ರೈತನ ಸಮಸ್ಯೆಗಳಿಗೆ ಪರಿಹಾರ ಏನು?

ರೈತನ ಸಮಸ್ಯೆಗಳಿಗೆ ಪರಿಹಾರ ಏನು?

ಬರಹ

ಇತ್ತೀಚೆಗೆ ಸಂಪದದಲ್ಲಿ ಕೃಷಿ ಬಗ್ಗೆ ಲೇಖನ ಓದಿದ ನೆನಪಿಲ್ಲ. 'ಕೃಷಿ ಸಂಪದ' ದಲ್ಲಿ ಬೆಳೆ ಬಂದಿಲ್ಲ ಅಂತ ಅನಿಸುತ್ತಿದೆ. ಅದಕ್ಕೇ ಕೃಷಿ ಬಗ್ಗೆ ಒಂದು ಲೇಖನ ಬರೀಬೇಕು ಅಂತ ಅನ್ನಿಸ್ತು. 


ಈ ಲೇಖನ ಹವ್ಯಕ ಭಾಷೆಯಲ್ಲಿ ಬರೆದ ಮೂಲ ಲೇಖನದ ಭಾಷಾಂತರ. ಬರವಣಿಗೆಯ ಶೈಲಿಯಲ್ಲಿ ಹವ್ಯಕ ಭಾಷೆಯ ಅಚ್ಚೊತ್ತಿರಬಹುದು. ಓದುಗರಿಗೆ ಕಿರಿಕಿರಿಯಾದರೆ ಕ್ಷಮೆಯಿರಲಿ. ಮೂಲ ಲೇಖನ ಇಲ್ಲಿ ಲಭ್ಯವಿದೆ - http://oppanna.com/lekhana/mahatva/ಕೃಷಿಲಿ-ಗೆಲ್ಲುಲೆ-ಮಾರ್ಗ-ಎಂ 


ಕೃಷಿ ಪರಿಸ್ಥಿತಿ ಎಂದಿಗಿಂತ ಇಂದು ಹದಗೆಟ್ಟಿದೆ. ಇದು ಎಲ್ಲರೂ ತಿಳಿದಿರುವ ಸತ್ಯ. ಇದಕ್ಕೆ ಕಾರಣಗಳನ್ನೂ ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಸಂಪದದಂತಹ ವೇದಿಕೆಗಳಲ್ಲಿ ಈಗಾಗಲೇ ಸಾಕಷ್ಟು ಚರ್ಚಿಸಲಾಗಿದೆ. ಆದರೂ ಸಾಮಾನ್ಯವಾಗಿ ಎಲ್ಲರೂ ಹೇಳೋ ಕಾರಣಗಳ ಹೊರತಾಗಿ ಯೋಚಿಸಿದಾಗ ಇನ್ನೂ ಆಘಾತಕಾರಿ ಅಂಶಗಳು ನನ್ನ ಅರಿವಿಗೆ ಬಂದವು. ಅವುಗಳನ್ನು ನಿಮ್ಮೊಡನೆ ಹಂಚಿಕೊಂಡು, ಜೊತೆಗೆ ನನಗೆ ಅನಿಸುವ ಪರಿಹಾರಗಳನ್ನೂ ವಿವರಿಸಿದ್ದೇನೆ. ಈ ಲೇಖನದಿಂದಾಗಿ ದೇಶದ ಗಂಭೀರ ಸಮಸ್ಯೆಗಳಲ್ಲಿ ಒಂದಾದ ಕೃಷಿ ಸಮಸ್ಯೆಯ ಬಗ್ಗೆ ಸಂಪದದಲ್ಲಿ ಸಣ್ಣ ಮಟ್ಟಿನ ಚರ್ಚೆಯಾಗುವಂತಾದರೆ ನನ್ನ ಪ್ರಯತ್ನ ಸಾರ್ಥಕ.


ಮೊದಲನೇಯದಾಗಿ ಈಗಿನ ರೈತನ ಸಮಸ್ಯೆಗಳಿಗೆ ಕಾರಣಗಳೇನು? ರೈತನ ಉತ್ಪನ್ನಗಳಿಗೆ ಮಾರುಕಟ್ಟೆಯಿಲ್ಲದಿರುವುದು, ಕಾರ್ಮಿಕರ ಕೊರತೆ, ಮುಂಗಾರಿನ ಕೊರತೆ ಬೀಜ ಗೊಬ್ಬರಗಳ ಕೊರತೆ ಇತ್ಯಾದಿಗಳು ಸಾಮಾನ್ಯವಾಗಿ ಕೇಳಿಬರುವ ಕಾರಣಗಳು. ಆದರೆ ನನ್ನ ಪ್ರಕಾರ ಇವೆಲ್ಲಾ ನಿಜವಾದ ಕಾರಣಗಳಲ್ಲ. ಇವೆಲ್ಲ ಲಕ್ಷಣಗಳು (Symptoms) ಅಷ್ಟೆ. ಮೂಲ ಕಾರಣ ಬೇರೆಯೇ ಇದೆ. ಅದೇ ಗ್ಯಾಟ್ ಒಪ್ಪಂದದ ಮೂಲಕ ಶುರುವಾದ ಮುಕ್ತ ಮಾರುಕಟ್ಟೆ ಪಧ್ಧತಿ ಮತ್ತು ಸರಕಾರ ಆರ್ಥಿಕ ನೀತಿಗಳು. ಪ್ರಸ್ತುತ ಜಾರಿಯಲ್ಲಿರುವ ಸರಕಾರಿ ಯೋಜನೆಗಳಲ್ಲಿ ಕೈಗಾರಿಕೆಗೆ, ಸೇವಾ ವ್ಯವಹಾರಕ್ಕೆ (ಸರ್ವೀಸಸ್) ಹಾಗೂ ವ್ಯಾಪಾರಕ್ಕೆ ಹೆಚ್ಚು ಪ್ರೋತ್ಸಾಹ ಇದೆ. ಸರಕಾರದ ಅಘೋಷಿತ ಪಾಲಿಸಿ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ ೨೦ ಜನರನ್ನು ಮಾತ್ರ ಕೃಷಿಯಲ್ಲಿ ಉಳಿಸಿ ಉಳಿದ ೮೦ ಶೇ ಜನರನ್ನು ಕೈಗಾರಿಕೆ ಅಥವಾ ಪಟ್ಟಣ ಆಧಾರಿತ ಕೆಲಸಲ್ಲಿ ತೊಡಗಿಸುವ ಮೂಲಕ ದೇಶದ ಅಭಿವೃಧ್ಧಿ (ಜಿ.ಡಿ.ಪಿ.) ಮಾಡಬೇಕು. ಸರಕಾರದ ಎಲ್ಲಾ ಯೋಜನೆಗಳೂ ಈ ಮೂಲ ನೀತಿಯ ಮೇಲೆಯೇ ನಿಂತಿವೆ. ಈ ನೀತಿ ಶುರುವಾದ್ದು ಗ್ಯಾಟ್ ಒಪ್ಪಂದದ ಮೂಲಕ, ೧೯೯೨ ರಲ್ಲಿ. ಆ ಸಮಯಲ್ಲಿ ಕೆಲವು ಕೃಷಿ ಮಾರುಕಟ್ಟೆ ಪರಿಣತರಿಗೆ ಈ ಒಪ್ಪಂದದಿಂದ ಬರಬಹುದಾದ ಸಮಸ್ಯೆಗಳ ಬಗ್ಗೆ ಅರಿವಿತ್ತು. ಆಗಲೇ ಕೆಲವು ಕಡೆ ಸಾಕಷ್ಟು ಚರ್ಚೆ, ಪ್ರತಿಭಟನೆಗಳು ಇತ್ಯಾದಿ ನಡೆದಿದ್ದವು. ಆದರೆ ಸರಕಾರಕ್ಕೆ ಇದ್ಯಾವುದೂ ಸಮಸ್ಯೆಯಾಗಿ ಕಾಣಲೇ ಇಲ್ಲ. ಅದರ ಪರಿಣಾಮವೇ ನಾವು ಈಗ ಪ್ರಸ್ತುತ ಕಾಣುತ್ತಿರುವ ಕೃಷಿ ಸಂಬಂಧಿತ ಸಮಸ್ಯೆಗಳು. ಇದರ ಜೊತೆಗೆ ಆಗಿನ ಕಾಲದಲ್ಲಿ ವರದಾನವಾಗಿದ್ದ ಭಾರತದ ಹಸಿರು ಕ್ರಾಂತಿಯ ಕರ್ಮಫಲವೂ ಇದೆ ಎನ್ನಿ. 


ಇನ್ನು ಕೃಷಿ ಸಮಸ್ಯೆಗಳಿಗೆ ಪರಿಹಾರ ಯಾಕೆ ಬೇಕು? ಈಗ ಹೇಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಇದ್ದು, ಯುವಕರು ಕೃಷಿ ಕೃಷಿ ಅಂತ ಹೇಳಿಕೊಂಡು ಕೂರುವುದಕ್ಕಿಂತ ಇಂತಹ ಅವಕಾಶಗಳ ಸದುಪಯೋಗ ಮಾಡಿಕೊಂಡು ಜೀವನ ಮಟ್ಟ ಉತ್ತಮ ಪಡಿಸಿಕೊಳ್ಳಬಹುದಲ್ಲವೇ ಎಂದು ಹೇಳುವವರೂ ಇದ್ದಾರೆ. ಅಂತಹವರಿಗೆ ಈ ಲೇಖನ ಬರೆದಿದ್ದಲ್ಲ. ಈ ಬರಹ ಕೃಷಿಯಲ್ಲಿ ನಂಬಿಕೆ, ಆಸಕ್ತಿ ಇದ್ದು, ಇಲ್ಲಿನ ಪ್ರಸ್ತುತ ಸಮಸ್ಯೆಗಳ ಕಾರಣದಿಂದ ದೂರ ಉಳಿದ, ಅಥವಾ ಕೃಷಿಯಲ್ಲೇ ಇದ್ದುಕೊಂಡು ಹೇಗೋ ದಿನ ದೂಡುತ್ತಾ ಇರುವವರಿಗೆ. ಆದರೂ ಈ ಮೊದಲಿನ ಕೆಟಗರಿ ಜನರ ವಾದದ ಬಗ್ಗೆ ಒಂದು ಮಾತು ಹೇಳ್ಬೇಕು ಅಂತ ಅನ್ನಿಸ್ತಾ ಇದೆ. ನಾನು ಮೇಲೆ ಹೇಳಿದ ರೀತಿಯಲ್ಲಿ ಜನ ಕೃಷಿ ಬಿಟ್ಟು ಪಟ್ಟಣಗಳಿಗೆ ವಲಸೆ ಹೋಗುವುದು ಸರಕಾರಗಳ ಯೋಜನೆಯ ಅನುಸಾರವೇ ಇದೆ ಎಂದಾದ ಮೇಲೆ, ನಾನು ಹೇಳುತ್ತಿರುವುದು ಈ ಸರಕಾರದ ಈ ಯೋಜನೆ ಸಫಲವಾಗದು ಎಂದು. ಮೊದಮೊದಲು ಯೋಜನೆ ಪ್ರಕಾರವೇ ಜನ ಹಳ್ಳಿಯಿಂದ ಪೇಟೆಗೆ ಹೋಗಬಹುದು. ಆದರೆ ಈ ವಲಸೆ ಸುಸ್ಥಿರ ಆಗುವ (Sustainable) ಸಾಧ್ಯತೆ ಕಡಿಮೆ ನನ್ನ ಪ್ರಕಾರ. ಹೇಳಿ ಕೇಳಿ ಇದು ಅಮೆರಿಕದ ಕ್ರಮ. ಅಲ್ಲಿ ನೂರು ಜನ ಪ್ರಜೆಗಳಿಗೆ ಒಬ್ಬ ಕೃಷಿಕ ಇರ್ತಾನೆ. ಆತ ಯಂತ್ರೋಪಕರಣ, ಸಬ್ಸಿಡಿ, ರಾಸಾಯನಿಕಗಳನ್ನು ಉಪಯೋಗಿಸಿಕೊಂಡು ಉಳಿದ ೯೯ ಜನಕ್ಕೆ ತಿನ್ನಲು ಕೊಡುತ್ತಾನೆ. ಆದರೆ ಈ ಮಾದರಿಯ ಕೃಷಿ ಅವರು ಶುರು ಮಾಡಿದ್ದು ೩೦-೪೦ ವರ್ಷದ ಹಿಂದೆ. ಆಗ ತೈಲದ ಬೆಲೆ ತುಂಬಾ ಕಡಿಮೆಯಿತ್ತು ಇತ್ತು ಮತ್ತು ಜನಸಂಖ್ಯೆಯೂ ತುಂಬಾ ಕಡಿಮೆಯಿತ್ತು! ಆದರೂ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಅವರಿಗೆ ಈ ಮಾದರಿ ಕೃಷಿ ಪಧ್ಧತಿಯನ್ನು ನಿಭಾಯಿಸಲು ಕಷ್ಟವಾಗ್ತಿದೆ. ಅದಕ್ಕೇ ಅಲ್ಲಿನ ಸರಕಾರಗಳು ಕೃಷಿ ಸಬ್ಸಿಡಿಯನ್ನು ಕಡಿಮೆ ಮಾಡುವ ಯೋಚನೆ ಮಾಡ್ತಾ ಇವೆ. ಹಾಗೆ ಮಾಡಿದರೆ ಅಮೆರಿಕದ ಆಹಾರ ಉತ್ಪಾದನೆ ಮೇಲೆ ದೊಡ್ಡ ಪೆಟ್ಟು ಬೀಳುವುದಂತೂ ಖಚಿತ. ಇಂತಹ ಸಂದರ್ಭದಲ್ಲಿ ಭಾರತ ಇದೇ ಕೃಷಿ ಪಧ್ಧತಿಯನ್ನು ಈಗ ಶುರು ಮಾಡಿರೆ ಹೇಗಿರಬಹುದು? ಇಲ್ಲಿ ಲಭ್ಯ ಇರುವ ಭೂಮಿ ಕಡಿಮೆ, ಜನಸಂಖ್ಯೆ ಜಾಸ್ತಿ. ಅವರಿಗಿರುವಷ್ಟು ತೈಲ ಮೂಲಗಳ ಲಭ್ಯತೆಯೂ ನಮ್ಮಲ್ಲಿ ಇಲ್ಲ. ಹಾಗಿದ್ದ ಮೇಲೆ ೮೦ ಜನರ ಹೊಟ್ಟೆ ತುಂಬಲು ೨೦ ಜನರಿಗೆ ಹೇಗೆ ಸಾಧ್ಯ! ಇರ್ಲಿ ಬಿಡಿ, ಈಗ ಶೇ ೮೦ ಜನರನ್ನು ಕೃಷಿಯಿಂದ ಹೊರಗಟ್ಟಿದರು ಅಂತ ಅಂದುಕೊಂಡರೂ ಅವರಿಗೆ ಪರ್ಯಾಯ ಕೆಲಸ ಕೊಡಬೇಡ್ವೇ? ಹೆಚ್ಚು ಕಮ್ಮಿ ೧೦೦ ಕೋಟಿ ಜನರಿಗೆ ಏನು ಕೆಲಸ ಕೊಡಬಹುದು ಸರಕಾರ? ಯೋಚಿಸಬೇಕಾದ ವಿಷಯವಲ್ಲವೇ ಇದು? ಹಾಗಾಗಿ ನನಗೆ ಅನಿಸುವುದೇನೆಂದರೆ ಪೇಟೆಯ ಕಡೆಗಿನ ವಲಸೆ ಒಂದು ದಿನ ಕುಸಿದು ಬೀಳಲಿದೆ. ಅದು economically and ecologically sustainable ಆಗಲು ಸಾಧ್ಯವಿಲ್ಲ. ಅಮೆರಿಕದಲ್ಲೇ ಸಾಧ್ಯವಿಲ್ಲ ಎಂದಾದ ಮೇಲೆ ಇಲ್ಲಿ ಹೇಗೆ ಆಗಲು ಸಾಧ್ಯ? ಹಾಗಿದ್ದಲ್ಲಿ ಎಲ್ಲಾ ೧೦೦ ಕೋಟಿ ಜನರು ಪೇಟೆ ಜಾಬಿನಲ್ಲಿ ಸೆಟ್ಲ್ ಆಗುವುದು ಕನಸೇ ಸರಿ. ಕೆಲವೊಬ್ಬರಿಗೆ ಸಾಧ್ಯವಾಗಬಹುದು ಆದರೂ ಉಳಿದವರ ಕಥೆ ಏನು? ಅವರಿಗೆ ಬದುಕುವ ದಾರಿ ಏನು? ಕೃಷಿ ವ್ಯವಸ್ಥೆಯನ್ನು ಈ ಪರಿ ಹಾಳು ಮಾಡಿಬಿಟ್ಟರೆ ಅವರ ಗತಿಯೇನು? ಅಂತಹವರನ್ನು ದೃಷ್ಟಿಯಲ್ಲಿಟ್ಟುಕೊಂಡಾದರೂ ಕೃಷಿ ಸಮಸ್ಯೆಗಳಿಗೆ ಒಂದು ಪರಿಹಾರ ಹುಡುಕಬೇಕಲ್ಲವೇ?


ನಾನು ಮೇಲೆ ಹೇಳಿದ ವಿಷಯಗಳ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕಾದರೆ ಕೆಳಗಿನ ಕೊಂಡಿ ನೋಡಿ :

http://www.youtube.com/watch?v=uk3Zy0ZYQsQ&feature=player_embedded#!

ಹಾಗೆಯೇ ಈ ಲೇಖನ :

http://rajpatel.org/2010/05/12/another-food-price-crisis-on-the-way/

http://www.deccanherald.com/content/45213/india-verge-disaster-farm-front.html


ಇರಲಿ. ಈಗ ಕೃಷಿ ವಿಷಯಕ್ಕೆ ಬರೋಣ. ಕೃಷಿಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ ಬಗೆ ಏನು? ನನಗೆ ಅನಿಸುವ ಪ್ರಕಾರ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡರೆ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಆದರೆ ನೈಸರ್ಗಿಕೆ ಕೃಷಿ ಎಂದರೆ ಇದರಲ್ಲಿ ಕೆಲವೊಂದು ವಿಷಯಗಳನ್ನು ಗಮನಿಸಬೇಕು. ನೈಸರ್ಗಿಕ ಕೃಷಿ ಅದು ಇದು ಅಂತೆಲ್ಲ ಇತ್ತೀಚೆಗೆ ಬೇರೆ ಬೇರೆ ಹೆಸರುಗಳಲ್ಲಿ ಕೇಳಿಬರುತ್ತಿದ್ದು ಯಾವುದು ಸರಿ ಯಾವುದು ತಪ್ಪು ಎಂಬ ಗೊಂದಲ ಎಲ್ಲರಲ್ಲೂ ಇರುವುದು ಸಹಜ. ಸಾವಯವ ಕೃಷಿ, ಜೈವಿಕ ಕೃಷಿ, Zero Budget Farming, Fukuoka Method ಇತ್ಯಾದಿ ಕೆಲವು ಸಾಮಾನ್ಯವಾಗಿ ಕೇಳಿಬರುವ ಹೆಸರುಗಳು. ಇದರಲ್ಲಿ ಯಾವುದು ಸರಿ ಯಾವುದು ತಪ್ಪು ಅಂತ ಹೇಗೆ ಗೊತ್ತಾಗುತ್ತದೆ? ಇದರ ಬಗ್ಗೆ ಬರೆಯುವ ಒಂದು ಸಣ್ಣ ಪ್ರಯತ್ನ ಅಷ್ಟೆ ನನ್ನದು..


ಈಗ ಪ್ರತಿಯೊಂದು ಕೃಷಿ ವಿಧಾನಗಳ ಬಗ್ಗೆ, ಅವುಗಳ ನಡುವಿನ ವ್ಯತ್ಯಾಸಗಳ ಬಗ್ಗೆ ತಿಳಿಯುವ ಮೊದಲು ಇವೆಲ್ಲಾ ವಿಧಾನಗಳಲ್ಲಿ ಕಂಡುಬರುವ ಸಾಮಾನ್ಯ ವಿಷಯಗಳು/ಕ್ರಮಗಳ ಬಗ್ಗೆ ತಿಳಿಯೋಣ :


೧. ರಾಸಾಯನಿಕ ಗೊಬ್ಬರಗಳ ಬಳೆಕೆಯಿಂದ ಗಿಡಗಳು ’ಸೂಕ್ಷ್ಮ’ ಪ್ರಕೃತಿಯನ್ನು ಹೊಂದುತ್ತವೆ. ಅಂದ್ರೆ ಅವುಗಳಿಗೆ ರೋಗನಿರೋಧಕ ಶಕ್ತಿ ತೀರಾ ಕಡಿಮೆ ಆಗಿ ರೋಗಗಳಿಗೆ ತುತ್ತಾಗಲು ಕಾರಣವಾಗುತ್ತದೆ. ಅಲ್ಲದೆ ಅಂತಹ ಗಿಡಗಳಿಗೆ ಹೆಚ್ಚು ಹೆಚ್ಚು ಗೊಬ್ಬರದ ಅವಶ್ಯಕತೆ ಇರುತ್ತದೆ(ಒಂದು ರೀತಿಯಲ್ಲಿ ಪಿಜ್ಜಾ ಬರ್ಗರ್ ತಿಂದ ಮನುಷ್ಯರಂತೆ :) ).


೨. ಅನೈಸರ್ಗಿಕವಾಗಿ ಬೆಳೆಸಿದ ಗಿಡಗಳಿಗೆ ನೈಸರ್ಗಿಕವಾಗಿ ಬೆಳೆಸಿದ ಗಿಡಗಳಿಂದ ಹೆಚ್ಚು ಪೋಷಕಾಂಶ, ಕೀಟನಾಶಕಗಳ ಅವಶ್ಯಕತೆಯಿರುತ್ತದೆ ( ಪಟ್ಟಣದಲ್ಲಿರುವವರಿಗೆ ಹೆಚ್ಚು ಹೆಚ್ಚು ಔಷಧಿಗಳು ಬೇಕಾಗುತ್ತವಲ್ಲ, ಹಾಗೆ??? :) ).


೩. ಕೀಟಗಳು ಯಾವಾಗಲೂ ಗಿಡಗಳಿಗೆ ಹಾನಿ ಮಾಡುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ನೈಸರ್ಗಿಕವಾಗಿ ಬೆಳೆದ ಬೆಳೆಗೆ ಕೀಟ ಭಾದೆ ಬಂದರೂ ತೀರಾ ಹಾನಿಯೇನೂ ಆಗದು. ಒಂದು ವೇಳೆ ಆದರೂ ನೈಸರ್ಗಿಕವಾಗಿ ತಯಾರಿಸಿದ ಔಷಧಿಗಳಿಂದ ಅವುಗಳ ನಿಯಂತ್ರಣ ಮಾಡಬಹುದು.


೪. ಆಧುನಿಕ ಕೃಷಿ ಸೋಲಲು ಮುಖ್ಯ ಕಾರಣ ಮಣ್ಣು. ಮಣ್ಣಿನಲ್ಲಿ ಹ್ಯೂಮಸ್ ನ ಅಂಶ ಇದ್ದರೆ ಮಾತ್ರ ಕೃಷಿ sustainable ಆಗಲು ಸಾಧ್ಯ. ಈಗಿನ ರಾಸಾಯನಿಕ ಕೃಷಿಯಲ್ಲಿ ಮಣ್ಣಿನ ಹ್ಯೂಮಸ್ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಇದೇ ಕಾರಣಕ್ಕೆ ಮಣ್ಣಿನ ಧಾರಣಾ ಶಕ್ತಿಯೂ ಕಡಿಮೆಯಾಗುತ್ತಾ ಹೋಗುತ್ತದೆ.


೫. ಮಣ್ಣಿನಲ್ಲಿ ಹ್ಯೂಮಸ್ ಅಂಶ ಕಡಿಮೆಯಾದ್ದರ ಪರಿಣಾಮ ಅಂದರೆ ಹೆಚ್ಚು ಹೆಚ್ಚು ಗೊಬ್ಬರದ ಅವಶ್ಯಕತೆ, ಹೆಚ್ಚು ರೋಗಭಾದೆ ಮತ್ತು ಹೆಚ್ಚು ನೀರಿನ ಅವಶ್ಯಕತೆ (ಹ್ಯೂಮಸ್ ಗೆ ನೀರು ಹಿಡಿದಿಟ್ಟುಕೊಳ್ಳುವ ಗುಣ ಇದೆ).


೬. ಅಂದ ಮೇಲೆ ಈ ಎಲ್ಲ ಸಮಸ್ಯೆಗಳು ಪರಿಹಾರ ಆಗಬೇಕಿದ್ದರೆ ಮುಖ್ಯವಾಗಿ ಆಗಬೇಕಾದ ಕೆಲಸವೆಂದರೆ ಮಣ್ಣಿನ ಹ್ಯೂಮಸ್ ಹೆಚ್ಚಿಸುವ ಕೆಲಸ. ಹಾಗಾಗಬೇಕಿದ್ದರೆ ರಾಸಾಯನಿಕಗಳ ಬಳಕೆ ಕಡಿಮೆ ಇದ್ದಷ್ಟೂ ಒಳ್ಳೆಯದು. ಕನಿಷ್ಠ ಪಕ್ಷ ರಾಸಯನಿಕ ಕೀಟನಾಶಕಗಳನ್ನು ಪೂರ್ತಿಯಾಗಿ ನಿಲ್ಲಿಸಬೇಕು.


೭. ಪ್ರಕೃತಿಯಲ್ಲಿ ಒಂದು ಬಗೆಯ ನಿಯಮವಿದೆ. ಅದೆಂದರೆ ಮಣ್ಣು ಯಾವಾಗಲೂ ಬೆಳೆಕಿಗೆ ತೆರೆದಿರಬಾರದು. ಕಾಡಿನಲ್ಲಿ ತರಗೆಲೆಗಳಿರುವುದು ಇದೇ ಕಾರಣಕ್ಕೆ. ನಾವು ಶಾಲೆಗೆ ಹೋಗುತ್ತಿದ್ದಾಗ ಕಲಿತದ್ದು ನೆನಪಿದೆಯೇ – ಎಲೆ ಉದುರಿಸುವ ಮರಗಳು ಬೇಸಗೆಯಲ್ಲಿ ನೀರಿನ ಕೊರತೆ ಇರುವುದರಿಂದ ಅವು ಎಲೆ ಉದುರಿಸುತ್ತವೆ – ಅಂತ? ಆದರೆ ಅದು ತಪ್ಪು. ನಮ್ಮ ಶಿಕ್ಷಣ ವ್ಯವಸ್ಥೆ, ಅದರಲ್ಲೂ ಕೃಷಿ ಶಿಕ್ಷಣದ (ಅ)ವ್ಯವಸ್ಥೆಗೆ ಒಂದು ಉದಾಹರಣೆ ಇದು. ಮರಗಳು ಎಲೆ ಉದುರಿಸುವುದು ಯಾವಾಗ ಎಂದು ಗಮನಿಸಿದ್ದೀರಾ? ಬೇಸಿಗೆಯಲ್ಲಿ ಅಲ್ಲ, ಬದಲಾಗಿ ಯುಗಾದಿ ಸಮಯಲ್ಲಿ ಎಲೆ ಉದುರಿಸುತ್ತವೆ ಮರಗಳು. ಯಾಕೆ? ಯಾಕೇಂದ್ರೆ ಮುಂದೆ ಬರಲಿರುವ ಬೇಸಿಗೆಯಲ್ಲಿ ಮಣ್ಣಿನ ಮೇಲೆ ಸಿಕ್ಕಾಪಟ್ಟೆ ಬಿಸಿಲು ಬಿದ್ದು ಮಣ್ಣು ಹಾಳಾಗಬಾರದು, ನೀರೆಲ್ಲ ಆವಿಯಾಗಿ ಮಣ್ಣು ಒಣಗಿಹೋಗಬಾರದು, ಅದರಲ್ಲಿರುವ ಸೂಕ್ಷ್ಮ ಜೀವಿಗಳು ಸಾಯಬಾರದು ಎಂದು! ಇದನ್ನು ಅರ್ಥ ಮಾಡಿಕೊಂಡರೆ ಕೃಷಿಯಲ್ಲಿಯೂ ಮುಚ್ಚಿಗೆ (ಮಣ್ಣಿನ್ನು ಸಾವಯವ ವಸ್ತುಗಳಿಂದ ಮುಚ್ಚುವುದು) ಎನ್ನುವಂಥದ್ದು ಎಷ್ಟು ಮುಖ್ಯ ಎಂದು ಅರ್ಥವಾಗಬಹುದು.


೮. ನಿಸರ್ಗಲ್ಲಿ ಯಾವಾಗಲೂ Diversity ಗೇ ಆದ್ಯತೆ. ಎಲ್ಲಿಯೂ ಒಂದೇ ರೀತಿಯ ಬೆಳೆ ಬೆಳೆಯಲು ನಿಸರ್ಗದಲ್ಲಿ ಅವಕಾಶ ಇಲ್ಲ. ಅದಕ್ಕೇ ನಮ್ಮ ಪಶ್ಚಿಮ ಘಟ್ಟದ ಕಾಡಿಗಳಲ್ಲಿ ಎಷ್ಟು ಬಗೆಯ ಗಿಡಮರಗಳು! ಮಳೆ ಹೆಚ್ಚಾದಷ್ಟೂ, ಉಷ್ಣತೆ ಹೆಚ್ಚಾದಷ್ಟೂ ವೈವಿಧ್ಯತೆ ಹೆಚ್ಚು. ಈ ನಿಯಮವನ್ನು ಕೃಷಿಯಲ್ಲಿ ಸಾಧ್ಯವಾದಷ್ಟು ಅಳವಡಿಸಿಕೊಳ್ಳಬೇಕು – ಅಂದರೆ ಸಾಧ್ಯವಾದಷ್ಟು ಮಿಶ್ರಬೆಳೆಗಳನ್ನು ಬೆಳೆಯಬೇಕು.


೯. ಕೃಷಿಯ ವಿಷಯಕ್ಕೆ ಬಂದಾಗ ಹಸುಗಳನ್ನು ಮರೆಯಲೇ ಬಾರದು. ಹಸುವಿಲ್ಲದೆ ಕೃಷಿ ಸಾಧ್ಯವೇ ಇಲ್ಲ. ಇದನ್ನು ಎಲ್ಲರೂ ಮೊದಲು ಅರಿತುಕೊಳ್ಳಬೇಕು. ೬ ತಿಂಗಳಿನಲ್ಲಿ ತಯಾರಾಗುವ ಕಾಂಪೋಸ್ಟನ್ನು ಒಂದೇ ದಿನದಲ್ಲಿ ಕೊಡುವ (ಸೆಗಣಿ/ಗಂಜಲ ರೂಪದಲ್ಲಿ) ಉಪಾಯ ಬೇರೆ ಎಲ್ಲಿದೆ ಹೇಳಿ? :)


೧೦. ಗಿಡಗಳಿಗೆ ಬೇಕಾದ್ದು ಮಣ್ಣಿನ ಆರ್ದ್ರತೆ. ನೀರಲ್ಲ. 


೧೧. ಹೆಚ್ಚು ಹೆಚ್ಚು ಬೆಳೆ ಬೆಳೆಯುವುದು ಕೃಷಿಯ ಉದ್ದೇಶ ಅಲ್ಲ. ಬದಲಾಗಿ ದೀರ್ಘ ಸಮಯ ನಿರೀಕ್ಷಿತ ಫಸಲು ಕಡಿಮೆ ಖರ್ಚಿನಲ್ಲಿ ಬೆಳೆಯುವುದೇ ನೈಸರ್ಗಿಕ ಕೃಷಿಯ ಉದ್ದೇಶ. ಇದನ್ನು ಒಪ್ಪದವರು ನೈಸರ್ಗಿಕ ಕೃಷಿಗೆ ಕೈ ಹಾಕುವುದರಲ್ಲಿ ಅರ್ಥವೇ ಇಲ್ಲ.


೧೨. ನಿಸರ್ಗದಲ್ಲಿ ಕಳೆ ಎಂಬುದಕ್ಕೆ ಅರ್ಥ ಇಲ್ಲ. ಪ್ರತಿಯೊಂದು ಗಿಡವೂ ಉಪಯೋಗಕ್ಕೆ ಬರುವಂಥದ್ದೇ. ಯಾವುದಕ್ಕೆ ಇಲ್ಲದಿದರೂ ಮಣ್ಣು ಸಂರಕ್ಷಣೆಗಾದರೂ ಉಪಯೋಗಕ್ಕೆ ಬರಬಹುದು. ಅದಕ್ಕೇ ಕಳೆ ತೆಗೆಯುವ ವ್ಯರ್ಥ ಕೆಲಸವನ್ನು ಮೊದಲು ಬಿಡಬೇಕು. ತೀರಾ ಅಗತ್ಯವಿದ್ದರೆ ಕಳೆಯನ್ನು ’ನಿವಾರಿಸುವ’ ಬದಲು ಕಿತ್ತು ದನಗಳಿಗೆ ತಿನ್ನಿಸಬಹುದು ಅಥವಾ ಕಾಂಪೋಸ್ಟು ತಯಾರಿಸಲು ಉಪಯೋಗಿಸಬಹುದು.


೧೩. ಕೃಷಿ ಜಮೀನಿನಲ್ಲಿ ಎಲ್ಲಿಯೂ ಮಣ್ಣು ಸವಕಳಿ ಆಗಬಾರದು. ಹಾಗೆಯೇ ಕಸ ಕಡ್ಡಿ ಇತ್ಯಾದಿಗಳನ್ನು ಸದುಪಯೋಗ ಮಾಡಿಕೊಳ್ಳಬೇಕು (ಕಾಂಪೋಸ್ಟ್). ಕಸದಿಂದ ರಸ ಎನ್ನುವ ಮಾತನ್ನು ಅಕ್ಷರಶ: ಪಾಲಿಸುವುದು.


ಈ ಮೂಲಭೂತ ಕ್ರಮಗಳನ್ನು, ವಿಷಯಗಳನ್ನು ತಿಳಿದುಕೊಂಡ ಬಳಿಕ ಇವನ್ನಾಧಾರಿಸಿದ ಬೇರೆ ಬೇರೆ ವಿಧಾನಗಳ ಬಗ್ಗೆ ತಿಳಿಯೋಣ. ಅವುಗಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಬಹುದು  - ಸಾವಯವ ಕೃಷಿ, ಜೈವಿಕ/ನೈಸರ್ಗಿಕ ಕೃಷಿ ಮತ್ತು ಆಧ್ಯಾತ್ಮಿಕ ಕೃಷಿ. ಒಂದೊಂದಾಗಿ ನೋಡೋಣ :

೧. ಸಾವಯವ ಕೃಷಿ :

ಸಾಮಾನ್ಯವಾಗಿ ಭಾರತದಲ್ಲಿ ಸಾವಯವ ಕೃಷಿ ಅಂದ್ರೆ ಅದರಲ್ಲಿ ಮೇಲೆ ಹೇಳಿದ ಎಲ್ಲಾ ವಿಧಾನಗಳೂ ಬರುತ್ತವೆ. ಆದರೆ ಬೇರೆ ದೇಶಗಳಲ್ಲಿ ಅಥವಾ ’ಸಾವಯವ ಕೃಷಿ’ ಎನ್ನುವ ಪದದ ಶಬ್ದಾರ್ಥ ಹುಡುಕಿದರೆ ನೈಸರ್ಗಿಕ ಕೃಷಿಗೂ ಸಾವಯವ ಕೃಷಿಗೂ ಇರುವ ವ್ಯತ್ಯಾಸ ತಿಳಿಯುತ್ತದೆ. ಸಾವಯವ ಕೃಷಿ ಅಂದರೆ ಅದೊಂದು ಕೇವಲ ಕೃಷಿ ಪಧ್ಧತಿ ಮಾತ್ರ. ರಾಸಾಯನಿಕಗಳ ಬದಲು ಸಾವಯವ ವಸ್ತುಗಳನ್ನು ಉಪಯೋಗಿಸುವಂಥದ್ದು, ಅಷ್ಟೇ. ಅದು ಬಿಟ್ಟರೆ ಸಾವಯವ ಕೃಷಿಯಲ್ಲಿ ಕೃಷಿಕನ ಜೀವನ ಪಧ್ಧತಿ ಮೇಲೆ ಯಾವುದೇ ಪರಿಣಾಮ ಇಲ್ಲ. ಇದರಲ್ಲಿಯೂ ರಾಸಾಯನಿಕ ಪಧ್ಧತಿಯಲ್ಲಿ ಇರುವ ಹಾಗೆ ಹೆಚ್ಚು ಹೆಚ್ಚು ಬೆಳೆ ಬೆಳೆದು ’ದುಡ್ಡು’ ಮಾಡುವುದೇ ಉದ್ದೇಶ. ಹಾಗೆಯೇ ಇನ್ನೊಂದು ಮುಖ್ಯ ವ್ಯತ್ಯಾಸ ಎಂದರೆ ಈ ಸಾವಯವ ಕೃಷಿಯಲ್ಲಿ ಕೃಷಿಯ ಒಳಸುರಿಗಳೆಲ್ಲ ವಾಣಿಜ್ಯಿಕ. ಅಂದರೆ ಕೃಷಿ ಒಳಸುರಿಗಳ in-situ ಉತ್ಪಾದನೆಗಿಂತ ಅದನ್ನೂ ಬೇರೆ ಹೊರಗಿನಿಂದ ತಂದು ಅಥವಾ ಸಾವಯವ ಗೊಬ್ಬರ ಮಾರಾಟವನ್ನೇ ಉದ್ಯಮವಾಗಿ ಮಾಡಿಕೊಳ್ಳುವ ಒಂದು ವ್ಯವಸ್ಥೆ. ಅದಕ್ಕೇ ಇದರಲ್ಲಿ ಖರ್ಚು ಉಳಿತಾಯ ಆಗದು, ಬದಲಾಗಿ ರಾಸಾಯನಿಕದ್ದಕ್ಕಿಂತ ಹೆಚ್ಚೇ ಆಗುತ್ತದೆ. ಸಾವಯವ ಗೊಬ್ಬರಗಳನ್ನು ಹೊರಗಿನಿಂದ ಕೊಂಡರೆ ಅವೂ ತುಟ್ಟಿಯಲ್ಲವೇ ಅದಕ್ಕೇ. ಇನ್ನೂ ಒಂದು ವ್ಯತ್ಯಾಸವೆಂದರೆ ಈ ಬಗೆಯ ಕೃಷಿಯಲ್ಲಿ ಗೊಬ್ಬರಕ್ಕೇ ಹೆಚ್ಚು ಮಹತ್ವ ಹೊರತು ecological sustainability, ಮಣ್ಣು ಸಂರಕ್ಷಣೆಗೆ ಅಲ್ಲ.

೨. ನೈಸರ್ಗಿಕ ಕೃಷಿ  :

ನೈಸರ್ಗಿಕ ಕೃಷಿ ಎನ್ನುವುದು ಸಾವಯವ ಕೃಷಿಯ ಮುಂದಿನ ಹೆಜ್ಜೆ. ಇದರಲ್ಲಿ ಸಾವಯವ ಕೃಷಿಯ ಎಲ್ಲಾ ಕೃಷಿ ಕ್ರಮಗಳೂ ಇವೆ, ಆದರೆ ಇಲ್ಲಿ ನಮ್ಮ ಯೋಚನಾ ವಿಧಾನ, ಜೀವನ ಪಧ್ಧತಿಯೂ ಬದಲಾಗುತ್ತದೆ. ಇದೊಂದು ಕೃಷಿ ಪಧ್ಧತಿ ಹೇಳುದಕ್ಕಿಂತಲೂ ಜೀವನ ಪಧ್ಧತಿ ಎನ್ನಬಹುದು. ಇಲ್ಲಿ ಪ್ರಕೃತಿಯನ್ನು ಇನ್ನೂ ಹೆಚ್ಚು ಹತ್ತಿರದಿಂದ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಕೃಷಿಯ/ಜೀವನದ ಬಗೆಗಿನ ಒಂದು ರೀತಿಯ Holistic Approach ಇದು. ಇಲ್ಲಿ ಹೆಚ್ಚು ಬೆಳೆ ತೆಗೆಯುವುದೇ ಉದ್ದೇಶ ಅಲ್ಲ. ಬದಲಾಗಿ ಸುಸ್ಥಿರ ಕೃಷಿ ವ್ಯವಸ್ಥೆ (Both Economically and Ecologically) ರೂಪಿಸಿಕೊಂಡು ಅದರ ಮೂಲಕ ಸಂತೃಪ್ತ ಜೀವನ ನಡೆಸುವುದೇ ಉದ್ದೇಶ. ಇದರಲ್ಲಿ ಒಳಸುರಿಗಳನ್ನು ಆದಷ್ಟು ಕಡಿಮೆ ಮಾಡಿ in-situ ಕ್ರಮಗಳ ಮೂಲಕ ಕೃಷಿ ಮಾಡುವುದು. ಸುಭಾಷ್ ಪಾಳೇಕರ್ ರವರ Zero Budget Farming, ಫ್ಹುಕುವೋಕ ರ Fukuoka Method ಮತ್ತು ಗೋ-ಆಧಾರಿತ ಬೇಸಾಯ ಇವೆಲ್ಲ ನೈಸರ್ಗಿಕ ಕೃಷಿಯ ಅಡಿಯಲ್ಲಿ ಬರುವಂಥವು. ಇನ್ನು ಜೈವಿಕ ಕೃಷಿ ಅಂದರೆ ನೈಸರ್ಗಿಕೆ ಕೃಷಿಯೇ, ಆದರೆ ಇದರಲ್ಲಿ ಸೂಕ್ಷ್ಮಾಣು ಜೀವಿಗಳ ಉಪಯುಕ್ತತೆ ಬಗ್ಗೆ ಹೆಚ್ಚು ಗಮನ, ಒತ್ತು ಇರುತ್ತದೆ ಅಷ್ಟೆ.

೩. ಆಧ್ಯಾತ್ಮಿಕ ಕೃಷಿ :

ಇದು ನೈಸರ್ಗಿಕ ಕೃಷಿಯಿಂದ ಇನ್ನೂ ಒಂದು ಹೆಜ್ಜೆ ಮುಂದೆ. ಸಾವಯವ ಕೃಷಿಯನ್ನು, ನೈಸರ್ಗಿಕ ಕೃಷಿಯನ್ನು ವೈಜ್ನಾನಿಕವಾಗಿ ಸಾಧಿಸಬಹುದು. ಆದರೆ ಆಧ್ಯಾತ್ಮಿಕತೆ ಎನ್ನುವುದು ವಿಜ್ನಾನದ ಪರಿಧಿಗೆ ಬರುವುದಿಲ್ಲ ತಾನೆ! ಈ ಕೃಷಿ ಪಧ್ಧತಿಯಲ್ಲಿ ಪ್ರಾಕೃತಿಕ-ಆಧ್ಯಾತ್ಮಿಕ ನಿಯಮಗಳನ್ನು ಅರಿತುಕೊಂಡು ಅವುಗಳ ಮೂಲಕವೇ ಬೆಳೆಗಳನ್ನು ಬೆಳೆಯುವುದು. ದನದ ಕೊಂಬಿನೊಳಗೆ ಸೆಗಣಿ/ಬೆಣಚು ಕಲ್ಲು ತುಂಬಿ ಅದನ್ನು ೬ ತಿಂಗಳುಗಳ ಕಾಲ ಭೂಮಿಯಲ್ಲಿ ಹೂತಿಟ್ಟು ನಂತರ ತೆಗದು ನೀರಿಗೆ ಹಾಕಿ ಒಂದು ಗಂಟೆ ಚಕ್ರಾಕಾರಲ್ಲಿ ತಿರುಗಿಸಿ (ಪಾಯಸದ ರೀತಿ) ಮತ್ತೆ ಮಣ್ಣಿಗೆ, ಗಿಡಗಳಿಗೆ ಸ್ಪ್ರೇ ಮಾಡುವ ವಿಧಾನ ನೀವೆಲ್ಲ ಕೇಳಿರಬಹುದು. ಅದನ್ನು Biodiversity Farming ಅಂತಲೂ ಹೇಳುತ್ತಾರೆ. ಇನ್ನು ಅಗ್ನಿಹೋತ್ರ ಕೃಷಿ ಅಥವಾ ವೈದಿಕ ಕೃಷಿ ಅಂತಾನೂ ಇದೆ. ಇದರಲ್ಲಿ ದಿನ ನಿತ್ಯ ವೈದಿಕ ಕ್ರಿಯೆಗಳ (ಅಗ್ನಿಹೋತ್ರ ಇತ್ಯಾದಿ) ಮೂಲಕ ಬೆಳೆಗಳಿಗೆ ಪೂರಕ ವಾತಾವರಣ ಸೃಷ್ಟಿಸುವುದು. ಆ ಮೂಲಕ ಆರೋಗ್ಯಕರ ಬೆಳೆಗಳನ್ನು ಬೆಳೆಯುವುದು. ಇವೆಲ್ಲ ಆಧ್ಯಾತ್ಮಿಕ ಕೃಷಿಯ ಪರಿಧಿಯಲ್ಲಿ ಬರುವಂಥವು.


ಈ ಮೂರು ವಿಧಾನಗಳಲ್ಲಿ ಪ್ರಸ್ತುತ ಕೃಷಿ ಸಮಸ್ಯೆಗಳಿಗೆ ಪರಿಹಾರವಾಗಬಲ್ಲವು ಯಾವುವು? ನನ್ನ ಪ್ರಕಾರ ನೈಸರ್ಗಿಕ  ಕೃಷಿ ಮತ್ತು ಆಧ್ಯಾತ್ಮಿಕ ಕೃಷಿ. ಅದರಲ್ಲೂ ನೈಸರ್ಗಿಕ ಕೃಷಿ ಎಲ್ಲರಿಗೂ ಸಾಧ್ಯವಾಗುವಂಥದ್ದು. ಸಾವಯವ ಕೃಷಿಯಿಂದ ಏನೂ ಉಪಯೋಗವಾಗದು ಯಾಕೆಂದರೆ ಮೊದಲನೇಯದಾಗಿ ಅದು  ದುಬಾರಿ, ಅಲ್ಲದೆ ಇದು ಕೃಷಿಯ ಸಮಸ್ಯೆಗಳಿಗೆ ಮೂಲ ಕಾರಣವಾದ ಮನುಷ್ಯನ ಅತಿಯಾಸೆ, ನಿಸರ್ಗದ ಮೇಲೆ ಹಕ್ಕು ಸಾಧಿಸುವ ಮನೋಸ್ಥಿತಿಯನ್ನು ತಡೆಯುವಲ್ಲಿ ಯಾವ ಪಾತ್ರವನ್ನೂ ವಹಿಸುವುದಿಲ್ಲ. ಆಧ್ಯಾತ್ಮಿಕ ಕೃಷಿ ಎಲ್ಲರಿಗೂ ಸಾಧ್ಯವಿಲ್ಲ. ಅಂದ ಮೇಲೆ ನೈಸರ್ಗಿಕ ಕೃಷಿಯೊಂದೇ ಉಳಿದಿರುವ ದಾರಿ. ಇತ್ತೀಚಿಗೆ ಪತ್ರಿಕೆಗಳಲ್ಲಿ, ಇತರ ಮಾಧ್ಯಮಗಳಲ್ಲಿ ಬರುತ್ತಿರುವ ಸಾವಯವ ಕೃಷಿಕರ ಯಶೋಗಾಥೆ, ಅವರ ಸಾಧನೆ ಇತ್ಯಾದಿಗಳನ್ನು ಗಮನಿಸಿರಬಹುದು. ಅವೆಲ್ಲವೂ ನೈಸರ್ಗಿಕ ಕೃಷಿಯ ಉದಾಹರಣೆಗಳೇ. ಹಾಗಿದ್ದಲ್ಲಿ ಎಲ್ಲರೂ ನೈಸರ್ಗಿಕ ಕೃಷಿಯನ್ನೇ ನೆಚ್ಚಿಕೊಂಡು ತಮ್ಮ ತಮ್ಮ ಸಮಸ್ಯೆಗಳನ್ನೇಕೆ ನಿವಾರಿಸಿಕೊಂಡಿಲ್ಲ? ಕನಿಷ್ಟ ಪಕ್ಷ ಸಣ್ಣ ಹಿಡುವಳಿದಾರರು, ತಮ್ಮ ತುತ್ತಿನ ಚೀಲಕ್ಕಾಗಿ ಭೂಮಿಯನ್ನೇ ಅವಲಂಬಿಸಿರುವವರು ಯಾಕೆ ಇನ್ನೂ ಇಂತಹ ಸರಳ ವಿಧಾನಗಳನ್ನು ಅಳವಡಿಸಿಕೊಂಡಿಲ್ಲ? ಈ ಬಗ್ಗೆ ಯೋಚಿಸಿದರೆ ಕೆಲವೊಂದು ಕಾರಣಗಳು ಕಂಡುಬರುತ್ತವೆ. ನನ್ನ ಪ್ರಕಾರ ಅವು ಇಂತಿವೆ :

 

೧. ಹೊಸದಾಗಿ ನೈಸರ್ಗಿಕ ಕೃಷಿ ಮಾಡುವವನಿಗೆ ಅಥವಾ ರಾಸಾಯನಿಕದಿಂದ ನೈಸರ್ಗಿಕಕ್ಕೆ ಬರುವವನಿಗೆ ೪-೫ ವರ್ಷ (ಸಾವಯವದಿಂದ ನೈಸರ್ಗಿಕಕ್ಕೆ ಬರುವವರಿಗೆ ೧-೨ ವರ್ಷ ಸಾಕು) Buffer Period ಬೇಕು. ಈ ಅವಧಿಯಲ್ಲಿ ಜಮೀನಿನಲ್ಲಿ ಯಾವುದೇ ಉತ್ಪತ್ತಿ ಇರದು ಅಥವಾ ತುಂಬಾ ಕಡಿಮೆ ಇರಬಹುದು. ಅಷ್ಟು ಸಮಯ ಆದಾಯ ಇಲ್ಲದೆ ಸಂಸಾರ ನಿಭಾಯಿಸುವುದು ಹೇಗೆ? ಇದು ಎಲ್ಲಕ್ಕಿಂತ ಅತಿ ಮುಖ್ಯವಾದ ಸಮಸ್ಯೆ. ಬಹಳಷ್ಟು ಜನ ಇದರ ಬಗ್ಗೆ ತಿಳಿಯದೆ ಯಾರೋ ಹೇಳಿದರೆಂದು ಗಡಿಬಿಡಿಯಲ್ಲಿ ತಯಾರಿಯಿಲ್ಲದೆ ನೈಸರ್ಗಿಕ ಕೃಷಿಗೆ ಧುಮುಕಿ ಕೈ ಸುಟ್ಟುಕೊಂಡು ವಾಪಸ್ಸಾದವರಿದ್ದಾರೆ!


೨. ತಾಳ್ಮೆ. ಕೆಲವು ಜನರು ಯಾವ ಪರಿ ರಾಸಾಯನಿಕ ಕೃಷಿಗೆ ಒಗ್ಗಿ ಹೋಗಿದ್ದಾರೆಂದರೆ ಅವರಿಗೆ ೪-೫ ವರ್ಷ ಕಾಯುವ ತಾಳ್ಮೆ ಇರದು. ಮೇಲಾಗಿ ೪-೫ ವರ್ಷ ಕಳೆದರೆ ಉತ್ತಮ ಫಲ ಬರುತ್ತದೆ ಎನ್ನುವ ನಂಬಿಕೆ ಇರುವುದಿಲ್ಲ. ಇದಕ್ಕೆ ಒಂದೇ ಪರಹಾರವೆಂದರೆ ಈಗಾಗಲೇ ನೈಸರ್ಗಿಕ ಕೃಷಿ ಮಾಡಿ ಸಫಲರಾಗಿರುವ ಕೃಷಿಕರ ಜಮೀನಿಗೆ ಹೋಗಿ ಮುಖತ: ನೋಡುವುದು. ಪತ್ರಿಕೆಗಳಲ್ಲಿ ಬರುವ ಲೇಖನಗಳು ಎಲ್ಲವೂ ನಿಜವಾಗಿಲ್ಲದೇ ಇರಬಹುದು, ಆದರೆ ಎಲ್ಲವೂ ಸುಳ್ಳಾಗುವುದೂ ಸಾಧ್ಯವಿಲ್ಲ. ಅಂತಹ ರೈತರ ಜಮೀನಿಗೆ ಹೋಗಿ ತಿಳಿಯುವುದು.


೩. ತಿಳುವಳಿಕೆ. ಇದು ಸಮಸ್ಯೆಯೇ ಅಲ್ಲ. ಇತ್ತೀಚೆಗೆ ಅಂತೂ ನೈಸರ್ಗಿಕ ಕೃಷಿ ಬಗ್ಗೆ ಬೇಕಾದಷ್ಟು ಪುಸ್ತಕಗಳೂ, ಲೇಖನಗಲೂ ಬಂದಿವೆ. ಸುಭಾಷ್ ಪಾಳೇಕರ್, ನಾರಾಯಣ ರೆಡ್ಡಿ ಮುಂತಾದವರೆಲ್ಲ ಬರೆದ ಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇವನ್ನೆಲ್ಲ ಓದಿ ತಿಳಿದುಕೊಳ್ಳುವುದು ಪ್ರಥಮ ಹಂತ. ಆದರೂ ನೈಸರ್ಗಿಕ ಕೃಷಿ ಪುಸ್ತಕ ಓದುವುದರಿಂದ ಪೂರ್ತಿಯಾಗಿ ತಿಳಿಯದು. ಸ್ವತ: ಮಾಡಿ ನೋಡಿದರೇನೇ ತಿಳಿಯುವುದು.


೪. ಅತಿಯಾಸೆ. ನೈಸರ್ಗಿಕ ಕೃಷಿಗೂ ಅತಿಯಾಸೆಗೂ ಹೊಂದಿಕೆಯಾಗದು. ಅಸಲು ಅತಿಯಾಸೆ ಅನ್ನುವುದೇ ನೈಸರ್ಗಿಕ ಅಲ್ಲ ಅಲ್ಲವೇ?. ಅದಕ್ಕೇ ನಮ್ಮ ಹಿರಿಯರು ಹೇಳಿದ್ದು - ಅತಿಯಾಸೆ ಗತಿಗೇಡು - ಅಂತ. ಹಾಗಾಗಿ ಕಡಿಮೆ ಸಮಯಲ್ಲಿ ಹೆಚ್ಚು ದುಡ್ಡು ಮಾಡಬೇಕೆಂದಿರುವವರಿಗೆ ನೈಸರ್ಗಿಕ ಕೃಷಿ ಹೇಳಿಸಿದ್ದಲ್ಲ. ಅಂಥವರಿಗೆ ಕೃಷಿ ವಿಶ್ವ ವಿದ್ಯಾಲಯಗಳು ಹೇಳುವ ರಾಸಾಯನಿಕ ಪಧ್ಧತಿಯೇ ಸೂಕ್ತ. ಆದರೆ ಈ ಪಧ್ಧತಿ ಸುಸ್ಥಿರ ಆಗಲು ಸಾಧ್ಯವಿಲ್ಲ ಎನ್ನುವ ವಿಷಯ ಅವರಿಗೆ ತಿಳಿಸಬೇಕು.


ಅಂದ ಮೇಲೆ ನನ್ನ ಪ್ರಕಾರ ಮೇಲೆ ಹೇಳಿದವುಗಳಲ್ಲಿ ಒಂದನೇ ಕಾರಣ ಮತ್ತು ಸ್ವಲ್ಪ ಮಟ್ಟಿಗೆ ನಾಲ್ಕನೇ ಕಾರಣಗಳೇ ನೈಸರ್ಗಿಕ ಕೃಷಿ ಹೆಚ್ಚು ಬಳೆಕೆಯಲ್ಲಿ ಬಾರದಿದ್ದಕ್ಕೆ ಕಾರಣ. ಹಾಗಿದ್ದರೆ ಈ Buffer Period ಸಮಸ್ಯೆಗೆ ಪರಿಹಾರ ಏನು? ಎಲ್ಲಕ್ಕಿಂತ ಹೆಚ್ಚಾಗಿ ಕೃಷಿ ಮಾಡುವ ಯುವಕರೇ ಹಳ್ಳಿಯಲ್ಲಿ ಇಲ್ಲ ಎಂದಾದ ಮೇಲೆ ಯಾವ ಕೃಷಿ ಪಧ್ಧತಿ ಇದ್ದೇನು ಉಪಯೋಗ? ಏನಂತೀರಿ? ಆಸಕ್ತಿಯಿರುವ ರೈತರಿಗೆ ಹಂತ ಹಂತವಾಗಿ ನೈಸರ್ಗಿಕ ಕೃಷಿಗೆ ಬದಲಾಯಿಸಲು ಹಣಕಾಸು ನೆರವು ಕೊಡುವುದು ಒಂದೇ ಇದಕ್ಕಿರುವ ದಾರಿ. ದುಡ್ಡಿನ ಆಸೆ ತೋರಿಸಿಯೇ ಅಲ್ಲವೇ ರೈತರನ್ನು ರಾಸಾಯನಿಕ ಕೃಷಿಗೆ ತಳ್ಳಿದ್ದು? ಹಾಗೆಯೇ ದುಡ್ಡುಕೊಟ್ಟು ರೈತರನ್ನು ಮರಳಿ ನಿಸರ್ಗಕ್ಕೆ ಕರೆತರುವ ಕೆಲಸವಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಹಳ್ಳಿಯಲ್ಲಿದ್ದು ಕೃಷಿ ಮಾಡುವುದು ಅವಮಾನ ಎನ್ನುವ ಮನೋಭಾವ ತೊಲಗಬೇಕು. ಅದಾಗದೇ ಬೇರೆ ಯಾವುದೇ ಪರಿಹಾರಗಳು ಫಲ ನೀಡವು. ಈ ನಿಟ್ಟಿನಲ್ಲಿ ಕರ್ನಾಟಕ ಸಾವಯವ ಮಿಶನ್ ಕೈಗೊಂಡ ರೈತ ಯಾತ್ರೆ ಮತ್ತು ಇತ್ತೀಚಿಗೆ ನಡೆದ ರೈತ ತೀರ್ಪು ಮುಂತಾದ ಪ್ರಯತ್ನಗಳು ಅಭಿನಂದನಾರ್ಹ.

 

ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯದಿರಿ..