೧೯೭೧ ರ ಉದಯವಾಣಿ ದೀಪಾವಳಿ ವಿಶೇಷಾಂಕದಿಂದ
ಕತ್ತರಿಸಿಕೊಂಡಿಟ್ಟುಕೊಂಡಿದ್ದ ಪುಟಗಳನ್ನು ನೋಡುತ್ತಿದ್ದಾಗ ಸಿಕ್ಕ್ಕಿದ್ದು ಇದು - ೧೯೭೧ ರ ಉದಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಕನ್ನಡದ ದಿಗ್ಗಜಗಳ ಕುರಿತು ಬರಹಗಳಿವೆ.
"ಮೊಟ್ಟ ಮೊದಲು ನಮ್ಮ ಜನಕ್ಕೆ ಬದುಕಿನಲ್ಲಿ ಶ್ರದ್ಧೆ ಹೆಚ್ಚಬೇಕು. ಬದುಕು ಅಥವಾ ಜೀವನ ಅಥವಾ ಬಾಳು ಎಂಬುದು ಒಂದು ದೊಡ್ಡ ವಸ್ತು. ಬದುಕುವದು ಪಾಪವಲ್ಲ, ಚೆನ್ನಾಗಿ ಬದುಕಲು ಪ್ರಯತ್ನ ಪಡುವುದು ನಾಚಿಕೆಯ ವಿಷಯವಲ್ಲ, ಬದುಕನ್ನು ಒಳ್ಳೆಯದನ್ನಾಗಿ ಮಾಡಿಕೊಂಡು ಚೆನ್ನಾಗಿ ಉಪಯೋಗಿಸುವುದು ನಮ್ಮ ಕರ್ತವ್ಯ ಎಂಬ ಬುದ್ಧಿ ಜನರಲ್ಲಿ ಬೇರೂರಿ ನಿಲ್ಲಬೇಕು. ಅದೇ ಪ್ರಗತಿ.
..... ಚಿಲುಮೆಯಲ್ಲಿ ತಿಳಿನೀರು ಹೊಮ್ಮುವಂತೆ ಜನದ ಮನಸ್ಸಿನಲ್ಲಿ ಜೀವನೋತ್ಸಾಹವೂ ಅಂತಃಸತ್ವವೂ ತಡೆ ಬಿಡುವಿಲ್ಲದೆ ಹೊಮ್ಮಿ ನಾಲ್ಕು ಕಡೆಗೂ ನುಗ್ಗುತ್ತಿರಬೇಕು. ಅದು ಬದುಕುವ ಬದುಕಿನ ಲಕ್ಷಣ... ಜೀವನ ದೇವರು ಕೊಟ್ಟಿರುವ ವರ .. ಜೀವನವನ್ನು ಅಂದಗೊಳಿಸುವುದೇ ನಾವು ದೇವರಿಗೆ ಸಲ್ಲಿಸುವ ಕೃತಜ್ಞತೆ. ಜೀವನ ಸಮೃದ್ಧಿ , ಜೀವನ ಸಂಸ್ಕಾರ. ಜೀವನ ಸೌಂದರ್ಯ ಇದು ಬರಿಯ ಐಹಿಕಾಸಕ್ತಿಯಲ್ಲ, ಚಾರ್ವಾಕತನವಲ್ಲ , ಭೋಗನಿಷ್ಠೆಯಲ್ಲ, ಅದು ವೇದ ವೇದಾಂತಗಳ ಸಾರ.
( ಶಿವರಾಮ ಕಾರಂತರು-'ಬಾಳಿಗೊಂದು ನಂಬಿಕೆ' ಪುಸ್ತಕದಲ್ಲಿ)
ಲೇಸೆ ಕೇಳಿಸಲಿ ಕಿವಿಗೆ , ನಾಲಗೆಗೆ ಲೇಸೆ ನುಡಿದು ಬರಲಿ,
ಲೇಸೆ ಕಾಣಿಸಲಿ ಕಣ್ಣು , ಜಗದೊಳಗೆ ಲೇಸೆ ಹಬ್ಬುತಿರಲಿ,
ಲೇಸೆ ಕೈಗಳಿಂದಾಗುತಿರಲಿ, ತಾ ಬರಲಿ ಲೇಸೇ ನಡೆದು,
ಲೇಸನುಂಡು ಲೇಸುಸುರಿ, ಇಲ್ಲಿರಲಿ ಲೇಸೆ ಮೈಯ ಪಡೆದು.
( ದ.ರಾ. ಬೇಂದ್ರೆ. - 'ಗಂಗಾವತರಣ'ದಲ್ಲಿ
ಧಾನ್ಯವನ್ನೇ ಕೇರಿ ಪವಿತ್ರಗೊಳಿಸುವಂತೆ ಧೀರರು ವಿಚಾರವಿಮರ್ಶೆಗಳಿಂದ ವಾಕ್ಕನ್ನು ( ಜ್ಞಾನವನ್ನು) ಶುದ್ಧವಾಗಿಸಿಕೊಳ್ಳುತ್ತಾರೆ.
- ಶಂ.ಬಾ. ಜೋಷಿಯವರು ಸಂಸ್ಕೃತದ ವಾಕ್ಯವೊಂದನ್ನು ತಿಳಿಸಿದ್ದು
Comments
ಉ: ೧೯೭೧ ರ ಉದಯವಾಣಿ ದೀಪಾವಳಿ ವಿಶೇಷಾಂಕದಿಂದ
ಉ: ೧೯೭೧ ರ ಉದಯವಾಣಿ ದೀಪಾವಳಿ ವಿಶೇಷಾಂಕದಿಂದ