’ಕಣ್ಮುಚ್ಚಿ ಕುಂದ್ರಬ್ಯಾಡ್ರಿ, ಕಣ್ತೆರ್ದ್, ನೋಡ್ರಿ ಮತ್ತ’ !

’ಕಣ್ಮುಚ್ಚಿ ಕುಂದ್ರಬ್ಯಾಡ್ರಿ, ಕಣ್ತೆರ್ದ್, ನೋಡ್ರಿ ಮತ್ತ’ !

ಬರಹ

ಮುಂಬೈನ *(ಲೋಕಮನ್ಯ ಟಿಲಕ್ ಟರ್ಮಿನಸ್) ಕುರ್ಲಾ ಟರ್ಮಿನಸ್ ನಿಂದ ೧,೫೦೫ ಕಿ. ಮೀ. ದೂರದ ಎರಡು ದಿನಗಳು ಸತತವಾಗಿ ಓಡುವ, ಉತ್ತರ ಪ್ರದೇಶದ ’ಫೈಝಾಬಾದ್ ಎಕ್ಸ್ ಪ್ರೆಸ್” (ಸಾಕೇತ್ ಎಕ್ಸ್ ಪ್ರೆಸ್)’ ರೈಲುಗಾಡಿ, ಬುಧವಾರ, ೨೧, ಜುಲೈ, ೨೦೧೦ ರಂದು,  ಬೆಳಿಗ್ಯೆ ೫-೨೦ ಕ್ಕೆ ಎಂದಿನಂತೆ ಹೊರಡುವ ತಯಾರಿಯಲ್ಲಿತ್ತು. ಆದರೆ, ಒಮ್ಮೆ ಪ್ರಯಾಣಿಕರು, ಒಳಗೆ ಬಂದು ತಮ್ಮ ಆಸನಗಳನ್ನು ಗ್ರಹಣಮಾಡಲು ಬಂದಾಗ ಅವರಿಗೆ ತಲೆಸುತ್ತಿಬಂತು. ವಾಕರಿಕೆ, ಕೆಟ್ಟವಾಸನೆ, ಮತ್ತು ಅಲ್ಲಿನ ಕುಲಗೆಟ್ಟ ವಾತಾವರಣ, ಅವರಿಗೆ ತಾವು ಎ.ಸಿ. ಡಬ್ಬಿಯಲ್ಲಿ ಬರುತ್ತಿದ್ದೆವೋ ಅಥವಾ ಕೊಚ್ಚೆಗುಂಡಿಯಲ್ಲಿ ನಿಂತಿದ್ದೇವೊ ಎನ್ನಿಸಿ ಎಲ್ಲರೂ ಹೊರಗೆ ಓಡಿಬಂದರು.  

ಮೂಗುಮುಚ್ಚಿಕೊಂಡು ಓಡಾಡಬೇಕು ಈ ಗಾಡಿಯಲ್ಲಿ ಎಂದು ಎಲ್ಲರೂ ಮೂಗಿಗೆ ಕರ್ಚಿಫ್ ಕಟ್ಟಿರುವವರೆ. ಅತಿಯಾಗಿ ಹಣತೆತ್ತು, ಕಷ್ಟಪಟ್ಟು ಹೊಡೆದಾಡಿ ಬಡಿದಾಡಿ ಸ್ಥಳ ಕಾದಿರಿಸಿ, ಟಿಕಿಟ್ ಪಡೆದು, ಕೂಡ್ರುವ ಎ.ಸಿ.ಗಾಡಿಯಲ್ಲಿ ತಿಗಣೆ (ತಗಣಿ), ಸೊಳ್ಳೆ, ಜಿರಲೆ ಮತ್ತು ಹಲ್ಲಿಗಳಿದ್ದು, ಅತಿ ಮಲಿನತೆಯ-ಭಂಡಾರವೆನ್ನುವಂತಿದ್ದ, ಡಬ್ಬಿಯಲ್ಲಿ ಕೂಡಲು ಮಲಗಲು ಸಾಧವೇ, ಡಾಬ್ಬಿಗೆ ತಗುಲಿರುವ ಶೌಚಾಲಯದ ಬಗ್ಗೆ ಹೇಳುವಂತೆಯೇ ಇಲ್ಲ

 

ಇದನ್ನು ಕಂಡು ಬೆಚ್ಚಿಬಿದ್ದ ಯಾತ್ರಿಕರು, ಇಂತಹ ’ಕಚಡ ಡಬ್ಬಿ ’ಯಲ್ಲಿ ಪ್ರಯಾಣಿಸಲು ವಿರೋಧ ವ್ಯಕ್ತಪಡಿಸಿ, ರೈಲ್ವೆ ಸ್ಟೇಷನ್ ಮಾಸ್ತರ್ ಬಳಿ ಹೋಗಿ ದೂರಿತ್ತರು. ಮೊದಲು ಒಪ್ಪದೆ ಕೊನೆಗೆ ಡಬ್ಬಿಗಳನ್ನು ತೊಳೆದು ಶುಭ್ರಗೊಳಿಸುವುದಾಗಿ ತಿಳಿಸಿದರು. ಅದಲ್ಲದೆ, ತಮ್ಮ ರೈಲಿನ ವೇಳಾಪಟ್ಟಿಯಲ್ಲಿರುವ ಬೇರೆ ರೈಲುಗಾಡಿಗಳನ್ನು ನಿಯಂತ್ರಿಸಲು ತೊಂದರೆಯಾಗುವುದೆಂದು ಸಬೂಬು ಹೇಳಿದರು.

 

ಆದರೆ ಗ್ರಾಹಕ ರೈಲುಯಾತ್ರಿಗಳು ಪಟ್ಟುಹಿಡಿದು ಸಾಮೂಹಿಕವಾಗಿ ಹೊಡೆದಾಟಕ್ಕೆ ಅಣಿಯಾಗಿದ್ದನ್ನು ಕಂಡು ಹೆದರಿ ಕೊನೆಗೆ ೨ ಬೋಗಿಗಳನ್ನು ಬದಲಾಯಿಸಿಕೊಡುವುದಾಗಿ ಆಶ್ವಾಸನೆಯಿತ್ತರು, ಎಲ್ಲವೂ ಒಂದು ಹದಕ್ಕೆ ಬರುವ ಹೊತ್ತಿಗೆ ೨ ತಾಸು ಸಮಯ ಹಾಳಾಯಿತು. ’ಒಗ್ಗಟ್ಟಿನಲ್ಲಿ ಬಲವಿದೆಯೆನ್ನುವ ಮಾತು ಪುನಃ ನಿಜವಾಯಿತು’. ಇಷ್ಟು ಮಾಡಲು ಹಿಡಿದ ಸಮಯ   ಸುಮಾರು ೨ ತಾಸುಗಳು. ಅದರಿಂದಾಗಿ ಗಾಡಿ ೨ ತಾಸು ತಡವಾಗಿ  ಹೊರಟಿತು.

 

ಹೋಗಲಿ ಡಬ್ಬಿಯ ಹೊರಗೆ ಬಂದೆವೋ  ಮಲ-ಮೂತ್ರದ ಗಬ್ಬು ವಾಸನೆಯನ್ನು ಹೊತ್ತುತರುವ ಕೆಟ್ಟ ಗಾಳಿ, ಪ್ಲಾಟ್ ಫಾರಂಗಳಲ್ಲು ತೊಳೆದು ಯಾವಕಾಲವಾಯಿತೋ ದೇವರೇ ಬಲ್ಲ.

 

ಅಧಿಕಾರಿಗಳಿಗೆ ಗೊತ್ತಿರುವುದೊಂದೇ ಕೇಳಿದರೆ, ಸರಿ ಮೊದಲು ದೂರುಕೊಡಿ, ನಂತರ, ಆಗಲಿ ನಾವು ಸಂಬಂಧಪಟ್ಟವರಿಗೆ ತಿಳಿಯಹೇಳುತ್ತೇವೆ, ಇತ್ಯಾದಿ ಬಿಟ್ಟರೆ ಕ್ರಮವಂತೂ ಯಾರೂ ತೆಗೆದುಕೊಳ್ಳುವುದಿಲ್ಲ. ಈ ಬಾರಿ ಪ್ರಯಾಣಿಕರೆಲ್ಲರೂ ಒಕ್ಕೊರಲಿನಿಂದ ಕಾದಿದ್ದರಿಂದ ಅಧಿಕಾರಿಗಳು ವಿಧಿಯಿಲ್ಲದೆ, ೨ ಬೋಗಿಗಳನ್ನು ಬದಲಾಯಿಸಿದರು. ಅವು ಚೆನ್ನಾಗಿವೆಯೋ ಇಲ್ಲವೋ ಪ್ರಯಾಣಮಾಡಿ ಬಂದವರನ್ನು ಕೇಳಿತಿಳಿಯಬೇಕು.

 

’ಕುರ್ಲಾದಂತಹ ಅಸಹ್ಯ, ಅಸಹನೀಯ, ಕಳಪೆಮಟ್ಟದ, ಯಾವ ಸೌಕರ್ಯವೂ ಇರದ, ಪ್ರಯಾಣಿಕರನ್ನು ಗೋಳಾಡಿಸಲೆಂದೇ ಮಾಡಿದ, ರೈಲ್ವೆ ನಿಲ್ದಾಣದ ಬಗ್ಗೆ ಒಂದು’ ರೈಲಾಯಣ ’ವನ್ನು ಬರೆಯಬಹುದು. ರೈಲಿಂದ ಇಳಿದರೆ, ರಿಕ್ಷಾ ಟ್ಯಾಕ್ಸಿಯವರ ಕಾಟ, ಬಿ.ಇ.ಎಸ್.ಟಿ ಬಸ್ ಗಳನ್ನು ಬೇಕಂತಲೇ ಯಾವ ಪ್ರಮುಖ ಜಾಗಕ್ಕೂ ಸಂಪರ್ಕ ಕಲ್ಪಿಸದ  ಬಳಸಿ ಸುತ್ತಿ ಹೋಗುವ ಬಸ್ ಗಳನ್ನು ಏರ್ಪಡಿಸಿದ್ದಾರೆ. ಅಧಿಕಾರಿಗಳ ಶೋಷಣಾ ತಂತ್ರಕ್ಕೆ ಏನಾದರೂ ಪ್ರಶಸ್ತಿಯನ್ನು ಧಾರಾಳವಾಗಿ ಕೊಡಬಹುದು. ಮುಂಬೈನ ಅಥವಾ ದೇಶದ ಎಲ್ಲ ರೈಲುನಿಲ್ದಾಣಗಳ (ಅ)ವ್ಯವಸ್ಥೆಗಳೂ ಹೀಗೇ ಇವೆ. ’ಅದರಲ್ಲಿ ಕುರ್ಲಾ ಸ್ಥಾನ ಅಪ್ರತಿಮ, ಅನನ್ಯ. ಹಾಗೂ ಎಲ್ಲಾ ಪತ್ರಿಕೆಗಳಲ್ಲೂ ದಾಖಲಿಸಲು (ಅ)ಯೋಗ್ಯವಾದದ್ದು”.

 

'ಮುಂಬೈ ಮಿರರ್  'ನಂತಹ ಯೋಗ್ಯ ಹಾಗೂ ಜವಾಬ್ದಾರಿಯುತ ಪತ್ರಿಕಾ ಮಾಧ್ಯಮಕ್ಕೆ ಸ್ವಲ್ಪ ಹೆದರುವವ ರ ಸಂಖ್ಯೆ ಹೆಚ್ಚಾಗಿದೆ.  ಆದರೆ ಕಾರ್ಯತತ್ಪರತೆ, ಮತ್ತು ಸೇವಾಮನೋಭಾವ  ತಮ್ಮ ಮನಸ್ಸಿನಾಳದಿಂದ ಬರದ ಹೊರತು, ಕೇವಲ ದೊಡ್ಡ ಕಟ್ಟಡಗಳನ್ನು ಕಟ್ಟಿ ಸಿಂಗಪುರವನ್ನು ನಿಮಾಣಮಾಡುವೆವೆಂದು ಹಣ ಕಬಳಿಸಲು ಹೊರಟ, ಆಡಳಿತವರ್ಗಕ್ಕೆ ಎಷ್ಟು ಛೀಮಾರಿ ಹಾಕಿದರೂ ಸಾಲದು.ನೋಡಿ ಅದೇ ಅಧಿಕಾರಿವರ್ಗ, ಕೇಳಿದಾಗ ಏನುಹೇಳುತ್ತರೆ. ’ಹೌದು ಪರಿಸ್ಥಿತಿ ಬಹಳ ಸುಧಾರಿಸುವುದಿದ”. ಯಾಕೆ ಮಾಡಬಾರದು ನಿಮ್ಮನ್ನು ವೇತನ ಕೊಟ್ಟು ಇಟ್ಟಿರುವುದೇತಕ್ಕೆ. ಒಬ್ಬ ಕಾರ್ಮಿಕನಿಗೆ ತಿಳಿಯಹೇಳಲು ನಿಮಗೆ ಶಕ್ತಿಯಿಲ್ಲ. ಯೂಪೀಗೆ ಓಡುವ ಗಾಡಿಗಳು ಇದುವರೆಗೆ ಹೀಗೆ ಇದ್ದವು. ಇಂದು ಗ್ರಾಹಕರು, ಎಚ್ಚೆತ್ತು ಪ್ರತಿಭಟಿಸಿದಮೇಲೆ ಸ್ವಲ್ಪ ನಿದ್ದೆಯಿಂದ ಎಚ್ಚೆತ್ತಿದ್ದಾರೆ ಈ ಪ್ರಭೃತಿಗಳು !

 

’ಗ್ರಾಹಕರಿಗೆ ಸಂದೇಶ, ಮತ್ತೊಮ್ಮೆ’ :


’ಗ್ರಾಹಕರೆ ಏಳಿ ಎದ್ದೇಳಿ’ ನಿಮ್ಮ ಗಾಢನಿದ್ದೆಯಿಂದ ; ’ಇಂತಹ ಅನ್ಯಾಯಗಳ ವಿರುದ್ಧ ಪ್ರತಿಭಟಿಸಿ’..

 

* ಲೋಕಮಾನ್ಯ ಟಿಲಕ್  ರ ಹೆಸರನ್ನಿಟ್ಟು ಅವರಿಗೆ ಅವಮಾನಮಾಡದಿರಿ.

 

-Courtesy : 'Mumbai Mirror,' P. No 1 and P. 7 (Both the pics)

(Thursday, July, 22, 2010)