ನಿಮ್ಮ ವಯಸ್ಸೇನು?

ನಿಮ್ಮ ವಯಸ್ಸೇನು?

how old is too old to wear a mini skirt? ಎನ್ನುವ ಒಂದು ಲೇಖನ ಕಣ್ಣಿಗೆ ಬಿತ್ತು. how old is too old to wear a mini skirt? ಅನ್ನೋ ಪ್ರಶ್ನೆಗೆ ನಿಖರವಾದ ಉತ್ತರ ಸಾಧ್ಯವಲ್ಲದಿದ್ದರೂ ಉಡುವವರ ಅಭಿರುಚಿ, ಅವರ ಸೆನ್ಸ್ ಆಫ್ ಫ್ಯಾಶನ್ ಮತ್ತು ಆಕರ್ಷಕ ಮೈ ಮಾಟ ತಮಗೆ ಬೇಕಾದ ಉಡುಗೆಯನ್ನು ತೊದಲು ಜನರನ್ನು ಪ್ರೇರೇರಿಪಿಸುತ್ತದೆ. ಇದೇನು ಬುರ್ಖಾದಿಂದ ಮಿನಿ ಸ್ಕರ್ಟ್ ಗೆ "ಕುಸಿಯಿತೆ"  ನಿನ್ನ ಅಭಿರುಚಿ ಎಂದು ಹುಬ್ಬೇರಿಸಬೇಡಿ. ಈ ಲೇಖನ ಯಾವುದೇ political statement ಮಾಡ್ತಾ ಇಲ್ಲ, ಬದಲಿಗೆ ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ಮನುಷ್ಯ ಯಾವ ಯಾವ ರೀತಿ ಬಟ್ಟೆ ತೊಡುತ್ತಾನೆ/ಳೆ ಎನ್ನುವ ಮೇಲೊಂದು ಪಕ್ಷಿ ನೋಟ.


ಬಟ್ಟೆ ಧರಿಸುವಾಗ ವಯಸ್ಸನ್ನೂ ಗಮನಕ್ಕೆ ಇಟ್ಟು ಕೊಳ್ಳಬೇಕು ಎನ್ನುವುದು ಬಹುತೇಕ ಭಾರತೀಯರ ಅಭಿಪ್ರಾಯ. ಒಂದು ಲೆಕ್ಕದಲ್ಲಿ ಇದು ಸರಿಯೂ ಕೂಡಾ. ಮೇಲೆ ಹೇಳಿದಂತೆ ೭೦ ರ ಮಹಿಳೆ ಮಿನಿ ಸ್ಕರ್ಟ್ ತೊಟ್ಟರೆ ಒಂದು ರೀತಿಯ ಅಭಾಸವಾಗುತ್ತದೆ. ನಿಲ್ಲಿ, ನಿಲ್ಲಿ, ಅಭಾಸ ಏಕಾಗಬೇಕು? ನಿಕೃಷ್ಟ ಉಡುಗೆ ತೊಡುವುದನ್ನು ವಿರೋಧಿಸುವವರಿಗೆ ನಾವು ಹೇಳುವ ಕಿವಿ ಮಾತು ಉಟ್ಟ ಬಟ್ಟೆ ಮಾತ್ರ ನೋಡಿದರೆ ಸಾಕು, ಅದರೊಂದಿಗೇ ಬರುವ ಉಬ್ಬು ತಗ್ಗುಗಳನ್ನಲ್ಲ ಎಂದು. ಒಪ್ಪಿಕೊಂಡೆ. ಉಡುಗೆ ಬರೀ ಫ್ಯಾಶನ್ ಸೆನ್ಸ್ ನ ಮಾತ್ರ ಬಿಂಬಿಸಿದರೆ ೧೬ ರ ಪೋರಿಯ ಥರ ೭೦ ರ ಚೆಲುವೆ ಸಹ ಏಕೆ ಮಿನಿ ಸ್ಕರ್ಟ್ ಹಾಕಬಾರದು? ಒಹ್, ಎಪ್ಪತ್ತರ ಮಹಿಳೆಗೆ ೧೬ ರ ಅಂಗ ಸೌಷ್ಠವ ಇಲ್ಲ ಎಂದಿರಬೇಕು, ಹಾಗಾದರೆ ಎಲ್ಲಿ ಹೋಯಿತು ಫ್ಯಾಶನ್ ಸೆನ್ಸ್. ಇಲ್ಲಿರೋದು ಅಪ್ಪಟ ಲೈಂಗಿಕತೆ ಅಲ್ಲವೇ ನಮ್ಮ ನೋಟದಲ್ಲಿ? ವಾದ ವಿವಾದ ಬಂದಾಗ ಅಭಿರುಚಿ, ಫಾಶನ್ ಸೆನ್ಸ್, ಇಲ್ಲದಿದ್ದರೆ  ವಾರೆನೋಟ ಕನಿಷ್ಠ ಉಡುಗೆ ತೊಟ್ಟವರ ಕಡೆ. political statement ಬೇಡ ಎಂದು ಕೊಂಡರೂ ನುಸುಳಿಕೊಂಡಿತು ದರಿದ್ರ ರಾಜಕೀಯ. ವಿಷಯಕ್ಕೆ ಬರೋಣ...


ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದಾಗ (೯೦ ರ ದಶಕದಲ್ಲಿ) ಅವರಿಗೆ ಪ್ರಾಯ ಹೆಚ್ಚಿರಲಿಲ್ಲ. ೪೫-೫೦ ರ ಸಮೀಪ. ಆಗಾಗ ಜೀನ್ಸ್, ಟೀ ಶರ್ಟ್ ಗಳಲ್ಲಿ ಕಾಣಿಸಿ ಕೊಳ್ಳುತ್ತಿದ್ದರು. ಕ್ಲಿಂಟನ್ ಅವರದು ಆಕರ್ಷಕ ವ್ಯಕ್ತಿತ್ವ. ಬರೀ ಉಡುಗೆ ಯಲ್ಲಿ ಮಾತ್ರವಲ್ಲ, ಸಂಗೀತದಲ್ಲೂ ಆಸಕ್ತಿ. "ಸಾಕ್ಸೋ ಫೋನ್" ನುಡಿಸುವುದೆಂದರೆ ತುಂಬಾ ಇಷ್ಟ. ಕೆಲವೊಮ್ಮೆ ಸಾರ್ವಜನಿಕ ಸಭೆಗಳಲ್ಲಿ ನುಡಿಸುತ್ತಿದ್ದರು. ಅಧ್ಯಕ್ಷರ ಘನತೆಗೆ ಈ ವರ್ತನೆ ಕುಂದು ಎಂದು ಸಲಹೆಗಾರರು ಕಿವಿ ಮಾತನ್ನು ಹೇಳಿದಾಗ ನಿಲ್ಲಿಸಿದ್ದರು ಸಾಕ್ಸೋ ಫೋನ್ ಸಹವಾಸವನ್ನು. ಹೀಗೆ ಕ್ಲಿಂಟನ್ ಜೀನ್ಸ್ ತೊಟ್ಟಾಗ ಜನ ಹೇಳುತ್ತಿದ್ದದ್ದು ೪೦ ವಯಸ್ಸಿನ ನಂತರ ಜೀನ್ಸ್ ತೊಡುವುದಕ್ಕೆ you need to be brave ಎಂದು. ಅಂದರೆ ಜೀನ್ಸ್ ಅನ್ನು ಹದಿಹರೆಯದವರು, ಕಾಲೇಜಿಗೆ ಹೋಗುವವರು, ಹೀಗೇ ಯುವಜನರು ಮಾತ್ರ ತೊಡಬೇಕು ಎನ್ನುವ ಅಲಿಖಿತ ನಿಯಮ. ಆದರೆ ಈಗ ನೋಡಿ, ೯೦ ರ ತರುಣನೂ (ತರುಣ ಎಂದಾಗ ವ್ಯಂಗ್ಯ ಇಲ್ಲ, ಏಕೆಂದರೆ ವಯಸ್ಸು ೯೦ ಆದರೂ young at heart ಎಂದು ಕೊಳ್ಳುವ ಜನರಿದ್ದಾರೆ) ತೊಡುತ್ತಾನೆ ಜೀನ್ಸ್. ಸುಮಾರು ಐವತ್ತರ ಆಸುಪಾಸಿನ ನನಗೆ ಪರಿಚಯದ ವ್ಯಕ್ತಿಯೊಬ್ಬರು ಜೀನ್ಸ್ ಮಾತ್ರವಲ್ಲ ಕಾಲಿನ ತುಂಬಾ ಜೇಬುಗಳೇ ಇರುವ ಕಾರ್ಗೋ ಪ್ಯಾಂಟುಗಳನ್ನು ಧರಿಸುತ್ತಿದ್ದರು, ಆತ್ಮ ವಿಶ್ವಾಸದಿಂದ. ನೋಡಿ ಇಲ್ಲಿದೆ ಮಂತ್ರ. ಯಾವುದೇ ಉಡುಗೆ ತೊಡಬೇಕಾದರೂ ಆತ್ಮವಿಶ್ವಾಸ ಬೇಕು. ಅದು ನಮ್ಮ ಮುಖದ ಮೇಲೆ, ನಮ್ಮ ಮಾತು, ನಡಿಗೆಯ ಮೇಲೆ ಪ್ರಭಾವ ಬೀರುತ್ತದೆ. ಇನ್ಸ್ಟಂಟ್ ಆಗಿ ಯಂಗ್ ಆಗಿ ಬಿಡುತ್ತೇವೆ, ಆತ್ಮ ವಿಶ್ವಾಸ ಇದ್ದರೆ. ನೀವು ಏನು ತೊಡಬೇಕು ಎಂದು ನಿಮಗೇ ಅರಿವಿಲ್ಲದೆ ಬರೀ ಫ್ಯಾಶನ್ ಟ್ರೆಂಡ್ ಅನ್ನು ಹಿಂಬಾಲಿಸಿದರೆ ಕರೀ ಕಾಗೆ ಚೆಂದ ಕಾಣಲು ಸುಣ್ಣದ ಮೊರೆ ಹೊಕ್ಕ ಹಾಗಾಗಬಹುದು.


ನನ್ನ ಮರೆವು ನನಗೆ ಕೆಲವೊಮ್ಮೆ ಭಾರಿಯಾಗಿ ಕಾಣುತ್ತದೆ. ಮೊನ್ನೆ ಶಾಪ್ಪಿಂಗ್ ಮಾಡಲು ಹೋಗಿ ಎಲ್ಲೋ ನನ್ನ ಸನ್ ಗ್ಲಾಸನ್ನು ಬಿಟ್ಟು ಬಂದೆ. ಮರಳುಗಾಡಿನ ಬೇಗೆಯಲ್ಲಿ ಸನ್ ಗ್ಲಾಸಿಲ್ಲದೆ ಡ್ರೈವ್ ಮಾಡೋದು ಕಷ್ಟ. ಹತ್ತಿರದ ಆಪ್ಟಿಕಲ್ ಶಾಪಿಗೆ ಹೋಗಿ ಕೆಲವೊಂದು ಕನ್ನಡಕಗಳನ್ನು ನೋಡಿದೆ. ಸನ್ ಗ್ಲಾಸ್ ಬರೀ ಸೂರ್ಯ ಕಿರಣಗಳಿಗೆ ಮಾತ್ರವಲ್ಲ, ಅದೊಂದು fashion statement ಸಹ ಅಲ್ವರ? ಅಂಗಡಿಯವ ಸೊಗಸಾದ, ನವನವೀನ ಮಾಡೆಲ್ಲು ಗಳನ್ನು ತೋರಿಸಿದ. ನನಗೆ ಅನುಮಾನ, ಇಷ್ಟೊಂದು fashionable glasses ತೊಡುವ ವಯಸ್ಸಾ ನನ್ನದು ಎಂದು. ನೀವೆಷ್ಟೇ modern outlook ನವರಾದರೂ ದರಿದ್ರ ಸಮಾಜ ಯಾವ ರೀತಿ ನಮ್ಮ ಮತಿಯೊಳಕ್ಕೆ ಬೇಡದ್ದನ್ನು ತುರುಕಿರುತ್ತೋ ಅದು ತನ್ನ ತಲೆಯನ್ನ ಆಗಾಗ ಎತ್ತುತ್ತಿರುತ್ತಲೇ ಇರುತ್ತದೆ. ನನ್ನ ಈ ವಯಸ್ಸಿನ apprehension ಅನ್ನು ನನಗೆ ಗೊತ್ತಿಲ್ಲದೇ ಸೇಲ್ಸ್ ಮ್ಯಾನ್ ಗೆ ಆಡಿಯೂ ತೋರಿಸಿಬಿಟ್ಟೆ, i am not that young to wear those glasses ಎಂದು. lack of confidence? ಕೆಲವೊಮ್ಮೆ ಈ ಲ್ಯಾಕ್ ಆಫ್ ಕಾನ್ಫಿಡೆನ್ಸ್ ಸಹ ಕೆಲಸಕ್ಕೆ ಬರುತ್ತೆ ಅನ್ನಿ.  ಸಾಕಷ್ಟು ಕನ್ನಡಕಗಳನ್ನು ನೋಡಿದ ನಂತರ  ಅಲ್ಲಿ, ಇಲ್ಲಿ ಎಂದು ಚದುರಿ ಹೋಗಿದ್ದ ಕಾನ್ಫಿಡೆನ್ಸ್ ಅನ್ನು gather ಮಾಡಿ ನನಗಿಷ್ಟವಾದ, ಸ್ವಲ್ಪ ಮಾಡರ್ನೇ ಆದ "ತಂಪು ಕನ್ನಡಕ" ಕೊಂಡು ಅಂಗಡಿಯಿಂದ ಹೊರನಡೆದೆ ಹೋಡೀ, ವಯಸ್ಸಿಗೊಂದು ಗೋಲಿ ಎನ್ನುತ್ತಾ.       


 

Rating
No votes yet

Comments