ಅನ್ಯವನ್ನು ಒಳಗೊಳ್ಳುವ ಕಷ್ಟ

ಅನ್ಯವನ್ನು ಒಳಗೊಳ್ಳುವ ಕಷ್ಟ

ಬರಹ

 [The difficulty of accommodating the 'Other']

ಮಹೇಶ್ ಕುಮಾರ್ ಸಿ. ಎಸ್.

ಭಾರತವು ಹಲವು ಸಂಪ್ರದಾಯ ಮತ್ತು ಆಚರಣೆಗಳನ್ನು ಹೊಂದಿರುವ ಒಂದು ಬಹುತ್ವದ ಸಂಸ್ಕೃತಿ. ಈ ಬಹುತ್ವವನ್ನು ಕಾಯ್ದುಕೊಳ್ಳುತ್ತಾ ಬಂದಿರುವ ಗುಣವೇ ಈ ಸಂಸ್ಕೃತಿಯ ಹೆಗ್ಗಳಿಕೆ ಎಂದು ಗುರುತಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಅಪವಾದವಾಗಿ ‘ಮತೀಯ’ ಎಂದು ಗುರುತಿಸಲಾಗುವ ಅನೇಕ ಸಂಘರ್ಷಗಳಿಗೆ ಇದೇ ಸಮಾಜವು ಸಾಕ್ಷಿಯಾಗಿರುವುದನ್ನು ದಿನಪತ್ರಿಕೆಗಳು ದೃಢೀಕರಿಸುತ್ತವೆ. ಈ ಸಂಘರ್ಷಗಳಿಗೆ ಇತ್ತೀಚಿನ  ಕ್ರೈಸ್ತರೊಂದಿಗಿನ ಸಂಘರ್ಷವು ಸೇರಿಕೊಂಡಿದೆ. ಈ ಸಂಘರ್ಷದಲ್ಲಿ ಮತಾಂತರದ ವಿಷಯವು ಕೇಂದ್ರ ಸ್ಥಾನವನ್ನು ಪಡೆಯುತ್ತಿದೆ. ಕರ್ನಾಟಕ ಸರಕಾರವು ಮತಾಂತರ ನಿಷೇಧ ಕಾನೂನು ಜಾರಿ ಮಾಡಲು ಚಿಂತಿಸುತ್ತಿದೆ. ಇಂತಹ ಸಂದರ್ಭದಲ್ಲಿ ಈ ವಿಷಯಗಳ ಕುರಿತು ಬೌದ್ಧಿಕ ಚರ್ಚೆಗಳು ಏರ್ಪಡಬೇಕಿರುವುದು ಸಧ್ಯದ ಅಗತ್ಯ. ಮತಾಂತರದ ವಿಷಯವಾಗಿ ನಾಡಿನ ದೈನಿಕವೊಂದು ಏರ್ಪಡಿಸಿದ ಸಂವಾದವನ್ನು ಗಮನಿಸಿದಾಗ ನಮಗೆ ತಿಳಿದು ಬರುವ ವಿಷಯವೆಂದರೆ: ಚರ್ಚೆಯಲ್ಲಿ ಬಹುತೇಕ ವಿದ್ವಾಂಸರು, ತಮ್ಮ ವಿರೋಧಿ ಲೇಖಕರು ಯಾವ ಅಜೆಂಡಾ ಇಟ್ಟುಕೊಂಡು ಒಂದು ನಿಶ್ಚಿತ ವಾದವನ್ನು ಮುಂದಿಡುತ್ತಿದ್ದಾರೆ ಎನ್ನುವುದನ್ನು ಗುರುತಿಸಿ ಅದನ್ನು ಹಳಿಯುವುದರಲ್ಲಿಯೇ ಬಹುಕಾಲವನ್ನು ವ್ಯಯಿಸಿದರು. ಹಾಗೆಂದ ಮಾತ್ರಕ್ಕೆ ಇಡೀ ಚರ್ಚೆ ವ್ಯರ್ಥವೆಂದಲ್ಲ. ಅದು ಸಾಂಸ್ಕೃತಿಕವಾಗಿ ನಮ್ಮದಲ್ಲದ ಸಂಗತಿಯೊಂದನ್ನು ಚರ್ಚಿಸುವಲ್ಲಿ ನಮಗಿರುವ ಸಮಸ್ಯೆಗಳನ್ನು ಎತ್ತಿತೋರಿಸಿದೆ. ಈ ಸಮಸ್ಯೆಯ ಒಂದು ಮಗ್ಗಲನ್ನು ಗುರುತಿಸುವ ಪ್ರಯತ್ನವೇ ಈ ಲೇಖನದ ಉದ್ದೇಶ.

ಇಸ್ಲಾಂ ಮತ್ತು ಕ್ರೈಸ್ತ ರಿಲಿಜನ್ನುಗಳು ಶತಮಾನಗಳಷ್ಟು ಹಿಂದೆಯೆ ಭಾರತದಲ್ಲಿ ನೆಲಸಿ ಈ ಸಮಾಜದ ಅವಿಭಾಜ್ಯ ಅಂಗವೇ ಆಗಿ ಹೋಗಿವೆ. ಆದರೆ ಅವುಗಳನ್ನು ಸೈದ್ಧಾಂತಿಕವಾಗಿ ಅರ್ಥಮಾಡಿಕೊಳ್ಳುವ ಕೆಲಸವನ್ನು ಗಂಭೀರವಾಗಿ ಮಾಡಿರುವ ಪ್ರಯತ್ನಗಳು ಮಾತ್ರ ಬಹಳ ಕಡಿಮೆ. ಕೆಲವು ಚಿಂತಕರು ಇಸ್ಲಾಂ ಮತ್ತು ಕ್ರೈಸ್ತ ರಿಲಿಜನ್ಗಳು ಹೇಗೆ ಭಾರತದ ಸಂಪ್ರದಾಯಗಳಿಗಿಂತ ಬರ್ಬರ ಎನ್ನುವುದನ್ನು ತೋರಿಸುದರಲ್ಲೇ ಕಾಲಕಳೆದರೆ, ಇನ್ನೂ ಕೆಲ ವಿದ್ವಾಂಸರು ಭಾರತೀಯ ಪರಂಪರೆ ಎಂದು ಮಾತನಾಡುವುದೇ ‘ರಿವೈವಲಿಸಂ’ ಅಥವಾ ಬ್ರಾಹ್ಮಣ ಶಾಹಿಗೆ ಉತ್ತರಾಧಿಕಾರಿಯಾಗುವುದು ಎನ್ನುವಂತೆ ನೋಡುತ್ತಾರೆ. ಈ ಎರಡು ಅತಿಗಳನ್ನು ಮೀರಿ ಭಾರತೀಯ ಪರಂಪರೆಗಳು ಮತ್ತು ಇಸ್ಲಾಂ ಹಾಗು ಕ್ರೈಸ್ತ ರಿಲಿಜನ್ನುಗಳನ್ನು ಅಧ್ಯಯನಕ್ಕೆ ಒಳಪಡಿಸಬೇಕಿದೆ. ಸಧ್ಯದ ಈ ಲೇಖನದಲ್ಲಿ ನಾವು ಹೇಗೆ ಇಸ್ಲಾಂ ಮತ್ತು ಕ್ರೈಸ್ತ ರಿಲಿಜನ್ನುಗಳನ್ನು ಅರ್ಥಮಾಡಿಕೊಂಡಿಲ್ಲ ಅಥವ ಅರ್ಥಮಾಡಿಕೊಳ್ಳುತ್ತಿದ್ದೇವೆ ಎನ್ನುವುದನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಈ ಗುರುತಿಸುವಿಕೆಯನ್ನು ಜರಗನಹಳ್ಳಿ ಶಿವಶಂಕರರು ‘ಜಾತಕ’ (ಕರ್ಮವೀರ ಪತ್ರಿಕೆ, 2007, ದಿನಾಂಕ 16 ಡಿಸಂಬರ್, ಪುಟಸಂಖ್ಯೆ 29) ಎಂಬ ಅಂಕಣದಲ್ಲಿ ಬರೆದ ‘ಏಕೆ..?’ ಎನ್ನುವ ಲೇಖನದ ಸಂದರ್ಭದಲ್ಲಿ ಮಾಡುತ್ತೇನೆ.

ಸಂದರ್ಭ

ಶಿವಶಂಕರರ ಈ ಲೇಖನವು ರೂಪುತಳೆದಿದ್ದು ಅವರು ಸಮಾರಂಭವೊಂದರಲ್ಲಿ ‘ಮನುಷ್ಯನ ಆಚರಣೆಗಳ ಬಗ್ಗೆ ಆತನಿಗಿರುವ ಭ್ರಮೆ’ ಎಂಬ ವಿಷಯ ಕುರಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ. ಮಾತಿಗೆ ಪೂರಕವಾಗಿ ತಮಿಳಿನಿಂದ ಅನುವಾದಿಸಿದ ಕವಿತೆಯೊಂದನ್ನು ಸಾದರಪಡಿಸಿದರಂತೆ. ಆಗ ಸಂಭವಿಸಿದ ಘಟನೆಯ ವಿವರ ಮತ್ತು ಅದರ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಈ ಲೇಖನದಲ್ಲಿ ಶಿವಶಂಕರ್ ದಾಖಲಿಸಿದ್ದಾರೆ. ಆ ಘಟನೆ ಮತ್ತು ಅದಕ್ಕೆ ಶಿವಶಂಕರರ ಪ್ರತಿಕ್ರಿಯೆಯು ಮೇಲಿನ ನಮ್ಮ ಚರ್ಚೆಯನ್ನು ಪರಿಶೀಲಿಸಲು ನೆರವಾಗುವುದರಿಂದ ‘ಏಕೆ..?’ ಲೇಖನವನ್ನು ಇಲ್ಲಿ ತೆಗೆದುಕೊಂಡಿದ್ದೇನೆ. ನಮ್ಮ ಚರ್ಚೆಯ ಸಂದರ್ಭಕ್ಕೆ ಈ ಲೇಖನವನ್ನು ಬಳಸಲಾಗುತ್ತಿದೆಯೇ ವಿನಃ ಇದು ಶಿವಶಂಕರ ಲೇಖನಕ್ಕೆ ಪ್ರತಿಕ್ರಿಯೆಯಲ್ಲ.

ಆ ಕವಿತೆ ಹೀಗಿದೆ: "ಮರಗಳು ಮಾತನಾಡಿಕೊಂಡವು:/ನಮ್ಮನ್ನು ಕಡಿದು/ಅದೆಷ್ಟು ಶಿಲುಬೆಗಳನ್ನು/ಮಾಡಿಕೊಳ್ಳ್ಳುತ್ತಾರೆ/ಈ ಮನುಷ್ಯರು/ವಿಷಾದವೆಂದರೆ!/ಇವರಲ್ಲಿ ಯಾರೂ ಕೂಡ/ಆಗಲಿಲ್ಲವಲ್ಲ ‘ಏಸು’".

ಈ ಕವಿತೆಯನ್ನು ಕೇಳಿದ ಕ್ರೈಸ್ತ ಅನುಯಾಯಿಯೊಬ್ಬರು ಶಿವಶಂಕರರ ಬಳಿಬಂದು ಈ ಕವಿತೆ ತನ್ನ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವುದಾಗಿ, ಅದನ್ನು ಮತ್ತೆಲ್ಲೂ ಬಳಸದಂತೆ ಒತ್ತಾಯಿಸುತ್ತಾರೆ. ಇದರಿಂದ ಚಕಿತಗೊಂಡ ಶಿವಶಂಕರರು ಈ ಕವಿತೆಯಲ್ಲಿ ಕ್ರೈಸ್ತ ಅನುಯಾಯಿಯ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವಂತದ್ದು ಏನಿದೆ? ತನಗೆ ಬೇಕಾದಂತೆ ದೇವರನ್ನು ಕಲ್ಪಿಸಿಕೊಳ್ಳುವ ಪೂಜಾ ಸ್ವಾತಂತ್ರ್ಯ ಮನುಷ್ಯರಿಗಿಲ್ಲವೆ, ಮನುಷ್ಯ ಏಕೆ ಇಷ್ಟು ಸಂಕುಚಿತಗೊಳ್ಳಬೇಕು ಅಂದುಕೊಂಡು ‘ಒಂದು ಮರದಲ್ಲಿ ಅನೇಕ ಶಿಲುಬೆಗಳು ಇರಲು ಸಾಧ್ಯವೆಂಬ ನಂಬಿಕೆಯನ್ನು ಮನುಷ್ಯ ತಾಳಲು ಸಾಧ್ಯವಾಗುವುದಿಲ್ಲ’ ಎಂದು ವಿಷಾದಿಸುತ್ತಾರೆ. ಶಿವಶಂಕರರಿಗೆ ತಾವು ಆಯ್ದುಕೊಂಡಿರುವ ಭಾಷಣಕ್ಕೆ ಕ್ರೈಸ್ತ ಅನುಯಾಯಿಯೇ ಸೂಕ್ತ ನಿದರ್ಶನ ಎನಿಸಿರಲಿಕ್ಕೂ ಸಾಕು. ಆದರೆ ಈ ಲೇಖನ ಇದಕ್ಕಿಂತಲೂ ಹೆಚ್ಚಿನದೇನನ್ನೋ ಸೂಚಿಸಲಿಕ್ಕೆ ನೆರವಾಗುತ್ತದೆ ಎನಿಸುತ್ತದೆ. ಕ್ರೈಸ್ತ ಅನುಯಾಯಿ ಮತ್ತು ಶಿವಶಂಕರರ ಸಂವಾದವನ್ನು ವಿಶ್ಲೇಷಿಸಿದರೆ, ಇವರೀರ್ವರ ಸಮಾಜೋ-ಸಾಂಸ್ಕೃತಿಕವಾದ ಸಾಮಾಜೀಕರಣದ ಹಿನ್ನಲೆಯಲ್ಲಿರುವ ಅರ್ಥಪ್ರಪಂಚದ ಭಿನ್ನತೆಯನ್ನು ಅರಿಯಬಹುದು ಎನಿಸುತ್ತದೆ. ಇದೇ ಕಾರಣಕ್ಕೆ ನನಗೆ ಶಿವಶಂಕರರ ಲೇಖನ ನಾವು ಚರ್ಚೆಸುತ್ತಿರುವ ವಿಷಯಕ್ಕೆ ಅವಕಾಶಮಾಡಿಕೊಡುತ್ತದೆ ಎನಿಸಿದ್ದು.

ಕವಿತೆಯನ್ನು ನೋಡಿದರೆ, ಕವಿತೆಯಲ್ಲಿ ‘ಏಸು’ವಿನ ಬದಲಿಗೆ ಶಿವನನ್ನೋ, ಬಸವ, ವಿಷ್ಣು, ಬುದ್ಧನ್ನನ್ನೋ ಬಳಸಿಕೊಂಡಿದ್ದರೂ (ಹಾಗೆ ಮರದ ಬದಲು  ಮಣ್ಣು , ಯಾವುದೋ ಲೋಹ ಬಳಸಿಕೊಂಡಿದ್ದರೂ) ಸಹ ಕವಿತೆಯ ಆಶಯಕ್ಕಾಗಲಿ, ಸತ್ವಕ್ಕಾಗಲಿ ಧಕ್ಕೆಯಾಗುತ್ತಿರಲಿಲ್ಲ. ಅದಕ್ಕೆ ಶಿವಶಂಕರರು ಕವಿತೆಯನ್ನು ಬಳಸಿಕೊಂಡ ಪರಿಯೇ ಸಾಕ್ಷಿ. ಕ್ರೈಸ್ತ ಅನುಯಾಯಿಗೆ ತನ್ನ ಧಾರ್ಮಿಕ ಅಂಶಗಳಾದ ಏಸು, ಶಿಲುಬೆಗಳನ್ನು ಕವಿತೆಯು ಬಳಸಿಕೊಂಡ ಪರಿಯೇ ಕವಿತೆಯನ್ನು ಮತ್ತೆಲ್ಲೂ ಬಳಸದಂತೆ ಒತ್ತಾಯಿಸಲು ಪ್ರೇರೇಪಿಸುತ್ತದೆ. ಆದರೆ, ಆತ ಏಕೆ ಹೀಗೆ ಮಾಡಿದ ಎಂಬ ಪ್ರಶ್ನೆ ನಿಲ್ಲುತ್ತದೆ. ಎಕೆಂದರೆ ಕವಿತೆಯಲ್ಲಿ ಏಸುವಿನ ಬಗ್ಗೆ ಗೌರವಯುತ ಭಾವನೆ ಇರುವುದು ಯಾರಿಗಾದರು ಕಾಣಿಸುತ್ತದೆ. ಹಾಗಿದ್ದರು ‘ಏಕೆ..?’ ಎಂಬ ಪ್ರಶ್ನೆ ಹಾಗೆಯೇ ಉಳಿದಿರುತ್ತದೆ. ಇದರ ಜೊತೆಗೆ ಕ್ರೈಸ್ತ ಅನುಯಾಯಿ ಪ್ರತಿಕ್ರಿಯೆಗೆ ಶಿವಶಂಕರರು ಚಕಿತರಾಗಿ ವಿಷಾದಗೊಳ್ಳಲು ಕಾರಣವೇನು ಎನ್ನುವುದನ್ನು ನಾವು ವಿವರಿಸಿಕೊಳ್ಳಬೇಕಾಗುತ್ತದೆ.

ಈ ಪ್ರಶ್ನೆಗಳನ್ನು ಬಿಡಿಸುವ ಮೂರು ಬಗೆಗಳು:

ಮೊದಲನೆಯದಾಗಿ, ಕ್ರೈಸ್ತ ಅನುಯಾಯಿಗೆ ಕವಿತೆಯಲ್ಲಿರುವ ರೂಪಕದ ಸಾಧ್ಯತೆಯ ಅರಿವಿಲ್ಲ. ಕವಿತೆಯನ್ನು ವಾಚ್ಯಾರ್ಥದಲ್ಲಿ ಗ್ರಹಿಸಿ ವಿರೋಧಿಸಿದ್ದಾನೆ ಎನ್ನಬಹುದು. ಹೀಗೆ ಆತನ ಅರಸಿಕತೆಗೆ ನಾವು ಸಹಾನುಭೂತಿ ತೋರಬಹುದು. ಆದರೆ ಇಂತಹ ಅಭಿಪ್ರಾಯಕ್ಕೆ ಹೀಗೆ ಉತ್ತರಿಸಿಬಿಡಬಹುದು: ಕ್ರೈಸ್ತ ಅನುಯಾಯಿಗೆ ಸಮಸ್ಯೆ ಇರುವುದು ಕವಿತೆಯಲ್ಲಿ ಏಸುವನ್ನು ಬಳಸಿಕೊಂಡ ರೀತಿಯಲ್ಲಿಯೇ. ಆದ್ದರಿಂದ ರೂಪಕದ ಸಾಧ್ಯತೆಯೇ ಆತನಿಗಿರುವ ಸಮಸ್ಯೆ. ಆದರೆ ಸಮಸ್ಯೆಯನ್ನು ಹೀಗೆ ನೋಡುವುದರಿಂದ ಹೆಚ್ಚಿನದ್ದೇನು ಉಪಯೋಗವಿಲ್ಲ. ಯಾಕೆಂದರೆ, ವಾಚ್ಯಾರ್ಥದಲ್ಲಿಯಾದರು ಕವಿತೆಯಲ್ಲಿ ಆತನ ‘ಧಾರ್ಮಿಕ’ ನಂಬಿಕೆಗೆ ಧಕ್ಕೆಮಾಡಿದ್ದು ಏನು? ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ಸಿಗುವುದೇ ಇಲ್ಲ. ಜೊತೆಗೆ, ತನಗೆ ಬೇಕಾದಂತೆ ದೈವವನ್ನು ಕಲ್ಪಿಸಿಕೊಳ್ಳುವುದರಲ್ಲಿ ಕ್ರೈಸ್ತ ಅನುಯಾಯಿಯ ಸಮಸ್ಯೆ ಏನು ಎನ್ನುವ ಶಿವಶಂಕರರ ಪ್ರಶ್ನೆಯು ಹಾಗೆಯೇ ಉಳಿದುಬಿಡುತ್ತದೆ.

ಎರಡನೆಯದಾಗಿ, ಇದು ಕ್ರೈಸ್ತ ಅನುಯಾಯಿಯ ಧಾರ್ಮಿಕ ನಂಬಿಕೆಯ ಅತಿರೇಕ ಎಂದು ಉತ್ತರಿಸಬಹುದು. ಒಂದು ರೀತಿಯಲ್ಲಿ ಶಿವಶಂಕರರ ಅಭಿಪ್ರಾಯವು ಇದೆ ಆಗಿದೆ ಎಂದರೆ ಅಚ್ಚರಿ ಪಡಬೇಕಾಗಿಲ್ಲ. ಇದು ಕ್ರೈಸ್ಥ ಅನುಯಾಯಿಯ ಆಕ್ಷೇಪಣೆಗೆ ಉತ್ತರ ಎಂದು ಭಾವಿಸಬಹುದಾದರೂ, ಮನಸ್ಸಿಗೆ ಬಂದಂತೆ ದೇವರನ್ನು ಕಲ್ಪಿಸಿಕೊಳ್ಳುವುದೇ ಅತಿರೇಕ ಎಂದು ಯಾರಾದರು ವಾದಿಸಿದರೆ ಅದನ್ನು ತಳ್ಳಿಹಾಕುವುದಕ್ಕೆ ಸಾಧ್ಯವಾಗುದಿಲ್ಲ. ಇಂತಹ ವಾದಗಳು ಸಮಸ್ಯೆಯನ್ನು ಬಿಡಿಸುವುದಕ್ಕಿಂತ ಅದನ್ನು ಕಗ್ಗಂಟಾಗಿಸಿಬಿಡುತ್ತದೆ. ಇಂತಹ ವಿವಾದಗಳಿಂದಲೂ ಉಪಯೋಗವೇನು ಇಲ್ಲ. ತನ್ನ ದೈವವನ್ನು ಹೀಗೆ ಪರಿಕಲ್ಪಿಸುವುದು ತಪ್ಪು ಎನ್ನುವ ಕ್ರೈಸ್ತ ಅನುಯಾಯಿಯ ವಾದ ಶಿವಶಂಕರರಿಗೆ ಅಚ್ಚರಿಯನ್ನು ಉಂಟಾಗುವುದಕ್ಕೆ ಕಾರಣವೇನು ಎನ್ನುವ ಪ್ರಶ್ನೆಯನ್ನು ಈ ಉತ್ತರ ಹಾಗೆ ಉಳಿಸಿ ಬಿಡುತ್ತದೆ.

ಹೀಗೆ ಮೊದಲ ಎರಡು ಉತ್ತರಗಳು ಸಮರ್ಪಕವಲ್ಲ ಎಂದು ನಾವು ಒಪ್ಪಿಕೊಳ್ಳುವುದಾದರೆ, ಇದಕ್ಕೆ ಬೇರೆಯ ಮತ್ತು ಹೆಚ್ಚು ಸೂಕ್ತವಾದ ಉತ್ತರವನ್ನು ಹುಡುಕುವ ಸಾಧ್ಯತೆಯ ಬಗ್ಗೆ ಪ್ರಶ್ನೆ ಏಳುತ್ತದೆ. ಇಂಥ ಹೊಸ ಉತ್ತರವು ಕ್ರೈಸ್ತ ಅನುಯಾಯಿಯ ಆಕ್ಷೇಪಣೆ ಮತ್ತು ಶಿವಶಂಕರ ಪ್ರಶ್ನೆ ಹಾಗು ಅಚ್ಚರಿಗಳೆರಡನ್ನು ಅರ್ಥಯಿಸಬೇಕಾದ ಜವಾಬ್ದಾರಿಯುತ ನಿಬಂಧನೆಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅಂದರೆ, ಇಬ್ಬರನ್ನೂ ದೂಷಿಸದೆ ಇಬ್ಬರ ವರ್ತನೆಯನ್ನು ಸಾಧ್ಯವಾದ ಮಟ್ಟಿಗೆ ಸಂಗತವಾದ ರೀತಿಯಲ್ಲಿ ವಿವರಿಸಬೇಕು. ಏಕೆಂದರೆ ಅನುಭವಗಳನ್ನು ನಾವು ತಪ್ಪು ಎಂದು ಹೇಳಲು ಬರುವುದಿಲ್ಲ. ಆದರೆ ಅನುಭವವನ್ನು ಸ್ವಲ್ಪಮಟ್ಟಿಗೆ ವಿವರಿಸಬಹುದಷ್ಟೆ. ಇಂತಹ ವಿವರಣೆಗಳು ಅನಾವಶ್ಯಕ ವಿವಾದವನ್ನು ಹುಟ್ಟು ಹಾಕದೇ ಸಂಗತಿಯೊಂದರ ಬಗೆಗೆ ನಮ್ಮ ತಿಳಿವನ್ನು ಒಂದಿಂಚಾದರು ಮುಂದುವರೆಸಲು ನೆರವಾಗಬೇಕು. ನಾನು ನೀಡಲು ಯತ್ನಿಸುತ್ತಿರುವ ಮೂರನೆ ರೀತಿಯ ವಿವರಣೆಯು ಒಂದು ಮಟ್ಟದಲ್ಲಿ ತಾನು ಹಾಕಿಕೊಂಡ ನಿಬಂಧನೆಗಳನ್ನು ಪಾಲಿಸುತ್ತದೆ ಎಂದು ನಂಬಿದ್ದೇನೆ. ಕ್ರೈಸ್ತ ಅನುಯಾಯಿ ಮತ್ತು ಶಿವಶಂಕರ್ ಇವರೀರ್ವರ ಧೋರಣೆಗೆ ಕಾರಣ ಅವರಿಬ್ಬರನ್ನು ರೂಪಿಸಿರುವ ಭಿನ್ನ ಅರ್ಥಪ್ರಪಂಚದ ಸಾಮಾಜೀಕರಣವೇ ಕಾರಣ. ಭಿನ್ನ ಅರ್ಥಪ್ರಪಂಚದ ಸಾಮಾಜೀಕರಣ  ಸ್ವರೂಪವನ್ನು  ವಿಶ್ಲೇಷಿಸಿದರೆ ಮಾತ್ರ ಸಂಗತವಾಗಿ ಇವರೀರ್ವರ ವರ್ತನೆಗಳು ನಮಗೆ ದಕ್ಕುತ್ತವೆ ಎಂದೆನಿಸುತ್ತದೆ.

ದೈವದತ್ತ ಮತ್ತು ಮಾನವ ಸಂಪ್ರದಾಯಗಳ ಮುಖಾಮುಖಿ

ಕ್ರೈಸ್ತ ಅನುಯಾಯಿಂದಲೇ ಆರಂಭಿಸೋಣ. ಕ್ರೈಸ್ತ ರಿಲಿಜನ್ನಿನ ಪ್ರಕಾರ ಜಗತ್ತು ಸೃಷ್ಠಿಕರ್ತನಾದ ಗಾಡ್ನ ಪೂರ್ವಯೋಜಿತ ಯೋಜನೆಗೆ ಅನುಗುಣವಾಗಿ ಜರುಗುತ್ತದೆ. ಆದ್ದರಿಂದ ಜಗತ್ತಿನ ಪ್ರತಿ ಘಟನೆಗೂ ಒಂದು ನಿರಂತರತೆ ಇದೆ. ಅಂತಹ ಯೋಜನೆಯೊಂದರ ಸಾಕಾರ ರೂಪವೇ ಏಸು. ಆತ ಮನುಕುಲದ ಪಾಪಗಳ ಪರಿಹಾರಕ್ಕಾಗಿ ಗಾಡ್ ಏಸುವಿನ ರೂಪದಲ್ಲಿ ಬಂದು ಶಿಲುಬೆ ಏರಿ ಬಲಿದಾನವಾದದ್ದು ಆ ಯೋಜನೆಯ ಭಾಗವೇ. ದೈವಿ ಯೋಜನೆಯನ್ನು ಮನುಷ್ಯ ಮಾತ್ರರಾದವರಿಂದ ಅರಿಯಲು ಸಾದ್ಯವಿಲ್ಲವೆನ್ನುತ್ತದೆ ಕ್ರೈಸ್ತ ರಿಲಿಜನ್ನು. ಅಂತಹ ದೈವಿ ಯೋಜನೆಯನ್ನು ಧಿಕ್ಕರಿಸುವುದಿರಲಿ ಅದನ್ನು ತಾನು ಅರಿತೆನೆಂದು ತಿಳಿಯುವುದು ಗಾಡ್ನ ವಿರುದ್ಧ್ದ ಮಾಡುವ ಪಾಪ, ಏಕೆಂದರೆ ಅದು ದೈವಿ ಇಚ್ಚೆಯ ಉಲ್ಲಂಘನೆಯೇ ಆಗಿದೆ ಎನ್ನುತ್ತದೆ ಕ್ರೈಸ್ತ ರಿಲಿಜನ್ನು. ಆದ್ದರಿಂದ ಏಸುವಿನ ಸ್ಥಾನದಲ್ಲಿ ಮತ್ತೊಬ್ಬನನ್ನು ನಿರೀಕ್ಷಿಸುವುದು ಏಸುವಿನ ಬಲಿದಾನವನ್ನು ನಗಣ್ಯಗೊಳಿಸಿ ಬಿಡುತ್ತದಲ್ಲದೆ, ಏಸು ಸಾಧಿಸಿದ್ದನ್ನು ಮನುಷ್ಯನೊಬ್ಬ ಸಾಧಿಸಬಹುದಾದ ಸಂಗತಿ ಎಂಬ ಅರ್ಥವನ್ನು ಹೊರಡಿಸುತ್ತದೆ. ಇದು ಏಸುವನ್ನು ಸಾಮಾನ್ಯನ ಮಟ್ಟಕ್ಕೆ ಇಳಿಸಿಬಿಡುತ್ತದೆ. ಅಷ್ಟೇ ಅಲ್ಲ ತನಗೆ ಗಾಡ್ನ ಯೋಜನೆ ಅರ್ಥವಾಗುವ ಮೂಲಕ ತಾನು ಗಾಡ್ ಅಥವಾ ಆತನಿಗೆ ಸರಿಸಮಾನ ಅಂದ ಹಾಗೆ ಆಗುತ್ತದೆ.  ಹೀಗೆ ತನ್ನ ಕಲ್ಪನೆಗೆ ತಕ್ಕಂತೆ ದೈವವನ್ನು ಕಲ್ಪಿಸಿಕೊಳ್ಳುವುದು ದೈವಿ ಇಚ್ಚೆಯ ಉಲ್ಲಂಘನೆಯೇ. ಆದ್ದರಿಂದಲೇ ಶಿವಶಂಕರರು ಕವಿತೆಯಲ್ಲಿರುವುದು ಮರಗಳ ಆಶಯ ಎಂದರೂ, ಅದನ್ನು ‘ಇದು ಕವಿ ಕಲ್ಪನೆಯ ಆಶಯ’ ಎಂದು ಕ್ರೈಸ್ತ ಅನುಯಾಯಿ ವಾದಿಸಿ ಮತ್ತೆಲ್ಲೂ ಬಳಸದಂತೆ ಒತ್ತಾಯಿಸಿದ್ದು ಎನಿಸುತ್ತದೆ.

ಇದಕ್ಕಿಂತ ಭಿನ್ನವಾಗಿ ಶಿವಶಂಕರರು ತನ್ನ ಸಂಪ್ರದಾಯಗಳ ಹಿನ್ನಲೆಯಲ್ಲಿ ಮನುಷ್ಯ ತನಗೆ ಬೇಕಾದಂತೆ ದೇವರನ್ನು ಕಲ್ಪಿಸಿಕೊಳ್ಳುವುದು ಮನುಷ್ಯನಿಗಿರುವ ‘ಪೂಜಾ ಸ್ವಾತಂತ್ರ್ಯ್ರ’ ವೆಂದು ವಾದಿಸತೊಡಗುತ್ತಾರೆ. ಅಂತಿಮವಾಗಿ ದೇವರನ್ನು ಪೂಜಿಸುವ ಮಾರ್ಗದಲ್ಲಿ ಮನುಷ್ಯ ತನಗೆ ಸರಿಕಂಡದ್ದನ್ನು ಆಯ್ದುಕೊಳ್ಳವುದರಲ್ಲಿ ತನಗೆ ಬೇಕಾದಂತೆ ಕಲ್ಪಿಸಿಕೊಳ್ಳವುದರಲ್ಲಿ ತಪ್ಪೇನು ಎನಿಸುತ್ತದೆ. ತಮ್ಮ ಲೇಖನಕ್ಕೆ ‘ಏಕೆ’ ಎಂಬ ತಲೆ ಬರಹವಿಟ್ಟು ಆಚ್ಚರಿಗೊಳ್ಳುವ ಶಿವಶಂಕರರ ಅಚ್ಚರಿಯ ಹಿಂದೆ ಇರುವುದು ಅವರ ಗ್ರಹಿಕೆಯ ಮಿತಿ ಮತ್ತು ಸಾಧ್ಯತೆಯೂ ಆಗಿದೆ. ಕ್ರೈಸ್ತ ಅನುಯಾಯಿಯ ಅಕ್ಷೇಪಣೆಯ ಹಿನ್ನಲೆಯ ಮಿತಿ ಮತ್ತು ಸಾಧ್ಯತೆಯೂ ಇದೆ ಆಗಿದೆ. ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕ್ರಿಶ್ಚಿಯಾನಿಟಿಯಂತಹ ಸೆಮೆಟಿಕ್ ರಿಲಿಜನ್ನು ಗಾಡ್ನಿಂದ ನೇರವಾಗಿ ಸಾಕ್ಷಾತ್ಕರಿತವಾದವುಗಳು ಎಂದು ಗುರುತಿಸಿಕೊಳ್ಳುತ್ತವೆ. ಆದ್ದರಿಂದ ಅದರಲ್ಲಿ ಮನುಷ್ಯನ ಹಸ್ತಕ್ಷೇಪವನ್ನು ನಿರಾಕರಿಸುತ್ತವೆ. ಈ ಅರ್ಥದಲ್ಲಿ ಕ್ರಿಶ್ಚಿಯಾನಿಟಿಯನ್ನು ದೈವದತ್ತಸಂಪ್ರದಾಯ ಎನ್ನಬಹುದು.  ಇದಕ್ಕಿಂತ ಭಿನ್ನವಾಗಿ ‘ಹಿಂದೂ’ ಸಂಪ್ರದಾಯಗಳು ಅಂತಿಮ ಸತ್ಯದ ಸಾಕ್ಷಾತ್ಕಾರಕ್ಕೆ ಮನುಷ್ಯನ ಸ್ವಪ್ರಯತ್ನಕ್ಕೆ ಆದ್ಯತೆ ನೀಡುತ್ತವೆ ಮತ್ತು ಅದೇ ಅಂತಿಮ ಮಾರ್ಗವೆಂದು ಸೂಚಿಸುತ್ತವೆ. ಆದ್ದರಿಂದ ತಾನು ಏನು ಕಂಡುಕೊಳ್ಳುತ್ತೇನೋ ಆದೇ ಸತ್ಯವಾಗುವುದರಿಂದ ಇನ್ನೊಬ್ಬನ ಮಾರ್ಗದ ಆಕ್ಷೇಪಣೆ ತೋರಲು ಇಲ್ಲಿ ಸಾಧ್ಯವಿಲ್ಲ. ಇದನ್ನೇ ಶಿವಶಂಕರರು ‘ಪೂಜಾ ಸ್ವಾತಂತ್ಯ್ರ’ ಎನ್ನುತ್ತಿರುವುದು. ಈ ಅರ್ಥದಲ್ಲಿ ‘ಹಿಂದೂ’ ಸಂಪ್ರದಾಯಗಳನ್ನು ಮಾನವ ಸಂಪ್ರದಾಯಗಳು ಎನ್ನಬಹುದು.

ಹಾಗಾಗಿ ಇವರಿಬ್ಬರಿಗೂ ಇನ್ನೊಬ್ಬರು ‘ಹಿಗೇಕೆ?’ ಎನ್ನುವ ಪ್ರಶ್ನೆಯಾಗಿಬಿಡುತ್ತಾರೆ. ಇದಕ್ಕೆ  ಕಾರಣ ಇವರಿಬ್ಬರ ಅನುಭವ ಪ್ರಪಂಚ ಮತ್ತು ಆದನ್ನು ರೂಪಿಸಿರುವ ಸಾಮಾಜೀಕರಣದ ಭಿನ್ನತೆಯೇ ಕಾರಣ ಎನ್ನುವುದು ನನ್ನ ಅಭಿಮತ. ಇದನ್ನು ಒಪ್ಪುವುದಾದರೆ ವಸಾಹತೋತ್ತರ ಸಂಧರ್ಭದಲ್ಲಿ ಎದ್ದಿರುವ ಬೌದ್ಧಿಕ ಪ್ರಶ್ನೆಗಳಿಗೆ ಮರಳುತ್ತೇವೆ. ಆ ಪ್ರಶ್ನೆಯನ್ನು ಈ ಲೇಖನದ ಚರ್ಚೆಗೆ ಅನುಗುಣವಾಗಿ ಒಗ್ಗಿಸಿ ಕೇಳಿಕೊಳ್ಳುವುದಾದರೆ ಅದು ಹೀಗಿರುತ್ತದೆ: ಒಂದೇ ಸಮಾಜದಲ್ಲಿ ವಾಸಿಸುತ್ತಾ ಭಿನ್ನ ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದ ವ್ಯಕ್ತಿಗಳು ಪರಸ್ಪರರಿಗೆ ನಿಗೂಢವಾಗುತ್ತಾರೆ ಎಂದಾದರೆ, ತನಗೆ ಸಂಪೂರ್ಣವಾಗಿ ಅಪರಿಚಿತವಾದ ಭಾರತದಂತಹ ಸಂಸ್ಕೃತಿಗೆ ಬಂದು ಆ ಸಂಸ್ಕೃತಿಯ ಬಗ್ಗೆ ವಿವರಣೆ ನೀಡಿದ ಯೂರೋಪ್ನ ವಿವರಣೆಗಳಲ್ಲಿನ ನಿಗೂಢದ ಆಳ ಎಷ್ಟು?

ಇನ್ನೂ ಮತಾಂತರದ ವಿಷಯ:

ಭಾರತೀಯ ಸಂಪ್ರದಾಯಗಳು ಮತ್ತು ಸೆಮೆಟಿಕ್ ಸಂಪ್ರದಾಯಗಳ ಸ್ವರೂಪದ ಮೇಲಿನ ವರ್ಗೀಕರನವನ್ನು ನಾವು ಒಪ್ಪುವುದಾದರೆ, ಭಾರತದ ಸೆಕ್ಯುಲರ್ ಪ್ರಭುತ್ವಕ್ಕೆ ಒಂದು ಸಾವಲು ಎದರಾಗುತ್ತದೆ. ಈ ಸವಾಲು ಮತಾಂತರದ ಪ್ರತಿಯಾಗಿ ಕಾನೂನುಗಳನ್ನು ಜಾರಿಗೆ ತರುವಾಗ ಎದುರಾಗುತ್ತದೆ. ಎಲ್ಲಾ ಸಂಪ್ರದಾಯಗಳನ್ನು ಸಮಾನವಾಗಿ ಕಂಡು ಯಾವುದೇ ಸಂಪ್ರದಾಯಗಳ ಪ್ರತಿಯಾಗಿ, ಪಕ್ಷಪಾತ ಮಾಡದೇ ನಿರ್ಲಿಪ್ತತೆಯ ಮೌಲ್ಯವನ್ನು ಪಾಲಿಸುವುದಾಗಿ ಭಾರತದ ಸೆಕ್ಯುಲರ್ ಪ್ರಭುತ್ವವು ಘೊಷಿಸಿಕೊಂಡಿದೆ. ಅದು ಹಾಗೇ ಇರಬೇಕು ಎಂಬುದು ಬುದ್ಧಿಜೀವಿಗಳ ಆಶಯ ಕೂಡ. ಆದರೆ ಭಾರತದ ಸಂದರ್ಭದಲ್ಲಿ, ಅದರಲ್ಲೂ ಮತಾಂತರದಂತಹ ವಿಷಯದಲ್ಲಿ ನಿರ್ಲಿಪ್ತತೆಯ ಮೌಲ್ಯವನ್ನು ಪಾಲಿಸುವುದು ಸಾಧ್ಯವೇ? ಇದನ್ನು ಪರಿಶಿಲಿಸಿಬೇಕಿದೆ.

 

ಭಾರತದ ಸಂಪ್ರದಾಯಗಳು ಮಾನವ ಸಂಪ್ರದಾಯಗಳಾಗಿರುವುದರಿಂದ ಅವು ಮತಂತಾರವನ್ನು ಒಪ್ಪುವುದಿಲ್ಲ. ಅವು ಯಾವುದೇ ಸಂಪ್ರದಾಯಗಳನ್ನು ಸತ್ಯ ಸುಳ್ಳುಗಳ ಪರಿಭಾಷೆಯಲ್ಲಿ ಮಾತನಾಡುವುದಿಲ್ಲ, ಎಲ್ಲಾ ಸಂಪ್ರದಾಯ ಗಳನ್ನು ಅವು ಅವುಗಳದೇ ಆದ ರೀತಿಯಲ್ಲಿ ಬದುಕುವುದನ್ನು ಒಪ್ಪುತ್ತವೆ. ಆದ್ದರಿಂದ ಈ ಸಂಪ್ರದಾಯಗಳು ಒಂದು ಮತ್ತೊಂದರಲ್ಲಿ ಹಸ್ತಕ್ಷೇಪ ಮಾಡುವುದನ್ನು ಒಪ್ಪುವುದಿಲ್ಲ. ಹಾಗಾಗಿ ಹಸ್ತಕ್ಷೇಪ ರಹಿತೆಯ ದೋರಣೆಯನ್ನು ಭಾರತದಂತಹ ಸಂಪ್ರದಾಯಗಳು ಪ್ರತಿಪಾದಿಸುತ್ತವೆ. ಮತಾಂತರವನ್ನು ನಿರಾಕರಿಸುತ್ತವೆ. ಗಾಂಧೀಜಿಯವರು, ‘ನನಗೆ ಅಧೀಕಾರವಿದ್ದು ಶಾಸನ ನಿರ್ಮಿಸುವಂತಿದ್ದರೇ ಸಕಲ ರಿಲಿಜನ್ನುಗಳ ಮತಾಂತರವನ್ನು ನಿಷೇಧಿಸುತ್ತಿದ್ದೆ’ (1935) ಎನ್ನುವ ಅವರ ಮತಾಂರ ವಿರೋಧಿ ನಿಲುವನ್ನು ಹೀಗೆ ಅರ್ಥಯಿಸಬೇಕು ಎನಿಸುತ್ತದೆ. ಗಾಂಧಿ(ಅವರ ಅನುಯಾಯಿಗಳು) ಮತ್ತು ಹಿಂದುತ್ವವಾದಿ ಸಂಘಟನೆಗಳ ನೆಡುವೆ ಅಜಗಜಾಂತರ ವೆತ್ಯಾಸಗಳಿದ್ದರು ಮತಾಂತರ ಸಂಭಂದಿಸಿದಂತೆ ಇವರಿರ್ವವ ನೀಲುವು ಹಸ್ತಕ್ಷೇಪ ರಹಿತತೆಯ ಧೋರಣೆಯದ್ದೇ ಎನಿಸುತ್ತದೆ.

ಸೆಮೆಟಿಕ್ ಸಂಪ್ರದಾಯಗಳು ತಮ್ಮನ್ನು ದೈವದತ್ತವಾಗಿದೆ ಎಂದು ಭಾವಿಸುತ್ತವೆ. ಆದ್ದರಿಂದ ತಮ್ಮ ಮಾರ್ಗವನ್ನೇ ನಿಜವಾದ ಮಾರ್ಗವೆಂದು ಭಾವಿಸುತ್ತವೆ. ಉಳಿದ ಮಾರ್ಗದಲ್ಲಿರುವವರನ್ನು ಸರಿಯಾದ ಮಾರ್ಗದಲ್ಲಿ ತರುವುದನ್ನು ಒಂದು ಗುಣವಾಗಿ ಭಾವಿಸಿ ಮತಾಂತರವನ್ನು ಪುರಸ್ಕರಿಸುತ್ತವೆ. ಆದ್ದರಿಂದ ಮತಪ್ರಚಾರವು ಸೆಮೆಟಿಕ್ ಸಂಪ್ರದಾಯಗಳ ಲಕ್ಷಣವೇ ಆಗಿದೆ. ಅಂದರೆ ಬೇರೆ ಸಂಪ್ರದಾಯಗಳಲ್ಲಿನ ಹಸ್ತಕ್ಷೇಪವನ್ನು ಈ ಸಂಪ್ರದಾಯಗಳು ಒಪ್ಪುತ್ತವೆ.

ಈ ಚರ್ಚೆಯಿಂದ ನಮಗೆ ತಿಳಿದುಬರುವುದೆಂದರೆ, ಒಂದು ಸಂಪ್ರದಾಯಗಳಲ್ಲಿ ಇನ್ನೋಂದು ಸಂಪ್ರದಾಯದ ಹಸ್ತಕ್ಷೇಪವನ್ನು ಒಪ್ಪುವ ಮತ್ತು ನಿರಾಕರಿಸುವ ಎರಡೂ ಸಂಪ್ರದಾಯಗಳು ಭಾರತದಲ್ಲಿವೆ ಎಂದಾಗುತ್ತದೆ. ಇಂತಹ ಸನ್ನಿವೇಶದಲ್ಲಿ ನಾವು ಮತಪ್ರಚಾರಕ್ಕೆ ಅವಕಾಶಮಾಡಿಕೊಟ್ಟರೆ, ಮತಾಂತರ ನಿಷೇಧ ಮಾಡದಿದ್ದರೇ ಸೆಮೇಟಿಕ್ ಸಂಪ್ರದಾಯಗಳ ಪರ ನಿಂತಂತಾಗುತ್ತದೆ. ಇನ್ನೋಂದು ಕಡೆ, ಮತಾಂರವನ್ನು ನಿಷೇಧಿಸಿವುದಕ್ಕೇ ಬೆಂಬಲ ನೀಡಿದರೆ ನಾವು ಭಾರತೀಯ ಸಂಪ್ರದಾಯಗಳ ಪರ ನಿಂತಂತಾಗುವುದು. ಸೆಮೆಟಿಕ್ ಮತ್ತು ಭಾರತಿಯ ಸಂಪ್ರದಾಯಗಳು ಪರಸ್ಪರ ಒಂದನ್ನೋಂದು ನಿರಾಕರಿಸುವ ವಿಚಾರಗಳನ್ನು ಪ್ರತಿಪಾದಿಸುದರಿಂದ ಮತಾಂತರದ ವಿಚಾರದಲ್ಲಿ ಪ್ರಭುತ್ವಕ್ಕಾಗಲಿ ಅಥವ ಬುದ್ಧಿಜೀವಿಗಳಿಗಾಗಲಿ ನಿರ್ಲಿಪ್ತವಾದ ಇಲ್ಲವೇ ತಟಸ್ಥವಾದ ನಿಲುವು ಸಾಧ್ಯವಾಗುವುದಿಲ್ಲ (ನೋಡಿ: ಬಾಲಗಂಗಾಧರ ಮತ್ತು ಜೇಕಬ್ 2007) ಆದ್ದರಿಂದ ತಾವು ತಟಸ್ಥತ್ವಕ್ಕೇ ಬದ್ಧರಾಗಿದ್ದೇವೆ ಎನ್ನುವುದು ಸುಳ್ಳಾಗುತ್ತದೆ.

ಜಾಗತಿಕ ಭೌದ್ಧಿಕ ಇತಿಹಾಸವನ್ನು ನೋಡಿದರೆ ಕೇವಲ ಒಂದು ಸಂಸ್ಕೃತಿ ಮಾತ್ರ ಜಗತ್ತಿನ ಇತರ ಸಂಸ್ಕೃತಿಗಳನ್ನು ವಿವರಿಸಿದೆ. ಅದೆಂದರೆ ಪಾಶ್ಚಿಮಾತ್ಯ ಸಂಸ್ಕೃತಿ. ಇಂದಿಗೂ ನಾವು ಈ ಸಂಸ್ಕೃತಿಯು ರೂಪಿಸಿಕೊಟ್ಟ ದೃಷ್ಠಿಕೋನದಿಂದಲೇ ನಮ್ಮ ಸಮಾಜವನ್ನು ವಿವರಿಸಿಕೊಳ್ಳುವ ಕೆಲಸದಲ್ಲೇ ತೊಡಗಿದ್ದೇವೆ. ಒಂದು ಪಕ್ಷ ಭಾರತೀಯ ಸಮಾಜದ ವಾಸ್ತವಿಕತೆ ಮತ್ತು ಅದರ ಬಗೆಗೆ ಇರುವ ಪಶ್ಚಿಮದ ವಿವರಣೆಗಳ ನಡುವೆ ಕಂದರವಿದ್ದರೆ ಅದರ ಪರಿಣಾಮವೇನು? ದಿನೇದಿನೇ ನಮ್ಮ ಭಾರತೀಯ ಸಮಾಜದಲ್ಲಿ ಹೆಚ್ಚುತ್ತಿರುವ ಸಾಂಸ್ಕೃತಿಕ ಸಮಸ್ಯೆ ಮತ್ತು ಅದರಿಂದ ಹೆಚ್ಚುತ್ತಿರುವ ಹಿಂಸೆಗಳಲ್ಲಿ ಈ ಕಂದರದ ಪಾತ್ರವೇನು? ಮತಾಂತರ, ಕೋಮುಗಲಭೆ, ನಡೆಯುತ್ತಿರುವ ಪ್ರತಿ ಸಂದರ್ಭದಲ್ಲೂ ನಾವೆಲ್ಲರು ಕೇಳಿಕೊಳ್ಳಬೇಕಿರುವ ಪ್ರಶ್ನೆಗಳು ಇವಾಗಿವೆ. ಈ ಸಮಸ್ಯೆಯನ್ನು ನಿವಾರಿಸುವಲ್ಲಿ ಇಂದಿನ ಸಮಾಜಶಾಸ್ತ್ರಗಳು ನಿರ್ವಹಿಸ ಬೇಕಾದ ಪಾತ್ರಗಳು ಇತ್ಯಾದಿಗಳು ಗಂಭೀರ ಚರ್ಚೆಗೆ ಒಳಪಡಬೇಕು ಎನಿಸುತ್ತದೆ. ಈ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನವಾಗಿ ಇಂತಹ ಚರ್ಚೆಗಳಲ್ಲಿ ವಿದ್ವಾಂಸರುಗಳು ತೊಡಗಿಕೊಳ್ಳವುದು ಇಂದಿನ ಅಗತ್ಯವಾಗಿದೆ.

ಪರಾಮರ್ಶನೆ:

ಎಸ್.ಎನ್. ಬಾಲಗಂಗಾಧರ  ಮತ್ತು ಜೇಕಬ್ ದ ರೂವರ್. 2007. ಸಕ್ಯುಲರ್ ಸ್ಟೇಟ್ ಎಂಡ್ ರಿಲಿಜಿಯಸ್ ಕಾನ್ಫ್ಲಿಟ್: ಲಿಬೆರಲ್ ನ್ಯುಟ್ರಾಲಿಟಿ ಎಂಡ್ ಇಂಡಿಯನ್ ಕೇಸ್ ಆಫ್ ಪ್ಲುರಲಿಸಂ, ಜನರಲ್ ಆಫ್ ಪೊಲಿಟಿಕಲ್ ಫಿಲಾಸಫಿ; 15(1), 67-92.

ಗಾಂಧಿ, ಎಂ, ಕೆ. ಇಟರ್ವ್ಯೂ ಟು ಎ ನರ್ಸ. ಪು.48-49 ಸಮಗ್ರ ಸಂಪುಟ ಸಂ, 67. ನವ ದೆಹಲಿ: ಪಬ್ಲಿಕೇಷನ್ ಡಿವಿಷನ್ ಇ-ಬುಕ್

ಶಿವಶಂಕರ ಜರಗನಹಳ್ಳಿ2007(ದಿನಾಂಕ16/12) ???….?. ???????; ಪುಟ 29,

***************************ವಿ.ಸೂ. ಈ ಲೇಖನವನ್ನು Centre for the Study of Local Cultures (CSLC), ಕುವೆಂಪು ವಿ.ವಿ., ಇವರು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮೂರು ಕಾರ್ಯಾಗಾರಗಳಲ್ಲಿನ ತರಗತಿಗಳು ಮತ್ತು ಚರ್ಚೆಗಳ ಫಲ. ಸಂಶೋಧನಾ ವಿಧಾನಗಳ ಕುರಿತ ಈ ಕಾರ್ಯಾಗಾರಗಳ ಪ್ರಾಯೋಜಕರಾದ ಸರ್ ರತನ್ ಟಾಟ ಟ್ರಸ್ಟ್ (SRTT) ಮತ್ತು ಆಯೋಜಕರಾದ CSLCಗೆ ನನ್ನ ಧನ್ಯವಾದಗಳು. (ಪ್ರಸ್ತುತ ಲೇಖನವು ‘ಸಂಪ್ರೀತಿ’ ಲಕ್ಷೀನಾರಯಣ ಆಭಿನಂದನ ಗ್ರಂಥದಲ್ಲಿ ಪ್ರಕಟಿತವಾಗಿದೆ)