ಮರುಭೂಮಿಯ ಮತ್ತೊಂದು ಮುಖ
ಈ ವಾರಾಂತ್ಯ ದ ಬಿಡುವಿನಲ್ಲಿ ಜೆಡ್ಡಾ ದ ಬಿಸಿಲ ಉರಿಯಿಂದ ರೋಸಿ ಹೋಗಿ ಎಲ್ಲಾದರೂ ತಂಪಾದ ಸ್ಥಳಕ್ಕೆ ಹೋಗಿ ಎರಡು ದಿನ ಕಳೆಯೋಣ ಎನ್ನಿಸಿತು. ಇಲ್ಲಿಂದ ಸುಮಾರು ೨೦೦ ಕಿ, ಮೀ ದೂರದಲ್ಲಿರುವ ತಾಯಿಫ್ ಒಂದು ಪ್ರವಾಸಿ ತಾಣ, ನಮ್ಮ ಕೆಮ್ಮಣ್ಣು ಗುಂಡಿಯ ಹಾಗೆ. ಮಳೆ, ಚಳಿ ಎಲ್ಲವೂ ಇದೆ ಇಲ್ಲಿ. ಆದರೆ ತಾಯಿಫ್ ಗೆ ಹಲವು ಸಾರಿ ಹೋಗಿದ್ದರಿಂದ ತಾಯಿಫ್ ನಂಥದ್ದೆ ಮತ್ತೊಂದು ತಾಣ "ಅಲ್-ಬಾಹ" ಎನ್ನುವ ಸ್ಥಳವಿದೆ ಎಂದು ಕೇಳಿದ್ದರಿಂದ ಅಲ್ಲಿಗೆ ಹೊರಟೆವು. ಜೆಡ್ಡಾ ದಿಂದ ೪೦೦ ಕಿ ಮೀ ದೂರ ಅಲ್-ಬಾಹಾ.
ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದಲ್ಲಿರುವ ಈ ಚಿಕ್ಕ ನಗರ ಸುಡು ಬಿಸಿಲಿನಲ್ಲಿ ಬೆಂದ ಶರೀರಕ್ಕೆ ತಂಪನ್ನೀಯುವ ತಾಣ. ಸೌದಿಯಿಂದ ಮಾತ್ರವಲ್ಲದೆ ನೆರೆಯ ಕತಾರ್, ಒಮಾನ್, ಕುವೈತ್, ಬಹರೇನ್ ದೇಶಗಳಿಂದಲೂ ರಜೆಗೆ ಜನ ಇಲ್ಲಿಗೆ ಬರುತ್ತಾರೆ. ಜೆಡ್ಡಾ ಬಿಟ್ಟು ಸುಮಾರು ೨೦೦ ಕಿ ಮೀ ಕ್ರಮಿಸುತ್ತಿದ್ದಂತೆಯೇ ಭೌಗೋಳಿಕ ಬದಲಾವಣೆಗಳು ಗೋಚರಿಸ ತೊಡಗಿತು. ಅಗಾಧ ಸಾಗರದಂತೆ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಮರಳೋ ಮರಳು. ಮಟ್ಟಸವಾದ, ಸಮನಾದ ಮರುಭೂಮಿ, ಆಗಾಗ sand storm area, ಮತ್ತು ಒಂಟೆಗಳ ಪ್ರದೇಶ ಎಂದು ಸೂಚಿಸುವ ಫಲಕಗಳು. ಸೂರ್ಯನ ಅಟ್ಟಹಾಸಕ್ಕೆ ಬೆಚ್ಚಿದ ಮರಳು ರಾಶಿ ರಹದಾರಿಯ ಮೇಲೆ ಪಲಾಯಾನ ಮಾಡುವ ಸುಂದರ ದೃಶ್ಯ ನೋಡುತ್ತಾ ಹೋದಂತೆ ಸುಂದರ ಬೆಟ್ಟಗಳ ಶ್ರೇಣಿ ಗೋಚರಿಸಿತು. ಹವಾನಿಯಂತ್ರಿತ ಕಾರಿನೊಳಕ್ಕೆ ಕೂತು ನೋಡಲು ಬಹು ಸುಂದರ ದೃಶ್ಯ. ಆದರೆ ಬಟಾ ಬೆತ್ತಲೆಯಾದ (ಹಸಿರಿನ ಸುಳಿವೂ ಇಲ್ಲದ) ಬೆಟ್ಟಗಳನ್ನು ಕಾರಿನಿಂದ ಇಳಿದು ನೋಡಿದರೆ ನರಕ ಸದೃಶ ಅನುಭವ. ಅಂಥ ಬೇಗೆ. ಅಲ್-ಬಾಹಾ ಸಮೀಪಿಸುತ್ತಿದ್ದಂತೆ ಅಲ್ಲಲ್ಲಿ ಗಿಡ ಮರಗಳಿಂದ ತುಂಬಿದ ಚಿಕ್ಕ ಚಿಕ್ಕ ಬಯಲುಗಳು. ಈ ಪ್ರದೇಶದಲ್ಲಿ ಆಗಾಗ ಸಣ್ಣ ಪ್ರಮಾಣದಲ್ಲಿ ಮಳೆ ಆಗುವುದರಿಂದ ಹಸಿರು ತೊಡುವ ಭಾಗ್ಯ ಈ ಪ್ರದೇಶದ ನೆಲಕ್ಕೆ.
ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದ ಲ್ಲಿರುವ ಅಲ್-ಬಾಹಾ ತಲುಪಲು ಮಾಡಬೇಕು ಶಿಖರಾರೋಹಣ. ಆಗುಂಬೆ, ಚಾರ್ಮಾಡಿ, ಬಾಬಾ ಬುಡನ್ ಗಿರಿಗಳನ್ನು ನೋಡಿದ್ದ ನನಗೆ ಈ ಬೆಟ್ಟ ಇನ್ನೂ ಎತ್ತರ ಎಂದು ತೋರಿತು. ಸುತ್ತಲೂ ಆವರಿಸಿ ಕೊಂಡ ಎತ್ತರದ ಬೆಟ್ಟಗಳಿಗೆ ರಸ್ತೆ ಜೋಡಣೆ ನಿಸ್ಸಂಶಯವಾಗಿಯೂ engineering marvel ಎನ್ನಬಹುದು. two way ರಸ್ತೆಯಾದ್ದರಿಂದಲೂ, ರಸ್ತೆಗಳ ಮಧ್ಯೆ ಯಾವುದೇ barrier ಇಲ್ಲದಿದ್ದರಿಂದಲೂ ನಿಧಾನವಾಗಿ ಚಲಿಸಿ ಎನ್ನುವ ಫಲಕಗಳು, ಮಾತ್ರವಲ್ಲ ರಸ್ತೆಯ ಒಂದು ಕಡೆ ಬೆಟ್ಟದ ಆಸರೆ ಇದ್ದರೆ ಮತ್ತೊಂದು ಕಡೆ ವಾಹನ ಕೆಳಗುರುಳದಂತೆ ಭಾರೀ ಗಾತ್ರದ ಮೂರಡಿ ಎತ್ತರದ ಕಾಂಕ್ರೀಟ್ ಗೋಡೆಗಳು. ಹತ್ತಾರು ಬೆಟ್ಟಗಳನ್ನು ಬಳಸಿ ಹೋಗುವ ರಸ್ತೆಗೆ ೨೫ ಸುರಂಗಗಳು, ಅಲ್ಲಲ್ಲಿ ಕಣಿವೆಯಿಂದ ಕಣಿವೆಗೆ ಕಟ್ಟಿದ ಸೇತುವೆಗಳು. ತೈಲ ಸಂಪತ್ತು ತನ್ನ ಕಾರ್ಯ ಕ್ಷಮತೆಯನ್ನು ತೋರಿಸುವುದು ಇಂಥ ಸ್ಥಳಗಳಲ್ಲಿ. ಅಲ್-ಬಾಹ ದಲ್ಲಿ ಸುತ್ತಾಡುತ್ತಿದ್ದಾಗ "ಥೀ ಐನ್" ಎಂದು ಸಾರಿಗೆ ಫಲಕಗಳಲ್ಲಿ ಕಾಣುತ್ತಿತ್ತು. ಈ ಹೆಸರು ನನಗೆ ವಿಚಿತ್ರವಾಗಿ ಕಂಡಿತು. ಇದೂ ಯಾವುದಾದರೂ ಒಂದು ವಿಶೇಷವಾದ ಚಿಕ್ಕ ಪಟ್ಟಣವಿರಬೇಕು, ಅದರ ಬಗ್ಗೆ ಯಾರಿಗಾದರೂ ಕೇಳೋಣ ಅಂದರೆ ಇಲ್ಲಿ ಇಂಥ ವಿಷಯಗಳಲ್ಲಿ, ಅದರಲ್ಲೂ ಚಾರಿತ್ರಿಕ ವಿಷಯಗಳಲ್ಲಿ ಜನರಿಗೆ ಒಲವು, ಆಸಕ್ತಿ ಕಡಿಮೆಯೇ. ಸರಿ ಶುಕ್ರವಾರದ ಪ್ರಾರ್ಥನೆ ಮುಗಿಸಿದ ಕೂಡಲೇ ಹೊರಟೆವು ಜೆದ್ದಾದ ಕಡೆ ಹೋಗುವ ಸ್ಥಳಗಲ್ಲಿ ಇನ್ಯಾವುದಾದರೂ ಪ್ರೇಕ್ಷಣೀಯ ಸ್ಥಳವಿದ್ದರೆ ಕತ್ತಲಾಗುವ ಮುನ್ನ ನೋಡಿಕೊಂಡು ಜೆಡ್ಡಾ ಸೇರಬಹುದು ಎನ್ನುವ ಎಣಿಕೆಯೊಂದಿಗೆ. ಮತ್ತದೇ ೨೫ ಸುರಂಗಗಳನ್ನು ತೂರಿಕೊಂಡು, ಚುಮು ಚುಮು ಮಳೆಗೆ ಹಿತವಾಗಿ, ನಗ್ನವಾಗಿ ಬಿದ್ದು ಕೊಂಡಿದ್ದ ಬೆಟ್ಟಗಳ ಸಾಲನ್ನೂ, ಒದ್ದೆಯಾದ ರಸ್ತೆಗಳ ಮೇಲೆ ವಾಹನಗಳು ಹೊರಡಿಸುವ ಕಾರಂಜಿ ಗಳನ್ನು ನೋಡುತ್ತಾ ಘಾಟಿ ಇಳಿದು ಒಂದ್ಹತ್ತು ಕಿ ಮೀ ದೂರ ಬರುತ್ತಿದ್ದಂತೆಯೇ ಮತ್ತದೇ ಫಲಕ ಕಾಣಿಸಿತು "ಧೀ ಐನ್". ಈ ಸ್ಥಳ ಎಡಕ್ಕೆ ಎನ್ನುವ ನಿರ್ದೇಶನ ಕಂಡಿದ್ದೇ ಕುತೂಹಲದಿಂದ ಗಾಡಿಯನ್ನು ರಹ ದಾರಿಯಿಂದ ಚಿಕ್ಕ ಕಡಿದಾದ ರಸ್ತೆಗೆ ನಡೆಸಿ ಸ್ವಲ್ಪ ಮುಂದೆ ಬರುತ್ತಿದ್ದಂತೆ ಧುತ್ತೆಂದು ಎದುರಾಯಿತು ಒಂದು ಬೆಟ್ಟ, ಅದರ ತುಂಬಾ ಶಿಥಿಲಗೊಂಡ ಮನೆಗಳು. ಇದೇನಪ್ಪಾ, "ಹರಪ್ಪಾ", "ಮೊಹೆಂಜೋದಾರೋ" ತಲುಪಿ ಬಿಟ್ಟೆನಾ ಎಂದು ಕೌತುಕದಿಂದ ಹತ್ತಿರ ಬಂದಾಗ ಬೇಲಿ. ಅಲ್ಲಿಂದಲೇ ಒಂದು ಫೋಟೋ ಕ್ಲಿಕ್ಕಿಸಿದಾಗ ನನ್ನಾಕೆಗೆ ಇನ್ನೂ ಮುಂದಕ್ಕೆ ಹೋಗಿ ಅದೇನೆಂದು ನೋಡೋಣ ಎನ್ನುವ ಆಸೆ. ಮತ್ತಷ್ಟು ದೂರ ಹೋದಾಗ ಒಂದು ಟೋಲ್ ಗೇಟ್. ವಿಚಾರಿಸಿದಾಗ ಒಳ ಹೋಗಲು ತಲೆಗೆ ೧೦ ರಿಯಾಲ್ (೧೨೫ ರೂ) ಎಂದ. ಹಣ ತೆತ್ತು ಪಾಸ್ ಪಡೆದು ಹತ್ತಿರ ಹೋದಾಗ ಎಲ್ಲಾ ಹಳೆ ಕಾಲದ ಮನೆಗಳು, ಗುಡ್ಡದ ತುಂಬಾ ಅಚ್ಚುಕಟ್ಟಾಗಿ ಖಾಲಿ ಸಿಗರೆಟ್ ಪ್ಯಾಕ್ ಗಳನ್ನು ಜೋಡಿಸಿದಂತೆ ಕಾಣುತ್ತಿತ್ತು. ಅರ್ಧ ಗುಡ್ಡ ಹತ್ತಿ ಒಂದೇ ನಮೂನೆಯ ಮನೆಗಳನ್ನು ನೋಡುತ್ತಾ ಕೆಳಗಿಳಿದಾಗ ಝರಿಯ ಸಪ್ಪಳ. ಹಾಂ, ಮರಳುಗಾಡಿನಲ್ಲಿ ಝರಿಯೇ ಎಂದು ಹೋಗಿ ನೋಡಿದಾಗ ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಚಿಕ್ಕದಾದರೂ ಅರೇಬಿಯಾದಲ್ಲಿ ಝರಿ, ಕಾಲುವೆ, ಕಾರಂಜಿಗಳು, ಅಪರೂಪವೇ. ಹಾಗಾಗಿ ಇದೊಂದು ರೀತಿಯ welcome change. ತಂಪಾದ ಝರಿಯ ನೀರನ್ನು ಮುಖಕ್ಕೆ ಸಿಂಪಡಿಸಿ ಕೊಂಡು ಝರಿಯ ಮತ್ತು ಈ ಬೆಟ್ಟದ ಮೇಲೆ ವಾಸವಿದ್ದವರ ಕುರಿತು ವಿಚಾರಿಸಿದೆ.
ಸುಮಾರು ೪೦೦ ವರ್ಷಗಳ ಹಿಂದೆ ಜನ ವಾಸವಿದ್ದ ಒಂದು ಹಳ್ಳಿ "ಥೀ ಐನ್". ಇದರ ಅರ್ಥ "ಝರಿ ಇರುವ ಹಳ್ಳಿ" ಎಂದು. ಮತ್ತೊಂದು ಅರ್ಥ "ಒಕ್ಕಣ್ಣಿನ ಮನುಷ್ಯ" ಎಂದೂ ಇದೆ. ಇದರ ಹಿನ್ನೆಲೆ ಹೀಗಿದೆ ನೋಡಿ. ನೂರಾರು ವರ್ಷಗಳ ಹಿಂದೆ ಯೆಮನ್ ದೇಶದ ಮುದುಕನ ಹತ್ತಿರ ಮಾಂತ್ರಿಕ ದಂಡ ಇತ್ತಂತೆ, ಅಲ್ಲಾವುದ್ದೀನನ ಹತ್ತಿರ ಮಾಂತ್ರಿಕ ದೀಪ ಇದ್ದಂತೆ. ಅದನ್ನು ಉಪಯೋಗಿಸಿ ನೀರನ್ನು ಕಂಡು ಹಿಡಿಯಲು ಹಳ್ಳಿಯ ಜನ ಹೇಳಿದಾಗ ಆ ಮುದುಕ ತನ್ನ ದಂಡ ದಿಂದ ನೆಲಕ್ಕೆ ಬಡಿಯುತ್ತಾನೆ. ಕೂಡಲೇ ಚಿಮ್ಮುತ್ತದೆ ನೀರಿನ ಚಿಲುಮೆ. ನೀರೆನೋ ಚಿಮ್ಮಿತು, ಆದರೆ ಅದಕ್ಕೆ ಬೆಲೆಯನ್ನೂ ತೆತ್ತ ಪಾಪದ ಮುದುಕ; ನೆಲಕ್ಕೆ ಬಡಿದ ದಂಡ ಅವನ ಕಣ್ಣಿನ ಮೇಲೆ ಬಿದ್ದು ತನ್ನ ಒಂದು ಕಣ್ಣನ್ನು ಕಳೆದು ಕೊಳ್ಳುತ್ತಾನೆ. ಜನರಿಗೆ ಉಪಕಾರ ಮಾಡಲು ಹೋಗಿ ಒಂದು ಕಣ್ಣನ್ನು ಕಳೆದುಕೊಂಡ ಯೆಮನ್ ದೇಶದ ವೃದ್ಧನ ಕತೆಯನ್ನು ಮೆಲುಕು ಹಾಕುತ್ತಾ ಜೆಡ್ಡಾ ಕಡೆ ಪ್ರಯಾಣ ಬೆಳೆಸಿದೆ.
ಪ್ರಯಾಣದ ವೇಳೆ ತೆಗೆದ ಕೆಲವು ಚಿತ್ರಗಳನ್ನು ಲಗತ್ತಿಸಿದ್ದೇನೆ. ನೋಡಿ, ಏನಾದರೂ ಅರ್ಥ ಆಗುತ್ತಾ ಅಂತ. ಏಕೆಂದರೆ ಹೇಳಿಕೊಳ್ಳುವಂಥದ್ದಲ್ಲದ ಕ್ಯಾಮರ ಮತ್ತು ಬೆನ್ನು ತಟ್ಟಿ ಕೊಳ್ಳುವಂಥ "ಕಲೆ"ಯಿಲ್ಲದೆ ತೆಗೆದ ಚಿತ್ರಗಳಿವು. ಇಂಥ ಚಿತ್ರಗಳನ್ನ ನೋಡಲು ಬಲವಂತ ಪಡಿಸಿದ್ದಕ್ಕೆ ಕ್ಷಮೆಯಿರಲಿ.
Comments
ಉ: ಮರುಭೂಮಿಯ ಮತ್ತೊಂದು ಮುಖ
ಉ: ಮರುಭೂಮಿಯ ಮತ್ತೊಂದು ಮುಖ