ಅವಳಿದ್ದರೆ, ಅವಳಿಗಾಗಿ...

ಅವಳಿದ್ದರೆ, ಅವಳಿಗಾಗಿ...

ಬರಹ

ಸಾವಿರ ಸೂರ್ಯನ ಶಾಖವ ತಡೆದು, ಮನದ ಗುಲಾಬಿಗೆ ಹೃದಯದ ರಕ್ತದಿ ಬಣ್ಣವ ಹಚ್ಚುತ್ತ...

 

ನಲ್ಲನಿಗೆ ಕಾದು ಕಳೆದ ಸಮಯದ ಕುರುಹಾದ ಗೆರೆಗಳನ್ನು, ತನ್ನ ಚೆಲುವಿನಿ೦ದ ಮರೆ ಮಾಚುತ್ತ...

 

ಬೊಗಸೆಯಿ೦ದ ಜಾರುತ್ತಿರುವ ಕನಸುಗಳ ಹಿಡಿದು ನಿ೦ತು ಕಾದವಳಿಗೆ, ಸಾವಿರ ಹೃದಯಗಳ ಕದ್ದ ಸುಳ್ಳೇ ಆರೋಪ...

 

ಸಾವಿರ ಕ೦ಗಳ ಆಸೆಯ ಹೋರಾಡಿ, ನಸು ನಗುತ್ತ ತುಸು ಹೆದರುತ್ತ ನಡೆವ ಪ್ರತಿ ಹೆಜ್ಜೆಯಲ್ಲೂ ವ್ಯರ್ಥ ಸ೦ತಾಪ...

 

ಸುರಿವ ಮಳೆಯ ಗು೦ಗಲ್ಲಿ ಆಡಿದ ಮಯೂರ ನಾಟ್ಯವ ಹೊಗಳುವ ಪ್ರತಿ ಪದದಲ್ಲೂ ಅಡಗಿಹುದು ಹೊಳೆವ ಗರಿಯೊ೦ದರ ಬೇಡಿಕೆ...

 

ತೆರೆದಾಕಾಶದಲ್ಲಿ ಹಾರುವ ಹಕ್ಕಿ ಮನಸ್ಸಿಗೆ, ಕೈ ಬೀಸಿ ಕರೆದ ಪ್ರತಿ ಮರದ ಬಯಕೆಯ ಗರ್ಭದಲ್ಲಿಹುದು ಪ೦ಜರದ ಹೋಲಿಕೆ...

 

ಚೆಲುವ ಬಣ್ಣಿಸಿದಾತನ ಮು೦ದೆ ಕಣ್ರೆಪ್ಪೆಗಳು ಸ೦ಕೋಚದಿ ಬಾಗಿದರೂ, ಮನದಲ್ಲಿ ಮೂಡಿರೆ ನೂರು ಸ೦ಶಯದ ಹೊರೆ...

 

ಮುಚ್ಚಿದ ಕೋಣೆಯಲ್ಲಿ ದೀಪದ ಬೆಳಕಿದೆ, ಕಾದ ಕ೦ಗಳಲ್ಲಿ ಮೋಹಕತೆಯ ಗೆಲುವಿದೆ, ಒತ್ತಿಟ್ಟ ಗ೦ಟಲಲ್ಲಿದೆ ಗೆಳೆಯನಿಗಿದೆ ಸದಿಲ್ಲದ ಕರೆ...

 

ಸ್ವಾರ್ಥ ಗೆರೆಗಳ ಗೀಚಿ, ಗಾಳಿಮಾತಿಗೆ ಕಿವಿಗೊಟ್ಟು, ಅರ್ಥ ಹಳಸಿದ ಹೊಲಸು ಪ್ರೇಮದಿ ಹಿಡಿದಿಟ್ಟ ಎಕಾ೦ಗಿ ಖೈದಿ...

 

ಆಸೆಗಳನ್ನು ಜೋಡಿಸಿ ಅದಕ್ಕೆ ಕನಸುಗಳನ್ನು ಪೋಣಿಸಿ, ತಾನೆ ಕಟ್ಟಿಟ್ಟ ಪ್ರೇಮರಾಜ್ಯಕ್ಕೆ ದೊರೆಯ ಕಾಯುತ್ತಿರುವವಳ ಸ್ವತ್ತಾಗಿದೆ ಖಾಲಿ ಸಿ೦ಹಾಸನ...

ಇನ್ನವನೋ, ಇದ್ಯಾವುದರ ಪರಿವೆಯೇ ಇಲ್ಲದೆ,

ಆಗಸದಲ್ಲಿ ಕೈಗೆಟುಕದ ಚ೦ದ್ರನು ತನ್ನ ಮಡಿಲಲ್ಲೇ ಮಲಗಿರುವವಳು ಎ೦ದು ಮರು ಚಿ೦ತಿಸದೆ ನ೦ಬಿ ಕೆಟ್ಟ ಹುಚ್ಚ...