ಭಾರತೀಯ ಬಹುಸಂಸ್ಕೃತಿಗಳು ಮತ್ತು ಸೆಕ್ಯುಲರ್ ವಾದ

ಭಾರತೀಯ ಬಹುಸಂಸ್ಕೃತಿಗಳು ಮತ್ತು ಸೆಕ್ಯುಲರ್ ವಾದ

ಬರಹ


Multicultural India and Secularism

ರಾಜಾರಾಮ ಹೆಗಡೆ

ಭಾರತವು ಬಹುಸಂಸ್ಕೃತಿಗಳ ದೇಶವಾಗಿದೆ, ಹಿಂದುತ್ವವು ಅದನ್ನು ಏಕರೂಪಕ್ಕೆ ಬದಲಾಯಿಸುತ್ತಿದೆ ಹಾಗೂ ಇದರ ಹಿಂದೆ ವಸಾಹತುಶಾಹೀ ಚಿಂತನೆಗಳ ಪ್ರಭಾವವಿದೆ ಎಂಬುದು ಭಾರತೀಯ ಸೆಕ್ಯುಲರಿಸಂನ ವಕ್ತಾರರ ಒಂದು ಪ್ರಮುಖ ವಾದ. ಹಾಗೂ ಹಿಂದುತ್ವವನ್ನು ಖಂಡಿಸಲಿಕ್ಕೆ ಇದೊಂದು ಪರಿಣಾಮಕಾರಿಯಾದ ವಾದವಾಗಿದೆ ಎಂಬುದನ್ನು ಸೆಕ್ಯುಲರ ವಾದಿಗಳೆಲ್ಲ ಗುರುತಿಸಿದ್ದಾರೆ. ಆದರೆ ಅವರು ಈ ವಾದವನ್ನು ಒಂದು ಹಂತದ ವರೆಗೆ ಒಯ್ದು ನಿಲ್ಲಿಸುವುದರಿಂದ ಅವರ ವಾದದಲ್ಲಿ ಹುಟ್ಟಬಹುದಾದ ವಿರೋಧಾಭಾಸವವನ್ನು ಅವರು ಬಗೆಹರಿಸುವುದಿಲ್ಲ. ಏಕೆಂದರೆ ಸೆಕ್ಯುಲರ್ ವಾದವೂ ಕೂಡಾ ವಸಾಹತುಶಾಹೀ ಚಿಂತನೆಗಳ ಸೃಷ್ಟಿಯೇ ಆಗಿರುವುದರಿಂದ ವಸಾಹತುಕಾಲದಲ್ಲಿನ ಚಿಂತನೆಗಳ ಮಿತಿ ಅದರೊಳಗೂ ಪ್ರಸ್ತುತತೆ ಪಡೆಯುವುದಿಲ್ಲವೆ ಎಂಬ ಪ್ರಶ್ನೆ ಏಳುವುದು ಸಹಜ. ಈ ಲೇಖನದಲ್ಲಿ ಸೆಕ್ಯುಲರ್ವಾದದ ಮಿತಿಗಳು ಎಲ್ಲೆಲ್ಲಿವೆ, ಯಾವ ರೂಪದಲ್ಲಿವೆ ಎಂಬುದನ್ನು ಗುರುತಿಸುವ ಪ್ರಯತ್ನ ನಡೆಸಲಾಗಿದೆ. ಅಂದರೆ, ಭಾರತೀಯ ಸಾಂಸ್ಕೃತಿಕ ವೈವಿಧ್ಯತೆ ಹಾಗೂ ವೈಶಿಷ್ಟ್ಯತೆಯನ್ನು  ಆಧಾರವಾಗಿಟ್ಟುಕೊಂಡಾಗ ವಾದಗಳು ತಾರ್ಕಿಕವಾಗಿ  ಯಾವ ನಿಟ್ಟಿನಲ್ಲಿ ಸಾಗಲೇಬೇಕಾಗುತ್ತದೆ ಹಾಗೂ ಅದು ಸೆಕ್ಯುಲರ್ ವಾದಕ್ಕೂ ಹೇಗೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಈ ಲೇಖನದಲ್ಲಿ ಗುರುತಿಸಲು ಪ್ರಯತ್ನಿಸಿದ್ದೇನೆ.  ಆದರೆ ಸೆಕ್ಯುಲರಿಸಂ ಕುರಿತು ವಿಮರ್ಶಿಸುವಾಗ ಕೋಮುವಾದ ಅದರ ಒಳ್ಳೇ ಪರ್ಯಾಯ ಎಂಬ ಸೂಚನೆಯನ್ನು ನಾನು ಸರ್ವಥಾ ನೀಡುತ್ತಿಲ್ಲ. ಈ ಲೇಖನದ ಉದ್ದೇಶವೆಂದರೆ ಭಾರತದಲ್ಲಿ ಈಗ ಪ್ರಚಲಿತದಲ್ಲಿರುವ ಕೋಮುವಾದದ ಸಮಸ್ಯೆಯನ್ನು ಅರ್ಥೈಸುವುದು. ಕೋಮುವಾದದ ಸಮಸ್ಯೆಯನ್ನು ಕುರಿತು ಚರ್ಚಿಸುವಾಗ ಸೆಕ್ಯುಲರಿಸಂನ ಸಮಸ್ಯೆಗಳನ್ನು ಕೂಡಾ ಗುರುತಿಸುವ ಅಗತ್ಯವಿದೆ. ಅವೆರಡರಲ್ಲೂ ಇರಬಹುದಾದ ಮೂಲಭೂತ ಮಿತಿಗಳ ಕುರಿತೇ ಈ ಅವಲೋಕನ. ಈ ಅವಲೋಕನದಿಂದಾಗಿ ಈ ಗೋಜಲಿನಿಂದ ಹೊರಬರಬಹುದಾದ ಸಾಧ್ಯತೆಗಳು ಇನ್ನು ಮುಂದೆ ಹೊಳೆದರೂ ಹೊಳೆಯಬಹುದು ಎಂಬ ಆಶಯವೂ ಈ ಲೇಖನದಲ್ಲಿದೆ.

1

ಇಂದು ಸೆಕ್ಯುಲರ್ ವಾದದ ಕುರಿತು ಅನೇಕ ಅಭಿಪ್ರಾಯಗಳು ಕೇಳಿಬರುತ್ತಿವೆ. ಅವುಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಿಕೊಳ್ಳಬಹುದು. ಮೊದಲನೆಯ ಗುಂಪು ಭಾರತೀಯ ಸಂದರ್ಭದಲ್ಲಿ ಸೆಕ್ಯುಲರ್ ಪದದ ಅರ್ಥದ ಹಾಗೂ ಅನ್ವಯದ ಕುರಿತು ಚರ್ಚಿಸುತ್ತಿದೆ. ಎರಡನೆಯ ಗುಂಪು ಈ ಸೆಕ್ಯುಲರ್ ಎಂಬ ಕಲ್ಪನೆಯನ್ನೇ ನಾವು ತಿರಸ್ಕರಿಸಬೇಕೆನ್ನುತ್ತದೆ. ಮೊದಲನೆಯ ಗುಂಪಿನ ಪ್ರಕಾರ  ಯಾವುದೋ ಒಂದು ರೂಪದಲ್ಲಿ ಸೆಕ್ಯುಲರಿಸಂ ನಮ್ಮ ಆಧುನಿಕ ಪ್ರಜಾಪ್ರಭುತ್ವಕ್ಕೆ ಬೇಕೇ ಬೇಕು. ಆದರೆ ಸೆಕ್ಯಲರಿಸಂ ಎಂದರೇನು? ದೇಶೀ ಭಾಷೆಯಲ್ಲಿ ಯಾವ ಪರಿಭಾಷೆಯ ಮೂಲಕ ಅದನ್ನು ಗ್ರಹಿಸಬೇಕು? ಎಂಬ ವಿಷಯದ ಕುರಿತು ಸ್ಪಷ್ಟತೆ ಇಲ್ಲ.

ಸೆಕ್ಯುಲರ್ ಎಂಬ ಪದಕ್ಕೆ ನಮ್ಮಲ್ಲಿ ಯಾವ ಬದಲಿ ಪರಿಕಲ್ಪನೆಯಿದೆ ಎಂಬುದರ ಕುರಿತು ಸೆಕ್ಯುಲರ್ ವಾದಿಗಳಲ್ಲಿ ಒಮ್ಮತವಿಲ್ಲದ್ದು ನಮಗೆಲ್ಲ ತಿಳಿದಿದೆ. ಅವರು ಅದನ್ನು ಧರ್ಮ ನಿರಪೇಕ್ಷತೆ ಎಂಬುದಾಗಿ ಗ್ರಹಿಸಿಕೊಂಡವರಿದ್ದಾರೆ, ಸರ್ವಧರ್ಮ ಸಮಭಾವ ಎಂಬುದಾಗಿಯೂ ನಿರೂಪಿಸಿಕೊಂಡವರಿದ್ದಾರೆ. ಧರ್ಮನಿರಪೇಕ್ಷ ಎಂಬ ಶಬ್ದವು ರಾಜಕೀಯವು ಯಾವುದೇ ಮತಧರ್ಮವನ್ನೂ ಅವಲಂಬಿಸದೇ, ಅದಕ್ಕೆ ಅಂಟಿಕೊಳ್ಳದಂತೆ ನಿರ್ಲಿಪ್ತವಾಗಿರಬೇಕು ಎಂಬ ಸೂಚನೆಯನ್ನು ನೀಡುತ್ತದೆ. ಅಂದರೆ ನಾಗರೀಕ ಸಮೂಹದ ಭಾಗವಾಗಿರುವ  ಪ್ರಜೆಯೊಬ್ಬನು ಸಾರ್ವಜನಿಕವಾಗಿ ಮತಧರ್ಮವಿಲ್ಲದ ವ್ಯಕ್ತಿಯಾಗಿರಬೇಕು. ಹಾಗೂ ಯುರೋಪಿನಲ್ಲಿ ಈ ಅರ್ಥದಲ್ಲೇ ಅದರ ಉಪಯೋಗವಾಗುತ್ತಿದೆ. ಸರ್ವಧರ್ಮಸಮಭಾವವು ರಾಜಕೀಯವು ಎಲ್ಲಾ ಮತಧರ್ಮಗಳ ಜೊತೆಗೂ ಒಂದೇ ರೀತಿಯ ಸಂಬಂಧವನ್ನಿಟ್ಟುಕೊಳ್ಳಬೇಕು ಎನ್ನುವುದನ್ನು ಸೂಚಿಸುತ್ತದೆ. ಭಾರತೀಯ ಸೆಕ್ಯುಲರಿಸಂನ ಘೋಷಣೆಯಾಗಿರುವ ಕೋಮುಸೌಹಾರ್ದತೆಯು ಸಾರ್ವಜನಿಕ ಕ್ಷೇತ್ರದಲ್ಲಿ ಮತಧರ್ಮಗಳ ನಡುವಿನ ಸೌಹಾರ್ದಯುತ ಸಂಬಂಧವನ್ನು ಪ್ರತಿಪಾದಿಸುತ್ತದೆ. ಇದು ಐರೋಪ್ಯ ಕಲ್ಪನೆಗೆ ಸಂಪೂರ್ಣ ವಿರುದ್ಧವಾದ ನಿರೂಪಣೆಗಳನ್ನು ಸೃಷ್ಟಿಸುತ್ತದೆ. ಜಾತ್ಯಾತೀತತೆ ಎಂಬ ಒಂದು ವಿಚಿತ್ರ ಅನುವಾದವೂ ಈ ಶಬ್ದಕ್ಕಿದೆ, ಈ ಶಬ್ದಕ್ಕೂ ಸೆಕ್ಯುಲರ್ ವಾದಕ್ಕೂ ಏನು ಸಂಬಂಧ ಎಂಬುದು ನನಗೆ ಹೊಳೆಯುತ್ತಿಲ್ಲ. ಪ್ರಭುತ್ವವು ಜಾತಿಗೆ ಅತೀತವಾಗಿರಬೇಕು ಎಂದೆ? ಆದರೆ ನಮ್ಮ ರಾಜಕೀಯವು ಹೀಗೇನೂ ಭಾವಿಸಿಕೊಂಡಿದ್ದನ್ನು ನಾನು ಗಮನಿಸಿಲ್ಲ. ಸೆಕ್ಯುಲರ್ ವಾದವು ನಮ್ಮ ತಲೆಯೊಳಗೆ ಇಳಿಯಲಿಕ್ಕೆ ಎಷ್ಟು ಹೀನಾಯವಾಗಿ ಸೋತಿದೆ ಎಂಬುದಕ್ಕೆ ಅದು ಸಂಕೇತವಾಗಬಹುದಾದ್ದರಿಂದ ಆ ಶಬ್ದವನ್ನೂ ಇಲ್ಲಿ ಉಲ್ಲೇಖಿಸುತ್ತಿದ್ದೇನೆ.

ಈ ತರ್ಜುಮೆಗಳ ಸಂಬಂಧಿಸಿ ಇಂಥ ಅಪಹಾಸ್ಯಕರ ಸನ್ನಿವೇಶವು ಸೃಷ್ಟಿಯಾದದ್ದು ಹೇಗೆ? ಸೆಕ್ಯುಲರಿಸಂ ಭಾರತೀಯ ಸಂದರ್ಭದಲ್ಲಿ ಏನನ್ನು ಸೂಚಿಸಬೇಕು ಎಂಬುದರ ಕುರಿತಾಗಿ ಅಸ್ಪಷ್ಟತೆ ಇದೆ ಎಂಬುದಂತೂ ಸ್ಪಷ್ಟ. ಸೆಕ್ಯುಲರಿಸಂ ಎಂಬುದು ರಿಲಿಜನ್ನಿಗೆ ಪರ್ಯಾಯವಾದ ಲೋಕದೃಷ್ಟಿ ಎಂಬುದಾಗಿ ಸೆಕ್ಯಲರ್ ವಾದವು ತಿಳಿಸುತ್ತದೆ. ಆದರೆ ಭಾರತದಲ್ಲಿ ನಮ್ಮ ಆಚರಣೆಗೆ ಸಂಬಂಧಿಸಿದಂತೇ ಇದಕ್ಕೆ ಏನು ಅರ್ಥ ಎಂಬುದನ್ನು ನೋಡೋಣ. ಸ್ವಲ್ಪ ಗಮನಿಸಿ, ಇಂದಿನ ಎಲ್ಲಾ ಸೆಕ್ಯುಲರ್ ವಾದೀ ಚರ್ಚೆಗಳೂ ಕಮ್ಯುನಲಿಸಂ ಎಂಬ ಶಬ್ದಕ್ಕೆ ಪ್ರತಿಯಾಗಿ ಈ ಶಬ್ದವನ್ನು ಇಡುತ್ತವೆ. ಕಮ್ಯುನಲಿಸಂ ಶಬ್ದಕ್ಕೆ ಕೋಮುವಾದ ಎಂಬ ತರ್ಜುಮೆಯನ್ನು ನಾವೆಲ್ಲ ಒಪ್ಪಿಕೊಂಡಿದ್ದೇವೆ. ಸೆಕ್ಯುಲರ್ ಪದಕ್ಕೆ ವಿರುದ್ಧ ಪದವು ರಿಲಿಜಿಯಸ್ ಎಂಬುದಾಗಿರುವಾಗ ಭಾರತದಲ್ಲಿ ಈ ಕೋಮುವಾದವು ಎಲ್ಲಿಂದ ಬಂತು? ಕೋಮುವಾದ ಎಂದರೆ ಏನು? ಹಿಂದೂ ಹಾಗೂ ಮುಸ್ಲಿಂ ಎಂಬ ಎರಡು ಪಕ್ಷಗಳನ್ನು ಹಿಡಿದು ಪ್ರತಿಪಾದಿಸುವುದು ಎಂದರೆ ಮಾತ್ರ ಈ ಶಬ್ದದ ಆಚರಣೆ ಏನು ಎಂಬುದು ಸ್ಪಷ್ಟವಾಗುತ್ತದೆ. ಅದಕ್ಕೆ ಇನ್ನಾವ ವ್ಯಾಖ್ಯೆಯನ್ನು ನೀಡಿದರೂ ಅದು ಅರ್ಥವಾಗುವುದಿಲ್ಲ. ಹಾಗೇ, ನಮ್ಮ ಪ್ರಭುತ್ವವು ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಮತಗಳನ್ನು ಸಮಾನ ದೃಷ್ಟಿಯಲ್ಲಿ ನೋಡಬೇಕು ಎಂಬುದೇ ಸರ್ವಧರ್ಮ ಸಮಭಾವ ಶಬ್ದದ ಆಚರಣೆ ಎಂಬುದೂ ಸ್ಪಷ್ಟ. ಸಧ್ಯದಲ್ಲಿ ಹಿಂದೂ ಕೋಮುವಾದ ಹಾಗೂ ಮುಸ್ಲಿಂ ಕೋಮುವಾದ ಎಂಬೆರಡು ಶಬ್ದಗಳನ್ನು ನಾವು ಸೆಕ್ಯುಲರ್ ಪರಿಭಾಷೆಯಲ್ಲಿ ಬಳಸುತ್ತಿದ್ದೇವೆ. ಕ್ರಿಶ್ಚಿಯನ್ ಕೋಮುವಾದ ಎಂಬ ಶಬ್ದ ಆಚರಣೆಯಲ್ಲಿಲ್ಲ. ಹಾಗೂ ಹಿಂದೂ ಕೋಮುವಾದ ಎಂಬ ಶಬ್ದ ಮಾತ್ರ ರಾಜಕೀಯದ ಸಮಸ್ಯೆಯಾಗಿದೆ. ಸೆಕ್ಯುಲರ್ ವಾದವು ಬಲಗೊಂಡಿದ್ದೇ ಈ ಹಿಂದೂ ಕೋಮುವಾದವನ್ನು ಎದುರಿಸಲಿಕ್ಕಾಗಿ. ಇಂದಿಗೂ ಕೂಡ ಸೆಕ್ಯುಲರ್ ವಾದೀ ಲೇಖನಗಳ ಜಿಜ್ಞಾಸೆ ಹಿಂದೂ ಕೋಮುವಾದದ ಕುರಿತೇ ನಡೆಯುತ್ತದೆ. ಏಕೆಂದರೆ ಹಿಂದೂಗಳು ಬಹುಸಂಖ್ಯಾತರ ಧರ್ಮವಾಗಿದ್ದು ಅವರ ಪ್ರಭುತ್ವವು ಅಲ್ಪಸಂಖ್ಯಾತ ಧರ್ಮಗಳನ್ನು ದಮನಿಸುವ ಸಾಧ್ಯತೆಗಳು ಕಂಡುಬಂದಿರುವುದರಿಂದ ನಮ್ಮ ದೇಶದ ಸೆಕ್ಯುಲರ್ ತಳಹದಿಗೆ ಧಕ್ಕೆಯಾಗುವ ಸೂಚನೆಯನ್ನು ನಾವು ಕಾಣುತ್ತಿದ್ದೇವೆ. ಹಿಂದೂಗಳು ಸಹಿಷ್ಣುಗಳಾಗಿರುವಂತೆ ಕಾಯ್ದುಕೊಳ್ಳುವುದು ಸೆಕ್ಯುಲರಿಸಂನ ಆದ್ಯತೆಯಾಗಿದೆ. ಆ ಕಾರಣಕ್ಕೆ ಸೆಕ್ಯುಲರಿಸಂಗೆ ಅಲ್ಪಸಂಖ್ಯಾತರ ಕುರಿತಂತೆ ಅನುಕಂಪವನ್ನು ವ್ಯಕ್ತಪಡಿಸುವುದು ಮಾನವೀಯ ಕಾಳಜಿಯಾಗುತ್ತದೆ. ಆದರೆ ಇದುವರೆಗೂ ತಾವು ಕೋಮುವಾದಿಗಳೆಂದು ಹಿಂದುತ್ವವಾದಿಗಳು ಒಪ್ಪಿಕೊಂಡಿಲ್ಲ. ಬದಲಾಗಿ ಕಾಂಗ್ರೆಸ್ಸಿಗರು ಸರ್ವಧರ್ಮಗಳನ್ನೂ ಸಮಭಾವದಿಂದ ನೋಡಿಲ್ಲ, ಹಾಗಾಗಿ ಅವರ ಸೆಕ್ಯುಲರಿಸಂ ಸ್ಯೂಡೋ ಸೆಕ್ಯುಲರಿಸಂ ಎಂಬುದಾಗಿ ಹಿಂದುತ್ವವಾದಿಗಳು ಆರೋಪಿಸುತ್ತಾರೆ ಹಾಗೂ ಸೆಕ್ಯುಲರ್ ವಾದಿಗಳು ಪಾಕಿಸ್ತಾನದ ಏಜಂಟುಗಳು, ಹಿಂದೂಗಳ ವಿರೋಧಿಗಳು ಹಾಗೂ ಅವರೇ ನಿಜವಾದ ಕೋಮುವಾದಿಗಳು ಎಂಬ ಆರೋಪವನ್ನೂ ಮಾಡಲಾಗುತ್ತಿದೆ. ಅವರು ಹೇಗೆ ತಮ್ಮದೇ ನಿಜವಾದ ಸೆಕ್ಯುಲರಿಸಂ ಎಂಬುದನ್ನೂ ವಿವರಿಸುತ್ತಾರೆ. ಹಾಗಾಗಿ ಎಲ್ಲರೂ ಸೆಕ್ಯುಲರಿಸಂ ಒಂದು ಮೌಲ್ಯ ಎಂದು ಒಪ್ಪಿಕೊಂಡ ಮೇಲೆ ಈ ಸೆಕ್ಯುಲರ್ ರಾಷ್ಟ್ರಕ್ಕೆ ಸಮಸ್ಯೆ ಏನು?,

ಕೋಮುವಾದವನ್ನು ವಿರೋಧಿಸಿ ಸಾಕಷ್ಟು ಸೆಕ್ಯುಲರ್ ಚಳುವಳಿಗಳಾಗುತ್ತಿವೆ. ಇಂಥ ಚಳುವಳಿಗಳು ಹೆಚ್ಚಾದಂತೇ  ಕೋಮುವಾದೀ ಹಿಂಸೆ ಕೂಡಾ ಹೆಚ್ಚಾಗುತ್ತಿರುವುದನ್ನೂ ನೋಡುತ್ತಿದ್ದರೆ ಈ ವಾದವೇನೂ ಜನರ ಮೇಲೆ ಪ್ರಭಾವ ಬೀರಿದಂತೆ ತೋರುವುದಿಲ್ಲ. ಇಂದಿಗೆ ಹೋಲಿಸಿದರೆ ಈಗ ಮೂವತ್ತು ವರ್ಷಗಳ ಹಿಂದೆ ಸೆಕ್ಯುಲರ್ ವಾದಿಗಳಿಗೆ  ತೀರಾ ಕಡಿಮೆ ಸಮಸ್ಯೆಗಳಿದ್ದವು. 1980ರ ದಶಕದಿಂದೀಚೆಗೆ ಮತೀಯ ಹಿಂಸೆ ವಿಕಾರವಾಗಿ ಬೆಳೆದುಕೊಂಡಿದೆ. ಹಿಂದುತ್ವವಾದವು ರಾಜಕೀಯ ಶಕ್ತಿಯಾಗಿ ಆವಿರ್ಭವಿಸಿದೆ. ಮುಸ್ಲಿಂ ಭಯೋತ್ಪಾದಕರು ಎಲ್ಲೆಡೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಾಂತವಾಗಿದ್ದ ತಾಣಗಳು ವಿವಾದಾಸ್ಪದವಾಗುತ್ತಿವೆ. ಹಿಂದುತ್ವವಾದಕ್ಕೆ ರಾಜಕೀಯ, ಸಾರ್ವಜನಿಕ ಬೆಂಬಲಿಗರು ಎಲ್ಲೆಡೆಯಲ್ಲೂ ವೃದ್ಧಿಸುತ್ತಿದ್ದಾರೆ. ಈ ಸಮಸ್ಯೆಯ ಲಾಭವನ್ನು ಪಡೆದುಕೊಳ್ಳುವಲ್ಲಿ ಯಾವ ರಾಜಕೀಯ ಪಕ್ಷಗಳೂ ಹಿಂದೆ ಬಿದ್ದಿಲ್ಲ. ರಾಜಕೀಯ ಪಕ್ಷಗಳು ಇದನ್ನೊಂದು ಚುನಾವಣೆಗೆ ನಿರ್ಣಾಯಕವಾದ ವಿಷಯ ಎಂಬಂತೆ ನೋಡುತ್ತಿವೆ. ಇದು ಕೋಮುವಾದಿಗಳ ಹುನ್ನಾರ ಎಂದು ವರ್ಣಿಸಿ ಸೆಕ್ಯುಲರ್ ಹೋರಾಟವನ್ನು ಇನ್ನೂ ಹೆಚ್ಚಿಸಬೇಕು ಎಂಬುದಾಗಿ ಕರೆಕೊಡುವುದರಿಂದ ಸೆಕ್ಯುಲರ್ ರಾಜಕಾರಣಕ್ಕೆ, ಹಾಗೂ ಕೆಲವೊಮ್ಮೆ ಕೋಮುವಾದಿಗಳಿಗಿಂತ ಹಿಂಸಾತ್ಮಕವಾದ, ಅವಕಾಶವಾದೀ ವೈರಿ ಸಂಘಟನೆಗಳಿಗೆ ಲಾಭವಾಗಿರಬಹುದೇ ಹೊರತೂ, ನಿಜವಾದ ಕಳಕಳಿ ಇರುವವರಿಗೆ ಈ ಸಮಸ್ಯೆಯಿಂದ ಪಾರಾಗುವ ಮಾರ್ಗ ಯಾವುದು ಎಂಬ ಆತಂಕ ವರ್ಧಿಸುಸುತ್ತಲೇ ಇದೆ.  ಸೆಕ್ಯುಲರಿಸಂ ಬೋಧನೆ, ಪ್ರತಿಪಾದನೆ ಹಾಗೂ ಹೋರಾಟಗಳು ಹೆಚ್ಚಿದಂತೆಲ್ಲ ಕೋಮುವಾದವು ಕಡಿಮೆಯಾಗುವ ಬದಲು ಹೆಚ್ಚಾಗುತ್ತಿರುವುದಂತೂ ನಿದರ್ಶಿತ ಸತ್ಯ. ಇದು ತೀರಾ ಆತಂಕಕಾರಿಯಾದ ವಿಷಯ.

ಒಂದು ರೋಗವು ಚಿಕಿತ್ಸೆ ಮಾಡಿದಂತೆಲ್ಲ ಉಲ್ಭಣಿಸುತ್ತಲೇ ಹೋಗುತ್ತದೆ ಅಂತಿಟ್ಟುಕೊಳ್ಳಿ. ಬಹುಶ: ನಾವು ಆ ರೋಗವನ್ನು ಪತ್ತೆ ಮಾಡುವುದರಲ್ಲೇ ತಪ್ಪಿರಬಹುದು ಎಂಬ ಅಭಿಪ್ರಾಯ ಸಹಜವಾಗೇ ಮೂಡುತ್ತದೆ. ಒಮ್ಮೆ ಹಾಗೆ ನಾವು ತಪ್ಪಿದಲ್ಲಿ ಆಗ ಚಿಕಿತ್ಸಾವಿಧಾನವನ್ನು ಬದಲಿಸಿಕೊಳ್ಳಬೇಕು. ರೋಗಿಯ ಜೀವದ ಕುರಿತು ಕಾಳಜಿ ಇರುವವರು ಹೀಗೂ ಯೋಚಿಸುತ್ತಾರೆ. ಇಂಥದೊಂದು ಸಂದರ್ಭದಲ್ಲಿ ಹೀಗೊಂದಿಷ್ಟು ಜನರು ಈ ಚಿಕಿತ್ಸೆಯನ್ನು ಬದಲಿಸಬೇಕೆಂಬ ಸಲಹೆ ನೀಡುತ್ತಾರೆ ಅಂತಿಟ್ಟುಕೊಳ್ಳಿ.  ರೋಗಿಯ ಬಂಧುಗಳಿಗೆ ಅದು ಅಪಾಯಕಾರಿಯಾದ ಸಲಹೆಯಾಗಿ ಕಾಣಿಸಬಹುದು. ಆ ಚಿಕಿತ್ಸೆಯನ್ನೇ ಬಂಡವಾಳ ಮಾಡಿಕೊಂಡ ವೈದ್ಯರ ವರ್ಗಕ್ಕಂತೂ ಇಂಥ ವಿಚಾರಗಳು ಪಥ್ಯವಾಗಲು ಕಾರಣವೇ ಇಲ್ಲ. ಬಹುಶಃ ಸೆಕ್ಯುಲರಿಸಂ ಸಂದರ್ಭದಲ್ಲೂ ಹೆಚ್ಚು ಕಡಿಮೆ ಇದೇ ರೀತಿಯಾಗಿದೆ. ಈಗ ಇಪ್ಪತ್ತು ವರ್ಷದ ಹಿಂದೆ ಎಡಪಂಥೀಯರಿಂದಲೇ ಪ್ರಭಾವಿತವಾಗಿದ್ದ ಕಟ್ಟರ್ ಸೆಕ್ಯುಲರ್ ಪಂಥವು ದೇವರು ಧರ್ಮ ಮುಂತಾದವುಗಳ ಕುರಿತು ಮರುಚಿಂತನೆ ನಡೆಸಿದವರನ್ನೂ ಪ್ರಚ್ಛನ್ನ ಕೋಮುವಾದಿಗಳೆಂದೇ ಪರಿಗಣಿಸಿತ್ತು. ಏಕೆಂದರೆ ಈ ಸೆಕ್ಯುಲರಿಸಂನ ಹಡಪದಲ್ಲಿ ಕೋಮು ಸೌಹಾರ್ದವೊಂದೇ ಇರುವುದಿಲ್ಲ, ಅದಕ್ಕೂ ಪ್ರಭಾವಿಯಾದ, ಸೌಹಾರ್ದದ ಕಾರ್ಯಕ್ರಮವನ್ನೇ ಹಾಳುಗೆಡವಬಲ್ಲ ಇತರ ಪೂರ್ವಗ್ರಹೀತಗಳೂ, ಪೂರ್ವಾಗ್ರಹಗಳೂ ಇವೆ. ಏಕೆಂದರೆ ಸೆಕ್ಯುಲರಿಸಂ ಮೂಲತಃ ಪ್ರಭುತ್ವದ ಸಮಸ್ಯೆಗಳನ್ನು ಪರಿಹರಿಸಲಿಕ್ಕೆ ಹುಟ್ಟಿಕೊಂಡಿದ್ದೇ ಹೊರತೂ ಸೌಹಾರ್ದತೆಯನ್ನು ಬೋಧಿಸಲಿಕ್ಕಲ್ಲ. ಆದರೆ ಈಗ ಭಾರತೀಯ ಸಂದರ್ಭದಲ್ಲಿ ಅದರ ಲಕ್ಷ್ಯ ಬದಲಾಗಿದೆ. ಅನೇಕರು ಇಂಥ ಮಿತಿಗಳನ್ನು ಅರಿತುಕೊಂಡು  ವಿಚಾರಗಳನ್ನು ಬದಲಿಸಿಕೊಂಡಿದ್ದಾರೆ. ಅವರ ಕಳಕಳಿಯ ಕುರಿತು ಎರಡು ಮಾತಿಲ್ಲ. ಆದರೆ ಚಿಕಿತ್ಸೆಯನ್ನು ಎಷ್ಟೇ ಸುಧಾರಿಸಿದರೂ ಪ್ರಯೋಜನ ಕಾಣುತ್ತಿಲ್ಲ. ಅಂದರೆ ರೋಗವೇ ಬೇರೆಯ ರೀತಿಯದಾಗಿದೆಯೆ? ಕೆಲವೊಮ್ಮೆ ಔಷಧಿಯೇ ರೋಗವನ್ನು ಸೃಷ್ಟಿಸುವ ಸಂಭವವೂ ಇರುತ್ತದೆ.

ಹಿಂದೂ ಮುಸ್ಲಿಂ ಗಲಭೆಗಳಿಗೆ ಕಾರಣವನ್ನು ಹುಡುಕುವ ಕಾರಣಜಿಜ್ಞಾಸೆಯು 1990 ರ ದಶಕದಲ್ಲಿ ಪ್ರಬಲವಾಗಿತ್ತು.  ಅಶ್ಗರ್ ಅಲಿ ಇಂಜಿನಿಯರ್ ಅವರು ಆರ್ಥಿಕ ಕಾರಣಗಳ ಕುರಿತು ವಿಸ್ತೃತವಾಗಿ ಶೋಧಿಸಿದ್ದಾರೆ. ಎಡಪಂಥೀಯರು ಇದರಲ್ಲಿ ವರ್ಗ ಸಂಘರ್ಷವನ್ನು ಹಾಗೂ ಮಿಥ್ಯಾಪ್ರಜ್ಞೆಯನ್ನು ಕೂಡಾ ಊಹಿಸಿ ಸೋತರು. ಇಷ್ಟೆಲ್ಲಾ ಆಗಿಯೂ ಈ ಗಲಭೆಗಳ ಹಿಂದೆ ಏನೋ ಒಂದು ವಿವರಣೆಗೆ ಸಿಲುಕದ್ದು ಇದೆ ಎಂಬ ಗುಮಾನಿ ಉಳಿದುಕೊಂಡಿತು. ಅದನ್ನು ಮತೀಯ ಭಾವನೆ ಅಥವಾ ಐಡಿಯಾಲಜಿ ಎಂದೆಲ್ಲ ಊಹಿಸಲಾಯಿತು. ನಂಬಿಕೆಯ ಪ್ರಪಂಚ ಎಂದರು. ಇದು ಆಧುನಿಕ ಪೂರ್ವಕಾಲದ್ದು ಎಂಬುದಾಗಿಯೂ ಕೆಲವರು ವಾದಿಸಿದರು. ಆದರೆ ನಮ್ಮ ಭಾರತೀಯ ಸಂಪ್ರದಾಯಗಳಿಗೆ ಕೋಮುದ್ವೇಷದ ನಂಬಿಕೆಯ ಪ್ರಪಂಚವಾಗಲೀ, ಬೋಧನೆಯ ತಳಹದಿಯಾಗಲೀ ಇದ್ದಂತೆ ಇತಿಹಾಸದಲ್ಲಿ ವಿದಿತವಾಗುವುದಿಲ್ಲ. ಹಾಗಾದರೆ ನಮ್ಮ ಪ್ರಭುತ್ವವು ಅಳವಡಿಸಿಕೊಂಡಿರುವ ಆಧುನಿಕ ಸೆಕ್ಯುಲರ್ ಸಿದ್ಧಾಂತವೇ ಈ ವಿವರಣೆಗೆ ಸಿಲುಕದ ಕಾರಣವನ್ನು ಸೃಷ್ಟಿಸುತ್ತಿದೆಯೆ?

2

ಸೆಕ್ಯುಲರಿಸಂ ಎಂಬ ಕಾರ್ಯಕ್ರಮವೇ ಮೂಲ ಸಮಸ್ಯೆಯಾಗಿದೆ ಎಂಬ ವಾದಗಳೂ ಬಂದಿವೆ. ಅಶಿಸ್ ನಂದಿ ಹಾಗೂ ಬಾಲಗಂಗಾಧರ ಇದರ ಪ್ರಮುಖ ವಕ್ತಾರರು. ಅವರಿಬ್ಬರೂ ಬೇರೆ ಬೇರೆ ನೆಲೆಯಲ್ಲಿ ಹಾಗೆ ವಾದಿಸುತ್ತಾರೆ. ಅವರ ವಾದವು ಹೀಗಿದೆ: 1) ನಮ್ಮ ಸಂಸ್ಕೃತಿಯ ಸಂದರ್ಭದಲ್ಲಿ ಸೆಕ್ಯುಲರಿಸಂನ ಸಮಸ್ಯೆ ಅಪ್ರಸ್ತುತವಾಗಿದೆಯೊಂದೇ ಅಲ್ಲದೆ ಅದನ್ನು ಪ್ರಭುತ್ವದ ಕಾರ್ಯಕ್ರಮವನ್ನಾಗಿ ಸ್ವೀಕರಿಸಿದ್ದರಿಂದ ಅದೇ ಇಂದಿನ ಸಮಸ್ಯೆಗೆ ಕಾರಣವಾಗಿದೆ; 2) ವಿಭಿನ್ನ ಮತ, ಸಂಪ್ರದಾಯಗಳು ಶಾಂತಿಯುತವಾಗಿ ಸಹಬಾಳ್ವೆ ನಡೆಸುವುದೇ ಒಂದು ಪ್ರಭುತ್ವದ ಗುರಿಯಾಗಿದ್ದಲ್ಲಿ ಬಹುಶಃ ಸೆಕ್ಯುಲರಿಸಂ ಗಿಂತಲೂ ಒಳ್ಳೆಯ ಮಾದರಿ ನಮ್ಮಲ್ಲಿರುವ ಸಾಧ್ಯತೆ ಇದೆ.

ಅಶಿಸ್ ನಂದಿಯವರು ಇಡುವ ವಾದದ ಪ್ರಕಾರ ಎಲ್ಲಾ ರಿಲಿಜನ್ನುಗಳೂ ಐಡಿಯಾಲಜಿ ಹಾಗೂ ಶೃದ್ಧೆ ಎಂಬ ಎರಡು ರೂಪದಲ್ಲಿ ಚಾಲ್ತಿಯಲ್ಲಿರುತ್ತವೆ. ಆಧುನಿಕ ಸೆಕ್ಯುಲರ್ ಪ್ರಭುತ್ವ ಹಾಗೂ ವ್ಯಾಖ್ಯಾನಗಳು ಐರೋಪ್ಯ ದೃಷ್ಟಿಕೋನದಿಂದ ಆಕಾರತಳೆದ ಐಡಿಯಾಲಜಿಯನ್ನೇ ನಿರ್ಣಾಯಕವನ್ನಾಗಿ ಪರಿಗಣಿಸಿ, ದೇಶೀ ಸಾಂಪ್ರದಾಯಗಳ ಶೃದ್ಧೆಯ ಭಾಗವನ್ನು ಅವೈಚಾರಿಕವೆಂಬಂತೆ ಅಳಿಸುವ, ದೂರ ಇಡುವ ಪ್ರಯತ್ನ ಮಾಡುತ್ತಿವೆ. ಈ ಶೃದ್ಧೆಗಳು ರಿಲಿಜನ್ನುಗಳ ಸಹಬಾಳ್ವೆಯನ್ನು ಸಾಧ್ಯ ಮಾಡುತ್ತವೆ. ಐಡಿಯಾಲಜಿಗಳು ಮೂಲಭೂತವಾದೀ ಪೃವೃತ್ತಿಗಳನ್ನು ಉದ್ದೀಪಿಸುತ್ತವೆ. ಇಂದಿನ ಕೋಮುವಾದವು ಸೆಕ್ಯುಲರಿಸಂ, ಹಾಗೂ ಅದರ ಜೊತೆಗೆ ತಳಕುಹಾಕಿಕೊಂಡಿರುವ ಇನ್ನೂ ಅನೇಕ ಆಧುನಿಕ ಕಾರ್ಯಕ್ರಮಗಳ ಫಲವಾಗಿದೆ. ನಾವು ಮತಶೃದ್ಧೆಗಳು ಕೋಮುವಾದವನ್ನು ಪ್ರಚೋದಿಸುತ್ತವೆ ಎಂಬಂತೇ ನೋಡುತ್ತೇವೆ. ನಂದಿಯವರು ಗಾಂಧಿಯವರ ಉದಾಹರಣೆ ಕೊಟ್ಟು ಸಹಬಾಳ್ವೆಯನ್ನು ಸಾಧಿಸುವಲ್ಲಿ ಹೇಗೆ ಮತಶೃದ್ಧೆಯು ಸೆಕ್ಯುಲರಿಸಂಗಿಂತ ಪರಿಣಾಮಕಾರಿಯಾದ ಪ್ರೇರಣೆಯಾಗಬಲ್ಲದು ಎಂದು ವಾದಿಸುತ್ತಾರೆ. ನಮಗೆ ಅರ್ಥವಾಗದ ಹಾಗೂ ಅಪ್ರಸ್ತುತವಾದ ಒಂದು ಪರಿಭಾಷೆಯನ್ನು ರಾಜಕೀಯ ಕಾರ್ಯಕ್ರಮವನ್ನಾಗಿ ಅಳವಡಿಸಿಕೊಳ್ಳುವಾಗ ಹುಟ್ಟುವ ಹಿಂಸೆಯೇ ಈ ಕೋಮುವಾದ. ಈ ಸೆಕ್ಯುಲರ್ವಾದ ಹಾಗೂ ಕೋಮುವಾದ ಎರಡೂ ಇನ್ನೂ ಏನೇನೋ ಆಧುನಿಕ ಕಾರ್ಯಕ್ರಮಗಳ ಜೊತೆಗೆ ಹೆಣೆದುಕೊಂಡಿವೆ. ಅವನ್ನೆಲ್ಲ ಭಾರತೀಯ ಸಂದರ್ಭದಲ್ಲಿ ಅರ್ಥಮಾಡಿಸಲು ಸೆಕ್ಯಲರ್ ವಾದಿಗಳು ಸೋಲುತ್ತಿದ್ದಾರೆಯಷ್ಟೇ ಅಲ್ಲ, ತೀರ ಆತಂಕ ಹುಟ್ಟಿಸುವ ಭಾಷೆಯಲ್ಲಿ ಅಪಾರ್ಥಗಳನ್ನು ಕೂಡಾ ನೀಡುತ್ತಿದ್ದಾರೆ.

ಬಾಲಗಂಗಾಧರ ಅವರ ವಾದ ಬೇರೆ ನಿಟ್ಟಿನಲ್ಲೇ ಇದೆ. ಅವರ ಪ್ರಕಾರ ಭಾರತದಲ್ಲಿ ರಿಲಿಜನ್ ಎಂಬ ಸಂಗತಿಯೇ ಇಲ್ಲ. ಹಾಗಾಗಿ ನಂದಿಯವರು ಹೇಳುವ ರಿಲಿಜನ್ನಿನ ಐಡಿಯಾಲಜಿ ಹಾಗೂ ರಿಲಿಜನ್ನಿನ ಶೃದ್ಧೆ ಎಂಬ ಯಾವ ವಿಭಾಗಗಳೂ ಭಾರತದ ಸಾಂಪ್ರದಾಯಿಕ ಸಮಾಜಕ್ಕೆ ಪ್ರಸ್ತುತವಾಗಲಾರವು. ಭಾರತದಲ್ಲಿರುವುದು ವಿಭಿನ್ನ ಸಂಪ್ರದಾಯಗಳು. ನಮಗೆ ಸೆಕ್ಯುಲರಿಸಂ ಏಕೆ ಪ್ರಸ್ತುತವಾಗುವುದಿಲ್ಲವೆಂದರೆ ನಮ್ಮಲ್ಲಿ ರಿಲಿಜನ್ನೇ ಇಲ್ಲ. ಸೆಕ್ಯುಲರಿಸಂ ಎಂಬುದು ರಿಲಿಜನ್ನಿನ ಸಮಸ್ಯೆ.  ಈ ಪರಿಕಲ್ಪನೆಯನ್ನು ನಮ್ಮ ಪ್ರಭುತ್ವದ ಕಾರ್ಯಕ್ರಮವನ್ನಾಗಿ ಹಾಕಿಕೊಂಡಾಗ ರಿಲಿಜನ್ನುಗಳನ್ನು ರಿಲಿಜನ್ನುಗಳಲ್ಲದ ಸಂಪ್ರದಾಯಗಳ ಜೊತೆಗೆ ಸಮೀಕರಿಸಲಾಗುತ್ತದೆ. ರಿಲಿಜನ್ನು ನಿಜವಾಗಿಯೂ ಏನು ಎಂಬುದಕ್ಕೆ ಸಂಬಂಧಿಸಿದಂತೆ ಬಾಲಗಂಗಾಧರ ಅವರ ವಾದಗಳನ್ನು ಸಂಕ್ಷಿಪ್ತೀಕರಿಸಿ ತಿಳಿಸಲು ಪ್ರಯತ್ನಿಸುತ್ತೇನೆ. ಭಾರತದಲ್ಲಿ ಹಿಂದೂಯಿಸಂ ಎಂಬ ರಿಲಿಜನ್ನು ಇದೆ ಎಂಬುದಾಗಿ ಕ್ರೈಸ್ತ ಮಿಶನರಿಗಳು ಭಾವಿಸಿದ್ದರು. ಈ ಗ್ರಹಿಕೆಯ ಹಿನ್ನೆಲೆಯನ್ನು ಹೊಂದಿದ ಆಧುನಿಕ ಐರೋಪ್ಯರು ಸಿದ್ಧಾಂತಗಳನ್ನು ಬೆಳೆಸತೊಡಗಿದರು. ಆಧುನಿಕ ಹಿಂದೂಯಿಸಂ ನ ರೂಪುರೇಷೆಗಳೆಲ್ಲ ಕ್ರೈಸ್ತ ದೈವಶಾಸ್ತ್ರದ ಕಲ್ಪನೆಗಳಾಗಿವೆ. ಅಂದರೆ ಇದರ ಪವಿತ್ರಗ್ರಂಥಗಳು, ಪುರೋಹಿತಶಾಹಿ, ಬೋಧನೆ, ಇತ್ಯಾದಿ. ಇಷ್ಟಾಗಿಯೂ ಭಾರತದಲ್ಲಿ ಈ ಯಾವ ಲಕ್ಷಣಗಳನ್ನೂ ಕಾಣಲು ಅವರಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಸೆಮೆಟಿಕ್ ರಿಲಿಜನ್ನುಗಳು ದೈವವಾಣಿಯಿಂದ ಪ್ರವಾದಿಯ ಮೂಲಕ ಅಸ್ತಿತ್ವಕ್ಕೆ ಬಂದಿವೆ ಎಂಬುದಾಗಿ ಪ್ರತಿಪಾದಿಸಲಾಗುತ್ತದೆ. ದೈವವಾಣಿಯೇ ಏಕಮೇವ ಪವಿತ್ರ ಗ್ರಂಥವಾಗುತ್ತದೆ. ಅದರಲ್ಲಿನ ಶೃದ್ಧೆಯೆ ನಿಜವಾದ ಶೃದ್ಧೆ, ಅದು ಸತ್ಯವೆಂದು ನಂಬುವುದೇ ನಂಬಿಕೆ. ಅದೇ ರೀತಿ ಅನ್ಯರದನ್ನು ಸತ್ಯವೆಂದು ನಂಬಿದರೆ ನಮ್ಮದನ್ನು ಸುಳ್ಳೆಂದು ನಂಬಿದಂತೇ. ಇಂಥ ರಿಲಿಜನ್ನುಗಳಲ್ಲಿ ಕೂಡಾ ಒಡಕುಗಳು ಇವೆ. ಆದರೆ ಅದು ಏಕೈಕ ಸತ್ಯದ ಕುರಿತ ಭಿನ್ನಾಭಿಪ್ರಾಯದಿಂದ ಹುಟ್ಟಿದ್ದು. Sect,  heretics  ಮುಂತಾದ ಪದಗಳೆಲ್ಲ ಏಕೈಕ ಸತ್ಯದ ಕುರಿತ ಭಿನ್ನಾಭಿಪ್ರಾಯದಿಂದ ಹುಟ್ಟಿದ ಗುಂಪುಗಳಾಗಿವೆ. ಈ ಒಡಕುಗಳು ಈ ಮೇಲಿನ ಪ್ರವಾದಿ, ಪವಿತ್ರಗ್ರಂಥ, ಇತ್ಯಾದಿಗಳನ್ನು ಸುಳ್ಳೆಂದು ಅಲ್ಲಗಳೆಯುವುದಿಲ್ಲ ಹಾಗೂ ಅನ್ಯ ರಿಲಿಜನ್ನುಗಳು, ದೈವವಾಣಿಗಳು ಸತ್ಯವೆಂದು ಒಪ್ಪಿಕೊಳ್ಳಲಿಕ್ಕೆ ಅವುಗಳಿಗೆ ಸಾಧ್ಯತೆಯೇ ಇಲ್ಲ.

ಇದರ ಜೊತೆಗೆ ಭಾರತೀಯ ಸಂಪ್ರದಾಯಗಳನ್ನು ಹೋಲಿಸಿ ನೋಡಿ. ರಿಲಿಜನ್ನಿನ ಯಾವುದೋ ಲಕ್ಷಣವು ಯಾವುದೋ ಸಂಪ್ರದಾಯದಲ್ಲಿದ್ದಂತೆ ಭಾಸವಾಗುತ್ತದೆ. ಎಲ್ಲವೂ ಒಂದರಲ್ಲೇ ಕಾಣಿಸುವುದಿಲ್ಲ. ಇವರು ಅನ್ಯರ ದೇವರುಗಳನ್ನೂ ತಮ್ಮದನ್ನಾಗಿ ಮಾಡಿಕೊಳ್ಳುತ್ತಾರೆ, ಕೆಲವೊಮ್ಮೆ ದೇವರುಗಳನ್ನು ಬದಲಾಯಿಸುತ್ತಿರುತ್ತಾರೆ. ಇಲ್ಲ ಒಟ್ಟಾಗಿಯೇ ಎಲ್ಲರನ್ನೂ ಪೂಜಿಸುತ್ತಾರೆ. ಹಾಗೂ ಇವರು ತಮ್ಮ ತಾತ್ವಿಕತೆಯನ್ನೇ ಹಾಗೆ ಬೆಳೆಸಿಕೊಂಡಿದ್ದಾರೆ. ಅನ್ಯರ ಸಂಪ್ರದಾಯದ ಕುರಿತು ಅದು ಸರಿಯಾದ ಮಾರ್ಗ ಅಲ್ಲ ಎಂಬ ಟೀಕೆಗಳು ಇವರಲ್ಲಿ ಇರಬಹುದು.  ಆದರೆ ಅವರನ್ನು ಒಪ್ಪಿಕೊಂಡರೆ ತಮ್ಮದು ಸುಳ್ಳಾಗುತ್ತದೆ ಎಂಬುದಾಗಿ ಭಾವಿಸಿಕೊಂಡಿಲ್ಲ. ಈ ಸಂಪ್ರದಾಯಗಳೆಲ್ಲ ಹಿಂದೂಯಿಸಂ ನ ವಿಭಾಗಗಳು ಎಂಬಂತೇ ಆಧುನಿಕ ನಿರೂಪಣೆಗಳಿವೆ. ಆದರೆ ಅವು ಯಾವ ಏಕೈಕ ಮತತತ್ವದ ವಿಭಾಗಗಳೂ ಅಲ್ಲ. ಇವರೆಲ್ಲರೂ ಸತ್ಯವೆಂದು ಮಾನ್ಯಮಾಡುವ ಯಾವ ಪ್ರವಾದಿಯಾಗಲೀ, ಪವಿತ್ರಗ್ರಂಥವಾಗಲೀ ಇಲ್ಲ. ಇವರಿಗೆಲ್ಲ ಧರ್ಮ ನಿರ್ದೇಶನ ಮಾಡುವ ಒಂದು ಪುರೋಹಿತ ವರ್ಗ ಕೂಡಾ ಇಲ್ಲ. ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಗಳ ಮೇಲೆ ಮುಲ್ಲಾಗಳಿಗೆ ಹಾಗೂ ಪಾದ್ರಿಗಳಿಗೆ ಇರುವ ಧಾರ್ಮಿಕ ಆಕರಾಸ್ಥೆ ಹಾಗೂ ಅಧಿಕಾರಕ್ಕೆ ಹೋಲಿಸಿದರೆ ಬ್ರಾಹ್ಮಣ ಪುರೋಹಿತರಿಗೆ ಹಿಂದೂ ಎಂಬುದಾಗಿ ಭಾವಿಸಿಕೊಂಡ ಸಮುದಾಯಗಳ ಮೇಲೆ ಧಾರ್ಮಿಕ ನಿಯಂತ್ರಣ ಇಲ್ಲ. ನಮ್ಮ ಸಂಪ್ರದಾಯಗಳು ತಮ್ಮ ಪಠ್ಯಗಳ ಜೊತೆಗೆ, ತತ್ವಗಳ ಜೊತೆಗೆ, ದೇವರುಗಳ ಜೊತೆಗೆ, ಪೂಜಾಚರಣೆಗಳ ಜೊತೆಗೆ ಇಟ್ಟುಕೊಂಡಿರುವ ಸಂಬಂಧ ಮೂಲಭೂತವಾಗಿ ಬೇರೆ ರೀತಿಯಲ್ಲಿದೆ. ಅದು ಸತ್ಯ-ಸುಳ್ಳುಗಳ ಆಧಾರದ ಮೇಲೆ ನಿಂತಿಲ್ಲ. ಈ ಸಂಪ್ರದಾಯಗಳು ಸತ್ಯ ಕಥನವಾದ ಹಿಸ್ಟರಿ ಎಂಬ ಪ್ರಕಾರದ ವೃತ್ತಾಂತವನ್ನೇ ಬೆಳೆಸಲಿಲ್ಲ, ಅಷ್ಟೇ ಅಲ್ಲ, ಅದನ್ನು ಅರ್ಥಮಾಡಿಕೊಳ್ಳಲೂ ಸೋಲುತ್ತವೆ. ನಮ್ಮ ಪುರಾಣಗಳ ಐತಿಹಾಸಿಕ ಸತ್ಯದ ಕುರಿತ ಜಿಜ್ಞಾಸೆಯು ಆಧುನಿಕ ಪೃವೃತ್ತಿ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಇವರ ಆಚರಣೆಗಳನ್ನು ಪಠ್ಯಗಳು ನಿರ್ದೇಶಿಸುವುದಿಲ್ಲ. ಹಾಗಾಗಿ ಪಠ್ಯಗಳನ್ನು ಓದಿದ ವರ್ಗಕ್ಕೆ ಇವರ ಮೇಲೆ ಹಿಡಿತ ಸಾಧಿಸುವ ಸಾಧ್ಯತೆಯೂ ಇಲ್ಲ.  ಅಥವಾ ತೀರ ವ್ಯವಸ್ಥಿತವಾಗಿ ಮತ ತತ್ವಗಳನ್ನು ತಿಳಿಸುವ ಒಂದು ಸಂಘಟನೆಯೂ ಇಲ್ಲಿ ಕಾರ್ಯ ನಿರ್ವಹಿಸಿಕೊಂಡು ಬಂದಿಲ್ಲ. ಅಂದಮೇಲೆ ಪಠ್ಯಗಳಲ್ಲಿರುವ ವಿಷಯಗಳನ್ನು ಸತ್ಯಗಳೆಂಬಂತೇ ರೂಢಿಸುವ ಸಾಧ್ಯತೆಯೂ ಇಲ್ಲ. ಹಿಂದೂಯಿಸಂ ಕುರಿತು ನಾವು ಅಂದುಕೊಳ್ಳುತ್ತಿರುವುದೆಲ್ಲ ನಮ್ಮ ಆಧುನಿಕ ವಿದ್ಯಾಭ್ಯಾಸದ ಫಲವಾಗಿ ಎಂಬುದನ್ನು ನಾವು ಗಮನಿಸಬೇಕು. ನಮ್ಮಲ್ಲಿ ಆಧುನಿಕ ವಿಧ್ಯಾಭ್ಯಾಸ ಮಾಡದಿರುವ ಬ್ರಾಹ್ಮಣರಿಗೂ  ಅವು ಗೊತ್ತಿರಲಿಲ್ಲ.

ರಿಲಿಜನ್ನುಗಳ ಸಮಸ್ಯೆಯನ್ನು ಬಗೆಹರಿಸಲಿಕ್ಕೆ ಹುಟ್ಟಿಕೊಂಡ ಸೆಕ್ಯಲರಿಸಂ ಭಾರತದಂಥ ದೇಶಗಳಲ್ಲಿ ರಿಲಿಜನ್ನಲ್ಲದ ಸಂಪ್ರದಾಯಗಳಿಗೆ ಹೊಸ ಸಮಸ್ಯೆಯನ್ನು ಸೃಷ್ಟಿಸುತ್ತದೆ. ಮತಾಂತರದಂಥ ಸಂದರ್ಭದಲ್ಲಿ ಪ್ರಭುತ್ವವು ತಟಸ್ಥ ನಿರ್ಧಾರರಗಳನ್ನು ತೆಗೆದುಕೊಳ್ಳುವುದು ತಾರ್ಕಿಕವಾಗಿ ಸಾಧ್ಯವಾಗದ ಮಾತು. ಏಕೆಂದರೆ ರಿಲಿಜನ್ನುಗಳ ತಾತ್ವಿಕತೆಯ ಪ್ರಕಾರ ಅನ್ಯರನ್ನು ಮತಾಂತರಿಸುವುದು ಅವುಗಳ ಪವಿತ್ರ ಕರ್ತವ್ಯ. ಭಾರತೀಯ ಸಂಪ್ರದಾಯಗಳಲ್ಲಿ ಅವರವರ ಸಂಪ್ರದಾಯವನ್ನು ಪಾಲಿಸುವುದು ಅವರವರ ಧರ್ಮ. ರಿಲಿಜನ್ನುಗಳಿಗೆ ಪವಿತ್ರ ಕರ್ತವ್ಯವಾದುದು ಭಾರತೀಯ ಸಂಪ್ರದಾಯಗಳಿಗೆ ಅಧರ್ಮ. ಇವರೆಲ್ಲರನ್ನೂ ಒಟ್ಟುಸೇರಿಸಿ ಸಂವಿಧಾನಬದ್ಧವಾಗಿ ರಿಲಿಜನ್ನಿನ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿದರೆ ಮತಾಂತರ ಮಾಡುವ ರಿಲಿಜನ್ನಿಗೆ ಅನುಕೂಲವಷ್ಟೆ.    ಪರಿಸ್ಥಿತಿ ಹೀಗಿರುವಾಗ ರಿಲಿಜನ್ನಿನ ಮಾನದಂಡವನ್ನಿಟ್ಟುಕೊಂಡು ಈ ಸಮಾಜಕ್ಕೆ ನೀತಿಗಳನ್ನು ಅಳವಡಿಸಿಕೊಂಡಾಗ ಏನಾಗುತ್ತದೆ? ರಿಲಿಜನ್ನು ನಾಗರೀಕ ಸಮಾಜದ ಮೂಲ ಅರ್ಹತೆಯಾಗುತ್ತದೆ. ನಾಗರೀಕ ಸಮಾಜಕ್ಕೆ ಹಿಂದೂಯಿಸಂ ಎಂಬ ರಿಲಿಜನ್ನನ್ನು ಸೃಷ್ಟಿಸುವ ಒತ್ತಾಯವನ್ನು ಉಂಟುಮಾಡಿದಂತಾಗುತ್ತದೆ.  ಹಿಂದೂಯಿಸಂ ಎಷ್ಟೆಷ್ಟು ರಿಲಿಜನ್ನಿನ ಲಕ್ಷಣಗಳನ್ನು ರೂಢಿಸಿಕೊಳ್ಳುತ್ತದೆಯೋ ಅಷ್ಟಷ್ಟು ಅದಕ್ಕೆ ನ್ಯಾಯದ ಸಾಧ್ಯತೆ ತೆರೆಯುತ್ತದೆ. ಹಿಂದೂಗಳು ಭಾರತದ ಜನರನ್ನನೆಲ್ಲ ತಮ್ಮ ತೆಕ್ಕೆಗೆ ತಂದುಕೊಳ್ಳಲು ನೋಡುತ್ತಾರೆ, ಅದಕ್ಕೆ ಏಕರೂಪವನ್ನು ನೀಡಲು ಪ್ರಯತ್ನಿಸುತ್ತಾರೆ, ಪುರಾಣಗಳ ಐತಿಹಾಸಿಕ ಸತ್ಯಗಳನ್ನು ಕುರಿತು ಪ್ರತಿಪಾದಿಸುತ್ತಾರೆ, ಪೂಜಾಸ್ಥಳಗಳಿಗಾಗಿ ಹೊಡೆದಾಡುತ್ತಾರೆ. ಅವರಲ್ಲಿ ಮತಾಂತರ ಕಲ್ಪನೆಯೇ ಇಲ್ಲದ್ದರಿಂದ ಅದನ್ನು ತಡೆದು ತಮ್ಮ ರಿಲಿಜನ್ನನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಾರೆ. ತಮ್ಮ ಧರ್ಮಗ್ರಂಥಗಳಿಗೆ, ದೇವತೆಗಳಿಗೆ ಅವಮಾನವಾಯಿತು ಎಂದು ಹಲ್ಲೆ ಮಾಡುತ್ತಾರೆ, ಅನ್ಯ ರಿಲಿಜನ್ನುಗಳು ತಮ್ಮ ವೈರಿಗಳು, ಅವರಿಂದ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬುದಾಗಿ ಹೆದರುತ್ತಾರೆ. ಇವೆಲ್ಲವೂ ನಮ್ಮ ಸಂಪ್ರದಾಯಗಳು ತಮ್ಮ ಮೇಲೆ ರಿಲಿಜನ್ನನ್ನು ಆವಾಹಿಸಿಕೊಂಡಾಗ ಆಗುವ ಬದಲಾವಣೆಗಳು, ಹಾಗೂ ಸೆಕ್ಯುಲರ್ ರಾಜ್ಯವು ಅವರ ಸಲುವಾಗಿ ನ್ಯಾಯ-ಅನ್ಯಾಯಗಳ ಹೊಸದೊಂದು ಶಬ್ದಕೋಶವನ್ನೇ ಸೃಷ್ಟಿಸುತ್ತದೆ. ಈ ಶಬ್ದಕೋಶದಿಂದ ಹೊರಬರದೇ ಕೋಮುವಾದದ ವಿಮಶರ್ೆಯು ತನ್ನ ವಿರೋಧಾಭಾಸದಿಂದ ಕಳಚಿಕೊಳ್ಳಲಾರದು.

3

ಭಾರತದಲ್ಲಿ ಹಿಂದೂಯಿಸಂ ಎಂಬ ರಿಲಿಜನ್ನು ಇಲ್ಲ, ಬದಲಾಗಿ ಇದೊಂದು ಬಹುಸಂಪ್ರದಾಯಗಳ ದೇಶ ಎಂಬುದಾಗಿ ಭಾವಿಸಿಕೊಂಡಾಗ ಸೆಕ್ಯುಲರಿಸಂ ಸಮಸ್ಯೆ ಹೇಗೆ ನಮ್ಮ ಅರಿವಿಗೆ ಬರುತ್ತದೆ ಎಂಬುದನ್ನು ನೋಡೋಣ:

ಈ ಸೆಕ್ಯುಲರಿಸಂನ ಕುರಿತು ಹೇಳುವಾಗ ನಾವು ರಿಲಿಜನ್ನನ್ನು ಧರ್ಮ ಎಂಬುದಾಗಿ ಭಾಷಾಂತರಿಸಿಕೊಂಡೆವು. ಹಾಗೂ ರಾಜಕೀಯದಲ್ಲಿ ಧರ್ಮವನ್ನು ಬೆರೆಸಬಾರದು ಎಂಬುದಾಗಿ ಪ್ರತಿಪಾದಿಸುತ್ತಿದ್ದೇವೆ. ಈ ದಿವ್ಯ ಸಂದೇಶದ ಮೂಲಕ ಸೆಕ್ಯುಲರಿಸಂ ಎಂಬ ಮೌಲ್ಯವನ್ನು ನಮ್ಮ ದೇಶದ ಜನಸಾಮಾನ್ಯರಿಗೆ ಪರಿಚಯಿಸಿ ಅವರನ್ನು ನಾಗರೀಕರನ್ನಾಗಿ ಮಾಡುತ್ತಿದ್ದೇವೆ ಎಂಬುದಾಗಿಯೂ ಭಾವಿಸಿಕೊಂಡಿದ್ದೇವೆ. ಆದರೆ ನಾವು ಕೆಲವೇ ಕೆಲವು ವಿದ್ಯಾವಂತರು ಧರ್ಮ ಎಂಬ ಪದವನ್ನು ರಿಲಿಜನ್ನಿಗೆ ಪ್ರತಿಯಾಗಿ ಬಳಸುತ್ತೇವೆ, ಅಷ್ಟಾಗಿಯೂ ನಮ್ಮಲ್ಲೇ ಬಹುತೇಕ ಜನರಿಗೆ ರಿಲಿಜನ್ನೆಂದರೆ ಏನೆಂಬುದು ತಿಳಿದಿಲ್ಲ. ಸಾಮಾನ್ಯ ಜನರು ಧರ್ಮವನ್ನು ಒಂದು ಮತೀಯ ಸಂಸ್ಥೆ ಎಂಬಂತೆ ನೋಡುವುದಿಲ್ಲ. ಈ ಕುರಿತು ನನ್ನ ಅನುಭವವನ್ನು ಹೇಳುತ್ತೇನೆ. ಈಚೆಗೆ ಕೆಲವು ವರ್ಷಗಳಿಂದ ಜಾತಿಪದ್ಧತಿಯ ಕುರಿತು ನಾವೊಂದಿಷ್ಟು ಜನರು ಕ್ಷೇತ್ರಕಾರ್ಯ ಮಾಡುತ್ತಿದ್ದೇವೆ. ಕರ್ನಾಟಟಕದ ವಿಭಿನ್ನ ಭಾಗಗಳ ಸುಮಾರು ಸಾವಿರ ಜನರಿಗೆ ಧರ್ಮ ಎಂದರೇನು ಎಂಬುದಾಗಿ ಪ್ರಶ್ನಿಸಿದೆವು. ಅದರಲ್ಲಿ 5% ಜನರು ಮಾತ್ರ ಹಿಂದೂ, ಮುಸ್ಲಿಂ ಎಂಬ ಉತ್ತರ ನೀಡಿದರು (ಅವರೆಲ್ಲ ವಿದ್ಯಾವಂತರೇ). ಉಳಿದವರು (ವಿದ್ಯಾವಂತರನ್ನೂ ಒಳಗೊಂಡು) ಧರ್ಮವೆಂದರೆ ಒಳ್ಳೆಯ ಕಾರ್ಯಗಳು, ದಾನ ಮಾಡುವುದು, ಉಪಕಾರ ಮಾಡುವುದು, ಇತ್ಯಾದಿಯಾಗಿಯೇ ತಿಳಿಸಿದ್ದಾರೆ. ಅಂದರೆ ಈ ಧರ್ಮಕ್ಕೂ ರಿಲಿಜನ್ನಿಗೂ ಸಂಬಂಧವಿರುವುದಿರಲಿ, ಅದಕ್ಕೂ ದೇವರಿಗೂ ಕೂಡ ಸಂಬಂಧ ಕಲ್ಪಿಸಲಾಗುವುದಿಲ್ಲ. ಅದು ಮನುಷ್ಯನ ಒಳ್ಳೆಯ ಕೆಲಸಗಳಿಗೆ ಸಂಬಂಧಿಸಿದೆ. ಈ ಉದಾಹರಣೆಯು ಹಳ್ಳಿಯ ಅಥವಾ ಮಧ್ಯಮವರ್ಗದ ಹಿನ್ನೆಲೆಯಿಂದ ಬಂದ ಯಾವ ಭಾರತೀಯನಿಗೂ ಆಶ್ಚರ್ಯ ತರುವುದಿಲ್ಲ. ನಮ್ಮ ಸಂಸೃತ ಹಾಗೂ ದೇಶೀ ಭಾಷೆಯ ಸಾಹಿತ್ಯದಲ್ಲೂ ಇದಕ್ಕಿಂತ ವ್ಯತಿರಿಕ್ತವಾದ ಅಭಿಪ್ರಾಯ ಹೊರಡುವುದಿಲ್ಲ. ಹೀಗಿರುವಾಗ ರಾಜಕೀಯದಲ್ಲಿ ಧರ್ಮ ಇರಬಾರದು ಎಂಬುದಾಗಿ ಭಾಷಣ ಮಾಡಿದರೆ ಈ ಸೆಕ್ಯುಲರ್ ಭಾಷೆಗೆ ಮನಸೋತು ಜನ ನಮ್ಮೊಂದಿಗೆ ಓಡಿಬಂದುಬಿಡುತ್ತಾರೆ ಎಂಬುದಾಗಿ ಅದು ಹೇಗೆ ತಾನೆ ಭಾವಿಸಿಕೊಳ್ಳುತ್ತೀರಿ?

ಸಾಧಾರಣವಾಗಿ ಈ ಧರ್ಮ ನಿರಪೇಕ್ಷ ಎಂಬಂಥ ಶಬ್ದಗಳು, ಹಿಂದೂಧರ್ಮ, ಮುಸ್ಲಿಂ ಧರ್ಮ ಎಂಬಂಥ ಶಬ್ದಗಳು, ಹಾಗೂ ರಾಜಕೀಯದಲ್ಲಿ ಧರ್ಮವನ್ನು ಬೆರೆಸಬಾರದು ಎಂಬಂಥ ಮಾತುಗಳನ್ನು ದಿನನಿತ್ಯ ಆಡಲಾಗುತ್ತಿದೆ. ಇಲ್ಲೆಲ್ಲ ಧರ್ಮ ಎಂಬುದು ರಿಲಿಜನ್ ಎಂಬ ಇಂಗ್ಲೀಷ್ ಪರಿಭಾಷೆಯನ್ನು ಸೂಚಿಸುತ್ತಿದೆ ಎಂಬುದು ಮೇಲಿನ ಚರ್ಚೆಗಳಿಂದ ಹೊಲಬಾಗುತ್ತದೆ. ಈಗ ಬಹುಶಃ ಪಶ್ಚಿಮದಲ್ಲಿ ಈ ಪರಿಕಲ್ಪನೆ ಹಾಗೂ ಕಾರ್ಯಕ್ರಮವು ಬೆಳೆದು ಬಂದ ಬಗೆ ಚೆನ್ನಾಗಿ ಅರ್ಥವಾಗಬಹುದು. ರಾಜಕೀಯದಲ್ಲಿ ರಿಲಿಜನ್ ಎಂಬುದೊಂದು ಸಂಸ್ಥೆಯು ಹಸ್ತಕ್ಷೇಪ ಮಾಡಬಾರದು ಎಂಬುದು ಮೂಲ ವಾದ. ಪಶ್ಚಿಮದಲ್ಲಿ ಈ ಸಂಸ್ಥೆಗೂ ರಾಜಕೀಯಕ್ಕೂ ಒಂದು ವಿಶಿಷ್ಟವಾದ ಸಂಬಂಧವು ಬೆಳೆದುಬಂದಿದೆ. ಈ ರಿಲಿಜನ್ ಎಂಬುದು ತಾನು ಈ ಪ್ರಪಂಚವನ್ನು ಸೃಷ್ಟಿಸಿದ ಸತ್ಯವಾದ ದೇವನ (ಗಾಡ್) ಸಂಸ್ಥೆ ಎಂದುಕೊಳ್ಳುತ್ತದೆ. ಅವನದೇ ಶಾಶ್ವತವಾದ, ನಿಜವಾದ, ಸರಿಯಾದ ವ್ಯವಸ್ಥೆ, ಅದನ್ನು ಬಿಟ್ಟು ಈ ಪ್ರಪಂಚದಲ್ಲಿ ಮನುಷ್ಯರು ಸೃಷ್ಟಿಸಿಕೊಂಡಿರುವ ಈ ಪ್ರಭುತ್ವಗಳು ಸರಿಯಾದ ವ್ಯವಸ್ಥೆಗಳಾಗಲು ಸಾಧ್ಯವೇ ಇಲ್ಲ. ಅಂದರೆ ಕ್ರಿಶ್ಚಿಯನ್ ಮತವನ್ನು ಅವಲಂಬಿಸದ ಪ್ರಭುತ್ವವು ಸರಿಯಾದ ಪ್ರಭುತ್ವವೇ ಅಲ್ಲ ಎಂದು ಮಧ್ಯಕಾಲದಲ್ಲಿ ಬಿಂಬಿಸಲಾಗಿತ್ತು. ಹಾಗೂ ಮಧ್ಯಕಾಲದಲ್ಲಿನ ಪ್ರಭುತ್ವಗಳೆಲ್ಲ ಕ್ರೈಸ್ತ ಮತದ ಪ್ರಭುತ್ವಕ್ಕೆ ಒಳಪಟ್ಟಿದ್ದವು. ಈ ಪ್ರಕ್ರಿಯೆಯಲ್ಲಿ ಮನುಷ್ಯ ಪ್ರಭುತ್ವವು ಸೆಕ್ಯುಲರ್(ರಿಲಿಜನ್ನು ಇಲ್ಲದ) ಪ್ರಪಂಚವೆಂದು ರಿಲಿಜನ್ನಿನ ಪ್ರಪಂಚಕ್ಕೆ ವಿರುದ್ಧವಾಗಿ ಗುರುತಿಸಲ್ಪಟ್ಟಿತು. ಹಾಗಾಗಿ ಯುರೋಪಿನಲ್ಲಿ ಈ ವಿವಾದವು ಅಲ್ಲಿಯದೇ ಆದ ಒಂದು ಐತಿಹಾಸಿಕ  ಒತ್ತಡದಿಂದ ಹುಟ್ಟಿಕೊಂಡಿವೆ. ಅದು ಪೋಪ/ಚರ್ಚ್ ಮತ್ತು  ರಾಜರ ನಡುವಿನ ಹಣಾಹಣಿಯಾಗಿದೆ. ಆಧುನಿಕ ಕಾಲದಲ್ಲಿ ಯುರೋಪಿನಲ್ಲಿ ಸೆಕ್ಯುಲರಿಸಂ ಎಂಬ ಲೋಕದೃಷ್ಟಿಯು ಪ್ರಚಾರದಲ್ಲಿ ಬಂದಿತು. ಈ ಬೆಳವಣಿಗೆಗಳಾಗುವಲ್ಲಿ ಪ್ರೊಟೆಸ್ಟಾಂಟಿಸಂ, ಜ್ಷಾನೋದಯ ಇತ್ಯಾದಿ ಅನೇಕ ಹಿನ್ನೆಲೆಗಳಿವೆ ಹಾಗೂ ಈ ಸೆಕ್ಯುಲರಿಸಂ ಅನೇಕ ಆಧುನಿಕ ಕಾರ್ಯಕ್ರಮಗಳ ಒಂದು ಸಂಹಿತೆಯಾಗಿದೆ. ಆ ಪ್ರಕಾರ ರಿಲಿಜನ್ನಿನ ಸಂಸ್ಥೆಯು ಮನುಷ್ಯನ ಪ್ರಗತಿಗೆ ಮಾರಕವೆಂದು ಗುರುತಿಸಲಾಯಿತು. ಆಧುನಿಕ ಕಾಲದಲ್ಲಿನ ಐರೋಪ್ಯ ಸೆಕ್ಯುಲರ್ ಪ್ರಜಾಪ್ರಭುತ್ವಗಳು ತಮ್ಮ ವ್ಯವಹಾರದಲ್ಲಿ ರಿಲಿಜನ್ನು ಹಸ್ತಕ್ಷೇಪ ಮಾಡಬಾರದೆಂದು ಪ್ರತಿಭಟಿಸಿದವು, ಆಧುನಿಕ ಪ್ರಭುತ್ವವು ಆಧುನಿಕ ಮೌಲ್ಯಗಳ ಪ್ರತಿಪಾದನೆಗಾಗಿ ಇರಬೇಕು, ರಿಲಿಜನ್ನಿನ ಆಧೀನದಲ್ಲಿ ಪ್ರಭುತ್ವವಿದ್ದರೆ ಪ್ರಭುತ್ವದ ಮಾನವವಾದೀ ಕಾರ್ಯಕ್ರಮಗಳು ಸಾಧ್ಯವಾಗುವುದಿಲ್ಲ, ಇದರ ಜೊತೆಗೆ ಈ ರಿಲಿಜನ್ನು ತನ್ನ ದೇವನೇ ಏಕಮೇವ ಸತ್ಯ, ಉಳಿದವರೆಲ್ಲ ಸುಳ್ಳು. ತನ್ನ ಪ್ರವಾದಿಯೇ ಸತ್ಯವಾದ ಸಂದೇಶವನ್ನು ತಿಳಿದವನು. ತಾನೇ ಸತ್ಯವಾದ ಮಾರ್ಗ, ಉಳಿದವರನ್ನೆಲ್ಲ ಮತಪರಿವರ್ತಿಸಿ ತನ್ನ ಮಾರ್ಗಕ್ಕೆ ಹಚ್ಚುವುದು ಪುಣ್ಯದ ಕೆಲಸ ಎಂದು ನಂಬಿತ್ತು. ಹಾಗೂ ಇದು ಎಲ್ಲಾ ಸೆಮೆಟಿಕ್ ರಿಲಿಜನ್ನುಗಳ ಲಕ್ಷಣವೂ ಆಗಿದೆ.   ಇಂಥ ಸನ್ನಿವೇಶದಲ್ಲಿ ಈ ಎಲ್ಲಾ ಮತಗಳೂ ಒಂದು ಪ್ರಭುತ್ವದ ಪ್ರಜೆಗಳಾಗಿ ಇರುವಾಗ, ಇವುಗಳಲ್ಲಿ ಯಾವುದೋ ಒಂದು ಮತವು ಪ್ರಭುತ್ವವನ್ನು ತನ್ನ ಕೈವಶ ಮಾಡಿಕೊಂಡರೆ ತೊಡಕುಗಳು ಸೃಷ್ಟಿಯಾಗುತ್ತವೆ. ಅಂದರೆ, ತಮ್ಮ ರಿಲಿಜನ್ನಿನ ಸತ್ಯವಾದ ಆಚರಣೆಯನ್ನು ಪ್ರತಿಪಾದಿಸದಿದ್ದರೆ ಅದು ನೀತಿಯುತ ಪ್ರಭುತ್ವವಾಗುವುದಿಲ್ಲ, ಪ್ರತಿಪಾದಿಸಲಿಕ್ಕೆ ಹೋದರೆ ಉಳಿದವುಗಳನ್ನು ಹತ್ತಿಕ್ಕಲೇ ಬೇಕು. ಹಾಗಾಗಿ, ರಿಲಿಜನ್ನಿನ ಹಿಡಿತದಿಂದ ಹೊರಬಂದ ಐರೋಪ್ಯ ಲಿಬರಲ್ ಪ್ರಭುತ್ವಗಳು ಈ ಸೆಕ್ಯುಲರಿಸಂ,  ರಿಲಿಜನ್ನಿನ ಟಾಲರೆನ್ಸ್ ( ಮತ ಸಹಿಷ್ಣುತೆ) ಇತ್ಯಾದಿಗಳನ್ನು ಮೌಲ್ಯಗಳನ್ನಾಗಿ ಗುರುತಿಸಿ ಅಳವಡಿಸಿಕೊಂಡವು. ರಿಲಿಜನ್ನು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು, ಪ್ರಭುತ್ವಗಳು ಸೆಕ್ಯುಲರ್ (ರಿಲಿಜನ್ ರಹಿತ) ಆಗಿರಬೇಕು ಎಂದವು. ಯುರೋಪಿನ ರಾಷ್ಟ್ರಗಳಲ್ಲಿ ಸೆಕ್ಯುಲರಿಸಂ ಎಂದರೆ ಪ್ರಭುತ್ವವು(ನಾಗರೀಕ ಸಮಾಜವನ್ನು ಒಳಗೊಂಡಂತೆ) ರಿಲಿಜನ್ನನ್ನು ದೂರ ಇಡಬೇಕು.

ನಮಗಿನ್ನೂ ರಾಜಕೀಯದಲ್ಲಿ ಧರ್ಮವನ್ನು ಬೆರೆಸಬಾರದು ಎಂಬ ವಾದದ ಸ್ಪಷ್ಟ ಕಲ್ಪನೆಯೇ ಆಗಿಲ್ಲ. ನಮ್ಮ ವಾದವು ಸ್ಥೂಲವಾಗಿ ಎರಡು ರೀತಿಯಲ್ಲಿರುತ್ತದೆ ಹಾಗೂ ಎರಡನೆಯದು ಮೊದಲನೆಯದನ್ನು ವಿರೋಧಿಸುತ್ತದೆ: 1)ರಾಜಕೀಯವು ರಿಲಿಜನ್ನಿನ ಹಿಡಿತದಿಂದ ತಪ್ಪಿಸಿಕೊಳ್ಳಬೇಕು, ಏಕೆಂದರೆ ರಿಲಿಜನ್ನು ಪ್ರಗತಿಪರ ಪ್ರಭುತ್ವಕ್ಕೆ ಅಡ್ಡಗಲ್ಲು. 2) ರಾಜಕೀಯವು ರಿಲಿಜನ್ನಿನ ಹಿಡಿತದಿಂದ ತಪ್ಪಿಸಿಕೊಳ್ಳಬೇಕು, ಏಕೆಂದರೆ ಇಲ್ಲದಿದ್ದಲ್ಲಿ ಅಲ್ಪಸಂಖ್ಯಾತ ರಿಲಿಜನ್ನುಗಳಿಗೆ ಅಪಾಯವಾಗುತ್ತದೆ, ಕೋಮು ಸಾಮರಸ್ಯ ಹಾಳಾಗುತ್ತದೆ. ನಮ್ಮಲ್ಲಿ ರಿಲಿಜನ್ನು ಎಂಬ ಸಂಸ್ಥೆಯೇ ಇಲ್ಲದಿದ್ದ ಮೇಲೆ ನಮ್ಮ ರಾಜಕೀಯವು ಯಾವ ರಿಲಿಜನ್ನಿನ ಹಿಡಿತದಿಂದ, ಏಕಾಗಿ ದೂರವಿರಬೇಕು? ಆಗ ನಾವು ಕೆಲವೊಂದು ಧಾರ್ಮಿಕ ಆಚರಣೆಗಳನ್ನು ಉದಾಹರಿಸುತ್ತೇವೆ: ರಾಜಕಾರಣಿಗಳು ಸಾರ್ವಜನಿಕವಾಗಿ ಪೂಜೆ ಮಾಡುವುದು, ತೆಂಗಿನಕಾಯಿ ಒಡೆಯುವುದು, ಹೋಮ ಮಾಡುವುದು, ದೇವಾಲಯಗಳಿಗೆ ಮಠಮಾನ್ಯಗಳಿಗೆ ಭೇಟಿ ನೀಡುವುದು, ಇತ್ಯಾದಿ. ಇವೆಲ್ಲ ಮೂಢನಂಬಿಕೆಗಳಾಗಿದ್ದು ಪ್ರಗತಿವಿರೋಧಿಯಾಗಿವೆ, ಹಾಗೂ ಇವು ರಿಲಿಜನ್ನಿನ ಆಚರಣೆಗಳಾಗಿದ್ದು ಅನ್ಯ ರಿಲಿಜನ್ನುಗಳಿಗೆ ಪ್ರಚೋದನಾಕಾರಿಯಾಗಿವೆ.  ಈ ಆಚರಣೆಗಳು ಹೇಗೆ ಪ್ರಗತಿವಿರೋಧಿಯಾಗಿವೆ ಎಂಬ ವಿಷಯವನ್ನು ಪುರೋಹಿತಶಾಹಿಯ ಕಲ್ಪನೆಯನ್ನು ಉಪಯೋಗಿಸಿ ಸಮರ್ಥಿಸಲಾಗುತ್ತದೆ. ಆದರೆ ಎರಡನೆಯ ವಿಷಯಕ್ಕೆ ಬಂದಾಗ ಸೆಕ್ಯುಲರ್ ವಾದಿಗಳು ಅಲ್ಪಸಂಖ್ಯಾತರ ಪರವಾಗಿ ನಿಂತುಕೊಳ್ಳಬೇಕಾದ ವಿಪರ್ಯಾಸ ಸೃಷ್ಟಿಯಾದುದರಿಂದ ಅವರ ಮೊದಲನೆಯ ವಾದ ಢೋಂಗಿ ಸೆಕ್ಯುಲರಿಸಂ ಆಗಿ ಮಾರ್ಪಡುತ್ತದೆ. ನೆಹರೂ ಕಾಲದ ನಂತರದ ರಾಜಕೀಯದಲ್ಲಿ ಐರೋಪ್ಯ ಅರ್ಥದ ಸೆಕ್ಯುಲರಿಸಂ ಎಂಬ ಪರಿಭಾಷೆಯನ್ನು ಕಸದಬುಟ್ಟಿಗೆ ಹಾಕಿಯಾಗಿದೆ. ಏಕೆಂದರೆ ಇದೇ ರಾಜಕಾರಣಿಗಳು ದೇವಾಲಯಗಳಿಗೆ ಹೋದಷ್ಟೇ ಗಂಭೀರವಾಗಿ ಚರ್ಚೆಗೂ ಹೋಗುತ್ತಾರೆ, ಮಸೀದಿಗೂ ಹೋಗುತ್ತಾರೆ. ಹಾಗಾಗಿಯೇ ಸರ್ವಧರ್ಮಸಮಭಾವ ಎಂಬ ಎಂಬ ನಿರೂಪಣೆಯು ಚಾಲ್ತಿಯಲ್ಲಿ ಬಂದಿದೆ. ಅದು ಅವರಿಗೆ ಅರ್ಥವಾಗುತ್ತದೆ, ಸಾಧ್ಯವಾಗುತ್ತದೆ. ಇಂದು ರಾಜಕೀಯದಲ್ಲಿ ಚಾಲ್ತಿಯಲ್ಲಿರುವ ಸಮಸ್ಯೆಯೆಂದರೆ ಕೆಲವು ರಾಜಕೀಯ ಪಕ್ಷಗಳು ಕೆಲವು ಸಮುದಾಯಗಳನ್ನು ಓಲೈಸುತ್ತಿವೆ, ಕೆಲವನ್ನು ಕಡೆಗಣಿಸುತ್ತಿವೆ ಎಂಬಂಥ ಸಮಸ್ಯೆ.

ಇನ್ನು ರಿಲಿಜನ್ನನ್ನು ನಾಗರೀಕ ಸಮಾಜದಿಂದ (ಸಿವಿಲ್ ಸೊಸೈಟಿ) ಅಥವಾ ಸಾರ್ವಜನಿಕ ಜೀವನದಿಂದ ಹೊರಗಿಡಬೇಕೆನ್ನುವ ವಿಚಾರಕ್ಕೆ ಬಂದರೆ, ಏಕೆ ಹೊರಗಿಡಬೇಕು? ಎಂಬ ಪ್ರಶ್ನೆಗೂ ಈ ಮೇಲೆ ಉಲ್ಲೇಖಿಸಿದ ಎರಡು ವಾದಗಳೆ ಎದುರಾಗುತ್ತವೆ. ನಾವು ಕೋಮುಸೌಹಾರ್ದತೆಯನ್ನೇ ಉದ್ದೇಶಿಸಿದ್ದಲ್ಲಿ, ಇಂಥ ಸಾರ್ವಜನಿಕ ಆಚರಣೆಗಳೇ ಸೌಹಾರ್ದತೆಯ ಸಾಧನಗಳಾಗಿವೆ ಎಂದಾದಲ್ಲಿ ನಮ್ಮ ನಿಲುವು ಏನು? ಇಲ್ಲೂ ಕೂಡಾ ಎರಡನೆಯ ವಾದವು ಮೊದಲನೆಯ ವಾದಕ್ಕೆ ತೊಡಕಾಗುತ್ತದೆ. ಸಾರ್ವಜನಿಕ ಜೀವನವು ಸೆಕ್ಯುಲರ್ ಆಗಿರಬೇಕು ಹಾಗೂ ರಿಲಿಜನ್ನು ಖಾಸಗಿ ಜೀವನಕ್ಕೆ ಸೀಮಿತವಾಗಿರಬೇಕು, ಇಲ್ಲದಿದ್ದರೆ ರಿಲಿಜನ್ನುಗಳ ನಡುವೆ ಸಂಘರ್ಷ ಹುಟ್ಟಿಕೊಳ್ಳುತ್ತದೆ ಎನ್ನಲಾಗುತ್ತದೆ.  ಪೂಜೆಯನ್ನೋ, ಉಡುಗೆ ತೊಡುಗೆಯನ್ನೋ, ಸಾಂಸ್ಕೃತಿಕ ಆಚರಣೆಗಳನ್ನೋ ರಿಲಿಜನ್ನಿನ ಸಂಕೇತಗಳೆಂದು ಗುರುತಿಸಲಾಗಿರುತ್ತದೆ. ಭಾರತೀಯರಿಗೆ ಇವು ಯಾವವೂ ರಿಲಿಜನ್ನಿನ ಸಂಕೇತಗಳಲ್ಲ. ಇಂಥವನ್ನೆಲ್ಲ ಸಾರ್ವಜನಿಕ ಜೀವನದಲ್ಲಿ ಧಾರಾಳವಾಗಿ ಬಳಸುವ ನಮ್ಮ ಪ್ರಭುತ್ವವು ಸೆಕ್ಯುಲರ್ ರಾಷ್ಟ್ರಗಳು ಎದುರಿಸಲೇಬೇಕಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂಬುದನ್ನು ಗಮನಿಸಿ. ಉದಾಹರಣೆಗೆ ಕೆಲವು ವರ್ಷಗಳ ಹಿಂದೆ ಫ್ರಾನ್ಸಿನ ಸ್ಕೂಲುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತಲೆಗೆ ಸ್ಕಾರ್ಫ ಧರಿಸಿ ಬರುವ ಕುರಿತು ಅಲ್ಲಿನ ಸೆಕ್ಯುಲರ್ ಸರಕಾರಕ್ಕೆ ಬಗೆಹರಿಯದ ಸಮಸ್ಯೆ ಹುಟ್ಟಿತು. ಈ ಸ್ಕಾರ್ಫಗಳು ರಿಲಿಜನ್ನಿನ ಸಂಕೇತಗಳಾಗಿದ್ದವು. ಪಾಶ್ಚಾತ್ಯ ಸೆಕ್ಯುಲರ್ ಪ್ರಭುತ್ವಗಳಿಗೆ ಇಷ್ಷು ಕ್ಷುಲ್ಲಕ ವಿಷಯವೇ ಸಮಸ್ಯಾತ್ಮಕವಾಗುತ್ತದೆ. ಇದು ಕ್ರೈಸ್ತ ಹಾಗೂ ಇಸ್ಲಾಂ ಮತಗಳ ನಡುವಿನ ಸಂಘರ್ಷಕ್ಕೆ ಇಂಬುಕೊಡುವ ವಿಷಯ. ಈ ಶೈಲಿಯ ಸೆಕ್ಯುಲರಿಸಂ ನಮಗೆ ಸೌಹಾರ್ದತೆ ಕಲಿಸಬೇಕೆಂದು ನಂಬಿದ್ದೇವೆ! ಭಾರತದಲ್ಲಿ ಒಂದೊಂದು ಸಮುದಾಯವೂ ಒಂದೊಂದು ಲಾಂಛನಗಳನ್ನು, ವೇಷಗಳನ್ನು ಧರಿಸಿಯೇ ಸಾರ್ವಜನಿಕ ಸ್ಥಳವನ್ನು ಪ್ರವೇಶಿಸುತ್ತದೆ. ಇಂಥ ಲಾಂಛನಗಳ ಕುರಿತು ಸೆಕ್ಯುಲರ್ ವಾದಿಗಳೇ ತೊಂದರೆ ಪಟ್ಟುಕೊಳ್ಳುವುದನ್ನು ನೋಡುತ್ತೇವೆಯೇ ವಿನಃ ಸಂಪ್ರದಾಯಸ್ಥರಲ್ಲ. (ಕೆಲವರ ಅಭಿಪ್ರಾಯದ ಪ್ರಕಾರ ಸಹಿಷ್ಣುತೆಗಾಗಿ ಹೋರಾಡುತ್ತಿರುವ ಸೆಕ್ಯುಲರ್ ವಾದಿಗಳೇ ತಮ್ಮ ಸುತ್ತಲಿನ ಸಮಾಜದ ಕುರಿತು, ಸಾಮಾನ್ಯರ ನಂಬಿಕೆಗಳ ಕುರಿತು ಸಹಿಷ್ಣುತೆಯನ್ನು ಹೊಂದಿಲ್ಲ)  ಉದಾಹರಣೆಗೆ, ಎಲ್ಲಾ ಕಛೇರಿಗಳಲ್ಲೂ ಶುಕ್ರವಾರ ಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ಅದನ್ನು ಮುಸ್ಲಿಮ್ ಸಿಬ್ಬಂದಿಗಳೂ ಖುಷಿಯಿಂದ ಆಚರಿಸುತ್ತಾರೆ. ಈ ಸಂಪತ್ತಿನ ದೇವಿಯ ಕುರಿತು ಅವರಿಗೂ ಆಸಕ್ತಿ, ಆಕರಾಸ್ಥೆ ಇರುವುದನ್ನು ನೋಡಿದ್ದೇನೆ. ಅದಕ್ಕೂ ಹೆಚ್ಚಾಗಿ ಆಫೀಸು ವೇಳೆಯಲ್ಲಿ ಕೆಲಸವಿಲ್ಲದೇ ಫಳಾರ ಮಾಡುವ ಕುರಿತಂತೂ ಯಾರಿಗೂ ಅಸಂತೋಷವಿರಲು ಕಾರಣವಿಲ್ಲ. ಆಫೀಸು ಕೆಲಸವನ್ನು ಹಾಳುಮಾಡಿ ಇಂಥ ಆಚರಣೆಗಳನ್ನು ನಡೆಸಬೇಕೆ ಎಂಬುದು ಬೇರೆಯದೇ ಆದ ವಿಷಯ. ಆದರೆ ಅದೊಂದು ಹಿಂದೂ ಧಾರ್ಮಿಕ ಆಚರಣೆ, ಹಾಗಾಗಿ ಅದನ್ನು ಸೆಕ್ಯುಲರ್ ಪ್ರಭುತ್ವದಲ್ಲಿ ಸಾರ್ವಜನಿಕವಾಗಿ ಆಚರಿಸಬಾರದು, ಅಥವಾ ಅದು ಮುಸ್ಲಿಂ ಭಾವನೆಗೆ ನೋವುಂಟುಮಾಡುತ್ತದೆ ಎಂದೆಲ್ಲ ವಾದಿಸುವಾಗ ನಾವು ಎರಡು ತಪ್ಪುಗಳನ್ನು ಮಾಡುತ್ತೇವೆ: ಮೊದಲನೆಯದೆಂದರೆ, ಈ ಸಂದರ್ಭಕ್ಕೆ ಪ್ರಸ್ತುತವಲ್ಲದ ಒಂದು ಅಸಹಿಷ್ಣುವಾದ ಇಸ್ಲಾಂ ಮತವನ್ನು ಇಲ್ಲಿ ಬಿಂಬಿಸುತ್ತಿದ್ದೇವೆ. ಎರಡನೆಯದಾಗಿ, ಅನ್ಯದೇವತೆಗಳನ್ನು ಪೂಜಿಸಿದರೆ ನೋವಾಗುವ ವಿಷಯವು  ಹಿಂದೂ ಸಂಪ್ರದಾಯಗಳ ಜಗತ್ತಿಗೆ ಗೊತ್ತೇ ಇಲ್ಲ. ಅವರ ಆ (ಅಮಾಯಕ) ಜಗತ್ತಿನಲ್ಲಿ ಮುಸ್ಲಿಮರಿಗೆ ತಮ್ಮ ದೇವರುಗಳನ್ನು ಕಂಡರಾಗುವುದಿಲ್ಲ ಎಂಬ (ಅವಾಸ್ತವಿಕವಾದ) ಕಹಿಯನ್ನು ಬಿತ್ತಿದಂತಾಗುತ್ತದೆ. ಇಂಥ ಪ್ರಯತ್ನಗಳ ಫಲವಾಗಿ ಪರಸ್ಪರರ ದೇವತೆಗಳು, ಆಚರಣೆಗಳು ಹಾಗೂ ಸಂಕೇತಗಳ ಕುರಿತು ಅಸಹಿಷ್ಣುತೆಯನ್ನು ಬೆಳೆಸಿದಂತಾಗುತ್ತದೆ. ಇದು ಸೆಕ್ಯುಲರ್ ಕಾರ್ಯಕ್ರಮದ ಗುರಿ ಎಂಬುದನ್ನಂತೂ ಯಾವ ಸೆಕ್ಯುಲರ್ ವಾದಿಗಳೂ ಒಪ್ಪಲಾರರು. ಅಷ್ಟಕ್ಕೂ ಕಾರ್ಲ ಮಾಕ್ರ್ಸನ ಆನ್ ಜ್ಯೂಯಿಶ್ ಕ್ವೆಶ್ಚನ್ ಲೇಖನವು ತೋರಿಸುವಂತೆ ಮನುಷ್ಯವಾಸ್ತವವಾಗಿ ರಿಲಿಜನ್ನನ್ನು ಇಟ್ಟುಕೊಂಡು ಸಾರ್ವಜನಿಕ ನಾಗರೀಕ ಸಮಾಜದಲ್ಲಿ ರಿಲಿಜನ್ನನ್ನು ಉಚ್ಛಾಟಿಸಬೇಕು ಎಂಬುದು ಒಂದು ಮಿಥ್ಯೆ ಅಷ್ಟೆ. ಈಗ ನಮ್ಮ ಮುಂದೆ ಬರುವ ಪ್ರಶ್ನೆಯೆಂದರೆ ಸತ್ಯಗಳನ್ನಿಟ್ಟುಕೊಂಡು ಸಹಜವಾಗಿ ಬಾಳಲು ಸಾಧ್ಯವಿರುವಾಗ ಅಂಥ ಮಿಥ್ಯೆಗಳನ್ನು ಇಟ್ಟುಕೊಂಡು ಬಡಿದಾಡುವ ಅಗತ್ಯವಿದೆಯೆ? ನಾವು ಕೋಮು ಸೌಹಾರ್ದದ ತಾಣಗಳೆಂದು ವೈಭವೀಕರಿಸುವ ಸ್ಥಳಗಳು ಇಂಥವೇ ಸಾರ್ವಜನಿಕ ಸ್ಥಳಗಳೇ ತಾನೆ? ನಾವು ಸಾರ್ವಜನಿಕ ಸ್ಥಳಗಳಲ್ಲಿ ಇಂಥ ಆಚರಣೆಗಳನ್ನು ಮಾಡುವ ಸಾಧ್ಯತೆ ಇರುವುದರಿಂದಲೇ ಅಂಥ ತಾಣಗಳು ಸೃಷ್ಟಿಯಾಗಿವೆ ಎಂಬುದು ಸರಳ ಸತ್ಯ.


4

ನಮ್ಮ ಇತಿಹಾಸದಲ್ಲಿ ಧರ್ಮ ಸಹಿಷ್ಣುತೆ ಎಂಬ ಪದದಿಂದಲೂ ಅರ್ಥವೇ ಹೊರಡುವುದಿಲ್ಲ. ರಿಲಿಜನ್ನಿನ ಸಂದರ್ಭದಲ್ಲಿ ಅದು ಅರ್ಥವಾಗುತ್ತದೆ. ಏಕೆಂದರೆ ಅನ್ಯರ ದೇವರು ಸತ್ಯವಲ್ಲ ಎಂದು ನಂಬಿದಾಗ ಅದರ ಮೇಲೆ ವಿಶ್ವಾಸ ಹುಟ್ಟುವುದಿಲ್ಲ. ಹಾಗಾಗಿ ಲಿಬರಲ್ ತತ್ವದ ಮೇಲೆ ನಂಬಿಕೆ ಇಟ್ಟ ನೀವು ಹೆಚ್ಚೆಂದರೆ ಅಂಥ ರಿಲಿಜನ್ನುಗಳನ್ನು ಸಹಿಸಿಕೊಳ್ಳುವ ಸದ್ಗುಣವನ್ನು ತೋರಬಹುದು. ಭಾರತೀಯ ಸಂದರ್ಭದಲ್ಲಿ ಹಲವು ದೇವರುಗಳನ್ನು, ಪೂಜೆಗಳನ್ನು ಏಕಕಾಲಕ್ಕೆ ಒಪ್ಪಿಕೊಳ್ಳಲಾಗಿರುತ್ತದೆ.  ಅನ್ಯ ಪೂಜಾಪಂಥಗಳನ್ನು ಸಹಿಸುವ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ?  ಹಾಗಾಗಿ ರಿಲಿಜಿಯಸ್ ಸಹಿಷ್ಣುತೆಎಂಬುದಕ್ಕೂ ನಮ್ಮಲ್ಲಿ ಶಬ್ದವಿಲ್ಲ. ಸೆಕ್ಯುಲರಿಸಂ ಗೆ ಮೂಲಭೂತವಾದ ಈ ಶಬ್ದಗಳ ಅಗತ್ಯವೇ ಇಲ್ಲದಂತೆ ನಮ್ಮ ಸಂಸ್ಕೃತಿ ಬೆಳೆದು ಬಂದಿದೆ. ಭಾರತೀಯ ಸಾಂಪ್ರದಾಯಿಕ ರಾಜ್ಯವ್ಯವಸ್ಥೆಗೆ ಇಂಥದೊಂದು ಸಮಸ್ಯೆಯೇ ಇರಲಿಲ್ಲ. ನಮ್ಮ ಆಧುನಿಕ ಕಲ್ಪನೆ ಏನೆಂದರೆ, ಇಂಥ ಹಿಂದಿನ ರಾಜ್ಯಗಳಿಗೆ ಸೆಕ್ಯುಲರಿಸಂ ಎಂಬುದೊಂದು ಉದಾತ್ತವಾದ ತತ್ವದ ತಳಹದಿ, ಕಾನೂನುಗಳು ಇರಲಿಲ್ಲ ಹಾಗಾಗಿ ಅಲ್ಲಿ ಮತೀಯ ದಮನಗಳು ನಡೆದರೆ ರಕ್ಷಕರೇ ಇರಲಿಲ್ಲ. ಹಾಗಾಗಿ ನಮ್ಮ ಆಧುನಿಕ ಪ್ರಭುತ್ವ ಅದಕ್ಕಿಂತ ಒಳ್ಳೆಯದು. ಹೀಗೆ ಯೋಚಿಸುವಲ್ಲೂ ನಾವು ರಿಲಿಜನ್ನುಗಳ ವಾದವನ್ನೇ ಮುಂದಿಡುತ್ತಿದ್ದೇವೆ. ಏಕೆಂದರೆ ಒಂದು ಸಂಪ್ರದಾಯವು ಮತ್ತೊಂದು ದೇವತೆಯ ಪೂಜೆಯನ್ನು ಒಪ್ಪಿಕೊಳ್ಳಲು ಸಮಸ್ಯೆಯನ್ನೇ ಹೊಂದಿರದಿದ್ದರೆ, ಒಂದು ಪ್ರಭುತ್ವವು ಯಾವುದೋ ಒಂದು ಮತದ ಪ್ರತಿಪಾದನೆಯನ್ನೇ ಗುರಿಯಾಗಿಟ್ಟುಕೊಳ್ಳದಿದ್ದರೆ ಮತೀಯ ದಮನದ ಪ್ರಶ್ನೆಯೇ ಅಲ್ಲಿ ಉದ್ಭವಿಸುವುದಿಲ್ಲ. ಹೀಗೆ ಹೇಳಿದಾಕ್ಷಣ ಹಾಗಾದರೆ ನಮ್ಮ ಹಿಂದಿನ ರಾಜ್ಯಗಳು ಮತಪ್ರತಿಪಾದನೆಯನ್ನೇ ಮಾಡಲಿಲ್ಲವೆ? ಅಶೋಕನ ಸಾಮ್ರಾಜ್ಯದ  state religion ಬೌದ್ಧಮತವಾಗಿರಲಿಲ್ಲವೆ? ಗುಪ್ತರು ಬ್ರಾಹ್ಮಣ ಮತ ಪ್ರವರ್ತಕರಲ್ಲವೆ? ಚೋಳರು ವೈಷ್ಣವ ಮತವನ್ನು ಹತ್ತಿಕ್ಕಿದ್ದು ಸುಳ್ಳೆ? ವೀರಶೈವರು ಜೈನರ ದೇವಾಲಯಗಳ ಮೇಲೆ ನಡೆಸಿದ ಹಲ್ಲೆ ಮತ್ತೇನಂತೆ? ಎಂಬೆಲ್ಲ ವಾದಗಳು ಬರುತ್ತವೆ. ಹೇಗೆ ಇಂಥ ವಾದಗಳು ನಮ್ಮ ಇತಿಹಾಸದ ಅಪಾರ್ಥದಿಂದ ಹುಟ್ಟಿಕೊಂಡಿವೆ ಎಂಬುದನ್ನು ನೋಡೋಣ:

ಈ ಐತಿಹಾಸಿಕ ವಿವರಗಳನ್ನೆಲ್ಲ ಮೂಲತಃ ಇಂಗ್ಲೀಷಿನಲ್ಲಿ ಕಟ್ಟಿಕೊಡಲಾಯಿತು. ಇಂಥ ಇತಿಹಾಸವು ಕನ್ನಡಕ್ಕೆ ತರ್ಜುಮೆಯಾಗಿದೆ. ಇಂಥ ವಾದಗಳನ್ನು ಮಾಡುತ್ತಿರುವವರು ಮೂಲತಃ ಇಂಗ್ಲೀಷಿನಲ್ಲೋ ಇಲ್ಲ ಕನ್ನಡದಲ್ಲೋ ಅದನ್ನು ಓದಿರುತ್ತಾರೆ. ನಮ್ಮ ಇತಿಹಾಸದಲ್ಲಿ ಈ ರಿಲಿಜನ್, ಸ್ಟೇಟ್, ಟಾಲರೆನ್ಸ್, ಸೆಕ್ಟ್, ಮುಂತಾದ ಇಂಗ್ಲೀಷ್ ಶಬ್ದಗಳನ್ನೆಲ್ಲ ಬಳಸಲಾಗುತ್ತದೆ. ಅದರಲ್ಲಿರುವ ಸಮಸ್ಯೆಗಳೂ ಕೂಡಾ ಇತಿಹಾಸಕಾರರ ಗಮನಕ್ಕೆ ಬರುವುದಿಲ್ಲ, ಒಂದೊಮ್ಮ ಬಂದರೂ ಅವುಗಳನ್ನು ಪರಿಹರಿಸಲು ಅವರಿಗೆ ಅಸಾಧ್ಯ. ಉದಾಹರಣೆಗೆ, ಇತಿಹಾಸ ಪುಸ್ತಕಗಳಲ್ಲಿ ಕೆಲವು ರಾಜವಂಶಗಳಲ್ಲಿ ಗಂಡಂದಿರು ಬ್ರಾಹ್ಮಣ ರಿಲಿಜನ್ ಅನುಸರಿಸಿದ್ದರು, ಹೆಂಡತಿಯರು ಬೌದ್ಧ ರಿಲಿಜನ್ ಅನುಸರಿಸಿದ್ದರು ಎನ್ನಲಾಗುತ್ತದೆ. ಒಬ್ಬ ರಾಜನೇ ವಯುಕ್ತಿಕವಾಗಿ ಒಂದು ರಿಲಿಜನ್ನನ್ನು ಅನುಸರಿಸಿ ಉಳಿದ ರಿಲಿಜನ್ನುಗಳನ್ನು ಪೋಷಣೆ ಮಾಡುತ್ತಿದ್ದನು ಎನ್ನಲಾಗುತ್ತದೆ. ಕೆಲವು ರಾಜರು ರಿಲಿಜನ್ನಿನ ಪರಿವರ್ತನೆಗೆ ಕೂಡಾ ಒಳಗಾಗುತ್ತಾರೆ, ಆದರೂ ತಮ್ಮ ಮೂಲ ರಿಲಿಜನ್ನಿನಂದ ಹಿಡಿದು ಎಲ್ಲಾ ರಿಲಿಜನ್ನುಗಳ ದೇವತೆಗಳನ್ನೂ ಪೂಜಿಸುತ್ತಾರೆ ಎನ್ನುತ್ತೇವೆ. ನಮಗೆ ಇದು ಆಶ್ಚರ್ಯವನ್ನು ಕೂಡಾ ಮೂಡಿಸುವುದಿಲ್ಲ. ಏಕೆಂದರೆ ಅದರಲ್ಲಿ ಅರ್ಥವಾಗದಂಥದ್ದು ಏನೂ ಇಲ್ಲ.  ಆದರೆ ಪಾಶ್ಚಾತ್ಯರಿಗೆ ಇದು ಮತಸಹಿಷ್ಣುತೆಯಾಗಿ ಕಾಣಿಸುತ್ತದೆ. ಅವರ ಪ್ರಕಾರ ಮತ್ತೊಂದನ್ನು ಒಪ್ಪಿಕೊಂಡರೆ ನಮ್ಮದು ಸುಳ್ಳಾದಂತೆ ಆಗಬೇಕು, ಅಥವಾ ಅದು ಲಿಬರಲ್ ತತ್ವದ ಆಚರಣೆಯಾಗಿರಲೇ ಬೇಕು. ಆದರೆ ಒಂದು ಕ್ಷಣ ಯೋಚಿಸಿ. ರಿಲಿಜನ್ನು ನಾನು ಈ ಮೇಲೆ ಹೇಳಿದ ರೀತಿಯದೇ ಆದರೆ ಒಬ್ಬನೇ ಅಥವಾ ಒಂದೇ ಕುಟುಂಬದವರೇ ಹೀಗೆಲ್ಲ ಕಂಡ ಕಂಡ ರಿಲಿಜನ್ನುಗಳನ್ನು ಪಾಲಿಸುವುದು ಸರ್ವಥಾ ಸಾಧ್ಯವಿಲ್ಲ. ಅಂದರೆ ಈ ಜನರು ಪಾಲಿಸಿದ್ದು ರಿಲಿಜನ್ನೇ ಅಲ್ಲ. ಒಂದು ದೇವರನ್ನು ಅಥವಾ ವ್ರತವನ್ನು ಬಿಟ್ಟು ಮತ್ತೊಂದನ್ನು ಅನುಸರಿಸಿದರೆ ಅದು conversion ಆಗಲು ಸಾಧ್ಯವಿಲ್ಲ. conversion ಎಂದರೆ ಸುಳ್ಳು ಮತವನ್ನು ಅನುಸರಿಸುವವರನ್ನು ಅಥವಾ ಮತಹೀನರನ್ನು ಸತ್ಯವಾದ ಏಕೈಕ ಮತಕ್ಕೆ ಪರಿವರ್ತಿಸುವ ಪವಿತ್ರ ಕೆಲಸ. ಆದರೆ ಭಾರತದಲ್ಲಿ ಕಾಣುವುದು ಬೇರೆಯದೇ ವಾಸ್ತವವಾಗಿದೆ. ಒಂದು ದೇವತೆಯನ್ನು, ಮತವನ್ನು ಪುರಸ್ಕರಿಸಿದ ರಾಜರು ಉಳಿದೆಲ್ಲಾ ಮತಗಳನ್ನೂ ಅಷ್ಟೇ ಶೃದ್ಧೆಯಿಂದ ಪೋಷಿಸುತ್ತಿದ್ದರು ಎಂಬುದು ಒಂದು ಸಾಮಾನ್ಯ ಸತ್ಯ.   ಅಂದರೆ ಹೀಗೆ ಅನ್ಯ ದೇವತೆಗಳನ್ನು, ಸಂಪ್ರದಾಯಗಳನ್ನು ಒಪ್ಪಿಕೊಳ್ಳಲು ನಮ್ಮವರಿಗೆ ಹೇಗೆ ಸಾಧ್ಯವಾಯಿತು? ಏಕೆಂದರೆ, ರಿಲಿಜನ್ನಿನ ಬೋಧನೆ, ಅದರ ಸತ್ಯದ ಕುರಿತ ನಂಬಿಕೆ, ಅಥವಾ ನಮ್ಮ ಆಧುನಿಕ ಭಾಷೆಯಲ್ಲಿ ಹೇಳುವುದಾದರೆ ರಿಲಿಜನ್ನಿನ ಐಡಿಯಾಲಜಿ ಇಂಥ ಆಚರಣೆಗಳ ಹಿಂದೆ ಇಲ್ಲ. ಒಂದು ದೇವತೆಯನ್ನು ಪೂಜಿಸುವುದೆಂದರೆ ಆ ದೇವತೆಯನ್ನು ಕುರಿತಾದ ಒಂದು ಆಚರಣೆ ಅಷ್ಟೆ. ಅದರಿಂದ ಮತ್ತೊಂದು ದೇವತೆಯನ್ನು ಪೂಜಿಸದಿರುವ ನಿರ್ಬಂಧ ಉಂಟಾಗುತ್ತಿರಲಿಲ್ಲ.  ಅಂದರೆ ಅನುಸರಿಸುವವರ ಜೀವನದಲ್ಲಿ ಈ ಸಾಂಪ್ರದಾಯಿಕ ಆಚರಣೆಗಳ ಸ್ಥಾನಮಾನ ಹಾಗೂ ಪ್ರಭಾವಗಳು ಬೇರೆ ರೀತಿಯಲ್ಲೇ ಇದ್ದವು ಎಂಬುದನ್ನು ಗುರುತಿಸದಿದ್ದರೆ ನಮಗೆ ನಮ್ಮ ಇತಿಹಾಸವೂ ಅರ್ಥವಾಗುವುದಿಲ್ಲ. ಇಂಥ ಸಮಾಜದಲ್ಲಿ ಎರಡು ಸಾಂಪ್ರದಾಯಿಕ ಗುಂಪುಗಳ ನಡುವಿನ ಹೊಡೆದಾಟವನ್ನು ರಿಲಿಜಿಯಸ್ ಹೊಡೆದಾಟ ಎನ್ನಲು ಸಾಧ್ಯವಿಲ್ಲ.

ಈ ಹಿನ್ನೆಲೆಯಲ್ಲಿ ನಮ್ಮಲ್ಲಿ state religion ಗಳೂ ಇರಲಿಲ್ಲ ಎಂಬುದನ್ನು ಮನಗಾಣುತ್ತೇವೆ. ಒಬ್ಬ ರಾಜನು ಒಂದು ದೇವತೆಯನ್ನೇ ತನ್ನದು ಎಂದು ಭಾವಿಸಿಕೊಂಡಿದ್ದರೆ, ಅವನ ಹೆಂಡತಿಗಾಗಲೀ, ಪ್ರಜೆಗಳಿಗಾಗಲೀ ಅದು ನಿರ್ಬಂಧವನ್ನು ಸೃಷ್ಟಿಸುವ ವಿಚಾರವಾಗಲೇ ಬೇಕಿಲ್ಲ. ಪೂಜಾಚರಣೆಗಳ ಜೊತೆಗೆ, ವಿಭಿನ್ನ ವಿಚಾರಗಳನ್ನು ಪ್ರತಿಪಾದಿಸುವ ಮತಗಳೂ ಅಷ್ಟೆ. ಒಬ್ಬ ರಾಜನಿಗೆ ಒಂದು ಮತದಲ್ಲಿ ಶೃದ್ಧೆ ಮೂಡಿತು ಎಂದರೆ ಆತನ ರಾಜ್ಯವೆಲ್ಲ ಆ ಮತವನ್ನು ಅನುಸರಿಸುವ ನಿರ್ಬಂಧವಿಲ್ಲ. ಉದಾಹರಣೆಗೆ, ಬಿಳಗಿ ಅರಸರ ಶಾಸನಗಳಲ್ಲಿ ಘಂಟಣ್ಣೊಡೆಯ ಎಂಬ ಅರಸನ ಕಾಲದಲ್ಲಿ ಅರಸುಮನೆತನದ ಸ್ತ್ರೀಯರು ಲಿಂಗಾಯಿತ ಮಠಕ್ಕೆ ದಾನ ನೀಡುವುದು ಕಂಡುಬಂದರೆ ಆತನು ಜೈನರಿಗೆ ಆಶ್ರಯ ನೀಡಿದ್ದು ಕಂಡುಬರುತ್ತದೆ.  ಒಂದು ಶಾಸನದಲ್ಲಿ ಮಹಾನಾಡು ಸೆಟ್ಟಿಗಳು ಲಿಂಗಾಯತ ಮಠಕ್ಕೆ ದಾನಮಾಡುತ್ತಾರೆ ಹಾಗೂ ಈ ಶಾಸನದ ಅಂತ್ಯದಲ್ಲಿ ‘ಶ್ರೀ ಪಾಶ್ರ್ವನಾಥ’ ಎಂದು ಜಿನಸ್ತುತಿಯಿದೆ. ಅದನ್ನು ಮಾನ್ಯಮಾಡಿದವನು ಘಂಟಣ್ಣೊಡೆಯನೇ. ಇದು ಕೇವಲ ಕೌಟುಂಬಿಕ ಸಂಬಂಧಕ್ಕಷ್ಟೇ ಸೀಮಿತವಾಗಿಲ್ಲ, ಲಿಂಗಾಯಿತ ಮಠ ಹಾಗೂ ಜೈನರ ಸಂಬಂಧ ಕೂಡಾ ಇದರಲ್ಲಿ ವ್ಯಕ್ತವಾಗುತ್ತದೆ. ಘಂಟಣ್ಣೊಡೆಯನಿಗೇನೂ ಆಧುನಿಕ ಸೆಕ್ಯುಲರ್ ಪ್ರಭುತ್ವದ ರಾಜಕಾರಣಿಗಳಂತೆ ಜೈನರ ವೋಟುಗಳ ಅಗತ್ಯವೇನಿರಲಿಲ್ಲ.  ಅವನು ಪಾಲಿಸಿದ ರಾಜರ ಧರ್ಮ ಹಾಗಿತ್ತು ಹಾಗೂ ರಾಜತ್ವ ಮತ್ತು ವಿಭಿನ್ನ ಸಂಪ್ರದಾಯಗಳೆರಡೂ ಈ ನೀತಿಯಲ್ಲೇ ತಮ್ಮ ಅಸ್ತಿತ್ವವನ್ನು ಹಾಗೂ ಒಳಿತನ್ನು ಕಂಡುಕೊಂಡಿದ್ದವು.  ಈ ಮೂಲಭೂತ ಕಾರಣಕ್ಕಾಗೇ ರಾಜರು ಎಲ್ಲಾ ಪೂಜಾಚರಣೆಗಳನ್ನು, ಮತಗಳನ್ನು ಪೋಷಿಸುವುದು ತಮ್ಮ ಧರ್ಮ ಎಂದು ಭಾವಿಸಿದ್ದರು. ಆದರೆ ಯಾವುದೋ ಒಂದು ಮತದ ಜೊತೆಗೆ ಖಾಸಗಿ ಸಂಬಂಧವಿದ್ದಾಗ ಅದಕ್ಕೆ ವಯುಕ್ತಿಕ ಕಾಳಜಿ ನೀಡಿ ಅದನ್ನು ಪೋಷಿಸುವ ಸಂದರ್ಭಗಳೂ ಇದ್ದಿರಬಹುದು. ಆಗ ಅದಕ್ಕೆ ವಿಶೇಷ ಮಾನ್ಯತೆ, ಬಲ ಸಿಕ್ಕಿರುವ ಸಾಧ್ಯತೆಯೂ ಇದೆ. ಹಾಗೂ ಆಸ್ತಿಪಾಸ್ತಿಗಳಿಗೆ ಹೊಡೆದಾಡಿದಂತೆ ಅಲ್ಲಲ್ಲಿ ಘರ್ಷಣೆಗಳೂ ನಡೆದಿರಬಹುದು. ಆದರೆ ಯಾವ ಮತವೂ ಪ್ರಭುತ್ವ ಪೋಷಿತ ಐಡಿಯಾಲಜಿಯಾಗಿ ಅವರಿಗೆ ಕಾಣಿಸಿರಲಿಲ್ಲ. ಅಶೋಕನ ಸಂದರ್ಭದಲ್ಲೂ ಇದನ್ನೇ ನೋಡುತ್ತೇವೆ. ಆತನು ಬೌದ್ಧಮತದ ಪ್ರಚಾರಕ್ಕಾಗಿ ಕ್ರಮಗಳನ್ನು ಕೈಗೊಂಡಿದ್ದನು. ಆದರೆ ಆತನು  ತನ್ನ ಧರ್ಮಶಾಸನಗಳ ಮೂಲಕ ಪ್ರಜೆಗಳಲ್ಲಿ ಪ್ರಚಾರಮಾಡಿದ್ದು ಬೌದ್ಧಮತವನ್ನಲ್ಲ, ಬದಲಾಗಿ ಎಲ್ಲಾ ಮತಗಳೂ ಪರಸ್ಪರರನ್ನು ಗೌರವಿಸಬೇಕು ಎಂಬುದಾಗಿ. ಅಂದರೆ ಧರ್ಮ ಎಂಬುದನ್ನು ಈ ಅರ್ಥದಲ್ಲಿ ತೆಗೆದುಕೊಂಡರೆ ನಮ್ಮ ಪ್ರಭುತ್ವಕ್ಕೂ ಈ ಧರ್ಮವೇ ಬೇಕು ಎಂಬ ವಾದವು ಸೆಕ್ಯುಲರ್ವಾದಿಗಳಿಗೆ ಸಮಸ್ಯೆ ಸೃಷ್ಟಿಸಲು ಕಾರಣವಿಲ್ಲ.

5

ಹಿಂದೂಯಿಸಂ ಈ ಮೇಲಿನ ರೀತಿಯಲ್ಲಿ ವಿಶಿಷ್ಟವಾದುದು ಎಂಬುದನ್ನು ಸೆಕ್ಯುಲರ್ ವಾದಿಗಳೂ ಗುರುತಿಸುತ್ತಾರೆ. ಹಾಗಾದರೆ ಯಾವ ರಿಲಿಜನ್ನನ್ನು ಪ್ರಭುತ್ವದ ಜೊತೆ ಬೆರೆಸುವುದರ ಕುರಿತು ಅವರ ಆಕ್ಷೇಪಣೆ? ಹಿಂದೂ ಎಂಬುದೊಂದು ರಿಲಿಜನ್ನೇ ಇಲ್ಲದಿದ್ದ ಮೇಲೆ ಈ ಎಲ್ಲಾ ಸಂಪ್ರದಾಯಗಳೂ ಬಹುಸಂಖ್ಯಾತ ರಿಲಿಜನ್ನು ಹೇಗಾಗುತ್ತವೆ? ಅಲ್ಪಸಂಖ್ಯಾತ ರಿಲಿಜನ್ನಿನ ಪ್ರಶ್ನೆ ಎಲ್ಲಿ ಬರುತ್ತದೆ?  ಆದರೆ ಸೆಕ್ಯುಲರ್ ವಾದಕ್ಕೆ ಈ ಕುರಿತು ನಿಶ್ಚಿತವಾದ ಗ್ರಹಿಕೆಗಳಿಲ್ಲ. ಕೆಲವರು ಹೇಳುವಂತೆ, ಹಿಂದೆ ಹಾಗಿದ್ದಿರಬಹುದು, ಆದರೆ ಇಂದಿನ ಹಿಂದುತ್ವವಾದಿಗಳು ಅದನ್ನೊಂದು ಏಕರೂಪೀ ರಿಲಿಜನ್ನಾಗಿ ಮಾಡಿ ರಾಷ್ಟ್ರಪ್ರಭುತ್ವವನ್ನು ವಶಕ್ಕೆ ತೆಗೆದುಕೊಳ್ಳ ಹೊರಟಿದ್ದಾರೆ. ಕಳೆದ ಒಂದು ಶತಮಾನದಲ್ಲಿ ಅಂಥ ಬೆಳವಣಿಗೆಗಳಾಗಿವೆ ಎನ್ನುತ್ತಾರೆ. ಬ್ರಾಹ್ಮಣ ಪುರೋಹಿತಶಾಹಿಯು ಅದಕ್ಕೊಂದು ಏಕರೂಪವನ್ನು ಹಾಗೂ ಐಡಿಯಾಲಜಿಯನ್ನು ನೀಡುತ್ತಿದೆ, ಅದೇ ಅಪಾಯಕಾರಿ ಎನ್ನುತ್ತಾರೆ.  ಅಖೀಲ್ ಬಿಲ್ಗ್ರಾಮಿ ಎಂಬವರು ಅಶೀಸ್ ನಂದಿಯವರನ್ನು ಟೀಕಿಸುತ್ತ ಬ್ರಾಹ್ಮಣ ಸಂಪ್ರದಾಯವು ಆಧುನಿಕ ಪೂರ್ವ ಕಾಲದಿಂದಲೂ ಹಿಂದುತ್ವದ ಐಕ್ಯತೆಗೆ ತಳಹದಿಯನ್ನು ಹಾಕಿತ್ತು ಎನ್ನುತ್ತಾರೆ. ಹಾಗೂ ಒಟ್ಟಾರೆಯಾಗಿ ಭಾರತದ ಬಹು ಸಂಪ್ರದಾಯಗಳಿಗೆ ಒಂದು ಐಡಿಯಾಲಜಿ(ಬ್ರಾಹ್ಮಣ ಐಡಿಯಾಲಜಿ)ಯನ್ನು ಬೆಳೆಸುವ ಪ್ರಯತ್ನವು ಬಹಳ ಹಿಂದಿನಿಂದಲೂ ನಡೆದಿದೆ, ಅದು ಮನುಸ್ಮೃತಿಯಂಥ ಕೆಲವು ಸಂಸ್ಕೃತ ಗ್ರಂಥಗಳಲ್ಲಿ ಇದೆ, ಇದು ದೇಶೀ ಸಂಸ್ಕೃತಿಗಳಲ್ಲಿನ ಸಹಬಾಳ್ವೆಯ ಅಂಶಗಳನ್ನು ತೊಡೆದು ಆಕ್ರಮಣಶೀಲತೆಯನ್ನು ಬೆಳೆಸುತ್ತಿದೆ ಎಂಬ ವಾದಕ್ಕೆ ಬಂದು ನಿಲ್ಲುತ್ತಾರೆ. ಅಂದರೆ, ಸೆಕ್ಯುಲರ್ ವಾದಿಗಳು ತಿಳಿಸುವಂತೆ ಈ ಎಲ್ಲಾ ಬಹು ಸಂಪ್ರದಾಯಗಳಿಗೂ ಒಂದು ಏಕೈಕ ಬೋಧನೆಯನ್ನು ಕಟ್ಟಿಕೊಡಲಾಗಿದೆ(ಅದು ನಂತರ ಬ್ರಾಹ್ಮಣರು ಕಟ್ಟಿಕೊಟ್ಟದ್ದೇ ಇರಬಹುದು) ಎಂಬುದನ್ನು ಅವರು ಒಪ್ಪಿಕೊಂಡ ಹಾಗಾಯಿತು, ಅದರರ್ಥ, ಅದೇ ಹಿಂದೂಯಿಸಂ ಎಂಬುದಾಗಿ ಅವರು ವಾದಿಸುತ್ತಿದ್ದಾರೆ, ಹಾಗಾಗೇ ಇದಕ್ಕೊಂದು ಪುರೋಹಿತಶಾಹಿ ಇದೆ ಎಂದು ಅವರು ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ. ಈ ರಿಲಿಜನ್ನಿಗೆ ಅನ್ಯ ರಿಲಿಜನ್ನುಗಳ ಜೊತೆಗೆ ಮತಬೋಧನೆಗಳ ಸಂಬಂಧಿಸಿ ಸತ್ಯ-ಸುಳ್ಳುಗಳ ಜಗಳ ಇದೆ ಎಂಬುದಾಗಿ ಭಾವಿಸಿಕೊಂಡು ಸೆಕ್ಯುಲರಿಸಂನ ಸಮಸ್ಯೆಯನ್ನು ಅರ್ಥೈಸಲು ಇದರಿಂದ ಸಾಧ್ಯವಾಗುತ್ತದೆ. ಆದರೆ ಇಂಥ ವಾದಗಳು ಹೇಗೆ ನಿಷ್ಫಲವಾಗಿವೆ ಎಂಬುದನ್ನು ನೋಡೋಣ:

ಸೆಕ್ಯುಲರಿಸಂನ ಯುದ್ಧವು ರಿಲಿಜನ್ನಿನ ವಿರುದ್ಧ ಎಂಬುದು ಮೂಲ ಸತ್ಯ. ಈ ಮೇಲಿನ ಚರ್ಚೆಯ ಸಂದರ್ಭದಲ್ಲಿ ಒಂದು ಪ್ರಬಲ ರಿಲಿಜನ್ನು ಉಳಿದ ದುರ್ಬಲ ರಿಲಿಜನ್ನುಗಳನ್ನು ಹತ್ತಿಕ್ಕದಂತೆ ನೋಡಿಕೊಳ್ಳುವುದೇ ಸೆಕ್ಯುಲರ್ ವಾದದ ಕಾಳಜಿಯಾಗಿದೆ. ಒಂದೊಮ್ಮೆ ಭಾರತದಲ್ಲಿರುವ ಬಹುಸಂಪ್ರದಾಯಗಳನ್ನು ಏಕೀಕರಿಸಿ ತಮ್ಮ ಬೋಧನೆಗಳನ್ನು ಅದರ ಮೇಲೆ ಹೇರುವ/ನಿರೂಪಿಸುವ ಪ್ರಯತ್ನಗಳು ಐತಿಹಾಸಿಕವಾಗಿ ನಡೆದಿದ್ದರೆ ಭಾರತದಲ್ಲೆಕೆ ಯುರೋಪು, ಮಧ್ಯಪ್ರಾಚ್ಯದಂತೇ ಏಕರೂಪೀ ರಿಲಿಜನ್ನುಗಳ ಸಷ್ಟಿಯಾಗಿಲ್ಲ ಎಂಬ ಪ್ರಶ್ನೆ ಏಳುತ್ತದೆ. (ಅದರಲ್ಲೂ ಈ ಯಾವುದೇ ಪ್ರದೇಶಗಳಿಗಿಂತ ಮೊದಲೇ, ಅಂದರೆ ವೈದಿಕ ಕಾಲದಲ್ಲೇ ಈ ಚಟುವಟಿಕೆ ಪ್ರಾರಂಭವಾಗಿದ್ದಲ್ಲಿ, ಹಾಗೂ ಅಂಥ ಹಿಂದೂ ಪ್ರಭುತ್ವಗಳೂ ಇದ್ದಲ್ಲಿ). ಯುರೋಪು ಹಾಗೂ ಮಧ್ಯಪ್ರಾಚ್ಯಗಳಲ್ಲಿ ನಾವು ಕಾಣುವುದೇನು? ರಿಲಿಜನ್ನುಗಳನ್ನು ಹೊರತುಪಡಿಸಿ ಯಾವ ಅನ್ಯ ಸಂಪ್ರದಾಯಗಳೂ ಅಸ್ತಿತ್ವದಲ್ಲಿಲ್ಲ. ಅಲ್ಲಿರುವ ಬಹುತ್ವ ಎಂದರೆ ರಿಲಿಜನ್ನಿನದೇ ಪಂಥಗಳು ಹಾಗೂ ಒಡಕುಗಳು. ಅಲ್ಲಿ ರಿಲಿಜನ್ನುಗಳ ಪರಿಧಿಗೆ ಹೊರಗಿರುವ ದೇಶೀ ಪೂಜಾ ಸಂಪ್ರದಾಯಗಳು ನಾಶವಾಗಿವೆ. ಭಾರತದಲ್ಲಿನ ಬಹುಸಂಪ್ರದಾಯಗಳು ಏಕೈಕ ದೈವವಾಣಿಯನ್ನಾಧರಿಸಿ ಹುಟ್ಟಿಕೊಂಡ ವಿಭಿನ್ನ ಪಂಥಗಳಲ್ಲ ಎಂಬುದನ್ನು ಗಮನಸಿದ್ದೇವೆ. ಈ ವಿಭಿನ್ನ ಸಂಪ್ರದಾಯಗಳನ್ನೆಲ್ಲ ನಾಶಪಡಿಸುವ ಪ್ರಯತ್ನವು ಸಾವಿರಾರು ವರ್ಷ ನಡೆದಿದ್ದರೆ ಭಾರತದಲ್ಲೇಕೆ ಅದು ಸಫಲವಾಗಿಲ್ಲ? ಅಂದರೆ ಭಾರತದ ಪುರೋಹಿತಶಾಹಿಯ ಪ್ರಯತ್ನ ಅಷ್ಟೊಂದು ದುರ್ಬಲವಾಗಿತ್ತು ಎನ್ನಬೇಕಾಗುತ್ತದೆ.  ಹಾಗಾದಲ್ಲಿ ಈ ಪ್ರಯತ್ನದಲ್ಲಿ ಸಫಲವಾದ ಸೆಮೆಟಿಕ್ ಮತಗಳ ಕುರಿತು ಸೆಕ್ಯುಲರ್ ವಾದಿಗಳಲ್ಲಿ ಇನ್ನೂ ಹೆಚ್ಚು ಹೆದರಿಕೆ ಹುಟ್ಟಬೇಕು. ಭಾರತೀಯ ಸಂಪ್ರದಾಯಗಳಿಗೆ ಸೆಮೆಟಿಕ್ ಮತಗಳ ಕುರಿತು ಇದೇ ಹೆದರಿಕೆ ಇದ್ದ ಪಕ್ಷದಲ್ಲಿ ಸೆಕ್ಯುಲರ್ ವಾದಿಗಳು ಹಿಂದುತ್ವದ ಕುರಿತು ಅನುಕಂಪವನ್ನು ತೋರಿಸುವುದೂ ಅವರ ಕರ್ತವ್ಯವೇ ಆಗುತ್ತದೆ.

ಬಹುಶಃ ಈ ಮೇಲಿನ ಪರಿಸ್ಥಿತಿಗೆ ಕಾರಣವೆಂದರೆ ಹಿಂದೂಗಳೆಂದು ಭಾವಿಸಿಕೊಂಡಿರುವವರಿಗೆ, ರಿಲಿಜನ್ನು ಅವರ ಅನುಭವ ಪ್ರಪಂಚವಲ್ಲದ್ದರಿಂದ ಆ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಅದೇ ರೀತಿ ಮುಸ್ಲಿಂ, ಕ್ರೈಸ್ತ ಮುಂತಾದವರಿಗೆ ಹಿಂದೂಗಳ ಅನುಭವ ಪ್ರಪಂಚ ಸುಲಭವಾಗಿ ಅರ್ಥವಾಗುವುದಿಲ್ಲ. ಹಿಂದೂ ಎಂಬ ಮತದ ರೂಪುರೇಷೆಗಳನ್ನು ಹಾಕಿದವರೇ ಸೆಮೆಟಿಕ್ ರಿಲಿಜನ್ನಿಗೆ ಸೇರಿದವರು. ಅದು ಅವರ ಅರ್ಥಪ್ರಪಂಚವಾಗಿರುವುದರಿಂದ ಅವರಿಗೆ ಜಗತ್ತು ಬೇರೆ ರೀತಿ ಕಾಣಲಿಕ್ಕೆ ಕಾರಣಗಳಿರಲಿಲ್ಲ. ತಮ್ಮ ಅನುಭವದ ಬೆಳಕಿನಲ್ಲೇ ಅವರು ಭಾರತೀಯ ಸಮಾಜವನ್ನೂ ನೋಡಿದರು. ಇದು ಹಾಗಿಲ್ಲ, ಬೇರೆ ರೀತಿ ಇದೆ ಎಂಬುದನ್ನು ಭಾರತೀಯ ಸಂಪ್ರದಾಯಗಳಿಗೆ ಸೇರಿದವರು ಹೇಳಬೇಕಷ್ಟೆ. ಹಿಂದೂ ಮತ ಎಂಬುದು ಆಧುನಿಕ ವಿಧ್ಯಾಭ್ಯಾಸದ ಮೂಲಕ ಹಿಂದೂಗಳೆಂದು ಭಾವಿಸಿಕೊಂಡವರ ಜ್ಞಾನವಾದಾಗ ಅವು ಪುಸ್ತಕದ ಪರಿಭಾಷೆಗಳಾಗಿ ಅವರ ಅರಿವಿಗೆ ಬಂದಿವೆಯೇ ವಿನಃ ಅವು ಅವರಿಗೆ (ನಮಗೆ) ಅನುಭವ ವೇದ್ಯ ಸಂಗತಿಗಳಲ್ಲ. ಹಾಗಾಗೇ ರಾಜರ, ರಾಣಿಯರ ಮತಗಳ ಕುರಿತು ನಮಗೆ ಪ್ರಶ್ನೆಗಳು ಹುಟ್ಟುವುದಿಲ್ಲ, ಹಾಗೂ ರಿಲಿಜನ್ನನ್ನು ಧರ್ಮ ಎನ್ನುತ್ತೇವೆ. ನಮ್ಮ ರಾಜರುಗಳು ಪರಮತಸಹಿಷ್ಣುಗಳಾಗಿದ್ದರು ಎನ್ನುತ್ತೇವೆ. ಸೆಕ್ಯುಲರಿಸಂ ಅನ್ನು ಜಾತ್ಯಾತೀತವಾದ ಎನ್ನುತ್ತೇವೆ. ಹಿಂದೂಗಳಿಗೆ ಮುಸ್ಲಿಂ, ಕ್ರೈಸ್ತರೆಲ್ಲ ಬೇರೆ ಬೇರೆ ಜಾತಿಗಳ, ಸಂಪ್ರದಾಯಗಳ ಹಾಗೇ ಕಾಣಿಸುತ್ತಾರೆ.  ಅದೇ ಮುಸ್ಲಿಂ-ಕ್ರೈಸ್ತರಿಗೆಲ್ಲ ಹಿಂದೂಯಿಸಂ ತಮ್ಮಂಥದ್ದೇ ಒಂದು ರಿಲಿಜನ್ನಿನ ಹಾಗೆ ಕಾಣಿಸುತ್ತದೆ, ಭಗವದ್ಗೀತೆ ಧರ್ಮಗ್ರಂಥವೆಂದು ಹೇಳಿದರೆ ಅವರಲ್ಲಿ ಸಾಮಾನ್ಯರಿಗೂ ಅರ್ಥವಾಗುತ್ತದೆ, ಆದರೆ ಹಿಂದೂಗಳಿಗೇ ಅದು ಗೊತ್ತಾಗುವುದಿಲ್ಲ. ಬ್ರಾಹ್ಮಣರು ಪುರೋಹಿತಶಾಹಿಯೆಂದರೆ ಅವರು ಪ್ರೀಸ್ಟಗಳನ್ನೋ, ಮುಲ್ಲಾಗಳನ್ನೋ ಮನಸ್ಸಿಗೆ ತಂದುಕೊಂಡು ಅರ್ಥಮಾಡಿಕೊಳ್ಳುತ್ತಾರೆ. ಅಸಂಖ್ಯ ಜಾತಿಗಳನ್ನು ನೋಡಿದರೂ ಅವರು ಇದು ಏಕೈಕ ಹಿಂದೂ ರಿಲಿಜನ್ನಿನ ಬೋಧನೆಗಳನ್ನು ಆಧರಿಸಿದೆ ಅಂದುಕೊಳ್ಳುತ್ತಾರೆ. ಅದೇ ದೇವಚಂದ್ರನೆಂಬ 19ನೇ ಶತಮಾನದ ಜೈನ ಪಂಡಿತನಿಗೆ ಶರೀಯತ್ತುಗಳು ಮುಲ್ಲಾಶಾಸ್ತ್ರದಂತೆ ಕಂಡು, ಅದನ್ನು ಬರೆದವನು ಮಲ್ಲಿಭಟ್ಟನಾಗಿ ಕಂಡು, ಮುಸ್ಲಿಮರಲ್ಲಿ 18 ಭೇದಗಳು ಕಂಡವು.

ಹಿಂದುತ್ವವಾದಕ್ಕೆ ಪ್ರತಿವಾದವನ್ನು ಹುಟ್ಟುಹಾಕುವಾಗ ಈ ಮೇಲೆ ಸೃಷ್ಟಿಯಾಗಬಹುದಾದ ವಿರೋಧಾಭಾಸಗಳನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. ಅಂದರೆ, ನಮ್ಮ ಭಾರತವು ಬಹು ಸಂಪ್ರದಾಯಗಳ ದೇಶ ಎನ್ನುವಾಗ, ನಮಗೆ ರಿಲಿಜನ್ನು ಎಂಬ ಸಂಸ್ಥೆ ಇಲ್ಲ ಎಂಬುದನ್ನು ಗುರುತಿಸಬೇಕು. ಒಮ್ಮೆ ನಮಗೆ ರಿಲಿಜನ್ನು ಎಂಬ ಸಂಸ್ಥೆ ಇದ್ದರೆ, ಆಗ ಬಹುಸಂಪ್ರದಾಯಗಳ ದೇಶ ಎಂಬ ವಾದವು ಕೆಲಸಕ್ಕೆ ಬರುವುದಿಲ್ಲ. ಏಕೆಂದರೆ ಸೆಕ್ಯುಲರಿಸಂ ರಿಲಿಜನ್ನಿಗೂ ಪ್ರಭುತ್ವಕ್ಕೂ ಇರುವ ಸಂಬಂಧವನ್ನಷ್ಟೇ ಉದ್ದೇಶಿಸಿದೆ. ಹಾಗಾಗಿ ಈ ಎರಡನ್ನೂ ಪ್ರತಿಪಾದಿಸುತ್ತೇವೆಂದರೆ ವಿರೋಧಾಭಾಸ ಸೃಷ್ಟಿಯಾಗುತ್ತದೆ. ರಿಲಿಜನ್ನು ಎಂಬ ಸಂಸ್ಥೆ ಇಲ್ಲ ಎಂದರೆ, ಅದರ ಜೊತೆಗೇ ಪುರೋಹಿತಶಾಹಿ, ಪವಿತ್ರಗ್ರಂಥ, ದೈವವಾಣಿ ಮುಂತಾದ ಕಲ್ಪನೆಗಳನ್ನೂ ಬಿಡಬೇಕಾಗುತ್ತದೆ. ಇಂದಿನ ಹಿಂದುತ್ವವಾದವು ಈ ಕಾರಣಕ್ಕೇ ಅನ್ಯರ ದೃಷ್ಟಿಯಾಗಿದೆ. ಹಿಂದುತ್ವವಾದಲ್ಲಿ ನಮ್ಮ ಬಹು ಸಂಪ್ರದಾಯಗಳಿಗೆ ಸೇರಿದ ಕೆಲವರು ತಮ್ಮನ್ನು ಅನ್ಯ ಅನುಭವದ ಮೂಲಕ ಅರ್ಥೈಸಲು ಪ್ರಯತ್ನಿಸುತ್ತಿದ್ದಾರೆ. ಹಾಗೂ ನಮ್ಮ ಸಂಪ್ರದಾಯಗಳಿಗೆ ಪರಿಚಯವೇ ಇರದ ಈ ಅಂಶಗಳನ್ನೆಲ್ಲ ಭಾವಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಹುಶಃ ರಿಲಿಜನ್ನುಗಳ ಲೋಕವರ್ಣನೆಗಳನ್ನು ಆಧರಿಸಿ ಆಧುನಿಕ ಪ್ರಭುತ್ವಗಳು ಕಾರ್ಯಕ್ರಮವನ್ನು ಹಾಕಿಕೊಂಡಾಗ ನಾವು ರಿಲಿಜನ್ ಅಲ್ಲದಿದ್ದರೆ ಏನಂತೆ? ಇಂದು ನಮ್ಮ ಉಳಿವಿಗೆ ಹಿಂದೂಧರ್ಮವನ್ನೊಂದು ರಿಲಿಜನ್ ಮಾಡೋಣ ಎಂಬ ವಾದಗಳು ಸತಾರ್ಕಿಕವಾಗೇ ಕಾಣಿಸುತ್ತವೆ. ನಾನು ಈ ಹಿಂದೆ ಉಲ್ಲೇಖಿಸಿದ ಅಂಶಗಳೇ ನಮ್ಮ ಸನಾತನ ಧರ್ಮದ ಜೀವಾಳವಾದರೆ ಹಿಂದೂ ರಿಲಿಜನ್ನನ್ನು ಸಾಧಿಸಬೇಕಾದರೆ ಸನಾತನ ಧರ್ಮವನ್ನು ನಾಶಮಾಡಲೇಬೇಕಾಗುತ್ತದೆ. ಅದನ್ನು ಎಷ್ಟೆಷ್ಟು ನಾಶಮಾಡುತ್ತೇವೆಯೋ ಅಷ್ಟು ಹಿಂದೂ ರಿಲಿಜನ್ ಸಾಧ್ಯವಾಗುತ್ತದೆ. ಆದರೆ ಇಂದಿನವರೆಗಂತೂ ಅಂಥದೊಂದು ರಿಲಿಜನ್ನು ಅಸ್ತಿತ್ವದಲ್ಲಿ ಬಂದಿಲ್ಲ. ಅಂಥದೊಂದು ಕಾರ್ಯಕ್ರಮ ರೂಪುಗೊಂಡಿರಬಹುದು. ಈ ಕಾರ್ಯಕ್ರಮಕ್ಕೆ ಸೆಕ್ಯುಲರ್ ವಾದದ ಕಾಣಿಕೆಯೂ ಅಷ್ಟೇಇದೆ ಎಂಬುದನ್ನು ಗಮನಿಸಬೇಕು. ಏಕೆಂದರೆ ಅದು ಹಿಂದುತ್ವವನ್ನು ಅಲ್ಲಗಳೆಯುತ್ತದೆ ಹಾಗೂ ಅದೇ ವೇಳೆಗೆ ಅದನ್ನೊಂದು ರಿಲಿಜನ್ನಾಗಿ ನೋಡುತ್ತದೆ. ರಿಲಿಜನ್ನನ್ನು ಭಾವಿಸಿಕೊಂಡಾಕ್ಷಣ ಹಿಂದೂಯಿಸಂ ಯುದ್ಧಕ್ಕೆ ಸಿದ್ಧವಾಗಲೇ ಬೇಕು.

6

ನಮ್ಮ ಸಂಪ್ರದಾಯದ ಕುರಿತ ಈ ರೀತಿಯ ತಿಳುವಳಿಕೆಯು ಪ್ರಭುತ್ವದ ನೀತಿಯನ್ನು ರೂಪಿಸುವಾಗ ಅತ್ಯಗತ್ಯವಾದುದು. ಇಂದಿನ ಸೆಕ್ಯುಲರಿಸಂ-ಕೋಮುವಾದದ ಕುರಿತ ಸಮಸ್ಯೆಯನ್ನು ಹೀಗಲ್ಲದೇ ಬೇರೆ ರೀತಿಯಲ್ಲಿ ಬಗೆಹರಿಸುವ ಸಾಧ್ಯತೆಗಳು ಕಾಣುತ್ತಿಲ್ಲ. ಇದು ವ್ಯಾವಹಾರಿಕವಾದ ಮಾರ್ಗವೆ? ಎಂಬ ಪ್ರಶ್ನೆ ಉದಿಸುವುದು ಸಹಜ. ಒಂದು ಸಂಗತಿಯನ್ನು ಗಮನಿಸಿ. ನಮ್ಮ ಸಮಾಜದ ಐತಿಹಾಸಿಕ ನಿರ್ಮಾಣವೇ ಹೀಗಿದೆ ಹಾಗೂ ಇಂದಿನವರೆಗೂ ಅದು ಹಾಗೇ ನಡೆದುಕೊಂಡು ಬಂದಿದೆ. ಭಾರತದಲ್ಲಿನ ಸೆಮೆಟಿಕ್ ರಿಲಿಜನ್ನುಗಳೂ ಕೂಡಾ ನೂರಾರು ವರ್ಷಗಳಿಂದ ಈ ನಿರ್ಮಾಣಕ್ಕೆ ಹೊಂದಿಕೊಂಡು ಬಂದಿವೆ.  ಹಾಗಾದರೆ ಇಂದು ಸೃಷ್ಟಿಯಾದ ಸಮಸ್ಯೆಗಳು ಯಾವ ಪಾತಳಿಯಲ್ಲಿವೆ? ಅದು ಪ್ರಭುತ್ವದ ಪಾತಳಿಯಲ್ಲಿ ಮಾತ್ರ ಇದೆ. ನಮ್ಮ ಪ್ರಭುತ್ವದ ಸೆಕ್ಯುಲರಿಸಂ ರಾಜಕೀಯವನ್ನು ಹೊರತುಪಡಿಸಿ (ಕಮ್ಯುನಲಿಸಂ ಅದರದೊಂದು ಭಾಗವಷ್ಟೆ) ಹಿಂದೂ-ಮುಸ್ಲಿಂ ರಿಲಿಜನ್ನಿನ ಸಮಸ್ಯೆ ಎಲ್ಲಿತ್ತು? ಎಲ್ಲಿಂದ ಬರಲು ಸಾಧ್ಯ? ಈ ಸಮಸ್ಯೆ ಯಾವಾಗ ಉಲ್ಭಣಿಸುತ್ತದೆ ಹಾಗೂ ಯಾವಾಗ ತಗ್ಗುತ್ತದೆ ಎಂಬುದನ್ನು ಗಮನಿಸಿ. ಅದರಿಂದ ಯಾರ್ಯಾರು ಲಾಭ ಮಾಡಿಕೊಳ್ಳುತ್ತಾರೆ ಎಂಬುದನ್ನು ವಿಶ್ಲೇಷಿಸಿ. ನಮ್ಮ ಪ್ರಭುತ್ವವು ರಿಲಿಜನ್ನಿನ ಸಮಸ್ಯೆಗಳನ್ನು ತನ್ನದೆಂದು ಭಾವಿಸಿ ಇಂಥದೊಂದು ನೀತಿಯ ಮೂಲಕ ಅಲ್ಪಸಂಖ್ಯಾತ ರಿಲಿಜನ್ನುಗಳಿಗೆ ನ್ಯಾಯ ಒದಗಿಸುತ್ತೇನೆ ಎಂದು ಹೊರಟಾಗ ಎಲ್ಲ ಸಮುದಾಯಗಳೂ ಒಂದಿಲ್ಲೊಂದು ರಿಲಿಜನ್ನುಗಳಾಗಿ ತಮ್ಮನ್ನು ಮುಂದೊತ್ತಿಕೊಳ್ಳಬೇಕಾದ ಅನಿವಾರ್ಯತೆಯನ್ನು ಹುಟ್ಟುಹಾಕುತ್ತದೆ. ಈಗ ಆಗುತ್ತಿರುವುದೂ ಅದೇ. ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ನಮ್ಮ ವಸಾಹತು ಹಾಗೂ ಸ್ವತಂತ್ರ ಪ್ರಭುತ್ವಗಳು ಈ ವಾಸ್ತವವನ್ನು ಸೃಷ್ಟಿಸಿವೆ. ಅದರಲ್ಲೂ ಈ ಸಮಸ್ಯೆಯನ್ನು ಎಷ್ಟು ಹೀನವಾಗಿ ರಾಜಕೀಯದ ದಾಳವನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ನಾವೆಲ್ಲ ನೋಡುತ್ತಿದ್ದೇವೆ. ಅಲ್ಪಸಂಖ್ಯಾತರು ಸದಾ ಭಯದ ವಾತಾವರಣದಲ್ಲಿ, ಪೋಷಿತ ಭಾವದಲ್ಲಿ ಇಡಲು ಪ್ರಯತ್ನಿಸಲಾಗುತ್ತಿದೆ. ಇದರಿಂದಾಗಿ ಒಂದೆಡೆ ಕಲ್ಪಿತ ರಿಲಿಜನ್ನುಗಳನ್ನು ಸೃಷ್ಟಿಸಿಕೊಂಡು ನಮ್ಮ ಸಂಪ್ರದಾಯಗಳು ಪ್ರಭುತ್ವದಲ್ಲಿ ಎದ್ದುಬರುತ್ತಿವೆ. ಹಾಗೂ ಇದಕ್ಕೆ ಮೂಲದಲ್ಲಿ ಸೆಮೆಟಿಕ್ ರಿಲಿಜನ್ನುಗಳೇ ಪ್ರೇರಣೆಗಳಾಗಿ, ಕಾರಣಗಳಾಗಿವೆ ಎಂಬುದು ಇತಿಹಾಸದಲ್ಲಿ ಸುಸ್ಪಷ್ಟವಾಗಿದೆ. ಭಾರತದಲ್ಲಿ ಮುಸ್ಲಿಂ ಲೀಗಿನ ಸ್ಥಾಪನೆಯಿಂದ ಹಿಡಿದು, ಮುಸ್ಲಿಂ ಪ್ರತ್ಯೇಕ ಮತಕ್ಷೇತ್ರದಿಂದ ಭಾರತದ ವಿಭಜನೆಯವರೆಗಿನ ಘಟನೆಗಳು ಹಾಗೂ ಮುಸ್ಲಿಮರನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು, ಹಿಂದೂಗಳನ್ನು ಬಹುಸಂಖ್ಯಾತರೆಂದು ಘೋಷಿಸಿದ್ದು, ಇವೆಲ್ಲ ಬೇಡಿಕೆಗಳು ಏಕೆ ಬಂದವೆಂದರೆ ಹಿಂದೂಯಿಸಂ ಒಂದು ರಿಲಿಜನ್ನು ಎಂಬ ಭಾವನೆಯಿಂದ.  ಹಿಂದುತ್ವವು ಈ ಬೆಳವಣಿಗೆಗಳ ಆನುಷಂಗಿಕವಾಗಿ ರೂಪುತಳೆದಿದೆ ಎಂಬುದೂ ಸ್ಪಷ್ಟ, ಇಂದೂ ಕೂಡ ಭಾರತ ಪಾಕಿಸ್ತಾನದ ಸಂಬಂಧ ಹಾಗೂ ಮುಸ್ಲಿಂ ಭಯೋತ್ಪಾದನೆ ಇವು  ಹಿಂದೂ ರಿಲಿಜನ್ನಿನ ಕಲ್ಪನೆಯಲ್ಲಿ ತುಂಬಾ ನಿರ್ಣಾಯಕವಾದ ಪಾತ್ರ ವಹಿಸುತ್ತಿವೆ, ಏಕೆಂದರೆ ಅದು ರಿಲಿಜನ್ನಿನ ನೆರಳಿನಂತೆ ಅದನ್ನು ಹಿಂಬಾಲಿಸುತ್ತದೆ. ಹಾಗೂ ಇದನ್ನು ಹಿಂದೂ ರಿಲಿಜನ್ನಿನ ಲಕ್ಷಣವೆಂದು ತಮ್ಮ ಲೋಕದೃಷ್ಟಿಯ ಮೂಲಕ ಕಲ್ಪಿಸಿಕೊಂಡ ಇಸ್ಲಾಂ ಮತದ ಮುಖಂಡರು ನೂರಾರು ವರ್ಷಗಳಿಂದ ತಾವು ಈ ಸೆಕ್ಯುಲರಿಸಂ ಸಹಾಯವಿಲ್ಲದೇ ಸಮಾಜದಲ್ಲಿ ನಡೆಸಿದ ಸಹಬಾಳ್ವೆಯ ನೆನಪನ್ನು  ಉಪೇಕ್ಷಿಸಿ ಅಸ್ಥಿರತೆಯನ್ನು ಕಲ್ಪಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ, ತಾವು ಮುಸ್ಲಿಮರಂತೇ ಸಂಘಟನೆ ಹೊಂದದಿದ್ದರೆ ತಮ್ಮ ರಿಲಿಜನ್ನಿಗೆ ಧಕ್ಕೆ ಬರುವುದನ್ನು ಕಲ್ಪಿಸಿಕೊಂಡು ಹಿಂದುತ್ವದ ಪ್ರತಿಪಾದಕರು ಭಯಭೀತರಾಗಿದ್ದಾರೆ.

ಸೆಕ್ಯುಲರಿಸಂ ಕಾರ್ಯಕ್ರಮವು ಭಾರತೀಯ ಸಂದರ್ಭದಲ್ಲಿ ಇಲ್ಲಿನ ಮುಸ್ಲಿಂ, ಕ್ರೈಸ್ತರಿಗೂ ಸಮಸ್ಯೆಗಳನ್ನು ಸೃಷ್ಟಿಸಿದೆ. ಅದು ಕಟ್ಟಿಕೊಡುವ ರಿಲಿಜನ್ನುಗಳೂ ಕೂಡಾ ಆದರ್ಶಿಕೃತವಾದ ರೂಪಗಳಾಗಿವೆ ಹಾಗೂ ಅವುಗಳ ಕುರಿತು ಅನೇಕ ಆಧುನಿಕ ಪೂರ್ವಾಗ್ರಹಗಳಿಂದ ಕೂಡಿವೆ. ಇವೆಲ್ಲವೂ ರಿಲಿಜನ್ನುಗಳಿಲ್ಲದ ಸಮಾಜಗಳಲ್ಲಿ ಅವು ಐತಿಹಾಸಿಕವಾಗಿ ಬೆಳೆಸಿಕೊಂಡ ಜೀವನಕ್ರಮವನ್ನು, ತಿಳುವಳಿಕೆಯನ್ನು ಬದಲಾಯಿಸಿಕೊಳ್ಳುವ ಒತ್ತಡವನ್ನು ಸೃಷ್ಟಿಸುತ್ತವೆ. ಕೋಮುವಾದವು ಆಧುನಿಕ ಸೃಷ್ಟಿಯೋ ಅಲ್ಲವೋ ಎಂಬ ಕುರಿತು ಚರ್ಚೆ ಇರುವುದು ಗೊತ್ತಿರುವ ವಿಷಯವೇ. ಈ ಹಿಂದೆ ನಡೆಸಿದ ಚರ್ಚೆಯ ಬೆಳಕಿನಲ್ಲಿ ನೋಡಿದರೆ ಈ ಸಮಸ್ಯೆಯು ಆಧುನಿಕ ಪೂರ್ವ ಕಾಲದಲ್ಲಿ ಇರಲು ಸಾಧ್ಯವಿಲ್ಲ. ಏಕೆಂದರೆ ಭಾರತೀಯ ಸಂಪ್ರದಾಯಗಳಿಗೆ ಇಸ್ಲಾಂ ಮತ್ತು ಕ್ರೈಸ್ತಮತಗಳು ಕೂಡಾ ಒಂದು ಸಂಪ್ರದಾಯವಾಗಿ ತೋರಿದ್ದವು. ಭಾರತೀಯ ರಾಜರು ಮಸೀದೆ, ಚರ್ಚ್ಗಳನ್ನು ಕಟ್ಟಿಸಿಕೊಟ್ಟ ಉದಾಹರಣೆಗಳನ್ನು ಈ ಹಿನ್ನೆಲೆಯಿಂದ ನೋಡಿದರೆ ಅವು ಸಹಜವಾಗಿಯೇ ಕಾಣುತ್ತವೆ. ಸೆಮೆಟಿಕ್ ರಿಲಿಜನ್ನುಗಳು ಸಾಂಪ್ರದಾಯಿಕ ಭಾರತದಲ್ಲಿ ಹೇಗಿವೆ?  ರಿಲಿಜನ್ನುಗಳ ಬೋಧನೆ ಹಾಗೂ ಆಚರಣೆಗಳ ಸಂಬಂಧಿಸಿ ಭಾರತದಂಥ  ದೇಶದಲ್ಲಿ ವ್ಯತ್ಯಾಸಗಳೇನಾದರೂ ಉಂಟಾಗಿವೆಯೆ? ಭಾರತೀಯ ಬಹುಸಾಂಸ್ಕೃತಿಕ ವಾಸ್ತವವು ಸೆಮೆಟಿಕ್ ಮತಗಳ ಮೇಲೆ ಕೂಡಾ ಪ್ರಭಾವವನ್ನು ಬೀರಿದೆ ಎಂಬುದು ಇಲ್ಲಿಯ ಸಂಸ್ಕೃತಿಯನ್ನು ಅಧ್ಯಯನ ಮಾಡಿದ ಯಾರಿಗಾದರೂ ವೇದ್ಯವಾಗುತ್ತದೆ. ಸಾಧಾರಣವಾಗಿ ಮುಸ್ಲಿಂ ರಾಜರಲ್ಲಿ ಕೆಲವರು ದೇವಾಲಯಗಳನ್ನು ನಾಶಪಡಿಸಿದ್ದನ್ನೇ ಎತ್ತಿ ಹೇಳಲಾಗುತ್ತದೆ. ಆದರೆ ಮುಸ್ಲಿಂ ರಾಜರುಗಳು ಹಿಂದೂ ದೇವತೆಗಳನ್ನು ಪೋಷಿಸಿದ್ದನ್ನೂ, ಪೂಜಿಸಿದ್ದನ್ನೂ ಅನೇಕ ಸಂದರ್ಭಗಳಲ್ಲಿ ನೋಡುತ್ತೇವೆ. ಮುಸ್ಲಿಂ ಅರಸರು ಮೂಲತಃ ಮತಾಂಧರಾಗಿದ್ದು, ಅಸಹಾಯಕರಾದಾಗ, ಅಥವಾ ರಾಜಕೀಯ ತಂತ್ರಕ್ಕಾಗಿ ಹಿಂದೂ ದೇವತೆಗಳ ಮೊರೆ ಹೊಕ್ಕಿದ್ದರು ಎಂಬುದಾಗಿ ಹಿಂದುತ್ವವಾದಿಗಳು ಅದಕ್ಕೊಂದು ದುರುದ್ದೇಶವನ್ನು ಆರೋಪಿಸುತ್ತಾರೆ. ಈ ವಾದದ ಹಿಂದೆ ಹಿಂದೂ ರಿಲಿಜನ್ನಿಗೆ ಒಂದು ಮತವಿಶ್ವಾಸದ ತಳಹದಿ ಇದೆ ಎಂಬ ಗ್ರಹಿಕೆ ಕೆಲಸ ಮಾಡುತ್ತಿರುವುದು ಸ್ಪಷ್ಟ. ಆದರೆ ಈ ಪೂಜೆಗಳು ಕೇವಲ ಸಾಂಪ್ರದಾಯಿಕ ಆಚರಣೆಗಳೇ ವಿನಃ ಯಾವುದೇ ಮತ ಪ್ರತಿಪಾದನೆಗಳಲ್ಲ ಎಂಬುದು ಯಾವುದೋರೀತಿಯಲ್ಲಿ ಹೊಲಬಾದಾಗ ಒಬ್ಬ ಮುಸ್ಲಿಂ ಅರಸನೂ ಅದನ್ನು ಶೃದ್ಧೆಯಿಂದಲೇ ಮಾಡುವ ಸಾಧ್ಯತೆಗಳು ತೆರೆಯುತ್ತವೆ. ಹಿಂದೂ ಸಂಪ್ರದಾಯದ ಜಗತ್ತಿನಲ್ಲೇ ಬೆಳೆದುಬಂದ ಮುಸ್ಲಿಂ ರಾಜರಿಗೆ ಈ ಸಹಜಜ್ಞಾನ ಇರಲಿಲ್ಲ ಎಂದು ಭಾವಿಸಲು ಕಾರಣಗಳೂ ಇಲ್ಲ. ಅವರಿಗೆ ವೈಯುಕ್ತಿಕ ಪ್ರಯೋಜನ ಏನೇ ಇದ್ದಿರಬಹುದು. ಅದು ಹಿಂದೂ ರಾಜರಿಗೂ ಇತ್ತಷ್ಟೆ. ಹಾಗಾಗಿ ಇದು ಇಸ್ಲಾಮಿನ ಆಚರಣೆಯ ಮೇಲೆ ಭಾರತೀಯ ಸಂಪ್ರದಾಯಗಳ ಪ್ರಭಾವವನ್ನಂತೂ ತೋರಿಸುತ್ತದೆ. ಆದರೆ ವಿಪರ್ಯಾಸವೆಂದರೆ ಮುಸ್ಲಿಂ ರಾಜರು ಹಿಂದೂ ದೇವತೆಗಳನ್ನು ಶೃದ್ಧೆಯಿಂದ ಪೂಜಿಸಿದ ಸಾಧ್ಯತೆಯು ಮುಸ್ಲಿಮರಿಗೇ ಇಂದು ಊಹೆಗೆ ನಿಲುಕದ ವಿಷಯವಾಗತೊಡಗಿದೆ.

ಇಂದಿಗೂ ಬಹುಪಾಲು ಗ್ರಾಮೀಣ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ತಮ್ಮ ಮೂಲ ಪ್ರಾದೇಶಿಕ ಜಾತಿಗಳ ಅನೇಕ ಛಾಯೆಗಳನ್ನು ಉಳಿಸಿಕೊಂಡಿದ್ದಾರೆ. ಅವರಿಗೆ ಇಸ್ಲಾಂ ಮತದ ಆಚರಣೆಯ, ನಂಬಿಕೆಯ ಕುರಿತು ಪ್ರಾಥಮಿಕ ಮಾಹಿತಿಗಳಿರಬಹುದು. ಆದರೆ ಅವರಿಗೂ ಕೂಡ ಎಷ್ಟರಮಟ್ಟಿಗೆ ರಿಲಿಜನ್ನಿನ ಉದ್ದೇಶ ಅರ್ಥವಾಗಿದೆ ಎಂಬುದು ಸಂಶಯಾಸ್ಪದ. ಏಕೆಂದರೆ ಅವರು ಸ್ಥಾನಿಕ ಪೂಜಾಚರಣೆಗಳನ್ನು ತಮ್ಮದೆಂದೇ ಭಾವಿಸಿಕೊಂಡು ನಡೆಸುತ್ತಿರುತ್ತಾರೆ. ನಮ್ಮ ಒಂದು ಕ್ಷೇತ್ರಕಾರ್ಯದಲ್ಲಿ ನಾವು ಇಂಥ ಅನೇಕರನ್ನು ಪ್ರಶ್ನಿಸಿದ್ದೇವೆ. ಖುರಾನೇ ತಮ್ಮ ಧಾರ್ಮಿಕ ಆಚರಣೆಗಳಿಗೆಲ್ಲ ಮೂಲವೆಂಬುದಾಗಿ ಇವರೆಲ್ಲ ತಿಳಿಸಿದರೂ, ಅವರು ಸ್ಥಾನಿಕ ದೇವತೆಗಳನ್ನೂ ಶೃದ್ಧಾಭಕ್ತಿಯಿಂದ ಪೂಜಿಸುವುದೂ ಕಂಡುಬಂದಿದೆ. ಅವರಲ್ಲಿ ಈ ಕುರಿತು ವಿವರಣೆಗಳೇನಿಲ್ಲ. ಇಂದಿನ ಒಂದು ಸಾಂಪ್ರದಾಯಿಕ ಸಮಾಜದ ಚೌಕಟ್ಟಿನಲ್ಲಿ ಇದೆಲ್ಲ ಸಾಧ್ಯವಾಗಿರುವುದು ನಮಗೆ ಐತಿಹಾಸಿಕ ನಿದರ್ಶನವಾಗಿದೆ ಹಾಗೂ ಇದು ಅಧ್ಯಯನಯೋಗ್ಯವಾದ ವಿಷಯ. ಸೆಕ್ಯುಲರಿಸಂನ ಉಪಸ್ಥಿತಿಯಲ್ಲಿ ಕೇವಲ ಹಿಂದೂ  ರಿಲಿಜನ್ನಿನ ಆವಿಷ್ಕಾರಕ್ಕಾಗಿ ಮಾತ್ರವೇ ಒತ್ತಡ ಸೃಷ್ಟಿಯಾಗಿಲ್ಲ,  ಶುದ್ಧ ಇಸ್ಲಾಮಿನ ಆವಿಷ್ಕಾರಕ್ಕೂ ಒತ್ತಡ ಉಂಟಾಗಿದೆ ಎಂಬುದನ್ನು ಗಮನಿಸಬೇಕು. ಅಂದರೆ, ಅವೆಲ್ಲ ರಿಲಿಜನ್ನಿನ ಪರಿಭಾಷೆಗಳನ್ನು ರೂಢಿಸಿಕೊಳ್ಳುವಾಗ ಸ್ಥಾನಿಕ ಆಚರಣೆಗಳನ್ನು, ಹಾಗೂ ಸಹಬಾಳ್ವೆಯ ಇತಿಹಾಸವನ್ನು ಅನಧಿಕೃತ ಎಂಬುದಾಗಿ ತಿರಸ್ಕರಿಸುವ ಪೃವೃತ್ತಿ ಬೆಳೆಯುತ್ತದೆ.

ಕಳೆದ ಒಂದೂವರೆ ದಶಕದ ಬರವಣಿಗೆಗಳಲ್ಲಿ ಸೆಕ್ಯುಲರ್ ವಾದವು ಕೂಡಾ ಸಾಕಷ್ಟು ಆತ್ಮಾವಲೋಕನೆಯನ್ನು ಮಾಡಿಕೊಂಡಿದ್ದು ಕಂಡುಬರುತ್ತದೆ. ಅದೂ ಪಯರ್ಾಯಗಳನ್ನು ಹುಡುಕುತ್ತಿದೆ. ಭಾರತೀಯ ಸಮಾಜದ ವಾಸ್ತವಗಳನ್ನು ಅರ್ಥೈಸಲು ಪ್ರಯತ್ನಿಸುತ್ತಿದೆ. ಹಾಗೂ ಅದು ಸಾಕಷ್ಟು ಬದಲಾವಣೆಗಳನ್ನೂ ಕಂಡಿದೆ. ಈ ನಿಟ್ಟಿನಲ್ಲಿ ಗಾಂಧೀಜಿಯವರ ವಿಚಾರಗಳ ಮರುಶೋಧನೆ ಕೂಡಾ ನಡೆದಿದೆ. ಹಿಂದುತ್ವವಾದಿಗಳು ಒಂದು ಕಲ್ಪಿತ ಸಮುದಾಯವನ್ನು (ಅಥವಾ ಸುಳ್ಳು ಪ್ರಜ್ಞೆ) ಪ್ರತಿಪಾದಿಸುತ್ತಿದ್ದಾರೆ ಎಂಬ ವಾದವು ಸೆಕ್ಯುಲರಿಸಂಗೆ ಹಳೆಯದು. ಹಿಂದೂಯಿಸಂ ಎಂಬುದು ಸೆಮೆಟಿಕ್ ರಿಲಿಜನ್ನಿನಂತಲ್ಲ ಎಂದೂ ಅವರು ಹೇಳಿಯಾಗಿದೆ. ಅದನ್ನು ಏಕರೂಪಿಯನ್ನಾಗಿ ಮಾಡುತ್ತಿದ್ದಾರೆ ಎಂಬುದಾಗಿ ಹಿಂದುತ್ವದ ಬಗೆಗೆ ಅವರ ಆಕ್ಷೇಪಣೆಯೂ ಇದೆ. ಹಾಗೂ ಭಾರತವು ಬಹು ಸಂಸ್ಕೃತಿಗಳ ದೇಶ ಎಂದು ಕೂಡಾ ಅವರು ವಾದಿಸುತ್ತಿದ್ದಾರೆ. ಸೆಕ್ಯುಲರ್ ವಾದಿಗಳು ಭಾರತೀಯರ ಸಾಂಸ್ಕೃತಿಕ ಭಾವನೆಗಳನ್ನು, ನಂಬಿಕೆಗಳನ್ನು ಅರ್ಥಮಾಡಿಕೊಳ್ಳಲು ಸೋತಿದ್ದಾರೆ ಎಂದೂ ಅವರೇ ತಮ್ಮನ್ನು ಟೀಕಿಸಿಕೊಂಡಿದ್ದಾರೆ. ಆದರೆ ಸೆಕ್ಯುಲರ್ ವಾದಿಗಳ ವಾದವು ಒಂದು ಹಂತದವರೆಗೆ ಬಂದು ಅಲ್ಲೇ ನಿಂತುಬಿಡುತ್ತದೆ. ಏಕೆ? ಸೆಕ್ಯುಲರಿಸಂನ ಮೂಲ ಕಾರ್ಯಕ್ರಮವು ಮತೀಯ ಸೌಹಾರ್ದತೆಯಲ್ಲ, ಅದೊಂದು ಪ್ರಭುತ್ವದ ಕಾರ್ಯಕ್ರಮ ಎಂಬುದಾಗಿ ಈಗಾಗಲೇ ಪ್ರಸ್ತಾಪಿಸಲಾಗಿದೆ. ಪ್ರಭುತ್ವವನ್ನು ಸೆಕ್ಯುಲರ್ ಲೋಕದೃಷ್ಟಿಯ ತಳಹದಿಯಮೇಲೆ ನಿಲ್ಲಿಸಬೇಕೆಂಬುದೇ ಅದರ ವಾದ. ಆದರೆ ಭಾರತದಲ್ಲಿ ಅದು ನಿದರ್ಿಷ್ಟವಾಗಿ ಹಿಂದೂ-ಮುಸ್ಲಿಂ ಕೋಮುಸೌಹಾರ್ದತೆಯ ಪ್ರತಿಪಾದನೆಯಾಗಿ ಮಾರ್ಪಟ್ಟಿದೆ. ಆದರೆ ಅಷ್ಟನ್ನೇ ಗುರಿಯಾಗಿಟ್ಟುಕೊಂಡು ಯಾವ ಪರಿಹಾರವನ್ನು ಸೂಚಿಸಿದರೂ ಅದು ಸೆಕ್ಯುಲರ್ ವಾದದ ಇಡೀ ಕಥನಕ್ಕೆ ಸಮ್ಮತವಾಗದಿದ್ದರೆ ಅದು ಪರಿಹಾರವಾಗುವುದಿಲ್ಲ. ಹಿಂದುಯಿಸಂ ಎಂಬ ರಿಲಿಜನ್ನೇ ಇಲ್ಲ ಎನ್ನುವಾಗ ಅದನ್ನನುಸರಿಸಿ ಬರಬಹುದಾದ ಇನ್ನೂ ಕೆಲವು ನಿರ್ಣಯಗಳನ್ನು ಒಪ್ಪಿಕೊಳ್ಳಲು ಅವರಿಗೆ ಕಷ್ಟವಾಗುತ್ತದೆ.   ಪ್ರಭುತ್ವದ ಇನ್ನೂ ಹಲವು ಕಾರ್ಯಕ್ರಮಗಳ ಉದ್ದೇಶಕ್ಕಾಗಿ ಈ ಹಿಂದೂಯಿಸಂ ಅನ್ನು ಕಲ್ಪಿಸಿಕೊಳ್ಳುವುದು ಅವರಿಗೆ ಮುಖ್ಯವಾಗುತ್ತದೆ. ಹಿಂದೂಯಿಸಂಗೆ ಒಂದು ಐಡಿಯಾಲಜಿ ಇಲ್ಲ, ಪುರೋಹಿತಶಾಹಿ ಇಲ್ಲ, ಇತ್ಯಾದಿ ವಾದಗಳಾಗಲೀ, ನಮ್ಮ ಸಂಪ್ರದಾಯಗಳು ಈ ಸಮಸ್ಯೆಗೆ ಉತ್ತರಿಸಬಲ್ಲವು ಎಂಬ ವಾದವಾಗಲೀ ಅವರ ಕಥನಕ್ಕೆ ಬೇರೆ ಸಮಸ್ಯೆಗಳನ್ನು ಸೃಷ್ಟಿಸುತ್ತವೆ.

ಆದರೆ ಇದೇ ಆಧುನಿಕ ಕಥನವೇ ಮತೀಯಭಾವನೆಯನ್ನೂ ತಂದಿದೆ ಎಂಬುದು ವಾಸ್ತವ. ಭಾರತೀಯ ಸಂಪ್ರದಾಯಗಳಿಗೆ ಅನ್ಯ ಸಂಪ್ರದಾಯಗಳ ಕುರಿತು ನಾವು ಆರೋಪಿಸುವ ಅಂಥ ನಂಬಿಕೆ ಹಾಗೂ ಭಾವನೆಗಳೇ ಇಲ್ಲ. ಇಂಥ ಭಾವೋದ್ರೇಕಗಳೆಲ್ಲ ಕೋಮುಭಾವನೆಯನ್ನು ತುಂಬಿಕೊಂಡವರಿಗೆ ಮಾತ್ರ ಸಹಜ. ಈ ಕೋಮುಭಾವನೆ ಹಿಂದೂ-ಮುಸ್ಲಿಂ ಪ್ರಭೇದಕ್ಕೆ ಮಾತ್ರ ಸೀಮಿತವಾಗಿಲ್ಲ. ಯಾವುದೇ ಸಮುದಾಯಕ್ಕೆ ಸ್ಥಿರವಾದ, ಏಕರೂಪೀ ದುರ್ಗುಣಗಳನ್ನು ಹಾಗೂ ದುರುದ್ದೇಶಗಳನ್ನು ಆರೋಪಿಸುವ ಸ್ಟೀರಿಯೋಟೈಪುಗಳನ್ನು ಹುಟ್ಟುಹಾಕಿದಾಗ ಅದು ಜನ್ಮ ತಳೆಯುತ್ತದೆ. ಅವು ಮುಸ್ಲಿಮರ ಬಗೆಗೆ ಮಾತ್ರವೇ ಇಲ್ಲ, ಅಷ್ಟೇ ಹೀನಾಯವಾಗಿ ಹಿಂದೂ ಎಂಬ ಪ್ರಭೇದದ ಕುರಿತೂ ಆಧುನಿಕ ವಿಚಾರಧಾರೆಗಳಿಂದ ಅವು ಹುಟ್ಟಿವೆ. ಸೆಕ್ಯುಲರ್ ವಾದದ ಆದರ್ಶವಾಗಿರುವ ಆಧುನಿಕ ಪ್ರಗತಿಪರತೆಯು ಹುಟ್ಟುಹಾಕಿದ ಜಾತೀಯ ಮೀಮಾಂಸೆಗಳೂ ಈ ಹಂತಕ್ಕೇ ಬಂದು ತಲುಪಿವೆ ಎಂಬುದನ್ನು ಗಮನಿಸಬೇಕು. ಹಾಗಾಗಿ ಇದು ನಿಜವಾಗಿಯೂ ನಮ್ಮ ಸಮಾಜವನ್ನು ಯತಾರ್ಥವಾಗಿ ತಿಳಿದುಕೊಂಡು ಅದನ್ನಾಧರಿಸಿ ನೀತಿಯನ್ನು ರೂಪಿಸುವ ಸಮಸ್ಯೆಯಾಗಿದೆ. ಆದರೆ ಯತಾರ್ಥವನ್ನು ಎಲ್ಲಿಯವರೆಗೆ ಒಪ್ಪಿಕೊಳ್ಳಬಲ್ಲೆವು ಎಂಬುದೇ ಸೆಕ್ಯುಲರ್ ವಾದದ ಸವಾಲು.

ಸಮಸ್ಯೆ ಎಲ್ಲಿಂದ ಉದ್ಭವವಾಗುತ್ತದೆಯೆಂದರೆ ಸೆಕ್ಯುಲರಿಸಂಗೆ ಸಂಬಂಧಿಸಿದ ವಿಭಿನ್ನ ಪೂರ್ವಗೃಹೀತಗಳು ಒಟ್ಟಾರೆಯಾಗಿ ಒಂದೇ ಕಥನದ ಬೇರೆ ಬೇರೆ ಸಾಲುಗಳು ಹಾಗೂ ಪ್ಯಾರಾಗಳಂತೆ ಇವೆ. ಒಂದು ಸಾಲನ್ನು ಇನ್ನೂ ಯಾವ್ಯಾವುದೋ ಸಾಲುಗಳಿಗೆ ತಳಕು ಹಾಕಿ ಒಟ್ಟಾರೆಯ ಕಥನವನ್ನು ಅರ್ಥೈಸಲಾಗುತ್ತದೆ. ಒಂದು ನಿರ್ದಿಷ್ಟ ರೀತಿಯಲ್ಲಿ ಈ ಕಥನವು ಮನುಷ್ಯ ಕಲ್ಯಾಣದ ಪ್ರತಿಪಾದನೆಯನ್ನು ಮಾಡುತ್ತಿರುತ್ತದೆ. ಅದರಲ್ಲಿ ಪ್ರತೀ ಸಾಲನ್ನು ಕಥನದ ಸಂದೇಶಕ್ಕೆ ಧಕ್ಕೆಯಾಗದ ರೀತಿ ತಿದ್ದಬಹುದು. ವೈಚಾರಿಕತೆಗೆ ಈ ಚೌಕಟ್ಟಿನಲ್ಲಿ ಮಾತ್ರ ಪ್ರಸ್ತುತತೆ ಇದೆ. ವಿಚಾರವು ಈ ಚೌಕಟ್ಟನ್ನು ಮೀರುವ ಹಂತಕ್ಕೆ ಬಂದಾಗ ಅದು ಮನುಷ್ಯ ಕಲ್ಯಾಣದ ಕುರಿತು ಆತಂಕವನ್ನು ಸೃಷ್ಟಿಸುತ್ತದೆ. ಅಂಥ ವಿಚಾರಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ.  ಹಿಂದೂಯಿಸಂ ಸೆಮೆಟಿಕ್ ರಿಲಿಜನ್ನಿನಂತಲ್ಲ ಎಂದರೆ ಈ ಕಥನಕ್ಕೆ ಸಮಸ್ಯೆಯಿಲ್ಲ. ಆದರೆ ಅದು ರಿಲಿಜನ್ನೇ ಅಲ್ಲ ಎಂದಾಗ, ಮನುಷ್ಯ ಕಲ್ಯಾಣಕ್ಕೆ ರಿಲಿಜನ್ನಿನ ಅನಿವಾರ್ಯತೆಯೇನೂ ಇಲ್ಲ ಎಂದಾಗ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಸೆಕ್ಯುಲರಿಸಂನ ಚೌಕಟ್ಟಿನಲ್ಲಿ ವಿಚಾರಮಾಡುವುದೆಂದರೆ ಐರೋಪ್ಯ ಆಧುನಿಕ ಕಥನಗಳ ಚೌಕಟ್ಟಿನಲ್ಲಿ ವಿಚಾರಮಾಡುವ ನಿರ್ಬಂಧವಾಗಿದೆ. ಹಾಗಾಗಿ ಈ ಹಿಂದೂ-ಮುಸ್ಲಿಂ ಕೋಮುವಾದದ ಗೋಜಲಿನಿಂದ ಹೊರಬರುವ ಕೆಲಸವೆಂದರೆ ಭಾರತೀಯರ ನಿಟ್ಟಿನಿಂದ ಮನುಷ್ಯ ಕಲ್ಯಾಣದ ಪರ್ಯಾಯ ಕಥನವನ್ನು ಸೂಚಿಸುವ ಕೆಲಸವೂ ಆಗಿದೆ.