ಬಸವಣ್ಣನವರ ಕಾಲವೂ . . .? ಬರಗೂರರಿಗೊಂದು ಪ್ರತಿಕ್ರಿಯೆ
ಇತ್ತೀಚಿಗೆ ಪ್ರಜಾವಾಣಿಯಲ್ಲಿ ಬರಗೂರು ರಾಮಚಂದ್ರಪ್ಪ ಬರೆದ ಬಸವಣ್ಣನವರ ಕಾಲದಲ್ಲಿ ಎಲ್ಲವೂ ಆಗಿತ್ತೇ? [ಮೇ 23] ವಿಷಯದ ಕುರಿತಂತೆ ಪ್ರತಿಕ್ರಿಯೆ ಇದಾಗಿದೆ. ಕಾರ್ಲ ಮಾರ್ಕ್ಸ್, ಅಂಬೇಡ್ಕರ, ಮತ್ತು ಗಾಂಧೀ ವಿಚಾರಗಳನ್ನು ಬಸವಣ್ಣನವರ ಕಾಲದಲ್ಲಿಯೇ ಆಚರಣೆಗೆ ತಂದಿದ್ದರೆಂಬುದು ಒಂದು ಭ್ರಮೆ, ಬದಲಾಗಿ ಅವರ ಕಾಲವೂ ಕೇವಲ ಧಾರ್ಮಿಕ ಸಮಾನತೆಯನ್ನು ತರುವ ಚಳುವಳಿಯಾಗಿತ್ತು ಎಂದು ಬರಗೂರು ರಾಮಚಂದ್ರಪ್ಪರವರು ವಾದ ಮಂಡಿಸಿದ್ದಾರೆ.ಈ ಅಂಶವನ್ನು ಸ್ಪಷ್ಟೀಕರಣಗೊಳಿಸಲು ಅವರ ವಾದದ ಎರಡು ಎಳೆಗಳನ್ನು ಇಲ್ಲಿ ಗುರುತಿಸಲಾಗಿದೆ: ‘ವೈದಿಕ ಶಾಹಿಗೆ ಪರ್ಯಾಯ ನಿರ್ಮಾಣ ಮಾಡುವ ಪ್ರಮುಖ ಪ್ರಕ್ರಿಯೆಯಾಗಿದೆ’ ಮತ್ತು ‘ಜಾತಿ ವ್ಯವಸ್ಥೆಯ ವಿರೋಧವು ಶಿವ ಕೇಂದ್ರಿತವಾಗಿತ್ತು’ ಎಂಬುದು. ಈ ಲೇಖನದಲ್ಲಿ ಅವರ ವಾದದ ಕುರಿತು ನಮ್ಮ ಪ್ರತಿಕ್ರಿಯೆ. ಬರಗೂರರಿಗೆ ‘ವಚನ ಚಳುವಳಿ’ಯು ಏಕೆ ಧಾರ್ಮಿಕ ಅಸಮಾನತೆ ಚಳುವಳಿಯಾಗಿ ಕಂಡಿತು ಎಂಬುದು ತುಂಬಾ ಮುಖ್ಯವಾದ ವಿಚಾರವಾಗಿದೆ. ಅವರ ವಾದವು ಈ ಮುಂದಿನಂತಿದೆ: ಹಿಂದೂಯಿಸಂ ಒಂದು ರಿಲಿಜನ್ ಆಗಿದ್ದು, ಮೂಲದಲ್ಲಿ ಶುದ್ಧ ರೂಪವನ್ನು ಪಡೆದುಕೊಂಡಿತ್ತು ಆದರೆ ಕಾಲಾನಂತರ ವೈದಿಕ ಶಾಹಿಯ ಕೈವಾಡದಿಂದ ಭ್ರಷ್ಟಗೊಳ್ಳುತ್ತಾ ಬಂದಿತ್ತು.ವೈದಿಕ ಶಾಹಿಯು ತುಂಬಾ ಪ್ರಬಲರಾಗಿದ್ದು,ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿ ಸಮಾಜದ ಮೇಲೆ ತನ್ನ ಹಿಡಿತ ಸಾಧಿಸಿ, ಜನರನ್ನು ಶೋಷಿಸುತ್ತಿತ್ತು, ಇದಕ್ಕೆ ತುತ್ತಾದವರೆಂದರೆ ಬ್ರಾಹ್ಮಣೇತರ ಜಾತಿಗಳು.ಇಂತಹ ಒಂದು ಸಂದರ್ಭದಲ್ಲಿ ಬಸವಣ್ಣನಂತಹ ಸಮಾಜ ಸುಧಾರಕರು, ವೈದಿಕ ಶಾಹಿಯು ಎಸಗುತ್ತಿದ್ದ ಕೃತ್ಯಗಳನ್ನು ತಡೆಗಟ್ಟುವ,ಜಾತಿ ವ್ಯವಸ್ಥೆಯನ್ನು ನಿರ್ಮೂಲನ ಮಾಡುವ ಹಾಗೂ ಭ್ರಷ್ಟಗೊಂಡ ಹಿಂದೂಯಿಸಂನ್ನು ಶುದ್ಧಗೊಳಿಸುವ ಕೈಂಕರ್ಯಕ್ಕೆ ಮುಂದಾದರು. ಇಂತಹ ಗ್ರಹಿಕೆಯನ್ನು ಮೂಲಭೂತವಾಗಿ ನಂಬಿಕೊಂಡಿರುವುದರಿಂದಲೇ ಬಹುತೇಕ ಚಿಂತಕರಿಗೆ ವಚನ ಚಳುವಳಿಯು ಧಾರ್ಮಿಕ ಚಳುವಳಿ ಎಂಬಂತೆ ಭಾಸವಾಗುತ್ತದೆ.ಬರಗೂರರು ವೈದಿಕಶಾಹಿ ಎಂಬ ಶಬ್ದವನ್ನು ಬಳಸಿದರೂ ಕೂಡ ಇದು ಬ್ರಾಹ್ಮಣ ಪುರೋಹಿತಶಾಹಿ ಎಂಬ ಕಲ್ಪನೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಬ್ರಾಹ್ಮಣ ಪುರೋಹಿತಶಾಹಿ ಎಂಬ ಪರಿಭಾಷೆಯ ಹಿಂದೆ ಬಲವಾದ ಪಾಶ್ಚಾತ್ಯ ಗ್ರಹಿಕೆ ಇರುವುದು ಕಂಡುಬರುತ್ತದೆ. ಕ್ರಿಶ್ಚಿಯಾನಿಟಿಯಲ್ಲಿ ಕ್ಯಾಥೋಲಿಸಿಸಂ ಹಾಗೂ ಪ್ರೊಟೆಸ್ಟಾಂಟಿಸಂ ಎಂಬ ಎರಡು ವಿಭಾಗಗಳಿದ್ದು, ಪ್ರೊಟೆಸ್ಟಾಂಟ್ ಚಳುವಳಿಯು ಕ್ಯಾಥೋಲಿಕ್ ಆಚರಣೆಗಳನ್ನು ವಿರೋಧಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಚಳುವಳಿಯಾಗಿದೆ, ಹಾಗೂ ಅದು ಕ್ಯಾಥೋಲಿಕರ ಮೂರ್ತಿ ಪೂಜೆಯನ್ನು, ಸಂತರ ಪೂಜೆಯನ್ನು, ಹಾಗು God ಹಾಗೂ ಶ್ರದ್ಧಾಳುಗಳ ನಡುವೆ ಮಧ್ಯಸ್ಥಿಕೆಯನ್ನು ಮಾಡುವ ಕ್ಲರ್ಜಿಗಳನ್ನು ವಿರೋಧಿಸಿತು ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ. ಒಂದು ಕಾಲದಲ್ಲಿ ಕ್ರಿಶ್ಚಿಯಾನಿಟಿಯು ಶುದ್ಧವಾದ ರಿಲಿಜನ್ ಆಗಿದ್ದು ಕಾಲಾನಂತರದಲ್ಲಿ ಕ್ಯಾಥೋಲಿಕರ ಆಚರಣೆಗಳಿಂದಾಗಿ ಕ್ರಿಶ್ಚಿಯಾನಿಟಿಯು ಭ್ರಷ್ಟಗೊಂಡಿತು ಎಂಬುದು ಪ್ರೊಟೆಸ್ಟಾಂಟರ ಆಪಾದನೆಯಾಗಿದೆ. ಇದಕ್ಕೆ ಪ್ರತಿಯಾಗಿ ಭ್ರಷ್ಟಗೊಂಡ ಕ್ರಿಶ್ಚಿಯಾನಿಟಿಯನ್ನು ಪುನಃ ಶುದ್ಧ ಹಾಗೂ ಸತ್ಯವಾದ ರಿಲಿಜನ್ ಮಾಡಬೇಕೆಂಬುದು ಪ್ರೊಟೆಸ್ಟಾಂಟ್ರ ಗುರಿಯೂ ಆಗಿದೆ. ಇದು ಕ್ರಿಶ್ಚಿಯಾನಿಟಿಯ ಒಂದು ಸಂಗತಿಯಾಗಿದೆ. ಧಾರ್ಮಿಕ ಇತಿಹಾಸದ ಕುರಿತ ಇತ್ತೀಚೆಗಿನ ಸಂಶೋಧನೆಗಳು ತಿಳಿಸುವಂತೆ, ಈ ರೀತಿಯ ನಿಲುವುಗಳನ್ನು/ಗ್ರಹಿಕೆಗಳನ್ನು ಹೊಂದಿದ್ದ, ಪ್ರೊಟೆಸ್ಟಾಂಟರು ಭಾರತಕ್ಕೆ ಭೇಟಿ ನೀಡಿದಾಗ ಅವರು ಹಿಂದೂಯಿಸಂ ಎಂಬ ಒಂದು ರಿಲಿಜನ್ನನ್ನು ಭಾವಿಸಿಕೊಂಡು ಅದನ್ನು ಕ್ಯಾಥೋಲಿಕ್ ಕ್ರಿಶ್ಚಿಯಾನಿಟಿಯ ಹಾಗೆ ಭ್ರಷ್ಟಗೊಂಡ ರಿಲಿಜನ್ನೆಂಬುದಾಗಿ ನಿರ್ಣಯಿಸಿದರು. ಅಷ್ಟೇ ಅಲ್ಲದೆ ಅವರು ಬ್ರಾಹ್ಮಣರನ್ನು ಕ್ಯಾಥೋಲಿಕ್ ಪ್ರೀಸ್ಟ್, ಅಥವಾ ಕ್ಲರ್ಜಿಗಳೆಂಬುದಾಗಿ ಗುರುತಿಸಿದರು, ಹಾಗೂ ಬ್ರಾಹ್ಮಣ ಪುರೋಹಿತರೇ ಈ ರಿಲಿಜನ್ನನ್ನು ಜಾತಿವ್ಯವಸ್ಥೆಯನ್ನಾಗಿ ಮಾರ್ಪಡಿಸಿ ಅದರ ಮೇಲೆ ತಮ್ಮ ಹಿಡಿತವನ್ನಿಟ್ಟುಕೊಂಡಿದ್ದಾರೆ ಎಂದು ಅರ್ಥೈಸಿಕೊಂಡರು. ಇಂದು ನಾವು ಬಳಸುವ ಪುರೋಹಿತಶಾಹಿ ಎಂಬ ಶಬ್ದವು ಈ ಕಲ್ಪನೆಯಿಂದ ಹುಟ್ಟಿಕೊಂಡಿದೆ. ಬರಗೂರರು ಬಳಸುವ ವೈದಿಕಶಾಹಿಯೆಂಬ ಶಬ್ದವು ಕೂಡಾ ಈ ಪುರೋಹಿತಶಾಹಿ ಕಲ್ಪನೆಯನ್ನೇ ವ್ಯಕ್ತಪಡಿಸುತ್ತದೆ. ರಿಲಿಜನ್ನು ಭ್ರಷ್ಟಗೊಳ್ಳುವುದು ಹಾಗೂ ಸುಧಾರಣೆಗೊಳ್ಳುವುದು ಒಂದು ಸಾರ್ವತ್ರಿಕ ಸತ್ಯವೆಂಬುದಾಗಿ ಪ್ರೊಟೆಸ್ಟಾಂಟರು ನಂಬಿದ್ದರು. ಹಾಗಾಗಿ, ಭ್ರಷ್ಟಗೊಂಡ ರಿಲಿಜನ್ನನ್ನು ಸುಧಾರಿಸುವ ಪ್ರಯತ್ನಗಳು ಭಾರತದಲ್ಲೂ ಆಗಿವೆಯೆಂಬುದಾಗಿ ಕೂಡ ಅವರು ಗುರುತಿಸಿದರು. ‘ವಚನ ಚಳುವಳಿ’ಯು ಹಿಂದೂಯಿಸಂನ್ನು ಪುನರುಜ್ಜೀವನಗೊಳಿಸುವ ಚಳುವಳಿಯಾಗಿ ಗುರುತಿಸಿ ಬಸವಣ್ಣನವರನ್ನು ಭಾರತದ ಮಾರ್ಟಿನ್ ಲೂಥರ್ ಎಂಬುದಾಗಿ ಕರೆದವರೂ ಅವರೇ. ಪಾಶ್ಚಿಮಾತ್ಯರು ಪ್ರೊಟೆಸ್ಟಾಂಟ್ ಥಿಯಾಲಜಿಯ ಹಿನ್ನೆಲೆಯಿಂದ ಭಾರತೀಯ ಸಮಾಜವನ್ನು ಗ್ರಹಿಸಿದ ಪರಿಣಾಮವಾಗಿ, ವೈದಿಕ ಶಾಹಿ ಹಾಗೂ ವಚನಕಾರರು ಪರಸ್ಪರ ವಿರೋಧಿ ಚಳುವಳಿ ಎಂಬ ತಿಳುವಳಿಕೆಯು ಅಸ್ತಿತ್ವಕ್ಕೆ ಬಂದಿತು. ಈ ರೀತಿಯ ‘ಚಳುವಳಿ’ಯನ್ನು ಇಲ್ಲಿಯವರೆಗೂ ಕೂಡ ಜಾತಿ ವ್ಯವಸ್ಥೆಯ ವಿರೋಧಿ ‘ಚಳುವಳಿ’ ಎಂದು ಗುರುತಿಸಿಕೊಂಡು ಬಂದಿದ್ದನ್ನು ಕಾಣಬಹುದು. ಅದು ಕೇವಲ ಜಾತಿಯ ವಿರುದ್ಧವಾಗಿತ್ತು ಎಂದು ಬಾಯಿ ಮಾತಿನಲ್ಲಿ ಸಂಶೋಧನಕಾರರು ಹೇಳುತ್ತಾರೆಯೇ ವಿನಃ ಅದಕ್ಕೆ ಸಂಬಂಧಿಸಿಂದಂತೆ ಗಂಭೀರವಾದ ಸಂಶೋಧನೆಗಳು ನಡೆಸಿರುವುದು ವಿರಳ. ಕೆಲವು ವಚನಗಳಲ್ಲಿ ಜಾತಿಯ ಉಲ್ಲೇಖವಿದೆ ಎಂದಾಕ್ಷಣ ಅದು ಜಾತಿ ವ್ಯವಸ್ಥೆಯ ವಿರೋಧಿ ‘ಚಳುವಳಿ’ ಎಂದು ಬಣ್ಣಿಸಿವುದು ಎಷ್ಟು ಸೂಕ್ತ? ”ವಚನ ಚಳುವಳಿ’ಯು ನಿಜವಾಗಲು ಜಾತಿ ವ್ಯವಸ್ಥೆಯ ವಿರೋಧಿ ಚಳುವಳಿ’ಯಾಗಿತ್ತೇ ಎಂಬ ವಿಷಯದ ಕುರಿತಂತೆ 2003 ರಲ್ಲಿ ಹೆಗ್ಗೋಡಿನಲ್ಲಿ 3 ದಿನಗಳ ಕಾರ್ಯಾಗಾರ ನಡೆದಿದ್ದು, ವಿಷಯವನ್ನು ಖಚಿತಗೊಳಿಸಿಕೊಳ್ಳಲು ಎಲ್ಲ ವಚನಗಳನ್ನು ಓದಲಾಯಿತು ಆದರೆ ಕೆಲವು ವಚನಗಳಲ್ಲಿ ಜಾತಿ/ಕುಲಗಳ ಉಲ್ಲೇಖವಿದ್ದು ಶಿವ ಶರಣರು ಈ ಭೇಧಗಳನ್ನು ಮಾಡಬಾರದೆಂದಿದೆ. ಇನ್ನೂ ಕೆಲವು ವಚನಗಳಲ್ಲಿ ಬ್ರಾಹ್ಮಣರ ಆಚಾರಗಳನ್ನು ಟೀಕಿಸುವ ಅಥವಾ ತಿರಸ್ಕರಿಸುವ ಧ್ವನಿಯಿದೆ ಅಷ್ಟೆ. ಇಂಥ ವಚನಗಳ ಸಂಖ್ಯೆಯೂ ತೀರ ಅತ್ಯಲ್ಪ. ಹಾಗಾಗಿ ‘ವಚನ ಚಳುವಳಿ’ ಎಂದರೆ ಜಾತಿ ವಿರೋಧಿ ಚಳುವಳಿ ಎನ್ನಲು ಯಾವುದೇ ಬಲವಾದ ಆಧಾರಗಳು ದೊರೆಯಲಿಲ್ಲ. ‘ವಚನ ಚಳುವಳಿ’ ಎಂದರೆ ಸಾಮಾಜಿಕ ಸಮಾನತೆಗಾಗಿ ಅಂದರೆ ಜಾತಿ ವ್ಯವಸ್ಥೆಯನ್ನು ವಿರೋಧಿಸುವ ಚಳುವಳಿ ಎಂದು ಇಲ್ಲಿಯವರೆಗೂ ಬಿಂಬಿತವಾಗಿದೆ. ಬರಗೂರರು ಇದೇ ಗ್ರಹಿಕೆಯನ್ನೇ ಯಥಾವತ್ತಾಗಿ ಧಾರ್ಮಿಕ ಸಂದರ್ಭಕ್ಕಿಡಲು ಸಾಧ್ಯವಾಗುತ್ತಿರುವುದಕ್ಕೆ ವಚನ ಚಳುವಳಿಯ ಕುರಿತು ಮೇಲೆ ಉಲ್ಲೇಖಿಸಿದ ಪಾಶ್ಚಾತ್ಯರ ಗ್ರಹಿಕೆಯೇ ಕಾರಣ ಎಂಬುದು ಸ್ಪಷ್ಟ.