ದೆಹಲಿಯಲ್ಲಿ ಯಕ್ಷಗಾನ ...

ದೆಹಲಿಯಲ್ಲಿ ಯಕ್ಷಗಾನ ...

 

ಮೊನ್ನೆ ಹತ್ತೊಂಭತ್ತರಂದು ದೆಹಲಿಯ ಕರ್ನಾಟಕ ಸಂಘದ ಸಭಾಂಗಣದಲ್ಲಿ 'ಹನುಮಾರ್ಜನ' ಯಕ್ಷಗಾನವಿತ್ತು. ಶಿವಮೊಗ್ಗದ ನಾಟ್ಯಶ್ರೀ ಕಲಾಸಂಘದ ಸದಸ್ಯರು ನಡೆಸಿಕೊಟ್ಟ ಈ ಯಕ್ಷಗಾನ ನನಗೆ ತುಂಬಾ ಇಷ್ಟವಾಯಿತು.

 

ಅದಕ್ಕೂ ಹಿಂದಿನ ದಿನ ಅದೇ ತಂಡ ಜಗಜ್ಯೋತಿ ಬಸವೇಶ್ವರ ಚರಿತ್ರೆ ಎಂಬ ಯಕ್ಷಗಾನವನ್ನು ಪ್ರದರ್ಶಿಸಿತ್ತು. ಕಾರಣಾಂತರಗಳಿಂದ ನನಗದನ್ನು ನೋಡುವುದು ಸಾಧ್ಯವಾಗಲಿಲ್ಲ. 

 

ಹನುಮಾರ್ಜುನ ಯಕ್ಷಗಾನದಲ್ಲಿ ಕಾಣಲು/ಕೇಳಲು ಸಿಕ್ಕ ಕೆಲವು ಹಾಸ್ಯ ಪ್ರಸಂಗಗಳು ಇಲ್ಲಿವೆ.

 

ಅರ್ಜುನನು ತಾನು ಕಟ್ಟುವ ಶರ ಸೇತುವೆಯನ್ನು ಮುರಿಯುವ ಕುರಿತು ಹನುಮಂತನನ್ನು ಪಂಥಕ್ಕೆ ಆಹ್ವಾನಿಸುತ್ತಾನಷ್ಟೇ? ಅದರಲ್ಲಿ ಸೋತ ಅರ್ಜುನ ಆತ್ಮಾಹುತಿಗೆ ತಯಾರಾಗುತ್ತಾನೆ. ಆಗ ಅಲ್ಲಿಗೆ ಬ್ರಾಹ್ಮಣನೊಬ್ಬ (ವಿದೂಷಕ) ಬರುತ್ತಾನೆ.  

 

ಬ್ರಾಹ್ಮಣ: ಕಣ್ಣು ಕಾಣುವುದಿಲ್ಲ. 

ಅರ್ಜುನ: ಹ್ಞೂ 

ಬ್ರಾಹ್ಮಣ: ಕಣ್ಣು ಕಾಣುವುದಿಲ್ಲ ಎಂಬುದಕ್ಕೆ ಎರಡು ಅರ್ಥಗಳು. ಒಂದು, ನನಗೆ ಕಣ್ಣು

ಕಾಣುವುದಿಲ್ಲ. ಎರಡು, ನಾನು ಮುದುಕನಾಗಿ, ನನ್ನ ಕಣ್ಣುಗಳು ಒಳಸರಿದಿರುವುದರಿಂದ ನನ್ನ

ಕಣ್ಣು ನಿನಗೂ ಕಾಣುವುದಿಲ್ಲ. ...

 

ನಂತರ, ಅರ್ಜುನನ ಜೊತೆ ಸಂಭಾಷಣೆ ಮುಂದುವರಿಸುತ್ತಾ:

 

ಬ್ರಾಹ್ಮಣ: ಓಹೋ ... ಹಾಗೋ ... ನೀನು ಬಾಣಗಳಿಂದ ಸೇತುವೆ ಕಟ್ಟಿದೆ ಎಂದಾಯ್ತು. ಪರವಾಗಿಲ್ಲ ... ಕೆಲವರು ಇರುತ್ತಾರೆ, ಬಿಲ್ಲಿನಲ್ಲೇ (ಬರೆಯುವ ಹಾವ-ಭಾವದೊಡನೆ) ಸೇತುವೆ ಕಟ್ಟಿ ಬಿಡುತ್ತಾರೆ.    

 

ಈ ನಡುವೆ, ಭಾಗವತರ ಹಾಡಲ್ಲಿ (ಭಾಗವತಿಕೆಯಲ್ಲಿ) 'ಬಲ್ಪಿಂದ' ಎಂಬ ಶಬ್ದ ಬರುತ್ತದೆ. ಅದಕ್ಕೆ ಬ್ರಾಹ್ಮಣನ ಹಾವ ಭಾವ 'ವಿದ್ಯುತ್ ಬಲ್ಬ್ ಅಲ್ಲ; ತೋಳ ಬಲ' ಎಂಬಂತಿತ್ತು. 

 

ಮುಂದೆ,

 

ಬ್ರಾಹ್ಮಣ: ಅರ್ಜುನಾ, ಇಲ್ಲಿ ನಾವು ಮೂರು ಹಾರುವ(ವ)ರು ಸೇರಿದ್ದೇವೆ. ನಾನು ಬ್ರಾಹ್ಮಣ ... ಆದ್ದರಿಂದ ಹಾರುವ. ಹನುಮಂತ ಕಪಿ. ಆದ್ದರಿಂದ, ಆತನೂ ಹಾರುವ(ವ). ನೀನು ಬೆಂಕಿಯ ಕುಂಡಕ್ಕೆ ಬೀಳಲು ಸಿದ್ಧನಾಗಿದ್ದೀಯೇ. ಆದ್ದರಿಂದ, ನೀನೂ ಹಾರುವ(ವ).       

 

ಇನ್ನೂ ಮುಂದೆ,

 

ಬ್ರಾಹ್ಮಣ:ಹನುಮಾ, ನಾನೊಮ್ಮೆ ಸೇತುವೆಯ ಮೇಲೆ ನಡೆದು ಹೋಗ್ತೇನೆ. ಆಮೇಲೆ ನೀನು ಹೇಗೆ ಸೇತುವೆ ಮುರಿಯುತ್ತೀಯಾ ಅಂತ ನೋಡುತ್ತೇನೆ. (ಗಮನಿಸಿ: ಇಲ್ಲಿ ಎರಡು ಅರ್ಥಗಳು  ಬರುವಂತಿದೆ: ಒಂದು, ಸುಮ್ಮನೆ 'ನೋಡುತ್ತೇನೆ' ಎಂಬರ್ಥ. ಇನ್ನೊಂದು ಹನುಮನಿಗೆ ಸವಾಲು!)

 

ಇನ್ನೂ ಹಲವು ಚಂದದ ಸಂಭಾಷಣೆಗಳಿದ್ದವು. ಒಟ್ಟಿನಲ್ಲಿ ಕೆಲಸದ ದಿನದಲ್ಲೂ, ಸಂಜೆ ಪುರುಸೊತ್ತು ಮಾಡಿಕೊಂಡು ಸಂಘಕ್ಕೆ ಹೋದದ್ದು ಸಾರ್ಥಕವಾಯ್ತು.

 

 

 

 

 

 

 

 

 

 

 

 

Rating
No votes yet

Comments