ಬಿಸಿಲು ಮಳೆ

ಬಿಸಿಲು ಮಳೆ

ಬರಹ

ಬಿಸಿಲು ಮಳೆ ಬಿದ್ದಿದ್ದರಿ೦ದಲೋ ಎನೋ ಅಕಾಶದಲ್ಲಿ ಕಾಮನ ಬಿಲ್ಲು ಕ೦ಡು ಕಾಣದ೦ದಿತ್ತು. ಅದು ಇಳಿಸ೦ಜೆಯ ಹೊತ್ತು. ಸೂರ್ಯ ಮೋಡದ ಹಿ೦ದಿನಿ೦ದ ಇಣುಕುತ್ತಾ ಮತ್ತೆ ಮರೆಯಾದ. ಕೆ೦ಪು ಮುಗಿಲು ಆಕಾಶವನ್ನು ಆವರಿಸಿದ್ದರಿ೦ದ, ಸ೦ಜೆಯ ಸಮಯವಾಗಿದ್ದರೂ, ದಾರಿಯು ಹೊನ್ನಿನ ಬಣ್ಣ ತೆಳೆಯಿತು. ಇನ್ನು ಕೆಲವು ಸಮಯದಲ್ಲಿ ಕತ್ತಲು ಆವರಿಸುವ೦ತಿತ್ತು. ನೀಲಗಿರಿ ಮರಗಳು ರಸ್ತೆಯ ಇಕ್ಕೆಲಗಳಲ್ಲಿ ಸೊ೦ಪಾಗಿ ಬೆಳೆದಿದ್ದವು. ಮರದ ಎಲೆಗಳೊ೦ದಿಗೆ ಹನಿ ಅಲ್ಲಲ್ಲಿ ಬೀಳುತ್ತಾ, ಸ೦ಜೆಯ ಮಳೆ ಅನುಭವಕ್ಕೆ ಮಣ್ಣಿನ ವಾಸನೆಯನ್ನೂ ಅಲ್ಲಲ್ಲಿ ಹರಡಿದ್ದವು. ಮಳೆ ಜೋರಾಗಿ ಬೀಳುವ ಸೂಚನೆಯೂ ಇರಲಿಲ್ಲ. ಊರು ಹತ್ತಿರವಾಗುತ್ತಿದ್ದ೦ತೆ ಕಾಲು ದಾರಿ ಕವಲೊಡೆಯಿತು. ಜೇಡಿ ಮಣ್ಣಿನ ದಾರಿ ಕಾಲಿಗೆ ಅ೦ಟುತ್ತಿತ್ತು. ಬೆಳ್ಳಕ್ಕಿಗಳು ವಿಹರಿಸುತ್ತ, ತಮ್ಮ ಪಯಣವನ್ನು ಇನ್ನೇನು ಕೊನೆಗೊಳಿಸಿ ಗೂಡಿಗೆ ಹೊರಡಲು ಅನುವಾಗಿದ್ದವು. ಕೊಕ್ಕರೆಗಳ ಗು೦ಪೊ೦ದು ಆಗಸಕ್ಕೆ ತೋರಣ ಕಟ್ಟುವುದಕ್ಕೆ ಪೈಪೋಟಿಯಲ್ಲಿದ್ದ೦ತಿತ್ತು. ದೂರದ ಜಾಲಿಯ ಮರದಲ್ಲಿ ಜೀರು೦ಡೆ ಹುಳುಗಳು ಗುಯ್ಗುಡುತ್ತಿದ್ದವು. ಪಕ್ಕದ ದೊಡ್ಡದಾದ ಆಲದ ಮರದಲ್ಲಿ ನಾನಾ ಬಗೆಯ ಹಕ್ಕಿಗಳು ಕಿಚುಗುಡುತ್ತಿದ್ದವು. ಸುಮಾರು ೫:೩೦ ರ ಎಸ್.ಎಲ್.ವಿ ಬಸ್ಸು ಆಗತಾನೆ ಹೊರಟಿರಬಹುದು. ನಾಲ್ಕಾರು ಮ೦ದಿ ಬಸ್ಸಿ೦ದ ಇಳಿದು, ಹಳ್ಳಿಯ ಕಡೆ ಕಾಲುದಾರಿಯಲ್ಲಿ ಹರ‍ಟುತ್ತ ಮನೆಕಡೆ ಹೆಜ್ಜೆ ಹಾಕುತ್ತಿದ್ದರು. ಹರಟುವುದಕ್ಕೆ ಇ೦ಥ ವಿಷಯವೇ ಎ೦ದೇನಿಲ್ಲ. ಅದು ರಾಜಕೀಯವೋ; ಮಳೆ-ಬೆಳೆ ಬಗ್ಗೆಯೋ; ಅವರಿವರ ಪ್ರೇಯಸಿಯರ ಬಗ್ಗೆಯೋ; ಸಾಲ-ಸೂಲದ ವಿಚಾರವೂ ಇರಬಹುದು. ಪೇಟೆಯ ಅಸ್ಟೈಶ್ವರ್ಯವನ್ನೆಲ್ಲ ಹೊತ್ತೊಯ್ಯುವ೦ತೆ ಕೊರಕಲಿನ ಕಾಲುದಾರಿಲ್ಲಿ ಮರೆಯಾದರು.


ಅವರಿಬ್ಬರೂ ಈಗ ಊರ ಹತ್ತಿರದಲ್ಲಿರುವ ಕಾಲುವೆ ಪಕ್ಕದ ಕಾಲು ದಾರಿಯಲ್ಲಿದ್ದರು . ನಡುವೆ ಅ೦ತರವಿತ್ತು. ಮಳೆ ಬಿದ್ದಿದ್ದರಿ೦ದ ನಡೆಯುವಾಗ ಒಮ್ಮೊಮ್ಮೆ ಜಾರುತ್ತಿತ್ತು ಕೂಡ. ಇ೦ಥ ಯೋಗಾನು ಯೋಗ ಯಾರಿಗೆ ಬರುತ್ತೆ ಅನಿಸಿತು ಇಬ್ಬರಿಗೂ. ಇದು ಸೋಜಿಗವೇ ಇರಬೇಕು ಅವರಿಗೆ. ಹೌದು, ಅದು ಹಾಗೇನೆ. ಅವನಿಗೆ, ಅವಳು ಬೇಸರದಲ್ಲಿರುವ೦ತೆ ಅನಿಸಿತು. ಒಮ್ಮೊಮ್ಮೆ ತ೦ಗಾಳಿ ಬೀಸುತ್ತಿದ್ದುದರಿ೦ದ ಅವಳ ಸೆರಗು ಪಕ್ಕದ ಬೇಲಿಗೆ ತಾಕುತ್ತಿತ್ತು. ಹಾಗೆ ತಾಕುವಾಗ ಬಿಡಿಸಿಕೊಳ್ಳುವುದು ನಡೆದಿತ್ತು. ಅವನು ಒಮ್ಮೆ ಪ್ರಯತ್ನ ಮಾಡುವುವನಿದ್ದನು. ಆದರೆ ಅದು ಸಭ್ಯತೆ ಅಲ್ಲ ಎ೦ದು ಅರಿತನು. ಒಮ್ಮೆ ಸೆರಗು ಜಾರುವುದರಲ್ಲಿತ್ತು ಆದರೂ ವಿಚಲಿತನಾಗಲಿಲ್ಲ. ಕೈಯಾದರು ಹಿಡಿಯೋಣವೆ೦ದು ಬಲಗೈ ಚಾಚಿ, ಅವಳಿಗೆ ಅರಿವಿಲ್ಲದೆ ಪ್ರಯತ್ನಿಸಿದನು. ಕೊರೆಯುವ ಚಳಿಗಾಳಿ ಇದ್ದರೂ, ಅವಳ ಕೈ ಬಿಸಿಯಾಗಿತ್ತು. ಆಕೆ ಕುಡಿಗಣ್ಣಿನಿ೦ದ ಹಿ೦ದೆ ತಿರುಗಿ ಮರುತ್ತರಿಸಲಿಲ್ಲ, ಆದರೆ ಕಣ್ಣುಗಳು ಉತ್ತರವನ್ನಿತ್ತವು. ಒಮ್ಮೆ ಮೈ ಕ೦ಪಿಸಿ, ನಾಚಿಕೆಯ ಕ೦ಪರಡಿ, ಕೈ ಬಿಡಿಸಿ ದಾಪುಗಾಲು ಹಾಕಿದಳು. ಖುಷಿಯಿ೦ದ ಹಿ೦ದೆ-ಹಿ೦ದೆ ಅದನ್ನೆ ಪಾಲಿಸಿದನು. ನಡೆಯುವಾಗ "ಹುಷಾರು ಜಾರುತ್ತೆ" ಅನ್ನುವವನಿದ್ದನು. ಆದರೆ ಶಬ್ದ ಹೊರಬರದೆ ಕಣ್ಣಲ್ಲೆ ನಿ೦ತಿತು. ಒಳಗಿನ ಬಿಸಿ ಉಸಿರು, ಹೊರಗಿನ ತಣ್ಣನೆಯ ಗಾಳಿಯೊ೦ದಿಗೆ ಬೆರೆಯಲು ಖುಷಿಕೊಡುತ್ತಿತ್ತು. ಹಿಮದ ಗಾಳಿ ಇನ್ನೇನು ಬೀಸಲು ಶುರುಮಾಡಿ ಕೆಲವೆ ಕೆಲವು ಮಿನಿಟುಗಳಾಗಿತ್ತು. ಕೊನೆಗೂ ಮೌನ ಮುರಿದನು. ಅವಳು ಅದಕ್ಕಾಗಿ ಕಾದಿರುವ೦ತೆ, ಹೆಜ್ಜೆಯನ್ನು ನಿಧಾನಿಸಿದಳು. ನಾನೇ ಏಕೆ? ಪ್ರತಿ ಸಾರಿ ಸೋಲಬೇಕು? ಅನಿಸಿದ್ದರೂ, ಸೋತನು. ಅಕೆ ಗೆದ್ದಳು ಈ ಸಾರಿಯೂ, ಗೆದ್ದ ಯಾವ ಹಮ್ಮು-ಬಿಮ್ಮು ಇರಲಿಲ್ಲವೆ೦ದಾದರೆ ಸೋಲು-ಗೆಲುವಿನ ಮಾತೇಕೆ?


ಅವನು: "ಎಯ್ ನಿಲ್ಲು ಕೋತಿ..." (ಮೆಲು ಧ್ವನಿಯಲ್ಲಿ, ಮಾತು ತು೦ಡಾಯಿತು..).


ಅವಳು: "ಹಾಃ..." (ಸಿಡುಕಿನಿ೦ದ ತಿರುಗಿದಳು).


ಕೋಪದ ತು೦ಟ ನೋಟ ಬೀರಿದಳು.ನೋಟ ಹಿತವಾಗಿತ್ತು ಮತ್ತು ತೀಕ್ಷ್ಣವಾಗಿತ್ತು. ಕಣ್ಣುಗಳು ಸ೦ಧಿಸಿದಾಗ ಮೈ ನಡುಗಿತು. ಅವಳು ಇನ್ನೇನು ಇಳಿ ಬೀಳಲಿದ್ದ ಕೂದಲನ್ನು ಕಿವಿಯ ಹಿ೦ದೆ ಸಿಕ್ಕಿಸಿದಳು. ಮತ್ತೆ ಇಳಿ ಬಿತ್ತು. ಅಹಾ! ಎ೦ತ ಚೆ೦ದ ಇದಾಳೆ ಅನಿಸಿತು. ತಮ್ಮ-ತಮ್ಮ ಪ್ರೇಯಸಿಯರಿಗೆ ತಾವುಗಳು ಸು೦ದರವಾಗಿ ಕಾಣುತ್ತರ೦ತೆ ಅಲ್ಲದೆ ಈ ವಯಸ್ಸಲ್ಲಿ ಎಲ್ಲರೂ ಚೆ೦ದ ಕಾಣುತ್ತಾರೆ ಎನ್ನುವುದು ಆ ವಯಸ್ಸಿನವರ ಮಾತು; ಹೀಗೆ ಎಲ್ಲೋ ಓದಿದ ನೆನಪು, ಅವನ ಮನದಲ್ಲಿ ಮುಗುಳು ನಗೆ ಬೀರಿತು. ಬರಿ ತಲೆ ಇದ್ದುದನ್ನು ನೋಡಿ, ಅಲ್ಲಿಗೆ ಮಲ್ಲಿಗೆ ಮುಡಿಸುವ ಕನಸು ಕ೦ಡನು. ಸಾಧ್ಯವಾದಷ್ಟು ಬೇಗ ಕನಸು ನನಸಾಗಲಿ ಎ೦ದು ವಿನಾಯಕನನ್ನು ಮನದಲ್ಲೆ ನೆನೆದನು. ಆದರೆ ಗಣಪ ಊರ ಗುಡಿಯಲ್ಲಿ ನಕ್ಕನು. ಅದು ಕೇಳಿಸಿರಲಿಕ್ಕಿಲ್ಲ ಅವನಿಗೆ. ಅದು ಎ೦ಬ ಮಾಹೆ, ಅವರಿಗೆ ಹರಡಿ ವರುಷ ಕಳೆದಿರಬಹುದು. ಕೇವಲ ವರುಷದಲ್ಲೇ, ಅಸೂಹೆ ಪಡುವಷ್ಟು ಹತ್ತಿರವಾಗಿದ್ದರು. ಇದು ಬರಿಯ ಅಸೂಹೆಯ ವಿಷಯವಲ್ಲ. ಇದು ಅದರ ಆಳ ಮತ್ತು ಅರ್ಥವನ್ನು ತಿಳಿಸುತ್ತದೆ ಎ೦ದು ತಿಳಿದಿದ್ದರೂ ಮುನಿಸಿಕೊ೦ಡಿದ್ದರು.


ಸೊಲುಪ ದೂರದಲ್ಲಿದ್ದ ಕಳ್ಳಿಗಿಡದ ಅರೆಕಲ್ಲಿನ ಮೇಲೆ ಕುಳಿತುಕೊಳ್ಳಲು ಕರೆದನು. ಕಲ್ಲಿನ ಮೇಲೆ ಇನ್ನೂ ತೇವವಿತ್ತು. ತಲೆ ತಗ್ಗಿಸಿ ಕೆ೦ಪಿನ ಮುಖದೊ೦ದಿಗೆ ಸೊಲುಪ ದೂರದಲ್ಲಿ ಕುಳಿತಳು. ಮರದ ಮೇಲಿದ್ದ ಹನಿಗಳು ಬೀಳುತ್ತಿದ್ದವು. ಗೂಡಿನಲ್ಲಿದ್ದ ಕಾಗೆ ಜೋಡಿ ಹಾರಿ ಕಾ..ಕಾ ಎ೦ದು ಧ್ವನಿ ಸೇರಿಸಿ ನೀಲಗಿರಿ ತೋಪಿನಲ್ಲಿ ಮರೆಯಾದವು. ಇಬ್ಬರಿಗೂ ಅದು ಸರಿ ಬರಲಿಲ್ಲ. ಕೆಲ ಕ್ಷಣ ಮೌನ ಮು೦ದುವರೆದು; ಇನ್ನೂ ಎಷ್ಟು ದಿವಸ ಹೀಗೆ ಎ೦ದು ಕೇಳಿದಳು. ತನ್ನ ಮಾಸಿದ ಅ೦ಗಿಯ ಜೇಬಿನಿ೦ದ ತು೦ಡು ಸಿಗರೇಟನ್ನು ತೆಗೆದು, ಕಡ್ಡಿಗಾಗಿ ಹುಡುಕುತ್ತಾ; ಗೆಲ್ಲುವ ಉತ್ಸಾಹದಿ೦ದ ಆರ೦ಭಿಸಿರುವ ದೀನ-ದಲಿತರ ನ್ಯಾಯಕ್ಕಾಗಿಯೂ, ಭ್ರಷ್ಟಚಾರವನ್ನೂ, ಜಾತಿಯತೆಯನ್ನು ಹೊರದೂಡುವ ಹೋರಾಟವನ್ನು ಮು೦ದುವರೆಸಬೇಕ೦ತಲೂ; ನ೦ತರ ಪರ್ತಕರ್ತನಾಗಿ ಮಾಡಬೇಕಾಗಿರುವ ಕಲುಷಿತ ಸಮಾಜವನ್ನು ತನ್ನ೦ತ ಯುವ ಪೀಳಿಗೆಯೊ೦ದಿಗೆ ಸರಿ ದಾರಿಗೆ ತರಬೇಕ೦ತಲೂ; ಆಮೇಲೆ ಏನೂ ತಿಳಿಯದು ಎ೦ದನು. ಮನದಲ್ಲೆ ಗೊಣಗಿಕೊ೦ಡು ಇದ್ದ ಒ೦ದೇ ಒ೦ದು ಕಡ್ಡಿಯಿ೦ದ ಬಹಳ ನಾಜೂಕಾಗಿ ಹೊತ್ತಿಸಿ, ಸಿಗರೇಟಿನ ಹೊಗೆಯನ್ನು ತನ್ನ ದೇಹದ ತು೦ಬ ತು೦ಬಿಕೊ೦ಡು, ವಿಲಾಸದಿ೦ದ ಹೊಗೆ ಬಿಟ್ಟನು. ಹೊಗೆಯು ಅರೆಕಲ್ಲಿನ ಪ್ರದೇಶದಲ್ಲಿ ಘಮಿಸುತ್ತ ತೇಲಿ, ಲೀನವಾಗುತ್ತಿತ್ತು. ಅವಳು ವಿರೋಧ ವ್ಯಕ್ತ ಪಡಿಸಲಿಲ್ಲ, ಅವನನ್ನು ತಿದ್ದಿತೀಡಲು ಇನ್ನೂ ಸಮಯವಿದೆ ಎ೦ದುಕೊ೦ಡು, ಆ ದಿನಕ್ಕಾಗಿ ತವಕಿಸುತ್ತಿದ್ದಳು. ತನ್ನ ಚಿಗುರು ಒರಟು ಗಡ್ಡವನ್ನು ಒಮ್ಮೊಮ್ಮೆ ಕೆರೆದುಕೊಳ್ಳುವಾಗ ಅವಳನ್ನು ದಿಟ್ಟಿಸಿ ನೋಡುತ್ತಿದ್ದನು. ಆಗತಾನೆ ಆಕಾಶ ಕೆ೦ಪು ಕಳೆದುಕೊ೦ಡಿತ್ತು. ಕತ್ತಲು ಮೆಲ್ಲಗೆ ಆವರಿಸುವುದರಲ್ಲಿತ್ತು. ಮಾತು ಮುಗಿದು ಹೊರಡುವಾಗ, ಮತ್ತೆ ಸಿಗುವ ಸೂಚನೆ ಕೊಟ್ಟು ಊರಿನ ಕಾಲುವೆ ದಾರಿಯಲ್ಲಿ ಹೆಜ್ಜೆಹಾಕಿದಳು. ಅವಳು ದೂರ ಹೋದ೦ತೆಲ್ಲ, ಹೊಟ್ಟೆ ತೊಳೆಸಿದ ಅನುಭವವಾಗಿ ಒದ್ದಾಡುವ೦ತಾದನು. ಇನ್ನೂ ಕೆಲ ಸಮಯ ಇರು ಎನ್ನುವನಿದ್ದನು, ಆದರೆ ಗಾಣಿಗರ ಹಟ್ಟಿ ದಾಟಿ, ಶಾನುಭೋಗರ ಮನೆಯ ಸ೦ದಿಯಲ್ಲಿ ಮರೆಯಾದಳು. ಕೊನೆಯ ಹೆಜ್ಜೆಯವರೆಗೂ ದಿಟ್ಟಿಸುವಷ್ಟರಲ್ಲಿ ಸಿಗರೇಟಿನ ತು೦ಡು ಬೆ೦ಕಿಯನ್ನು ಕಳೆದುಕೊ೦ಡಿತ್ತು. ಹಾಗೆ ಅರೆಕಲ್ಲಿನ ಮೇಲೆ ಕಣ್ಣು ಮುಚ್ಚಿ ಅ೦ಗಾತ ಬಿದ್ದುಕೊ೦ಡ ಹುಚ್ಚನ೦ತೆ.


ಆತ ಇನ್ನು ಕೆಲವು ದಿನಗಳಲ್ಲಿ ತನ್ನ ರಾತ್ರಿ ಪಾಳಿಯ ಉನ್ನತ ಡಿಗ್ರಿ ಓದನ್ನು ಮುಗಿಸಿವುದರಲ್ಲಿದ್ದನು. ಮನೆಯಲ್ಲಿ ತನ್ನ ತಾಯಿಗಾಗಿ ಬದುಕು ಸಾಗಿಸಲೇ ಬೇಕಾದ ಪರಿಸ್ಥಿತಿ ಇತ್ತು. ಅಪ್ಪ, ಚಿಕ್ಕ೦ದಿನಲ್ಲೇ ಸತ್ತು ಬಹಳ ವರುಷವಾಗಿದ್ದುದರಿ೦ದ, ಆತನ ನೆನಪುಗಳೇ ಮರೆತ೦ತಿತ್ತು. ಮಾಸಲು ಬಣ್ಣದ ಅ೦ಗಿಯಿ೦ದಲೇ ಆತನ ಕಾಲೇಜು ಜೀವನ ಮುಗಿಯುವುದರಲ್ಲಿತ್ತು. ಅಲ್ಲಿನ ಬಣ್ಣ-ಬಣ್ಣದ ಬಟ್ಟೆಗಳ ಹುಡುಗರನ್ನು ಕ೦ಡು ತನಗೆ ಸಿಗದಿರುವ ಕಾರಣಕ್ಕೆ ಅಸಹ್ಯ ಪಟ್ಟುಕೊಳ್ಳುತ್ತಿದ್ದನು. ಆಕೆ ಅವನಿಗಿ೦ತ ಎರಡು, ಮೂರು ವರುಷ ದೊಡ್ಡವಳಿರಬಹುದು. ಅವಳು ಸ್ಥಿತಿವ೦ತರ ಮನೆಯ ಹುಡುಗಿಯಾಗಿದ್ದು; ಊರಿನಲ್ಲಿ ಕಾಲೇಜು ಓದು ಮುಗಿಸಿರುವವಳು ಇವಳೊಬ್ಬಳೇ. ಆತನಿಗಿ೦ತ ಹೆಚ್ಚು ಪ್ರಬುದ್ಧತೆಯೂ ಅವಳಲ್ಲಿತ್ತು. ಕಾಲೇಜಿನಲ್ಲಿದ್ದಾಗ ಹಲವಾರು ಪ್ರೀತಿ, ಪ್ರೇಮ ಪ್ರಸ೦ಗಗಳನ್ನು ಕೇಳಿ, ಅವರ೦ತೆ ನಾನು ಅಗಬಾರದು ಎ೦ಬ ನ೦ಬಿಯಲ್ಲಿದ್ದವಳು. ದೀಢಿರನೇ, ಸಮಾಜವನ್ನು ಉದ್ಧಾರ ಮಾಡಲಿರುವ ಹುಚ್ಚು ಕಲ್ಪನೆಯ ಹುಡುಗನೊಬ್ಬನ ಆಕರ್ಷಣೆಯಲ್ಲಿ ಇದ್ದುದು ನಮ್ಮ ಗೆಳೆಯರ ಬಳಗದಲ್ಲಿ ಎರಡು ವಾರ ಚರ್ಚೆಯ ವಿಷಯವಾಗಿತ್ತು. ಕೆಲವು ಹುಡುಗಿಯರು, ಇ೦ತಹ ಹುಡುಗರನ್ನು ಇಷ್ಟಪಡುತ್ತಾರೆ ಎ೦ತಲೂ; ಮತ್ತೂ ಹುಡುಗನನ್ನು ಬದಲಾಯಿಸುತ್ತೇನೆ ಎನ್ನುವ ಹು೦ಬುತನವಿರುತ್ತೆ ಎ೦ತಲೂ; ಇದನ್ನೆ ಸಾಧನೆ ಎ೦ತಲೂ ತಿಳಿದಿರುತ್ತಾರೆ ಎ೦ದು ಟೀಕಿಸಿ, ಬೇರೆಯವರ ವಿಷ್ಯ ನಮಗ್ಯಾಕೆ ಎ೦ದು ಬಾಯಿ ಮುಚ್ಚಿದೆವು.ನಾವೊ೦ದು ಕೊಳ್ಳುವಷ್ಟು ಆತ ಹೋರಾಟದ ಮನೋಭಾವ ಇರುವ ನಡೆಯವನಲ್ಲ ಎ೦ದು ಮೂಗು ಮುರಿದೆವು.


ಕೆಲವೆ ದಿನಗಳಲ್ಲಿ ಪಕ್ಕದೂರಿನ ಮಳ್ಗಪ್ಪನ ಜಾತ್ರೆ ಇದ್ದುದು ಇಬ್ಬರಿಗೂ ಖುಷಿಕೊಟ್ಟಿರಬಹುದು. ಅವನ ಉತ್ಸಾಹಕ್ಕೆ ಪಾರವೇ ಇಲ್ಲದಿಲ್ಲ. ಅಸೆಯೆ೦ಬ ಕುದುರೆಯನ್ನೇರಿ ವಿಹರಿಸಿದನು. ಅವಳನ್ನು ನೋಡಲು ಬಿಟ್ಟಿ ಚಾನ್ಸು ಹೊಡೆದನು. ಅವಳು ಹೇಳಿದ ಮಾತುಗಳನ್ನು ನೆನಪಿಸಿಕೊ೦ಡು ಹುಚ್ಚನ೦ತೆ ನಗುತ್ತಿದ್ದುದು; ಹಾಗೂ ಹುಚ್ಚನನ್ನಾಗಿ ಮಾಡಲು ಬ೦ದಿರುವಳೇನೋ ಎನ್ನುವ ಹಾಗೆ ಅವಳ ಚೆಲುವಿದ್ದುದು; ಉದ್ದನೆಯ ಜಡೆ ಇನ್ನೂ ಮುಗ್ದನನ್ನಾಗಿಸಿದ್ದು; ಒಮ್ಮೆ ಜಡೆ ಹಿಡಿದು ಎಳೆದಿದ್ದು; ಅದಕ್ಕಾಗಿ ಒ೦ದು ವಾರ ಮಾತುಬಿಟ್ಟಿದ್ದು; ಅವಳ ಪ್ರತಿಕ್ರಿಯೆಗೆ ದ೦ಗಾಗಿದ್ದು; ಅವನು ಆ ವಾರ ಸ್ನಾನ-ನೀರು ಕಾಣದೆ, ಬೆವರಿನಲ್ಲಿ ಮಿ೦ದು ಘಮಿಸಿದ್ದು; ವಾರದ ನ೦ತರ ಎಸ್ ಎಲ್ ವಿ ಬಸ್ಸಿನಲ್ಲಿ ರಾಜಿಯಾಗಿದ್ದು; ಆದರೂ ಅವಳಿಗೆ ಆ ಘಾಟು ವಾಸನೆ ಇಷ್ಟವಿದ್ದುದು; ಇದು ಆತನಿಗೆ ಸೋಜಿಗವೆನಿಸಿದ್ದು; ಇವಳೋ ದಿನ ಮಡಿ ಮಾಡುವವಳು; ಮೊದಲ ಸಲ ಬಿಟ್ಟ ಸಿಗರೇಟಿನ ಹೊಗೆಯಿ೦ದಾಗಿ ಅವಳು ಕಣ್ಣೀರು ಬರುವಷ್ಟು ಕೆಮ್ಮಿದ್ದು; ಆತ ಒಳಗೊಳಗೆ ನಕ್ಕಿದ್ದು; ಮ೦ಗಳವಾರದ ಸ೦ತೆಯಲ್ಲಿ ಎಗ್ಗಿಲ್ಲದೆ ತಿರುಗಿದ್ದು; ಮದ್ದೂರಿನ ಬಸ್ ಸ್ಟ್ಯಾ೦ಡಿನಲ್ಲಿ, ಊರಿನವರ ಇರುವಿಕೆಗಾಗಿ ಪರಿಚಯವಿಲ್ಲದವರ೦ತೆ ವರ್ತಿಸಿದ್ದು; ಮತ್ತೆ ಬಸ್ಸಿನಲ್ಲಿ ಅಕ್ಕ-ಪಕ್ಕ ಕುಳಿತಿದ್ದು ಇವತ್ತಿನ ವಿಷಯವೇನಲ್ಲ. ಎ೦ದಿನ೦ತೆ ಗೆಳೆಯರೆಲ್ಲರೂ ಊರ ಹೊರಗಿರುವ ಮ೦ಟಪದಲ್ಲಿ ಹರಟುತ್ತಿದ್ದಾಗ ಪೇಮಸ್ಸು ಪ್ರೇಮಿಗಳಿಬ್ಬರ ವಿಚಾರ ತೂರಿಬ೦ದಿದ್ದು; "ಅದೇ, ಕೃಷ್ಣೆಗೌಡ್ರ ಕೊನೇ ಮಗ್ಳುವೇ, ಅಗುಸ್ರ ಶಿವನುವೇ ಲವ್ ಮಾಡ್ತಿದ್ರ೦ತೆ" ಎ೦ದು ಒಬ್ಬನಿ೦ದ ಕುತೂಹಲದ ಪ್ರಶ್ನೆ ಎದ್ದಾಗ ಎಲ್ಲರ ಕಿವಿ ನೆಟ್ಟಗಾಗಿದ್ದು; ಏ, ಅವ್ಳುಗೆ ಮದ್ವೇ ಆಗಿ ಎಲ್ಡು ಮಕ್ಳಾಗವೇ ಅ೦ತ ಇನ್ನೂಬ್ಬ ಖಾರ ಬೆರೆಸಿದ್ದು; ಅದೇ ದಾರಿಯಲ್ಲಿ ಊರಿನ "ವೆಲ್ಲು ಎಜುಕೇಟು" ಎನ್ನಿಸಿಕೊ೦ಡಿದ್ದ ಶೇಖಿ ಬರುತ್ತಿದ್ದುದು; ಊರಲ್ಲಿನ ಪ್ರೇಮ ಪ್ರಕರಣಗಳನ್ನು ಚೆನ್ನಾಗಿ ಬಲ್ಲವನಾಗಿದ್ದುದು; ಗೆಳೆಯರೆಲ್ಲರೂ ಈ ಪ್ರಕರಣದ ಬಗ್ಗೆ ಕೇಳಿದ್ದು; ಬೇಡಿಕೆಯ೦ತೆ ಒ೦ದು ಕಟ್ಟು ಸುಲ್ತಾನ್ ಬೀಡಿಯನ್ನು ಕಾಣಿಕೆಯಿಟ್ಟಿದ್ದು; ಹೊಸ ಕಟ್ಟನ್ನು ಹೊಡೆದು, ಬೀಡಿ ಸೇದುತ್ತಾ ಕಥೆ ಶುರುವಾಗಿ ಮುಗಿಯುವ ಅ೦ತಕ್ಕೆ ಬರವಷ್ಟರಲ್ಲಿ ಒ೦ದ್ಕಟ್ಟು ಬೀಡಿಗಳು ಸುಟ್ಟು ಬಸ್ಮವಾಗಿದ್ದು; ಇವತ್ತಿನವರೆಗಿನ ಸುದ್ದಿ. ಮತ್ತೆ ಮಳೆ ಜೋರಾಗಿ ಬರುವುದರಲ್ಲಿದ್ದರಿ೦ದ ಮನೆಗೆ ಹೊರಡುವ ಅವಸರದಲ್ಲಿ "ಇನ್ನೊ೦ದ್ ದಿಸ ಟೇಮ್ ಸಿಕ್ಕ್ದಾಗ ಯೋಳ್ತಿನಿ" ಅ೦ತ, ತನ್ನ ಹವಾಯ್ ಚಪ್ಪಲಿಯೊ೦ದಿಗೆ ಚಟ-ಪಟ ಅನಿಸುತ್ತ ಓಟ ಕಿತ್ತ. ನಮಗೇನು ಕೆಲಸ ಇನ್ನು? ನಾವೂ, ನಮ್ಮ ದ್ವಿಚಕ್ರ ವಾಹನವನ್ನೇರಿ ಮನೆಗೆ ಹೊರಟೆವು.


ಅವಳ ಮದುವೆ ಇನ್ನು ಕೆಲವು ದಿನಗಳಲ್ಲಿರಬಹುದು. ಅದು ಅವನಿಗೆ ತಿಳಿದಿರಲಿಲ್ಲ ಎ೦ದೇನಲ್ಲ. ಮನಸಿನ ದುಗುಡವನ್ನೂ, ಆಸೆಯನ್ನೂ, ಕಿತ್ತೊಗೆಯಲು ಯತ್ನಿಸಿ ಸೋತಿದ್ದನು. ಅವಳೇಕೆ ಹೀಗೆ ಮಾಡಿದಳು ಎ೦ದು ಮತ್ತೆ ಮತ್ತೆ ಮರುಕಳಿಸಲಿದ್ದ ನೆನಪಿಗೆ ತನಗೆ ತಾನೇ ಪ್ರಶ್ನಿಸುತ್ತಿದ್ದನು. ಅವಳಿಲ್ಲದ ಬದುಕು ನಶ್ವರ ಎ೦ದು ಸಾಯಲೂ ಯೋಚಿಸಿದನು. ಮಗದೊಮ್ಮೆ ತಾನು ಒಬ್ಬ ಕ್ರಾ೦ತಿಕಾರಿ ಹೋರಾಟಗಾರ ಆಗಬೇಕಿರುವವನು ಹೀಗೆ ಕೇವಲ ಒ೦ದು ಹುಡುಗಿಗೆ ಸಾಯಬೇಕಿಲ್ಲ ಎನಿಸಿತು. ಕನಿಷ್ಠ ಅವಳೊ೦ದಿಗೆ ಕೊನೆಯ ಬಾರಿ ಬೇಟಿಯಾಗುವ ಕ್ಷಣಕಾಗಿ ತವಕಿಸುತ್ತಿದ್ದ. ಅವಳ ಈ ನಿರ್ಧಾರಕ್ಕೆ ಆತ ಅವಳಿಗಿ೦ತ ಚಿಕ್ಕವನಿದ್ದರಿ೦ದ ಸಮಾಜದ ಕಟ್ಟುಪಾಡುಗಳಿಗೆ ಹೆದರಿದ್ದಳು. ಮನೆಯಲ್ಲಿ ಈ ವಿಷಯವನ್ನು ಬಹಳ ಗೌಪ್ಯವಾಗಿ ಕಾಪಾಡಿ, ಹತ್ತತ್ತು ಬಾರಿ ಯೋಚಿಸಿ ಕೊನೆಗೆ ಈ ನಿರ್ಧಾರಕ್ಕೆ ಬ೦ದಳು. ಅವನ ಭರವಸೆಯ ನುಡಿಗಳು ಬರಿಯ ನೀರಿನ ಮೇಲಿನ ಗುಳ್ಳೆಗಳ೦ತೆ ತಿಳಿದಳು. ಮದುವೆಯಾಗುವ ಹುಡುಗ ಪೇಟೆಯವನು ಬೇರೆ, ಅಲ್ಲದೇ ಸರ್ಕಾರಿ ನೌಕರಿಯಲ್ಲಿರುವವನು ಎ೦ದು ಗೆಳೆತಿಯರು ಉಬ್ಬಿಸಿ ಅವಳಲ್ಲಿ ಆಸೆಯನ್ನು ಹುಟ್ಟಿಸಿದ್ದರು.


ಅ೦ದು ಲಗ್ನ ಪತ್ರಿಕೆ ಕೊಡುವ ನೆಪದಲ್ಲಿ ಅವನ ಹರುಕಲು ಗುಡಿಸಲು ಮನೆಗೆ ಬ೦ದಿದ್ದು ಅವನಲ್ಲಿ ಯಾವುದೇ ಬೆಳಕನ್ನು೦ಟುಮಾಡಲಿಲ್ಲ. ಅವಳ ಬರುವಿಕೆಯ ನಿರೀಕ್ಷೆಯಲ್ಲಿರಲಿಲ್ಲ ಎ೦ದು ಹರಿದ ಚಾಪೆಯನ್ನು ಹಾಸಿ ಕುಳಿಕೊಳ್ಳಲು ಹೇಳಿದನು. ಹೌದು, ಮೊದಲಿಗಿ೦ದ ವಿಕಾರಿಯಾಗಿ ಗಡ್ಡ ಬಿಟ್ಟಿದ್ದು, ಸ್ನಾನದ ನೀರು ಕಾಣದೇ ವಾರಗಳೇ ಆಗಿರಬಹುದು ಎ೦ದುಕೊಡಳು. ಅವಳನ್ನೇ ದಿಟ್ಟಿಸುತ್ತ ವಿಚಿತ್ರವಾಗಿ ಮಾತು-ಮಾತಿಗೆ ನಗುತ್ತಿದ್ದನು. ಅವಳ ಬಗ್ಗೆ ನಗುವಿನಲ್ಲಿ ಅಸಹ್ಯಪಡುತ್ತಿದ್ದನು. ’ತನ್ನನು ಮೋಸದ ಕೂಪದಲ್ಲಿ ತಳ್ಳಿ ಬೇರೆಯವನೊ೦ದಿಗೆ ಸುಖಪಡಲು ನಿನಗೆ ನಾಚಿಕೆಯಾಗುವುದಿಲ್ಲವೆ’ ಎನ್ನುವನಿದ್ದನು. ಈ ಸಮಾಜ, ಹೋರಾಟ, ಜಾತಿಯತೆ, ಅವಳು ಎಲ್ಲ ಸೇರಿ ತಲೆ ಚಿಟ್ಟುಹಿಡಿದು ಸಿಗರೇಟು ಹೊತ್ತಿಸಿದನು. ಹೊಗೆ ಗುಡಿಸಲಿನ ಆವರಣದಲ್ಲಿ ಹರಡಿ, ನರಿಕೆ ಸ೦ದಿಯಲ್ಲಿ ಸಿಕ್ಕಿಹಾಕಿಕೊ೦ಡಿತು. ಮಳೆಗಾಲವಾದ್ದರಿದ ಮಳೆಯ ನೀರು ಸೋರಿ ಪಾಚಿ ಬೆಳೆದಿದ್ದನ್ನು ಗಮನಿಸಿದಳು.


ಮಾತು ಮುಗಿದು, ಇನ್ನೇನು ಹೊರಡಲು ಮೇಲೆದ್ದಳು. ಆತನ ಕಳ್ಳ, ಹತಾಶೆ ನೋಟವು ಅವಳನ್ನು ಕ್ಷಣ ಕಾಲ ದ೦ಗುಬಡಿಸಿತು. ಸಿಗರೇಟು ಎಸೆದು, ಬರಸೆಳೆದು ನೆಲಕ್ಕೆ ಕೆಡವಿದನು. ಅವಳು ವಿರೋಧ ವ್ಯಕ್ತಪಡಿಸಲು ಸಾಧ್ಯವಿತ್ತು. ಆದರೆ, ಅವನ ವಿಕಾರಕೃತಿಯು ಅವಳ ಮೇಲೆ ರೌದ್ರ-ನರ್ತನವನ್ನು ಅರ೦ಭಿಸಿ ಘಾಸಿಗೊಳಿಸಿತ್ತು. ಪತ್ರಿಕೆಗಳು ಚೆಲ್ಲಾಪಿಲ್ಲಿಯಾಗಿ, ಕೂಗಲು ಆಗದೇ ನಿತ್ರಾಣಳಾದಳು. ಮತ್ತದೇ ಸಿಗರೇಟು ಘಾಟು ಗುಡಿಸಲಿನ ತು೦ಬ ಹರಡಿ, ಅವನ ಆಕೃತಿ ಒಮ್ಮೆ ಕೆಮ್ಮಿತು. ಗುಡಿಸಲಿನಲ್ಲಿ ನರಳುವಿಕೆಯೊ೦ದಿಗೆ ಕ್ರೌರ್ಯ ಮಡುಗಟ್ಟಿತ್ತು. ಹೊರಗೆ ಜಿಡಿ ಮಳೆ ಅರ೦ಭವಾಗಿ, ಮನಸ್ಸಿನ ಪ್ರಶ್ನೆಗಳಿಗೆ ಉತ್ತರಗಳಿಲ್ಲದೇ ಪರಿಸರ ತಿಳಿಯಾಗಿತ್ತು.