"ಕಣ್ಣು ತೆರೆದು ಕಾಣುವ ಕನಸೇ ಜೀವನ"

"ಕಣ್ಣು ತೆರೆದು ಕಾಣುವ ಕನಸೇ ಜೀವನ"

 


ಜಯಂತ್ ಕಾಯ್ಕಿಣಿ ಅವರ ಈ ಸಾಲು ಸೋನು ನಿಗಂ ಕಂಠ ಸಿರಿಯಲ್ಲಿ ಕೇಳಿದಾಗ ಕರುಳು ಮಿಡಿಯದೆ ಇರದು. ಕನಸು ಮತ್ತು ಜೀವನವನ್ನು ಏಕಕಾಲಕ್ಕೆ ಬೆಸೆಯುವ ಈ ಸಾಲು ಹೊಸದೇನಲ್ಲ ಆದರೆ, ಈ ಸಾಲು ಮೂಡಿಸುವ ವಿಚಾರ ಸರಣಿ  ವಿಸ್ತ್ರತವಾದದ್ದು. ಹದಿನಾರನೇ ಶತಮಾನದಲ್ಲಿ ಪ್ರಸಿದ್ಧ ಆಂಗ್ಲ ಕವಿ ಷೇಕ್ಸ್ಪಿಯರ್ ಹೇಳುವಂತೆ : Life is but an empty dream / Full of sound and fury signifying nothing. ಬಹುಷಃ  ಸಾಂಧರ್ಭಿಕವಾಗಿ ಕವಿ ಬದುಕೆಂದರೆ ಗೊಂದಲದ ಗೂಡು ಅರ್ಥವಿಲ್ಲದ ಕನಸು ಎಂದು ಹೇಳಿರಬಹುದು. ಕೆಲವರಿಗೆ ಹಾಗನಿಸಲೂ ಬಹುದು . ಆದರೆ ಕಾಯ್ಕಿಣಿಯವರ ಈ ಸಾಲು ಒಂದು ಮಹತ್ತರ ಸತ್ಯದ ಬಗ್ಗೆ ಹೇಳುವಂತೆ ನನಗನಿಸುತ್ತದೆ. ಅದು ಏನೆಂದು ನೋಡೋಣ.


ನಾವೆಲ್ಲ ಕನಸು ಕಾಣುತ್ತೇವೆ- ಅದು ಬಹಳಷ್ಟು ಸಲ ನಿದ್ರಾವಶರಾದಾಗ. ಅಲ್ಲಿಯೂ ಭಾವನಾತ್ಮಕ ಸ್ಪಂದನೆ ಇರುತ್ತದೆ. ಅದು ಕನುಸುವಷ್ಟು ವೇಳೆ ನಿಜ ಅಂತಾನೂ ಅನಿಸುತ್ತದೆ. ಎದ್ದ ಗಳಿಗೆ ಅಯ್ಯೋ ಮುಗಿದೇ ಹೋಯಿತಲ್ಲ ಅಂತ ಅನಿಸುವ  ಕೆಲ ಕನಸುಗಳಿದ್ದರೆ, ಇನ್ನು ಕೆಲವು ಭಯ ಹುಟ್ಟಿಸುತ್ತವೆ.  ಕೆಲ ಸಮಯದ ನಂತರ ಇವೆರಡೂ ಬಗೆಯ ಕನಸುಗಳು ಕೇವಲ ಭ್ರಮೆ ಅಥವಾ ಕೇವಲ ‘ಕನಸುಗಳು ‘ ಎನ್ನುವ ನಿರ್ಧಾರಕ್ಕೆ ಬರುತ್ತೇವೆ.ಹಾಗೆಯೇ ಕಣ್ಣು  ತೆರೆದು ಕಾಣುವ ಕನಸು ಜೀವನ ಅನ್ನುವ ಮಾತು ತುಂಬಾ ಅರ್ಥ ಗರ್ಭಿತವಾದದ್ದು . ಎಚ್ಚರದ ಸ್ಥಿತಿಯಲ್ಲೂ ರಮ್ಯ ಕನಸು ಕಾಣುವ ಹದಿ ವಯಸ್ಸಿನ ಹುಡುಗ/ ಹುಡುಗಿಯರಿಗೂ; ಬದುಕನ್ನು ನಿರ್ಲಿಪ್ತವಾದ ಗ್ರಹಿಕೆಯಿಂದ ನೋಡುವ ಇನ್ನೊಬ್ಬನಿಗೂ ಈ ಬದುಕು – ಕ್ಷಣಿಕ, ಭ್ರಾಮಕ ಅಂತ ಅನಿಸದೆ ಇರದು. ಮುಂದುವರೆದು ಯೋಚಿಸಿದಾಗ ನಿದ್ರಾವಸ್ತೆಯ ಕನಸಿಗೂ ಎಚ್ಚರದಲ್ಲಿ ನಾವು ದಿನ ನಿತ್ಯ ನೋಡುವ ಈ ಬದುಕೆಂಬ ಮಹಾನ್ ಕನಸಿಗೂ ಇರುವ ಸಾಮಾನ್ಯ ಲಕ್ಷಣವೆಂದರೆ – ಎರೆಡರ ಮಾಯೆ ತುಂಬಿದ ಗುಣ.  ಬದುಕಿನಲ್ಲಿ ನಾವು ಅದೆಷ್ಟು ಸಂದರ್ಭಗಳನ್ನು ಎದುರಿಸುತ್ತೇವೆ, ಅದೆಷ್ಟು ಜನರನ್ನು ನೋಡುತ್ತೇವೆ, ಅದೆಷ್ಟು ಭಾವನೆಗಳನ್ನು ಹೊರಹಾಕುತ್ತೇವೆ . ಇವೆಲ್ಲವುಗಳನ್ನು ಒಂದು ಅಂತರದಿಂದ ನೋಡಿದರೆ ಯಾವುದನ್ನೂ ನಿರ್ದಿಷ್ಟವಾದ ಕಾರ್ಯ- ಕಾರಣಕ್ಕೆ ಹೊಂದಿಸಲು ಆಗುವುದಿಲ್ಲ. ನಮ್ಮ ಪ್ರತಿಕ್ರಿಯೆಗಳು ಬಹಳಷ್ಟು ಸಲ ಕೇವಲ ಸಂಧರ್ಬ ಜನ್ಮಿತ. ಬದುಕಿನಲ್ಲಿ ಬರುವ, ಬಿಟ್ಟು ಹೋಗುವ ಜನರು ಕೂಡ ಆಕಸ್ಮಿಕ. ಹೀಗೆ ಯೋಚಿಸಿದರೆ ಬದುಕು ಕಣ್ಣು ತೆರೆದು ಕಾಣುವ ಕನಸು ಅಂತ ಖಂಡಿತ ನನಗೆ ಅನಿಸುತ್ತದೆ. ಈ ತೆರೆನಾದ ಒಂದು ತಿಳುವಳಿಕೆ ಬಂದರೆ ನಾವುಗಳೆಲ್ಲ ಬಹುಷಃ  ಸ್ವಲ್ಪ ನಿರಾಳವಾಗಿ ಬದುಕ ಬಹುದೇನೋ. ಏಕೆಂದರೆ ಬದುಕಿನ ಮಾಯಾಜಾಲವನ್ನ, ಕ್ಷಣಿಕತೆಯನ್ನ, ಭ್ರಮಾತ್ಮಕತೆಯನ್ನ ಮೀರಿ ನಿಷ್ಕಾಮತ್ವದೆಡೆಗೆ ನಡೆಯುವುದೇ ನಮ್ಮ ಬದುಕಿನ ಕಟು ವಾಸ್ತವ. ಈ ಹೊತ್ತಿನ ಬದುಕೇ ಶಾಶ್ವತ, ಸತ್ಯ ಎಂದು ಬದುಕುವ ನಾವು ಅದರ ಪಾಠಗಳನ್ನು ಮರೆತು ಸಾಂಧರ್ಭಿಕವಾಗಿ ಗೆಲುವಾಗಿಯೋ, ಬೇಸರವಾಗಿಯೋ ಇರುತ್ತೇವೆ. ಆದರೆ ಇದೆಲ್ಲ ಒಂದು ಮಹಾನ್ ಕನಸಿನ ಒಂದು ಅಂಗ, ಅಶಾಶ್ವತ ಅಂತ ಅರಿತರೆ ಮಗು ಸಹಜ ಬೆರಗು  ಅಥವಾ ಋಷಿ ಸಹಜ ಪಕ್ವತೆ ಇಂದ ಬಾಳಬಹುದಲ್ಲವೇ?


(ಈ ಸಾಲು ಹುಟ್ಟಿಸಿದ ಚಿಂತನೆಗಳನ್ನು ಬರಯುವ ಕನಸಿನೊಂದಿಗೆ ನಿಮ್ಮೊಡನೆ ನಾನು ಕನಸುತ್ತ …. ರವಿ ಕುಂಬಾರ್)

Rating
No votes yet