ಜಾತಿ ಆಧಾರಿತ ಗಣತಿ: ನಿರ್ವಸಾಹತೀಕರಣ ಹಾಗೂ ನಮ್ಮ ಭಾರತ. . .
ಕಳೆದ ತಿಂಗಳು ನಾಡಿನ ಪ್ರಮುಖ ಪತ್ರಿಕೆಯಲ್ಲಿ ಪ್ರಕಟಗೊಂಡ ಮುಜಾಪ್ಪರ್ ಅಸ್ಸಾದಿ ರವರ ಜಾತಿ ನಿರ್ವಸಾಹತೀಕರಣ ಹಾಗೂ ಜನಗಣತಿ ಎಂಬ ಲೇಖನ ವಿದ್ವತ್ಪೂರ್ಣವಾಗಿದೆ ಡಾ.ಅಸ್ಸಾದಿರವರು ತಮ್ಮ ಇಡೀ ಲೇಖನದಲ್ಲಿ ಜಾತಿ ಆಧಾರಿತ ಜನಗಣತಿಯಿಂದ ಭಾರತದ ರಾಜಕೀಯಸಮಾಜ ಮತ್ತು ಜಾತಿಯ ಕುರಿತಂತೆ ಪ್ರಸ್ಥುತ ಇರುವ ಗ್ರಹಿಕೆಗಳಲ್ಲಿ ಆಗುವ ಬದಲಾವಣೆಗಳನ್ನು ಅಂತ್ಯಂತ ವಿಸ್ಥಾರವಾಗಿ ಚರ್ಚಿಸಿದ್ದಾರೆ ಮತ್ತು ವಸಾಹತೊತ್ತರ ಸನ್ನಿವೇಶದ ಜನಗಣತಿಗಳು ಜಾತಿಗಳನ್ನು ಗುರುತಿಸುವುದರಿಂದ ಆಗುವ ಪ್ರಯೋಜನಗಳನ್ನು ಕುರಿತು ವಿವರಿಸಿದ್ದಾರ. ಆದರೆ ಅವರ ವಿವರಣೆಗೆ ಬಳಸಿರುವ ಬಹುಪಾಲು ವಾದಗಳು ವಸಾಹತು ಕಾಲದಲ್ಲಿ ಯೋರೋಪಿಯನ್ ಚಿಂತಕರಿಂದ ಮಂಡಿಲ್ಪಟ್ಟವು ಎಂಬುದನ್ನ ನಾವು ಗಮನಿಸಬೇಕಾಗುತ್ತದೆ.
ಲೇಖಕರು ಹೇಳುವಂತೆ ವಸಾಹತುಶಾಹಿ ಕ್ಯಾಸ್ಟ್ ಅನ್ನು ತನ್ನ ವಸಾಹತುಗಳಲ್ಲಿ ನಿರ್ಮಿಸುವಾಗ ಕೆಲವು ಪೂರ್ವನಿರ್ಧರಿತ ಪರಿಕಲ್ಪನೆಗಳನ್ನು ಮುಂದಿಟ್ಟುಕೊಂಡು ಅಲ್ಲಿನ ಸಾಮಾಜಿಕ ಸಂರಚನೆಯನ್ನು ವಿಶ್ಲೇಷಿಸಿತು. ಅಂದರೆ ಕ್ಯಾಸ್ಟ್ ಎಂಬುದು ಒಂದು ಪೂರ್ವನಿರ್ಧರಿತ ಚೌಕಟ್ಟಾಗಿದ್ದು ಆದು ಭಾರತ ಸಮಾಜದ ಜಾತಿ ಗೆ ಸಮಾನವಾಗಿದ್ದ ಕಾರಣ ಜಾತಿ ಅಂತಿಮ ಹಂತದಲ್ಲಿ ಕ್ಯಾಸ್ಟ್ ಆಗಿ ಪರಿವರ್ತಿತವಾಯಿತು. ಎಂದು ವಾದಿಸುತ್ತಾರೆ ಮುಂದುವರಿದು ಭಾರತದಲ್ಲಿನ ಜಾತಿಗೆ ಸಂಬಂದಿಸಿದಂತೆ ವಸಾಹತುಶಾಹಿ ಏಕಕಾಲದಲ್ಲಿ ಮೂರು ಕಾರ್ಯಗಳನ್ನು ನಿರ್ವಹಿಸಿತು ಅವು ಯಾವುವೆಂದರೆ.
1) ಜಾತಿ ಚೌಕಟ್ಟನ್ನು ಒಂದೆಡೆ ಗಟ್ಟಿಗೊಳಿಸುತ್ತಾ ಹೋಯಿತು
2) ಇನ್ನೊಂದೆಡೆ ವ್ಯವಸ್ಥೆಯನ್ನು ಶಿಥಿಲಗೊಳಿಸಿತು
3) ಬಹಳಷ್ಟು ಜಾತಿಗಳನ್ನು ವಸಾಹತುಶಾಹಿಯು ನಿರ್ಮಿಸಿತು. ಎಂಬುದಾಗಿ ವಿಶ್ಲೇಷಿಸುತ್ತಾರೆ.
ಮುಂದುವರಿದು ಜನಗಣತಿಯು ಮಾಡಿದ ಹಲವಾರು ಅವಾಂತರಗಳಲ್ಲಿ ಜಾತಿಗಳ ನಿರ್ಮಿತಿಯು ಒಂದು ಎಂದು ವಿವರಿಸುತ್ತಾ ಇದಕ್ಕೆ ಅಕ್ಷರ ಜ್ಙಾನವು ಒಂದು ಕಾರಣ ಎನ್ನುತ್ತಾರೆ ಒಂದು ಕಡೆ ಅಕ್ಷರ ಜ್ಙಾನ ಆಧುನಿಕತೆಯನ್ನು ಅಳವಡಿಸಲು ಸಹಾಯ ಮಾಡಿದರೆ ಮತ್ತೊಂದೆಡೆ ಅದೇ ಅಕ್ಷರ ಜ್ಙಾನ ಸಮಾಜಿಕ ಸಂರಚನೆಯ ಮುಖಾಮುಖಿ ವಿರೋಧಗಳನ್ನು ಸೃಷ್ಟಿಸಲು ಅನುವು ಮಾಡಿಕೊಟ್ಟಿತು. ಎಂಬುದಾಗಿ ವಿವರಿಸುತ್ತಾರೆ
ಲೇಖಕರ ಈ ವಾದ ನಿಕೋಲಾಸ್ ಬಿ ಡಕ್ರ್ಸನ ಪ್ರಮುಖ ವಾದವಾಗಿದೆ, ಜಾತಿಯೆನ್ನುವುದು ಭಾರತೀಯ ಸಾಮಾಜಿಕ ರಚನೆಯ ಪ್ರಮುಖ ಲಕ್ಷಣ ಎಂದು ಗುರುತಿಸಲು ಕಾರಣವೇನು? ಎಂಬ ಪ್ರಶ್ನೆಯ ಸುತ್ತ ಈ ವಾದ ಹರಡಿದೆ. ಡಕ್ರ್ಸನ ವಾದ ಹೀಗೆದೆ: ನಾವು ಜಾತಿ ಎಂದು ಯಾವುದನ್ನು ವಿವರಿಸಿ ಗ್ರಹಿಸುತ್ತಿದ್ದೇವೆಯೋ, ಅದು ಪ್ರಾಚೀನ ಕಾಲದಿಂದಲೂ ಬದಲಾವಣೆ ಇಲ್ಲದೆ, ಒಂದೇ ಮಾದರಿಯಲ್ಲಿ ಬೆಳೆದು ಬಂದ ವ್ಯವಸ್ಥೆ ಎಂದು ಹೇಳಲು ಬರುವುದಿಲ್ಲ. ಅಲ್ಲದೇ ಜಾತಿ ವ್ಯವಸ್ಥೆಯು ಇಡೀ ಭಾರತೀಯ ನಾಗರಿಕತೆಯ ಸಂಸ್ಕೃತಿಯ ಕೇಂದ್ರವಾಗಿದೆಯೆಂದು ವಾದಿಸಲು ಸಹ ಸಾಧ್ಯವಿಲ್ಲ. ಇಂದು ನಾವು ಜಾತಿವ್ಯವಸ್ಥೆಯೆಂದು ಯಾವುದನ್ನು ಅರ್ಥಮಾಡಿಕೊಂಡಿದ್ದೇವೋ, ಅದು ಒಂದು ಆಧುನಿಕ ವಿದ್ಯಮಾನ. ಇದು ಭಾರತ ಮತ್ತು ಪಶ್ಚಿಮದ ಘರ್ಷಣೆಯಿಂದ ನಿಮರ್ಿತವಾದದ್ದು. ಸಂಕ್ಷಿಪ್ತವಾಗಿ ಹೇಳುವುದಾದರೆ ಜಾತಿ ವ್ಯವಸ್ಥೆಯೆಂಬುದು ವಸಾಹತುಶಾಹಿಯ ನಿಮರ್ಾಣವಾಗಿದೆ. ಡಕ್ಸರ್್ ವಿವರಿಸುವಂತೆ ಜಾತಿ ವ್ಯವಸ್ಥೆಯೆಂಬುದು ಆಧುನಿಕ ವಿದ್ಯಮಾನವಾಗಿದ್ದು, ವಸಾಹತುಶಾಹಿಯ ಕೊಡುಗೆಯಾಗಿದೆ ಮತ್ತು ಜಾತಿವ್ಯವಸ್ಥೆಯಲ್ಲಿನ ಶ್ರೇಣೀಕರಣ ಭಾರತ ಸಮಾಜದ ವಸಾಹತೋತ್ತರ ಕಾಲದ ವಾಸ್ತವವಾಗಿದೆ. ಎನ್ನುತ್ತಾನೆ. ಪ್ರಸ್ಥುತ ಅಸ್ಸಾದಿ ಅವರು ಈ ನೆಲೇಯಲ್ಲಿಯೇ ತಮ್ಮ ವಾದವನ್ನು ಬೆಳೆಸಿರುವುದನ್ನು ಗುರುತಿಸಬಹುದಾಗಿದೆ.
ಇಲ್ಲಿ ಗಮನಿಸಬೇಕಾದ ಪ್ರಮುಖವಾದ ಅಂಶ ಎಂದರೆ, ಭಾರತದಲ್ಲಿನ ಜಾತಿಗಳ ಕುರಿತಾದ ಬಹುಪಾಲು ಸಮಕಾಲೀನ ಬೌದ್ಧಿಕ ವಿವರಣೆ ಮತ್ತು ವಿಶ್ಲೇಷಣೆಗಳು ವಸಾಹತು ಕಾಲದಲ್ಲಿ ಯೋರೋಪಿಯನ್ ಚಿಂತಕರಿಂದ ಮಂಡಿಲ್ಪಟ್ಟ ಜಾತಿಗಳ ಕುರಿತಾದ ವಾದಗಳನ್ನು ಬಳಸಿಕೊಂಡೇ ಮುಂದುವರಿಯಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿವೆ. (ಇದಕ್ಕೆ ಅಸಾದಿಯವರು ಹೊರತಲ್ಲ) ಅದು ಜನಗಣತಿಯಿರಲಿ ಅಥವಾ ಭಾರತ ಸಮಾಜದಲ್ಲಿ ಜಾತಿಗೆ ಸಂಬಂಧಿಸಿದ ಯಾವುದೇ ಚರ್ಚೆಯಿರಲಿ ಉದಾ; ಭಾರತ ಸಮಾಜದ ಜಾತಿ ಸಂಬಂಧಿತ ರಾಜಕೀಯ, ಅರ್ಥಿಕ , ಸಾಂಸ್ಕೃತಿಕ ಅಂಶಗಳ ಕುರಿತಾದ ಚಿಂತನೆಗಳಲ್ಲಿ ವಿದ್ವಾಂಸರು ಜಾತಿವ್ಯವಸ್ಥೆಯ ಕುರಿತಾದ ಪಾಶ್ಚ್ಯಾತ್ಯ ಬುದ್ಧಿಜೀವಿಗಳ ಬರವಣಿಗೆ ಮತ್ತು ಚಿಂತನೆಗಳನ್ನೆ ಅಡಿಪಾಯವಾಗಿಸಿಕೊಂಡು ಮುಂದುವರಿಯಬೇಕಾಗುತ್ತದೆ ಮತ್ತು ಮುಂದುವರೆಯುತ್ತಿದ್ದಾರೆ. ಹಾಗೆ ನೋಡುವುದಾದರೆ 300 ವರ್ಷಗಳಿಂದ ಭಾರತದ ಸಂಸ್ಕೃತಿಯ ಸೈದ್ಧಾಂತಿಕತೆ ಮತ್ತು ಪಠ್ಯಾಧಾರಿತ ಅಧ್ಯಯನ ಬೆಳಕು ಕಂಡುಕೊಂಡಿರುವುದು ಬಹುಪಾಲು ಯುರೋಪಿಯನ್ನರಿಂದಲೇ, ಅಲ್ಲದೆ ಭಾರತದ ಕುರಿತಾದ ಹೆಚ್ಚಿನ ಅಧ್ಯಯನಗಳು ಐರೋಪ್ಯರ ಸಾಂಸ್ಕೃತಿಕ ಚೌಕಟ್ಟಿನೊಳಗೆ ನಡೆದಿವೆ.
ಇಲ್ಲಿ ಪ್ರಮುಖವಾಗಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಒಂದಿದೆ, ಸುಮಾರು ಎರಡು ಸಾವಿರಕ್ಕೊ ಮೀಗಿಲಾದ ಇತಿಹಾಸವಿರುವ ಭಾರತದಂತ ಒಂದು ದೇಶದ ಸಮಾಜಿಕ ವಾಸ್ತವವಾದ ಜಾತಿಯ ಕುರಿತಾಗಿ ಭಾರತೀಯರದ್ದೆ ಆದಂತಹ ಒಂದು ಚಿಂತನೆಯನ್ನು ನಾವು ರೊಪಿಸಿಕೊಳ್ಳಲಿಲ್ಲವೇ? (ಇಲ್ಲಿ ನಾವು ಮನುಧರ್ಮಶಾಸ್ತ್ರ, ಪುರುಷ ಸೂಕ್ತದಂತಹ ಕೆಲವು ಪಠ್ಯಗಳನ್ನು ಉದಾಹರಣೆ ಕೊಡಬಹುದು. ಆದರೆ ಇದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ ಏಕೆಂದರೆ ಅವುಗಳಲ್ಲಿರುವ ವಿವರಣೆಯ ಪ್ರಕಾರ ಸಮಾಜದ ರಚನೆ ಇರಲಿಲ್ಲ ಎನ್ನುವುದನ್ನು ಪಾಶ್ಚಾತ್ಯ ಚಿಂತಕರೆ ಗುರುತಿಸಿದ್ದಾರೆ ಮತ್ತು ಅದು ನಮ್ಮೆಲ್ಲರ ಅನುಭವ ಕೂಡ ಹೌದು) ಅದು ಅಲ್ಲದೇ ಎಕೆ ನಾವು ಭಾರತ ಸಮಾಜದ ಎಲ್ಲಾ ಸಮಸ್ಯೆಗಳಿಗೆ ಪಾಶ್ಚತ್ಯಾ ಉದಾರವಾದಿ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯ ಚೌಕಟ್ಟಿನಲ್ಲಿಯೇ ಪರಿಹಾರ ಹುಡುಕುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದೆವೆ.? ಎಕೆ ನಾವು ಈ ಎರಡು ಸಾವಿರ ವರ್ಷಗಳ ಸುದಿರ್ಘ ಕಾಲ ಬದುಕುಳಿದು ಮುಂದುವರೆಯುತ್ತಿರುವ ಸಮಾಜದಲ್ಲಿ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯ ಚೌಕಟ್ಟಿಗಿಂತ ಭಿನ್ನವಾದ ಮತ್ತು ಮನುಕುಲಕ್ಕೆ ಮಾದರಿಯಾಗಬಲ್ಲ ಒಂದು ರಾಜಕೀಯ, ಸಮಾಜೀಕ ವ್ಯವಸ್ಥೆಯ ಅಸ್ಥಿತ್ವ, ಮತ್ತು ಅದರ ಶೋಧನೆಯನ್ನು ಕಡೆಗಣಿಸಿದ್ದೇವೆ? ಎಂಬ ಪ್ರಶ್ನೇಯನ್ನು ಕೇಳಿಕೊಳ್ಳಲೇ ಬೇಕಾಗುತ್ತದೆ.
ಮುಂದುವರಿದು ನಮ್ಮ ಸಮಾಜದ ಕುರಿತು ಕೆಲಸ ಮಾಡುತ್ತಿರುವ ಭಾರತೀಯ ಚಿಂತಕರು ಮತ್ತು ಬುದ್ಧಿಜೀವಿಗಳು ಈ 2000 ವರ್ಷಗಳಿಂದ ಏನು ಮಾಡುತ್ತಿದ್ದರು? ಎಂಬ ದ್ವಂದ್ವವು ನಮ್ಮನ್ನು ಕಾಡುತ್ತದೆ. ಇದಕ್ಕೆ ಉತ್ತರವಾಗಿ ಇಂದಿನ ಶಾಲಾ ಪುಸ್ತಕಗಳು ಭಾರತದ ಕುರಿತಾದ ಒಂದು ಕಥೆಯನ್ನು ಹಲವು ತಲೆಮಾರುಗಳಿಂದ ಹೇಳುತ್ತಾ ಬಂದಿದೆ. ಆ ಕಥೆಯ ಕೆಲವು ಪ್ರಖ್ಯಾತ ಸಾಲುಗಳು ಈ ಕೆಳಗಿನಂತಿವೆ.
ಭಾರತದಲ್ಲಿ ಜಾತಿ ವ್ಯವಸ್ಥೆ ಪ್ರಬಲವಾಗಿದೆ. ಇಲ್ಲಿ ಮಹಿಳೆಯರು ಶೋಷಣೆಗೊಳಗಾಗಿದ್ದಾರೆ, ಸತಿಸಹಗಮನ ಪದ್ಧತಿ ಅಸ್ತಿತ್ವದಲ್ಲಿದೆ, ಭ್ರಷ್ಟಾಚಾರವು ಮಿತಿ ಮೀರಿದೆ, ಭಾರತದ ಬಹುಪಾಲು ಜನರು ಜೋತಿಷ್ಯ ಕರ್ಮ, ಮತ್ತು ಪುನರ್ಜನ್ಮಗಳನ್ನು ನಂಬುತ್ತಾರೆ. . . ಇತ್ಯಾದಿ ಇತ್ಯಾದಿ. ಒಂದು ವೇಳೆ ಈ ಮೇಲಿನ ಸಾಲುಗಳು ಇಂದಿನ ಮತ್ತು ನೆನ್ನೆಯ ಭಾರತವನ್ನು ನಿರ್ಧರಿಸುತ್ತಿವೆ. ಎಂದಾದರೆ ನಮ್ಮ ಹಿಂದಿನ ತಲೆಮಾರಿನ ಭಾರತೀಯ ಚಿಂತಕರು ಯಾವ ಪ್ರಶ್ನೆಯೊಂದಿಗೆ ಸಂವಾದಿಸುತ್ತಿದ್ದರು ಎಂಬುದು ನಮಗೆ ಅರ್ಥವಾಗುತ್ತದೆ. ಯಾವ ಕಾಲದಲ್ಲಿ ಒಂದು ಸಂಸ್ಕೃತಿಯ ಬುದ್ಧಿಜೀವಿಗಳು? ಉದಾ; ಯುರೋಪಿಯನ್ ಬುದ್ಧಿಜೀವಿಗಳು ಜಗತ್ತಿಗೆ ಸವಾಲೆಸೆದು, ಜಗತ್ತನ್ನು ಬದಲಾಯಿಸುವ ಕಾರ್ಯದಲ್ಲಿ ತೊಡಗಿದ್ದರೋ, ಮತ್ತೊಂದು ಸಂಸ್ಕೃತಿಯ ಬಹುಸಂಖ್ಯೆಯ ಚಿಂತಕರು ಉದಾಹರಣೆಗೆ ಭಾರತದ ಬೌದ್ಧಿಕವಲಯ ಇಲ್ಲಿನ ಅನುಚಿತವಾದ ಆಚರಣೆಗಳನ್ನು ಉಳಿಸಿಕೊಳ್ಳುವಲ್ಲಿ ಮತ್ತು ಸಮರ್ಥಿಸಿಕೊಳ್ಳುವ ಕಾರ್ಯದಲ್ಲಿ ನಿರತವಾಗಿದ್ದಿತು ಎಂದು ನಾವು ನಂಬಬೇಕಾಗುತ್ತದೆ. ಕೆಲವರು ವಾದಿಸಬಹುದು ಭಾರತೀಯರಿಗೆ ಬುದ್ಧ ಮತ್ತು ಗಾಂಧೀಯಂತಹ ಚಿಂತಕರಿದ್ದಾರೆ. ಅವರು ಜಗತ್ತಿಗೆ ನೀಡಿರುವ ಕೊಡುಗೆ ಅಪಾರ ಎಂದು ಹೇಳುತ್ತಾರೆ. ಆದರೆ ನನ್ನ ಪ್ರಕಾರ ನಮಗಿರುವವರು ಅವರಿಬ್ಬರೇ, ಒಬ್ಬ ಬುದ್ಧ ಮತ್ತು ಒಬ್ಬ ಗಾಂಧೀ ಮಾತ್ರ
ಭಾರತದ ಬುದ್ಧಿಜೀವಿ ವಲಯಕ್ಕೆ ಕೆಳಬೇಕಾದ ಈ ಎಲ್ಲಾ ಪ್ರಮುಖವಾದ ಪ್ರಶ್ನೇಗಳಿದ್ದಾಗಿಯು ಅಸ್ಸಾದಿಯವರ ಲೇಖನ ಕೆಲವು ಪ್ರಮುಖವಾದ ಚರ್ಚೆಗೆ ಸೂಕ್ತವಾದ ವೇದಿಕೆಯನ್ನು ಒದಗಿಸುತ್ತದೆ. ಅದನ್ನು ನಾವು ಅವರ ಜಾತಿ ಆಧಾರಿತ ಜನಗಣತಿಯ ಸಮರ್ಥನೆಯಲ್ಲಿ ಗುರುತಿಸಬಹುದು ಅವರೇ ತಿಳಿಸುವಂತೆ ಜಾತಿ ಆದಾರಿತ ಜನಗಣತಿ ಮೂರು ಪ್ರಮುಖವಾದ ಕಾರಣಗಳಿಗಾಗಿ ಅಗತ್ಯವಾಗುತ್ತದೆ. ಅದು ಯಾವುವೆಂದರೆ.
- ಅವು ಐಡೆಂಟಿಗಳಿಲ್ಲದ ಜಾತಿಗಳಿಗೆ ಹೊಸ ಐಡೆಂಟಿಗಳನ್ನು ಕಲ್ಪಿಸುತ್ತವೆ.
- ಪ್ರಜಾಪ್ರಭುತ್ವದ ತಳಹದಿಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಅಲ್ಲದೆ ಧರ್ಮಗಳನ್ನು ದೇಸಿಕರಣಗೊಳಿಸಿ ಹೊಸ ರಾಜಕಾರಣವನ್ನು ನಿಮರ್ಿಸಲು ಅನುವು ಮಾಡಿಕೊಡುತ್ತವೆ.
- ಈ ಸಂದರ್ಭದಲ್ಲಿ ವಸಾಹತುಶಾಹಿ ನಿಮರ್ಿಸಿದ ಕ್ಯಾಸ್ಟ್ಗೆ ಪರ್ಯಾಯವಾಗಿ ಜಾತಿ ಸಂಕಥನವನ್ನು ರೂಪಿಸಬಹುದು.
ಇಲ್ಲಿ ಅಸ್ಸಾದಿಯವರು ಪ್ರತಿಪಾದಿಸಿರುವ ಮೂರನೇಯ ಕಾರಣ ನನಗೆ ಬಹಳ ಪ್ರಮುಖ ಮತ್ತು ಪ್ರಸ್ಥುತ ಎನ್ನಿಸುತ್ತದೆ. ಅಂದರೆ ಜಾತಿ ಆಧಾರಿತ ಜನಗಣತಿ ವಸಾಹತು ಸಂದರ್ಭದಲ್ಲಿ ನಿರ್ಮಿಸಿದ ಕ್ಯಾಸ್ಟ್ ಗೆ ಪರ್ಯಾಯಯವಾಗಿ ಜಾತಿ ಸಂಕಥನವನ್ನು ರೂಪಿಸಬಹುದು ಎಂಬು ಅಸ್ಸಾದಿಯವರ ಚಿಂತನೆ ಅಂತ್ಯಂತ ಮಹತ್ವದ್ದಗಿದೆ ಆದರೆ ಇಲ್ಲಿ ಒಂದು ಪ್ರಶ್ನೆಯನ್ನು ಎದುರಿಸಿಯೇ ನಾವು ಮುಂದುವರೆಯಬೇಕಾಗುತ್ತದೆ. ಅದು ಎನೆಂದರೆ ವಸಾಹತು ಸಂದರ್ಭದಲ್ಲಿ ಜಾತಿಗಳು ಸೃಷ್ಟಿಸಲ್ಪಟ್ಟವು ಎನ್ನುವುದರ ಅರ್ಥ ಈಗ ನಮ್ಮ ಸಮಾಜದ ಬೌದ್ದಿಕ ವಲಯ ಗುರುತಿಸುತ್ತಿರುವ ಲಿಂಗಾಯಿತ, ಒಕ್ಕಲಿಕ, ಕುರುಬ ಮುಂತಾದ ಜಾತಿಗಳನ್ನು ವಸಾಹತು ಸೃಷ್ಟಿಸಿತು ಎಂದಲ್ಲ, ಆ ರೀತಿಯ ಸೃಷ್ಟಿ ಈಗಲೂ ಆಗುತ್ತಿದೆ. ಬದಲಾಗಿ ಈ ಎಲ್ಲಾ ಜಾತಿಗಳು ಸೇರಿ ಒಂದು ವ್ಯವಸ್ಥೆಯಾಗಿ, ಸಮಾಜಿಕ ರಚನೆಯಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ. ಎಂಬ ವಿಶ್ಲೇಷಣೆಯನ್ನು ಪಾಶ್ಛ್ಯಾತ್ಯರು ನೀಡಿದರು ಎಂಬುದಾಗಿದೆ. ಹಾಗಾದರೆ ಈ ವಿವರಣೆಗಳಿಗಿಂತ ಭಿನ್ನವಾಗಿ ನಮ್ಮ ಸಮಾಜದ ಜಾತಿಗಳನ್ನು ಜನಗಣತಿಯಲ್ಲಿ ಗುರುತಿಬೇಕಾಗುತ್ತದೆ. ನಮ್ಮ ಗಣತಿಗಳು ಗುರುತಿಸುವ ಜಾತಿಗಳ ಸ್ವರೂಪ ಹೇಗಿರಬೇಕೆಂದರೆ ಅವು ಪಾಶ್ಚ್ಯಿಮಾತ್ಯರು ಇಗಾಗಲೇ ಜಾತಿಗಳ ಕುರಿತು ನೀಡಿರುವ ವಿಶ್ಲೇಷಣೆಗಳಿಗಿಂತ ಭಿನ್ನವಾಗಿರಬೇಕು ಅಂದರೆ ಜಾತಿಗಣತಿ ಸಮಾಜದಲ್ಲಿ ಬದುಕುತ್ತಿರುವ ಜನರ ಸ್ವ-ಅನುಭವವನ್ನು ಗ್ರಹಿಸುವಂತಿರಬೇಕು ಉದಾ: ಲಿಂಗಾಯಿತ ಎಂಬುದನ್ನು ಜಾತಿಯಾಗಿ ಗುರುತಿಸದೇ ಸಾದರು, ಬಣಜಿಗ, ಪಂಚಚಾರ್ಯ ಮುಂತಾದ ಹತ್ತು ಹಲವು ಸಮಾಜದ ವಾಸ್ತವ ಗುಂಪುಗಳನ್ನು ಜಾತಿ ಎಂದು ಗುರುತಿಸಬೇಕಾಗುತ್ತದೆ. ಅಂತೆಯೇ ಕುರುಬರನ್ನು ಒಂದು ಜಾತಿಯಾಗಿಸದೇ ಅವರಲ್ಲಿನ ಕಾಡು ಕುರುಬ, ಊರು ಕುರುಬ, ಹತ್ತಿ ಕಂಕಣ , ಉಣ್ಣೆ ಕಂಕಣ ಎಂಬ ಸಮಾಜಿಕ ಗುರುತಿಸುವಿಕೆಯುಳ್ಳ ಜಾತಿಗಳನ್ನು ಗುರುತಿಸಬೇಕಾಗುತ್ತದೆ. ಏಕೆಂದರೆ, ವಾಸ್ತವದಲ್ಲಿ ಜನರು ಬದುಕುತ್ತಿರುವುದು ಸಾದರು, ಬಣಜಿಗರು, ಕಾಡುಕುರುಬರು, ಊರುಕುರುಬರು ಎಂದೇ ಹೊರತು ಲಿಂಗಾಯಿತರು, ಕುರುಬರು ಎಂದಲ್ಲ. ತಮ್ಮ ಜಾತಿಗಳ ಮೂಲಕ ಇಂದು ಗುರುತಿಸಿಕೊಳ್ಳುತ್ತಿರುವ ಸಮಾಜಿಕ ಗುಂಪುಗಳನ್ನು ಹೀಗೆ ಜನರ ಅನುಭವಕ್ಕೆ ಪೂರಕವಾಗಿಯೆ ಗುರುತಿಸಬೇಕಾಗುತ್ತದೆ. ಹಾಗಾದಲ್ಲಿ ಮಾತ್ರ ನಾವು ನಿಜವಾದ ನಿರ್ವಸಾಹತು ಭಾರತ ಸಮಾಜದ ವೈಜ್ಙಾನಿಕ ನಿರೂಪಣೆಯನ್ನು ಸಾಧಿಸಬಹುದು. ಮತ್ತು ಭಾರತದಲ್ಲಿನ ಜಾತಿಗಳ ಕುರಿತಾದ ನಿಜವಾದ ವಿವರಣೆ ಆಗ ಮಾತ್ರ ಸಾಧ್ಯ. (ಲಿಂಗಾಯಿತ, ಒಕ್ಕಲಿಗ, ಕುರುಬ ಮುಂತಾದವುಗಳನ್ನು ಅವು ವಾಸ್ತವವಾಗಿಯೂ ಸಂಘಟಿತವಾದ ಜಾತಿಗಳು ಎಂದು ಗುರುತಿಸುವ ಪ್ರಕ್ರಿಯೆಯು ಜಾತಿಗಳ ಕುರಿತು ಪಾಶ್ಚ್ಯಿಮಾತ್ಯರಿಂದ ಕಟ್ಟಲ್ಪಟ್ಟು ನಂತರ ಭಾರತಿಯ ವಿದ್ವಾಂಸರಿಂದ ಯಾವ ಮಹತ್ವದ ಸೈಂದ್ಧಾಂತಿಕ ಪ್ರಶ್ನೇಗೂ ಒಳಗಾಗದೆ ಉಳಿದು ಬಂದಿರುವ ಇಪ್ಪತ್ತನೆ ಶತಮಾನದ ಆಧುನಿಕ ರಾಜಕೀಯದ ವಿಧ್ಯಮಾನ ಎನ್ನುವುದನ್ನು ಇಲ್ಲಿ ನಾವು ನೆನಪಿಡಬೇಕು)
ಆದರೆ ಇದಕ್ಕೆ ಪಾಶ್ಚ್ಯಾತ್ಯ ವಿಶ್ಲೇಷಿಸಿದ ಭಾರತ ಸಮಾಜ, ಇಲ್ಲಿನ ಜಾತಿಗಳನ್ನು ನಂಬಿಕೊಂಡು ಮತ್ತು ನಂಬಿಸಿ ರಾಜಕಾರಣ ಮಾಡುತ್ತಿರುವ ನಾಯಕರು ಮತ್ತು ಅವರಿಗೆ ಜಾತಿಗಳ ಕುರಿತಾದ ಬೌದ್ಧಿಕ ವಿವರಣೆಗಳನ್ನು ನೀಡುತ್ತಿರುವ ವಿದ್ವಾಂಸರು ಒಪ್ಫತ್ತಾರೆಯೇ ಎಂಬುದು ನಿಜವಾದ ಪ್ರಶ್ನೆ? ಎಕೆಂದರೆ ಭಾರತದ ಜಾತಿಗಳ ಕುರಿತಾದ ವಿವರಣೆ ಇಂದು ಸಮಾಜಿಕ ವಾಸ್ತವವನ್ನು ಪ್ರತಿನಿಧಿಸುತ್ತಿಲ್ಲ. ಬದಲಾಗಿ ಶಕ್ತಿ ರಾಜಕಾರಣದ ಸಂಪನ್ಮೂಲಗಳಾಗಿ ಬಳಸಲ್ಪಡುತ್ತಿವೆ. (ಉದಾ: ಜಾತಿಗಳ ನಾಯಕರು ಮಿಸಲಾತಿ ಸಂದರ್ಭದಲ್ಲಿ ತಮ್ಮನ್ನು ಹಿಂದುಳಿದ ವರ್ಗಗಳೆಂದು ಘೋಷಿಸುತ್ತಾರೆ. ಆದರೆ ಸಮಾಜಿಕ ಸಂದರ್ಭದಲ್ಲಿ ತಮ್ಮನ್ನು ಮುಂದುವರಿದ ಜಾತಿಗಳೆಂದು ಪ್ರತಿಪಾದಿಸುವುದನ್ನು ಕಾಣಬಹುದು.) ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಜಾತಿಗಳು ಸಮಾಜದಲ್ಲಿ ಹೇಗೆ ಸಂಘಟನೆಗೊಂಡವು ಮತ್ತು ಹೇಗೆ ಜನರಿಂದ ಗುರುತಿಸಲ್ಪಡುತ್ತವೆ, ಎನ್ನುವುದರ ಕುರಿತ ಅಧ್ಯಯನವು ಇಂದಿನ ಅಗತ್ಯವಾಗಿದೆ. ಈ ರೀತಿಯ ಅಧ್ಯಯನಕ್ಕೆ ನಾವು ಜಾತಿಯನ್ನು ಭಿನ್ನ ದೃಷ್ಟಿಕೋನದಿಂದಲೇ ನೋಡಬೇಕಾಗುತ್ತದೆ. ಮತ್ತು ನಿಜವಾದ ಅರ್ಥದಲ್ಲಿ ಜಾತಿಯ ಕುರಿತ ನಮ್ಮ ಜ್ಞಾನದ ನಿರ್ವಸಾಹತೀಕರಣಕ್ಕೆ ನಾವು ಮಾಡಲೇಬೇಕದ ಕಾರ್ಯವೆಂದರೆ ಭಾರತ ಸಮಾಜದ ಕುರಿತು ನಾವು ಪಠ್ಯ ಪುಸ್ತಕಗಳಿಂದ ಕಲಿಯುತ್ತಿರುವುದಕ್ಕೂ ವಾಸ್ತವದಲ್ಲಿ ಜನರು ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿರುವುದಕ್ಕೂ ನಡುವಿನ ವ್ಯತ್ಯಾಸವನ್ನು ಮತ್ತು ಹಾಗಾಗುವುದಕ್ಕೆ ಕಾರಣವನ್ನು ಗುರುತಿಸುವುದು. ಹಾಗೆ ಮಾಡಿದಾಗ ಮಾತ್ರ ಜಾತಿ ರಾಜಕಾರಣವೆನ್ನುವುದು ಈಗಿರುವಂತೆ ಪಟ್ಟಬದ್ರ ಹಿತಾಸಕ್ತಿಗಳ ರಾಜಕಾರಣವಾಗದೆ ನಿಜವಾದ ಅರ್ಥದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೊಳಗೊಂಡ ರಾಜಕಾರಣವಾಗುವ ಸಾಧ್ಯವಿದೆ. ಇದನ್ನು ಬಿಟ್ಟು ಜಾತಿ ಆಧಾರತ ಜನಗಣತಿಯು ಜಾತಿಯನ್ನು ಇಪ್ಪತ್ತನೆ ಶತಮಾನದ ಆಧುನಿಕ ರಾಜಕೀಯದ ವಿಧ್ಯಮಾನದಿಂದ ಸೃಷ್ಟಿಯಾದ ಲಿಂಗಾಯತ, ಒಕ್ಕಲಿಗ, ದಲಿತ, ಬ್ರಾಹ್ಮಣ, ಎಂಬುದಾಗಿ ಗುರುತಿಸಿದರೆ. ಆ ಜ್ಙಾನ ಪಟ್ಟಬದ್ರ ಹಿತಾಸಕ್ತಿಗಳ ರಾಜಕಾರಣಕ್ಕೆ ಪೂರಕವಾಗುತ್ತದೆಯೇ ಹೊರತು ನಿಜವಾದ ಭಾರತ ಸಮಾಜದ ಜಾತಿಗಳ ಸ್ಥಿತಿಯನ್ನು ತಿಳಿಯಲಿಕ್ಕಲ್ಲ ಎಂಬುದನ್ನು ನಮ್ಮ ಗಣತಿಗಳು ಜೋತೆಗೆ ಜಾತಿಗಣತಿಯನ್ನು ಬೆಂಬಲಿಸುತ್ತಿರುವ ಬುದ್ಧಿಜೀವಿಗಳು ಬಹಳ ಪ್ರಮುಖವಾಗಿ ಗುರುತಿಸಬೇಕಾಗುತ್ತದೆ. ಹೀಗಾದಾಗ ಮಾತ್ರವೇ ನಾವು ನಿಜವಾದ ಅರ್ಥದ ನಿರ್ವಸಾಹತಿಕರಣದ ಕಡೆ ಒಂದು ಹೆಜ್ಜೆ ಮುಂದಿಟ್ಟಂತಾಗುತ್ತದೆ.