಬಾರಿ ೨-೩ ದಿನಗಳ ಕಾಲವೂ ಕೂಡುತ್ತಿರುದಂತೆ) ತನ್ನ ಉಳಿದ ಜೀವಮಾನದಲ್ಲೆಂದೂ ಗಂಡನ್ನು ಮೂಸಿಯೂ ನೋಡದು. ಅಷ್ಟೇ ಅಲ್ಲ, ಹೀಗೆ ಸಂಗ್ರಹಿಸಿದ ವೀರ್ಯವನ್ನು ತನಗೆ ಬೇಕಾದಾಗ ಸ್ರವಿಸಿ ಮೊಟ್ಟೆಯನ್ನು ಫಲಿಸಿ ನಂತರ ಮೊಟ್ಟೆಯಿಡುವ ಶಕ್ತಿ ರಾಣಿಜೇನಿಗಿದೆ. ಹಾಗೆಯೇ ವೀರ್ಯ ಸೋಕದ ಗೊಡ್ಡು ಮೊಟೆಯನ್ನು ಇಟ್ಟು ಅದರ ಮೂಲಕ ಗಂಡು ನೊಣಗಳನ್ನು ಉತ್ಪಾದಿಸುವ ಶಕ್ತಿಯೂ ಇದಕ್ಕೆ ಇದೆ! ಹಾಗೆಂದು ತನ್ನ ಮನಸೋ ಇಚ್ಚೆ ಮೊಟ್ಟೆಗಳನ್ನು ಇಡುವಂತಿಲ್ಲ. ಯಾವ ಮೊಟ್ಟೆ ಇಡಬೇಕೆಂದು (ಫಲಿತ/ಫಲಿಸದ) ನಿರ್ದೇಶಿಸುವುದು ಕುಟುಂಬದ ನಪುಂಸಕರು!!! ತಲೆ ಚಿಟ್ಟು ಹಿಡಿಯುತ್ತಿದೆಯೇ? ಹೌದು.. ಜೇನ್ನೊಣಗಳ ಜೀವನವೇ ಅದ್ಭುತ ಹಾಗೂ ವಿಚಿತ್ರ. ಅದಕ್ಕೇ ಅವುಗಳ ಬಗ್ಗೆ ಇನ್ನಷ್ಟು ತಿಳಿಯುವ ಹಂಬಲ!
ಇನ್ನು ರಾಣಿಜೇನಿಗೆ ನಮ್ಮ ಮನುಷ್ಯ ಮಹಿಳೆಯ ಗುಣವೂ ಇದೆ. ಅದುವೇ ಮತ್ಸರ. ಇಡೀ ಕುಟುಂಬವೊಂದರಲ್ಲಿ ಒಂದಕ್ಕಿಂತ ಹೆಚ್ಚು ಹೆಣ್ಣು ಯಾವುದೇ ಸಂದರ್ಭದಲ್ಲಿ ಇರಲಾರದು! ಒಂದು ವೇಳೆ ಇರುವ ಸಂದರ್ಭ ಬಂದರೆ ಒಂದೋ ಕುಟುಂಬ ಪಾಲಾಗಿ ಹೋಗುತ್ತದೆ (ಇದರ ಬಗ್ಗೆ ಇನ್ನೊಮ್ಮೆ ಬರೆಯುವೆ) ಅಥವಾ ಇರುವ ರಾಣಿಗಳಲ್ಲಿ ಹೆಚ್ಚು ಶಕ್ತಿಶಾಲಿಯಾದ ರಾಣಿ ತಾನೇ ಮುಂದೆ ನಿಂತು ಇತರ ರಾಣಿಗಳನ್ನು ಕೊಲ್ಲಿಸುತ್ತದೆ! ಇದು ಹೊಸದಾಗಿ ಕೋಶದಿಂದ ಹೊರಬಂದ ಕನ್ಯೆಯರಿಗೂ ಅನ್ವಯಿಸುತ್ತದೆ. ಇದು ಅತ್ಯಂತ ಕ್ರೂರ ನಿಸರ್ಗ ನಿಯಮ. ಅಷ್ಟಕ್ಕೂ ನಿಸರ್ಗದ ಭಾಷೆಯಲ್ಲಿ ಕ್ರೂರ ಅನ್ಯಾಯ ಇತ್ಯಾದಿ ಶಬ್ದಗಳಿಗೆ ಅರ್ಥವಿದೆಯೇ? ಬಹುಷ: ಇಲ್ಲವೇನೋ?
ಇನ್ನು ರಾಣಿ ಜೇನು ಸಕತ್ ಪರಾವಲಂಬಿಯೂ ಹೌದು. ಅದು ಸ್ವತ: ಏನೂ ಮಾಡದು. ಆಹಾರವನ್ನೂ ತಿನ್ನಲಾರದು. ಜೇನಿನ ಮೇಲೆಯೇ ಓಡಾಡಿಕೊಂಡಿದ್ದರೂ ಅದಕ್ಕೆ ಜೇನನ್ನು ತಿನ್ನಲು ಬಾರದು. ಕೆಲಸಗಾರ ನೊಣಗಳು ಅಗಿದು ಕೊಟ್ಟದ್ದನ್ನು ಮಾತ್ರ ತಿನ್ನಬಲ್ಲದು. ಅದರ ಎಲ್ಲಾ ಕೆಲಸಗಳನ್ನೂ ನಿರ್ದೇಶಿಸುವುದು ಕೆಲಸಗಾರ ನೊಣಗಳೇ. ಎಲ್ಲಿ ಮೊಟ್ಟೆ ಇಡಬೇಕು, ಎಲ್ಲಿ ಹೋಗಬೇಕು ಬರಬೇಕು ಇತ್ಯಾದಿ (ಗೂಡು ಬದಲಾಯಿಸುವ ಸಮಯದಲ್ಲಿ, ಇದರ ಬಗ್ಗೆ ಮುಂದೆ ಬರೆಯುತ್ತೇನೆ).
ರಾಣಿಜೇನಿನ ಇನ್ನೊಂದು ಗುಣವೆಂದರೆ ಅವಳ ಚಲನಶೀಲತೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ.. ಆಕೆಗೆ ಕೂತಲ್ಲಿ ಕೂರುವುದೆ ಹೇಗೆಂದು ಗೊತ್ತೇ ಇಲ್ಲ! ಸದಾ ಇತರ ನೊಣಗಳಿಗಿಂತ ವೇಗವಾಗಿ, ಇಡೀ ಗೂಡಿನ ಒಳಗೆ ಸಂಚರಿಸುತ್ತಿರುತ್ತಾಳೆ. ಕೆಲವೊಂದು ನಪುಂಸಕಗಳೂ ಬಾಡಿಗಾರ್ಡುಗಳಂತೆ ಅವಳನ್ನು ಹಿಂಬಾಲಿಸುತ್ತವೆ (ಸಮಯಕ್ಕೆ ಸರಿಯಾಗಿ ಆಹಾರ ಕೊಡುವುದು, ಮೊಟ್ಟೆ ಇಡುವ ಜಾಗ ತೋರಿಸುವುದು ಇತ್ಯಾದಿ ಇವುಗಳದ್ದು ಕೆಲಸ). ಒಮ್ಮೊಮ್ಮೆ ಎನೋ ಟ್ರೀ ಟ್ರೀ ಅಂತ ಶಬ್ದ ಮಾಡುತ್ತಿರುತ್ತಾಳೆ. ಗೂಡನ್ನು ಪರೀಕ್ಷಿಸುವ ಸಮಯದಲ್ಲಿ ನನಗೆ ಇವಳನ್ನು ಹುಡುಕುವುದೇ ಒಂದು ಮಜಾ.. ನಿಧಾನಕ್ಕೆ ಕಿವಿಗೊಟ್ಟು ಅವಳ ಶಬ್ದ ಎಲ್ಲಿಯಾದರೂ ಕೇಳಿಸುತ್ತಿದೆಯೋ ಎಂದು ಆಲಿಸುವುದು. ಕೇಳಿಸಿದಲ್ಲಿ ಅಲ್ಲೇ ಎಲ್ಲೋ ಇದ್ದಾಳೆ ಎಂದೇ ಅರ್ಥ. ನಂತರ ಆ ಪ್ರದೇಶದಲ್ಲಿ ಹೆಚ್ಚು ಚಲನೆಯಲ್ಲಿರುವ ಜಾಗ ಯಾವುದು ಎಂದು ಹುಡುಕುವುದು. ಅಂತಹ ಜಾಗದಲ್ಲಿ ರಾಣಿ ಇದ್ದೇ ಇರುತ್ತಾಳೆ! (ಉದ್ದೇಶಪೂರ್ವಕವಾಗಿಯೇ ಮಾಡಿದ personification)
ಇಷ್ಟೆಲ್ಲ ಪ್ರಾಮುಖ್ಯತೆಯಿರುವ ರಾಣಿಜೇನಿನ ಅಂತ್ಯವಾದರೆ ಮಾತ್ರ ಅವಳ ಪಾಡು ನಾಯಿಪಾಡು. ಸವತಿಯೊಬ್ಬಳಿಂದ ಹತ್ಯೆಯಾದ ರಾಣಿಜೇನಿನ ದೇಹ ಹೀನಾಯವಾಗಿ ಗೂಡಿನಿಂದ ಹೊರಕ್ಕೆಸೆಯಲ್ಪಡುತ್ತದೆ. ಅದಕ್ಕೇ ಹೇಳಿದ್ದು ಪ್ರಕೃತಿಯ ಡಿಕ್ಷನರಿಯಲ್ಲಿ ದಯೆ ಕರುಣೆ ಇತ್ಯಾದಿಗಳಿಗೆ ಅರ್ಥ ಇಲ್ಲ ಅಂತ. ರಾಣಿ ಅಂತಲ್ಲ, ಗೂಡಿನೊಳಗೇ ಯಾವುದೇ ಅನಪೇಕ್ಷಿತ ವಸ್ತು ಇದ್ದಲ್ಲಿ ಅದನ್ನು ಕೂಡಲೇ ಹೊರಗೆಸೆಯುವ ಬಧ್ಧತೆ ನೊಣಗಳಿಗಿದೆ. ಅವುಗಳ ಸ್ವಛ್ಛತೆಯಿಂದ ನಾವು ಕಲಿಯಬೇಕಾದ್ದು ಬೇಕಾಷ್ಟಿದೆ!