ಬೆಂಗಳೂರು ಆಟೋ ರಿಕ್ಷಾಗಳು ...... ಮತ್ತು ಆಢಳಿತ ಯಂತ್ರದ ದೂರು ಗಂಟೆ
ನಿಮಗೆ ಆದಷ್ಟು ಬೇಗ ರೈಲು ನಿಲ್ದಾಣ ಸೇರುವ ತವಕ, ಗಡಿಬಿಡಿಯಲ್ಲಿ ಸಿದ್ಧತೆಗಳನ್ನು ಮಾಡಿ ಮನೆಯಿಂದ ಹೊರಬಂದು ರಿಕ್ಷಾ ಹುಡುಕುತ್ತೀರ, ನಿಲ್ದಾಣದಲ್ಲಿರುವ ಐದಾರು ಅಟೋರಿಕ್ಷಾಗಳನ್ನು ನೋಡಿ ನಿಟ್ಟುಸಿರು ಬಿಡುತ್ತೀರಾ. ಮುಂದಿನವನ ಬಳಿ ಬಂದು ಮೆಜೆಸ್ಟಿಕ್ ಬರುತ್ತೀರಾ? ಕೇಳಿದರೆ ಸಿದ್ಧ ಉತ್ತರ " ಇನ್ನೂರು ರೂಪಾಯಿಗಳು" ಏನೂ ನೂರು ರುಪಾಯಿಗೆ ಇನ್ನೂರಾ ಕೇಳುವುದು..? " ಮತ್ತೇನು ಈ ರಷ್ ನಲ್ಲಿ ನಿಮ್ಮನ್ನು ಕರೆದುಕೊಂಡು ಹೋಗಬೇಕಲ್ಲಾ ಸ್ವಾಮೀ" ಮರುತ್ತರ.
ನೀವು ಅವನನ್ನು ಬಿಟ್ಟು ಇನ್ನೊಬ್ಬನ್ನ ಕೇಳ್ತೀರಾ, ಆದರೆ ಯಾರನ್ನು ಕೇಳಿದರೂ, "ತುಂಬಾನೇ ರಷ್ ಇರೋದ್ರಿಂದ ಅಷ್ಟು ಕೇಳ್ತಾ ಇದ್ದೀವಿ , ನಾವೂ ನಮ್ಮ ಹೊಟ್ಟೆ ನೋಡ್ಕೋ ಬೇಕಲ್ಲಾ..? "ಚೌಕಾಶಿಗೆ ಇಳಿದು ೧೭೦ ಕ್ಕೆ ಇಳಿಸಿ, ಹೊರಡುತ್ತೀರಾ, ಅಂತೂ ರೈಲಿನ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಯ್ತಲ್ಲ ಅದೇ ಸಮಾಧಾನ ನಿಮಗೆ.
ನೀವು ರಸ್ತೆಯ ಪಕ್ಕದಲ್ಲಿ ನಿಂತು ನಿಮ್ಮ ಗಮ್ಯ ತಲುಪುವದಕ್ಕಾಗಿ ಸಾಗುತ್ತಿರುವ ಅಟೊ ರಿಕ್ಷಾ ನಿಲ್ಲಿಸುವುದರಲ್ಲಿದ್ದೀರಾ, ಆದರೆ ಯಾವುದೇ ಖಾಲೀ ಆಟೋ ಕೂಡಾ ನಿಮ್ಮನ್ನು ನಿಮ್ಮ ಗಮ್ಯ ತಲುಪಿಸಲು ತಯಾರಿಲ್ಲ, ನಿಲ್ಲಿಸಲೂ ತಯಾರಿಲ್ಲ, ನಿಮ್ಮ ಅಹವಾಲು ಕೇಳುವುದಂತೂ ದೂರವೇ ಉಳಿಯಿತು, ಕೆಲವರಂತು ನಿಮ್ಮ ಗಮ್ಯ ಕೇಳುತ್ತಲೇ ಸ್ವಲ್ಪ ಹೊತ್ತು ಯೋಚಿಸುತ್ತಾ ( ಅಂದರೆ ಆಗ ಅವರು ತಮ್ಮ ಲಾಭ ನಷ್ಟಗಳ ಲೆಕ್ಕಾಚಾರ ಹಾಕುತ್ತಾರಂತ ಕಾಣ್ಸುತ್ತೆ) ನಂತರ ತಾರಮ್ಮಯ್ಯ ಎಂದು ಹೋಗಿ ಬಿಡುತ್ತಾರೆ. ಇನ್ನು ಕೆಲವರು ಜಾಸ್ತಿ ಮೊತ್ತ ನಿಮ್ಮಿಂದ ಕೇಳಿ ನೀವೇ ಅವರನ್ನು ಬಿಟ್ಟು ಬಿಡಲು ಪ್ರಚೋದಿಸುವರು, ನಿಮ್ಮ ಆ ದಿನದ ಅದೃಷ್ಟ ತುಂಬಾ ಒಳ್ಳೆಯದಿದ್ದರೆ ಮಾತ್ರ ನೀವು ಹೇಳಿದ ಜಾಗಕ್ಕೆ ಮೀಟರಿನಲ್ಲಿ ನಮೂದಾದ ಮೊತ್ತಕ್ಕೇ ಒಪ್ಪಿ ನಿಮ್ಮನ್ನು ಗಮ್ಯ ತಲುಪಿಸುವವರೂ ಸಿಕ್ಕುತ್ತಾರೆ.
ಬೆಂಗಳೂರಿನಲ್ಲಿ ರಿಕ್ಷಾದವರೊಂದಿಗಿನ ಆಚಾರ ಸಂಹಿತೆಯಲ್ಲಿನ ನಮ್ಮ ವ್ಯವಹಾರದ ಗೋಜಲುಗಳು ತಾಳ್ಮೆ, ಗೊಂದಲ, ಶಾಂತಿ, ಸಮಾಧಾನವನ್ನೂ ತಂದುಕೊಟ್ಟಿವೆಯಂತಾದರೆ ಅದಕ್ಕೆ ನಾವ್ ತೆತ್ತ ಬೆಲೆಯೂ ಅಧಿಕ.
ಕೇಳಿದಷ್ಟು ಹಣ, ಅವರ ಚುಚ್ಚು ಮಾತುಗಳು, ಅಸಂವಿಧಾನ ನಡತೆಗಳು, ಒಂದೇ ಎರಡೇ.....?
ಇದಕ್ಕೆ ಪರಿಹಾರ ಇಲ್ಲವೇ
ಹಾಗಾದರೆ ಇವೆಲ್ಲವಕ್ಕೂ ನಮ್ಮ ಸರಕಾರೀ ಯಂತ್ರ ಕಡಿವಾಣ ಹಾಕಲಾರದೇ? ಹಾಕುವುದಾದರೆ ಹೇಗೆ?
ನಿಜವಾಗಿಯೂ ಇದೆ. ಆದರೆ ಸಾಮಾನ್ಯರಿಗೆ ಇದರ ಬಗ್ಗೆ ಖಂಡಿತವಾಗಿಯೂ ೯೯.೯೯% ಗೊತ್ತಿರಲಿಕ್ಕಿಲ್ಲ. ( ಈ ಸತತ ಹುಡುಕಾಟದಲ್ಲಿ ಇದು Koramangala RTO office (BDA complex ) ಸಿಕ್ಕಿತ್ತು.)
ಆ ವಾಹನದ ನಂಬರ್ ತೆಗೆದುಕೊಳ್ಳಿ ( KA xx XX XXXX ) ವಿವರಗಳನ್ನು transcom@kar.nic.in ಗೆ ಮಿಂಚಂಚೆ ಕಳುಹಿಸಿ. ನೀವು ಕಳುಹಿಸಿದ ವಾಹನ ನಂಬರ್ ಗೆ ಅನುಗುಣವಾಗಿ ಆಯಾ ಆಫೀಸುಗಳಿಗೆ ತಲುಪಿಸಲಾಗುತ್ತದೆ
ಅಥವಾ ಬೇಕಿದ್ದಲ್ಲಿ ನೀವೇ ದೂರವಾಣಿಯ ಮೂಲಕ ಈ ಕೆಳಗಿನ ಕಾರ್ಯಾಲಯಗಳಲ್ಲಿ ಆಯಾ ನಂಬರಿಗನುಗುಣವಾಗಿ ದೂರು ಸಹಾ ಕೊಡಬಹುದು.
· KA-01 ಕೋರಮಂಗಲ 080-25533525
· KA-02 ರಾಜಾಜಿನಗರ 080-23324104
· KA-03 ಇಂದಿರಾ ನಗರ 080-25254310
· KA-04 ಯಶವಂತಪುರ 080-23376039
· KA-05 ಜಯನಗರ 080-26630989
· KA-41 ಜ್ಞಾನಭಾರತಿ 080-28602833
· KA-50 ಯಲಹಂಕ 080-28561366
· KA-51 ಎಲೆಕ್ಟ್ರೋನಿಕ್ ಸಿಟಿ 080-25735522
· KA-52 ನೆಲಮಂಗಲ 08234-285598
· KA-53 ಕೆ ಆರ್ ಪುರಮ್ 080-25617951
ನಿಮ್ಮ ದೂರು ಸಿಕ್ಕಿದ ಕೂಡಲೇ ಆಯಾ ಕಾರ್ಯಾಲಯದಿಂದ ಅಯಾ ನಂಬರಿನ ವಾಹನದ ಮಾಲೀಕನಿಗೆ ನೋಟೀಸು ಜಾರಿಯಾಗುತ್ತದೆ, ಇದಕ್ಕೆಂದೇ ಪ್ರತಿ ಆರ್ ಟಿ ಆಪೀಸಿನಲ್ಲಿ ಹತ್ತು ಐ ಎಮ್ ವಿ (Inspector of Motor Vehicles) ಗಳಿವೆ. ಮುಂದಿನ ಏಳು ದಿನಗಳಲ್ಲಿ ಆ ವಾಹನದ ಮಾಲೀಕ ಕಾರ್ಯಾಲಯಕ್ಕೆ ಹಾಜರಾಗದೇ ಇದ್ದಲ್ಲಿ ಅಧಿ ನಿಯಮ ೨೦೦ ರಂತೆ ರೂ ೧೦೦ ದಂಡ ಹಾಕಲಾಗುತ್ತದೆ, ಅಥವಾ ವಾಹನವನ್ನು ಜಪ್ತು ಮಾಡಲಾಗುತ್ತದೆ.
ಯಾವ ಯಾವ ತಪ್ಪುಗಳಿಗೆ ನೀವು ದೂರು ದಾಖಲಿಸಬಹುದು..?
೧. ಯಾವುದೇ ಗಮ್ಯಕ್ಕೆ ಬರಲು ನಿರಾಕರಿಸಿದಲ್ಲಿ.
೨. ಹೆಚ್ಚಿನ ಹಣ ಕೇಳಿದಲ್ಲಿ
೩. ಅಸಂವಿಧಾನದ ಪದ ಬಳಕೆ
೪. ಮೋಸ ಮಾಡಲು ಪ್ರಯತ್ನಿಸಿದಲ್ಲಿ.. ಸುತ್ತು ಬಳಸಿ ಕೊಂಡು ಹೋದರೆ..ಇತ್ಯಾದಿ
೫. ಮಾಪನದಲ್ಲಿ ಮೋಸವಿದ್ದರೆ
ಒಂದು ಸಹಾಯವಾಣಿ ಸಹಾ ಇದೆ 080-22353785 ಸೋಮವಾರ ದಿಂದ ಶನಿವಾರ ದ ವರೆಗೆ ಬೆಳಿಗ್ಗೆ ೧೦.೦೦ ಘಂಟೆಯಿಂದ ಸಂಜೆ ೫.೦೦ ರವರೆಗೆ ಯಾರು ಬೇಕಾದರೂ ದೂರು ಕೊಡಬಹುದು.
ಕೋರಮಂಗಲ ಕಾರ್ಯಾಲಯದಲ್ಲಿ ತಿಂಗಳಿಗೆ ಬರೇ ೫ ದೂರು ಬರುತ್ತದೆಯಂತೆ. ಒಂದು ಲಕ್ಷಕ್ಕಿಂತ ಜಾಸ್ತಿಯೇ ರಿಕ್ಷಾಗಳು ಓಡಾಡುವ ಬೆಂಗಳೂರಿನಲ್ಲಿ ತಿಂಗಳಿಗೆ
ಐದು ದೂರು ಎಂದರೆ.......
ಅದು ನಿಜವಾಗಿಯೂ ೫ ದೂರು ಪ್ರತಿ ನಿಮಿಷಕ್ಕೆ ಬರಬೇಕಾಗಿತ್ತಲ್ಲವೇ?
ಇದಕ್ಕೇನು ಕಾರಣವಿರಬಹುದು..?
೧. ಸಮರ್ಪಕವಾದ ಕಾನೂನಿನ ಬಗೆಗಿನ ತಿಳುವಳಿಕೆಯ ಪರಿಮಿತಿ
೨. ಅಸಮರ್ಪಕ ಹೊಂದಾಣಿಕೆ, ಆಢಳಿತ ಯಂತ್ರದ ಕುಂದು ಕೊರತೆ
೩. ದೂರುಗಳನ್ನು ಪರಿವರ್ತಿಸಿ ಮಾಲೀಕರಿಗೆ ಆದೇಶ ನೀಡಲು ಇನ್ನೂ ಯಾಂತ್ರೀಕರಣವಾಗದೇ ಇರುವುದು.
೪. ಸಮರ್ಥ ಸರಕಾರೀ ಆಧಳಿತಾಧಿಕಾರಿಯ ಕೊರತೆ.
ನಮ್ಮ ತಾಳ್ಮೆಯನ್ನೇ ಆಗಾಗ್ಯೆ ಪರೀಕ್ಷಿಸಿಕೊಳ್ಳುತ್ತಾ ಇರುವ ಬದಲು ಈ ದೂರುವ ಕ್ರಮದಲ್ಲೇನಾದರೂ ಬದಲಾವಣೆ ನಿರೀಕ್ಷಿಸಬಹುದೇ? ಇನ್ನಾದರೂ ನಮ್ಮ ಅಹವಾಲುಗಳನ್ನು ಗಟ್ಟಿಯಾದ ದನಿಯಲ್ಲಿ ಹೇಳಲು ಪ್ರಜಾಸತ್ತೆಯಲ್ಲಿ ನಾವೇ ಒಂದು ಉನ್ನತ ಮಟ್ಟದ ತಾಣವನ್ನು ನಿರೀಕ್ಷಿಸೋಣವೇ.
ರಾಮಪ್ರಿಯನ್ ಅವರ ಒಂದು ಮಿಂಚಂಚೆ